ಪಬ್‌ ದಾಳಿ ಎಂಬ ರಸಕವಳ

ಪಬ್‌ ದಾಳಿ ಎಂಬ ರಸಕವಳ

ಕೊನೆಗೂ ನಮ್ಮ ವಿಚಾರವಾದಿಗಳಿಗೆ, ಬುದ್ಧಿಜೀವಿಗಳಿಗೆ ಜಗಿಯಲು ಸಮೃದ್ಧ ರಸಕವಳ ಸಿಕ್ಕಿದೆ- ಪಬ್‌ನ ಮೂಲಕ.

ಮಂಗಳೂರಿನ ಅಮ್ನೇಶಿಯಾ ಪಬ್‌ನಲ್ಲಿ ಶ್ರೀರಾಮಸೇನೆಯ ಕಾರ್ಯಕರ್ತರು ಮಾಡಿದ್ದು ನಿಜಕ್ಕೂ ಹೀನಾಯ ಕೆಲಸ. ಮಹಿಳೆಯರು ಹೀಗೆಯೇ ಬದುಕಬೇಕು ಎಂದು ನಿರ್ಬಂಧಿಸುವ ಸಂಪ್ರದಾಯ ಮುಸ್ಲಿಂ ಸಮುದಾಯದಲ್ಲಿದೆ. ಇತರ ಧರ್ಮಗಳಲ್ಲಿ ಅದರ ತೀವ್ರತೆ ಕಡಿಮೆ. ಆದರೆ, ಪಬ್‌ ಮೇಲೆ ದಾಳಿ ನಡೆಸುವ ಮೂಲಕ ತಮ್ಮಲ್ಲೂ ಅಂಥ ಮನಸ್ಥಿತಿ ಇದೆ ಎಂಬುದನ್ನು ಶ್ರೀರಾಮಸೇನೆಯ ಕಾರ್ಯಕರ್ತರು ಪ್ರದರ್ಶಿಸಿದ್ದಾರೆ.

ಮಹಿಳೆಯರು ಪಬ್‌ಗಳಿಗೆ ಹೋಗಬಾರದು ಎಂದು ನಿರ್ದೇಶಿಸುವ, ನಿರ್ಬಂಧಿಸುವ ಹಕ್ಕು ಯಾರಿಗೂ ಇಲ್ಲ. ಯಾವ ಧರ್ಮದವರಿಗೂ ಇಲ್ಲ. ಅದು ಮಹಿಳೆಯರಿಗೆ ಸಂಬಂಧಿಸಿದ, ಅವರೇ ನಿರ್ಧಾರ ತೆಗೆದುಕೊಳ್ಳಬೇಕಾದ ವಿಷಯ. ಭಾರತೀಯ ಸಂಸ್ಕೃತಿಯ ಹೆಸರಿನಲ್ಲಿ ಇಲ್ಲದ ಆಚರಣೆಗಳನ್ನು, ನಿರ್ಬಂಧಗಳನ್ನು ಹೇರುವ ಹಕ್ಕು ಯಾರಿಗೂ ಇಲ್ಲ. ತನಗೆ ಅಂಥ ಹಕ್ಕಿದೆ ಎಂದು ಶ್ರೀರಾಮಸೇನೆಯಾಗಲಿ, ಇಸ್ಲಾಮಿ ಸಂಘಟನೆಗಳಾಗಲಿ ಭಾವಿಸಿದ್ದರೆ ಅದು ಅವರ ಮೂರ್ಖತನವೇ ಹೊರತು ಬೇರೇನೂ ಅಲ್ಲ.

ಯಾವ ಜನಾಂಗ ಮಹಿಳೆಯ ಹಕ್ಕುಗಳನ್ನು ಮೊಟಕುಗೊಳಿಸಿದೆಯೋ, ಅದು ಉದ್ಧಾರವಾದ ಉದಾಹರಣೆಗಳು ತೀರಾ ವಿರಳ. ತನ್ನಿಚ್ಛೆಯಂತೆ ಬದುಕುವ ಹಕ್ಕು ಎಲ್ಲರಿಗೂ ಇದೆ. ಅದಕ್ಕೆ ಪುರುಷ, ಮಹಿಳೆ ಎಂಬ ಭೇದವಿಲ್ಲ. ಧರ್ಮಗಳ, ಜಾತಿಗಳ ಚೌಕಟ್ಟಿಲ್ಲ. ಅಷ್ಟಕ್ಕೂ ಕಟ್ಟುಪಾಡು ಹೆಚ್ಚಿಸಿ, ಹಿಂಸೆಯ ಮೂಲಕ ಮಹಿಳೆಯನ್ನು ಹೊಸ್ತಿಲ ಒಳಗೆ, ಬೂರ್ಖಾದ ಮರೆಯಲ್ಲಿ ಕಟ್ಟಿಡುವ ಪ್ರಯತ್ನ ಮಾಡಿದರೆ ಅವು ಯಶಸ್ವಿಯಾಗುವುದೂ ಇಲ್ಲ. ಹಾಗೊಂದು ವೇಳೆ ಕಟ್ಟಿಡಲು ಹೊರಟರೂ, ಪುರುಷ ಮನೆಯ ಹೊಸ್ತಿಲ ಬಳಿಯೇ ಕಾವಲು ನಿಲ್ಲಬೇಕಾಗುತ್ತದೆ. ಜನಾಂಗವೊಂದು ಅಧಃಪತನಕ್ಕೆ ಈಡಾಗುವುದು ಹೀಗೆ.

ಮುಂಬೈ ದಾಳಿ ಹಾಗೂ ನಂತರದ ಆಕ್ರೋಶ ಪಾಕಿಸ್ತಾನಿಗಳ ವಿರುದ್ಧ, ಅದಕ್ಕೆ ಕಾರಣವಾದ ಮುಸ್ಲಿಂ ಧರ್ಮಾಂಧತೆಯ ವಿರುದ್ಧ ತಿರುಗಿದ್ದರಿಂದ ಕಳವಳಗೊಂಡಿದ್ದ ಬುದ್ಧಿಜೀವಿಗಳಿಗೆ ಮಂಗಳೂರಿನ ಪಬ್‌ ದಾಳಿ ರಸಗವಳದಂತೆ ಸಿಕ್ಕಿದೆ. ಮುಂಬೈ ದಾಳಿಯನ್ನು ಗಟ್ಟಿಯಾಗಿ ಖಂಡಿಸದ, ಅದನ್ನು ವಿರೋಧಿಸಿ ಹೇಳಿಕೆ ನೀಡದ, ಪ್ರತಿಭಟನೆಗೆ ಇಳಿಯದ ಇವರೆಲ್ಲ ಪಬ್‌ ದಾಳಿಯಲ್ಲಿ ’ಚಿಯರ್ಸ್‌’ ಹೇಳಲು ದೊಡ್ಡ ಸಂಖ್ಯೆಯಲ್ಲಿ ಹೊರಬಂದಿದ್ದಾರೆ.

ಪಬ್‌ ದಾಳಿ ಘಟನೆಯನ್ನು ಸೋ ಕಾಲ್ಡ್‌ ಬುದ್ಧಿಜೀವಿಗಳು, ಕೋಮು ಸೌಹಾರ್ದಿಗಳಷ್ಟೇ ಅಲ್ಲ, ಕಟ್ಟರ್‌ ಬಲಪಂಥೀಯರನ್ನು ಬಿಟ್ಟು ಎಲ್ಲರೂ ಖಂಡಿಸಿದ್ದಾರೆ. ಆದರೆ, ಬುದ್ಧಿಜೀವಿಗಳ, ಕೋಮು ಸೌಹಾರ್ದಿಗಳ ಖಂಡನೆಯ ತೀವ್ರತೆಯೇ ಬೇರೆ. ಮುದುಡಿದ್ದ ಅವರ ನಾಲಿಗೆಗಳು ಈಗ ಚಾಟಿಯಂತೆ ಚುರುಕಾಗಿವೆ. ಹಳೆಯ ಆರೋಪಗಳಿಗೆ ಹೊಸ ಜೀವ ಬಂದಿದೆ. ಪಬ್‌ ದಾಳಿಯನ್ನು ಉದಾಹರಣೆಯಾಗಿಟ್ಟುಕೊಂಡು ಎಂದಿನಂತೆ ಸಂಘ ಪರಿವಾರದ ವಿರುದ್ಧ ಇವರು ಮುಗಿಬಿದ್ದಿದ್ದಾರೆ.

ಅರೆ, ತಪ್ಪು ಯಾರೇ ಮಾಡಿದರೂ ತಪ್ಪಲ್ಲವೆ? ಎಲ್ಲ ತಪ್ಪುಗಳನ್ನೂ ಇದೇ ತೀವ್ರತೆಯಲ್ಲಿ ಇವರೇಕೆ ಖಂಡಿಸುತ್ತಿಲ್ಲ? ಎಸ್ಸೆಮ್ಮೆಸ್ ಮೂಲಕ ತಲ್ಲಾಖ್‌ ಹೇಳುವುದು, ಕುಡಿದ ನಿಶೆಯಲ್ಲಿ ತಲ್ಲಾಖ್‌ ಹೇಳುವುದು ಮಾನ್ಯ ಎಂಬ ಸುದ್ದಿಗಳು ಬಂದಾಗ ಇವರ ನಾಲಿಗೆಗಳೇಕೆ ಖಂಡನೆಗೆ ಇಳಿಯಲಿಲ್ಲ? ಮುಂಬೈ ದಾಳಿಯ ಹುನ್ನಾರವನ್ನು, ಅದಕ್ಕೆ ಕಾರಣರಾದವರನ್ನು ಇಂಥದೇ ಕಳಕಳಿಯಿಂದ ಉಗಿಯಲಿಲ್ಲವೇಕೆ?

ಒರಿಸ್ಸಾ, ಮಂಗಳೂರು, ಚರ್ಚ್‌ ದಾಳಿಯಂಥ ಘಟನೆಗಳಲ್ಲಷ್ಟೇ ಜಾಗೃತರಾಗುವ ಇವರು, ಇತರ ಸಂದರ್ಭಗಳಲ್ಲಿ ಯಾವ ಪಬ್‌ನಲ್ಲಿ ಚಿತ್ತಾಗಿರುತ್ತಾರೆ? ಅದ್ಯಾವ ಮಂಕು ಅವರನ್ನು ಆವರಿಸಿಕೊಂಡಿರುತ್ತದೆ? ಇಂಥ ಆಷಾಢಭೂತಿಗಳಿಂದಲೇ ಸಮಾಜದ ಅನಿಷ್ಟಗಳು ಬೆಳೆಯುತ್ತಲೇ ಇವೆ. ಒಂದು ಅತಿರೇಕ ಖಂಡಿಸದ್ದಕ್ಕೆ ಇನ್ನೊಂದು ಅತಿರೇಕ ಹುಟ್ಟಿಕೊಳ್ಳುತ್ತಿದೆ.

ಇಂಥ ಸೋಗಲಾಡಿಗಳಿಗೆ ಇನ್ನೂ ಅದೆಷ್ಟು ಬಾರಿ ಧಿಕ್ಕಾರ ಹೇಳಬೇಕಾಗುತ್ತದೋ !

- ಚಾಮರಾಜ ಸವಡಿ

Rating
No votes yet

Comments