ಪರೋಪಕಾರಾರ್ಥಮಿದಂ ಶರೀರಂ...?!
ನಿನ್ನೆ ಅವರನ್ನು ನೋಡಿದೆ...
ಪೂರ್ವಾಗ್ರಹವಿಲ್ಲದೆ ನೋಡಿದರೆ ಆತ್ಮೀಯವೆನಿಸುವ ಹಿರಿಯ ವ್ಯಕ್ತಿತ್ವ. ನಾವು ನೀವು ಕಲಿಯಬೇಕಾದುದು ಅವರಲ್ಲಿ ಇನ್ನೂ ಬೇಕಾದಷ್ಟಿದೆ.
ನಾನು ನೋಡಿದಾಗ ಅವರು ಇನ್ನೊಬ್ಬ ಹಿರಿಯರ ಹತ್ತಿರ ಇತ್ತೀಚೆಗೆ ತಾವು ಅನುಭವಿಸಿದ್ದನ್ನು ಹೇಳಿಕೊಳ್ಳುತ್ತಿದ್ದರು.
ತಮ್ಮ ಸುತ್ತ ಮುತ್ತಿದ ಆಕ್ರೋಶದ ಭಾರಕ್ಕೆ ಮಾತುಗಳು ತೂಕತಪ್ಪಿ ಉದುರಿದ್ದಿರಬೇಕು.
ಬಹುಶಃ ಇದಕ್ಕೇ ಕಾಯುತ್ತಿದ್ದ ಕನ್ನಡ ಮಾಧ್ಯಮವೊಂದರಲ್ಲಿ ಯಾವುದೇ ಮುಲಾಜಿಲ್ಲದೆ ಅವರ ಮಾನ ಹರಾಜಿಗೆ ಬಿದ್ದಿತ್ತು.
ನೀರಿಗೆ ಬೀಳೆಂದು ಸುತ್ತಮುತ್ತ ನಿಂತು ಕೂಗಿ, ನೀರಿಗೆ ತಳ್ಳಿ ಕಷ್ಟಕಾಲದಲ್ಲಿ ಜತೆಗಿರದವರ ಬಗ್ಗೆ ಅವರಲ್ಲಿ ಬೇಸರವಿತ್ತು.
ಅವರ ಪರಿಸ್ಥಿತಿಯನ್ನು ಕಂಡು ಕಸಿವಿಸಿಯಾಯಿತು...
****************
ನಮ್ಮಜ್ಜ ಕೂಡಾ ಹೀಗೇ ಇದ್ದರು. ಊರಿಗೆಲ್ಲಾ ಉಪಕಾರ ಮಾಡುತ್ತಿದ್ದರು. ಅವರ ಪರೋಪಕಾರದ ಮಟ್ಟ ಮೇರೆ ಮೀರಿ ಹರಿದು, ಕೊನೆಗೆ ಹೇಗಾಯಿತೆಂದರೆ, ಯಾರಿಗಾದರೂ ಏನಾದರೂ ಆಗಬೇಕೆಂದರೆ, ತಳ್ಳಿ ಅರ್ಜಿ, ಮೂಕರ್ಜಿಗಳನ್ನು ಕೊಡಬೇಕೆಂದರೆ ಓಡಿಕೊಂಡು ನಮ್ಮಜ್ಜನ ಹತ್ತಿರ ಬರುತ್ತಿದ್ದರು. ಕೊನೆಗೆ ಎಲ್ಲಿಯೋ ಸಿಕ್ಕಿಹಾಕಿಕೊಳ್ಳಬೇಕಾದ ಪರಿಸ್ಥಿತಿ ಬಂದಾಗ ಮಾತ್ರ ನಮ್ಮಜ್ಜನ ಜತೆಗೆ ಯಾರೂ ಇರುತ್ತಿರಲಿಲ್ಲ. ಅವರು ಸಾಯುವ ಹಂತದಲ್ಲಿದ್ದಾಗಲೂ ಅವರು ಮಾಡಿದ ಪುಣ್ಯಕಾರ್ಯಗಳ ಬಗ್ಗೆ ನೆನಪಿಸಿಕೊಳ್ಳುವ ಉಪಕೃತರ್ಯಾರೂ ಇರಲಿಲ್ಲ.
****************
ಸ್ವಲ್ಪ ದಿವಸ ನನ್ನ ಕಥೆಯೂ ಇದೇ ಆಗಿತ್ತು. ಅನ್ಯಾಯವಾಯಿತೆಂದರೆ, ಯಾಕೆ ತೆಪ್ಪಗೆ ಸಹಿಸಿಕೊಳ್ಳಬೇಕು ಎನ್ನುವ ಮನೋಭಾವ. ನ್ಯಾಯ ಸಿಗಲೇಬೇಕೆಂಬ ಹಠ. ಇದು ಎಲ್ಲಿಯವರೆಗೆ ಹೋಯಿತೆಂದರೆ, ಯಾರಿಗೇನೇ ಅನ್ಯಾಯವಾದರೂ ನನ್ನ ಹತ್ತಿರವೇ ಅದು ಬರುತ್ತಿತ್ತು, ಬಂದಾಗ ನಾನು ಅದರ ಪರವಾಗಿ ನಿಂತು ಮಾತಾಡಬೇಕೆಂಬ ಆಶಯವೂ ಇರುತ್ತಿತ್ತು. ಗೆಲುವು ಸಿಕ್ಕಿದಾಗ ಗೆಳೆಯ-ಗೆಳತಿಯರೆಲ್ಲ ಜತೆಗಿರುತ್ತಿದ್ದರು. ಸೋಲಾಯಿತೆಂದರೆ ನಾನೊಬ್ಬಳೇ ಅದನ್ನು ಜೀರ್ಣಿಸಿಕೊಳ್ಳಬೇಕಿತ್ತು.
ಅವರವರಿಗೆ ಏನು ಬೇಕೋ ಅವರವರಿಗೆ ಚೆನ್ನಾಗಿ ತಿಳಿದಿರುತ್ತದೆ, ಬೇರೆಯವರ ಸಹಕಾರದಿಂದ ತಮಗೆ ಬೇಕಾದುದು ಮಾಡಿಕೊಳ್ಳುವ ಮಂದಿಗೆ ನಾನಲ್ಲದಿದ್ದರೆ ಇನ್ನೊಬ್ಬರು ಸಿಕ್ಕೇ ಸಿಗುತ್ತಾರೆ ಅಂತ ತಿಳಿದ ನಂತರ ನನ್ನ ಪರೋಪಕಾರದ ಪುಣ್ಯಕಾರ್ಯ ಕಡಿಮೆಯಾಯಿತು...
****************
ಬ್ರಿಟಿಷರು ಒಂದು ಕಾಲದಲ್ಲಿ ಭಾರತವಾಳಿದರೆಂದು ಬ್ರಿಟಿಷರನ್ನೆಲ್ಲ ವೈರಿಯೆಂದು ತಿಳಿದರೆ ಸರಿಯೇ? ಸ್ಕೂಲಿನಲ್ಲಿ ಮಾಸ್ತರು ತಪ್ಪು ಮಾಡಿದಾಗ ಕೈಗೆ ಏಟು ಕೊಟ್ಟರೆಂದು ಅವರು ಕಲಿಸಿದ್ದನ್ನೆಲ್ಲ ಮರೆತುಬಿಡುತ್ತೇವೆಯೆ? ಒಬ್ಬ ಲೇಖಕ ಯಾವುದೋ ಲಹರಿಯಲ್ಲಿ ಓದುಗರಿಗೆ ಇಷ್ಟವಾಗದ್ದು ಬರೆದರೆ, ಒಂದು ಕಾಲದಲ್ಲಿ ಆತ ಬರೆದಿದ್ದು ಓದುಗರಿಗೆ ಇಷ್ಟವಾಗಿರುವುದು ಸುಳ್ಳಾಗುವುದಿಲ್ಲವಲ್ಲ? ಆತನ ಕೊಡುಗೆ ಸುಳ್ಳಾಗುವುದೆ?
ವ್ಯಕ್ತಿಗಳು, ವಿಚಾರಗಳು ಕಪ್ಪು-ಬಿಳುಪು ಬಣ್ಣದಲ್ಲಿ ಎಂದೂ ಇರುವುದಿಲ್ಲ. ವ್ಯಕ್ತಿಗಳಲ್ಲಿ ಒಳ್ಳೆಯದು, ಕೆಟ್ಟದು - ಎಲ್ಲವೂ ಇರುತ್ತದೆ, ಸಾರ್ವಜನಿಕವಾಗಿ ವಿಚಾರಗಳ ಬಗ್ಗೆ ಚರ್ಚಿಸುವ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಇದರ ಜತೆ ಮಾತುಗಳು ತೂಕತಪ್ಪಿದಾಗ ವಿಚಾರಗಳನ್ನು ಖಂಡಿಸುವುದರ ಜತೆಗೆ ವ್ಯಕ್ತಿಯನ್ನು ಅರ್ಥಮಾಡಿಕೊಂಡು ವಾದಕ್ಕೊಂದು ಕೊನೆಹಾಡುವ ಸಹೃದಯತೆಯೂ ಇರಬೇಕು. ವಿಚಾರಗಳಿಗೋಸ್ಕರ ವ್ಯಕ್ತಿಗಳ ಚಾರಿತ್ರ್ಯವಧೆ ಮಾಡುವ ಕೀಳು ಮಟ್ಟಕ್ಕಿಳಿದಿದ್ದೇವೆ ನಾವು. (ಬೇರೆಯವರಿಗೆ ಉಪಕಾರವೊಂದನ್ನು ಬಿಟ್ಟು) ಇನ್ನೂ ಏನೇನು ಮಾಡುತ್ತೇವೋ...?