ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು
ಹಲವರಿಗೆ ಪತ್ರಿಕೆಯಲ್ಲಿ ಬಂದದ್ದೆಲ್ಲಾ ಸತ್ಯ, ಪ್ರಕಟವಾಗಿದ್ದೆಲ್ಲ ನಿಜ ಅನ್ನುವ ಭ್ರಮೆ ಇರುತ್ತೆ. ಒಂದು ವಾದವಿದ್ದರೆ ಅದರ ಎಲ್ಲ ಮುಖಗಳನ್ನೂ ನೋಡಿ ಅವರವರ ತೀರ್ಮಾನ ಅವರು ತೆಗೆದುಕೊಳ್ಳುವುದೇನೋ ಸರಿಯೇ. ಆದರೆ ಈ ದಾರಿ ಹಿಡಿಯದೇ, ಪ್ರಕಟವಾದಮೇಲೆ ಅದು ಸರಿಯೇ ಇರಬೇಕು ಎಂದು ಕೊಳ್ಳುವುದು ಮಾತ್ರ ಹಳ್ಳ ಹಿಡಿಯುವ ದಾರಿ.
ಐದು ವರ್ಷಗಳ ಹಿಂದೆ ಬರೆದಿಟ್ಟಿದ್ದ ಈ ಬರಹವನ್ನು ಇವತ್ತು, ಸ್ವಲ್ಪ ತಿದ್ದು ಪಡಿ ಮಾಡಿ, ಸ್ವಲ್ಪ ಸೇರಿಸಿ, ಪ್ರಕಟಿಸಿದ್ದೇಕೆ ಎಂದರೆ, ಪ್ರಜಾವಾಣಿಯಲ್ಲಿ ಐದು ವರ್ಷ ಹಿಂದೆ ಅಂಕಣವೊಂದರಲ್ಲಿ ಪ್ರಕಟವಾಗಿದ್ದ ಬರಹವೊಂದು ಅವರಿವರ ಫೇಸ್ ಬುಕ್ ಗೋಡೆಗಳಲ್ಲಿ ಕಾಣಿಸಿಕೊಂಡಿದ್ದು. ಮತ್ತೆ ಹಲವರು ಆ ಬರಹವನ್ನು ಹಂಚಿಕೊಂಡು, ಮರುಪ್ರಸಾರ ಮಾಡಿದ್ದೂ ನನ್ನ ಕಣ್ಣಿಗೆ ಬಿದ್ದುದರಿಂದ, ಹಿಂದೆ ನಾನು ಬರೆದಿಟ್ಟ ಟಿಪ್ಪಣಿಗಳು ನೆನಪಾದುವು!
ಈ ಬರಹದ ಬಗ್ಗೆ ಐದು ವರ್ಷಗಳ ಹಿಂದೆಯೇ, ಅಂದರೆ ಈ ಅಂಕಣ ಬರಹ ಪ್ರಜಾವಾಣಿಯಲ್ಲಿ ಬಂದಾಗಲೇ, ಗೂಗಲ್ ಬಜ಼್ ನಲ್ಲಿ ಒಂದಷ್ಟು ಚರ್ಚೆ ಆಗಿತ್ತು. ಪತ್ರಿಯೆಯ ಅಂಕಣದಲ್ಲಿ ಅಂಕಣಕಾರರು ಬರೆದದ್ದೆಲ್ಲಾ ಸತ್ಯ ಅಥವಾ ಸರಿ ಎಂದು ಕೊಂಡ ಕೆಲವು ಮಿತ್ರರು (ಏಕೆಂದರೆ ಅದು ಪ್ರಜಾವಾಣಿಯಂತಹ ಪತ್ರಿಕೆಯಲ್ಲೇ ಪ್ರಕಟವಾಗಿತ್ತಲ್ಲ!) ಈ ಬರಹವನ್ನು ಆಧಾರವಾಗಿಟ್ಟುಕೊಂಡು, ಕೃಷ್ಣ ದ್ರಾವಿಡ ಭಾಷೆಯಾಡುತ್ತಿದ್ದವನೇ, ಅದರಲ್ಲೂ ಅವನು ಕನ್ನಡದವನೇ ಎಂದು ವಾದಿಸಿದ್ದರು. ಕೃಷ್ಣ ಕನ್ನಡದವನೇ ಅಲ್ಲವೇ ಅನ್ನುವುದನ್ನು ವಿಮರ್ಶಿಸುವುದಕ್ಕಿಂತ ಹೆಚ್ಚಾಗಿ ಈ ಅಂಕಣ ಬರಹದಲ್ಲಿ ಎಷ್ಟು ಪೊಳ್ಳುವಾದಗಳಿವೆ, ಬುಡವಿಲ್ಲದ ಮಾತುಗಳಿವೆ, ತಪ್ಪು ಕಲ್ಪನೆಗಳಿವೆ, ಮತ್ತೆ ಓದುಗರನ್ನು ತಪ್ಪುದಾರಿಗೆಳೆಯುವ ಪ್ರಯತ್ನಗಳಿವೆ ಎಂಬುದನ್ನು ಟಿಪ್ಪಣಿ ಮಾಡಿ ಬರೆದಿಟ್ಟಿದ್ದನ್ನು ಈಗ ಹಂಚಿಕೊಳ್ಳಲೇ ಬೇಕೆಂದನಿಸಿದ್ದರಿಂದ, ಅಂತೂ ಇಂತೂ ಐದು ವರ್ಷದಮೇಲೆ ಈ ಬರಹಕ್ಕೂ "ಬೆಳಕಿನ ಭಾಗ್ಯ" ಕಂಡಿದೆ!
ಈಗ ನೇರವಾಗಿ ಈ ಬರಹದಲ್ಲಿ ನನಗೆ ಢಾಳಾಗಿ ಕಂಡ ತಪ್ಪುಗಳ ಬಗ್ಗೆ ಮಾತ್ರ ಇಲ್ಲಿ ಬರೆದಿದ್ದೇನೆ:
ತಮ್ಮ ಬರಹದಲ್ಲಿ ಅಂಕಣಕಾರರು ಹೀಗೆ ಬರೆಯುತ್ತಾರೆ:
"ಮಹಾಭಾರತ ಎನ್ನುವುದು ಶ್ರಿಕೃಷ್ಣನೆಂಬ ಅನಾರ್ಯ ಏಕಾಂಗಿಯಾಗಿ ಕೇವಲ ಬುದ್ಧಿಬಲದಿಂದ ಆರ್ಯ ಸಾಮ್ರಾಜ್ಯವನ್ನು ನಾಶ ಮಾಡಿದ ಕತೆ ಎನ್ನುವವರೂ ಇದ್ದಾರೆ. ಆ ಮಹಾಭಾರತದ ಭಾಗವಾಗಿರುವ ಭಗವದ್ಗೀತೆಯನ್ನು ಕಂಠಪಾಠ ಮಾಡುವ ವಿದ್ಯಾರ್ಥಿಗಳಿಗೆ ಇದನ್ನೆಲ್ಲ ತಿಳಿದುಕೊಳ್ಳುವ ಅವಕಾಶ ಖಂಡಿತ ಇರುವುದಿಲ್ಲ.ಈ ದೇಶದಲ್ಲಿ ಆರ್ಯರ ರಾಜಕೀಯ ಮತ್ತು ಸಾಂಸ್ಕೃತಿಕ ಸ್ವಾಮ್ಯ ಸ್ಥಾಪನೆಯ ಮೊದಲ ಕಥನವೆಂದು ಬಗೆಯಲಾಗಿರುವ ರಾಮಾಯಣದ ಕಾಲ ನಾಲ್ಕು ಸಾವಿರ ವರ್ಷಗಳಷ್ಟು ಹಿಂದಿನದೆಂದು ಊಹಿಸಲಾಗಿದೆ. ಸುಮಾರು ಮೂರು ಸಾವಿರ ವರ್ಷಗಳ ಹಿಂದಿನದೆಂದು ಊಹಿಸಲಾಗಿರುವ ಮಹಾಭಾರತದ ಕಥನ ಕಾಲದಲ್ಲಿ ಭಾರತದಲ್ಲಿ ಆರ್ಯರು ಮತ್ತು ಅನಾರ್ಯರ ಸಾಂಸ್ಕೃತಿಕ ಸೆಣಸಾಟ ಇನ್ನೂ ನಡೆಯುತ್ತಿದ್ದರೂ ರಾಮಾಯಣದಲ್ಲಿ ಚಿತ್ರಿತರಾಗಿದ್ದ ರಕ್ಕಸ ಕುಲಜರ ಕ್ರೌರ್ಯದ ವರ್ಣನೆ ಮಹಾಭಾರತದಲ್ಲಿ ತನ್ನ ತೀವ್ರತೆಯನ್ನು ಕಳೆದುಕೊಂಡಿತ್ತು."
ನನ್ನ ಮಾರುತ್ತರ/ಪ್ರಶ್ನೆ:
ಈ ಸಾಲುಗಳಲ್ಲಿ "ಮೂರುಸಾವಿರ ವರ್ಷಗಳ ಹಿಂದಿನದೆಂದು ಊಹಿಸಲಾಗಿರುವ" ಅಂತೇನೋ ಬರೆದಿದ್ದಾರೆ - ಆದರೆ ಅದಕ್ಕೆ ಯಾವ ಆಧಾರವನ್ನೂ ಅವರು ಕೊಟ್ಟಿಲ್ಲ ಅನ್ನುವುದನ್ನು ಗಮನಿಸಿ. ಸದ್ಯಕ್ಕೆ ಆ ಕಾಲದ ಬಗ್ಗೆ ಹೆಚ್ಚಿನ ವಾದ ಮಾಡುವುದು ಬೇಡ. ಏಕೆಂದರೆ, ಅದಕ್ಕಿಂತ ಹೆಚ್ಚು ಮುಖ್ಯವಾದ ಅಂಶಗಳು ಮುಂದೆ ಬರುತ್ತವೆ. ಆದರೆ, ಯಾವುದೇ ಆಧಾರಗಳನ್ನು ಹೇಳದೇ, ಬರೆಯುವ ಅಂಕಣಕಾರರ ಶೈಲಿಯನ್ನ ಓದುಗರು ಗಮನಿಸಲಿ ಎಂದಷ್ಟೇ ಇದನ್ನು ಸೂಚಿಸಿದೆನಷ್ಟೇ.
ಮುಂದುವರೆದು ಅಂಕಣಕಾರರು ಹೀಗನ್ನುತ್ತಾರೆ:
"ಅಷ್ಟರಲ್ಲಿ ಅನಾರ್ಯ ಸಮೂಹವನ್ನು ಆಳಬಲ್ಲ ಕ್ಷತ್ರಿಯ ವರ್ಗವನ್ನು ಆರ್ಯರು ರೂಪಿಸಿದ್ದರು. ಆರ್ಯರ ಆಕ್ರಮಣಕ್ಕೆ ದ್ರಾವಿಡರ ಪ್ರತಿರೋಧ ಕಡಿಮೆಯಾಗಿ ಅವರು, ಆರ್ಯರು ನಿರೂಪಿಸಿದ ವರ್ಣದ ಚೌಕಟ್ಟಿನಲ್ಲಿ ಬದುಕಲಾರಂಭಿಸಿದ್ದರು. ಇದರಿಂದಾಗಿ ಮಹಾಭಾರತದಲ್ಲಿ ಕ್ರೂರಿಗಳಾದ ರಕ್ಕಸರ ಚಿತ್ರ ಅಷ್ಟಾಗಿ ಕಾಣುವುದಿಲ್ಲ. ಬದಲಾಗಿ ವೃತ್ತಿಮೂಲವಾದ ಜಾತಿವಾರು ವಿಂಗಡಣೆ ಕಾಣಸಿಗುತ್ತದೆ.ಇಂತಹ ವಿಂಗಡಣೆಯಲ್ಲಿ ಗೊಲ್ಲರ ಕುಲದಲ್ಲಿ ಹುಟ್ಟಿದ ಕೃಷ್ಣ ಮೂಲತಃ ಒಬ್ಬ ದ್ರಾವಿಡ. ಪುರಾಣದಲ್ಲಿ ಚಿತ್ರಿಸಿರುವಂತೆ ಅವನದು ನೀಲವರ್ಣ ಅಂದರೆ ಅವನೊಬ್ಬ ಕರಿಯ. ಆಗಿನ ಕಾಲದ ಆರ್ಯರಂತೆ ಆಜಾನುಬಾಹು ಅಲ್ಲ, ಅವನೊಬ್ಬ ಕುಳ್ಳ. ಗೊಲ್ಲರ ಕುಲದಲ್ಲಿ ಹುಟ್ಟಿ ಈ ಕರಿಯ, ಕುಳ್ಳ ಕೃಷ್ಣ ಆಗಿನ ಆರ್ಯ ಪ್ರಭುತ್ವದ ಬುಡವನ್ನೇ ಅಲುಗಾಡಿಸಿದ್ದ. "
ನನ್ನ ಮಾರುತ್ತರ:
ಕೃಷ್ಣ ಅನ್ನುವ ಹೆಸರು, ಕೃಷ್ ಎಂಬ ಮೂಲದಿಂದ ಬಂದದ್ದು. ಆ ಪದಕ್ಕೆ ಕಪ್ಪು ಅರ್ಥವೊಂದೇ ಅಲ್ಲದೇ, (ಮನಸ್ಸನ್ನು) ಸೆಳೆಯುವ, (ಆ ಕಾರಣದಿಂದ) ಹೊಳೆಯುವ ಮೊದಲಾದ ಹಲವಾರು ಅರ್ಥಗಳೂ ಇರುವುದನ್ನು ಅಂಕಣಕಾರರು ತಿಳಿದಿಲ್ಲ ಅಥವಾ ಬೇಕೆಂದೇ ಮರೆತಿದ್ದಾರೆ ಎಂದುಕೊಳ್ಳಬೇಕಾಗುತ್ತೆ. (ಎಲ್ಲಾ ಅರ್ಥಗಳೂ ಇಲ್ಲಿ ನಮಗೆ ಬೇಕಿಲ್ಲವಾದ್ದರಿಂದ ಅದರ ವಿವರಗಳಿಗೆ ನಾನು ಹೋಗುವುದಿಲ್ಲ). ಇರಲಿ, ಕೃಷ್ಣ ಕಪ್ಪಗೇ ಇದ್ದ ಎಂಬುದನ್ನೇ ಒಪ್ಪಿಕೊಳ್ಳೋಣ, ಆದರೆ, ಅವನು "ಕುಳ್ಳ" ಅನ್ನುವ ನಿರ್ಧಾರಕ್ಕೆ ಅಂಕಣಕಾರರು ಹೇಗೆ ಬಂದರು ಅನ್ನುವುದನ್ನು ನಾನಂತೂ ಊಹಿಸಲಾರೆ! ಅದು ದೊಡ್ಡ ಪ್ರಶ್ನೆಯಾಗೇ ಉಳಿದಿದೆ :)
ಇನ್ನು ಗೊಲ್ಲರಕುಲದಲ್ಲಿ ಹುಟ್ಟಿದ ದ್ರಾವಿಡ ಎಂದರೆ ಏನು? ಪಶುಪಾಲನೆ ಅನ್ನುವುದು ಸುಮಾರು ಮಾನವ ಜನಾಂಗ ಹಳ್ಳಿಗಳಲ್ಲಿ ನೆಲೆ ನಿಲ್ಲುವ ಕಾಲದಿಂದಲೂ ಬಂದ ವೃತ್ತಿ. ಆ ಕಸುಬು ಭಾರತವೂ ಸೇರಿದಂತೆ ಹಲವಾರು ದೇಶಗಳಲ್ಲೂ ಇತ್ತು, ಕೇವಲ ದ್ರಾವಿಡರಲ್ಲಿ ಮಾತ್ರ ಅಲ್ಲ ಅನ್ನುವುದನ್ನೂ ಅಂಕಣಕಾರರಿಗೆ ನೆನಪಿಸಬೇಕೇನು?
ಇನ್ನು ಈ ಮಹಾನು ಭಾವ ಕೃಷ್ಣ ಅದು ಯಾವ ಆರ್ಯ ಪ್ರಭುತ್ವದ ಬುಡ ಅಲುಗಾಡಿಸಿದ್ದ ಅನ್ನುವ, ಅಂಕಣಕಾರರ ಈ ಮುಂದಿನ ಮಾತುಗಳನ್ನು ಓದುವಾಗಲಂತೂ, ನನಗೆ ಅಳಬೇಕೋ ನಗಬೇಕೋ ತಿಳಿಯದೇ ಹೋಯಿತು.
"ಆರ್ಯ ಮೂಲವಾದ ಕುರುಕುಲದಲ್ಲಿ ಕೃಷ್ಣ ಹುಟ್ಟಿಸಿದ ದಾಯಾದಿ ಸಮರ ಎಲ್ಲ ಕಾಲಕ್ಕೂ ಪ್ರಸ್ತುತವೆನಿಸುವ ಒಂದು ಅಪರೂಪದ ರಾಜಕೀಯ ತಂತ್ರವೆನ್ನಬಹುದು. ಕೌರವರು ಮತ್ತು ಪಾಂಡವರ ನಡುವೆ ಸ್ನೇಹ ಸಂಬಂಧವನ್ನು ಬೆಳೆಸಿಕೊಂಡ ಕೃಷ್ಣ, ಆರ್ಯಪುತ್ರರೊಳಗೆ ದಾಯಾದಿ ಮತ್ಸರವನ್ನು ಹುಟ್ಟಿಸಿ ಅದು ಕ್ರಮೇಣ ದ್ವೇಷವಾಗಿ ಬೆಳೆಯುವಂತೆ ಮಾಡಿದ. ಆ ಮೂಲಕ ಈ ಕ್ಷತ್ರಿಯರ ನಡುವೆ ನಡೆದ ಮಹಾಸಮರದಲ್ಲಿ ಆರ್ಯ ಪ್ರಭುತ್ವವೇ ನಶಿಸಿಹೋಗಬಹುದೆಂಬ ಲೆಕ್ಕಾಚಾರ ಕೃಷ್ಣನಿಗಿದ್ದಿರಬೇಕು. ಹೀಗೆ ಆಗುವ ಆರ್ಯ ಕುಲಜರ ಅವನತಿ ದ್ರಾವಿಡ ಪ್ರಭುತ್ವಕ್ಕೆ ದಾರಿ ಮಾಡುವುದೆಂಬ ನಿರೀಕ್ಷೆ ಆತನಿಗಿತ್ತೋ ಏನೋ? ಕೌರವ ಮತ್ತು ಪಾಂಡವರೊಳಗಿನ ದೀರ್ಘಾವಧಿಯ ಆಂತರಿಕ ಕಲಹದ ಅವಧಿಯಲ್ಲಿ ಕೃಷ್ಣ ದ್ರಾವಿಡ ಶಕ್ತಿಯ ಪ್ರಭಾವವಲಯವೊಂದನ್ನು ಸೃಷ್ಟಿಸಿದ್ದ. ಅನಾರ್ಯರಿಗೆ ಕ್ಷತ್ರಿಯ ಅಂತಸ್ತು ನಿರಾಕರಿಸಲ್ಪಟ್ಟಿರುವ ಕಾಲವದು. ಅಂತಹ ಕಾಲದಲ್ಲಿಯೂ ಕೌರವ-ಪಾಂಡವರ ಕಲಹದಿಂದಾಗಿ ಭಾರತದ ಎಲ್ಲೆಡೆ ಅನೇಕ ಮಂದಿ ದ್ರಾವಿಡರು ಕ್ಷತ್ರಿಯ ಪಟ್ಟಕ್ಕೇರಿದ್ದರು"
ನನ್ನ ಟಿಪ್ಪಣಿ:
ಕುರುಕುಲ ಆರ್ಯ ಮೂಲದ್ದೆಂದೂ, ಅದರಲ್ಲಿ ಅನಾರ್ಯನಾದ ಕೃಷ್ಣ ದಾಯಾದಿ ಸಮರವನ್ನು ಹುಟ್ಟಿಸಿ ಅವರನ್ನು ನಾಶ ಮಾಡಿದ ಎಂಬ ವಾದಕ್ಕೆ ಅಂಕಣಕಾರರು ಅವರು ಯಾವುದೇ ಆಧಾರ ಕೊಟ್ಟಿಲ್ಲ ಅನ್ನುವುದನ್ನು ಗಮನಿಸಿ. ಅಂದರೆ ಇದನ್ನು ಪೊಳ್ಳುವಾದ, ಅಥವಾ ಬರೇ ಹೇಳಿಕೆಯ ಮಾತು, ಅಥವಾ ಅವರ ಮನಸ್ಸಿಗೆ ತೋರಿದ ಮಾತು ಅನ್ನಬಹುದಲ್ಲವೇ?. ಅಂಕಣಕಾರರು ತಮ್ಮ ವಾದವನ್ನು ಮಂಡಿಸುವುದಕ್ಕೆ ನನ್ನದೇನು ತಕರಾರಿಲ್ಲ, ಅದು ಅವರಿಗೆ ವಾಕ್ಸ್ವಾತಂತ್ರ್ಯ. ಆದರೆ, ಆಗ ಅದನ್ನು ಅವರು ಪ್ರತಿಪಾದಿತ ಸತ್ಯವೆಂಬಂತಲ್ಲದೇ, "ಹೀಗೆಂದು ನಾನು ಭಾವಿಸಿದ್ದೇನೆ" "ಹೀಗೆಂದು ನನ್ನ ಅನಿಸಿಕೆ" ಎಂದು ಬರೆದಿದ್ದರೆ, ಅದು ಸರಿಯಾದ ಮಾತಾಗಿರುತ್ತಿತ್ತು.
ಅದೂ ಅಲ್ಲದೇ, ಒಬ್ಬ ಅಂಕಣಕಾರರು ಇಂತಹ ಅಪದ್ಧಗಳನ್ನು ಬರೆದಾಗ ಅದರಿಂದ ದಾರಿ ತಪ್ಪುವವರ ಸಂಖ್ಯೆ ಎಷ್ಟಿರಬಹುದು ಎಂಬುದನ್ನು ನೆನೆಸಿಕೊಂಡಾಗ ಮಾತ್ರ ಮನಸ್ಸಿಗೆ ಬೇಸರವಾಗುವುದು ಸಹಜ. ಕೃಷ್ಣನೂ ಪಾಂಡವರೂ ಸೋದರತ್ತೆ ಸೋದರ ಮಾವನ ಮಕ್ಕಳು ಅನ್ನುವ ಅತೀ ಮೂಲಭೂತ ಸಂಬಂಧವನ್ನೂ ಮರೆತು (ಅಥವಾ ಮರೆತಂತೆ ನಟಿಸಿ) ಶ್ರೀಯುತರು ಕೃಷ್ಣನ ಕಾರ್ಯದಲ್ಲಿ "ದಾಯಾದಿ ಸಮರವನ್ನು ಆರ್ಯರ ನಾಶಕ್ಕೆಂದು ಹುಟ್ಟಿಸಿದನೆಂದು" ವಾದ ಮಾಡುವುದನ್ನು ನೋಡಿದಾಗ ಹೀಗೂ ಉಂಟೇ ಎನ್ನಿಸದಿರದು!
ಇದರ ಜೊತೆಗೆ "ಆರ್ಯಪುತ್ರರೊಡನೆ ದಾಯಾದಿ ಮತ್ಸರವನ್ನು ಹುಟ್ಟಿಸಿದ " ಎಂದು ಬರೆಯುವ ಅಂಕಣಕಾರರಿಗೆ "ಆರ್ಯಪುತ್ರ" ಅನ್ನುವುದು ಏನನ್ನು ಸೂಚಿಸುತ್ತೆ ಅನ್ನೋದು ಗೊತ್ತಿಲ್ಲವೋ ಇಲ್ಲವೋ? ಸ್ವಲ್ಪ ಮಟ್ಟಿಗೆ ಸಂಸ್ಕೃತವನ್ನು ತಿಳಿದವರಿಗೂ "ಆರ್ಯಪುತ್ರ" ಅನ್ನುವುದು ಸಾಮಾನ್ಯವಾಗಿ ಹೆಂಡತಿ, ತನ್ನ ಗಂಡನನ್ನು ಕರೆಯುವ, ಅಥವಾ ಕೆಲವೊಮ್ಮೆ ಕೆಲಸದಾತ ತನ್ನ ಮಾಲಿಕನನ್ನು ಕರೆಯುವ ಶಬ್ದ ಎಂದು ತಿಳಿದೇ ಇರುತ್ತೆ!
ಇದಕ್ಕೆ ಮುಂದೆ ಅಂಕಣಕಾರರು ಏನಂತಾರೆ?
" ಆರ್ಯಕ್ಷತ್ರಿಯರು ಮತ್ತು ದ್ರಾವಿಡ ರಾಜ ವಂಶಗಳ ನಡುವೆ ವೈವಾಹಿಕ ಸಂಬಂಧಗಳಿಗೆ ಕೃಷ್ಣ ಚಾಲನೆ ಕೊಟ್ಟಿದ್ದ. ಮಹಾಭಾರತ ಯುದ್ಧದಲ್ಲಿ ದ್ರಾವಿಡ ರಾಜರ ಸಹಭಾಗಿತ್ವವಾಗದಂತೆಯೂ ಕೃಷ್ಣ ನೋಡಿಕೊಂಡಿದ್ದ. ಗೋಪಾಲಕರ ರಾಜನಾದ ಅಣ್ಣ ಬಲರಾಮ ಯಾದವ ಸೇನೆಯನ್ನು ಕುರುಕ್ಷೇತ್ರಕ್ಕೆ ಕರೆದುಕೊಂಡು ಬಾರದಂತೆ ಕೃಷ್ಣ ಹೂಡಿದ ತಂತ್ರದ ಪ್ರಸ್ತಾಪ ಮಹಾಭಾರತ ಕಾವ್ಯದಲ್ಲಿದೆ. ಕೌರವರು-ಪಾಂಡವರ ನಡುವಿನ ಪ್ರತಿಷ್ಠೆಯ ಮಹಾಸಮರದಲ್ಲಿ ತಟಸ್ಥರಾಗಿ ಉಳಿದವರೆಲ್ಲರೂ ದ್ರಾವಿಡ ರಾಜರು. ಹೀಗೆ ದ್ರಾವಿಡ ರಾಜರನ್ನು ತಟಸ್ಥರಾಗಿ ಉಳಿಸಿ ಕುರುಕ್ಷೇತ್ರವನ್ನು ಆರ್ಯ-ಕ್ಷತ್ರಿಯರ ರುದ್ರಭೂಮಿಯಾಗಿ ಮಾಡಿದ್ದ. ಆ ಕಾಲದಲ್ಲಿ ಆರ್ಯ ಪ್ರಭುತ್ವ ಸೃಷ್ಟಿಸಿದ್ದ ವರ್ಣಾಶ್ರಮ ಧರ್ಮವನ್ನು ಶಿಥಿಲಗೊಳಿಸಿ ವರ್ಣಸಂಕರಕ್ಕೆ ದಾರಿ ಮಾಡಿಕೊಡುವುದು ಕೃಷ್ಣನ ಪರಮೋದ್ದೇಶವಾಗಿತ್ತೆನ್ನಬಹುದು."
ನನ್ನ ಟಿಪ್ಪಣಿ:
ಈ ಮೇಲಿನ ಸಾಲುಗಳಲ್ಲಿ ಇರುವ ಅಪದ್ಧಗಳಿಗಂತೂ ಲೆಕ್ಕವೇ ಇಲ್ಲ! ಆರ್ಯ ಕ್ಷತ್ರಿಯರು ಮತ್ತೆ ದ್ರಾವಿಡ ವಂಶಗಳ ನಡುವೆ ವೈವಾಹಿಕ ಸಂಬಂಧಗಳನ್ನು ಕೃಷ್ಣ ಏರ್ಪಡಿಸಿದ್ದ ಎಂದು ಅಂಕಣಕಾರರು ಠರಾವು ಕೊಡಿಸಿದ್ದಾರೆ, ಆದರೆ ತಾವು ಯಾವ ಮದುವೆಗಳ ಬಗ್ಗೆ ಮಾತಾಡುತ್ತಿದ್ದಾರೆ ಎಂಬುದನ್ನು ಹೇಳಲು ಮರೆತಿದ್ದಾರೆ. ನಮಗೆ ತಿಳಿದಂತೆ ಮಹಾಭಾರತದಲ್ಲಿ ನಡೆಯುವ ಅರಸುಕುಮಾರರ ಮತ್ತು "ಅನಾರ್ಯ"ರ - (ಇಲ್ಲಿ ಅನಾರ್ಯ ಅನ್ನುವುದನ್ನು ನಾನು ಬಹುಶಃ ಆರ್ಯ ಭಾಷೆಗಳು ಎಂದು ನಾವೇನನ್ನು ಕರೆಯುತ್ತೇವೋ ಅದನ್ನು ಮಾತಾಡದ ಎನ್ನುವ ಅರ್ಥದಲ್ಲಿ ಬಳಸಿರುವೆ ಅಷ್ಟೇ) ನಡೆಯುವ ಮುಖ್ಯವಾದ ಮದುವೆಗಳಲ್ಲಿ, ಭೀಮ-ಹಿಡಿಂಬೆಯರ, ಅರ್ಜುನ-ಉಲೂಚಿಯರ ಮದುವೆಯಲ್ಲಿ ಅಂತೂ ಕೃಷ್ಣನ ಕೈವಾಡ ಕಾಣುವುದಿಲ್ಲ. ಇನ್ನು ಅಭಿಮನ್ಯು ಉತ್ತರೆಯರ ನಡುವಿನ ವಿವಾಹಕ್ಕೆ ಕೃಷ್ಣನ ಬೆಂಬಲವಿತ್ತೇನೋ ನಿಜ. ಆದರೆ, ಅಭಿಮನ್ಯುವನ್ನು ಆರ್ಯಕುಲಕ್ಕೆ ಸೇರಿದವನಲ್ಲ ಎಂದು ಹೇಳುವುದು ಕಷ್ಟ. ಇವನ್ನು ಬಿಟ್ಟು ಅಂತಹ ಪ್ರಮುಖ ಪಾತ್ರ ವಹಿಸದವರ ಮದುವೆಗಳಲ್ಲಿ ಒಂದು ವೇಳೆ ಕೃಷ್ಣ ಪಾಲ್ಗೊಂಡಿದ್ದರೂ, ಅದು ಅಂತಹ ಪ್ರಮುಖವಾದ ಸಂಗತಿಯೆಂದು ನನಗನ್ನಿಸುವುದಿಲ್ಲ.
ಇನ್ನು ಮಹಾಭಾರತ ಯುದ್ಧದಲ್ಲಿ ದ್ರಾವಿಡ ರಾಜರು ಪಾಲ್ಗೊಳ್ಳದಂತೆ ಕೃಷ್ಣ ನೋಡಿಕೊಂಡಿದ್ದ ಎಂದು ಅಂಕಣಕಾರರು ಹೇಳುತ್ತಿದ್ದಾರೆ. ಆದರೆ, ಈಗ ಬಳಕೆಯಲ್ಲಿರುವ ಮಹಾಭಾರತದಲ್ಲಿ ಪಾಂಡ್ಯ, ಮಾಹಿಷಕ, ಕರ್ನಾಟ ದ ಅರಸರು ಭಾಗವಹಿಸಿದ್ದ ಪ್ರಸ್ತಾಪವಿದೆ. ಈಗ ಪಾಂಡ್ಯ ಅಂದರೆ, ತಮಿಳುನಾಡು, ಕರ್ನಾಟ /ಮಾಹಿಷಕ ಎಂದರೆ ಕರ್ನಾಟಕ ಎಂದರೆ ಬಿಡಿಸಿ ಹೇಳಬೇಕಾಗಿಲ್ಲವಲ್ಲ? ಇವರೂ ಹಾಗಿದ್ದರೆ "ಆರ್ಯ" ಅರಸರೇ? (ಹೆಚ್ಚುವರಿ ಟಿಪ್ಪಣಿ: ಈ ಪ್ರಸ್ತಾಪವು ಪ್ರಕ್ಷಿಪ್ತವೆಂದು ಹೇಳುವವರೂ ಇದ್ದಾರೆ - ಆದರೆ, ಮಹಾಭಾರತವೇ ವಿಧರ್ಭ ಮತ್ತೆ ಅದಕ್ಕೆ ಉತ್ತರ ಭಾರತದಲ್ಲಿ ನಡೆಯುವ ಕಥೆ. ಹಾಗಾಗಿ ಅಲ್ಲಿ "ದ್ರಾವಿಡರ ಸಹಭಾಗಿತನ" ಇಲ್ಲದೇ ಇರುವುದರಲ್ಲಿ ಆಶ್ಚರ್ಯವೇನಿದೆ?
ಇನ್ನು ಈ ಅಂಕಣಕಾರರು "ಗೋಪಾಲಕರ ರಾಜನಾದ ಅಣ್ಣ ಬಲರಾಮ ಯಾದವ ಸೇನೆಯನ್ನು ಕುರುಕ್ಷೇತ್ರಕ್ಕೆ ಕರೆದುಕೊಂಡು ಬಾರದಂತೆ ಕೃಷ್ಣ ಹೂಡಿದ ತಂತ್ರದ ಪ್ರಸ್ತಾಪ ಮಹಾಭಾರತ ಕಾವ್ಯದಲ್ಲಿದೆ. " ಎಂದು ಬರೆಯುತ್ತಾರೆ - ಈ ವಾಕ್ಯವನ್ನು ಓದಿದಾಗ ಮಹಾಭಾರತದ ಬಗ್ಗೆ, ಭಗವದ್ಗೀತೆಯ ಬಗ್ಗೆ ಭಾರೀ ವ್ಯಾಖ್ಯೆಯನ್ನು ಬರೆದು , ಪ್ರತಿಷ್ಟಿತ ಪತ್ರಿಕೆಯ ಅಂಕಣದಲ್ಲಿ ಪ್ರಕಟಿಸುವ ಮಟ್ಟದಲ್ಲಿರುವ ಅಂಕಣಕಾರರು, ಮಹಾಭಾರತವನ್ನು ಮೂಲದಲ್ಲಿಯೇ ಆಗಲಿ, ಸಂಗ್ರಹದಲ್ಲಿ ಆಗಲಿ, ಅನುವಾದದಲ್ಲಿ ಆಗಲಿ ಓದಿಲ್ಲ ಎನ್ನುವುದು ಸುಸ್ಪಷ್ಟವಾಗಿ ತಿಳಿಯುತ್ತೆ. ತೀರ್ಥಯಾತ್ರೆಗೆ ಹೋದ ಬಲರಾಮನನ್ನೊಬ್ಬನನ್ನು ಬಿಟ್ಟು, ಪಾಂಡವರ ಪಕ್ಷದಲ್ಲಿ ಸೇನಾನಾಯಕನಾದ ಸಾತ್ಯಕಿ, ಸಾರಥಿಯಾದ ಕೃಷ್ಣನನ್ನು ಬಿಟ್ಟು ಉಳಿದ ಇಡೀ ಯಾದವ ಸೇನೆ ಮಹಾಭಾರತ ಯುದ್ಧದಲ್ಲಿ ದುರ್ಯೋಧನನ ಪಕ್ಷದಲ್ಲಿ ಭಾಗವಹಿಸಲಿಲ್ಲವೇ? ಹಿಂದಿನ ಕಾಲದಲ್ಲಿ ಭಾರತ ಭಾಗವತಗಳು ಪ್ರತಿಯೊಬ್ಬರ ಕೈಗೂ ಎಟುಕದೇ ಹೋಗಿರಬಹುದು, ಇವತ್ತು ಇಂಟರ್ ನೆಟ್ ಯುಗ ಸ್ವಾಮೀ! ಎಲ್ಲಿದ್ದೀರಿ ನೀವು? ಇಡೀ ವ್ಯಾಸ ಭಾರತವೇ ನಿಮ್ಮ ಬೆರಳ ತುದಿಯಲ್ಲಿ ಸಿಗುವಾಗ ಅದನ್ನು ಓದದೇ ನೋಡದೇ ಬೇಕಾದ್ದನ್ನು ಬರೆದು, ಹೆಚ್ಚು ತಿಳುವಳಿಕೆ ಇರದ, ಕೇವಲ ಪತ್ರಿಕೆಗಳನ್ನು ಮಾತ್ರ ಓದುವಂತಹವರನ್ನು ತಪ್ಪುದಾರಿಗೆ ಎಳೆಯುವುದು ಯಾವ ನ್ಯಾಯ?
ತಮ್ಮ ಲೇಖನವನ್ನು ಮುಗಿಸುತ್ತಾ ಅಂಕಣಕಾರರು "ಕೌರವರು-ಪಾಂಡವರ ನಡುವಿನ ಪ್ರತಿಷ್ಠೆಯ ಮಹಾಸಮರದಲ್ಲಿ ತಟಸ್ಥರಾಗಿ ಉಳಿದವರೆಲ್ಲರೂ ದ್ರಾವಿಡ ರಾಜರು. ಹೀಗೆ ದ್ರಾವಿಡ ರಾಜರನ್ನು ತಟಸ್ಥರಾಗಿ ಉಳಿಸಿ ಕುರುಕ್ಷೇತ್ರವನ್ನು ಆರ್ಯ-ಕ್ಷತ್ರಿಯರ ರುದ್ರಭೂಮಿಯಾಗಿ ಮಾಡಿದ್ದ". ಇಲ್ಲಿ ಮಾನ್ಯರು ಈ ಅರಸರು ಯಾರು ಅಂತ ಹೇಳಿಲ್ಲ. ಆದ್ದರಿಂದ ನಾನೇನೂ ಇದರ ಬಗ್ಗೆ ಟಿಪ್ಪಣಿ ಬರೆಯಲು ಹೋಗಿ, ಸುಮ್ಮನೆ ನನ್ನ ಕೈ ನೋಯಿಸಿಕೊಳ್ಳೋಲ್ಲ ಬಿಡಿ!
ನೀತಿ: ಒಟ್ಟಿನಲ್ಲಿ, ದಿನ ಪತ್ರಿಕೆ ಯಲ್ಲಿ, (ಅಥವಾ ಟೀವಿಯಲ್ಲಿ, ಅಥವಾ ಫೇಸ್ ಬುಕ್ ಪೋಸ್ಟಿಂಗ್ ನಲ್ಲಿ!) ಬಂದ ಮಾತ್ರಕ್ಕೆ ಎಲ್ಲವೂ ಸರಿಯೇ ಆಗಿರಬೇಕಿಲ್ಲ. ಅದು ಒಂದು ದೃಷ್ಟಿಕೋನ ( point of view) ಅಂತ ಬೇಕಾದರೆ ಒಪ್ಪೋಣ. ಅದಕ್ಕೆ ನಮ್ಮ ಕಿವಿಯನ್ನು ತೆರೆದಿಡೋಣ. ಆದರೆ, ಅದನ್ನು ನಿತ್ಯಸತ್ಯ ಅಂತ ಹೇಳೋದನ್ನ, ನಂಬೋದನ್ನ ಬಿಡೋಣ! ಈ ವಾಟ್ಸಪ್ ಫಾರ್ವರ್ಡ್ ಕಾಲದಲ್ಲಂತೂ, ಇದು ಬಹಳ ಮುಖ್ಯ ಅನ್ನಿಸ್ತಾ ಇದೆ!
-ಹಂಸಾನಂದಿ
ಕೊ: ನಾವು ಚಿಕ್ಕವರಿದ್ದಾಗ ನಮಗೆ ಓದಿಸುತ್ತಿದ್ದ ಕೆಲವು ಕಥೆಗಳಲ್ಲಿ ಕಥೆಯ ನಂತರ , "ಈ ಕಥೆಯಿಂದ ನಾವು ಯಾವ ನೀತಿ ಕಲಿಯಬಹುದು ಎಂಬ ಪ್ರಶ್ನೆ ಇರುತ್ತಿತ್ತು. ಈಗ ಅದು ನನಗೆ ನೆನಪಾದ್ದರಲ್ಲಿ, ಒಂದು ಸ್ವಾರಸ್ಯವಿದೆ.
ಕೊ.ಕೊ: ಈಗ ಇಡೀ ಬರಹವನ್ನು, "ಕೆಲವು ಪತ್ರಕರ್ತರ ಅಂಕಣ ಬರಹಗಳಿಂದ ನಾವು ಯಾವ ನೀತಿ ಕಲಿಯಬಹುದು?" ಎಂಬ ಪ್ರಶ್ನೆ ಕೇಳಿಕೊಂಡು ಅದಕ್ಕೆ ಉತ್ತರವೆಂಬಂತೆ ಓದಿಕೊಳ್ಳಿ. :) :) :)
ಕೊ.ಕೊ.ಕೊ: "ಭಗವದ್ಗೀತೆಯನ್ನು ಹೀಗೆಯೂ ಓದಬಹುದಲ್ಲವೇ" ಎಂದು ಹುಡುಕಿದರೆ, ಮೂಲ ಬರಹವೂ ನಿಮಗೆ ಸಿಗಬಹುದು.
ಚಿತ್ರ ಕೃಪೆ: ವಿಕಿಪೀಡಿಯಾ https://en.wikipedia.org/wiki/Bhagavad_Gita#/media/File:Kurukshetra.jpg
Comments
ಉ: ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು
ಹಂಸಾನಂದಿಯವರೇ, ತಮ್ಮ ಲೇಖನ ಸೊಗಸಾಗಿದೆ.ಮಹಾಭಾರತ ಕುರಿತು ಅನೇಕರು ಏನೇನೋ ಬರೆಯುತ್ತಾರೆ. ಕೆಲ ಪತ್ರಿಕ / ಟಿವಿ ಗಳು ಪ್ರಚಾರ / ಪ್ರಸಾರ ದ್ರುಷ್ಟಿಯಿಂದ ಹೀಗೆ ಮಾಡುತ್ತವೆ, ಆದರೆ ನಾನು ಗಮನಿಸಿರುವಂತೆ ಪ್ರಜಾವಾಣಿ ಪತ್ರಿಕೆ ಕೂಡಾ ( ಮುಖ್ಯ ವಾಹಿನಿಯಲ್ಲಿರುವದರಿಂದ) ಹೀಗೆ ಬಹುಸಂಖ್ಯಾತರ ಭಾವನೆಗೆ ಧಕ್ಕೆ ಬರುವಂತೆ (ಅಲ್ಪಸಂಖಾತರ ಭಾವನೆಗೆ ಯಾವುದೇ ಧಕ್ಕೆ ಬಾರದಂತೆ) ನಡೆದುಕೊಳ್ಳುತ್ತಿರುವುದು ಬಹುಸಂಖ್ಯಾತರ ದುರದ್ರುಷ್ಟವೇ ಸರಿ.
ಒಟ್ಟಿನಲ್ಲಿ, ದಿನ ಪತ್ರಿಕೆ ಯಲ್ಲಿ, (ಅಥವಾ ಟೀವಿಯಲ್ಲಿ, ಅಥವಾ ಫೇಸ್ ಬುಕ್ ಪೋಸ್ಟಿಂಗ್ ನಲ್ಲಿ!) ಬಂದ ಮಾತ್ರಕ್ಕೆ ಎಲ್ಲವೂ ಸರಿಯೇ ಆಗಿರಬೇಕಿಲ್ಲ. ಅದು ಒಂದು ದೃಷ್ಟಿಕೋನ ( point of view) ಅಂತ ಬೇಕಾದರೆ ಒಪ್ಪೋಣ.