ಪದಕಟ್ಟಣೆಯ‌ ಅವಾಂತರಗಳು

ಪದಕಟ್ಟಣೆಯ‌ ಅವಾಂತರಗಳು

ಈಚೆಗೆ ಎಷ್ಟೋ ಕನ್ನಡಿಗರಲ್ಲಿ ಹೊಸ ಹೊಸ ಪದಗಳನ್ನು ಕಟ್ಟುವ ಹುಮ್ಮಸ್ಸು ಬಂದಿದೆ. ಒಳ್ಳೆಯ ವಿಷಯವೇ. ಮೆಚ್ಚಬೇಕಾದದ್ದೇ. ಆದರೆ, ಯಾವುದೇ ಇಂತಹ ಕೆಲಸದಲ್ಲೂ ಇರಬೇಕಾದ ವ್ಯವಧಾನ ಇಲ್ಲದೇ ಹೋದರೆ ಏನಾಗುತ್ತೆ ಅಂತ ಹೇಳಬೇಕಾಗಿಯೇ ಇಲ್ಲ. ಗಣೇಶನನ್ನ ಮಾಡಲು ಹೋಗಿ ಅವರಪ್ಪನ್ನ ಮಾಡಿದರು ಅಂತ ಗಾದೆಯೇ ಇಲ್ಲವೇ! ವೇದ ಸುಳ್ಳಾದರೂ ಗಾದೆ ಸುಳ್ಳಾಗೋಲ್ಲ ಬಿಡಿ. ಹತ್ತು ಕಟ್ಟೋಕೆ ಬದಲು ಒಂದು ಮುತ್ತು ಕಟ್ಟು ಅಂತ ಅದಕ್ಕೇನೆ ಗಾದೆ ಹೇಳೋದು. ಅಂದರೆ, ಈ ಪದ ಕಟ್ಟಣೆ , ನಿಧಾನವಾಗಿ, ಜೀವಂತವಾಗಿ, ಹುಟ್ಟಿ ಬಂದು ಬೆಳೆದರೆ, ಅದು ಸೊಗಸು. ಇಲ್ಲದೆ ಹೋದರೆ, ಯಾವುದೋ ಮೈಯಿಗೆ ಯಾವುದೋ ತಲೆ ಅಂಟಿಸಿದಂತೆ, ಅಥವಾ ಅವಳ ಬಟ್ಟೆ ಇವಳಿಗಿಟ್ಟು ಅಂತಲೋ ಏನೋ ಬಿ ಎಂ ಶ್ರೀ ಅವರು ಹೇಳಿದ್ದಾರಲ್ಲ, ಹಾಗಾಗುತ್ತೆ. ಆ ಕಾರಣದಿಂದಲೇ ಇಂಗ್ಲಿಷ್ ನಲ್ಲಿರುವ ಪ್ರತೀ ಪದಕ್ಕೂ ಒಂದು ಕನ್ನಡ ಪದ (ಹಾಗೂ ಒಂದೇ ಕನ್ನಡ ಪದ) ಇರಬೇಕು ಅಂತ ಭಾವಿಸಿ ಹಾಗೆ ಮಾಡ್ತಾ ಹೋದರೆ ಹುಚ್ಚು ಕೆಲಸವಾಗುತ್ತೆ! ನಮ್ಮ ಕನ್ನಡ ಟಿವಿ ವಾಹಿನಿಗಳಲ್ಲಿ ಬರುವ ಜಾಹೀರಾತುಗಳನ್ನು ನೋಡಿದ್ದವರಿಗೆ ಈ ಮಾತು ಕೂಡಲೇ ಅರ್ಥವಾಗುತ್ತೆ!

 
ಹೀಗೆ ಒಂದು ಪದ ಕಟ್ಟುವ  ಗುಂಪೊಂದರಲ್ಲಿ , ಚರ್ಚೆಗೆ ಬಂದ ಪದ  constellation. ಆಕಾಶದಲ್ಲಿ ನಕ್ಷತ್ರಗಳನ್ನು ಸೇರಿಸಿಕೊಂಡು ಅದರಲ್ಲಿ ಮಾಡಿಕೊಂಡ ಕಾಲ್ಪನಿಕ ಚಿತ್ರಗಳಿಗೆ constellation ಎಂಬ ಹೆಸರು.  ಸಾವಿರಾರು ವರ್ಷದ ಹಿಂದೆ ರಾತ್ರಿಯಾಗಸದಲ್ಲಿ ನಕ್ಷತ್ರಗಳನ್ನು ಕೂಡಿಸಿ, ಅಲ್ಲಿ ಬಗೆ ಬಗೆಯ ಪ್ರಾಣಿ ಪಕ್ಷಿಗಳನ್ನು ಕಂಡ ಸಂಸ್ಕೃತಿಗಳು ಹಲವು. ಅವುಗಳಲ್ಲೇ ಬಹುಪಾಲು ಹೆಸರುಗಳು ಇಂದೂ ಉಳಿದು ಬಂದಿವೆ. ಜೊತೆಗೆ ಈಚೆಗೆ ಕೆಲವು ಶತಮಾನಗಳಿಂದ, ಆಕಾಶದ  constellation ಗಳಿಗೂ ಭೂಮಿಯ ಮೇಲಿನ  ದೇಶಗಳಿಗಿರುವಂತೆ ಗಡಿಗಳಿದ್ದು,  ಆಕಾಶದ ಪ್ರತಿ ಭಾಗವು ಒಂದಲ್ಲ ಒಂದು  constellation ಗಳಿಗೆ ಸೇರಿರುತ್ತದೆ. ಅಂದರೆ, ನಮಗೆ ಕಾಣುವ ಆಕಾಶವನ್ನು ೮೮ constellation ಗೆ ಹಂಚಲಾಗಿದೆ.
 
ಈ  constellation ಎಂಬ  ಪದಕ್ಕೆ 'ಹೊಸದಾಗಿ' ಕನ್ನಡ ಪದ ಕಟ್ಟಲೇ ಬೇಕೆಂಬ ಆಸೆಯಿಂದ , ಉತ್ಸಾಹದಿಂದ ಕೆಲವರು ಅಚ್ಚ ಕನ್ನಡದವೇ ಆಗಬೇಕೆಂದು ಸಲಹೆ ಮಾಡಿದ  ಚುಕ್ಕಿ ಗೊಂಚಲು, ಅರಿಲ್ಕೂಟ , ಚುಕ್ಕೆಕೂಟ, ಮೊದಲಾದ ಪದಗಳನ್ನು ನೋಡಿದಾಗ ಮಾತ್ರ, ನನಗೆ  ತಲೆ ಗಿರ್ರೆಂದಿದ್ದು ಸುಳ್ಳಲ್ಲ! 
 
ಚುಕ್ಕೆ  ಚುಕ್ಕಿ ಅಂತ ನಕ್ಷತ್ರಕ್ಕೆ ಹೆಸರಿರೋದೇನೋ ನಿಜ, ಆದರೆ ಗ್ರಹಗಳಿಗೂ ಆ ಹೆಸರಿದೆ. ಶುಕ್ರ ಗ್ರಹವನ್ನ ಬೆಳ್ಳಿ ಚುಕ್ಕಿ ಅಂತಲೂ, ಸಂಜೆ ಚುಕ್ಕಿ ಅಂತಲೂ ಕರೆಯೋದನ್ನ ಕೇಳಿರಬಹುದು ನೀವು. ಇನ್ನು ಪದ ಕಟ್ಟುವ ಮೊದಲು,  ರಾತ್ರಿ ಆಕಾಶದಲ್ಲಿ ತಲೆ ಎತ್ತಿ ಒಮ್ಮೆ ನೋಡಿ ಕಾನ್ಸ್ಟೆಲೇಶನ್ ಅಂದರೆ ಹೇಗಿರುತ್ತೆ , ಏನಿರುತ್ತೆ ಅಂತ ನೋಡಿದ್ದರೆ, ಚುಕ್ಕೆ ಗೊಂಚಲು ಅನ್ನೋ ರೀತಿ ಪದವನ್ನ ಕಟ್ಟುತ್ತಾ ಇರಲಿಲ್ಲ. ಏಕೆಂದರೆ constellation ಒಂದರಲ್ಲಿ ನಕ್ಷತ್ರಗಳು ಗೊಂಚಲು ಗೊಂಚಲಾಗಿಯೇ ಇರಬೇಕು ಅಂತಲ್ಲ. ಬಹುಪಾಲು constellation ಗಳಲ್ಲಿ ಹಾಗಿಲ್ಲ. ನೋಡಿದರೆ, star clusters ಗೆ ಚುಕ್ಕಿ ಗೊಂಚಲು ಅಂದರೂ ತಪ್ಪಿಲ್ಲ. ಹಾಗಾಗಿ ಕೃತ್ತಿಕಾ (ಪ್ಲೀಯಡಿಸ್) ಗೆ ಬೇಕಿದ್ದರೆ ಚುಕ್ಕಿ ಗೊಂಚಲೆನ್ನಿ, ಒಳ್ಳೇದೆ. ಇನ್ನು ಯಾವುದಕ್ಕೂ ಹೊಂದೋದಿಲ್ಲ. ಆದರೆ ಕೃತ್ತಿಕಾ ಅನ್ನುವುದು ಒಂದು constellation ಅಲ್ಲ, ಆದರೆ Taurus ಎಂಬ constellation ನ ಭಾಗ ಅನ್ನೋದನ್ನೂ ಹೇಳಿಬಿಡ್ತೀನಿ.
 
ಇನ್ನು ಅರಿಲ್ಕೂಟ , ಚಿಕ್ಕೆಕೂಟ ಅನ್ನೋ ಪದಗಳಿಗೆ ಬರೋಣ . ಈ ಪದಗಳು ಕಾನ್ಸ್ಟೆಲೇಶನ್ ಎಂಬುದರ ಅರ್ಥಕ್ಕೆ ಹೊಂದುವುದಿಲ್ಲವೆಂದು  ನೇರವಾಗಿ ಪಕ್ಕಕ್ಕಿಡಬೇಕಾಗುತ್ತೆ.  ಇಲ್ಲಿ ಯಾವ ಚುಕ್ಕೆಗಳೂ ಅರಿಲುಗಳೂ ಒಂದನ್ನೊಂದು ಕೂಡೋದಿಲ್ಲ - ಕೂಟ ಅಂದರೆ congregation ಅನ್ನೋ ಅರ್ಥವಿರುವುದರಿಂದ ಈಗಾಗಲೇ ಇದನ್ನ ಈಗಾಗಲೇ ಎರಡು/ಮೂರು ಆಕಾಶಕಾಯಗಳು ಹತ್ತಿರ ಬರುವ ಸಮಯದಲ್ಲಿ ಈ ಪಾರಿಭಾಷಿಕ ಪದವನ್ನು ಈಗಾಗಲೇ ಬಳಸುತ್ತಿದ್ದೇವೆ. ಶನಿ-ಶುಕ್ರ ಗ್ರಹಕೂಟ, ಅಥವಾ ಯಾವುದಾದರೂ ನಕ್ಷತ್ರದೊಡನೆ ಒಂದೋ ಎರಡೋ ಗ್ರಹಗಳು ಹತ್ತಿರ ಕಂಡು ಆಗುವಂತಹ ಕೂಟಗಳಿಗೆ ಇದು ಒಳ್ಳೆಯ ಪದವೇ. ಆದರೆ constellationಗೆ ಅಲ್ಲ. ಯಾಕಂದರೆ, ಎರಡು ಚುಕ್ಕೆಗಳು (ನಕ್ಷತ್ರಗಳು) ಒಂದನ್ನೊಂದನ್ನು ಹಾಗೆ ಕೂಡೋದಿಲ್ಲ! ನಮ್ಮ ಇಡೀ ಆಯಸ್ಸು ಕಳೆದರೂ ನಕ್ಷತ್ರಗಳ ಚಲನೆಯನ್ನ (ಅವು ಬಹಳ ದೂರವಿರುವುದರಿಂದ) ನಮ್ಮ ಬರಿಗಣ್ಣಿಂದ ಗುರುತಿಸಲಾಗದು. ಒಂದು ಕಾನ್ಸಟೆಲೇಶನ್ ಒಳಗೆ ಎರಡು ನಕ್ಷತ್ರಗಳು ಒಂದಕ್ಕೊಂದು ಕೂಡಿರೋ ತರಹ ಏನೂ ಕಾಣೊಲ್ಲ!
 
ಜೊತೆಗೆ ಈಗ ಹೆಚ್ಚು ಜನ ಬಳಕೆಯಲ್ಲಿ ಇರುವ ನಕ್ಷತ್ರ ಎಂಬ ಪದ ಬೇಡ, ಅದು ಕನ್ನಡವಲ್ಲ, ಅದರ ಬದಲು ಅಚ್ಚ ಕನ್ನಡದ ಆರಿಲ್ ಅನ್ನುವ ಪದವನ್ನು ಮುಂದಕ್ಕೆ ತರೋಣ ಅನ್ನುವ ವಾದವು ಕೂಡ ಹೆಚ್ಚು ಹುರುಳಿಲ್ಲದ್ದೇ . ಹೌದು, ನಕ್ಷತ್ರ, ಗ್ರಹ ಮೊದಲಾದ ಪದಗಳು ಸಂಸ್ಕೃತದಿಂದ ಬಂದಿವೆ, ಏನೀಗ? ಸಾವಿರಾರು ವರ್ಷದ ಬಳಕೆ ಯಿಂದ ಅವು ಕನ್ನಡವೇ ಆಗಿಬಿಟ್ಟಿವೆ. "ಅಚ್ಚಕನ್ನಡ" ವೆಂಬ ತಲೆ ಬರಹದೊಂದಿಗೆ ಅರಿಲ್ ಎಂಬ ಪದವನ್ನು ಹೊಸದಾಗಿ ಬಳಕೆಗೆ ತರಬೇಕೇ ಎಂಬ ಪ್ರಶ್ನೆಯೂ ಮನಸ್ಸಿನಲ್ಲಿ ಮೂಡದೇ ಇರದು. ಆದರೆ ಸದ್ಯಕ್ಕೆ ಅದನ್ನು ಪಕ್ಕಕ್ಕಿಡೋಣ.ಒಟ್ಟಿನಲ್ಲಿ ಕೂಟ, ಚುಕ್ಕಿ ಕೂಟ ಅನ್ನುವ ಪದ ಕಟ್ಟಣೆ ಸರಿ ಕಾಣದು.
 
 
ಹಾಗಿದ್ದರೆ, ಇಂಗ್ಲಿಷ್ ಪದಕ್ಕೆ ಕನ್ನಡ ಪದ ಹುಡುಕುವುದು ತಪ್ಪೇ ? ಖಂಡಿತ ಅಲ್ಲ. ಆದರೆ ಕೆಲವೊಮ್ಮೆ ಕೈಗೆ ಹತ್ತಿರದಲ್ಲೇ ಇರುವ ಉತ್ತರವನ್ನು ಬಿಟ್ಟು, ಎಲ್ಲೆಲ್ಲೊ ತಡಕುವುದು, ಕೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕೆ ಅತ್ತರು ಅನ್ನೂವಂತಹ ಹುಚ್ಚುತನವಾಗುತ್ತದೆ! ಅಷ್ಟು ಹೇಳಲೇಬೇಕೆಂದರೆ, constellation ಎಂಬುದು ಆಕಾಶದಲ್ಲಿ ಕಾಣುವ ನಕ್ಷತ್ರಗಳನ್ನ ಊಹೆಯಲ್ಲಿ ಸೇರಿಸಿ ಮಾಡಿರುವ ಚಿತ್ತಾರ, ಆದ್ದರಿಂದ ಹೊಸದೇ ಬೇಕೆಂದರೆ ನಕ್ಷತ್ರ ಚಿತ್ರ , ಚುಕ್ಕಿ ಚಿತ್ತಾರ ಅನ್ನುವ ಪದಗಳನ್ನೇನೋ ಟಂಕಿಸಬಹುದು . ಆದರೆ, ಇದಕ್ಕಿಂತ ಒಳ್ಳೆಯ ಪದಗಳು ಈಗಾಗಲೇ ಬಳಕೆಯಲ್ಲಿ ಇವೆ!
 
ಎಲ್ಲರಿಗೂ ಪರಿಚಿತವಾದ ಮೇಷ ವೃಷಭ ಮೊದಲಾದ ಹನ್ನೆರಡು ಕಾನ್ಸ್ಟೆಲೇಶನ್ ಗಳಿಗೆ ರಾಶಿಗಳು ಅಂತ ಕರೆಯುವ ರೂಢಿ ಇರುವುದರಿಂದ, ಎಲ್ಲಾ ೮೮ ಕಾನ್ಸ್ಟೆಲೇಶನ್ ಗಳಿಗೂ ರಾಶಿ ಎಂದೇ ಕರೆಯಬಹುದು. ಈ ಬಳಕೆಯನ್ನುಹಲವರು ಮಾಡುತ್ತಲೂ ಬಂದಿದ್ದಾರೆ. ( ಅಂದ ಹಾಗೆ ಇದು ಗುಡ್ಡೆ ಅನ್ನುವ ತರಹ ರಾಶಿಯಲ್ಲ. ಜ್ಯೋತಿಷದ ಪರಿಭಾಷೆ ಯ ರಾಶಿ. ಆದರೆ ಎಲ್ಲರಿಗೂ ಪರಿಚಿತ) ಪದ ಸರಳವಾಗಿದೆ. ತುಲಾ ರಾಶಿ ಇದ್ದಂತೆ ಕ್ಯಾನಿಸ್ ಮೇಜರ್ ರಾಶಿ, ಅಥವಾ ಒರೈಯನ್ ರಾಶಿ ಅನ್ನಬಹುದು. ಇದರಲ್ಲಿ ಅಂತಹದ್ದೇನೂ ತಪ್ಪು ಕಾಣದು.
 
 
ಇದರ ಜೊತೆ, ಹಿಂದಿನಿಂದ ಸಪ್ತರ್ಷಿ ಮಂಡಲ, ಲಘು ಸಪ್ತರ್ಷಿ ಮಂಡಲ ಅನ್ನುವ ರೀತಿಯ  ಹೆಸರುಗಳು ಬಳಕೆಯಲ್ಲಿದ್ದುದ್ದರಿಂದ   ತಾರಾಮಂಡಲ, ನಕ್ಷತ್ರ ಮಂಡಲಗಳೆಂಬ ಹೆಸರುಗಳು ಕೂಡ constellation ಎಂಬ ಅರ್ಥದಲ್ಲಿ ಬಳಕೆಗೆ ಬಂದಿವೆ ಅದೂ ಕೂಡ ನನ್ನ ಮಟ್ಟಿಗೆ ಸರಿಯಾಗಿಯೂ ತೋರುತ್ತದೆ. ಮಂಡಲ ಅನ್ನುವುದೂ ಒಂದು ರೀತಿ ಚಿತ್ರ ತಾನೇ!

 
ಇನ್ನೊಂದು ಕುತೂಹಲದ (ಆದರೆ ಅಷ್ಟು ಸಂಬಂಧ ಪಡದ)  ವಿಷಯವೆಂದರೆ ನಮ್ಮಲ್ಲಿ ಹಿಂದಿನಿಂದ  ಕೆಲವು ಕಾನ್ಸ್ಟೆಲೇಶನ್ ಗಳನ್ನೇ  (ಅಥವಾ ಕಾನ್ಸ್ಟೆಲೇಶನ್ ನ ಒಂದು ಭಾಗ)  “ನಕ್ಷತ್ರ” ವೆಂದು ಕರೆಯಲಾಗಿದೆ - ಉದಾಹರಣೆಗೆ ಕೃತ್ತಿಕಾ ದಲ್ಲಿ ಆರು ನಕ್ಷತ್ರಗಳೂ, ಮೃಗಶಿರಾ ದಲ್ಲಿ ಮೂರು ನಕ್ಷತ್ರಳೂ, ಹಸ್ತದಲ್ಲಿ ನಾಲ್ಜೂ , ಅನೂರಾಧಾದಲ್ಲಿ ಮೂರೂ  ಪುನರ್ವಸು, ಪೂರ್ವಾಭಾದ್ರ ಉತ್ತರಾಭಾದ್ರಗಳು ಎರಡು ನಕ್ಷತ್ರಗಳೂ , ಧನಿಷ್ಟಾ ಎಂಬ ನಕ್ಷತ್ರದಲ್ಲೇ ಐದು ನಕ್ಷತ್ರಗಳೂ ಬರಿಗಣ್ಣಿಗೆ ಕಾಣುತ್ತವೆ. ಇದರಲ್ಲಿ ಹಸ್ತಾ ಮತ್ತೆ ಧನಿಷ್ಟಾ ಇವು ಒಂದೊಂದೂ ಒಂದೊಂದು ಕಾನ್ಸ್ಟೆಲೇಶನ್ ಗಳೇ, ಗ್ರೀಕ್ ಪಟ್ಟಿಯ ಪ್ರಕಾರ.
 
ಒಟ್ಟಿನಲ್ಲಿ ನನ್ನ ಅಭಿಪ್ರಾಯ ಇಷ್ಟೇ - ಯಾವುದಾದರೂ ಹೊಸ ಪದವನ್ನು ಕಟ್ಟುವಾಗ, ಅದರ ಬಗ್ಗೆ ನಮಗೆ ತಿಳಿದಿರುವುದನ್ನೆಲ್ಲ ಯೋಚಿಸಿ ಕಟ್ಟಿದರೆ, ಅದು ಒಳ್ಳೇದೇ. ಇಲ್ಲದೇ ಸುಮ್ಮನೆ ಪದಕಂತೆಯನ್ನೋ ಒರೆಗಂಟನ್ನೋ ನಿಘಂಟನ್ನೋ ತೆರೆದು ಪದಕ್ಕೊಂದು ಪದವನ್ನು ಹಾಕಿದರೆ,  ಅಭಾಸವಾಗುತ್ತೆ. ಅಲ್ಲದೆ ಒಂದು ವಿಷಯದ ಬಗ್ಗೆ ಆಸಕ್ತಿ , ಮತ್ತೆ ತುಸುವಾದರೂ ಪ್ರವೇಶವಿಲ್ಲದೆ ಸುಮ್ಮನೆ ಪದ ಕಟ್ಟಣೆ ಮಾಡಲು ಹೋಗುವುದು ತೀರಾ ಅಭಾಸಕ್ಕೆ ಕಾರಣವಾಗುತ್ತದೆ! ಈಗ್ಗೆ ಕೆಲ ದಿನದ ಹಿಂದೆ, ಯಾರೋ ಸಂಗೀತಗಾರನ ಕಥೆಯಲ್ಲಿ  ಮಂದ್ರ ಸ್ಥಾಯಿಗೆ “ಕೀಳ್ಮಟ್ಟದ ದನಿ” ಅಂತಲೋ ಏನೋ ಬರೆದಿದ್ದುದನ್ನು ಓದಿದ್ದು ಈಗ ನೆನಪಾಗುತ್ತಿದೆ!
 
- ಹಂಸಾನಂದಿ
 

ಕೊ: ಏನು ಮಾಡೋಕೆ ಹೊರಡ್ತೀರಿ ಅನ್ನೋದರ ಜೊತೆಗೆ ಹೇಗೆ ಮಾಡ್ತೀರಿ ಅನ್ನೋದು ಮುಖ್ಯ ಅನ್ನುವುದು ಈ ಬರಹದ ಸಾರಾಂಶ
 
ಕೊ.ಕೊ:  ಏನಾದ್ರೂ ಹೊಸದು ಕಟ್ಟಬೇಕಾದರೆ ಇದ್ದದ್ದನ್ನ ಕೆಡವಲೇಬೇಕಿಲ್ಲ ಅನ್ನೋದು ಇನ್ನೊಂದು ಹೊಳಹು
 
ಕೊ.ಕೊ.ಕೊ: ಕಾಳು ಉಳಿಯುತ್ತೆ, ಜಳ್ಳು ಹಾರುತ್ತೆ ಅನ್ನೋದು ಕಡೇ ಮಾತು!

 

Rating
No votes yet

Comments

Submitted by Iynanda Prabhukumar Thu, 03/02/2017 - 20:36

ಹೊಸ‌ ಬಗೆಯ‌ ಉತ್ತಮ‌ ಸಾಹಿತ್ಯವನ್ನು ರಚಿಸಿ ಓದುಗರನ್ನು ಮುದಗೊಳಿಸುವ‌ ಬದಲು, ಈ ಅಕ್ಷರ‌ ಬೇಡಾ, ಆ ಪದ‌ ಬೇಡಾ ಎಂದೆಲ್ಲಾ ಕೆಲಸವಿಲ್ಲದವರು ಮಾಡುತ್ತಿರುವ‌ ಕೆಲಸಗಳ‌ನ್ನು ನೋಡಿದರೆ ಅಯ್ಯೋ ಪಾಪ‌ ಎಂದೆನ್ನಿಸುತ್ತದೆ. ಸಂಸ್ಕೃತದ‌ ಮೇಲೆ ಅದೇನೋ ಹಗೆತನ‌; ಆ ಭಾಷೆಯಲ್ಲಿರುವ‌ ಪದಗಳು ಬೇಡ‌ ಎನ್ನುವ‌ ಧೋರಣೆ. ಆದರೆ ಇಂಗ್ಲಿಶಿನಿಂದ‌ ಬಂದ‌ ರೈಲು, ಬಸ್ಸು, ಸೈಕಲ್, ಹತೋಟಿ, ಇತ್ಯಾದಿಗಳ‌ ಮೇಲೆ ಪ್ರೀತಿ; ಪರ್ಸಿಯನ್, ಅರೇಬಿಕ್, ಮೊದಲಾದ‌ ಭಾಷೆಗಳಿಂದ‌ ಬಂದಿರುವ‌ ಪದಗಳನ್ನು ಗುರುತಿಸಿಕೊಳ್ಳಲಾರದೇ ಅವನ್ನು ನಿಸ್ಸಂಕೋಚವಾಗಿ ಬಳಸಿಕೊಳ್ಳುತ್ತಿರುವ‌ ಪರಿ; ಇವೆಲ್ಲ‌ ನಗು ಬರಿಸುತ್ತವೆ!
ಆಂಗ್ಲ‌ ಭಾಷೆ ಸಮೃದ್ಧವಾಗಿ ಇನ್ನೂ ಬೆಳೆಯುತ್ತಲೇ ಇರುವದಕ್ಕೆ ಮುಖ್ಯ‌ ಕಾರಣ‌, ಅದು ಜಗತ್ತಿನ‌ ಯಾವದೇ ಭಾಷೆಯಿಂದ‌ ಆಮದು ಮಾಡಿಕೊಳ್ಳಲಿರುವ‌ ಸುಲಭ‌ ಸೂತ್ರಗಳು.
ಇವೆಲ್ಲಾ re-inventing the wheel ಎಂದೆನ್ನುವ‌ ರೀತಿಯ‌ ಕೆಲಸಗಳು!

Submitted by nannisunil Fri, 03/03/2017 - 07:20

ಇಂತಹ ಸನ್ನಿವೇಶಗಳು ಭಾಷಾ ಪ್ರಯೋಗಿಗಳೂ ಮತ್ತು ವಿಷಯದಲ್ಲಿ ಪರಿಣಿತಿ ಹೊಂದಿದವರೂ ಒಟ್ಟಿಗೆ ಕೆಲಸ ಮಾಡಲು ಸೂಕ್ತ ವೇದಿಕೆ ಕಲ್ಪಿಸುತ್ತದೆ. ತಪ್ಪುಗಳನ್ನು ತಿದ್ದಿ ತೀಡಲು ನೆರವಾಗಿ ;-) ಕೆಲವೊಮ್ಮೆ ಭಾಷಾಪ್ರೇಮಿಗಳೂ ಮತ್ತೊಮ್ಮೆ ವಿಷಯ ಪರಿಣತಿಗಳೂ ತಮ್ಮ ತಮ್ಮ ಹಠಗಳನ್ನು ಬಿಟ್ಟುಕೊಡಬೇಕಾಗುತ್ತದೆ ;-)
ಉತ್ಸಾಹದಿಂದ ಮುನ್ನುಗ್ಗುತ್ತಿರುವಾಗ ಇಂತಹ ಎಚ್ಚರಿಕೆಗಳು ನೆರವಾಗುತ್ತವೆ. ಅದಗ್ಯೂ, ಈ ಪ್ರಯೋಗಕ್ಕೂ, ಟಿವಿ ಜಾಹೀರಾತುಗಳಲ್ಲಿ ಬರುವ ಟ್ರಾನ್ಸಲೇಟೆಡ್ ಕನ್ನಡಕ್ಕೂ ಬೇರೆತನವಿದೆ ಎಂದೇ ನಾನು ಭಾವಿಸುತ್ತೇನೆ.