ಪುಸ್ತಕನಿಧಿ:ನಾಟಕ ಪಂಚರಾತ್ರ
ಭಾಸನ ನಾಟಕವಾದ 'ಪಂಚರಾತ್ರ'ವು ಗದ್ಯ ಪದ್ಯಗಳಿಂದ ಕೂಡಿದ್ದುದರಿಂದ ತಿಳಿದುಕೊಳ್ಳಲು ಸುಲಭವಾಗಲಿ ಎಂದು ಒಬ್ಬರು ಪೂರ್ತಿ ಗದ್ಯದಲ್ಲಿ ನಾಟಕವನ್ನು ಬರೆದಿದ್ದಾರೆ. ಇದು ನನಗೆ archive.org ತಾಣದಲ್ಲಿ ಸಿಕ್ಕಿತು.
ಸುಮಾರು 90 ಪುಟಗಳ ಈ ನಾಟಕದಲ್ಲಿ ಮಹಾಭಾರತದ ಸಂಗತಿ ಇದೆ. ಪಾಂಡವರು ವಿರಾಟ ರಾಜನ ಆಸ್ಥಾನದಲ್ಲಿ ಮಾರು ವೇಷದಿಂದ ತಮ್ಮ ವನವಾಸದ ಅಜ್ಞಾತವಾಸದ ಸಮಯವನ್ನು ಕಳೆಯುತ್ತಿರುವರು.
ಅತ್ತ ದ್ರೋಣನು ದುರ್ಯೋಧನನಲ್ಲಿ ಪಾಂಡವರ ರಾಜ್ಯವನ್ನು ಅವರಿಗೆ ಮರಳಿಸಲು ಹೇಳುವುದು. ಆಗ ದುರ್ಯೋಧನನು ಒಂದು ಶರತ್ತನ್ನು ಹಾಕುವನು. ಅದು ಏನೆಂದರೆ ಐದು ದಿನಗಳ ಸಮಯದಲ್ಲಿ ಪಾಂಡವರ ಪತ್ತೆ ಆಗಬೇಕು.
ಅದಕ್ಕಾಗಿ ದ್ರೋಣ ಹಾಗೂ ಭೀಷ್ಮರು ಒಂದು ಉಪಾಯ ಮಾಡುತ್ತಾರೆ. ಅದರ ಪ್ರಕಾರ ವಿರಾಟನ ಗೋವುಗಳನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುತ್ತಾರೆ. ಈ ಸೈನ್ಯದಲ್ಲಿ ಅಭಿಮನ್ಯು ಕೂಡ ಕೌರವರ ಪರವಾಗಿ ಇರುತ್ತಾನೆ.
ಗೋವುಗಳನ್ನು ರಕ್ಷಿಸಲು ವಿರಾಟನ ಮಗ ಉತ್ತರಕುಮಾರನು ಬೃಹನ್ನಳೆಯ ವೇಷದಲ್ಲಿರುವ ಅರ್ಜುನನನ್ನು ಸಾರಥಿಯಾಗಿ ಇಟ್ಟುಕೊಂಡು ಯುದ್ಧ ಮಾಡಲು ಬರುತ್ತಾನೆ. ಆಗ ಅರ್ಜುನನು ಯುದ್ಧದಲ್ಲಿ ಸಹಾಯ ಮಾಡುತ್ತಾನೆ. ಇತ್ತ ಅಭಿಮನ್ಯುವನ್ನು ಮಾರುವೇಷದಲ್ಲಿರುವ ಭೀಮನು ಬರಿಗೈಯಲ್ಲಿ ಬಂದು ಬಂಧಿಸಿಕೊಂಡು ಹೋಗುವನು.
ಹೀಗಾಗಿ ಪಾಂಡವರ ಪತ್ತೆಯು ನಿಗದಿತ ಸಮಯದಲ್ಲಿ ಆಗಿ ಕೊಟ್ಟ ಮಾತಿನಂತೆ ದುರ್ಯೋಧನನು ಪಾಂಡವರ ರಾಜ್ಯವನ್ನು ಪಾಂಡವರಿಗೆ ಮರಳಿ ಕೊಡುವನು.
ಇದು ಕಥೆಯ ಹಿನ್ನೆಲೆ. ಇಲ್ಲಿ ನನ್ನ ಗಮನ ಸೆಳೆದ ಸಂಭಾಷಣೆಗಳು ಇವು:
1) ಗಳಿಸಿದ ಹಣವನ್ನು ದಾನ ಮಾಡಿ ಮಕ್ಕಳಿಗೆ ಹಣ ಗಳಿಸುವ ಮತ್ತು ಬದುಕುವ ರೀತಿಯ ಸಾಧನೆಯನ್ನು ಮಾತ್ರ ಬಿಡಬೇಕು.
2) ಕರ್ಣನು ದುರ್ಯೋಧನನಿಗೆ ಹೇಳುತ್ತಾನೆ: ರಾಜ್ಯವನ್ನು ಪಾಂಡವರಿಗೆ ಕೊಡುವುದು ನಿನಗೆ ಬಿಟ್ಟಿದ್ದು, ಆದರೆ ಯುದ್ಧ ಪ್ರಸಂಗ ಬಂದರೆ ನಿನ್ನ ನೆರವಿಗೆ ಬರುವುದು ನನ್ನ ಕರ್ತವ್ಯ.
3) ವಿರಾಟನು ಹೇಳುವುದು - ಆ ಯುಧಿಷ್ಠಿರನು ಬೇಕಾದರೆ ಕ್ಷಮಿಸಬಹುದು, ನಾನು ಕ್ಷಮಿಸುವವನಲ್ಲ.
ಆಗ ಒಂದು ಪಾತ್ರವು ಹೇಳುವುದು - ಆ ಪಾಂಡವರು ಅನುಭವಿಸುವ ಕಷ್ಟ ಈಗ ಫಲವನ್ನು ಕಂಡಿದೆ. ಆ ಯುಧಿಷ್ಠಿರನ ಕ್ಷಮಾಗುಣ ವು ನಾಣ್ಣುಡಿ ಆಯಿತು.
4) ಯುದ್ಧದಲ್ಲಿ ಸೋತ ವಿರಾಟ ಮಹಾರಾಜನು ಭೀಷ್ಮರನ್ನು ಪೂಜ್ಯ ಗಂಗಾಪುತ್ರ ಎಂದು ಸಂಭೋಧಿಸುವನು. ಆಗ 'ಅಪಮಾನಿತನಾದರೂ ರಾಜನು ಮರ್ಯಾದೆ ಮೀರಲಿಲ್ಲ' ಎಂಬ ಮೆಚ್ಚುಗೆಯನ್ನು ಅವನು ಗಳಿಸುವನು.
5) ರೂಪವಾಗಲಿ ಕುಲವಾಗಲಿ ಮುಖ್ಯವಲ್ಲ; ಮಹಾತ್ಮರು ತಮ್ಮ ಕಾರ್ಯದಿಂದಲೇ ತಿಳಿದುಬರುವರು.
6) ಉತ್ತಮರನ್ನು ನೀಚ ಜನರು ಹೆಸರು ಹಿಡಿದು ಕರೆಯುವರು.
7) ಅಭಿಮನ್ಯು - ಸ್ವಂತ ಸಾಹಸವನ್ನು ಹೊಗಳಿಕೊಳ್ಳುವುದು ನಮ್ಮ ಕುಲಧರ್ಮ ಅಲ್ಲ.
8) ಆಯುಧ ರಹಿತನಾಗಿ ಮಾರುವೇಷದಲ್ಲಿ ಬಂದ ಭೀಮನಿಗೆ ಸೆರೆ ಸಿಕ್ಕ ಅಭಿಮನ್ಯು ಹೇಳುವುದು - ( ಅವನಿಗೆ ಇವನು ಭೀಮಸೇನ ಎಂದು ಅರಿವಿಲ್ಲ) - ಆಯುಧರಹಿತನಾಗಿ ನೀನು ಬಂದ ಕಾರಣ ನಾನು ಸೆರೆ ಸಿಕ್ಕಬೇಕಾಯಿತು. ನನ್ನ ಪಿತನು ಅರ್ಜುನನಾಗಿರಲು ನಾನು ಆಯುಧರಹಿತರಾಗಿ ಬಂದವರ ಮೇಲೆ ಶಸ್ತ್ರ ಎತ್ತುವದೇ ?