ಪಾಪ-ಪುಣ್ಯ ಮತ್ತು ಹಣ

ಪಾಪ-ಪುಣ್ಯ ಮತ್ತು ಹಣ

ಡಾ. ತರಳಬಾಳು ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು ಮಾ. 2ರ  ’ವಿಜಯ ಕನಾಟಕ’ದಲ್ಲಿ ’ಪಾಪದ ಹಣ ಮತ್ತು ಪುಣ್ಯಕಾರ್ಯ’ ಎಂಬ ವಿಚಾರ ಪ್ರಚೋದಕ ಲೇಖನ ಬರೆದಿದ್ದಾರೆ. ಅದಕ್ಕೊಂದು ಪ್ರತಿಕ್ರಿಯೆ ಇಲ್ಲಿದೆ.
ಸ್ವಾಮಿಗಳೇ,
 ಓರ್ವ ’ವೃತ್ತಿನಿರತ ಸಂಸ್ಥಾನಪತಿ’ಯಾಗಿ ತಾವು ದಾನ-ದಕ್ಷಿಣೆ ಕುರಿತು ಪ್ರಜ್ಞಾಪೂರ್ವಕ ಮಾತುಗಳನ್ನಾಡಿರುವುದು (ವಿ. ಕ. ಮಾ. 2) ವಿಶೇಷ ಮತ್ತು ಅಭಿನಂದನಾರ್ಹ.
 ಹಣವನ್ನು "ಧನ" ಎನ್ನುವುದೂ ವಾಡಿಕೆ. "ಧನ" ಎನ್ನುವುದು ಸಕಾರಾತ್ಮಕ (Positive) ಗುಣ. ಈ ಅರ್ಥದಲ್ಲಿ ಹಣ ಎನ್ನುವುದು ಕರೆನ್ಸಿ ಕಟ್ಟುಗಳಿಗಿಂತಾ ಅದರಲ್ಲಿನ ವಿಶ್ವಾಸಾರ್ಹತೆ - Creditworthiness - ಗುಣವನ್ನೇ ಸೂಚಿಸುತ್ತದೆ. ಆದರೆ ಗುಣವಿಲ್ಲದ ಹಣಕ್ಕೆ ಶರಣಗಡಣವೂ, ಯೋಗಿ-ಸಂನ್ಯಾಸಿ-ಪೀಠವರೆಣ್ಯರುಗಳೆಲ್ಲಾ ಮುಗಿಬೀಳುವ ಈ ’ಯುಗಧರ್ಮ’ಕ್ಕೆ ಏನನ್ನಬೇಕು?
 ತಾವು ಮೊದಲನೇ ಉದಾಹರಣೆಯಲ್ಲಿ ಹೇಳಿರುವ ಕಾಮುಕ ಪಾಪಿಯ ದಾನ-ಧರ್ಮದ ಕತೆಯಲ್ಲಿ ಗೊಂದಲ ಇದೆ. ಪುತ್ರಿಯ ಮೇಲೆ ವ್ಯಭಿಚಾರ ನಡೆಸಿದ ಆ ಪಾಪಿಗೆ ಕಾನೂನಿನ ರೀತಿಯ ಶಿಕ್ಷೆಯಾದದ್ದೇನೋ ಸರಿ. ಆದರೆ ಅವನ ಕೋಟ್ಯಾಂತರ ಪೌಂಡ್ ಗಳಿಕೆಯ ಮೂಲ, ಈ ಅತ್ಯಾಚಾರವಾಗಿರಲಿಲ್ಲವಲ್ಲಾ? ಆ ಸಂಪತ್ತು, ಇತರ ’ಶ್ರೀಮಂತ’ರುಗಳಂತೆ, ಬಿಸಿನೆಸ್ಸು ವಗೈರೆ ’ನೀಯತ್ತಿ’ನ ಗಳಿಕೆಯೂ ಆಗಿದ್ದೀತಲ್ಲವೇ? ಬೇರೆಯವರ ’ದಾನ’ ಪಾಪದ್ದಲ್ಲವೆಂದಾದರೆ, ಈ ಹಣಕ್ಕೆ ಆ ’ಪಾಪ’ದ ಸೋಂಕು ಹೇಗೆ ಹತ್ತೀತು; ’ಧರ್ಮ ಸಂಸ್ಥೆ’ಗಳಲ್ಲಿ ಗೊಂದಲ ಉಂಟುಮಾಡೀತು?
 ಪಾನನಿರೋಧ ಚಳುವಳಿಗೆ ತಾವು ವಿರೋಧಿಸಿದ Liquor lobby ಹಣ, ದಾನ-ಧರ್ಮದ ಉದ್ದೇಶಕ್ಕಾಗಿ ಬಂದದ್ದಲ್ಲ; ಜಾಹಿರಾತಿಗಾಗಿ ಕೊಡಮಾಡಲ್ಪಟ್ಟಿದ್ದು. ಇದು ಕಂಪನಿಗಳ Cost of production ಭಾಗವೇ ಆಗಿರುತ್ತಿತ್ತು!
 ’ಅನ್ನದೊಳಗೊಂದಗುಳ, ಸೀರೆಯೊಳಗೊಂದೆಳೆಯ ಇಂದಿಂಗೆ ನಾಳೆಗೆಂದು’ ಕೂಡಿಡದ ಅಪರಿಗ್ರಹ ಸಂಸ್ಕೃತಿಯಿದ್ದೆಡೆಯಲ್ಲಿ ಅಪಾರ ರಾಶಿಯ ಹಣ ಒಬ್ಬಿಬ್ಬ ಖದೀಮರ ಬಳಿ ಸಂಗ್ರಹವಾಗುವುದಕ್ಕಾದರೂ ಅವಕಾಶವಿರುತ್ತದೆಯೇ; ಇಂತಹ ತಂಗಳ ಕಾಣಿಕೆಗೆ ಜೊಲ್ಲು ಸುರಿಸುತ್ತಾ ಕೈಯೊಡ್ಡುವ ತಿರುಕ ಸಂತತಿ, ಜಂಗಮ ಅಭಿಧಾನದಿಂದ ಗೌರವಾನ್ವಿತವಾಗಿ ದಿನೇ ದಿನೇ ಬೆಳೆಯುತ್ತಿರುತ್ತದೆಯೇ?
 ನಮ್ಮಲ್ಲಿ ಕಾಯಕ ಯಾರದೋ, ದಾಸೋಹ ಇನ್ನಾರಿಗೋ?! ದುಡಿಮೆಯಿಲ್ಲದ ದುಡ್ಡುಕೋರರು, ’ಬಿಟ್ಟಿ ಮಾಲು ತನಗೂ ಇರಲಿ, ತಮ್ಮಪ್ಪನಿಗೂ ಇರಲಿ’ ಎಂದು ದೋಚುತ್ತಾ, ಕಣ್ಣಿಗೆ ಕಾಣದ ಯಾವುದೋ ಧರ್ಮ-ಅಧ್ಯಾತ್ಮಗಳಿಗೆ ದ್ರೋಹ ಬಗೆಯುವುದಿಲ್ಲ; ಪ್ರತ್ಯಕ್ಷವಾಗಿ, ಸಾಂಖ್ಯಿಕವಾಗಿ ದೇಶದ ಆರ್ಥಿಕತೆಯನ್ನೇ ಅಪಮೌಲ್ಯಗೊಳಿಸುತ್ತಾರೆ!
 

Rating
No votes yet

Comments