ಪರಮಾತ್ಮ ನಕ್ಕಾಗ.....

ಪರಮಾತ್ಮ ನಕ್ಕಾಗ.....

ಸರ್ ನೀವು ಒಂದ ಸಲಾ ಅಲ್ಲಿಗೆ ಬರ್ರೀ.. ನೀವು ನಿಮ್ಮ ಸಮಸ್ಯೆ ಬಗ್ಗೆ ಅವರಿಗೆ ಹೇಳೂದು ಬ್ಯಾಡ..ನಿಮ್ಮನ್ನ ನೋಡಿದ್ರ ಹಂಗ ಪುಸ್ತಕ ಓದಿದಂಗ ನಿಮ್ಮ ಮನಸೊಳಗ ಏನೈತಿ, ನಿಮಗ ಏನೇನು ತ್ರಾಸ ಅವ, ಅಂತ ಅವರೇ ಹೇಳಿ ಬಿಡ್ತಾರ. ಅಷ್ಟ ಅಲ್ಲ ನಿಮ್ಮ ತ್ರಾಸು ಕಡಿಮೆ ಆಗೋದಿಕ್ಕೆ ಏನು ಮಾಡಬೇಕು ಅನ್ನೂದು ಹೇಳಿಕೊಡ್ತಾರ. ಇಷ್ಟೆಲ್ಲಾ ಅವರು ಹೇಳಿದರು ಅಂದ್ರ ನಿಮಗ ನಂಬಿಕೆ ಬರಬಹುದು..

ಏನು ಓದೇವಿ... ಅದರಿಂದ ನಮ್ಮ ಜೀವನಕ ಏನು ಉಪಯೋಗ ಆಗ್ತದ, ಇಂಥಾ ಪರಿ ಓದಿದ್ದು ನಮ್ಮ ಜೀವನಕ್ಕ ಹೆಂಗ ಉಪಯೋಗ ಬೀಳತದ ಅನ್ನೂದು ಗೊತ್ತಿರದಿದ್ರೂ, ಓದು ಮುಗಿಸಿ ಕೆಲಸಕ್ಕೆ ಅಲೆಯೋ ಆ ದಿನಗಳಲ್ಲಿ ನಮ್ಮ ನಿರುದ್ಯೋಗ ಮಂಡಳಿಯಲ್ಲಿ ಇಂಥಾ ನಾಟಕ ಪ್ರತಿ ರವಿವಾರ ನಡಿತಿತ್ತು. ಹಿಂಗ ಪ್ರತಿ ಸಲ ಅವರು ಹೇಳಿದಾಗಲೂ ನನಗ ಅಲ್ಲಿಗೆ ಹೋಗಲೇಬೇಕು ಅಂತ ಅನಿಸಲಿಲ್ಲ. ಖರೇ ಅಂದ್ರ ನನಗ ಕೊರಗುವಂತಾ ಸಮಸ್ಯೆಗಳೇ ಇರಲಿಲ್ಲ. ನಿರುದ್ಯೋಗ ನಮ್ಮ ದೇಶದಲ್ಲಿ ಒಂದು ಸಮಸ್ಯೆಯೇ ಅಲ್ಲ ಅಂತ ನನಗ ಅವಾಗಲೂ ಅನಿಸುತ್ತಿತ್ತು, ಈಗಲೂ ಅನ್ನಿಸ್ತದ. ಕೆಲಸ ಅಂತ ಸಿಕ್ಕರ ನಮ್ಮ ಸಾಮರ್ಥ್ಯದ ಮೇಲೆ ಸಿಗ್ತದ. ಕೆಲಸ ಸಿಕ್ಕರ ಮುಂದ ಬದುಕು ಸಾಗ್ತದ ಅಂತ ನಾನು ವಾಸ್ತವವಾದಿ ಆಗಿದ್ದೆ.

ನಮ್ಮ ಊರಿನ ಹತ್ತಿರ ಒಂದು ಹಳ್ಳಿಯೊಳಗ ಒಬ್ರು ಮಠದ ಸ್ವಾಮಿಗಳು ಇದ್ರು. ಅವರು ಬಹಳ ಸಾಧನೆ ಮಾಡಿ ಅದ್ಭುತ ಶಕ್ತಿಗಳನ್ನ ಸಿದ್ಧಿಸಿಕೊಂಡಿದ್ದು ಭಕ್ತರಿಗೆಲ್ಲಾ ಪರಿಹಾರ ಕೊಡ್ತಾರ ಅಂತ ಸುತ್ತಮುತ್ತಲಿನ ಪ್ರದೇಶದಲ್ಲಿ ಅವರ ಖ್ಯಾತಿ ಹರಡಿತ್ತು. ಸಮಸ್ಯೆ ಎಂಥಾದ ಇರಲಿ, ಏನರ ಇರಲಿ, ಅವರು ಮನಸು ಮಾಡಿದ್ರ ಖಂಡಿತ ಪರಿಹಾರ ಸಿಗ್ತದ ಅಂತ ಸುದ್ದಿಯೂ ಹಬ್ಬಿತ್ತು. ಬರ್ತಾ ಬರ್ತಾ ಭಕ್ತರು ತಮ್ಮ ಸಮಸ್ಯೆ ಎಲ್ಲರೆದುರಿಗೆ ಹೇಳಿಕೊಳ್ಳೋಕೆ ಹಿಂಜರಿತಾರ ಅಂತ. ಭಕ್ತರ ಮನಸೊಳಗ ಏನದ ಅಂತ ತಿಳಕೊಂಡು ಸುಮ್ಮನ ಅವರು ಭಸ್ಮ ಪ್ರಸಾದ ಕೊಟ್ಟರ ಪರಿಹಾರ ಸಿಗ್ತದ ಅನ್ನೋವಷ್ಟರ ಮಟ್ಟಿಗೆ ಸ್ವಾಮಿಗಳ ಖ್ಯಾತಿ ಬೆಳದಿತ್ತು.

ನನ್ನ ಆಂತರ್ಯ ಅವರಿಗೆ ಅರ್ಥವಾಗಿ, ಹಂಗಲ್ರೀ ಸರ್ ಹೆಂಗಿದ್ದರೂ ನಾವು ಹೊಂಟೇವಿ, ನಮ್ಮ ಜೊತೆ ಕಂಪನಿ ಅಂತ ಬರ್ರೀ...ನಿಮ್ಮ ನಂಬಿಕೆ ನಿಮಗ ಇರಲಿ, ನಮ್ಮ ಸಮಸ್ಯೆಗೆ ಪರಿಹಾರ ಸಿಕ್ಕರ ಅವರ ಸಾಧನೆ ಬಗ್ಗೆ ನಿಮಗೂ ಖಾತ್ರಿ ಆಗತದ, ಹೀಂಗ ಏನೇನೋ ಹೇಳಿದಾಗ ಅನಿವಾರ್ಯವಾಗಿ ಹೋಗಲೇಬಾಕಾಯ್ತು. ಆತು ನಡೀರಪಾ... ನಿಮ್ಮ ಸ್ವಾಮಿಗೋಳ ಕಥಿ ಏನದ ನೋಡಿಕೊಂಡ ಬರೂಣ ಅಂತ ನಾನು ಒಪ್ಪಿಗೆ ಕೊಟ್ಟೆ. ಏ ಏ ನೀ ಬಂದು ಸ್ವಾಮಿಗೋಳಿಗೆ ಏನೇನರ ಕೇಳಿ ಅವರನ್ನ ಪರೀಕ್ಷೆ ಮಾಡಾಕ ಹೋಗಬ್ಯಾಡ ಮತ್ತ, ಹಂಗ ಮಾಡಿದವರು ಘೋರ ಶಿಕ್ಷಾ ಅನುಭವಿಸ್ತಾರ. ಮತ್ತೊಬ್ಬ ಎಚ್ಚರಿಕೆ ನೀಡಿದ... ನಾ ಏನರ ಕಿತಾಪತಿ ಮಾಡುದರೊಳಗ ಅವನ ಸಮಸ್ಯೆಗೆ ಪರಿಹಾರ ಸಿಗೋದು ಹೋಗಲಿ, ಸ್ವಾಮಿಗೋಳ ಕಡೆ ಕರ್ಕೊಂಡ ಬಂದಿದ್ದಕ್ಕ ಮತ್ತೇನರ ಶಾಪ-ಗೀಪ ತಟ್ಟೀತು ಅಂತ ಅವನ ಕಳಕಳಿ ಆತಂಕ... ಇಲ್ಲ ಮಾರಾಯ ನಾನು ಏನೂ ಮಾಡೋದಿಲ್ಲ, ಮಾತಾಡೋದಿಲ್ಲ, ಬಾ ಅಂದ್ರ ಬರ್ತೇನಿ, ಬ್ಯಾಡ ಅಂತ ಹೇಳಬ್ಯಾಡ್ರಿ ಇಷ್ಟು ದಿನ ಕೊರದು-ಕೊರದು ನನಗ ಹೂಂ ಅನಿಸೀರಿ, ಇವಾಗ ಬಿಟ್ಟು ಹೋದರ ನಿಮ್ಮನ್ನ ಹಂಗ ಬಿಡೂದುಲ್ಲ, ನನ್ನ ಮೊಂಡತನ ಶುರುವಾಯ್ತು. ಏ ಇಷ್ಟ ದಿನಾ ನಮ್ ಜೊತೆ ಇದ್ರೂ ಅವರು ಯಾರಿಗೂ ತ್ರಾಸ್ ಕೊಟ್ಟಿಲ್ಲ ಬರ್ಲಿ ಬಿಡ್ರೋ...ನೀವು ಬರ್ರೀ ಸರ್ ಅಂತ ಮತ್ತೊಬ್ರು ಪರ್ಮಿಶನ್ ಕೊಟ್ಟರು. ಮುಂದಿನ ಪ್ರಯಾಣ ಸ್ವಾಮಿಗೋಳ ದರ್ಶನಕ್ಕ ಮಠದ ಕಡೆ.

ನಿರುದ್ಯೋಗಿಗಳು ಇವಾಗಿನಂಗ ಗಾಡಿ, ಕಾರು, ಟ್ಯಾಕ್ಸಿ ಮಾಡಿಕೊಂಡು ಹೋಗೊವಂತ ಸ್ಥಿತಿ ಇರಲಿಲ್ಲ. ನಡಕೊಂತ ರೇಲ್ವೇ ಸ್ಟೇಶನ್ ಹೋಗಿ,  ಅಲ್ಲಿಂದ ಸ್ವಾಮಿಗಳ ಮಠದ ಊರಿಗೆ ಹೊರಟಿವಿ. ರೇಲ್ವೇದೊಳಗ ಮೊದಲನೇ ಹಂತ..ಆಮೇಲೆ ಅಲ್ಲಿಂದ ಜಾತ್ರೆಯನ್ನೇ ತುಂಬಿಕೊಂಡ ಹೊಂಟಂತ ಟೆಂಪೋ ಒಳಗ ಎರಡನೇ ಹಂತದ ಪ್ರಯಾಣ… ಪುಣ್ಯಕ್ಷೇತ್ರಗಳಿಗೆ ಕಾಲ್ನಡಿಗೆಯಲ್ಲಿ ಹೋಗುವುದು ಶ್ರೇಷ್ಟ ಅಂತ ಅವರಿವರ ಹೊಲ-ಗದ್ದೆ ತೋಟ ಸುತ್ತಾಡಿ,  ಪುಣ್ಯ ಕ್ಷೇತ್ರದ ಪಾವಿತ್ರ್ಯತೆಯನ್ನು ಗೌರವಿಸಲು ಯಾರದೋ ತೋಟದ ಭಾವಿಯಲ್ಲಿ ಮಿಂದು ಪರಿಶುದ್ಧವಾಗಿ.. ಮಠದ ಆವರಣಕ್ಕೆ ಪ್ರವೇಶಿಸಿದೆವು.

ಏನ್ರೀ ಯಾವೂರಿಂದ ಬಂದ್ರಿ.. ಬರ್ರೀ ಅಪ್ಪುಗೋಳು ಗೌಡರ ಜೊತೆ ಏನೋ ಮಾತಾಡಾಕ ಹತ್ತಿದಾರ. ಈಗ ಒಳಗ ಯಾರನೂ ಬಿಡಬ್ಯಾಡ ಅಂತ ಹೇಳ್ಯಾರ..ನೀವು ಪ್ರಸಾದ ತಗೋರಿ. ನಾವು ಮಠದ ಒಳಗ ಕಾಲು ಇಡತಿದ್ದಂಗ ಧ್ವನಿ ಕೇಳಿಸಿದ ಕಡೆ ಎಲ್ಲರೂ ತಿರುಗಿ ನೋಡಿದ್ವಿ… ಮೌನವೇ ನಮ್ಮ ಉತ್ತರ ಆಗಿತ್ತು. ಅಲ್ಲ ಏನರ ಮಾತಾಡ್ರೀ, ಯಾವ ಊರು ನಿಮ್ಮದು… ಏನಾಗಬೇಕಾಗಿತ್ತು… ನೋಡ್ರೀ ನಾವು ಸ್ವಾಮಿಗೋಳ ದರ್ಶನಕ್ಕ ಬಂದೇವಿ, ಎಲ್ಲರೂ ಸುಮ್ಮನ ಇದ್ದದ್ದು ನೋಡಿ ನಾನು ಹೇಳಿದೆ. ಏನಾಗಬೇಕಾಗಿತ್ತು… ಏನು ಸಮಸ್ಯೆ ಅದ ನಿಮ್ಮದು ಇಷ್ಟೆಲ್ಲಾ ಜನ ಕೂಡಿ ಬಂದಿರೀ ಅಂದ್ರ ಏನರ ಹುಡುಗೀ ಲಫಡಾ ಏನರ ಮಾಡಿ ಬಂದೀರೇನು ಮತ್ತ… ಆ ಮಠದ ಮರಿ ಮತ್ತ ಕಾಲು ಕೆದರಿದಾ… ಯಾಕ್ರೀ ಏನರ ಲಫಡಾ ಇಲ್ಲದಿದ್ರ ನಿಮ್ಮ ಮಠದೊಳಗ ಬಿಡೂದಿಲ್ಲೇನು… ಭಕ್ತಿಯಿಂದ ಬಂದವರಿಗೆ ನಿಮ್ಮ ಸ್ವಾಮಿಗೋಳು ದರ್ಶನ ಕೊಡುದುಲ್ಲೇನು? ನನ್ನ ಪ್ರಶ್ನೆಗೆ ಆ ಮಠದ ಮರಿ ಅಷ್ಟ ಅಲ್ಲ ನಮ್ಮವರೂ ಕೆಕ್ಕರಿಸಿ ನೋಡಿದ್ರು.. ಸುಮ್ಮನಾಗದ ಗತಿ ಇರಲಿಲ್ಲ ನನಗ.

ಹೂಂ ಹಂಗಂದ್ರ ಹೆಂಗ ರೀ… ನಿಮ್ಮಂಥ ಜನ ಇನ್ನೂ ಇರೂದಕ್ಕ ಮಠಕ್ಕ ಸ್ವಲ್ಪ ಕಿಮ್ಮತ್ತ ಉಳದೈತಿ..ಇವಾಗೆಲ್ಲ ಅಪ್ಪಗೋಳು ಅವರಿವರ ಸಮಸ್ಯೆ ಬಗಿ ಹರಿಸೂದರೊಳಗ ದಿನ ಕಳೀತಾರ… ಅದರಿಂದ ದೇಣಿಗಿ ಬಂದು ಮಠಾನು ಬೆಳಿತದ ನೋಡ್ರೀ… ನಿಮ್ಮದೇನೂ ಸಮಸ್ಯೆ ಇಲ್ಲ ಅಂದ್ರ ಸ್ವಾಮಿಗೋಳ ದರ್ಶನ ಸಿಗೂದು ಅಪರೂಪ… ಏನರ ಹರಿಕೆ ಹೊತ್ತಿದ್ರ ಹೇಳ್ರೀ ಸ್ವಾಮಿಗೋಳಿಗೆ ಭೇಟಿ ಮಾಡಿಸ್ತೇನಿ ಅಂದ ಮಠದ ಮರಿ. ನನ್ನ ಕರಕೊಂಡ ಹೋದವರ ಮುಖ ಸಾರಾಯಿ ಕುಡಿದ ಮಂಗ್ಯಾನಂಗ ಆಗಿತ್ತು. ಹಂಗ ವಾಪಸ ಬಂದ್ರ ಅವಮಾನ ಆಗೂದಲ್ಲದ ಮತ್ತ ನನ್ನ ಕಡೆ ಕೊನೆತನಕ ಅನಿಸಿಕೋಬೇಕು ಅಂತ ಅವರಿಗೆ ಸಂಕಟಾ.. ಏನೇನೋ ಕಥೆ ಹೇಳಿ ಸ್ವಾಮಿಗೋಳ ದರ್ಶನ ಮಾಡಿಸಲಿಕ್ಕೆ ಮಠದ ಮರಿಗೆ ಅವರು ಒಪ್ಪಿಸಿದ್ರು.

ಶಂಭೋ.. ಶಿವ-ಶಂಭೋ… ಏನು ಹುಡುಗೋರ ಎಲ್ಲಿಂದ ಬಂದೀರಿ… ನೀವು ಎಲ್ಲಿಂದ ಬಂದರೇನು… ನಿಮ್ಮಂಥವರಿಂದ ಮಠಕ್ಕ ಫಾಯದಾ ಏನೂ ಇಲ್ಲ… ನಿಮ್ಮಿಂದ ಮಠಕ್ಕ ಏನು ಕೊಡಾಕ ಆಗತದ,ಎಷ್ಟರ ಕೊಟ್ಟೀರಿ..ಬಾಜೂಕ ಪ್ರಸಾದ ವ್ಯವಸ್ಥಾ ಅದ.. ನಿಮ್ಮ ಭಕ್ತಿ ಅಲ್ಲೇ ಪೆಟಿಗ್ಯಾಗ ಹಾಕಿ.. ಪ್ರಸಾದ ತಗೊಂಡು ಹೋಗ್ರೀ…ಇದು ಸ್ವಾಮಿಗೋಳ ಅಮೃತವಾಣಿ ಮೊಳಗಿತು.

ಪೆಚ್ಚು ಮೋರಿ ಹಾಕಿದ ನನ್ನ ಮಿತ್ರ ಮಂಡಳಿ ಸ್ವಾಮಿಗೋಳಿಗೆ ಅಡ್ಡಬಿದ್ದು ಪ್ರಣಾಮ ಮಾಡಿದ್ರು... ನಾನು ದೂರದಿಂದ ಕೈಮುಗಿದು ಹಿಂತಿರುಗಿ ನಡೆಯೂವಾಗ ಸ್ವಾಮಿಗೋಳ ಹಿಂದ ಇದ್ದ ಕ್ಯಾಲೆಂಡರ್ ಒಳಗ ಪರಮಾತ್ಮ ಶಿವ ನಮ್ಮ ಅಂತರಾಳ ತಿಳಕೊಂಡು ನಕ್ಕೊಂತ ಕುಳಿತಿದ್ದಾ…

Rating
No votes yet

Comments