ಪತಿಗಳ್ ಸೀತೆಗದೆಷ್ಟು ಮಂದಿ ?
ರಾಮ ಏಕಪತ್ನೀ ವ್ರತಸ್ಥ ಅಂತ ನಮಗೆಲ್ಲರಿಗೂ ಗೊತ್ತೇಇದೆ. ಅಲ್ಲದೇ ಪತಿವ್ರತೆ ಅಂದ ತಕ್ಷಣ ಹೊಳೆಯೋ ಹೆಸರೇ ಸೀತೆಯದ್ದು. ಅಂತಹದರಲ್ಲಿ ಸೀತೆಗೆ ಅದೆಷ್ಟು ಜನ ಗಂಡಂದಿರು ಅಂತ ಕೇಳಿದ್ರೆ?ಅದೆಂಥಾ ಅಭಾಸ ಅಲ್ಲವೇ?
ಈಗ ಕೆಲವು ತಿಂಗಳ ಹಿಂದೆ ಪದ್ಯಪಾನದಲ್ಲಿ ಕೇಳಿದ್ದ ಪ್ರಶ್ನೆ ಇದು :
ಪತಿಗಳ್ ಸೀತೆಗದೆಷ್ಟು ಮಂದಿ ಗಣಿಸಲ್ಕೇನೊರ್ವರೇಯಿರ್ವರೇ?
ದೇವರೇ ಗತಿ! ಮೊದಲೇ ಸೀತೆಗೆ ಒಂದಕ್ಕಿಂತ ಹೆಚ್ಚು ಗಂಡಂದಿರು ಅಂತ ಹೇಳಿದ್ದೊಂದೇ ಅಲ್ಲ - ಲೆಕ್ಕ ಹಾಕೋಕಾಗದಷ್ಟು ಜನ ಅಂತ ಬೇರೆ ಅಂತಿದ್ದಾರಲ್ಲಪ್ಪ? ರಾಮ ರಾಮಾ! ಇದಕ್ಕಿಂತ ಬೇರೆ ತರಹ ಹೆಸರು ಕೆಡಿಸೋದನ್ನೆಲ್ಲಾದರೂಕಂಡಿದೀರಾ?
ಆದರೆ ಸಮಸ್ಯಾ ಪುರಾಣದ ಇಂತಹ ಪ್ರಶ್ನೆಗಳನ್ನ ನೋಡಿದವರಿಗೆ ಗೊತ್ತೇ ಇರುತ್ತೆ - ಒಂದು ಸ್ಬಲ್ಪ ಪದಗಳ ಜೊತೆಯಲ್ಲಿ ಆಟ ಆಡಿದರೆ ಇಲಿಯನ್ನ ಹುಲಿ ಮಾಡಬಹುದು , ಇಲಿಯನ್ನ ಚೆಕ್ಕಿಲಿ ಮಾಡಿ ತಿಂದುಬಿಡಬಹುದು!
ಈ ಸಮಸ್ಯೆಯನ್ನು ಬಿಡಿಸಲು ನಾನು ಸೀತೆಯನ್ನ ಶಾಲೆಗೆ ಕಳಿಸಬೇಕಾಯಿತು. ಅಂದ ಹಾಗೆ ಜನಕ ರಾಯನ ಮಗಳು ಸೀತೆ ಇಂಥ ಶಾಲೆಗೆ ಹೋಗಿದ್ದಳೋ ಇಲ್ಲವೋ ನನ್ನಗ್ಗೊತ್ತಿಲ್ಲ. ಅಥವಾ, ಹೋಗಿದ್ದರೂ ಹೋಗಿದ್ದಿರಬಹುದು ! ಯಾರು ಕಂಡವರು? ಇರಲಿ, ಈಗ ನನ್ನ ಉತ್ತರವನ್ನ ಓದಿ:
ಹಿತದೊಳ್ ತೋರ್ಪೆನು ಶಾಸ್ತ್ರಪಾಠಗಳ ನಾಂ ನೀ ಬೇಗ ಬಾರೆಂದೆನ-
ಲ್ಕತಿಸಂತೋಷದಿ ಬಂದ ಸೀತೆ ಮುದದೊಳ್ ಕಣ್ಣಲ್ಲೆ ಕಣ್ಣಾಗಿ ಜಾ-
ಗೃತಿಯಿಂ ಪಟ್ಟಕಮಂ ತಳೆರ್ದಿರೆ ಮೊದಲ್ ಬಾನಲ್ಲಿ ಕಂಡರ್ ದಿವ-
ಸ್ಪತಿಗಳ್ ಸೀತೆಗದೆಷ್ಟು ಮಂದಿ! ಗಣಿಸಲ್ಕೇನೊರ್ವರೇಯಿರ್ವರೇ ?
ಈ ಪದ್ಯದ ನಾಯಕಿ ಸೀತೆ ಚುರುಕಿನ ಹುಡುಗಿ. ಓದಿ ತಿಳಿ ಮಾಡಿ ಕಲಿ ಅನ್ನೋ ಮಂತ್ರ ಪಾಲಿಸೋ ಅಂತಹವಳು. ಅವಳು ಶಾಲೆಯಲ್ಲಿ ಬೆಳಕಿನ ವಿಷಯವನ್ನು ಕಲಿಯುವಾಗ, ಪ್ರಯೋಗ ಮಾಡಲು ಕೈಗೆ ಪಟ್ಟಕ ( kaleidoscope) ವೊಂದನ್ನು ತೆಗೆದುಕೊಂದು ಆಕಾಶದತ್ತ ನೋಡಿದಾಗ ಕಂಡಿದ್ದೇನು? ಲೆಕ್ಕ ಹಾಕಲಾರದಷ್ಟು ಸೂರ್ಯ ಬಿಂಬಗಳು! ನಿಜ ತಾನೇ? ಏನಂತೀರಿ?
-ಹಂಸಾನಂದಿ
ಕೊ:. ಇದು ಮತ್ತೇಭವಿಕ್ರೀಡಿತ ಅನ್ನುವ ವೃತ್ತದಲ್ಲಿದೆ
ಕೊ.ಕೊ : ಸಾಮಾನ್ಯವಾಗಿ ಪಟ್ಟಕ ಅನ್ನುವ ಪದವನ್ನ ( prism ) ಎನ್ನುವ ಅರ್ಥದಲ್ಲೇಬಳಸುವುದು ರೂಢಿ. ನಾನು ಮುಮ್ಮೂಲೆಯ ಪಟ್ಟಕದಂತೆಯೇ ಕಾಣುವಂತಹ kaleidoscope ಗೂ
ಕೂಡ ಇಲ್ಲಿ ಪಟ್ಟಕ ಅಂತಲೇ ಕರೆದಿದ್ದೇನೆ.
ಕೊ.ಕೊ.ಕೊ : ದಿವಸ್ಪತಿ = ದಿನದ ಒಡೆಯ, ಸೂರ್ಯ, ರವಿ
Comments
ಉ: ಪತಿಗಳ್ ಸೀತೆಗದೆಷ್ಟು ಮಂದಿ ?
ರಾಮರಾಮಾ :)
ಪದ್ಯಪಾನ ಸಮಸ್ಯೆ ಬಿಡಿಸಿದ ರೀತಿ ಇಷ್ಟವಾಯಿತು.
In reply to ಉ: ಪತಿಗಳ್ ಸೀತೆಗದೆಷ್ಟು ಮಂದಿ ? by ಗಣೇಶ
ಉ: ಪತಿಗಳ್ ಸೀತೆಗದೆಷ್ಟು ಮಂದಿ ?
ಹೌದು ಹಂಸಾನಂದಿಯವರೆ, ಈ ಸಮಸ್ಯೆ ನೀವು ಬಿಡಿಸಿದ ರೀತಿ ತುಂಬಾ ಸೊಗಸಾಗಿದೆ - ಪಟ್ಟಕದ ಕಲ್ಪನೆ ತುಂಬಾ 'ಕ್ರಿಯೇಟೀವ್' :-)
@ ಗಣೇಶ್ ಜಿ ಮತ್ತೊಂದು 'ಜಾನಪದ' ಅವತರಣಿಕೆ ನಿಮ್ಮ 'ರಾಮರಾಮಾ' ಪ್ರತಿಕ್ರಿಯೆಗೆ :-)
ರಾಮರಾಮಾ....
--------------------------------------------------------------
ತೇತ್ರಾಯುಗದಿ ರಾಮನರಗಿಣಿ, ದ್ವಾಪರದಿ ಕೃಷ್ಣನೊಬ್ಬನ ಪಾಣಿ
ಕಲಿಯುಗದಿ ಶ್ರೀನಿವಾಸನ ಕೈಹಿಡಿದು ಪದ್ಮಾವತಿ ಜತೆಗುರವಣಿ
ಯುಗಯುಗದೀ ಸತಿ ಪತಿಯ ಸಾಂಗತ್ಯ ವೈಭವಕೇನೆನ್ನಲಿ ದೊರೆ
ಈ ಪತಿಗಳ್ ಸೀತೆಗದೆಷ್ಟು ಮಂದಿ ಗಣಿಸಲ್ಕೇನೊರ್ವರೇಯಿರ್ವರೇ?
ಧನ್ಯವಾದಗಳೊಂದಿಗೆ,
ನಾಗೇಶ ಮೈಸೂರು
In reply to ಉ: ಪತಿಗಳ್ ಸೀತೆಗದೆಷ್ಟು ಮಂದಿ ? by nageshamysore
ಉ: ಪತಿಗಳ್ ಸೀತೆಗದೆಷ್ಟು ಮಂದಿ ?
ಗಣೇಶ ಮತ್ತು ನಾಗೇಶರೆ, ಧನ್ಯವಾದಗಳು.
ನಾಗೇಶರೆ, ನಿಮ್ಮ ಕಲ್ಪನೆಯೂ ಚೆನ್ನಾಗಿ ಮೂಡಿಬಂದಿದೆ.