ಪರಿತ್ಯಕ್ತ - ಲಕ್ಷ್ಮೀಕಾಂತ ಇಟ್ನಾಳ

ಪರಿತ್ಯಕ್ತ - ಲಕ್ಷ್ಮೀಕಾಂತ ಇಟ್ನಾಳ

ಚಿತ್ರ

ಪರಿತ್ಯಕ್ತ      
ಸಂಜೆಯೊಂದು ಕಣ್ಣು ಪಿಳುಕಿಸುತ್ತ ಮಂದವಾಗಿ ಸಾಯುತ್ತಿರುವಾಗ
ಊರ ಅಗಸಿಯಾಚೆಯ ಮಠದ ಹಿಂದೆ
ಕಟ್ಟೆಯ ಮೇಲೆ ಕುಳಿತು ಮೆಲ್ಲಗೆ ಪಾರ್ಸಲ್ ಬಿಚ್ಚಿದೆ,
ಜೋಪಾನವಾಗಿ ತಂದ ‘ಬಾಟಲಿ’ ತೆಗೆದು ಗ್ಲಾಸ್‍ನಲ್ಲಿ ಸುರುವಿಕೊಂಡೆ,
ತಂದ ತುಸು ಹುರಿಗಾಳು ಮೆಲ್ಲುತ್ತ,

ಒಡಕು ಧ್ವನಿಯಲ್ಲಿ ಕೂಗುತ್ತ   ಕಾಗೆಯೊಂದು ಕಾಳಿನಾಸೆಗೆ ತುಸು ದೂರವೇ ಹಾರಿ ಕೂತಿತು,
ಎಸೆದೆ, ಅದರತ್ತ ತುಸು, ಸಮೀಪವೇ ಬಂತು ಇನ್ನಷ್ಟು!
ದಿಟ್ಟಿಸಿ ನೋಡಲು ಕಾಗೆಯ ಕಣ್ಣಲ್ಲಿ
‘ಅಪ್ಪ’ ಕಂಡ,
ಅರೆ, ‘ಅಪ್ಪ,  ನೀನಿಲ್ಲಿ’ ಎಂದೆ,
‘ ನಿನ್ನ ನೋಡಿ ಬಂದೆ’ ಎಂದ,

ಇದೇ ಸುರೆಯಲ್ಲವೇ? ಕುಡಿದು ಬಂದ ಈ ಅಪ್ಪನನ್ನು ನನ್ನಿಂದ ಹೊರಹಾಕಿಸಿದ್ದು ಅಂದು,
ಮಾಗಿಯ ಗಡಗಡ ಛಳಿಯ ರಾತ್ರಿಯಲ್ಲಿ
ನಡುಗುತ್ತ ಗೂಡುಗಾಲಲ್ಲಿ ಕಟ್ಟೆಮೇಲೆ ಬಿದ್ದವನಿಗೆ ಬೆಳಿಗ್ಗೆ ಏಳಲೂ ತ್ರಾಣವಿರಲಿಲ್ಲ!

ಪಿಟ್ಟೆನ್ನದೆ ಊರಿಗೆ ಹೊರಟು ನಿಂತಿದ್ದ ಮರುದಿನ, ನನ್ನ ಎದೆ ಒಡೆದು ಗಳ ಗಳ ಅತ್ತುಬಿಟ್ಟಿದ್ದೆ!

 ‘
“ದುಡಿದು ಹೈರಾನಾಗಿ, ಹಣ್ಣಾಗಿ,  ತುಸು ನೋವು ಮರೆಯಲು,
 ನೆಮ್ಮದಿಯ ನಿದ್ದೆಗಾಗಿ,
ಒಂದು ‘ಡ್ರಾಮು’ ಹಾಕ್ಕೊಂಡು ಬಂದರೆ ಹೊರದಬ್ಬಿ ಬಿಟ್ಟೆಯಲ್ಲೊ,
 ಕಿಸನ್ಯಾಳಾ?” ಕೇಳಿದ್ದ ಅಪ್ಪ

ಹೆಗಲ ಮೇಲೆ ಆಡಿಸಿದ್ದೆನಲ್ಲೋ ನಿನಗೆ
ಹೆಗಲೂ ಕೊಡಲಿಲ್ಲ ನೀನು”

ನಿರುತ್ತರನಾಗಿದ್ದೆ,
ಜಗದ ಸತ್ಯ ಅರಿತ ಬುದ್ಧನಾಗಿದ್ದೆ,! ಇಂದು,

ಅದನ್ನೇ ಮರೆಯಲಲ್ವೆ, ಮದಿರೆಯ ದಾಸನಾಗಿದ್ದು? ನಾನೂ

ಕಾಗೆ ಮರೆಯಾದರೂ, ಅಪ್ಪ ಮರೆಯಾಗಲಿಲ್ಲ
ಮಾಪು ಬದಲಾದರೂ, ಸುರೆ ಬದಲಾಗಲಿಲ್ಲ!

ನನ್ನ ಕಿವಿಯೂದಿ, ನನ್ನದೇ ಹೆಗಲ ಮೇಲಿಟ್ಟು ಗುಂಡು ಹೊಡೆದವರು ಯಾರೋ!
ಅಪ್ಪನ ಕಣ್ಣ ಗೊಂಬೆಯಲ್ಲಿ ಕುಳಿತ ಅಪರಾಧಿ ಮಾತ್ರ ನಾನು!
 
 
 ರಾತ್ರಿ ನನಗಾಗಿ ಬಾಗಿಲು ದಯಾಭಿಕ್ಷೆಯಂತೆ ತೆರೆಯುತ್ತದೆ,
 ಕೇಳಿದಂತೆನಿಸುತ್ತದೆ ನನಗೆ, ಹೊರಗೆ ಅಪ್ಪ ನಿಂತು,
 ‘ಈಗ ನಿನಗೂ ಹಾಗೆ ಮಾಡಿದರೆ?’

ಬದುಕಿದ್ದೇನೆ ಸಾಯುತ್ತ, ಪರಿತ್ಯಕ್ತನಾಗಿ
ವೃತ ಭಂಗಿತ ಸನ್ಯಾಸಿಯಂತೆ,
ವಲ್ಮೀಕದೊಳು ವೆಜ್ಜಮಾಡಿ
ವೇಣಿಯೊಳು ಹೊದ್ದು ಮಲಗುತ್ತೇನೆ,
ಏಕಾಂತವನ್ನು!
ಏಕಾಂಗಿಯಾಗಿ!
ಅದೇ ಅಪ್ಪನ ಸಾನಿಧ್ಯಕ್ಕಾಗಿ ಹಪಹಪಸಿ!

Rating
No votes yet

Comments

Submitted by lpitnal Thu, 07/24/2014 - 19:31

In reply to by kavinagaraj

ಹಿರಿಯರಾದ ಕವಿನಾಗರಾಜ್ ಸರ್ ಜಿ, ವಂದನೆಗಳು. ಗೆಳೆಯರೊಬ್ಬರು ತಮ್ಮ ಜೀವನಾನುಭವವನ್ನು ಹೇಳುವಾಗ ಹೊಳೆದ ಸಾಲುಗಳನ್ನು ಕವನಕ್ಕೆ ಅಳವಡಿಸಲು ಪ್ರಯತ್ನ. ತಮ್ಮ ಪ್ರತಿಕ್ರಿಯೆ ನಿಜಕ್ಕೂ ಬ್ಯೂಟಿಫುಲ್. ಧನ್ಯವಾದಗಳು ಸರ್