ಪುಟ್ಟಿ ಗಂಡ ಹೊಟ್ಟೆ ತುಂಬಾ ಉಂಡ....

ಪುಟ್ಟಿ ಗಂಡ ಹೊಟ್ಟೆ ತುಂಬಾ ಉಂಡ....

ನನ್ನ ಪೋಸ್ಟ್ ಪೇಡ್ ಮೊಬೈಲ್ ಬಿಲ್ಲು ನೋಡಿ, ಏನೇ? ಇದು ಎಂದು ಕೇಳಿದೆ. ಅದಕ್ಕೆ.. ನನ್ನ ಮಡದಿ ಅದು ಮೊಬೈಲ್ ಬಿಲ್ಲು ಎಂದಳು. ನಾನೆಲ್ಲಿ ಹೇಳಿದೆ ಕಾಮನಬಿಲ್ಲು ಅಂತ ಎಂದೆ. ಕಾಮನ ಬಿಲ್ಲು ಅಲ್ಲಾರಿ ಅದು ಕಾಮಣ್ಣನ ಬಿಲ್ಲು ಇರಬಹುದು ಎಂದು ಹೀಯಾಳಿಸಿದಳು. ಓ ಅಂದ ಹಾಗೆ ಇವತ್ತು ಆಫೀಸ್ ನಿಂದ ಬರುವ ಸಮಯದಲ್ಲಿ ಕಾಮನಬಿಲ್ಲು ಸಿ ಡಿ ತೆಗೆದುಕೊಂಡು ಬನ್ನಿ, ನನಗೆ ಆ ಸಿನೆಮಾ ಅಂದರೆ ತುಂಬಾ ಇಷ್ಟ ಎಂದು ಮಾತು ಮರೆಸಲು ನೋಡಿದಳು. ನೀನು ಹೀಗೆ ಫೋನ್ ಯೂಸ್ ಮಾಡ್ತಾ ಇದ್ದರೆ, ನಾನು ಬಿಲ್ಲು ಹಿಡ್ಕೊಂಡು ಕಾಡಿಗೆ ಹೋಗಬೇಕಾಗುತ್ತೆ ಎಂದೆ. ನಾನೊಬ್ಬನೇ ಅಲ್ಲ ನಿನ್ನನ್ನು ಕರೆದುಕೊಂಡು ಹೋಗುತ್ತೇನೆ. ಶ್ರೀ ರಾಮನ ಜೊತೆ ಸೀತಾ ಮಾತೆ ಹೋಗಲಿಲ್ಲವೆ ಹಾಗೆ ಎಂದೆ. ಓ.. ನಾನು ಬರಲ್ಲಪ್ಪಾ ಬೇಕಾದರೆ ನೀವು ಹೋಗಿ ಬನ್ನಿ. ಬರುತ್ತಾ ಸ್ವಲ್ಪ ಸೀಬೆ ಹಣ್ಣು, ಕಾಯಿ ಪಲ್ಯ, ಟೊಮೇಟೊ, ಈರುಳ್ಳಿ ಇದ್ದರೆ ತೆಗೆದುಕೊಂಡು ಬನ್ನಿ ಎಂದಳು. ದುಡ್ಡು ಏನು? ಮೇಲಿಂದ ಉದುರುತ್ತಾ ಎಂದು ಕೇಳಿದೆ. ಕಾಡಿನಲ್ಲಿ ಹಾಗೆ ಬೆಳೆದಿರುತ್ತೆ ಕಿತ್ತು ಕೊಂಡು ಬನ್ನಿ ಎಂದಳು. ಲೇ.. ನಾನು ಮೊಬೈಲ್ ಬಿಲ್ಲು ಕಟ್ಟೋಕೆ ಕೇಳಿದ್ದು ದುಡ್ಡು ಎಂದೆ. ಕಾಡಿನಲ್ಲಿ ನೆಟ್‌ವರ್ಕ್ ಇರೋದು, ಅಷ್ಟಕ್ಕೇ.. ಅಷ್ಟೇ...ಮತ್ತೆ ಏಕೆ? ಬೇಕು ನಿಮಗೆ ಮೊಬೈಲ್ ಎಂದು ಹೇಳಿದಳು. ಅಷ್ಟರಲ್ಲಿ ಹಾಲು ಉಕ್ಕುತ್ತಾ ಇದೆ ಎಂದು ಹೇಳಿ, ಗಡಬಡಿಸಿ ಅಡುಗೆ ಮನೆಗೆ ಹೊರಟು ಹೋದಳು.

ಮತ್ತೆ ಕೆಲ ಸಮಯದ ನಂತರ ಕಾಫೀ ಕಪ್ ಜೊತೆ ಹಾಜರ ಆಗಿ, ನೋಡಿ ನಿಮ್ಮಿಂದ ಎಷ್ಟೊಂದು ಹಾಲು ಉಕ್ಕೀತು ಎಂದು ಬೈದಳು. ಹಾಲು ಉಕ್ಕಿದರೆ ಯಾರಾದರೂ ಸಂಭಂಧಿಗಳು ಮನೆಗೆ ಬರುತ್ತಾರೆ ರೀ.. ಎಂದಳು. ನಿನ್ನ ಕಡೆ ದುಡ್ಡು ಇದ್ದರೆ ಕೊಡು, ನನಗೆ ಮೊಬೈಲ್ ಬಿಲ್ಲು ಕಟ್ಟಬೇಕು ಎಂದೆ. ನನ್ನ ಹತ್ತಿರ ದುಡ್ಡು ಇಲ್ಲ, ನೀವೇ ಏನಾದರೂ ಮಾಡಿ ಎಂದಳು. ಮತ್ತೆ ಇನ್ನೊಮ್ಮೆ ನನ್ನ ಕೇಳದೇ, ನನ್ನ ಮೊಬೈಲ್ ಮುಟ್ಟಬೇಡ ಎಂದೆ. ನೀವು ವರ್ಷಕ್ಕೆ ಒಂದೇ ಸಾರಿ ತವರುಮನೆಗೆ ಕಳುಹಿಸಿದರೆ ನಾನೇನು ಮಾಡಬೇಕು. ಅದಕ್ಕೆ ದಿವಸ ಫೋನ್ ಮಾಡಿ ಮಾತಾಡುತ್ತೇನೆ ಎಂದಳು.ಮತ್ತಿನ್ನೇನು ತಿಂಗಳಿಗೆ ಒಂದು ಬಾರಿ ಹೋಗಬೇಕೆಂದಿರುವೆ ಏನು? ಎಂದೆ. ಈ ಬಿಲ್ ದುಡ್ಡಿನಲ್ಲಿ ನಾವು ಮೂರು ಬಾರಿ ನಿಮ್ಮ ಊರಿಗೆ ಹೋಗಿ ಬರಬಹುದಿತ್ತು ಎಂದೆ. ಈ ಬಾರಿ ಹೋಗಬೇಕಾದರೆ ನೀವು ಬನ್ನಿ ಎಂದಳು. ಲೇ..ss ಅದೊಂದು ಬಿಟ್ಟು ಬೇರೆ ಏನು ಬೇಕಾದರೂ ಕೇಳು ಎಂದೆ. ನೀವು ಏಕೆ ಬರಲ್ಲ, ಅದು ಹೇಳಿ ಎಂದಳು. ನಿನ್ನನ್ನ ಎಲ್ಲರೂ ಪುಟ್ಟಿ... ಪುಟ್ಟಿ.. ಎಂದು ಕರೆದರೆ ನನಗೆ ಕೆಟ್ಟ ಕೋಪ ಬರುತ್ತೆ ಎಂದೆ. ಅದಕ್ಕೇನೀಗ, ನನಗೆ ಪ್ರೀತಿಯಿಂದ ಹಾಗೆ ಕರೆಯುತ್ತಾರೆ ಅಷ್ಟೇ ಎಂದಳು. ಲೇ.. ಅದು ಅಲ್ಲ ನಿಮ್ಮ ಕಾಕ ನನಗೆ "ಪುಟ್ಟಿ ಗಂಡ ಹೊಟ್ಟೆ ತುಂಬಾ ಉಂಡ" ಎಂದು, ನನ್ನ ಹೊಟ್ಟೆ ನೋಡಿ ನಗುತ್ತಾ ನಿಂತರೆ ನನಗೆ ಕೋಪ ಬರುವದಿಲ್ಲವೇ ಎಂದೆ. ಓss.. ಅವರಾ.. ಅವರು ತುಂಬಾ ತಮಾಷೆಯ ಮನುಷ್ಯ, ವಾಮನ ಕಾಕ ದೂರದ ಸಂಭಂಧಿ. ಮತ್ತೆ ತಲೆ ನೋಡಿ ಮಕ್ಕಳಿಗೆ, ಇಲ್ಲೊಂದು ಜಾರು ಬಂಡೆ ಇದೆ ನೋಡಿ ಎಂದು ಹೇಳಿದರೆ ಎಂದು ಕೇಳಿದೆ. ನೀವು ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳಬೇಡಿ ಎಂದಳು.

ತಮಾಷೆ ಮಾಡೋಕೆ ಒಂದು ಮಿತಿ ಬೇಡ ಏನೇ? ಮತ್ತೆ ನನ್ನ ಲ್ಯಾಪ್‌ಟಾಪ್ ನೋಡಿ, ಎಲ್ಲರ ಮುಂದೆ ಅಳಿಯಂದಿರು ಯಾವತ್ತೂ ಚಿಕ್ಕ ಟಿ ವಿ ಹಿಡಿದುಕೊಂಡು ಎಲ್ಲ ಕಡೆ ಹೋಗುತ್ತಾರೆ ಎಂದು ಎಲ್ಲರಿಗೂ ಹೇಳಿದರೆ. ಮತ್ತೆ ನಾನು ಅಷ್ಟೇ ಮೊದಲು ರೇಡಿಯೋ ತೆಗೆದುಕೊಂಡು ಹೋಗುತ್ತಿದ್ದೆ ಎಂದೆಲ್ಲ ಹೇಳುವರು. ನಾನು ಪಾಪ ಅವರಿಗೆ ಏನೋ ಗೊತ್ತಿಲ್ಲ ಎಂದು ತಿಳಿಸಲು ಹೋದರೆ, ಎಲ್ಲರ ಎದಿರೂ ಇವೆಲ್ಲವೂ ಅಳಿಯಂದಿರ ಪೈಲ್ಸ್ (piles) ಎಂದು ತೋರಿಸಿ ನಕ್ಕರೆ ಕೋಪ ಬರುವದಿಲ್ಲವೇ ಎಂದೆ. ಮತ್ತೆ ನಿಮ್ಮ ಇಯರ್ ಫೋನ್ ಕೊಡಿ ಸ್ವಲ್ಪ ಮಾತಡಬೇಕು ಎಂದರೆ ಏನು ಹೇಳುವುದು ಎಂದೆ.

ಅಷ್ಟರಲ್ಲಿ ನಮ್ಮ ಮನೆಯಲ್ಲಿ ಮಾತ್ರ ಗುಡುಗು ಮಿಂಚಿನ ಮಳೆ ಶುರು ಆಯಿತು. ನನಗೆ ಯಾರಾದರೂ ಚಿರಾಪುಂಜಿ ಎಲ್ಲಿ? ಇದೆ ಎಂದು ಕೇಳಿದರೆ. ನಾನು ಹೇಳುವದು ಬೆಂಗಳೂರಿನ ಶ್ರೀನಿವಾಸನಗರದಲ್ಲಿ ಎಂದು. ಒಂದು ಮಳೆ ಇರುತ್ತೆ ಇಲ್ಲ ಚಿರಾಪುಂಜಿ ...ಚೀರಾಟದ ಪುಂಜಿ ಆಗಿರುತ್ತೆ.

ಅಷ್ಟರಲ್ಲಿ ಕಾಲಿಂಗ್ ಬೆಲ್ ಶಬ್ದ ಬಂತು. ಬಾಗಿಲು ತೆಗೆದೆ ಎದುರಿಗೆ ವಾಮನ ಮೂರ್ತಿ ನನ್ನ ಮಡದಿಯ ಕಾಕ ಎದುರಿಗೆ ಉದ್ಭವವಾಗಿದ್ದರು. ನಾನು ಏನು ಹೇಳಬೇಕೋ ತಿಳಿಯದಾಗಿತ್ತು. ಇಲ್ಲಿ ಬಾರೆ ಯಾರೋ.. ಅನ್ನುವ ಬದಲು ಯಾರು ಬಂದಿದ್ದಾರೆ ಎಂದು ಸುಧಾರಿಸಿ ಹೆಂಡತಿಗೆ ಉಲಿದೆ. ಅಳುವುದನ್ನು ನಿಲ್ಲಿಸಿ, ಓ... ಕಾಕ ಎಂದು ಬಂದು ನಮಸ್ಕರಿಸಿದಳು. ನೀವು ನಮಸ್ಕಾರ ಮಾಡಿ ಎಂದು ನನಗೆ ಹೇಳಿದಳು. ಅಷ್ಟರಲ್ಲಿ ಅವಳ ಕಾಕ ತನ್ನ ಕಾಗೆ ಬಾಯಿಂದ ಹೋಗಲಿ ಬಿಡು ಪುಟ್ಟಿ ಪಾಪ ಅಳಿಯಂದಿರ ಹೊಟ್ಟೆ ಅವರನ್ನು ಬಗ್ಗೋಕೆ ಬಿಡಲ್ಲ ಎಂದರು.

ಇನ್ನೂ ಏನೇನು ಕಾದಿದೆಯೋ ಆ ಭಗವಂತನೇ ಬಲ್ಲ....

******************************************************************************************************
ಎಲ್ಲರಿಗೂ ಹೊಸ ವರ್ಷದ ಪ್ರತಿ ಕ್ಷಣ ಸುಖ... ಶಾಂತಿ(ಹುಡುಗಿಯ ಹೆಸರು ಅಲ್ಲ...).... ನೆಮ್ಮದಿ ತರಲಿ. ಎಲ್ಲರ ಮುಖದಲ್ಲಿ ಮಂದಹಾಸ ಮೂಡಲಿ ಎಂದು ಆಶಿಸುತ್ತಾ..
ನಿಮ್ಮೆಲ್ಲರ ಪ್ರೀತಿಯ ಗೋಪಾಲ್ . ಮಾ. ಕುಲಕರ್ಣಿ.... ನನ್ನ ಹೆಂಡತಿ (ಹೆಂಡ ಶಬ್ದ ಕೇಳಿದರೆ ಉರಿದು ಬೀಳುತ್ತಾಳೆ) ಕ್ಷಮಿಸಿ ... ಮಡದಿ ತಪ್ಪಾಗಿ ತಿಳಿಯಬಾರದು ಎಂದು,
ಮತ್ತೊಮ್ಮೆ ಪ್ರೀತಿಯ(ಹುಡುಗಿಯ ಹೆಸರು ಅಲ್ಲ...) ಗೋಪಾಲ್ . ಮಾ. ಕುಲಕರ್ಣಿ :-):-)...
******************************************************************************************************

Rating
No votes yet

Comments