ಪುನರ್ಜನ್ಮ- ಭಾಗ ೧

ಪುನರ್ಜನ್ಮ- ಭಾಗ ೧

ಚಿತ್ರ

ಕಳೆದ (ಮತ್ಯಾವುದೋ?) ಜನ್ಮದಲ್ಲಿ ಸತೀಶನ ಹೆಂಡತಿಯಾಗಿದ್ದ ತಾರ ಈಗಿನ ಜನ್ಮದಲ್ಲಿ ನನ್ನ ಹೆಂಡತಿ ರೀಟಾಳೇ?? ಹೀಗೊಂದು ಪ್ರಶ್ನೆ ನಾಲ್ಕು ದಿನದಿಂದ ಜೋಸೆಫ್ನಿಗೆ ಇನ್ನಿಲ್ಲದಂತೆ ಕಾಡುತ್ತಿದೆಯಂತೆ. ಅಷ್ಟಕ್ಕೂ ಅವನಿಗೆ ಹೀಗೆ ಅನ್ನಿಸಲು ಕಾರಣವಾದರೂ ಏನು???
 
*********************************************************************************
 
ತಂದೆ-ತಾಯಿಯರಿಗೆ ಶಂಕರ ಹುಟ್ಟಿದ್ದು ಎರಡನೆಯವನಾಗೋ ಮೂರನೆಯವನಾಗೋ. ಅದೂ ಅವನಿಗೆ ಸರಿಯಾಗಿ ಗೊತ್ತಿಲ್ಲ. ಆ ವಿಷಯ ತಿಳಿದವರ್ಯಾರು ಈಗ ಇವನ ಜೊತೆಗಿಲ್ಲ. ಈಗೇನು, ಅಂತಹ ವಿಷಯ ಅರ್ಥವಾಗುವ ಬುದ್ದಿ, ವಯಸ್ಸು ಶಂಕರನಿಗೆ ಬಂದಾಗಲಿಂದ ಅವರ್ಯಾರು ಇಲ್ಲ. ಇವನ ಪಾಲಿಗೆ ಇಲ್ಲವೋ ಅಥವಾ ಅವರೇ ಈ ಜಗತ್ತಿನಲ್ಲಿ ಇಲ್ಲವೋ ಯಾವುದೂ ಶಂಕರನಿಗೆ ತಿಳಿಯದು. ಆಗಿನಿಂದಲೇ ಶಂಕರನಿಗೆ ಹುಟ್ಟು-ಸಾವುಗಳ ಬಗೆಗಿನ ಜಿಜ್ಞಾಸೆ ಶುರುವಾದದ್ದು.
 
ಶಂಕರ ಹುಟ್ಟಿದ್ದು ಕರ್ನಾಟಕದ ಯಾವುದೋ ಹಳ್ಳಿಯಲ್ಲಿ. ಅವರ ತಂದೆ ಶಾಲಾ ಮಾಸ್ತರ. ಇವನು ಕಂಡ ಹಾಗೆ ತಾಯಿ ಸದಾ ಬಾಣಂತಿ ಇಲ್ಲ ಬಸುರಿ. ಕೆಳ ಮಧ್ಯಮ ವರ್ಗದ ಅವಿಭಕ್ತ ಕುಟುಂಬ. ನಾಕಾರು ಚಿಕ್ಕಪ್ಪ-ದೊಡ್ದಪ್ಪಂದಿರು, ಇನ್ನು ಮದುವೆಯಾಗದ ಅತ್ತೆಯರು, ಗಂಡ ಸತ್ತು ತವರು ಮನೆ ಸೇರಿದ್ದ ದೊಡ್ಡತ್ತೆ, ಅವರ ಮಕ್ಕಳುಗಳು ಎಲ್ಲಾ ಸೇರಿ ಏನಿಲ್ಲವೆಂದರೂ ೩೦-೪೦ ಜನ. ಒಬ್ಬಬ್ಬರದು ಒಂದೊಂದು ಉದ್ಯೋಗ. ಎಲ್ಲರ ಉದ್ಯೋಗ ಶಂಕರನಿಗೆ ಜ್ಞಾಪಕವಿಲ್ಲ. ಒಬ್ಬ ಚಿಕ್ಕಪ್ಪ ದರ್ಜಿ, ಇನ್ನೊಬ್ಬ ಕಟ್ಟಿಗೆ ಹೊಡೆಯುವವ, ಮತ್ತೊಬ್ಬ ದೊಡ್ಡಪ್ಪ ಮುನ್ಸಿಪಾಲಿಟಿಲಿ ಏನೊ ಆಗಿದ್ದ. ಒಬ್ಬತ್ತೆ ಅಂಗನವಾಡಿಗೆ ಹೋದರೆ ಇನ್ನೊಬ್ಬತ್ತೆ ನರ್ಸ್. ಅವರುಗಳ ಮಕ್ಕಳು ಎಲ್ಲೆಲ್ಲಿ ಏನೇನು ಓದುತ್ತಿದ್ದರು, ಕೆಲವರು ಆಗಲೇ ಕೆಲಸಕ್ಕೆ ಸೇರಿದ್ದರು, ಎಲ್ಲಿ ಕೆಲಸ ಇದ್ಯಾವುದೂ ಶಂಕರನಿಗೆ ನೆನಪಿಲ್ಲ. ಅವರುಗಳ ಪೈಕಿ ಯಾರೋ ಒಬ್ಬರು ಮಂತ್ರವಾದಿಯ ಬಳಿಗೆ ಕರೆದೊಯ್ದಿದ್ದು ಶಂಕರನಿಗೆ ನೆನಪಿದೆ.
 
*********************************************************************************
 
ಜೋಸೆಫ್ ಹೇಳಿದ್ದು :
 
ಒಮ್ಮೆ ಕುಟುಂಬದವರೆಲ್ಲರೂ ಎಲ್ಲಿಗೋ ಹೊರಟಿದ್ದರು. ಜಾತ್ರೆ ಇರಬಹುದೇನೋ. ಪ್ರತಿವರ್ಷ ಹೋಗುತ್ತಿದ್ದರೇನೋ? ನೆನಪಿಲ್ಲ. ಆಗ ನನಗೆ ಆರೇಳು ವಯಸ್ಸು. ನೋಡಿದಷ್ಟೂ ಜನ ಸಾಗರ. ಎಲ್ಲೋ ಯಾರದೋ ಹಿಂದೆ ಹೆಜ್ಜೆ ಹಾಕುತ್ತಿದ್ದೆ. ನನ್ನವರು ಎಲ್ಲೋ ನಾನು ಎಲ್ಲೋ. ನಾನು ಕಳೆದು ಹೋದೆ. ಎಷ್ಟು ಅತ್ತರೂ ಹುಡುಕಿದರೂ ಯಾರೂ ಸಿಗಲಿಲ್ಲ. ಶಿಲುಬೆಯ ಪದಕ ಹಾಕಿದ್ದ ಬಿಳಿ ಬಟ್ಟೆ ಧರಿಸಿದ್ದ ಎಡಗೈಯಲ್ಲಿ ಯಾವುದೋ ಪುಸ್ತಕ ಹಿಡಿದ್ದಿದ್ದ ಒಬ್ಬರು ನನಗೆ ಚಾಕೊಲೇಟ್ ಕೊಡಿಸಿ ಎತ್ತಿಕೊಂಡು ಹೋದರು.
ನೀವ್ಯಾರೆಂದು ಕೇಳಿದ್ದಕ್ಕೆ ನಿನ್ನ ಮಾಮ ಎಂದಿದ್ದರು.
 
ಕುಡಿಯಲು ಬಾದಾಮಿ ಹಾಲು, ತಿನ್ನಲು ಬ್ರೆಡ್ಡು ಜಾಮು, ಮಾವಿನ ಹಣ್ಣು, ಹಲಸಿನ ಹಣ್ಣು, ಹಾಲು ಅನ್ನ ಎಲ್ಲಾ ಕೊಟ್ಟರು. ಹಸಿವಾಗಿದ್ದರಿಂದ ನಾನು ಎಲ್ಲಾ ತಿಂದೆ. ಮಾಮ ನಾನು ನಿಮ್ಮನ್ನ ನಮ್ಮನೇಲಿ ನೋಡೇ ಇಲ್ಲ, ಬನ್ನಿ ಮನೆಗೆ ಹೋಗೋಣ ಅಂದೆ. ಇಲ್ಲ ಇದೆ ನನ್ನ ಮನೆ, ನೀನು ಇಲ್ಲೇ ಇರಬೇಕು ಇನ್ನು ಮೇಲೆ , ನಿಮ್ಮಪ್ಪ ಹೇಳಿದ್ದಾರೆ ಅಂದರು. ನನಗೆ ಸಂತೋಷದ ಜೊತೆ ಕೊಂಚ ಬೇಸರವೂ ಆಯಿತೇನೋ. ಏನೂ ಮಾಡಲು ತಿಳಿಯದು. ದೊಡ್ಡವರು ಹೇಳಿದ ಹಾಗೆ ಕೇಳುವುದೇ ಸರಿ ಎಂದು ಮನೆಯಲ್ಲಿ ಹೇಳಿದ್ದರು. ಕಾರಿನಲ್ಲಿ ಕೂಡಿಸಿಕೊಂಡು ಎಲ್ಲಿಗೋ ಕರೆದುಕೊಂಡು ಹೋದರು. ರಾತ್ರಿಯಲ್ಲ ಕಾರಲ್ಲೇ ನಿದ್ದೆ ಮಾಡಿದ ನೆನಪು.
 
ಬೆಳಗ್ಗೆ ಆದಾಗ ಯಾರೋ ಎತ್ತಿಕೊಂಡು ಹೋಗಿ ಸ್ನಾನ ಮಾಡಿಸಿ ಒಳ್ಳೆ ಬಟ್ಟೆ ಹಾಕಿ ಕಾರಲ್ಲಿ ಕೂಡಿಸಿಕೊಂಡು ಕರೆದೊಯ್ದರು.
ದೊಡ್ಡ ಹಾಲಿನಲ್ಲಿ ನನ್ನ ಮಾಮ ಸ್ಟೇಜ್ ಮೇಲೆ ಮೇಣದ ಬತ್ತಿ ಹಿಡಿದು ನಿಂತಿದ್ದರು. ಸುಮಾರು ಜನ ಸೇರಿದ್ದರು. ಎಲ್ಲರೂ ಪುಸ್ತಕ ಹಿಡಿದು ಏನೇನೋ ಓದಿದರು. ಆಮೇಲೆ ನನ್ನನ್ನು ಮಾಮನ ಬಳಿ ಕರೆದೊಯ್ದರು. ತಲೆಗೆ ನೀರು ಚುಮುಕಿಸಿ, ದೊಡ್ಡ ಶಿಲುಬೆಯನ್ನು ತಲೆಗೆ ತಾಕಿಸಿ, ನಿನ್ನ ಹೆಸರು ಜೋಸೆಫ್ ಅಂದರು. ಇಲ್ಲ ಇಲ್ಲ ನಾನು ಶಂಕರ ಅಂದೆ. ನಿನ್ನೆ ತನಕ ಶಂಕರ, ಇವತ್ತಿಂದ ಜೋಸೆಫ್ ಅಂದರು. ಅಮ್ಮನನ್ನು ಕೆಲವರು ಶಾರದ ಕೆಲವರು ಸೀತಾ ಅಂತ ಕರಿತಿದ್ದುದು ನೆನಪಾಗಿ, ಇದು ಹಾಗೇನಾ? ಅಂದೆ. ಮಾಮ ನಕ್ಕು ತಲೆಯಾಡಿಸಿದರು. ಆಮೇಲೆ ನನ್ನ ಕುತ್ತಿಗೆಗೊಂದು ಶಿಲುಬೆಯಿದ್ದ ಸರ ಹಾಕಿದರು.
ನನ್ನ ಹಾಗೆ ಐದಾರು ಹುಡುಗ ಹುಡುಗಿಯರಿಗೂ ಹಾಗೆ ಮಾಡಿದರು. ಎಲ್ಲರಿಗೂ ಸುಮಾರು ನನ್ನ ವಯಸ್ಸೇ. ಶಿವಕುಮಾರ ಶಿಜು ಆದ, ನಯನ ಅಡೆನ ಆದಳು, ಮಲ್ಲನಗೌಡ ಅಂತೋಣಿ ಆದ, ನಂದಿನಿ ಡನೆಲ್ಲೆ ಆದಳು. ಇನ್ನು ಏನೇನೋ .. ಸರಿಯಾಗಿ ನೆನಪಿಲ್ಲ. ಅದಾಗಿ ಕೆಲ ದಿನ ನಾನು ನಮ್ಮ ಹಳೆ ಹೆಸರು - ಹೊಸ ಹೆಸರು ಸರಿಯಾಗಿ ಹೇಳುವ ಆಟ ಆಡುತ್ತಿದ್ದೆವು. ಕ್ರಮೇಣ ನಮಗೂ ಮತ್ತೊಬ್ಬರ ಹಳೆ ಹೆಸರುಗಳು ಮರೆಯಲು ಶುರುವಾಯಿತು.
                                                                                                                          ಮುಂದುವರೆಯುವುದು ..... 

Rating
No votes yet