ಪರೋಪಕಾರಾರ್ಥಂ

ಪರೋಪಕಾರಾರ್ಥಂ

ನಾನಾಗ ಬಿಹಾರದಲ್ಲಿದ್ದೆ. ಮನೆಗೆ ಫೋನ್ ಬಂದ ಹೊಸತರಲ್ಲೊಮ್ಮೆ ಅರ್ಧರಾತ್ರೆಯಲ್ಲಿ ಫೋನ್ ಗುಣುಗುಣಿಸಿತು. ಎತ್ತಿದೆ. ಫೋನ್ ಸ್ವಲ್ಪ ದಯಾಸಿಂಘ್ ಗೆ ಕೊಡಿ ಎಂದಿತು ದನಿ. ಇಲ್ಯಾರೂ ದಯಾ ಸಿಂಘ್ ಇಲ್ಲ ಎಂದೆ. ಅದು ಹೇಗೆ ಸಾಧ್ಯ? ಅವನು ಇದೇ ನಂಬರ್ ಕೊಟ್ಟಿದ್ದು ಎಂದಿತು ದನಿ. ಈ ನಂಬರ್ ನನ್ನದು, ನಿಮಗೆಲ್ಲೊ ತಪ್ಪಿರಬೇಕು ಎಂದೆ. ಅರ್ಧ ರಾತ್ರೆ ನನ್ನನ್ನು ಎಬ್ಬಿಸಿದ್ದೂ ಅಲ್ಲದೇ ಏನೂ ಹೇಳದೇ ಲೈನ್ ಕಟ್ ಮಾಡಿತು ವ್ಯಕ್ತಿ.ಪುನಃ ಮಾರನೆಯ ರಾತ್ರಿಅದೂ ಇದೇ ಕಥೆ. ಆ ದನಿ ದಯಾ ಸಿಂಘ್ ಗೆ ಫೋನ್ ಕೊಡಿ ಎಂದಿತು ನಾನು ಇದು ದಯಾ ಸಿಂಘ್ ನ ಮನೆ ಅಲ್ಲ ಎಂದೆ. ಲೈನ್ ಕಟ್ಟಾಯಿತು. ಹೀಗೇ ಇದು ಸುಮಾರು ಮೂರ್ನಾಲ್ಕು ಸಲ ನಡೆಯಿತು. ಈ ವಿಷಯ ಮನೆಯಲ್ಲಿ ಎಲ್ಲರಿಗೂ ಒಂದು ಹಾಸ್ಯದ ವಸ್ತುವೇ ಆಗಿ ಇನ್ನೇನಾದರು ಫೋನ್ ಹಾಗೆ ರಾತ್ರೆ ಬಂದರೆ ಏನಾದರೂ ಸಬೂಬು ಹೇಳಿ ತಪ್ಪಿಸಿಕೊಳ್ಳುವುದೇ ಅಂತ ತೀರ್ಮಾನಿಸಿಕೊಂಡೆವು. ಐದನೆಯ ದಿನ ಸಂಜೆ ಒಂದು ಫೋನ್ ಬಂತು, ಅಪ್ಪಟ ಪಂಜಾಬಿಯಲ್ಲಿ! ನನ್ನ ಹೆಂಡತಿ ನನ್ನ ಕೈಗಿತ್ತಳು. ಫೋನಲ್ಲಿ ತಿಳಿಸಿದ ಪದದ ತಾತ್ಪರ್ಯ ತನಗೇನಾದರೂ ಫೋನ್ ಇದೆಯೇ ಎಂದಾಗಿತ್ತು. ನನಗೆ ಒಡನೆಯೇ ಈ ಹಿಂದಿನ ಮೂರ್ನಾಲ್ಕು ರಾತ್ರೆಗಳ ನೆನಪು ಬಂತು ಹೆಸರು ಕೇಳಿದೆ ಸತ್ಗುರುದಯಾಳ್ ಸಿಂಘ್ ಅಂತೆ. ನಿಮ್ಮ ಹೆಸರಿಗೆ ಬಂದಿಲ್ಲ, ಅವನ್ಯಾವನೋ ದಯಾ ಸಿಂಘ್ ಗೆ ಬಂದಿತ್ತು, ಆತ ನನ್ನನ್ನು ಕೇಳದೇ ಹೇಗೆ ನನ್ನ ನಂಬರ್ ಕೊಟ್ಟ ಹೇಳಿ ಎಂದು ನನ್ನೆಲ್ಲ ರಾತ್ರೆಯ ಕಸಿವಿಸಿಯನ್ನು ಯಾಕೋ ಇವನಿಗೆ ವಿವರಿಸಿದೆ. ಆ ದಯಾ ಸಿಂಘ್ ನಾನೇ ತನ್ನನ್ನು ಮನೆಯವರು ಅದೇ ಹೆಸರಿಂದ ಕರೆಯುತ್ತಾರೆ, ದಯವಿಟ್ಟು ಇನ್ನು ಬಂದರೆ ಕರೆಯಿರಿ ಎಂದಿತು ಈ ದನಿ. ಛೆ ಎಡವಟ್ಟಾಯಿತಲ್ಲ ನನಗೆ ಗೊತ್ತಿರಲಿಲ್ಲ ಸರಿ, ಇನ್ನು ಬಂದರೆ ಕರೆಯೋಣ ಬಿಡಿ ಎಂದ ನಾನು. ಅವನ ಮನೆಯ ನಂಬರ್ ಕೇಳಿ ಪಡೆದುಕೊಂಡೆ, ನಾನು ವಿಷಯ ತಿಳಿಸಿದಾಗಲೇ ನನ್ನಾಕೆಗೆ ನೆನಪಾಗಿತ್ತು, ನಮ್ಮ ಕಾಲೊನಿಯಲ್ಲೇ ಇರುವ ದಯಾ ಸಿಂಘ ನ ಹೆಂಡತಿ, ಅಪತ್ಕಾಲಕ್ಕೆ ಬೇಕಾಗುತ್ತದೆ ಅಂತ ನಮ್ಮ ನಂಬರ್ ಒಯ್ದಿದ್ದಳಂತೆ. ಆದರೂ ದಯಾ ಸಿಂಘ್ ಈ ಸದ್ ಗುರುದಯಾಲ್ ಸಿಂಘ ಇಬ್ಬರೂ ಒಂದೇ ಎಂದು ನಮಗೆ ಹೇಗೆ ತಿಳಿಯಬೇಕು?
ಮಾರನೆಯ ರಾತ್ರೆ ಪುನಹ ಹನ್ನೆರಡುವರೆಗೆ ರಿಂಗಾಯಿತು. ಎತ್ತಿದರೆ ಅದೇ ಸ್ವರ! ಫೋನ್ ದಯಾ ಸಿಂಘಗೆ ಕೊಡಿ ಎಂದಿತು. "ನೋಡೀ ನಿಮ್ಮ ಪಕ್ಕದ ಮನೆಯಲ್ಲಿಯೇ ಆತ ಇದ್ದಾನೆ, ಅವನನ್ನು ಕರೆಯಿರಿ ಬರ್ತಾನೆ", ಎಂದ ದನಿಯಲ್ಲಿಈ ಬಾರಿಯೂ ಯಾಚನೆಯಿರಲಿಲ್ಲ. ಇರಲಿ ಲೋಕ ಸೇವೆಯಾಗಲಿ ಅಂದುಕೊಂಡು ಆ ದನಿಗೆ ಹತ್ತು ನಿಮಿಷದ ನಂತರ ಪುನ ಟೆಲಿಫೋನು ಮಾಡಲು ತಿಳಿಸಿದರೆ, "ಅರೇ ಅಷ್ಟು ಸಮಯ ಯಾಕೆ ಬೇಕು? ಪಕ್ಕದಲ್ಲಿಯೇ ಮನೆ ಇರುವುದಾದರೆ ಬೇಗ ಬರಲಾಗುವುದಿಲ್ಲ ಏಕೆ?" ಅಧಿಕಾರಯುತ ದನಿಯಲ್ಲಿ ಚಡಪಡಿಕೆ ಹಣಿಕಿಕ್ಕುತ್ತಿತ್ತು. ನಾನು ಧಿರಿಸು ತೊಟ್ಟು ಕೆಳಗಿಳಿದೆ, ಆ ಅರ್ಧ ರಾತ್ರೆಯಲ್ಲಿ ನಾನಿರುವ ನಾಲ್ಕನೆಯ ಮಹಡಿಯಿಂದಿಳಿದು ನಮ್ಮ ಕಾಲೊನಿಯ ನೂರೈವತ್ತು ಮನೆಗಳಲ್ಲಿನ ಕೊನೆಯ ಮನೆಯಲ್ಲಿನ ನಾಲ್ಕನೆಯ ಮಹಡಿಯಲ್ಲಿರುವ ದಯಾಸಿಂಘನನ್ನು ಕರೆದು ಬರುವುದು ಎಂದರೆ, ಅದೂ ಬಿಹಾರದ ಈ ಡಿಸೆಂಬರಿನ ಜುಮುಗುಡುವ ಚಳಿಯಲ್ಲಿ? ಕಾಲೊನಿಯ ಕೊನೆಯಲ್ಲಿರುವ ದಯಾ ಸಿಂಘ್ ನ ಮನೆ ತಲುಪಲು ದಾರಿ ಮಧ್ಯ ಸಿಗುವ ನಾಯಿಗಳಿಂದ ತಪ್ಪಿಸಿಕೊಳ್ಳಬೇಕಾದರೆ ನನ್ನ ಬುದ್ದಿಯೆಲ್ಲವನ್ನೂ ( ಪುಣ್ಯಕ್ಕೆ ನಾನು ಸರ್ದಾರ್ಜಿಯಾಗಿಲ್ಲದ್ದರಿಂದ ಬಚಾವಾದೆ) ಖರ್ಚು ಮಾಡಬೇಕಾಯಿತು. ನನ್ನ ರಾತ್ರೆಯ ಈ ಚಳಿ ಧಿರಿಸು ಅವುಗಳಿಗೆ ಯಾರನ್ನು ನೆನಪಿಸಿದವೋ ದೇವರಿಗೇ ಗೊತ್ತು. ಆ ಅರ್ಧ ರಾತ್ರೆಯಲ್ಲಿ ಅವನ್ನನ್ನು ಎಬ್ಬಿಸಲು ನಾನು ಪಟ್ಟ ಕಷ್ಟ ದೇವರಿಗೇ ಪ್ರೀತಿ. ಇನ್ನು ದಯಾಸಿಂಘ್ ಯಾರದ್ದಂತೆ ಫೋನ್ ಎಂದಾಗ ನಾನೇ ಸರ್ದಾರ್ಜಿಯಾಗಬೇಕಾಯಿತು, ಈ ಗಡಿಬಿಡಿಯಲ್ಲಿ ಆತನ ಹೆಸರು ಕೇಳಿರಲೇ ಇಲ್ಲ. ಈತನೋ ತನ್ನ ಎಲ್ಲಾ ಸಂಬಂಧಿಗಳನ್ನೂ ಕಷ್ಟದಲ್ಲಿ( ಇಲ್ಲದಿದ್ದರೂ ಚಳಿಯಲ್ಲಂತೂ ಧಿಮಾಕು ಕೂಡಾ ಟಂಡಾ) ನೆನಪಿಸಿಕೊಳ್ಳ ತೊಡಗಿದ. ನಾನು ದನಿಗೆ ಹೇಳಿದಂತೆ ಹದಿನೈದು ನಿಮಿಷಕ್ಕಿಂತಲೂ ಜಾಸ್ತಿಯೇ ಸಮಯ ತಗಲಿತಾತನಿಗೆ ಯಾಕೆಂದರೆ ಆತ ತನ್ನ ಪೂರಾ ಪರಿವಾರವನ್ನೇ ಕರೆದೆಳತಂದಿದ್ದ. ಸಂಸ್ಕಾರಕ್ಕೆಂಬಂತೆ ನಾನೂ ನನ್ನ ಶ್ರೀಮತಿ ಕೈಮುಗಿದು ಆಸನ ತೋರಿಸಿದರೆ ನಮಗೆ "ಜೀತೇ ರಹೋ" ಎಂತ ಆಶೀರ್ವಾದ ಮಾಡಿತ್ತು ಅಸಾಮಿ,( ನಾನು ಕುರ್ಚಿ ತೋರಿಸಿದ್ದು ಆತನಿಗೆ ಆಶೀರ್ವಾದ ಬೇಡಿದಂತಾಗಿತ್ತೇನೋ) ಈ ಗಡಿಬಿಡಿಯಲ್ಲಿ ಆತನಿಗೆ, ಆತನಿಂದ ವಯಸ್ಸಿನಲ್ಲಿ ಹಿರಿಯವ ಅನ್ನುವುದೂ ಮರೆತೇ ಹೋಗಿತ್ತು (ಪಾಪ, ನಿಜವಾಗಿಯೂ ಸರ್ದಾರ್ಜಿ ಆತ!!). ಒಟ್ಟಾರೆ ಆದಿನ ( ಅಲ್ಲಲ್ಲ ರಾತ್ರೆ!) ಅವರ ಸಂಸಾರದ ಉಭಯ ಕುಶಲೋಪರಿಗಳ ವಿನಿಮಯ ಭರಾಟೆಯಲ್ಲಿ ನಮ್ಮೆಲ್ಲರ ನಿದ್ರೆ ನೈವೇದ್ಯವಾಗಿತ್ತು.
ಆದರೆ ಇದು ಮುಂದೆಯೂ ದಿನಾ ಪುನರಾವರ್ತನೆಯಾಗತೊಡಗಿದಾಗ ಮಾತ್ರ ನಮಗೆ ಇರುಸು ಮುರಿಸಾಗತೊಡಗಿತು. ನಾನೇ ಎಚ್ಚೆತ್ತುಕೊಂಡು ಪದೇ ಪದೇ ನಮಗೆ ತೊಂದರೆ ಕೊಡಬಾರದೆಂದು ವಿಧಿಯಿಲ್ಲದೇ ಹೇಳಿದರೆ, ಆದನಿ "ನಾಚಿಕೆಯಿಲ್ಲವೇ ನಿಮಗೆ ಒಂದೇ ಆಫೀನಲ್ಲಿ ಇದ್ದು ಆತನ ಕೆಳಗೆ ಕೆಲಸ ಮಾಡುತ್ತಿದ್ದು ಹೀಗೆ ಹೇಳಲು?" ಎಂತ ಕೇಳುವುದೇ?
ಈಗಂತೂ ನಾನು ಖಡಾಖಂಡಿತವಾಗಿ ಹೇಳಿಯೇ ಬಿಟ್ಟೆ, ನಿಮ್ಮ ಸರ್ದಾರ್ಜಿಗೂ ನನಗೂ ಯಾವುದೇ ಸಂಬಂಧವಿಲ್ಲ, ನಮ್ಮ ಡಿಪಾರ್ಟ್ ಮೆಂಟೇ ಬೇರೆ ಅಲ್ಲದೇ ಈ ಫೋನು ನನ್ನ ಸ್ವಂತದ್ದು ನಿಮ್ಮ ಸರ್ದಾರ್ಜಿಯ ಆಫೀಸಿನದ್ದಲ್ಲ ಅಂತ. ಆದರೂ ನಮಗವರಿಂದ ಪೂರ್ತಿಯಾಗಿ ಬಿಡುಗಡೆ ದೊರತಿದ್ದು ಅಲ್ಲಿಂದ ವರ್ಗವಾಗಿ ಬೇರೆಡೆಗೆ ಹೋದಾಗಲೇ.

Rating
No votes yet

Comments