ಪಟ್ಟಣದ ಕೃತಕ ಜೀವನ

ಪಟ್ಟಣದ ಕೃತಕ ಜೀವನ

ವಿಜ್ಣಾನ ,ತಂತ್ರಜ್ಣಾನದ ಬೆಳವಣಿಗೆಯ ಭರಾಟೆಯಲ್ಲಿ ಆಧುನಿಕ ಜಗತ್ತಿನ ಅದರಲ್ಲೂ ಪಟ್ಟಣದ ಜನ ಜೀವನ ಎಷ್ಟೊಂದು ಕೃತಕವಾಗಿದೆಯೆಂದರೆ ಕುಡಿಯುವ ನೀರು,ತಿನ್ನುವ ಆಹಾರ,ಸೇವಿಸುವ ಗಾಳಿ,ಜೀವನ ವಿಧಾನ ಎಲ್ಲದರಲ್ಲೂ ಕೃತಕತೆ ಕಾಣಬಹುದು.ನಮ್ಮ ಹಳ್ಳಿಯ ಹಾಗೆ ಹುಣ್ಣಿಮೆಯ ಚಂದಿರನ ಆಹ್ಲಾದಕರ ಬೆಳದಿಂಗಳು,ಅಮವಾಸ್ಯೆಯ ರಾತ್ರಿಯ ಕತ್ತಲಲ್ಲಿ ಬಾನಲ್ಲಿ ಹೊಳೆಯುವ ನಕ್ಷತ್ರಗಳನ್ನು ನೋಡುವ ಭಾಗ್ಯ ಪಟ್ಟಣದವರಿಗಿಲ್ಲ.ಇದ್ದರೂ ಅದನ್ನೆಲ್ಲಾ ನೋಡುವ ಪುರುಸೊತ್ತಿಲ್ಲ.ಅದಕ್ಕೆಂದೇ ತಮ್ಮ ಕೊಠಡಿಯ ಒಳ ಛಾವಣಿಗೆ ಅಂಟಿಸಲು ಆಕಾಶದ ಮಿನುಗುವ ನಕ್ಷತ್ರಗಳನ್ನು ಹೋಲುವ ಸ್ಟಿಕರ್ ಗಳು ಲಭ್ಯ.ಪ್ರೀತಿ,ಪ್ರೇಮ,ಪ್ರಣಯ ಎಲ್ಲಾ ಕೃತಕಮಯ.ಮನುಷ್ಯಾಕೃತಿಯನ್ನು ಹೋಲುವ, ಅಪ್ಪಿಕೊಂಡು ಮಲಗಲು ಕೃತಕ ದಿಂಬುಗಳು(ಚಿತ್ರ ನೋಡಿ).ಈ ಪಟ್ಟಣಗಳಲ್ಲಿ ಡುಡ್ಡು ಕೊಟ್ಟರೆ ಎಲ್ಲಾನೂ ಸಿಗುತ್ತೆ.ಇಲ್ಲಿ ದೇಹ ಬೆಳೆಸೋಕು ದುಡ್ಡು,ಬೆಳೆಸಿದ ದೇಹ ಕರಗಿಸೋಕು ದುಡ್ಡು. ನಮ್ಮ ಹಳ್ಳಿಯ ಹಾಗೆ ಝುಳುಝುಳು ಹರಿಯುವ ನದಿ,ಮುಂಜಾವಿನ ಹಕ್ಕಿಗಳ ಕಲರವ,ಕೋಳಿಯ ಕೂಗು,ಮನಕ್ಕೆ ಮುದ ನೀಡುವ ಹಸಿರು ಸಾಲು ಮರಗಳು,ಅಜ್ಜಿಯ ಕತೆ,ಮಕ್ಕಳ ಸಡಗರ,ಅಮ್ಮನ ಹಳ್ಳಿಯ ಹಾಡುಗಳು,ಬೀಸು ಕಲ್ಲಿನ ಪದಗಳು,ಹಳ್ಳಿಯ ಆಟಗಳು,ಗೆಳೆಯರ ಕಟ್ಟೆಯ ಹರಟೆ,ಹೆಂಗಸರ ಪಿಸುಮಾತುಗಳು,ಅಳುವ ಕಂದನ ದನಿ,ಶಾಲೆ ಬಿಟ್ಟು ಮನಗೆ ಕಡೆಗೆ ಓಡುವ ಮಕ್ಕಳ ಕಿರುಚಾಟ,ದನಕರುಗಳ ಅಂಬಾ ಎನ್ನುವ ಧ್ವನಿ,ಇದಾವುದೂ ಪಟ್ಟಣದಲ್ಲಿ ಸಿಗುವುದಿಲ್ಲ. ಇಲ್ಲಿ ಬರೀ ಕಿವಿ ಗಡಚಿಕ್ಕುವ ವಾಹನಗಳ ಸದ್ದು,ಎತ್ತರವಾದ ಕಟ್ಟಡಗಳು,ಪರಿಸರ ಮಾಲಿನ್ಯ ಅಷ್ಟೆ.

Rating
No votes yet