ಪಯಸ್ವಿನಿಯ ದಡದಲ್ಲಿ ಮತ್ತೊಮ್ಮೆ
ಪಯಸ್ವಿನಿಯ ದಡದಲ್ಲಿ ಮತ್ತೊಮ್ಮೆ ನಿಂತಿರಲು
ತೆಂಗು ಗರಿಗಳ ಪಚ್ಚೆ ಕಂಗೊಳಿಸುತಿರಲು
ಪಯಸ್ವಿನಿಯ ದಡಕ್ಕಿಂದು ಮತ್ತೊಮ್ಮೆ ನಾ ಬರಲು
ತಣ್ಣನೆಯ ಗಾಳಿಯೂ ಬೀಸುತ್ತಿರಲು
ಕೊರೆವ ಚಳಿಗಾಲದೊಳು ಬೆಳ್ಳಬೆಳಗಿನೊಳೆದ್ದು
ನಡೆದೆನಾ ಕಾರ್ಟ್ರೋಡಿನೊಳು ಬಿಳೆಯ ಪಂಚೆಯ ಉಟ್ಟು
ಮಾತಿಲ್ಲದೆ ಕಥೆಯ ಹೇಳಿದುವು ತೆಂಗುಗಳು
ಬಾನಸಿರಿ ಮೇಗಡೆ ಸಮಾಸ್ಫೋಟಿಸುತ್ತಿರಲು
ಮೊದಲ ಸಲ ಕಂಡಾಗ ತೆಂಗು ಗರಿಗಳ ಸುತ್ತ
ಕಾಲ ಸರಪಳಿಯ ನಾದ ಇರವ ಮರೆಯಿಸುತ್ತ
ಮೊದಲ ಸಲ ಕಂಡಾಗ ಮೊದಲ ಸವಿಯ ಸವಿಯುತ್ತ
ತುಟಿಗೆ ತುಟಿಯನು ಒತ್ತಿ ಮೈಯ ಬೆಸೆಯುತ್ತ
ಎರಡೆರಡು ಹೆಜ್ಜೆಗಳು ಕೂಡೆ ನಡೆದಿರಲಾಗ
ತಮ್ಮ ಛಾಪನು ಒತ್ತಿ ಹಸಿ ಮಣ್ಣ ಮೇಲಾಗ
ಇಳೆಯೊಳಗೆ ಎಣೆಯಿಲ್ಲ ಎಂದು ಭ್ರಮಿಸಿದ್ದೆನಾಗ
ಆ ಪಚ್ಚೆ ಈ ಮೈಯ ಮರೆಯಿಸಿರಲಾಗ
ಹಳೆಯ ಕಥೆಯನು ನೆನಪಿಸಿದುವು ತೆಂಗುಗಳು
ಬಾನಸಿರಿ ಪಡುಗಡೆಗೆ ಜಾರಿತ್ತಿರಲು
ಕಂಪ ಬೀರದ ಹೂವ ಹೂತ ಕಡೆಗೊಮ್ಮೆಗೆ
ದಿಟ್ಟಿಯನು ಹಾಯಿಸಿ ನಡೆದೆ ಮರಳಿ ಗೂಡಿಗೆ
Rating