"ನ್ಯಾಯ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೩ (೨)

"ನ್ಯಾಯ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೩ (೨)

ನ್ಯಾಯ ದರ್ಶನದ ಜ್ಞಾನ ಸಿದ್ದಾಂತ
   
    ಒಂದು ವಸ್ತುವಿನ ನೈಜ ಸ್ವರೂಪ ಅಥವಾ ಆ ವಸ್ತುವಿನ ಬಗ್ಗೆ ಸರಿಯಾದ ಜ್ಞಾನವನ್ನು ಹೊಂದಬೇಕಾದರೆ ಅದನ್ನು ಪಡೆಯಲು ಸರಿಯಾದ ಮಾರ್ಗವನ್ನು ಅನುಸರಿಸಬೇಕು ಮತ್ತು ಆ ಮಾರ್ಗದ ಬಗ್ಗೆ ಸರಿಯಾದ ತಿಳುವಳಿಕೆ ಕೂಡ ಆವಶ್ಯಕ. 
   
    ಜ್ಞಾನ ಸಿದ್ಧಾಂತವನ್ನು ನಾಲ್ಕು ಪ್ರತ್ಯೇಕ ಮತ್ತು ವಿಭಿನ್ನವಾದ ನೈಜ ಜ್ಞಾನಮೂಲದ ವಿಧಾನಗಳ (ಪ್ರಮಾಣಗಳ) ಮೂಲಕ ಹೊಂದಬಹುದೆಂದು ನ್ಯಾಯ ದರ್ಶನವು ಪ್ರತಿಪಾದಿಸುತ್ತದೆ. ಅವು ಯಾವುವೆಂದರೆ:
1) ಪ್ರತ್ಯಕ್ಷ (ನೇರವಾದ ಅನುಭವ)
2) ಅನುಮಾನ (ಕ್ರಮಬದ್ಧ ನಿಷ್ಕರ್ಷೆ/ಊಹೆ)
3) ಉಪಮಾನ (ಹೋಲಿಕೆ ಅಥವಾ ದೃಷ್ಟಾಂತ/ಉದಾಹರಣೆ)
4) ಶಬ್ದ (ವಾಕ್ಯ ಪ್ರಮಾಣ)

    ಇಲ್ಲಿ ಒಂದು ವಿಷಯವನ್ನು ಗಮನದಲ್ಲಿಟ್ಟುಕೊಳ್ಳಬೇಕು; ಅದೇನೆಂದರೆ ಈ ನಾಲ್ಕು ಪ್ರಮಾಣಗಳನ್ನು ನಾವು ಸರಿಯಾದ ಕ್ರಮದಲ್ಲಿ ಅನುಸರಿಸಿದರೆ ಅವು "ಪ್ರಮಾ" ಅಥವಾ "ನಿಬದ್ಧವಾದ ಜ್ಞಾನ" (ನಿಜವಾದ ಜ್ಞಾನ) ಇವುಗಳನ್ನು ನೀಡುತ್ತವೆ. ಇಲ್ಲಿ ನಾವು ಪಡೆಯುವ ಜ್ಞಾನವು ಸ್ಮೃತಿ (ನೆನಪು), ಸಂಶಯ (ಶಂಕೆ) ಯಾ ಭ್ರಮೆ (ತಪ್ಪು ಗ್ರಹಿಕೆ) ಅಥವಾ ಹದಿನಾರು ಪದಾರ್ಥಗಳಲ್ಲಿ ಪ್ರಸ್ತಾಪಿಸಲ್ಪಟ್ಟಿರುವ ಇತರೇ ವಿಷಯಗಳಿಂದ ಉಂಟಾಗುವ "ಅಪ್ರಮಾ" ಅಥವಾ ಅಬದ್ಧ/ಸುಳ್ಳು ಜ್ಞಾನವಲ್ಲವೆನ್ನುವುದನ್ನು ಅರಿಯಬೇಕು. ಮತ್ತು ನಿಜವಾದ ಜ್ಞಾನವೆನ್ನುವುದು ವಸ್ತುವಿನ ನೈಜ ಸ್ವರೂಪವನ್ನು ಪ್ರಚುರಪಡಿಸುತ್ತದೆನ್ನುವುದನ್ನು ಮರೆಯಬಾರದು.
   
    ಈ ನಾಲ್ಕು ಪ್ರಮಾಣಗಳನ್ನು ಈಗ ಒಂದೊಂದಾಗಿ ತಿಳಿಯಲು ಪ್ರಯತ್ನಿಸೋಣ.
 1) ಪ್ರತ್ಯಕ್ಷ (ನೇರವಾದ ಅನುಭವ)

    ಪ್ರಚೋದನೆಗೆ ಸ್ಪಂದಿಸುವ ಯಾವುದೋ ಒಂದು ಇಂದ್ರಿಯವನ್ನು ತೆಗೆದುಕೊಳ್ಳೋಣ - ಉದಾಹರಣೆಗೆ, ಕಣ್ಣು ಒಂದು ಮೇಜನ್ನು ನೋಡುತ್ತದೆ ಎಂದು ಇಟ್ಟುಕೊಳ್ಳೋಣ. ಆಗ ಕಣ್ಣಿಗೆ ಮೇಜಿನ ಬಗ್ಗೆ ಅಭಿವ್ಯಕ್ತಗೊಳ್ಳುವುದು ನಿಜವಾದ, ಸ್ಪಷ್ಟವಾದ ಮತ್ತು ಮಸುಕಾಗಿಲ್ಲದ ಜ್ಞಾನ. ದೂರದಲ್ಲಿ ಕಾಣುವ ಒಂದು ಮರದ ಗೂಟವನ್ನು ನೋಡಿ ಅದು ಮನುಷ್ಯನೋ ಅಥವಾ ಗೂಟವೋ ಎಂದು 'ಸಂಶಯ'ಗೊಳ್ಳುವುದು ಮತ್ತು ಮಂದ ಬೆಳಕಿನಲ್ಲಿ ತುಂಡು ಹಗ್ಗವನ್ನು ನೋಡಿ ನಿಜವಾದ ಹಾವೆಂದು ಭಾವಿಸುವ 'ಭ್ರಮೆ' ಇವುಗಳಿಂದ ಹೊರತಾದದ್ದು ನಿಜವಾದ ಅಥವಾ ನಿಬದ್ದವಾದ ಜ್ಞಾನ. ಇಲ್ಲಿ ಎರಡೂ ಪ್ರತ್ಯಕ್ಷ ಅನುಭವಗಳಾದರೂ ಕೂಡ ಅವು ಅಬದ್ಧತೆಯಿಂದ ಕೂಡಿವೆ.
   
    ಮನಸ್ಸಿನ ಒಳಗಡೆ ಅನುಭವಿಸುವ ನೋವು ಅಥವಾ ನಲಿವು ಇವುಗಳನ್ನು ಕೂಡ ಪ್ರತ್ಯಕ್ಷ ಪ್ರಮಾಣದ ವರ್ಗಕ್ಕೆ ಸೇರಿಸಬಹುದು. ಉನ್ನತವಾದ ಆಧ್ಯಾತ್ಮಿಕ ಸಾಧನೆಯನ್ನು ಕೈಗೊಂಡ ಯೋಗಿಗಳ ಅತೀಂದ್ರಿಯ ಅನುಭವ (ಇಂದ್ರಿಯಗಳಿಗೆ ಗೋಚರವಲ್ಲದ ಅನುಭವ) ಮತ್ತು ಅಂತರಾತ್ಮದ ಗ್ರಹಿಕೆ (Intuition/ಒಳ ಅರಿವು) ಇವುಗಳನ್ನು ಕೂಡ ಪ್ರತ್ಯಕ್ಷ ಪ್ರಮಾಣಕ್ಕೆ ಸೇರಿಸಬಹುದು. ಈ ಅನುಭವಗಳನ್ನು 'ಯೋಗಜ' ಅಥವಾ 'ಯೋಗಿಪ್ರತ್ಯಕ್ಷ' ಎಂದು ಕರೆಯುತ್ತಾರೆ.

2) ಅನುಮಾನ (ಕ್ರಮಬದ್ಧ ನಿಷ್ಕರ್ಷೆ/ಊಹೆ)
   
    ಅನುಮಾನ ಎನ್ನುವುದರ ಶಬ್ದಶಃ ಅರ್ಥವನ್ನು ಹೀಗೆ ವಿವರಿಸಬಹುದು, 'ಮಾನ' ಎಂದರೆ ಜ್ಞಾನ ಮತ್ತು 'ಅನು' ಎಂದರೆ ಇನ್ನೊಂದನ್ನು ಅನುಸರಿಸುವುದು. ಒಟ್ಟಾರೆಯಾಗಿ ಅನುಮಾನವೆಂದರೆ ಒಂದು ವಸ್ತುವಿನ ಜ್ಞಾನವನ್ನು ಅನುಸರಿಸಿ ಇನ್ನೊಂದು ವಸ್ತುವಿನ ಜ್ಞಾನವನ್ನು ಪಡೆಯುವುದು. ಅನುಮಾನದಿಂದ ಹೊಂದಲ್ಪಡುವ ಜ್ಞಾನಕ್ಕೆ ಸಾಮಾನ್ಯವಾಗಿ ಕೊಡುವ ಉದಾಹರಣೆ ಎಂದರೆ ದೂರದಲ್ಲಿರುವ ಬೆಟ್ಟದಲ್ಲಿ ಕಂಡುಬರುವ ಹೊಗೆಯಿಂದ ಅಲ್ಲಿ ಬೆಂಕಿ ಇದೆ ಎಂದು ತಿಳಿಯುವುದು; ಅಲ್ಲಿ ಬೆಂಕಿಯು ಪ್ರತ್ಯಕ್ಷವಾಗಿ ಕಾಣದಿದ್ದರೂ ಕೂಡ.
   
    ಅನುಮಾನದ ವಿಧಾನವನ್ನು ಈ ರೀತಿಯಾಗಿ ವಿವರಿಸಬಹುದು. ಆ ಬೆಟ್ಟದ ಮೇಲೆ ಬೆಂಕಿ ಇದೆ; ಏಕೆಂದರೆ ಅಲ್ಲಿ ಹೊಗೆ ಉಗುಳಲ್ಪಡುತ್ತಿದೆ. ಬೇರೆ ಕಡೆಗಳಲ್ಲಿ ಎಲ್ಲೆಲ್ಲಿ ಹೊಗೆ ಕಾಣಿಸಿಕೊಳ್ಳುತ್ತದೆಯೋ ಅಲ್ಲೆಲ್ಲಾ ಬೆಂಕಿ ಇರುತ್ತದೆ; ಉದಾಹರಣೆಗೆ ಅಡಿಗೆ ಮನೆ. ಈ ವಿಧಾನವನ್ನು ವಿವರಿಸುವಾಗ ನ್ಯಾಯ ಶಾಸ್ತ್ರಗಳು ಕೆಲವೊಂದು ತಾಂತ್ರಿಕ ಪದಗಳನ್ನು ಉಪಯೋಗಿಸುತ್ತವೆ. ಇಲ್ಲಿ ಬೆಂಕಿ ಇರುವುದನ್ನು ನಿರೂಪಿಸ ಬೇಕಾಗಿರುವುದರಿಂದ ಅದನ್ನು 'ಸಾಧ್ಯ' ಅಥವಾ 'ಪ್ರಧಾನ ಪ್ರತ್ಯಯ'ವೆಂದು ಕರೆಯುತ್ತಾರೆ. ಬೆಟ್ಟದ ವಿಷಯವು ಕ್ರಮಬದ್ಧ ಊಹೆಯನ್ನು ಅನುಮೋದಿಸಲು ಸಾಂಧರ್ಭಿಕವಾಗಿ ಪ್ರಸ್ತಾಪಿಸಲ್ಪಟ್ಟಿರುವುದರಿಂದ ಅದನ್ನು 'ಪಕ್ಷ' ಅಥವಾ 'ಅಲ್ಪ ಪ್ರತ್ಯಯ'ವೆಂದು ಹೇಳುತ್ತಾರೆ. ಹೊಗೆಯು ಬೆಂಕಿಯ ಇರುವಿಕೆಯನ್ನು ಖಚಿತ ಪಡಿಸುವ ಗುರುತು ಅಥವಾ ಸಂಕೇತವಾಗಿರುವುದರಿಂದ ಅದನ್ನು 'ಲಿಂಗ' (ಮಧ್ಯ ಪ್ರತ್ಯಯ) ಅಥವಾ 'ಹೇತು' ಅಥವಾ 'ಸಾಧನ' ಎಂದು ಕರೆಯುತ್ತಾರೆ.
   
    ಅನುಮಾನ ಅಥವಾ ಕ್ರಮಬದ್ಧವಾದ ಜ್ಞಾನದಲ್ಲಿ ಬಹುಮುಖ್ಯವಾದ ಅಂಶವೆಂದರೆ 'ಲಿಂಗ' ಮತ್ತು 'ಸಾಧ್ಯ' ಇವುಗಳಿಗೆ ಖಚಿತವಾದ ಅವಿನಾಭಾವ ಸಂಬಂಧವಿರಬೇಕು - ಅದನ್ನೇ 'ವ್ಯಾಪ್ತಿ' ಎನ್ನುವ ಪಾರಿಭಾಷಿಕ ಶಬ್ದದಿಂದ ನ್ಯಾಯ ಶಾಸ್ತ್ರಗಳು ಪ್ರತಿಪಾದಿಸುತ್ತವೆ. ಅನುಮಾನದಿಂದ ಗಳಿಸಿಕೊಂಡ ಜ್ಞಾನವನ್ನು 'ಅನ್ವಯ'(ಇದ್ದಾಗ ವ್ಯಕ್ತವಾಗುವುದು) ಮತ್ತು 'ವ್ಯತಿರೇಕ'(ಇಲ್ಲದಿದ್ದಾಗ ವ್ಯಕ್ತವಾಗದೇ ಇರುವುದು) ವಿಧಾನಗಳ ಮೂಲಕ ಗಟ್ಟಿಗಳಿಸಿಕೊಳ್ಳಬಹುದು. ಒಂದೇ ಸತ್ಯವನ್ನು ಪ್ರಚುರಪಡಿಸುವ ಈ ರೀತಿಯ ಧನಾತ್ಮಕವಾದ 'ಅನ್ವಯ' ಮತ್ತು ಋಣಾತ್ಮಕವಾದ 'ವ್ಯತಿರೇಕ' ಪದ್ದತಿಗಳನ್ನು ಈ ರೀತಿಯಾಗಿ ವಿಶದ ಪಡಿಸಬಹುದು; ಎಲ್ಲೆಲ್ಲಿ ಹೊಗೆ ಇರುವುದೋ ಅಲ್ಲೆಲ್ಲಾ ಬೆಂಕಿಯಿರುವುದು, ಎಲ್ಲೆಲ್ಲಿ ಹೊಗೆ ಇರುವುದಿಲ್ಲವೋ ಅಲ್ಲೆಲ್ಲಾ ಬೆಂಕಿ ಇರುವುದಿಲ್ಲ.
   
    ಅನುಮಾನದ ವಿಷಯವನ್ನು ಕೈಗೆತ್ತಿಕೊಂಡ ನ್ಯಾಯ ಶಾಸ್ತ್ರದ ಕೋವಿದರು ಹಲವಾರು ಧನಾತ್ಮಕ ಮತ್ತು ಋಣಾತ್ಮಕ ವಿಷಯಗಳ ಬಗ್ಗೆ ಪ್ರಸ್ತಾಪಿಸಿರುತ್ತಾರೆ. ಅವುಗಳೆಂದರೆ 'ಸ್ವಾರ್ಥ' ಮತ್ತು 'ಪರಾರ್ಥ' ಅಥವಾ 'ಪೂರ್ವವತ್' ಮತ್ತು 'ಶೇಷವತ್' ಮೊದಲಾದ ಸೂಕ್ಷ್ಮ ವಿಚಾರಗಳು. ಈ ರೀತಿಯ ವಿಷಯಗಳಿಗೆ ನಿತ್ಯ   ಅನುಷ್ಠಾನದಲ್ಲಿ ಯಾವುದೇ ಮಹತ್ವವಿಲ್ಲ, ಆದರೆ ಈ ರೀತಿಯ ಸೂಕ್ಷ್ಮ ವಿಚಾರಗಳನ್ನು ಆಧ್ಯಾತ್ಮಿಕ ಚರ್ಚೆಗಳ ಪ್ರತಿಪಾದನೆಯಲ್ಲಿ ಎತ್ತಿಕೊಳ್ಳಬಹುದು.  

3) ಉಪಮಾನ (ಹೋಲಿಕೆ)

    "ಗೊತ್ತಿರುವ ವಿವರಣೆಯಿಂದ ಒಂದು ವಸ್ತುವನ್ನು ಹೆಸರಿಸುವುದು" ಎನ್ನುವುದು ಉಪಮಾನಕ್ಕಿರುವ ವ್ಯಾಖ್ಯೆ. ಇದಕ್ಕೆ ಉದಾಹರಣೆಯಾಗಿ "ಗವಯ" (ಕಾಡು ಹಸು) ಎಂದರೇನೆಂದು ಗೊತ್ತಿರದ ಒಬ್ಬ ಮನುಷ್ಯನಿಗೆ ಕಾಡಿನಲ್ಲಿ ವಾಸಿಸುವವನೊಬ್ಬ ಅದು ನಾಡ ಹಸುವಿನ ರೀತಿಯಿರುತ್ತದೆ ಎಂದು ವಿವರಣೆ ಕೊಡುತ್ತಾನೆ.  ಸ್ವಲ್ಪ ಸಮಯದ ನಂತರ ಆ ಮನುಷ್ಯನು ಆ ರೀತಿಯಾದ ಪ್ರಾಣಿಯನ್ನು ಅರಣ್ಯದಲ್ಲಿ ಕಂಡ ತಕ್ಷಣ ಅದನ್ನು ಗವಯ (ಕಾಡು ಹಸು) ಎಂದು ಗುರುತಿಸಿದರೆ ಅವನ ಜ್ಞಾನಕ್ಕೆ ಕಾರಣವಾದದ್ದು ಉಪಮಾನ ಎಂದು ತಿಳಿಯಬಹುದು.
   
    ಕೆಲವು ಶಾಸ್ತ್ರಕಾರರು ಉಪಮಾನವನ್ನು ಪ್ರತ್ಯೇಕ ಪ್ರಮಾಣವೆಂದು ಒಪ್ಪಿಕೊಳ್ಳುವುದಿಲ್ಲ ಮತ್ತು ಕೆಲವರು ಅದನ್ನು ಅನುಮಾನದ ಇನ್ನೊಂದು ರೂಪವೆಂದು ಪರಿಗಣಿಸುತ್ತಾರೆ.

4) ಶಬ್ದ (ವಾಕ್ಯ ಪ್ರಮಾಣ)

    ಶಬ್ದ ಅಥವಾ ವಾಕ್ಯ ಪ್ರಮಾಣವನ್ನು ನಂಬಲರ್ಹ ವ್ಯಕ್ತಿಯ "ಹೇಳಿಕೆ" ಎಂದು ವಿವರಿಸಬಹುದು, ಮತ್ತು ಇದು ಎಲ್ಲ ಪ್ರಮಾಣಗಳಿಗೆ ಅಂತಿಮವಾದದ್ದು ಎಂದು ನ್ಯಾಯ ಶಾಸ್ತ್ರವು ಹೇಳುತ್ತದೆ. 
   
    ಶಬ್ದವು ದೃಷ್ಟಾರ್ಥ(ಇಂದ್ರಿಯ ಗೋಚರ ವಸ್ತುಗಳಿಗೆ ಸಂಭಂದಪಟ್ಟದ್ದು) ಅಥವಾ ಅದೃಷ್ಟಾರ್ಥ (ಇಂದ್ರಿಯಗಳಿಗೆ ಅಗೋಚರವಾದ ವಸ್ತುಗಳಿಗೆ ಸಂಭಂದಪಟ್ಟದ್ದು) ಆಗಿರಬಹುದು.
   
    ಅದೃಷ್ಟಾರ್ಥವು ಇಂದ್ರಿಯಾತೀತ ಸತ್ಯಗಳನ್ನು ಒಳಗೊಂಡಿರುತ್ತದೆ. ವೇದೋಪನಿಷತ್ತು ಮೊದಲಾದ ಶಾಸ್ತ್ರಗಳಲ್ಲಿ ಉಲ್ಲೇಖಿಸಲ್ಪಟ್ಟ ಭಗವಂತ, ಆತ್ಮ ಮತ್ತು ಅಮರತ್ವದ ಬಗೆಗಿನ ಹೇಳಿಕೆಗಳನ್ನು ಇಲ್ಲಿ ಉದಾಹರಿಸಬಹುದು. ಆದ್ದರಿಂದ ಶ್ರುತಿ ಅಥವಾ ವೇದಗಳನ್ನು ಶಬ್ದ ಎಂಬ ಅತ್ಯುನ್ನತ ಭಾವದಿಂದ ಪರಿಗಣಿಸಲಾಗಿದೆ.
   
    ಶಬ್ದ ಅಥವಾ ವಾಕ್ಯ ಪ್ರಮಾಣವು ನುಡಿಗಳ ಅಥವಾ ಸೂತ್ರರೂಪದ ವಾಕ್ಯಗಳಿಂದ ತಿಳಿಯಲ್ಪಡುವುದರಿಂದ ಈ ವಾಕ್ಯಗಳ ತರ್ಕಬದ್ಧ ರಚನೆಯ ವಿಧಾನವನ್ನು ನ್ಯಾಯ ಶಾಸ್ತ್ರವು ವಿಶದವಾಗಿ ಚರ್ಚಿಸುತ್ತದೆ. ಒಂದು ಬೌದ್ಧಿಕ ವಾಕ್ಯವು(ಸೂತ್ರವು) ನಾಲ್ಕು ಗುಣಗಳನ್ನು ಹೊಂದಿರುವುದು ಆವಶ್ಯಕವಾಗಿದೆ, ಅವುಗಳೆಂದರೆ: ಆಕಾಂಕ್ಷಾ (ನಿರೀಕ್ಷೆ); ಯೋಗ್ಯತಾ (ಒಂದಕ್ಕೊಂದು ಪೂರಕವಿರಬೇಕು ಮತ್ತು ವಿರೋಧಾಬಾಸಗಳಿಂದ ಮುಕ್ತವಾಗಿರಬೇಕು); ಸನ್ನಿಧಿ (ವಾಕ್ಯದಲ್ಲಿ ಪ್ರಯೋಗಿಸಲ್ಪಟ್ಟ ವಿವಿಧ ಶಬ್ದಗಳಿಗೆ ಪರಸ್ಪರ ಸಂಭಂದವಿರಬೇಕು ಅಥವಾ ವಾಕ್ಯವು ಸಂಭದ್ದವಾಗಿರಬೇಕು/ಅಸಂಭದ್ದವಾಗಿರಬಾರದು) ಮತ್ತು ತಾತ್ಪರ್ಯ (ಉದ್ದೇಶಿತ ಅರ್ಥ ಹೊಮ್ಮುವಂತಿರಬೇಕು).
=================================================================================================
   
    ಇದು ಸ್ವಾಮಿ ಹರ್ಷಾನಂದ ವಿರಚಿತ The six systems of Hindu Philosophy ಯಲ್ಲಿಯ Nyaya Darshanaನದ 11.5 ರಿಂದ 16.5ಯ ಪುಟದ ಅನುವಾದದ ಭಾಗ.
    "ನ್ಯಾಯ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೩ (೧) ಕ್ಕೆ ಕೆಳಗಿನ ಕೊಂಡಿಯನ್ನು ನೋಡಿರಿ.
 

http://sampada.net/blog/%E0%B2%A8%E0%B3%8D%E0%B2%AF%E0%B2%BE%E0%B2%AF-%E0%B2%A6%E0%B2%B0%E0%B3%8D%E0%B2%B6%E0%B2%A8-%E0%B2%B9%E0%B2%BF%E0%B2%82%E0%B2%A6%E0%B3%82-%E0%B2%A4%E0%B2%A4%E0%B3%8D%E0%B2%B5%E0%B2%B6%E0%B2%BE%E0%B2%B8%E0%B3%8D%E0%B2%A4%E0%B3%8D%E0%B2%B0%E0%B2%A6-%E0%B2%86%E0%B2%B0%E0%B3%81-%E0%B2%AA%E0%B2%A6%E0%B3%8D%E0%B2%A7%E0%B2%A4%E0%B2%BF%E0%B2%97%E0%B2%B3%E0%B3%81-%E0%B2%92%E0%B2%82%E0%B2%A6%E0%B3%81-%E0%B2%AA%E0%B2%B0%E0%B2%BF%E0%B2%9A%E0%B2%AF-%E0%B2%AD%E0%B2%BE%E0%B2%97-%E0%B3%A9-%E0%B3%A7/26/03/2012/36126

Rating
No votes yet