ಪತ್ರ ಹಾಗು ಪತ್ರೆ

ಪತ್ರ ಹಾಗು ಪತ್ರೆ

 ಪತ್ರ ಹಾಗು ಪತ್ರೆ

ಪ್ರತಿದಿನ ಆಗದಿದ್ದರು ಬಾನುವಾರ ಬೆಳಗ್ಗೆ ಒಂದು ದೀರ್ಘ ವಾಕಿಂಗ್  ಎರಡು ಮೂರು ವರ್ಷದಿಂದ ಅಭ್ಯಾಸ. ಗೆಳೆಯರು ರಾವ್ ಎನ್ನುವರು ಬರುತ್ತಾರೆ, ಮನೆಯಿಂದ ಹೊರಟು ಪುಷ್ಪಗಿರಿನಗರ ಹೆಚ್ ಎಸ್ ವಿ ರವರ ಮನೆಯ ಮುಂದೆ ನಡೆದು, ನೈಸ್ ರಸ್ತೆಯ ಕೆಳಗಿನಿಂದ ಹಾದು ಬಲಕ್ಕೆ ತಿರುಗಿದರೆ  ಹಳ್ಳಿ ರಸ್ತೆಯಂತ ಕಚ್ಚಾ ರಸ್ತೆ ಅತ್ತ ಇತ್ತ ಒಂದು ಕಾಲಕ್ಕೆ ಇದ್ದ ತೋಟಗಳು, ದಾಟಿ  ಐಡಿಯಲ್ ಹೋಮ್ ಕಾಲೋನಿ   , ಗ್ಲೋಬಲ್ ಕಾಲೇಜ್ ಮುಂದಿನಿಂದ ಹಾದು ಬೆಮೆಲ್ ಲೇಔಟ್ ಮುಖ್ಯರಸ್ತೆ ತಲುಪಿ, ಪುನಃ ಹಿಂದೆ ತಿರುಗಿ ಬಾಳೆಲೆ ನರಸಿಂಹನ ಗುಡ್ಡದ ಹತ್ತಿರ ತಲುಪಿದರೆ ಆಯ್ತು ಪುನಃ ನಮ್ಮ ಮನೆಗೆ ತಲುಪುವ ರಸ್ತೆ ಸುಮಾರು ಎರಡು ತಾಸು ನಡಿಗೆ.

ಈ ಶನಿವಾರ  ರಾತ್ರಿಯೆ ಕಾಲ್ ಬಂದಿತ್ತು, ಬೆಳಗ್ಗೆ ಆರಕ್ಕೆ ಬರುವೆ, ಹಾಗೆ ಪತ್ರೆ ತಂದುಬಿಡುವ ಎಂದು. ಹೌದಲ್ಲವೆ ಗಣೇಶನ ಹಬ್ಬ ಕಳೆದ ವರ್ಷವು ನಾವು ಇದೆ ದಾರಿಯಲ್ಲಿ ಸುಮಾರು ಪತ್ರೆಗಳನ್ನು ಸಂಗ್ರಹಿಸಿದ್ದು ನೆನಪಿಗೆ ಬಂದಿತು.

ಬೆಳಗ್ಗೆ ರಾವ್ ಬರುವಾಗಲೆ ಹತ್ತು ನಿಮಿಷ ತಡ ಏಳುವುದು ನಿಧಾನವಾಯಿತಂತೆ. ಹೊರಗೆ ಸ್ವಲ್ಪ ತಂಪಾದ ವಾತಾವರಣವೆ ಇತ್ತು. ಪುಷ್ಪಗಿರಿನಗರ ದಾಟಿ, ಬಲಕ್ಕೆ ತಿರುಗಿ ಸ್ವಲ್ಪ  ಅಭ್ಯಾಸವಿಲ್ಲದವರಿಗೆ ಉಬ್ಬಸ ಬರುವಂತೆ ಇದ್ದ  ಏರು ರಸ್ತೆ ಹತ್ತಿ ಸಮನೆಲ ತಲುಪುತ್ತಿರುವಾಗ, ಅವರು ‘ನೋಡಿ ಈ ಎಲೆ ಕಿತ್ತುಕೊಳ್ಳೋಣ, ಸ್ವಲ್ಪ ಚಿಗುರಿನಂತದೆ ಕೀಳಿ’ ಎಂದರು ,
 ಅದು ಸಪೋಟ ಗಿಡ , ‘ಯಾವ ಗಿಡ?” ಎಂದು ಅವರನ್ನು ಕೇಳಲು ಹೋಗಲಿಲ್ಲ. ಮತ್ತೆ ಹತ್ತು ಹೆಜ್ಜೆ ನಡೆಯುತ್ತಿರುವಾಗ , ಎಳೆಯ ಗರಿಕೆ (ಹುಲ್ಲು) ಕಾಣಿಸಿತು. ಅವರು ಕುಕ್ಕುರುಗಾಲಿನಲ್ಲಿ ಕುಳಿತು ಅದನ್ನು ಕೀಳುತ್ತಿದ್ದರು. ನಾನು ಕೀಳಲು ಬಗ್ಗಿದೆ, ಮೊಬೈಲ್ ನಲ್ಲಿ ಮೆಸೇಜ್ ಬಂದ ಶಬ್ದ ಬಂದಿತು.

ನಿಂತು ತೆಗೆದು ಮೆಸೇಜ್ ನೋಡಿದೆ.
ರಾವ್ ಮಾತನಾಡುತ್ತ ಹೇಳುತ್ತಿದ್ದರು ‘ಮನೆಯ ಹತ್ತಿರವು ಗರಿಕೆ ಇರುತ್ತದೆ ಆದರೆ ಹೀಗೆ ಶುದ್ದ ವಾಗಿರುವದಿಲ್ಲ, ರಸ್ತೆಯ ಪಕ್ಕದ ಗಲೀಜೆಲ್ಲ ಬಿದ್ದು ಮುಟ್ಟಲು ಅಸಹ್ಯ ಇಲ್ಲಾದಾರೆ ನೋಡಿ, ಎಷ್ಟು ಶುಭ್ರ’ ಅನ್ನುತ್ತ
‘ಏನದು ಮಗಳು ಟ್ಯೂಷನ್ ಗೆ ತಲುಪಿದಳಂತ ‘ ಎಂದರು

 ಪ್ರತಿ ಬಾನುವಾರ ಬೆಳಗ್ಗೆ ವಿಜಯನಗರದಲ್ಲಿ ಟ್ಯೂಷನ್ ,  ನನ್ನ ಅಕ್ಟೀವ ತೆಗೆದುಕೊಂಡು ಹೋಗುತ್ತಾಳೆ, ಮಕ್ಕಳು ಎಷ್ಟೆ  ದೊಡ್ಡವರಾದರು  ತಂದೆ ತಾಯಿಗೆ ಎಂತದೊ ಆತಂಕ. ಹಾಗಾಗಿ ಅಲ್ಲಿ ತಲುಪುವಾಗ ಒಂದು, ಅಲ್ಲಿಂದ ಹೊರಡುವಾಗ ಒಂದು ಮೆಸೇಜ್ ಕಳಿಸುತ್ತಾಳೆ.  
ರಾವ್  ಅಂದರು,.’ ತಂತ್ರಜ್ಞಾನದ ಅನುಕೂಲಗಳಲ್ಲಿ ಇದು ಒಂದು ನೋಡಿ, ತಕ್ಷಣ ಸುದ್ದಿಗಳು ತಿಳಿಯುತ್ತವೆ, ಹಿಂದಾದರೆ, ಊರಿಗೆ ಹೋದವರು, ಅಲ್ಲಿ ತಲುಪಿ, ಒಂದೆರೆಡು ದಿನದ ನಂತರ ಹಾಕಿದ ಪತ್ರ ನಮಗೆ ತಲುಪುವ ಸಮಯಕ್ಕೆ ಒಂದು ವಾರವೆ ದಾಟುತ್ತಿತ್ತು’

ಅಷ್ಟರಲ್ಲಿ ನಮ್ಮ ಗರಿಕೆ ಸಂಗ್ರಹ ಮುಗಿದಿತ್ತು,  ಬ್ಯಾಗಿನಲ್ಲಿ ಹಾಕಿದೆವು. ನಾನು ಹೇಳಿದೆ
“ಆಗೆಲ್ಲ ಊರಿಗೆ ಹೋಗುತ್ತ ಇದ್ದದ್ದು ಕಡಿಮೆಯೆ , ಹೋಗಿ ತಲುಪಿದೆವು ಎಂದು ಪತ್ರ ಬರೆಯುತ್ತಿದ್ದೆವು, ಹೆತ್ತವರಿಗೆ ಆತಂಕವು ಈಗಿನಷ್ಟು ಇರುತ್ತಿರಲಿಲ್ಲ, ಹಾಗೆ ನೋಡಿದರೆ ಮಿಲಿಟರಿ ಸೇರುವೆ ಎಂದೊ , ಪ್ರವಾಸಕ್ಕೆ ಹೋದವರೊ , ಅವರ ಕ್ಷೇಮ ಆರು ತಿಂಗಳಾದರು ತಿಳಿಯುತ್ತಲೆ ಇರಲಿಲ್ಲ, ಯಾವಾಗಲೊ ಅವರ ಪತ್ರ ಬರೋದು’

‘ಆಗ ಶಾಲೆಗಳಲ್ಲಿ ಪತ್ರ ಲೇಖನವು ಒಂದು ಬಾಗ, ಈಗೆಲ್ಲ ಅದೆಲ್ಲ ಬೇಡ ಬಿಡಿ, ಗೂಗಲ್ ಸಾಕು ಎಲ್ಲ ತಿಳಿಯಲು,  ಇಲ್ಲಿ ಬನ್ನಿ  ಹುಲ್ಲಿನ ಸಂದಿಯಲ್ಲಿ ನೋಡಿ, ‘ಉತ್ತರಾಣಿ’ ಗಿಡವಿದೆ , ಇದರ ಎಲೆಗಳನ್ನು ಸ್ವಲ್ಪ ತೆಗೆದುಕೊಳ್ಳಿ’

“ಉತ್ತರಾಣಿಯೆ , ಕಳೆದ ಬಾರಿ ಇದನ್ನು ಕೀಳುವಾಗ, ಉದ್ದನೆ ಕಡ್ಡಿಯಂತವುದರಲ್ಲಿ ಪುಟ್ಟ   ನೀಲಿ ಹೂಗಳಿದ್ದವು, ಈ ಸಾರಿ ಬೇರೆಯೆ ತರ ಕಾಣುತ್ತಿದೆ” ಎಂದೆ
‘ಹೌದು  ಹೂ ಬಿಟ್ಟಿದ್ದಾಗ ಆ ರೀತಿ ಇರುತ್ತದೆ, ಈಗ ನೋಡಿ ಎಲೆಯು ಅಂತ ಅರೋಗ್ಯವಾಗಿಲ್ಲ, ಮಳೆಯೆ ಇಲ್ಲವಲ್ಲ “ ಎನ್ನುತ್ತ ಮತ್ತೆ ಸಂದಿಯಿಂದ ರಸ್ತೆಗೆ ಬಂದರು.
“ನೋಡಿ ಪತ್ರ ಎನ್ನುವಾಗ ,   ಕಸ್ತೂರಿಯಲ್ಲಿ ಒಂದು ಚಿಕ್ಕ ಕತೆ ಓದಿದೆ  ಅಕ್ಕ ತಮ್ಮ  ರೈಲ್ವೆ ನಿಲ್ದಾಣಕ್ಕೆ ಬರುತ್ತಾರೆ ತಮ್ಮನನ್ನು ರೈಲಿಗೆ ಕಳಿಸಿ ಅಕ್ಕ ಹಿಂದಿರುಗಬೇಕು, ರೈಲು ಬೇಗ ಬರುವದಿಲ್ಲ, ಆಕೆ ಹಾಸ್ಟೆಲ್ ಗೆ ಬೇಗ ಹೋಗ ಬೇಕು ಸಂಜೆ ಆಯಿತು ಅಂತ ತಮ್ಮನನ್ನು ರೈಲು ಬಂದ ನಂತರ ಹತ್ತು ಎಂದು ಹೇಳಿ ಹೊರಡುವಳು’  ಎನ್ನುತ್ತ  

‘ನೋಡಿ ಎಕ್ಕದ ಗಿಡ, ಎಲೆಗಳು ಚೆನ್ನಾಗಿವೆ,  ಐದು ಎಲೆ ಮಾತ್ರ ತೆಗೆದುಕೊಳ್ಳಿ ಸಾಕು ನಿಮ್ಮ ಪ್ಲಾಶ್ಟಿಕ್ ಬ್ಯಾಗ್ ಜಾಸ್ತಿ ಹಿಡಿಯಲ್ಲ, ಎಕ್ಕದ ಹೂಗಳನ್ನು   ಜಾಸ್ತಿ ಕಿತ್ತುಕೊಳ್ಳಿ’ ಎನ್ನುತ್ತ ಅವರು ಕೀಳಲು ತೊಡಗಿದರು.
‘ಕಳೆದ ಸಾರಿ ಅಂಜನೇಯ ದೇವಾಲಯದ ಹತ್ತಿರ ಬಿಳಿಯ ಎಕ್ಕದ ಗಿಡ ಸಿಕ್ಕಿತ್ತು ಅದರ ಎಲೆ ಹೂ ತಂದಿದ್ದೆವು  ‘ ಎನ್ನುತ್ತ , ಮತ್ತೆ ಹಿಂದೆ ಬಂದರು.
ಎಕ್ಕದ ಎಲೆಗಳನ್ನು ಕಿತ್ತಿದ್ದರಿಂದ ಆದರ ಹಾಲು ಕೈಗೆ ತಗಳಿ ಕೈ ಎಲ್ಲ ಅಂಟುತ್ತಿತ್ತು.

“ತಮ್ಮನನ್ನು ರೈಲಿಗೆ ಕಳಿಸಿ ಹಿಂದೆ ಬಂದಳಲ್ಲ ಅಕ್ಕ, ಅವಳಿಗೆ ತಮ್ಮನ ಪತ್ರ ಬರುವವರೆಗು ಒಂದು ವಾರ ಆಕೆಯ ಸಂಕಟ ಆತಂಕ ಅದೆ ಕತೆಯ ವಿಷಯ. ಚೆನ್ನಾಗಿ ಬರೆದಿದ್ದಾನೆ ವಿವರಣೆ “ ಎಂದರು.
ಹೀಗೆ ಪತ್ರ ಲೇಖನದ ಬಗ್ಗೆ ಮಾತನಾಡುತ್ತ ಹೊರಟು, ಮುಂದೆ ಬರುವಾಗ,
“ನಮ್ಮ ಮನೆಯಿಂದ ನಿಮಗೆ ಮಾವಿನ ಎಲೆ ತರಬಹುದಿತ್ತು , ಮರೆತೆ ‘ ಅನ್ನುವಾಗಲೆ ಪಕ್ಕದಲ್ಲಿ ಮಾವಿನ ಗಿಡ ಕಾಣಿಸಿತು ,
‘ನೋಡಿ ಮಾವಿನ ಗಿಡ , ಕೆಳಗೆಲ್ಲ ಎಲೆ ಬಿದ್ದಿದ್ದೆ ಯಾರೊ ಈಗ ಕಿತ್ತಿದ್ದಾರೆ, ಅನ್ನುತ್ತ ನೋಡಿ ಕೆಂಪು ಎಲೆಗಳು ಇನ್ನು ಎಳೆಯವು , ಪೂಜೆಗೆ ಚೆನ್ನಾ’ ಎನ್ನುತ್ತಾ, ಕೊಂಬೆ ಬಗ್ಗಿಸಿ, ಸಾಕಷ್ಟು ಮಾವಿನ ಎಲೆ ಕಿತ್ತು ಅವರ ಬ್ಯಾಗಿಗೆ ಹಾಕುತ್ತ, ನನಗು ಕೊಟ್ಟರು ನನಗಂತು ಕೆಂಪು ವರ್ಣದ ಮಾವಿನ ಎಲೆಗಳು ತುಂಬಾ ಖುಷಿ ಕೊಟ್ಟಿತು.
“ಅಲ್ಲಿ ನೋಡಿ ಅದು ಮುತ್ತಗದ ಗಿಡ, ಅದರ ಎಲೆ ಹಚ್ಚಿ ಊಟ ಬಡಿಸಲು ಬಳಸುವರು, ಆದರೆ ಅಲ್ಲಿಗೆ ತಲುಪಲಾಗಲ್ಲ, ತೀರ ಕೆಳಗಿದೆ ಮುಂದೆ ನೋಡೋಣ” ಎನ್ನುತ್ತ

ಮತ್ತೆ ಸ್ವಲ್ಪ ನಡೆಯುವಾಗಲೆ,  ಪಕ್ಕದಲ್ಲಿ ಇಳಿಜಾರಿನಲ್ಲಿ ತುಂಬೆ ಗಿಡಗಳು ಕಾಣಿಸಿತು
“ತುಂಬೆ ಪೂಜೆ ಮಾಡಬಹುದಲ್ಲವೆ “ ಎಂದೆ
“ಯಾಕಿಲ್ಲ ತುಂಬೆ ಶ್ರೇಷ್ಟ, ಹೂವಿನ ಸಮೇತವೆ ಕೀಳಿ, ಈ ಗಿಡಗಳೆಲ್ಲ ಅದೇನೊ ಇಲ್ಲಿ ಬೆಳೆಯುತ್ತವೆ, ಇವನ್ನೆ ತೆಗೆದುಕೊಂಡು ಹೋಗಿ ಮನೆಯಲ್ಲಿ ಪಾಟಿಗೆ ಹಾಕಿದರೆ, ನೆಲಕ್ಕ ಹಾಕಿದರು ಬರುವುದೆ ಇಲ್ಲ “ ಎಂದರು
ನಾನು “ಹೌದು,    ಅರಳಿ ಗಿಡ ಪಾಟಿನಲ್ಲಿ ಬೆಳೆಸಲು ಪ್ರಯತ್ನಿಸಿದೆ, ಆಗಲೆ ಇಲ್ಲ “ ಎಂದೆ
“ನೋಡಿ ಪಕ್ಕದಲ್ಲಿ ಮತ್ತೆ ಉತ್ತರಾಣಿ ಗಿಡವಿದೆ ಇಲ್ಲಿ ಎಲೆಗಳು ಎಷ್ಟು ಚೆನ್ನಾಗಿವೆ ‘ ಮತ್ತೆ ಕೆಲವು ಎಲೆ ಕಿತ್ತವರು ಮತ್ತೆ ಕೆಳಗೆ ಬಗ್ಗಿ ಯಾವುದೊ ಎಲೆ ಕೀಳುತ್ತಿದ್ದರು, ಅದೆಂತ ಸಣ್ಣ ಸಣ್ಣ ಎಲೆಗಳು ಮಧ್ಯ ಮುಳ್ಳು ಇದ್ದಂತ ಕಾಣಿಸಿತು
“ಅದ್ಯಾವುದು, ಎಲೆ ಗೊತ್ತಾಗಲಿಲ್ಲ “ ಎಂದೆ
“ನೋಡಿ ಇದು ಗುರುತು ಹಿಡಿಯಲು ಕಷ್ಟವೆ, ಸಾಮಾನ್ಯವಾಗಿ ದೊಡ್ಡ ಮರವಾಗುತ್ತವೆ ಯಾರೊ ಕಡಿದು ಹಾಕಿದ್ದಾರೆ, ಮತ್ತೆ ಚಿಗುರುತ್ತಿದೆ, ಇದು ಬೇಲದ ಗಿಡ, ತಿಂದಿಲ್ಲವೆ, ಪಾನಕ ಮಾಡಲು ಬಳಸುತ್ತಾರೆ” ಎಂದರು
“ಬೇಲ ಗೊತ್ತಿಲ್ಲದೆ ಏನು, ನಮ್ಮ ಊರಿನಲ್ಲಿ ದೊಡ್ಡ ಮರವೆ ಇತ್ತು,   ಸಾಕಷ್ಟು ತಿಂದಿದ್ದೇವೆ, ಅದಕ್ಕೆ ಬೆಲ್ಲ , ರಾಗಿಯ ಹುರಿಟ್ಟು ಎಲ್ಲ ಹಾಕಿ ‘ಬೆಲ್ಲಗೊಜ್ಜು’ ಅನ್ನುವ ಪಾನೀಯ ಮಾಡುತ್ತಿದ್ದರು, ಚಿಕ್ಕ ಗಿಡ ಗುರುತು ಸಿಗಲಿಲ್ಲ’ ಎಂದೆ.

ನೋಡುವಾಗ ತಂಗಡಿ ಚಿಕ್ಕ ಗಿಡ ಹಾಗು ಹಳದಿ ಹೂ ಕಾಣಿಸಿದವು ಅದರ ಎಲೆಯನ್ನು ನಾಲ್ಕಾರು ಸಂಗ್ರಹಿಸಿದೆವು.

ಮಧ್ಯೆ ಎಂತದೊ ಮಾತು, ಸ್ವಲ್ಪ ರಸ್ತೆ ಇಳಿಜಾರಿತ್ತು, ಪಕ್ಕದಲ್ಲಿದ್ದ ದೊಡ್ಡ  ಗೋಡೇಯ ಒಳಗಿದ್ದ, ಬಿದಿರು ಜೊಂಡೆ ಜೊಡೆಯಾಗಿ ಹೊರಗೆ ನೇತು ಬಿದ್ದಿದ್ದವು
“ಸ್ವಲ್ಪ ಎಳೆಯದಾದ ಬಿದಿರಿನ ಎಲೆಗಳನ್ನು ಕೀಳಿ’ ಎಂದರು
“ಗಣೇಶನಿಗೆ ಬಿದಿರು ಎಲೆ ಪೂಜಿಸಬಹುದೆ” ಎಂದೆ
“ಹೀಗೆ ಅಂತ ಏನಿಲ್ಲ, ಸಾಮಾನ್ಯವಾಗಿ ಆನೆಗೆ ಇಷ್ಟವಾಗುವ ಎಲೆಗಳನ್ನೆಲ್ಲ ಪೂಜಿಸಬಹುದು, ನಾವು ಚಿಕ್ಕವರಿದ್ದಾಗ, ಹಬ್ಬದ ಹಿಂದಿನ ಬೆಳಗ್ಗೆ ಮನೆ ಬಿಟ್ಟರು,  ಸುಮಾರು ನೂರೊಂದು ಪತ್ರೆಗಳನ್ನು ಸಂಗ್ರಹಿಸುತ್ತಿದ್ದೆವು ಈಗ ಅದೆಲ್ಲ ಎಲ್ಲಿ ಸಾದ್ಯ, ಕಾಡೆಲ್ಲ ಓಡಾಡಿ ಬರುವಾಗ ಕಾಲು ಕೈ ಎಲ್ಲ ತರಚಿ ಗಾಯವಾಗುತ್ತಿತ್ತು’  ಎಂದರು.

ಮತ್ತೆ ರಸ್ತೆಯ ತುದಿ ತಲುಪಿ ಬಲಕ್ಕೆ ತಿರುಗಬೇಕು, ಖಾಲಿ ಸೈಟಿನಲ್ಲಿ ದಾಳಿಂಬೆ ಬೆಳೆದು ನಿಂತಿತ್ತು, ಕಳೆದ ವರ್ಷವು ಅಲ್ಲಿಯೆ ಕಿತ್ತ ನೆನಪು,  ಕೆಂಪನೆಯ ಹೂವಿನ ಜೊತೆ ದಾಳಿಂಬೆ ಚಿಗುರು ನೋಡಲು ಮನೆ ಸೆಳೆಯುತ್ತಿತ್ತು . ಅದನ್ನು ಐದು ಐದು ಎಸೆಳು ಕೀಳುವಾಗಲೆ ದೂರದ ಯಾರದೊ ಮನೆಯಲ್ಲಿ ನಾಯಿ ಬೊಗಳುತ್ತಿತ್ತು. ಪಕ್ಕದಲ್ಲಿ ಕಣಿಗಲೆ ಇತ್ತು ಬೇಡ ಅದು ಎಲ್ಲ ಕಡೆಯು ಸಿಗುವುದೆ ಎನ್ನುತ್ತ ಮತ್ತೆ ರಸ್ತೆಗೆ ಬಂದೆವು.

ಮುಂದೆ ನಡೆದು ಬಲಕ್ಕೆ ತಿರುಗಿದಾಗ ರಾಜ ರಾಜೇಶ್ವರಿ ನಗರದ ಒಳಬಾಗದಲ್ಲಿದ್ದೆವು ಅನ್ನಿಸುತ್ತೆ, ರಸ್ತೆಯ ಪಕ್ಕದಲ್ಲಿ ಕಟ್ಟೆ ಕಟ್ಟಿ ಅರಳಿ ಮತ್ತು ಬನ್ನಿ ಗಿಡ ಹಾಕಿದ್ದರು

ರಾವ್ ಸ್ವಲ್ಪ ಎತ್ತರ ಹಾಗಾಗಿ ಅವರಿಗೆ ಬನ್ನಿ ಗಿಡದ ಎಲೆಗಳು ಸುಲುಭವಾಗಿ ಸಿಕ್ಕವು, ಮುಳ್ಳುಗಳು ತುಂಬಿದ, ಸಣ್ಣ ಸಣ್ಣ ಎಲೆಗಳುಮ್ ನಾನು ಕೀಳಲು ಹೋದೆ, ಕೈಗೆಲ್ಲ ತರಚಿತು .
“ತುಂಬಾ ಹುಷಾರಾಗಿ ಕೀಳಬೇಕು, ಕೈ ತರಚಿ ರಕ್ತ ಬರುತ್ತೆ, ಅದೇನೊ ಆನೆಗಳಿಗೆ ಈ ರೀತಿ ಮುಳ್ಳು ಇರುವ ಗಿಡಗಳೆಂದರೆ ಇಷ್ಟ ಅವನ್ನೆ ತಿನ್ನುತದೆ, ಒಂಟೆ ಗಳಿಗು ಅಷ್ಟೆ “ ಎಂದರು
“ಅದು ಹೇಗೆ, ಇಷ್ಟೊಂದು ಮುಳ್ಳುಗಳಿರುತ್ತವೆ,  ನಾಲಿಗೆ ಸೀಳಿ, ಬಾಯಿಯೆಲ್ಲ ತರಚಿ ಗಾಯ ಆಗಲ್ಲವೆ ಅವು ಹೇಗೆ ತಿನ್ನುತ್ತವೆ “ ಎಂದೆ
“ಅವು ಇಂತ ಎಲೆಗಳನ್ನೆಲ್ಲ, ಉಪಾಯವಾಗಿ ಅಗೆದುಬಿಡುತ್ತವೆ, ಅಲ್ಲದೆ ಪ್ರಾಣಿಗಳ ನಾಲಿಗೆ ಅಷ್ಟೆ ನಮ್ಮಂತೆ ಮೃದು ಅಲ್ಲ, ನೀವೆಂದಾದರು ಹಸುವಿನಿಂದ ನೆಕ್ಕಿಸಿಕೊಂಡಿದ್ದೀರ, ಅಥವ ಅದರ ನಾಲಿಗೆ ನೋಡಿದ್ದೀರ” ಎಂದರು
“ಇಲ್ಲ ಅನ್ನಿಸುತ್ತೆ” ಎಂದೆ
“ಸಾಮಾನ್ಯ ಹಸುವಿನ ನಾಲಿಗೆ ಮುಳ್ಳು ಮುಳ್ಳಾಗಿರುತ್ತದೆ, ನಮ್ಮ ಮುಖ ನೆಕ್ಕಿದರೆ , ಮುಖ ತರಚಿದಂತೆ ಅನಿಸುತ್ತದೆ, ಕೆಲವೊಮ್ಮೆ ನಮ್ಮ ತಲೆ ಕೂದಲನ್ನೆಲ್ಲ ನೆಕ್ಕುತ್ತದೆ, ಸ್ವಲ್ಪ ಉಪ್ಪು ಬೆವರು ಎಲ್ಲ ಅದಕ್ಕೆ ರುಚಿ ಸಿಕ್ಕಂತೆ ಅನಿಸುತ್ತದೆ ‘

ಸಾಕಷ್ಟು, ಬನ್ನಿ ಎಲೆಗಳನ್ನು ನಿದಾನವಾಗಿ ಕೈ ತರಚದಂತೆ ಕವರಿನಲ್ಲಿ ಇಟ್ಟೆ. ಮುಂದೆ ಐಡಿಯಲ್ ಹೋಮ್ ಕಾಲೋನಿಯೊ ಅಲ್ಲಿ ಬರಿ ಸಿನಿಮಾ ಕಿರುತೆರೆ ನಟರ ಮನೆಗಳು ಜಾಸ್ತಿ.

ಕಿರುತೆರೆ ನಟಿ ಮಾಳವೀಕ ಅವರ ಮನೆ ರಸ್ತೆಯಲ್ಲಿ ಹೋಗುವಾಗ , ಸಾಕಷ್ಟು ಕಣಿಗಲೆ ಗಿಡಗಳಿದ್ದವು, ಕೆಂಪು, ಬಿಳಿ ಬೇರೆ ಬೇರೆ ಬಣ್ಣದಲ್ಲಿ
“ಬಿಡಿಸಿ ಇವು ಕರವೀರ ಪತ್ರ ‘ ಎಂದರು,
“ಕರವೀರ ಪತ್ರವೆ, ಇದು ಕಣಿಗಲೆ ಅಲ್ಲವೆ ?” ಎಂದೆ
“ಎರಡು ಒಂದೆ, ಕಣಗಲೆ ಕರವೀರ ಎಲ್ಲವು ಒಂದೆ ಜಾತಿಯ ಗಿಡವೆ “ ಎನ್ನುತ್ತ ಕೀಳುತ್ತಿರುವಂತೆ
ಎದುರಿಗೆ , ಜೊಂಪೆ ಜೊಂಪೆಯಾಗಿ ಕೆಂಪು ಬಣ್ಣದ ಹೂಗಳು ನೇತು ಬಿದ್ದಿದ್ದ ಮರವಿತ್ತು
“ಈ ಮರದ ಪತ್ರೆ  ಕೀಳಬಹುದೆ “ ಎಂದೆ
“ಇದು ಯಾವುದೊ ಭಾರತದ ಮೂಲದ ಸಸ್ಯವಿದ್ದಂತಿಲ್ಲ,  ಬಾಟಲ್ ಬ್ರಷ್ ಎಂದೊ ಏನೊ ಕರೆಯುತ್ತಾರೆ ಅನ್ನಿಸುತ್ತೆ ಸರಿಯಾಗಿ ತಿಳಿದಿಲ್ಲ, ನಿಮಗೆ ಬೇಕಿದ್ದರೆ ಯಾವ ಪತ್ರೆಯನ್ನು ಪೂಜಿಸಬಹುದು “ ಎಂದರು
ನಾನು ಸುಮ್ಮನಿದ್ದೆ, “ಬನ್ನಿ ರಸ್ತೆಯ ತುದಿಯಲ್ಲಿ ‘ಜಂಬೂ ವೃಕ್ಷವಿದೆ’ ಕಳೆದ ಸಾರಿ ಕಿತ್ತಿದ್ದೆವಲ್ಲ
“  ಜಂಬೂ ವೃಕ್ಷವೆ ” ಅದೆಂತ ಗಿಡ ನನಗೆ ಆಶ್ಚರ್ಯ
“ತಿಳಿಯಲಿಲ್ಲವೆ,   ನೇರಳೆ ಹಣ್ಣಿನ ಗಿಡ” ಎನ್ನುತ್ತ ನಕ್ಕರು
ಅಲ್ಲಿ ತಲುಪುವ ಮೊದಲೆ ರಸ್ತೆಯ ಪಕ್ಕ ದೊಡ್ಡದೊಂದು ಸಂಪಿಗೆ ಗಿಡವಿತ್ತು
‘ಓಹೋ ಸಂಪಿಗೆ ..’ ಎನ್ನುತ್ತ ಸಾಕಷ್ಟು ಎಲೆ ಕಿತ್ತೆವು.

ನಂತರ ನೇರಳೆ ಹಣ್ಣಿನ ಮರದ ಎಲೆಗಳನ್ನು ಕಿತ್ತೆವು, ಇದು ಹಣ್ಣು ಬಿಡುವ ಕಾಲವಲ್ಲವೆ ಅದೇಕೊ ಇರಲಿಲ್ಲ. ನೆನಪಿಗೆ ಬಂದಿತು, ನಮ್ಮ ಆಫೀಸಿನ ಮುಂದೆಯೆ ಒಂದು ದೊಡ್ಡ ನೆರಳೆ ಮರವಿದೆ, ಸಾಕಷ್ಟು ಹಣ್ಣು ಉದರುತ್ತದೆ.

‘ಎಲ್ಲ ಆಗುತ್ತ ಬಂದಿತು, ಶ್ರೀಗಂದದ ಎಲೆಗಳು, ಪಾರಿಜಾತ, ಮತ್ತೆ ತುಳಸಿ ಹಾಕಿದರೆ ಎಲ್ಲ ಆದಂತೆ” ಎಂದರು
“ಬಿಡಿ ನಮ್ಮ ಆಫೀಸಿನ  ಆವರಣದಲ್ಲಿಯೆ ಎರಡು ಶ್ರೀಗಂದದ ಗಿಡವಿದೆ, ಅದರ ಎಲೆ ಸಿಗುತ್ತೆ, ಮತ್ತೆ ಪಾರಿಜಾತ ಮತ್ತು ತುಳಸಿ ನಮ್ಮ ಮನೆಯಲ್ಲಿಯೆ ಇದೆ’ ಎಂದೆ ತೃಪ್ತಿಯಿಂದ.

ಆಗಲೆ ಬಾಳೆಲೆ ನರಸಿಂಹನ ಗುಡಿಯ ಹತ್ತಿರ ಬರುತ್ತಿದ್ದೆವು
“ಮಂತ್ರದಲ್ಲಿ ಹೇಳುವ ಎಲ್ಲ ಪತ್ರಗಳನ್ನು ಹುಡುಕುವುದು ಕಷ್ಟ, ಆದರೆ, ಗುರುತಿಸಿದರೆ, ಸಾಕಷ್ಟು ಸಿಗುತ್ತವೆ, ಇಲ್ಲಿ ಹಿಂಬಾಗದ ರಸ್ತೆಯಲ್ಲಿ , ಒಂದು ನಿಂಬೆ ಗಿಡವಿತ್ತಲ್ಲವೆ’ ಎಂದರು
ನನಗೆ ನೆನಪಿಗೆ ಬಂದಿತು, ಅಲ್ಲಿ  ಮನೆಯೊಂದನ್ನು ಕೆಡವಿದ್ದರು, ಅದರ ಮುಂಬಾಗದಲ್ಲಿ ನಿಂಬೆ ಗಿಡವಿತ್ತು, ಇದಲ್ಲ ಪಕ್ಕದ ರಸ್ತೆ ಬನ್ನಿ “ ಎನ್ನುತ್ತ ಇಬ್ಬರು ನಡೆದೆವು, ಅಲ್ಲಿ ಗಿಡ ಕಾಣಲಿಲ್ಲ. ನೋಡುವಾಗ ತಿಳಿಯಿತು, ದೊಡ್ಡದಾದ ನಿಂಬೆ ಗಿಡವನ್ನು ಯಾರೊ ಬುಡಕ್ಕೆ ಕತ್ತರಿಸಿ ಎಸೆದಿದ್ದರು. ಅಲ್ಲಿ ಗಿಡವಿದ್ದ ಗುರುತು ಇರಲಿಲ್ಲ.
“ಹೋಗಲಿ ಬಿಡಿ ಗಿಡವನ್ನೆ ಯಾರೊ ಕತ್ತರಿಸಿದ್ದಾರೆ, ನೋಡಿ ಮನುಷ್ಯರಾದ ನಾವೆ ಹೀಗೆ ಒಂದು ವರ್ಷದ ಹಿಂದಿನ ಘಟನೆ ನೆನಪಿಸಿಕೊಂಡು, ಗಿಡ ಹುಡುಕುತ್ತ ಬಂದೆವು ಹಾಗಿರುವಾಗ ಕಾಡಿನಲ್ಲಿ ಪ್ರಾಣಿಗಳು ಒಂದು ಕಡೆಯಿಂದೆ ಮತ್ತೊಂದು ಕಡೆಗೆ ಗಿಡಗಳನ್ನು ನೀರಿನ ತಾಣಾವನ್ನು ಹುಡುಕುತ್ತ ಸಂಚರಿಸುವದರಲ್ಲಿ ಆಶ್ಚರ್ಯವಿಲ್ಲ  ಅಲ್ಲವೆ” ಎಂದೆ

ನಂತರ ಕಾಡಿನ ಪ್ರಾಣಿಗಳ ಬಗ್ಗೆ,  ಸಾವಿರಾರು ಮೈಲಿ ವಲಸೆ ಹೋಗುವ ಪಕ್ಷಿಗಳ ಬಗ್ಗೆ,  ಎಷ್ಟೆ ದಾರಿ ತಪ್ಪಿಸಿದರು ಮತ್ತೆ ಮನೆಗೆ ಬರುವ ನಾಯಿ ಬಗ್ಗೆ,  ಸಂಜೆ ಮೇವು ಮುಗಿಸಿ ನೇರ ತನ್ನ ಮನೆಗೆ ವಾಪಸಾಗುವ ದನ ಕರುಗಳ ನೆನಪಿನ ಬಗ್ಗೆ ಮಾತುಗಳು ಬಂದವು.

ಹಾಗೆ ರಸ್ತೆ ಪಕ್ಕದಲ್ಲಿ ಪಾರಿಜಾತ ಗಿಡ ಬೆಳೆದಿತ್ತು, ಅವರು ನಾಲ್ಕಾರು ಎಲೆ ಕಿತ್ತರು, ನಾನು ಕೀಳಲಿಲ್ಲ, ಹೇಗು ನಮ್ಮ ಮನೆಯಲ್ಲಿದೆಯಲ್ಲ ಎನ್ನುತ್ತ

ನರಸಿಂಹ ಗುಡ್ಡ ದ ಪಕ್ಕ ಕೆಳಗೆ ಇಳಿಯುತ್ತ, ಒಂದು ಮನೆ ಮುಂದೆ ದಾಳಿಂಬೆ ಹಾಗು ಸೀಬೆ ಗಿಡ ಕಾಣಿಸಿತು, ಮನೆ ಮುಂದೆ ಅವರ ಮನೆಯವರು ನಿಂತಿದ್ದರು, ನಾನು ಏನು ಕೇಳದೆ, ಗಿಡ ತೋರಿಸಿದೆ ಎಲೆ ಕೀಳುತ್ತೇವೆ ಎಂಬ ಭಾವದಲ್ಲಿ , ಆಕೆ ನಗುತ್ತ ಆಗಲಿ ಎಂದೆ ತಲೆ ಆಡಿಸಿದರು
“ಎಳೆಯ ದಾಳಿಂಬೆ ಎಲೆಗಳು, ಹಾಗು ಸೀಬೆ ಗಿಡದ ಎಲೆಗಳು” ನಾಲ್ಕಾರು ಕಿತ್ತೆವು

ಮುಂದೆ ನಡೆದಂತೆ, ರಾವ್ ರಸ್ತೆಯ ಎರಡು ಪಕ್ಕ ಏನನ್ನೊ ಹುಡುಕುತ್ತಿದ್ದರು,

“ದತ್ತೂರಿ ಗಿಡವೊಂದು ಕಾಣಲಿಲ್ಲ ನೋಡಿ” ಎಂದರು, ನನಗೆ ಆ ಗಿಡ ನೆನಪಿದೆ, ಮುಳ್ಳು ಮುಳ್ಳಿನಂತೆ ಎಲೆ, ಅಚ್ಚ ಹಳದಿ ಬಣ್ಣದ ಹೂಗಳಿರುವ ಗಿಡ ಬರಿ ನೊರಜುಗಲ್ಲಿನಂತೆ ನೆಲದಲ್ಲಿ ಜಾಸ್ತಿ ಕಾಣುತ್ತವೆ, ನೈಸ್ ರಸ್ತೆ ಆಗುವ ಮೊದಲು ಅಲ್ಲಿ ಸಾಕಷ್ಟು ಇತ್ತು, ಆದರೆ ಈಗ ಅಲ್ಲಿ ನಾವು ಒಳ ಹೋಗುವ ಹಾಗೆ ಇಲ್ಲ ,ರಸ್ತೆಯ ಉದ್ದಕ್ಕು ಜನ ಪ್ರವೇಶಿಸದಂತೆ ಆಗಿದೆ.
ನಾನು ಎರಡು ಬದಿ ನೋಡುತ್ತ ಇದ್ದೆ,

ರಾವ್ “ ನೋಡಿ, ಅದು ತಂಪಾದ ಫಲವತ್ತಾದ ನೆಲದಲ್ಲಿ ಕಾಣಿಸುವದಿಲ್ಲ, ಒಣನೆಲದಲ್ಲಿ ಇರುತ್ತದೆ “ ಎಂದರು .ಅದೇನೊ ಕಳೆದ ಸಾರಿ ಸಿಕ್ಕಿದ್ದ ದತ್ತೂರದ ಎಲೆ ಈ ಬಾರಿ ಕಾಣಿಸಲೆ ಎಲ್ಲ.  
‘ಇದು ನೋಡಿ ಯಾವ ಗಿಡ ಗೊತ್ತ?” ಎಂದರು ನಗುತ್ತ
ನೋಡಿದರೆ ದಾಸವಾಳ, ಗೊತ್ತಾಯಿತು ನನ್ನನ್ನು ರೇಗಿಸುತ್ತಿದ್ದಾರೆ
“ದಾಸವಾಳ ಅದು ಗೊತ್ತಿಲ್ಲವೆ ‘ ಅಂದೆ ನಗುತ್ತ

ನೋಡಿ “ಕಾರೆ ಹಣ್ಣಿನ ಗಿಡ” ಇದರ ಎಲೆ ಕೀಳಬಹುದು ಎಂದರು,
ನಾನು “ಕಾರೆ ಹಣ್ಣು ಕಪ್ಪು ಬಣ್ಣದಲ್ಲವೆ” ಎಂದೆ
“ನೀವು ಮತ್ತೇನೊ ಹೇಳುತ್ತಿರುವಿರಿ ಕಾರೆ ಹಣ್ಣು ಪ್ರಾರಂಬಕ್ಕೆ ಹಸಿರು ವರ್ಣವಿದ್ದು, ನಂತರ ಕಂದು ತಿರುಗುತ್ತದೆ, ದ್ರಾಕ್ಷಿಯಂತೆ ಕಾಣುವ ಅದರ ಒಳ ಬೀಜ ಮಾತ್ರ ದೊಡ್ಡದು, ಚಿಕ್ಕ ಪ್ರಾಯದಲ್ಲಿ ಎಲ್ಲರು ತಿನ್ನುತ್ತಾರೆ” ಎಂದರು
ನನಗೆ ಕಾರೆ ಹಣ್ಣಿಗು, ಎಲಚಿ ಹಣ್ಣಿಗು ಎಂತದೊ ಕನ್ ಫ್ಯೂಷನ್ ಇತ್ತು, ಹಾಗಾಗಿ ಸುಮ್ಮನಾದೆ

ಅಷ್ಟರಲ್ಲಿ ನೈಸ್ ರಸ್ತೆಯ ಸೇತುವೆಯ ಕೆಳಬಾಗಕ್ಕೆ ಬಂದೆವು
“ಸಿಕ್ಕಿತು ನೋಡಿ, ಇದು ಅತ್ತಿಯ ಎಲೆ, ಕೀಳಿ” ಎನ್ನುತ್ತ ರಸ್ತೆಯ ಪಕ್ಕದ ಗಿಡ ತೋರಿದರು
“ಅತ್ತಿಯ ಎಲೆಯೆ ಹೇಗೆ ಅದು ದೊಡ್ಡ ಮರವಲ್ಲವೆ ಇದು ಗಿಡ” ಎಂದೆ
“ಬೆಳೆಯಲು ಸಿಕ್ಕಿದರೆ ಇದೆ ದೊಡ್ಡ ಮರವಾಗುತ್ತೆ,  ಅತ್ತಿ ಮರವೆಂದರೆ ಚಿಕ್ಕ ಚಿಕ್ಕ ಕೆಂಪು ಕಾಯಿಗಳು, ದತ್ತಾತ್ರೇಯರು ಅದರಲ್ಲಿ ನೆಲಸುತ್ತಾರೆ ಎಂದು ಹೇಳುತ್ತಾರೆ “ ಎಂದರು
ಅದೇನೊ ನಮ್ಮ ಸಂಸ್ಕೃತಿ, ದೇವರು, ಎಲ್ಲವು ಪ್ರಕೃತಿಯೊಂದಿಗೆ ಹೊಂದಿಕೊಂಡೆ ಇದೆ ಅನಿಸಿತು.

ನಾನು ಅಂದೆ “ನಿಮಗಾದರೆ ಸಾಕಷ್ಟು ಗಿಡಮರಗಳ  ಪರಿಚಯವಿದೆ”
ಅವರು ನಗುತ್ತ “ಹೌದಾ ನಮ್ಮದೆಲ್ಲ ಎಂತ ಜ್ಞಾನ ನೋಡಿ, ಮನೆಯಲ್ಲಿ ಮಗ ಫೇಸ್ ಬುಕನಲ್ಲಿ ಒಂದು ಸಾಲು ತೋರಿಸಿದ
“we respect elders because they have graduated without google ‘ ‘
ಎನ್ನುತ್ತ ಮತ್ತೆ ನಕ್ಕರು

ತಡವಾಗಿ ಹೊರಟಕಾರಣ ಸೆಕೆ ಅನ್ನಿಸುತ್ತಿತ್ತು, ಆಗೆಲೆ ಬಿಸಿಲಿನ ಝಳ ತಾಕುತ್ತಿತ್ತು, ಅವರಿಗಂತು ಮುಖವೆಲ್ಲ ಬೆವರು. ಮತ್ತೆ ಪುಷ್ಪಗಿರಿ ನಗರದ ಒಳಗೆ ಬಂದೆವು, ಅಲ್ಲಿಂದ ರಸ್ತೆದಾಟಿ, ಮುಖ್ಯ ರಸ್ತೆ ತಲುಪುವಂತೆ, ನಮ್ಮ ಮನೆಯ ರಸ್ತೆ ಬಂದಿತು.

ನಮ್ಮ ಮನೆ ಮುಂದಿದ್ದ, ನಂಜಬಟ್ಟಲ ಗಿಡದಿಂದ ಸ್ವಲ್ಪ ಹೂ ಹಾಗು ಎಲೆ ಸಂಗ್ರಹಿಸಿದರು. ಬಾನುವಾರದ ವಾಕಿಂಗ್ ಮುಗಿದಿತ್ತು,

ರಾವ್  ‘ಮೈಯೆಲ್ಲ ಬೆವರುತ್ತಿದೆ, ಈಗ ಒಳಗೆ ಬರಲ್ಲ ಮತ್ತೆ ನಿಧಾನವಾಗಿ ಆಮೇಲೆ ಬರ್ತೇನೆ ‘ಎನ್ನುತ್ತಾ ಹೊರಟು ಹೋದರು .

ನಾನೆ ಏನೋ ದಿಗ್ವಿಜಯ ಸಾದಿಸಿದಂತೆ,  ಒಳಗೆ ಬಂದು  ಪತ್ರೆಗಳ ಕವರ್ ಕೊಟ್ಟು ನನ್ನವಳಿಗೆ ಕೇಳಿದೆ
“ಒಂದು ಲೋಟ ಕಾಫಿ ಮಾಡಿ ತಾ, ಪೇಪರ್ ಓದುತ್ತ ಇರುತ್ತೇನೆ”





Rating
No votes yet

Comments

Submitted by partha1059 Fri, 09/21/2012 - 20:49

In reply to by lpitnal@gmail.com

ಲಕ್ಷ್ಮಿ ಕಾಂತರೆ ನಿಮ್ಮ ಪ್ರತಿಕ್ರಿಯೆಗೆ ವಂದನೆಗಳು, ಸಾಕಷ್ಟು ಎಲೆಗಳ ಸಂಗ್ರಹವಾಗಿತ್ತು, ಅದನ್ನು ಪೂಜಿಸಿ ನಂತರ ವಿಸರ್ಜಿಸಿದ್ದು ಆಯಿತಲ್ಲ, ಉತ್ತರಿಸಲು ತಡವಾಯಿತು ಕ್ಷಮೆ ಇರಲಿ

Submitted by ಗಣೇಶ Sun, 09/23/2012 - 00:27

ಸಪೋಟ ಗರಿಕೆ ಉತ್ತರಾಣಿ ಎಕ್ಕ ಮಾವಿನ ಮುತ್ತಗದ ಗಿಡ ತುಂಬೆ ಉತ್ತರಾಣಿ ಬೇಲದ ಗಿಡ ತಂಗಡಿ ಚಿಕ್ಕ ಗಿಡ ಬಿದಿರಿನ ಎಲೆಗಳನ್ನು ದಾಳಿಂಬೆ ಕಣಿಗಲೆ (ಕರವೀರ) ಅರಳಿ ಬನ್ನಿ ನೇರ‍ಳೆ ಸಂಪಿಗೆ ಶ್ರೀಗಂಧ, ಪಾರಿಜಾತ ತುಳಸಿ ನಿಂಬೆ ಸೀಬೆ ಕಾರೆಹಣ್ಣು ಅತ್ತಿ ನಂಜಬಟ್ಟಲ ಗಿಡ....ಅಬ್ಬಾ..ನಮ್ಮ ಪಾರ್ಥರು ...ಮುಟ್ಟದ ಸೊಪ್ಪಿಲ್ಲ ಎಂದು ಹೊಸ ಗಾದೆ.:) ಪಾರ್ಥಸಾರಥಿಯವರ ಮನೆ ಅಕ್ಕಪಕ್ಕದ ಮಕ್ಕಳಿಗೆ ಒಂದು ಮಾತು- ವಾರದಲ್ಲಿ ಒಂದು ದಿನವಾದರೂ ಬೇಗ ಎದ್ದು ಪಾರ್ಥರೊಂದಿಗೆ ವಾಕಿಂಗ್ ಹೋಗಿ ಒಂದೆರಡಾದರೂ ಗಿಡದ ಬಗ್ಗೆ ತಿಳಕೊಳ್ಳಿ.

Submitted by venkatb83 Sun, 09/23/2012 - 16:58

ಗುರುಗಳೇ, ಈ ಬರಹವನ್ನು ನಾ ಅದಾಗಲೇ ಓದಿದ್ದರೂ ಸಂಪದ ನಿರ್ವಹಣೆ ಮತ್ತು ಹೊಸ ರೀತಿಯ ಸಂಪದ ಗಲಿಬಿಲಿ ಕಾರಣ ಪ್ರತಿಕ್ರಿಸ್ಯಿಸಲು ತಡ ಆಯ್ತು.. ಬಹುಪಾಲು ಸಸ್ಯಗಳ ಪಟ್ಟಿ ಮಾಡಿ ಒಳ್ಳೆ ವಾಕಿಂಗ್ ಬರಹ ಬರೆದಿರುವಿರಿ...!!

ನಾವೂ ನಿಮ್ಮೊಡನೆ ಸುತ್ತಾಡಿದ ಹಾಗೆ ಅವುಗಳನ್ನು ಸ್ಪರ್ಶಿಸಿದ ಹಾಗೆ ಅನ್ನಿಸಿದ್ದು ನಿಜ....
ನೀವು ಹೆಸರಿದ ಕೆಲವು ಸಸ್ಯಗಳು ನಮ ಹಳ್ಳಿಯಲ್ಲಿ ಚಿರ ಪರಿಚಿತ ಇನ್ನು ಕೆಲವು ಅಪರಿಚಿತ...!!!
ಬಹುಶ ನೀವು ಚಿತ್ರಗಳನ್ನು ಸಹಾ ಸೇರಿಸುವವರಿದ್ದಿರೆನೋ??? ಸಂಪದ ನಿರ್ವಹಣೆ ಪ್ರಯುಕ್ತ ಸಾಧ್ಯವಾಗಿಲ್ಲ ಅಂದುಕೊಳ್ಳುವೆ..!!

ಸಾಧ್ಯವಾದರೆ ಮುಂದೊಮ್ಮೆ ಸೇರಿಸಿ...

ಶುಭವಾಗಲಿ
ಶುಭ ಸಂಡೆ

ನನ್ನಿ

\|