ಪಾಪಾತ್ಮಾ ... ಯಾರಿವನು

ಪಾಪಾತ್ಮಾ ... ಯಾರಿವನು

ಪಾಪಾತ್ಮಾ …..ಯಾರಿವನು - ?
ವೈದಿಕ ಸಂಪ್ರದಾಯದಲ್ಲಿ ದೇವತಾರ್ಚನೆಯ ನಂತರ ನಮಸ್ಕಾರ ಮಾಡುವಾಗ ಹೇಳಿಕೊಳ್ಳುವ ಶ್ಲೋಕ ಒಂದಿದೆ. ಅದರಲ್ಲಿ ’ಪಾಪಾತ್ಮಾ ಪಾಪಸಂಭವ’ ಎಂದಿದೆ. ಈ ಕುರಿತು ಕೆಲವರು ಆಕ್ಶೇಪಗಳನ್ನೆತ್ತಿರುತ್ತಾರೆ. ಈ ಆಕ್ಷೇಪಗಳನ್ನು ಒಪ್ಪಿದರೆ ನಮ್ಮ ಪೂರ್ವಜರು, ಈ ಶ್ಲೋಕವನ್ನು ರಚಿಸಿದವರು ಹಾಗೂ ಅದನ್ನು ಹೇಳಿಕೊಂಡವರು, ಹೇಳಿಕೊಳ್ಳುತ್ತಿರುವವರು ಮೂರ್ಖರು ಎಂದು ಒಪ್ಪಿಕೊಂಡಂತಾಗುತ್ತದೆ. ಇದನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡೋಣ.

ಒಂದು: ಮಾನ್ಯ …..ಕ್ಷಮಿಸಿ ಇವರಿಗೆ ಈ ಸಂಬೋಧನೆ ಸರಿಹೊಂದುವುದಿಲ್ಲ, ವೃದ್ಧನಾರೀ ಪತಿವ್ರತಾ ದೀಕ್ಷೆಯಲ್ಲಿರುವ ‘ಮಾಹಿ’ ಯವರು, ಇದೇನು ಅಪದ್ಧ ನಾವೇನು ರೇಪ್ ಗೆ ಹುಟ್ಟಿದವರೇ? ಎಂದು ತಮ್ಮ ಕೀಳು ಅಭಿರುಚಿಯನ್ನು ಪ್ರದರ್ಶಿಸಿದ್ದಾರೆ. ಬಿಡಿ ಈತನ ಈ ಗಳಹು ತಿರಸ್ಕಾರಯೋಗ್ಯವಾದ್ದು.

ಎರಡು: ಮಾನ್ಯ ಪ್ರಪ್ರಪ್ರ ಅವರು ಚಂದನ ವಾಹಿನಿಯಲ್ಲಿ ಪ್ರಶ್ನಿಗರೊಬ್ಬರಿಗೆ ಉತ್ತರಿಸುತ್ತಾ ಈ ‘ಪಾಪಾತ್ಮಾ ಪಾಪಸಂಭವ’ ಎನ್ನುವುದು ತಪ್ಪು. ನಮ್ಮ ಉಪನಿಷತ್ತು ಗಳಲ್ಲಿ ಜೀವರನ್ನು ಕುರಿತು ಹೇಳುವಾಗ ಅಮೃತಸ್ಯ ಪುತ್ರಾ: ಎಂದು ಸಂಬೊಧಿಸಲಾಗಿದೆ, ಈ ಪಾಪಾತ್ಮಾ ಎನ್ನುವುದು ಕ್ರೈಸ್ತ ಸಂಪ್ರದಾಯದವರು ಒಪ್ಪಿಕೊಂಡಿರುವ ವಿಚಾರ ನಾವೇನಿದ್ದರೂ ಪುಣ್ಯಾತ್ಮಾ ಪುಣ್ಯಸಂಭವ ಎಂದು ಹೇಳಿಕೊಳ್ಳಬೇಕು ಎಂದು ಅಪ್ಪಣೆ ಕೊಡಿಸಿದರು. ಇವರ ಮೇಲೆ ನನಗೆ ಗೌರವಭಾವನೆ ಇದೆ. ಆದರೂ….

ನನಗನ್ನಿಸುವುದು ಹೀಗೆ., ಬೇರೆ ವಿವರಣೆಗಳಿಗೆ , ಅಭಿಪ್ರಾಯಗಳಿಗೆ ಸ್ವಾಗತ ಸುಸ್ವಾಗತ:

ಈ ಶ್ಲೋಕ ರಚನೆಯಾದ ಕಾಲ ಯಾವುದು ಗೊತ್ತಿಲ್ಲ, ರಚಿಸಿದವರಾರು ಗೊತ್ತಿಲ್ಲ , ರಚಯಿತರ ಮನಸ್ಸಿನಲ್ಲಿ ಯಾವ ಭಾವವಿತ್ತು, ಯಾವ ವೇದನೆ ಇತ್ತು, ಯಾವಸಂವೇದನೆ ಇತ್ತೋ ಅರಿವಿಲ್ಲ. ‘ಪಾಪ’ ಹಾಗೂ ‘ಆತ್ಮ’ ಎಂಬ ಶಬ್ದಗಳಿಗೆ ಯಾವ ಅರ್ಥವಿಟ್ಟಿದ್ದರೋ ತಿಳಿದುಬರುವುದಿಲ್ಲ. ತೀಳಿಯದೇ ಹಳಿಯುವುದನ್ನು ಮಾತ್ರಾ ನಮ್ಮ ವರು ಬಿಟ್ಟಿಲ್ಲ !

ಆತ್ಮ ಎನ್ನುವುದು ಅವಿನಾಶಿ, ಅಸಂಗಿ, ಪುಣ್ಯ-ಪಾಪಗಳ ಲೇಪವಿಲ್ಲದ್ದು ಇತ್ಯಾದಿ ವಿವರಣೆಗಳು ಉಪನಿಷತ್ತಿನಲ್ಲಿದೆ, ಹೀಗಿರುವಾಗ ‘ಪಾಪಾತ್ಮಾ’ ಹೇಗಾದೀತು, ಇದು ಆಕ್ಷೇಪಣೆ. ಈ ಶ್ಲೋಕದಲ್ಲಿ ಹೇಳಿರುವ ‘ಆತ್ಮ’ ಶಬ್ದ ಆಧ್ಯಾತ್ಮಿಕ ವಿಚಾರದಲ್ಲಿ ಚರ್ಚಿಸಿರುವ ಆತ್ಮವಲ್ಲ. ಬದಲಾಗಿ ಆತ್ಮೊದ್ಧಾರ, ಆತ್ಮಹತ್ಯೆ, ಆತ್ಮೀಯ, ಆತ್ಮ ಸಾಕ್ಷೀ ಮುಂತಾದ ವ್ಯಾವಹಾರಿಕ ಪ್ರಪಂಚದಲ್ಲಿ ಬಳಕೆಯಲ್ಲಿರುವ ದೇಹ-ಬುದ್ಧಿ-ಮನಸ್ಸು ಸಹಿತವಾದ ವ್ಯಕ್ತಿತ್ವದ ಕುರಿತಾದದ್ದಿರಬಹುದು. ಆಯ್ತು ನಾವು ವೈಯಕ್ತಿವಾಗಿಯಾದರೂ ನಮ್ಮನ್ನು ನಾವು ಪಾಪಿಗಳೆಂದೇಕೆ ಕರೆದುಕೊಳ್ಳಬೇಕು ಎಂದರೆ, ನೈಚ್ಯಾನುಸಂಧಾನ ನಮ್ಮ ಭಕ್ತಿ ಪಂಥದಲ್ಲಿ ಒಪ್ಪಿತವಾಗಿರತಕ್ಕದ್ದೇ. ಅನೇಕ ಮಹಾತ್ಮರು ಸಾಧು ಸಂತರು, ಉಪನಿಷತ್ತುಗಳಲ್ಲಿ ಏನೇ ಹೇಳಿದ್ದರೂ ತಮ್ಮ ತಮ್ಮ ತಪ್ಪುಗಳನ್ನು , ಅವಿವೇಕವನ್ನು, ದೌರ್ಬಲ್ಯಗಳನ್ನು ಕುರಿತು ಆತಂಕ ಪಟ್ಟು ಪ್ರಾರ್ಥಿಸಿದ್ದಾರೆ, ಮೊರೆಇಟ್ಟಿದ್ದಾರೆ, ಹಾಡಿದ್ದಾರೆ, ಕ್ಷಮಾಯಾಚನೆ ಮಾಡಿದ್ದಾರೆ, ಈ ಮೂಲಕ ವಿನಯ ಸೌಜನ್ಯಗಳನ್ನು ತೋರಿದ್ದಾರೆ, ಇನ್ನು ಸಾಮಾನ್ಯರ ಪಾಡೇನು ? ಯಾವ ಪಾಪವನ್ನೂ ಮಾಡದವನಾವನಾದರೂ ಇದ್ದರೆ ಅಂತಹವನು ತನ್ನನ್ನು ಕುರಿತು ತಾನು ಪುಣ್ಯಾತ್ಮಾ ಪುಣ್ಯ ಸಂಭವ ಎಂದು ಹೇಳಿಕೊಳ್ಳಬಹುದು ಅಂಥವರಾರಾದರೂ ಇದ್ದರೆ ಮೊದಲ ಕಲ್ಲನ್ನೆಸೆಯಿರಿ.

ಇನ್ನು ‘ಪಾಪ’ ಶಬ್ದದಕುರಿತಾಗಿ ಸ್ವಲ್ಪ ವಿಚಾರಮಾಡುವುದಿದ್ದರೆ, ಪಾಪ ಎಂದರೆ ಸಾಧಾರಣವಾಗಿ ಅರ್ಥವಾಗುವ ಕೆಟ್ಟಕೆಲಸ, ಮೋಸ, ಹಿಂಸೆ, ಪರಪೀಡನಾ ಕೃತ್ಯಗಳು ಮಾತ್ರವಲ್ಲ ಅಥವಾ ಇಂಗ್ಲೀಷಿನ ‘ಸಿನ್’ ಮಾತ್ರವಲ್ಲ ಬದಲಾಗಿ ಪಾಪ ಶಬ್ದಕ್ಕೆ ಮೋಕ್ಷಕ್ಕೆ ಅಡ್ಡಿಯಾಗುವ ಯಾವುದೇ ಸಂಗತಿ ಎಂಬ ಅರ್ಥವೂ ಇದೆ. ಮೊಕ್ಖ್ಷಾಪೇಕ್ಷೆಯುಳ್ಳವರು ತ್ರಿಗುಣಗಳನ್ನೂ ಮೀರಬೇಕೆಂದಿದೆಯಲ್ಲವೆ ಹೀಗಾಗಿ ಬಂಧನಕ್ಕೆ ಕಾರಣವಾಗುವ ದುಷ್ಕರ್ಮಗಳಲ್ಲದವೂ, ಸತ್ಕರ್ಮಗಳೂ ಸಹ ‘ಪಾಪ’ ದ ಅಡಿಯಲ್ಲಿ ಸೇರುತ್ತವೆ ಎನ್ನಲಡ್ಡಿಯಿಲ್ಲ. ಈ ಅರ್ಥದಲ್ಲೂ ಪಾಪಾತ್ಮಾ ಪಾಪ ಸಂಭವ ಪ್ರಾರ್ಥನೆಯಲ್ಲಿ ಯಾವ ದೋಷವಿಲ್ಲ.

ಪುನರ್ಜನ್ಮದಲ್ಲಿ ನಂಬಿಕೆಯುಳ್ಳ ನಮಗೆ, ಆಪ್ಯಾಯಾಯಮಾನವಾದದ್ದು ಪುನರಾವೃತ್ತಿರಹಿತ ಬ್ರಹ್ಮಲೋಕ ಪ್ರಾಪ್ತಿ. (ಈ ಮೊಕ್ಷಾಪೇಕ್ಷೆ ಬೇರೆ ಬೇರೆ ಸಂಪ್ರದಾಯದಲ್ಲಿ ಬೇರೆ ಬೇರೆ ರೀತಿಯಲ್ಲಿ ವರ್ಣಿಸಲ್ಪಟ್ಟಿದೆ) ಕರ್ಮಫಲವನ್ನು ತ್ಯಾಗಮಾಡಲು ಬೇಕಾದ ಅಗತ್ಯಕರ್ಮಗಳನ್ನು ಮಾಡಲೆಂದೇ ಅಥವಾ ಕರ್ಮವನ್ನು ಸವೆಸಲೆಂದೇ ನಮಗೆ ಈ ಜನ್ಮ ಪ್ರಾಪ್ತಿಯಾಗಿದೆ ಎಂದು ನಂಬಿದರೆ, ನಾವು ‘ಪಾಪ ಸಂಭವ’ ರೇ ಅಲ್ಲವೇ ? ಹೀಗಾಗಿ ಈ ಮಾತಿಗೂ ಯಾವುದೇ ಆಕ್ಷೆಪಣೆ ಸಲ್ಲ

ಉಪನಿಷತ್ತಿನಲ್ಲಿ ಬರುವ ‘ಅಮೃತಸ್ಯ ಪುತ್ರಾ:’ ಎಂಬ ಸಂಬೋಧನೆಯನ್ನು ‘ಆ ಅರಿವು’ ಮೂಡುವಮುನ್ನ ಬಳಸುವುದು ನಮಗೆ ನಾವೇ ಆರೋಪಿಸಿಕೊಳ್ಳುವುದು ಆಶಾಡಭೂತಿತನ ವಾದೀತು ಅಷ್ಟೆ. ‘ಎನ್ನ ದೇಹವೇ ದೇಗುಲ’ಎಂಬ ವೈದಿಕ ಪ್ರಾರ್ಥನೆ ಕೂಡ ಬಸವಣ್ಣ ನಂಥವರಿಗೆ ಸಲ್ಲಬಹುದು ಏಷಣಾತ್ರಯ ಬದ್ಧ ಸಾರ್ವಜನಿಕರಿಗಲ್ಲ. ಸಾಧನೆಯ ಹಾದಿಯಲ್ಲಿ ಒಂದು ಮಟ್ಟದ ಸಿದ್ಧಿಯನ್ನು ಗಳಿಸಿದವರಲ್ಲದೆ ಇತರರು ‘ಸೋಹಂ’ ಎಂದೋ ‘ಅಹಂ ಬ್ರಹ್ಮಾಸ್ಮಿ’ ಎಂದೋ ಹೇಳಿಕೊಂಡು ತಿರುಗಿದರೆ ಅದು ಕೇವಲ ಅಹಂಕಾರ. ಸಿದ್ಢಪುರುಷರು ಈ ರೀತಿಯ ಬೋರ್ಡ್ ಹಾಕಿಕೊಂಡು ತಿರುಗುವುದಿಲ್ಲ. ಪುಣ್ಯಾತ್ಮಾ ಪುಣ್ಯಸಂಭವ ನಮ್ಮ ಗತಿ ಪಾಪಾತ್ಮಾ ಪಾಪ ಸಂಭವ ನಾವಿರುವ ಸ್ಥಿತಿ. ಅರಿಕೊಂಡರೊಳಿತು ನಮ್ಮ ಮಿತಿ. ಪುರುಸೊತ್ತಿದ್ದವರು ಈ ಕುರಿತು ವಿಚಾರ ಮಾಡಲಿ.

Rating
Average: 5 (1 vote)