ಈ ಕಾದಂಬರಿಯ ಕನ್ನಡದ ಆರಂಭಿಕ ಕಾದಂಬರಿಗಳಲ್ಲಿ ಒಂದು.ಸಾಕಷ್ಟು ಪ್ರಸಿದ್ಧಿಯನ್ನು ಪಡೆದಿದೆ. 1933 ರಲ್ಲಿ ನಾಲ್ಕನೇ ಆವೃತ್ತಿಯನ್ನು ಕಂಡ ಈ ಕಾದಂಬರಿಯನ್ನು ಇತ್ತೀಚೆಗೆ ಓದಿದೆ. pustaka.sanchaya.net ವೆಬ್ ತಾಣದಲ್ಲಿ 'ಪ್ರಬುದ್ಧ ಪದ್ಮನಯನೆ' ಎಂದು ಹುಡುಕುವ ಮೂಲಕ ಪುಸ್ತಕವನ್ನು ಓದಬಹುದು.
ಇದು ಒಂದು ರಮ್ಯ ಕಥಾನಕ. ಬಹುಶಃ ಮರಾಠಿ ಮೂಲದ್ದು. ಶೂರ ಹಾಗೂ ಸಜ್ಜನ ನಾಯಕ. ಸುಂದರಿ ನಾಯಕಿ (ಅವಳ ಹೆಸರೇ ಪದ್ಮನಯನೆ), ಋಷಿ, ರಾಕ್ಷಸ, ಗಿಳಿ ಎಲ್ಲ ಇಲ್ಲಿದ್ದಾರೆ. ಚೆನ್ನಾಗಿ ಓದಿಸಿಕೊಂಡು ಹೋಗುತ್ತದೆ.
ಅಲ್ಲಲ್ಲಿ ನಾನು ಬರೆದಿಟ್ಟುಕೊಳ್ಳಬಹುದಾದ ಒಳ್ಳೆಯ ವಾಕ್ಯಗಳನ್ನು ನೋಡಿದೆ. ಅವುಗಳನ್ನು ಈ ಮುಂದೆ ಹಂಚಿಕೊಂಡಿದ್ದೇನೆ.
ನಿನ್ನ ಗುಣಗಳಿಗೆ ಮೆಚ್ಚಿ ಭಗವಂತನು ನನ್ನ ರೂಪದಿಂದ ನಿನಗೆ ದರ್ಶನ ಕೊಟ್ಟಿರಬಹುದು.
ಅವನು ವೃದ್ಧಾಪ್ಯದ ಮೂಲಕ ನಿರ್ವಾಣ ಹೊಂದಿದನು.
ಕಾಲಗತಿಯು ಒಂದೇ ಸಮ ಇರುವುದಿಲ್ಲ ತೀರ ಕೆಳಗೆ ಹೋದ ಕಾಲಚಕ್ರವು ಮೇಲಕ್ಕೆ ಬಂದೇ ಬರುವುದು. ಅದರಂತೆ ದುಃಖದಲ್ಲಿರುವ ನಾನು ಕಾಲಾಂತರದಲ್ಲಿ ಸುಖವನ್ನು ಹೊಂದಿಯೇ ತೀರುತ್ತೇನೆ.
ದುಃಖದಿಂದ ನಾನು ದಡ್ಡು ಬಿದ್ದಿದ್ದೇನೆ. ಇನ್ನು ಯಾವದಕ್ಕೂ ನಾನು ಹೆದರೆನು.
ಪಾಣಿಗ್ರಹಣವಾಗುವವರೆಗೆ ಪುರುಷ ಸ್ಪರ್ಶವು ನಿಂದ್ಯ.
ದೇವರಲ್ಲಿ ವಿಶ್ವಾಸವಿಟ್ಟು ಸಮಾಧಾನದಿಂದ ಇರು. ಇದೇ ಕಾಲವೇ ಕಡೆತನಕ ಇರುತ್ತದೆಂದು ತಿಳಿಯಬೇಡ. ಕ್ಷಣದಲ್ಲಿ ಉಪ್ಪರಿಗೆಯು ತಿಪ್ಪೆಯಾಗುತ್ತದೆ, ತಿಪ್ಪೆಯು ಉಪ್ಪರಿಗೆಯಾಗುತ್ತದೆ. ರಾವಣನ ವೈಭವವನ್ನು, ದೈವೀಸತ್ವವು ಮಂಗಗಳ ಕೈಯಿಂದ ಮಣ್ಣುಗೂಡಿಸಿ ಬಿಟ್ಟಿತು. ದಾರಿದ್ರದ ಪ್ರದರ್ಶನವಾದ ಸುದಾಮನ ಮುರಕು ಗುಡಿಸಲನ್ನು ಅದೇ ದೈವೀಸತ್ವವು ಬಂಗಾರದ ಪಟ್ಟಣದೊಳಗಿನ ರಾಜಮಂದಿರವಾಗಿ ಮಾಡಿತು.
ಸತ್ಕಾರ್ಯದಲ್ಲಿ ಶರೀರವನ್ನು ಸವೆಸಬೇಕಲ್ಲದೆ ಹಾಳುಚಿಂತೆಗೆ ಗುರಿಮಾಡಬಾರದು.
ನಿನ್ನ ಕುಲಕ್ಕೂ ವಂಶಕ್ಕೂ ಶೀಲಕ್ಕ ವಿದ್ಯೆಗೂ ವಯಸ್ಸಿಗೂ ಪ್ರಸಂಗಕ್ಕೂ ತಕ್ಕಂತೆ ನಡೆ.
ಮನುಷ್ಯನ ಸಂಸಾರ ಯಾತ್ರೆಗೆ ಕಟ್ಟಿದ ಬುತ್ತಿ ಯಾವುದು? ಕಾಲ್ಪನಿಕ ಸುಖವಲ್ಲವೇ? ಅಂದ ಬಳಿಕ ಸುಖವನ್ನು ಕಲ್ಪಿಸುತ್ತಾ ಆನಂದದಿಂದಿರು.
ಇಂಥ ಪ್ರಸಂಗದಲ್ಲಿಯೇ ಮನುಷ್ಯನ ಪರೀಕ್ಷೆ ಆಗುತ್ತದೆ.
ಅವನ ಬಾಳು ಮೂಗಿಲ್ಲದ ಮೋರೆಯಂತೆಯೂ ವಿನಯವಿಲ್ಲದ ವಿದ್ಯೆಯಂತೆಯೂ ಸದಾಚರಣೆ ಇಲ್ಲದ ವೇದಾಂತ ಜ್ಞಾನದಂತೆಯೂ ಅಮಂಗಲವಾಯಿತು.
ಲೋಕದೊಳಗೆ ಅವರವರ ತೆರದೊಳು ನಡೆವವ ಜಾಣ - ನಿಜಲಿಂಗ ಕವಿಗಳು ಹಾಗೆ ಹೇಳಿದ್ದಾರೆ.
ದೊರೆಯೆ, ಇಂಥ ಕರುಣಾಸ್ಪದವಾದ ಪ್ರಸಂಗದಲ್ಲಿ, ಯಾರ ಅಂತಃಕರಣವು ಕರಗಿ ನೀರಾಗಿ ಅದು ಕಣ್ಣೀರುಗಳ ದ್ವಾರದಿಂದ ಹೊರಬಿಳಲಿಕ್ಕಿಲ್ಲ! ಸರ್ವ ಸಂಗಪರಿತ್ಯಾಗಮಾಡಿದ ಮಹಾತ್ಮರು, ಆ ಕರಗಿದ ಅಂತಃಕರಣಕ್ಕೆ ತಮ್ಮ ಆತ್ಮ ಸಂಯಮನದ ಒಡ್ಡು ಹಾಕುವದರಿಂದ, ಆ ಕರುಣಾಜಲವು ಸಂಚಯಹೊಂದಿ ಹೊಂದಿ ವಿಚಿತ್ರಶಕ್ತಿಯನ್ನು ತಾಳಿ, ಅದು ಪರೋಪಕಾರದ ಕೃತಿಗಳನ್ನು
ಮಾಡುವದು! ಇನ್ನು ನೀನು ಸಾಮಾನ್ಯ ಜನರಂತೆ ಕಣ್ಣೀರು ಸುರಿಸುವದನ್ನು ಬಿಟ್ಟು, ಪದ್ಮನಯನೆಯ ಹಿತದ ಕೆಲಸಗಳನ್ನು ಮಾಡು. ಆಕೆಯ ಕಲ್ಯಾಣಕ್ಕಾಗಿ ಈಶ್ವರಾರಾಧನೆ, ಅತಿಥಿಸೇವೆ, ಸತ್ಪಾತ್ರದಾನ ಮೊದಲಾದವುಗಳು ದೊಡ್ಡ ಪ್ರಮಾಣದಿಂದ ನಡೆ ಯಲಿ. ಇಂಥ ಸತ್ತಿಯೆಗಳ ಪುಣ್ಯವೇ ರಾಜಪುತ್ರಿಯ ಕಷ್ಟ ನಿವಾರಣ ಮಾಡು ವದು. ಆಕೆಯ ಶೋಧಾರ್ಥವಾಗಿ ನಾಲ್ಕೂ ಕಡೆಗೆ ಸೇವಕರನ್ನು ಕಳಿಸು.
ಪ್ರಾಜ್ಞನ ಶೋಕವು ಲೋಕೋದ್ಧಾರಕ್ಕೆ ಕಾರಣವಾಗುವದು
ನೀನು ಅವನ ಆಶ್ರಯದಲ್ಲಿದ್ದು ಅವನ ದುಃಖವನ್ನು ಕಣ್ಣಿಂದ ನೋಡುತ್ತ ಕೂಡು ವದು ಯೋಗ್ಯವೆ?
ಸ್ತ್ರೀಯರು ಸಂಕಟದಲ್ಲಿರುವುದನ್ನು ನೋಡುವದು ಕ್ಷತ್ರಿಯರ ಶೀಲವಲ್ಲ. ತಮ್ಮ ಪ್ರಾಣವನ್ನು ಅರ್ಪಿಸಿಯಾದರೂ ಅವರ ಸಂಕಟವನ್ನು ದೂರ ಮಾಡುವರು.
ಬಂಧುಗಳಲ್ಲಿ ಪ್ರೇಮವು ಬಂಧುತ್ವದಿಂದ ಹುಟ್ಟುತ್ತದೆ. ಆದರೆ ಮಿತ್ರರಲ್ಲಿಯ ಪ್ರೇಮವು ಬಂಧುತ್ವದಿಂದ ಹುಟ್ಟುತ್ತದೆ ಬಂಧುತ್ವವೇ ಪ್ರೇಮದಿಂದ ಹುಟ್ಟುತ್ತದೆ. ಈ ಸಂಸಾರದಲ್ಲಿ ಪ್ರೇಮವು ಸುಖದ ಮೂಲಾಧಾರವಾಗಿರುವುದರಿಂದ ಮಿತ್ರನೇ ಹೆಚ್ಚಿನ ಬಂಧುವು .
ನನ್ನ ಬಹಿ:ಪ್ರಾಣವಾದ ಹೆಂಡತಿಯು
ಈ ಜಗತ್ತಿನಲ್ಲಿ ಮನುಷ್ಯರಾಗಿ ಹುಟ್ಟಿ ಈ ಜನ್ಮವನ್ನು ಸಾರ್ಥಕಗೊಳಿಸದೆ ವ್ಯರ್ಥವಾಗಿ ದೇಹವನ್ನು ನೀಗುವದು ಅಯೋಗ್ಯ.
ವಿಷಯೋಪಭೋಗದ ಹೊರತು ಬೇರೆ ಉದ್ಯೋಗವು ಇಲ್ಲದ್ದರಿಂದ, ನಾನು ಪದ್ಮನಯನೆ ಯೊಡನೆ ಕೆಲವು ವೇಳೆಯನ್ನು ಜಲಕ್ರೀಡೆಯಲ್ಲಿಯೂ, ಕೆಲವು ವೇಳೆಯನ್ನು ವೀಣೆ-ಜಲತರಂಗ ಮುಂತಾದ ವಾದ್ಯಗಳನ್ನು ಬಾರಿಸುವದರಲ್ಲಿಯೂ, ಕೆಲವು ವೇಳೆಯನ್ನು ಉದ್ಯಾನದಲ್ಲಿ ವಿಹರಿಸುವದರಲ್ಲಿಯೂ, ಕೆಲವು ವೇಳೆಯನ್ನು ಆಟಗಳಲ್ಲಿಯೂ ಕಳೆಯುತ್ತಿದ್ದೆನು.
ಮಾತಾ-ಪಿತೃಗಳ, ಹಾಗು ಪ್ರಿಯಳ ವಿಯೋಗದುಃಖಕ್ಕಾಗಿ ನೀನು ಪ್ರಾಣಕೊಟ್ಟರೆ, ನಿನ್ನ ಹಿತವನ್ನು ಮಾತ್ರ. ನೋಡಿದಂತೆ ಆಗುತ್ತದಲ್ಲದೆ, ಅನ್ಯರ ದುಃಖದ ನಿವಾರಣದ ಕಡೆಗೆ ನೀನು ಮನಸ್ಸು ಮಾಡಿದಂತೆ ಆಗುವದಿಲ್ಲ. ಸ್ವಂತದ ಹಿತವನ್ನು ಮಾತ್ರ ಸಾಧಿಸಿ ಕೊಳ್ಳುವವರು ನೀಚವರ್ಗದ ಜನರೊಳಗೆ ಸೇರಿಸಲ್ಪಡುತ್ತಾರೆ. ಪ್ರಾಣತ್ಯಾ ಗವು ನಿನ್ನ ಮಾತಾಪಿತೃಗಳ, ಇಲ್ಲವೆ ನಿನ್ನ ಪ್ರಿಯಳ ಸಮಾಗಮ ನಿಮಿತ್ತವಾ ಗಲಿ, ದರ್ಶನೋಪಾಯವಾಗಲಿ ಆಗುವದೊ?
ಯಾವ ಪ್ರಯತ್ನವನ್ನೂ ಮಾಡದೆ ಜೀವ ಕೊಡುವದು ಪೌರುಷವಲ್ಲ. ಯತ್ನ ಮಾಡಿಯೂ ಸಾಧ್ಯವಾಗದಿದ್ದರೆ, ಅಲ್ಲಿ
ಯಾವ ದೋಷವೂ ಇಲ್ಲ.
ಯತ್ನ ಮಾಡುತ್ತಿರುವದು ಪುರುಷಧರ್ಮವಾಗಿರುವದು.
ಒಬ್ಬರನ್ನೊಬ್ಬರು ಶಿಕ್ಷಿಸುವುದಕ್ಕೂ ಕ್ಷಮಿಸುವುದಕ್ಕೂ ಮನುಷ್ಯರು ಸ್ವತಂತ್ರರಲ್ಲ.
ಹಿಗ್ಗುವ ಪದಾರ್ಥವನ್ನು ಹರಿಯುವವರೆಗೂ ಜಗ್ಗಬಾರದು.
ತಿಳಿದವರು ಕಾರಣವಿಲ್ಲದೆ ತಮ್ಮ ಬಾಯಿಯಿಂದ ತಮ್ಮ ಸ್ತೋತ್ರವನ್ನು ಮಾಡಿಕೊಳ್ಳುವುದಿಲ್ಲ.
ಜಗತ್ತಿಲ್ಲಿ ಸರ್ವಸಮ್ಮತನಾದವನು ದೊರೆಯಲಾರನು. ಈಶ್ವರಾಂಶರೂ ಈ ಪದವಿಯನ್ನು ಹೊಂದಲಿಲ್ಲ. ಕಮಲಾಕ್ಷನು ಗುಣಪೂರ್ಣನಿದ್ದರೂ ಸರ್ವ ಸಮ್ಮತನಿದ್ದಿಲ್ಲ; ಬಹುಜನ ಸಮ್ಮತನಾಗಿದ್ದನೆಂದು ಮಾತ್ರ ಹೇಳಬಹುದು.