ಪಾಠ...
೨೦೧೪ ಕಳೆದು ೨೦೧೫ ಶುರು ಆಯಿತು. ಆಗಲೇ ಜನವರಿ ೨ನೇ ತಾರೀಖು. ಫ್ರೆಂಡ್ ಒಬ್ಬಳ 'ಹೊಸ ವರ್ಷದ ಶುಭಾಶಯಗಳು. ನಿನ್ನೆಲ್ಲಾ ಆಸೆ ಆಕಾಂಕ್ಷೆಗಳು ಈ ವರ್ಷ ಪೂರ್ಣವಾಗಲಿ' ಎಂಬ ಸಂದೇಶ ವ್ಹಾಟ್ಸಾಪ್ ನಲ್ಲಿ ಮಿನುಗಿತ್ತು. ತಿರುಗಿ ಅದಕ್ಕೆ ಧನ್ಯವಾದ ತಿಳಿಸಿ ಕಳೆದ ವರ್ಷದ ಕಹಿ ನೆನಪಿಗೆ ಜಾರಿದ್ದೆ. ಆಕಾಂಕ್ಷೆ ಆಸೆಗಳೆಲ್ಲವೂ 'ಅವಳೇ' ಅಂತ ದಿನ ರಾತ್ರಿ ಹತ್ತು ಹಲವು ರೀತಿಯಲ್ಲಿ ಅರ್ಥ ಮಾಡಿಸಿದ್ದ ನನ್ನ ಪ್ರಯತ್ನ ವ್ಯರ್ಥವಾಗಿತ್ತು. ತುಂಬಾ ಇಷ್ಟ ಪಟ್ಟು, ಮನೆಯಲ್ಲಿ ಪೆಪ್ಪರ್ಮೆಂಟು ತಿನ್ನಲು ಕೊಟ್ಟ ಹಣ ಉಳಿಸಿ ಕೊಂಡು ಓದುತ್ತಿದ್ದ ಚಂದಾಮಾಮ, ಚಂಪಕ, ಬಾಲಮಂಗಳ, ದಿನಕ್ಕೊಂದು ಕಥೆ ಪುಸ್ತಕಗಳನ್ನು ಕೊಂಡು ಒಂದೇ ರಾತ್ರಿಗೆ ಅಷ್ಟೂ ಕಥೆಗಳನ್ನು ಹೇಗೆ ಓದಿ ಮುಗಿಸುತ್ತಿದ್ದೆನೋ ಅದಕ್ಕೂ ಚುರುಕಾಗಿ ಅವಳನ್ನು ಹಚ್ಚಿಕೊಂಡಿದ್ದೆ. ಬರೀ ಒಂದು ವರ್ಷದಲ್ಲಿ ನನಗೆ ಅರ್ಥವಾದದ್ದು, ಅವಳು ನಾ ಇಷ್ಟ ಪಟ್ಟ 'ದಿನಕ್ಕೊಂದು ಕಥೆ' ಅಲ್ಲವೆಂದು. ಅವಳಾಗಿದ್ದಳು ನಾ ಓದಲು ಇಚ್ಚಿಸಿಯೇ ಇರದ 'ಜೀವನಕ್ಕೊಂದು ಪಾಠ'!
ನಾ ಸಣ್ಣಲ್ಲಿ ತುಂಬಾ ಹಠ ಮಾಡುತ್ತಿದ್ದ ಮಗು ಅಂತ ರಜಿನಿ ನನಗೆ ಹೇಳುವ ಅಗತ್ಯವಿರಲಿಲ್ಲ. ನನಗೆ ಅದು ಗೊತ್ತಿತ್ತು.. ರಜಿನಿಗೆ ನಾನು ಉಪ್ಪರಿಗೆಯಲ್ಲಿ ಮಲಗುತ್ತೇನೆ, ಕೆಳಗೆ ಮುಚಕಡೆಯಲ್ಲಿ ಮಲಗುತ್ತೇನೆ ಅಂತೆಲ್ಲ ಅದೆಷ್ಟು ಸಾರಿ ಹಾಸಿಗೆಯನ್ನು ಮೇಲೆ ಕೆಳಗೆ ಹೊರೆಸಿ ಆಟವಡಿಸಿದ್ದೇನೆ ಅನ್ನೋದು ಇನ್ನೂ ನೆನಪಿದೆ. ನೀಳ ಕಪ್ಪು ಉದ್ದ ತಲೆಕೂದಲನ್ನ ಕತ್ತರಿಸಿದಾಗ ನಾ ಮಾಡಿದ ಅಬ್ಬರಕ್ಕೆ ಮನೆಯ ಮುಚ್ಚಿಗೆಯೂ ಬಿರುಕು ಬಿಟ್ಟಿತ್ತಂತೆ. ನನ್ನ ಸ್ನಾನದ ಪಾಣಿಪಂಚೆಯನ್ನು ಅಪ್ಪ ಮುಟ್ಟಿದರೂ, ನನ್ನ ಸ್ಟಿಲ್ ಸೋಪಿನ ಬಾಕ್ಸ್‌ನ್ನು ಮನೆಗೆ ಬಂದ ನೆಂಟರು ಮುಟ್ಟಿದರೂ ಮುಗಿದೇ ಹೋಯಿತು! ಅದೆಂತ ಹಠ ನನ್ನದು.
ನಾ ಶಾಲೆಗೆ ಹೋಗಲು ಶುರುಮಾಡಿದಾಗ ಯಮಹಾ ಬೈಕಿನಲ್ಲಿ ಅಪ್ಪ ಬಂದು ಕರೆದುಕೊಂಡು ಹೋಗಲಿಲ್ಲ ಅಂತ, ನನ್ನನ್ನು ಹೆಗಲು ಮೇಲೆ ಕೂರಿಸಿಕೊಂಡು ಹೋಗಲು ಬಂದಿದ್ದ ನಮ್ಮನೆ ಕೆಲಸಕ್ಕೆ ಬರುವ ತಮ್ಮಣ್ಣನ ಮುಖವೆಲ್ಲ ಪರಚಿದ್ದೆ. ಪಾಪ ನನ್ನ ಹಠವನ್ನು ಅದೆಷ್ಟು ತಡೆದಿದ್ದನೋ ಆತ, ಇಂದಿಗೂ ಸಹ 'ರಕ್ಷಿತಯ್ಯ, ಅದೆಂಥಾ ಹಠನ್ರೀ ನಿಮ್ದು. ಬೇಕು ಅಂದರೆ ಬೇಕು.. ಅಬ್ಬರೇ! ನೀವು ಕೊಟ್ಟ ಗೋಳು ಯಾವತ್ತೂ ಮರೆಯುಕೇ ಆತದಾ"? ಅಂತ ಪಕ್ಕ ಮಲೆನಾಡು ಮಡಿವಾಳರ ಭಾಷೆಲಿ ಹೇಳಿದಾಗೆಲ್ಲ, 'ತಮ್ಮಣ್ಣ, ಅದು ಸಣ್ಣಕ್ಕಿರಬೇಕಾದ್ರೆ.. ಈಗ ಹಾಗಿದ್ದಿನಾ' ಅಂತ ನಾ ಅಂದರೆ ಆತ ನಕ್ಕು, 'ಆತು ಆತು.. ಈಗ ಒಂದು ಎಲೆ ಅಡಿಕೆ ಕೊಡಿ, ಸುಣ್ಣ ಹೊಗೆಸೊಪ್ಪು ಚೂರು ಜಾಸ್ತಿ ಹಾಕ್ಕೋಡಿ'. ಅಂದು ಅವತ್ತಿನ ಕಾಟಕ್ಕೆ ಇವತ್ತು ಮುಲಾಮು ಹಾಕಿಸಿಕೊಳ್ಳುತ್ತಾನೆ.
ಇದೆ ಹಠಕ್ಕೆ ಅನಿಸುತ್ತದೆ ಅಪ್ಪ ನನಗೆ ತೀರಾ ಹೊಡೆಯುತ್ತಿದ್ದುದು. ಒಮ್ಮೆ ತೋಟಕ್ಕೆ ಬರುತ್ತೇನೆ ಅಂತ ದುಂಬಾಲು ಬಿದ್ದಾಗ, ಕರೆದುಕೊಂಡು ಹೋಗಿ ಅಡಿಕೆ ಹಾಳೆಯಲ್ಲಿ.. ಮತ್ತೊಮ್ಮೆ ಪೆನ್ನು ಬರೆಯಲ್ಲ ಅಂತ ಅದನ್ನ ನೆಲದ ಮೇಲೆ ಗೀಚಿದಾಗ ಕೋಪಗೊಂಡ ಅಪ್ಪ ಮೊಸರು ಕಡೆಯುವ ಕುಡುಗೋಲು ಹಗ್ಗದಲ್ಲಿ ೮ ವರ್ಷದ ನನ್ನ ಬೆನ್ನನ್ನು ಸುಲಿದಿದ್ದರು.. ಮಧ್ಯೆ ಬಂದು ಅಜ್ಜಿ, ನಿನಗೆ ಮಕ್ಕಳೆಂದರೆ ಅರ್ಥವೇ ಗೊತ್ತಿಲ್ಲವೇ ಎಂದಾದ್ದು ನೆನೆದಾಗ ಇಂದು ಸಹ ಕಂಗಳು ತುಂಬುತ್ತವೆ. ಅಜ್ಜಿ ನನ್ನನು ಅದೆಷ್ಟು ಹಚ್ಚಿಕೊಂಡಿದ್ದಳು. ನನಗೆ ಪೆಟ್ಟು ಬಿದ್ದಾಗಲೆಲ್ಲ, ಅಪ್ಪಿ ಕಾಪಾಡಿದ್ದು ನೆನೆಸಿಕೊಂಡರೆ ಹೇಳಲಿಕ್ಕಾಗದ ಒಂದು ತೃಪ್ತಿ. ಮಾನವೀಯತೆ, ಸಂಬಂಧಗಳು ಇದಕ್ಕೆಲ್ಲ ಎಷ್ಟು ಬೆಲೆಯಿತ್ತು ಅಂತಾನಿಸುತ್ತದೆ.
ಇಂದು ಕೂತು ಯೋಚಿಸಿದಾಗ, ಅಪ್ಪ ಅಂದು ಹೊಡೆದದ್ದಕ್ಕೆ ಒಂದು ಅರ್ಥವಿತ್ತು. ಅವತ್ತು ಹೊಡೆದದ್ದು ಇವತ್ತು ನಾನು ಎಂದಿಗೂ ನನ್ನತನ ಕಳೆದುಕೊಳ್ಳಬಾರದು, ತಪ್ಪು ದಾರಿ ಮಾತ್ರವಲ್ಲದೆ, ತಪ್ಪು ವ್ಯಕ್ತಿಗಳನ್ನು ಹೃದಯಕ್ಕೆ ಎಂದಿಗೂ ಬಿಟ್ಟುಕೊಳ್ಳಬಾರದು ಎಂಬುದಷ್ಟೆಯೇ ಆಗಿತ್ತು. ಅಂದು ಬಿದ್ದ ಬರೆ, ಬಾಸುಂಡೆಗಳ ನೋವು ಕಣ್ಣೀರಾಗಿ ಕೆನ್ನೆಯಪ್ಪಿ ಒಣಗುವುದರೊಳಗೆ ಮನಸ್ಸಿನ ನೋವು ಸಹ ಮಾಯ್ದು, ಅಪ್ಪನ ಮೇಲೆ ಅದೇ ಭಯ ಗೌರವ ಪ್ರೀತಿ ಉಕ್ಕುತ್ತಿತ್ತು.
ಜೀವನ ಕಲಿಸುವ ಪಾಠ ಅತಿ ಕ್ರೂರವಾದುದು.. ಅದು ತನ್ನ ಮಗನಿಗೆ ಬರಬಾರದು ಅಂತ ಅಪ್ಪ ಅಂದೇ ಯೋಚಿಸಿದ್ದರು ಅನಿಸುತ್ತೆ. ಅವತ್ತು ಅಷ್ಟು ಹೊಡೆದೂ ಬುದ್ಧಿ ಕಳಿಸಿದ್ಧರೂ ಒಂದು ವರ್ಷದ ಹಿಂದೆ, ಕಳೆದ ಒಂದು ವರ್ಷದ ಸಂಬಂಧ ಅವರು ಕಲಿಸಿದ್ದ ಪಾಠಕ್ಕೆ ಮಾಡಿದ ಅವಮಾನ ಅನ್ನುವುದು ಅವಳು ಸಾಬೀತುಪಡಿಸಿದ್ದಳು. ನಾನೇ ಎಲ್ಲ, ನನಗೆ ಸಮನಾದ ಹುಡುಗರಿಲ್ಲ.. ನಾನು ಬೆಳೆದು ಬಂದ ಕ್ರಮಕ್ಕೆ ತಕ್ಕದಾಗಿ ಯಾರೂ ಇಲ್ಲ, ನನ್ನ ಆಯ್ಕೆಯೇ ಅತ್ಯುತ್ತಮ ಅಂತ ಬೀಗುತ್ತಿದ್ದ ನನಗೆ ಜೀವನ ಕೊಟ್ಟ ಏಟು ಅಪ್ಪನ ಹೊಡೆತದಂತೆ ಬೆನ್ನಿನ ಮೇಲೆ ಬಾಸುಂಡೆ, ತೊಡೆಯ ಮೇಲೆ ಕಲೆ ಉಳಿಸಲಿಲ್ಲ.
ಹೃದಯವನ್ನೇ ಸುಟ್ಟು, ಜೀವನದ ಪಾಠ ಕ್ರೂರ ಅನ್ನುವುದು ಸಾಬೀತುಪಡಿಸಿತ್ತು. ಹುಡುಗಿ ನನ್ನಂತೆಯೇ ಇನ್ನೊಬ್ಬನ ಕೈ ಹಿಡಿದು ಕಿಲ ಕಿಲ ನಗುತ್ತಾ ನನ್ನ ಪಕ್ಕವೇ ನಡೆದು ಹೋಗಿದ್ದಳು.. ಇವತ್ತು ಸಮಾಧಾನ ಪಡಿಸಲು ಅಜ್ಜಿ, ಅಪ್ಪ, ಅಮ್ಮ ಯಾರೂ ಜೊತೆಯಿರಲಿಲ್ಲ.. ನಿಟ್ಟುಸಿರು ಮಾತ್ರ.. ವ್ಹಾಟ್ಸಪ್ನಲ್ಲಿ ಗೆಳತಿಗೆ, 'ನನ್ನ ಆಸೆಗಳು ಎಂದಿಗೂ ಅಪೂರ್ಣ' ಅಂತ ಸುದ್ಧಿ ರವಾನಿಸಿದ್ದೆ.