ಪುಸ್ತಕನಿಧಿ

ಡಾ. ಸರಜೂ ಕಾಟ್ಕರ್  ಅವರ ಈ ಕಾದಂಬರಿಯು ಉಚಿತವಾಗಿ VIVIDLIPI ಎಂಬ App ನಲ್ಲಿ ಈ-ಬುಕ್ ರೂಪದಲ್ಲಿ ಇದೆ.  

 ಇದೇ ಕಥೆಯ ಚಲನಚಿತ್ರವನ್ನು ನೀವು ಹಿಂದಿ ಭಾಷೆಯಲ್ಲಿ ನೋಡಿರಬಹುದು. ಮರಾಠ ಸಾಮ್ರಾಜ್ಯದ  ಬ್ರಾಹ್ಮಣ ಪೇಶ್ವೆ ಬಾಜಿರಾಯನು ಶೂರ ಧೀರ. ಹಿಂದೂ ಸಾಮ್ರಾಜ್ಯದ ರಕ್ಷಣೆಗಾಗಿ ಖಡ್ಗ ಹಿಡಿದು ಕ್ಷತ್ರಿಯ ಕರ್ಮವನ್ನು ಮಾಡುತ್ತಿರುವನು. ಈತನಿಗೆ ಈಗಾಗಲೇ ಮದುವೆಯಾಗಿದ್ದರೂ ಮುಸ್ಲಿಂ ನರ್ತಕಿಯಾದ ಮಸ್ತಾನಿಯ ಪ್ರೇಮದಲ್ಲಿ ಬಿದ್ದು ಅವಳನ್ನು ಮದುವೆಯಾಗುವನು. ಅವಳಿಗೆ ಒಂದು ಗಂಡು ಮಗುವಾಗುವುದು. ಅವಳನ್ನು ಪುಣೆಯ ಸಂಪ್ರದಾಯಸ್ಥ ಬ್ರಾಹ್ಮಣ ಸಮಾಜ ಸ್ವೀಕರಿಸುವುದಿಲ್ಲ. 

ಮಸ್ತಾನಿಯು  ಇದೆಲ್ಲದರಿಂದ ನೊಂದು, 'ನಾನು ಮುಸ್ಲಿಮಳಾಗಿ ಹುಟ್ಟಿರುವುದು ತಪ್ಪೇ ' ಎಂದು ಕೇಳಿದರೆ 'ಇಲ್ಲ ನೀನು ಮುಸ್ಲಿಮಳಾಗಿ ಹುಟ್ಟಿದ್ದು ತಪ್ಪಲ್ಲ; ನಾನು ಬ್ರಾಹ್ಮಣನಾಗಿ ಹುಟ್ಟಿದ್ದು ತಪ್ಪು' ಎಂದ ಬಾಜೀರಾವ್.

ಪುಣೆಯ ಬ್ರಾಹ್ಮಣರು ತನ್ನನ್ನು ಬಹಿಷ್ಕರಿಸುವುದು ನೆನಪಿಸಿಕೊಂಡ. ತಾನು ಮಾಡಿದ ಅಪರಾಧವಾದರೂ ಏನು , ಒಬ್ಬ ಮುಸಲ್ಮಾನ ಸುಂದರಿಯನ್ನು ಇಟ್ಟುಕೊಂಡಿದ್ದು, ಅವಳ ಜೊತೆಗೆ ಮಾಂಸದೂಟ  ಮಾಡಿದ್ದು ಹಾಗೂ ಮದ್ಯಪಾನ ಮಾಡಿದ್ದು.
ನಾನು ಬ್ರಾಹ್ಮಣನಿದ್ದುದರಿಂದ ಇವುಗಳನ್ನು
ಮಾಡಬಾರದೆಂದು ಅವರ ಕಟ್ಟಳೆ, ತಾನು ಬ್ರಾಹ್ಮಣನಾಗಿದ್ದು ಖಡ್ಗವನ್ನು ಹಿಡಿದು ಶತ್ರುಗಳನ್ನು ಕೊಂದೆ, ಯುದ್ಧಗಳನ್ನು ಗೆದ್ದೆ.  ಖಡ್ಗವನ್ನು ಹಿಡಿಯುವುದು ಬ್ರಾಹ್ಮಣ ಧರ್ಮವಲ್ಲ, ಕ್ಷತ್ರಿಯನ ಧರ್ಮ .  ಆಗ ಇವರಾರೂ ಆಕ್ಷೇಪಿಸಲಿಲ್ಲ. ನಾನು ಆಗಲೇ ಬ್ರಾಹ್ಮಣ ಧರ್ಮವನ್ನು ತ್ಯಜಿಸಿ ಕ್ಷತ್ರಿಯನಾಗಿದ್ದೇನೆ. ಕ್ಷತ್ರಿಯ ಧರ್ಮದಂತೆ ನಾನು ಪರಸ್ತ್ರೀ ಗಮನ ಮಾಡಿರಬಹುದು, ಮಾಂಸ ತಿಂದಿರಬಹುದು ಮದ್ಯ ಕುಡಿದಿರಬಹುದು. ಈ ಪಂಡಿತೋತ್ತಮರಿಗೆ ಇದು ಏಕೆ ತಿಳಿಯಲಿಲ್ಲ, ನಮಗೇಕೆ ತೊಂದರೆ ಕೊಡುತ್ತಿದ್ದಾರೆ?  ನಾನು ಬೇರೆ ಯಾವ ಅಪರಾಧ ಮಾಡಿಲ್ಲ ಅಧರ್ಮವನ್ನು ಮಾಡಿಲ್ಲ, ಬದಲಾಗಿ ಧರ್ಮದ ರಕ್ಷಣೆ ಮಾಡಿದ್ದೇನೆ, ಇವರುಗಳ ಧರ್ಮವನ್ನು ದೇವಸ್ಥಾನಗಳನ್ನು ದೇವರುಗಳನ್ನು ಕಾಪಾಡಿದ್ದೇನೆ ಎಂದು ಆತನ ಯೋಚನೆ.

ಮುಂದೆ?

ಈ ಕಾದಂಬರಿಯು ಚೆನ್ನಾಗಿದೆ ಸುಲಭವಾಗಿ ಓದಿಸಿಕೊಂಡು ಹೋಗುತ್ತದೆ. 

ಈ ಕಾದಂಬರಿ  ಈ ತಿಂಗಳ ಕೊನೆಯವರೆಗೆ ಉಚಿತವಾಗಿ ವಿವಿಡ್ ಲಿಪಿ ಆಂಡ್ರಾಯ್ಡ್ ಆ್ಯಪ್ನಲ್ಲಿ ಲಭ್ಯವಿದೆ.  ಬೇಕಾದರೆ ಈಗಲೇ  ಓದಿಬಿಡಿ! . ಆಮೇಲೆ ನೀವು ಅದನ್ನು ಕೊಳ್ಳಬೇಕಾಗುತ್ತದೆ. 

ಹಿಂದೆ ಯಾವಾಗಲೋ ನಮ್ಮ ಹರಿಪ್ರಸಾದ್  ನಾಡಿಗರು ಈ ಕಿರು ಕಾದಂಬರಿಯ ಬಗ್ಗೆ ಹೇಳಿದ್ದರು. ರಸ್ಕಿನ್ ಬಾಂಡ್ ತುಂಬಾ ಒಳ್ಳೆಯ ಬರಹಗಾರ.  ತುಂಬಾ  ಸರಳ ಭಾಷೆ ಬಳಸುತ್ತಾರೆ.  ಅವರು ಬರಹದ ಓದು ತುಂಬಾ ಸುಖಕರ. ಆರ್ ಕೆ ನಾರಾಯಣ್ ಅವರ ಬರಹಗಳ ತರಹ ಹೇಳಬಹುದು . 

(ಅವರ  ' ರಸ್ಟಿಯ   ಸಾಹಸಗಳು' ಎಂಬ ಪುಸ್ತಕ ಕನ್ನಡದ ಅನುವಾದದಲ್ಲಿ ಓದಿದ್ದೆ.  Digital library of India ದಿಂದ ನಾನು ಇಳಿಸಿಕೊಂಡಿದ್ದ ಅದು ನನ್ನ ಬಳಿ pdf ರೂಪದಲ್ಲಿ ಇದೆ. ಬೇಕಾದವರು ನನ್ನನ್ನು  9920759710 ಸಂಖ್ಯೆಗೆ ಒಂದು message ಕಳಿಸುವ ಮೂಲಕ ಪಡೆಯಬಹುದು.)

the Blue umbrella ಅನ್ನು ಇವತ್ತು ಓದಿದೆ. ಸುಮಾರು 20 ಪುಟಗಳ ಕಿರು ಕಾದಂಬರಿ. ಹಿಂದಿಯಲ್ಲಿ ಚಲನಚಿತ್ರವೂ  ಆಗಿದೆ. ಆದರೆ ಓದಿನ ಸುಖವೇ ಬೇರೆ. ನಿಮಗೆ ಬೇಕಾದ ಗತಿಯಲ್ಲಿ - ನಿಧಾನವಾಗಿ,  ವೇಗವಾಗಿ ಬೇಕಾದರೆ ಹಿಂದೆ ಮುಂದೆ ಹೋಗಿ ಅಥವಾ ಪುಟ ಹಾರಿಸಿ, ಬಿಟ್ಟು ಬಿಟ್ಟು ಓದಬಹುದು. ನಿಮ್ಮ ಕಲ್ಪನೆಗೂ ತುಂಬಾ ಅವಕಾಶ ಇರುತ್ತದೆ.

ಈ ಕತೆಯಲ್ಲಿ   ಹಿಮಾಚಲ ಪ್ರದೇಶದ ಒಂದು ಹಳ್ಳಿ , ಸರಳ ಜನ, ಒಂದು ಹುಡುಗಿಗೆ ಒಂದು ಸುಂದರ ನೀಲಿಕೊಡೆಯು ನಗರದಿಂದ ಪಿಕ್ ನಿಕ್ ಗೆ ಬಂದವರಿಂದ ಇವಳಿಗೆ ಸಿಗುತ್ತದೆ,  ಅವಳ ಕೊರಳ ಲಾಕೆಟ್ ನ ಆಕರ್ಷಣೆಗೆ ಒಳಗಾದ ಒಬ್ಬ ಯುವತಿಯಿಂದ . ಆ ಛತ್ರಿಯು ಇವಳ ಅಚ್ಚುಮೆಚ್ಚು . ಇದು ಊರವರ  ಗಮನ ಸೆಳೆದು ಹೊಟ್ಟೆಕಿಚ್ಚಿಗೆ ಕಾರಣವಾಗುತ್ತದೆ. ಒಂದು ಸಣ್ಣ ಅಂಗಡಿಯ ಮಾಲೀಕ -  ರಾಂಭರೋಸೆ  ಅದನ್ನು ಹಣಕೊಟ್ಟು ಆ ಹುಡುಗಿಯಿಂದ  ಕೊಳ್ಳಲು ವಿಫಲನಾಗುತ್ತಾನೆ. ಅದರ ಕಳ್ಳತನಕ್ಕೂ ತನ್ನ ಕೆಲಸದ ಹುಡುಗನಿಗೆ  ಅನುಮತಿ ಕೊಡುತ್ತಾನೆ. ಪ್ರಯತ್ನ ವಿಫಲವಾಗುತ್ತದೆ.  ಎಲ್ಲರಿಗೂ ಸಂಗತಿ ಗೊತ್ತಾಗುತ್ತದೆ.  ಅವನನ್ನು ಊರಿನ ಜನ ದೂರ ಮಾಡುತ್ತಾರೆ.  ಅವನ ವ್ಯಾಪಾರ ಇಳಿದು ಹೋಗುತ್ತದೆ. 

ಮುಂದೆ ? ಮಹತ್ವದ ಭಾಗ ಇದೆ. ಆ ಹುಡುಗಿಯ ಛತ್ರಿ ಇವನದೂ ಆಗುವುದು ಹೇಗೆ?  ಎಲ್ಲರದೂ ಆಗುವುದು ಹೇಗೆ? ಎಲ್ಲರೂ ತಮ್ಮ ತಮ್ಮ ನಡತೆಯನ್ನು ತಿದ್ದಿಕೊಳ್ಳುವುದು ಹೇಗೆ?

ಇದನ್ನೆಲ್ಲ ನಾನು ಹೇಳುವುದಕ್ಕಿಂತ ನೀವೇ ಓದುವುದು ಒಳ್ಳೆಯದು. 

ಡಾ. ಸರಜೂ ಕಾಟ್ಕರ್  ಅವರ ಈ ಕಾದಂಬರಿಯು ಉಚಿತವಾಗಿ VIVIDLIPI ಎಂಬ App ನಲ್ಲಿ ಈ-ಬುಕ್ ರೂಪದಲ್ಲಿ ಇದೆ.  ಇದು ಚಲನಚಿತ್ರವೂ  ಆಗಿದೆ

ಇದು ಸ್ವಾತಂತ್ರ್ಯ ಸಂಗ್ರಾಮದ ಹಿನ್ನೆಲೆಯಲ್ಲಿ ತಂದೆ ಮಗ, ಮೊಮ್ಮಗನ ಕಥೆಯನ್ನು ಹೇಳುತ್ತದೆ. ಚೆನ್ನಾಗಿದೆ. ಬಹಳ ದೊಡ್ಡದೂ ಏನಲ್ಲ,   ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ.

ಏಕೋ ಇದನ್ನು ಓದಲು ಆರಂಭಿಸಿದೆ. ಏನಿದು ಈ ತಾರೀಕು ? ಇದು ರಾಷ್ಟ್ರೀಯ ಧ್ವಜದಿನ . ಏನು ಹಾಗಂದರೆ ? ಇಂಟರ್ ನೆಟ್ಟಿನಲ್ಲಿ ನೋಡಿದೆ . ಅನೇಕ ಕುತೂಹಲಕರ ಸಂಗತಿಗಳು ದೊರಕಿದವು. ಭಾರತ ದೇಶಕ್ಕೆ ಒಂದೇ ಧ್ವಜ ಬೇಕು ಎ೦ದು ಮೊದಲು ಯೋಚಿಸಿದ್ದು ಯಾರು ಗೊತ್ತೇ - ಆಶ್ಚರ್ಯ ! - ಬ್ರಿಟಿಶರು  1857 ರಲ್ಲಿ, 

ಆಮೇಲೆ ಅದರಲ್ಲೆಲ್ಲೋ 'ರಾಷ್ಟ್ರೀಯ ಸಪ್ತಾಹ'ದ ಉಲ್ಲೇಖ ಇದೆ. ಆ ಅವಧಿಯಲ್ಲಿ ಯಾರೇ ಮರಣ ಹೊಂದಿದರೂ ರಾಷ್ಟ್ರಧ್ವಜವನ್ನು ಅರ್ಧ ಮಟ್ಟದಲ್ಲಿ ಹಾರಿಸುವುದಿಲ್ಲವಂತೆ. ಏನಿದು ರಾಷ್ಟ್ರೀಯ ಸಪ್ತಾಹ ಅಂತ ಹುಡುಕಲು ಹೋದರೆ - ಭಗವದ್ಗೀತೆಯ ಲೋಕ ಸಂಗ್ರಹ ದ ಕಲ್ಪನೆ ಎದುರಾಯಿತು. ಏನಿದು ಲೋಕ ಸಂಗ್ರಹ  ? ಅದೂ ಒಂದು ಅದ್ಭುತ ಕಲ್ಪನೆ. (ಆ ಬಗ್ಗೆ ನಾನು ಇನ್ನಷ್ಟು ತಿಳಿಯಬೇಕಿದೆ ) ಇವೆಲ್ಲವನ್ನು ನಿಮಗೆ ಆಸಕ್ತಿ ಇದ್ದರೆ ನೀವೇ ಕಂಡುಕೊಳ್ಳಬೇಕು.

301 ವರ್ಷಗಳ ಹಿಂದೆ 1719 ರಲ್ಲಿಡೇನಿಯಲ್ ಡೇಫೋ ಎಂಬಾತನು ಬರೆದ  ರಾಬಿನ್ಸನ್ ಕ್ರುಸೋ ಎಂಬ ಕಾದಂಬರಿ ಪ್ರಕಟವಾಯಿತು. ಅದರಲ್ಲಿ ಸಮುದ್ರಯಾನದಲ್ಲಿ ತೀವ್ರ ಆಸಕ್ತಿ ಹೊಂದಿದ್ದ ರಾಬಿನ್ಸನ್ ಕ್ರುಸೋ ಎಂಬ ಮನುಷ್ಯ ಸಮುದ್ರಯಾನ ಮಾಡುವಾಗ ಅವನ ನೌಕೆ ಅಪಘಾತಕ್ಕೆ ಸಿಲುಕಿ ಒಂದು ನಿರ್ಜನ ದ್ವೀಪದಲ್ಲಿ ಎಷ್ಟೋ  ವರ್ಷಗಳ ಕಾಲ ಏಕಾಕಿಯಾಗಿ ಬದುಕುವ ಪರಿಸ್ಥಿತಿ ಒದಗುತ್ತದೆ. ಆ ಕಾಲದಲ್ಲಿ ಅವನು ತನ್ನ ಅಗತ್ಯಗಳನ್ನು ಹೇಗೆ ಪೂರೈಸಿಕೊಂಡು ಬದುಕಿದನು ಎಂಬ ಸಾಹಸದ ಕಥೆ ಇದೆ. ಅದು ತುಂಬಾ ಜಗತ್ಪ್ರಸಿದ್ಧವಾದ ಕಾದಂಬರಿ. ಅದರ ಕನ್ನಡ ಅನುವಾದದ ಪುಸ್ತಕವನ್ನು ಈ ಮುಂದಿನ ಕೊಂಡಿ -  http://kanaja.in/ebook/index.php/2017-12-19-05-35-25/2017-12-20-10-34-13?tmpl=component  -   ಯಲ್ಲಿ ಇಳಿಸಿಕೊಂಡು ಓದಬಹುದು. ಇದನ್ನು ಅಬಾಲವೃದ್ಧರಾದಿಯಾಗಿ ಎಲ್ಲರೂ ಓದಬಹುದಾಗಿದೆ.  

ಮಹಾಭಾರತದಲ್ಲಿ ಏಕಲವ್ಯನ ಕಥೆ ತುಂಬಾ ಸಂಕ್ಷಿಪ್ತವಾಗಿದೆ.   ಆತನ ಭವ್ಯ ಜೀವನದ ದರ್ಶನವನ್ನು ನಮಗೆ ಕೈಲಾಸಂ ತಮ್ಮ 'ಪರ್ಪಸ್' ಎಂಬ ಇಂಗ್ಲಿಷ್ ನಾಟಕದ ಮೂಲಕ ಮಾಡಿಸುತ್ತಾರೆ. 

ನಾನು ಪರಿಚಯಿಸುತ್ತಿರುವ ಈ ಪುಸ್ತಕವು ಕೈಲಾಸಂ ಅವರು ಇಂಗ್ಲಿಷ್ನಲ್ಲಿ ಬರೆದಿರುವ  ಪರ್ಪಸ್  ಎಂಬ ನಾಟಕದ    'ಸಾರವಿಸ್ತಾರ' - .ಜಿ ಪಿ ರಾಜರತ್ನಂ ಅವರು ಮಾಡಿರೋದು. ಈ ಪುಸ್ತಕ ಇಲ್ಲಿ ಇದೆ-  https://archive.org/details/unset0000unse_y9a4/mode/2up

ಸಂಸ್ಕೃತದ ಕವಿಯಾದ ಭಾಸನು ಮಹಾಭಾರತ ರಾಮಾಯಣದ ಕಥೆಗಳನ್ನು ಸ್ವಲ್ಪಮಟ್ಟಿಗೆ ಬದಲಾಯಿಸಿದ್ದರೂ ಕೂಡ ಪಾತ್ರಗಳಿಗೆ ಅಪಚಾರವಾಗದಂತೆ ಎಚ್ಚರವಹಿಸಿದ್ದಾನೆ, ಅಷ್ಟೇಕೆ ಕೆಲವಡೆ ಮೂಲ ಪಾತ್ರಗಳ ಔನ್ನತ್ಯ ಇನ್ನು ಹೆಚ್ಚಾಗುವಂತೆ ಮಾಡಿದ್ದಾನೆ.  ಸಂಸ್ಕೃತದಲ್ಲಿ ಹಾಸ್ಯಕ್ಕೆ ಅವನೇ ಪ್ರವರ್ತಕ. ಆದ ಕಾರಣ ಭಾಸೋ ಹಾಸ: , ಕವಿತಾ ಕಾಮಿನಿಯ ಮುಗುಳುನಗೆ  ಎಂದು ಸಂಸ್ಕೃತದ ಮಟ್ಟಿಗೆ ಹೇಳಿದ್ದಾರೆ. ಹಾಗೆಯೇ ಕೈಲಾಸಂ ಕನ್ನಡದ ಹಾಸ.

ಕೈಲಾಸಮ್ ಅವರ ಪುರಾಣ ಪಾತ್ರಗಳು ವ್ಯಾಸ ವಾಲ್ಮೀಕಿಗಳ ತಪಸ್ಸಿದ್ಧಿಯ ಸಾಕ್ಷಾತ್ಕಾರಗಳು.

ಕೈಲಾಸಮ್ ಅವರ ಏಕಲವ್ಯ ತಂದೆಯನ್ನು ಕಳೆದುಕೊಂಡವನು.  ಅವನು ಮತ್ತು ಅವನ ತಾಯಿ ಆಹಾರಕ್ಕಾಗಿ ಪ್ರಾಣಿಗಳನ್ನು ಬೇಟೆಯಾಡದೆ ಕಾಡಿನಲ್ಲಿರುವ ಹಣ್ಣು-ಹಂಪಲುಗಳಿಂದ ಬದುಕಿದ್ದಾರೆ. ಅವನಿಗೆ ಜಿಂಕೆ, ಜಿಂಕೆ ಮರಿಗಳಲ್ಲಿ ಮೈತ್ರಿ ಉಂಟಾಯಿತು. ಆ ಜಿಂಕೆಗಳನ್ನು ಹಿಂಸಿಸಿ ಕೊಲ್ಲುತ್ತಿದ್ದ ತೋಳಗಳಲ್ಲಿ ದ್ವೇಷ ಉಂಟಾಯಿತು.  ಜಿಂಕೆಗಳ ಕುರಿತು ಕರುಣೆ ಉಂಟಾಯಿತು.  ಜಿಂಕೆಗಳನ್ನು ಕೊಲ್ಲುವುದು ತೋಳಗಳ ಹುಟ್ಟುಗುಣ, ಆದರೆ ತೋಳಗಳನ್ನು ಕೊಂದು ಜಿಂಕೆಗಳನ್ನು ರಕ್ಷಿಸುವುದು ಬೇಟೆಗಾರನಾದ ತನ್ನ ಹುಟ್ಟುಗುಣ ಎಂದುಕೊಂಡು ಜಿಂಕೆಗಳನ್ನು ತೋಳಗಳಿಂದ ರಕ್ಷಿಸಲು ಅವನಿಗೆ ಬಿಲ್ಲುವಿದ್ಯೆ ಕಲಿಯಬೇಕಾಯಿತು. 

ಆದರೆ ತಾಯಿಯು 'ನೀನು ಯಾರನ್ನಾದರೂ ಕೊಲ್ಲುವ ಮೊದಲು ಅವರಿಗೂ ನನ್ನ ಹಾಗೆ ತಾಯಿ ಇರುವುದನ್ನು ನೆನಪಿಸಿಕೋ ನಿನ್ನನ್ನು ಕಳೆದುಕೊಂಡರೆ ನನಗೆ ದುಃಖ ವಾಗುವ ಹಾಗೆ ಅವಳಿಗೂ ಆಗುತ್ತದೆ ಎಂದು ನೆನಪಿಟ್ಟುಕೋ' ಎಂದು ಕರುಣೆಯನ್ನು ಬೋಧಿಸುತ್ತಿದ್ದಳು.

ಅಲ್ಲೊಬ್ಬ ಋಷಿ ಇದ್ದ , ಅವನು ಆಶ್ರಮ ಪ್ರದೇಶವನ್ನು ಪ್ರವೇಶಿಸಿದ ತೋಳಗಳು ಜಿಂಕೆಗಳ ಮೇಲಿನ ದ್ವೇಷವನ್ನು ಬಿಟ್ಟು ಜಿಂಕೆ ಮರಿಗಳಿಗೆ ಹಾಲು ಕುಡಿಸುತ್ತಿದ್ದವು. ಇದಕ್ಕೆ ಆ ಋಷಿಯ ತಪಸ್ಸಿನ ಪ್ರಭಾವವೇ ಕಾರಣ ಎಂದು ತಾಯಿಯಿಂದ ಅರಿತುಕೊಂಡ ಏಕಲವ್ಯನು ತಾನು ಕೂಡ ಆ ಋಷಿಯಂತೆ ಪ್ರಭಾವಿ ಆಗಲು ಆಸೆಪಟ್ಟನು. ಅದು ನಿನಗೆ ಈ ಜನ್ಮದಲ್ಲಿ ಸಾಧ್ಯವಿಲ್ಲಪ್ಪ, ನೀನು ಬೇಡನಾಗಿ ಹುಟ್ಟಿದವನು, ಬೇಡನ ಸಹಜ ಗುಣಕ್ಕೆ ತಕ್ಕಂತೆ ನೀನು ತೋಳಗಳನ್ನು ಬಿಲ್ಲುವಿದ್ಯೆಯಿಂದ ಕೊಂದು ಜಿಂಕೆಗಳನ್ನು ಕಾಪಾಡುಬಲ್ಲೆ. ಮುಂದೊಂದು ಜನ್ಮದಲ್ಲಿ ಋಷಿಯಾಗಿ ಹುಟ್ಟಿ ಎಲ್ಲ ಪ್ರಾಣಿಗಳನ್ನು ಕಾಪಾಡಬಲ್ಲೆ, ಆದರೆ ಈ ಜನ್ಮದಲ್ಲಿ ತೋಳಗಳನ್ನು ಕೊಂದು ಜಿಂಕೆಗಳನ್ನು ಕಾಪಾಡುವುದು ನಿನ್ನ ಸಹಜ ಧರ್ಮ ಎಂದು ತಿಳಿಸಿದಳು.

ತಾನು ಈ ಜಗತ್ತಿನ ಎಲ್ಲಾ ಜಿಂಕೆಗಳನ್ನು ರಕ್ಷಿಸಲು ಎಲ್ಲಾ ತೋಳಗಳನ್ನು ಕೊಲ್ಲಲು ಶ್ರೇಷ್ಠ ಬಿಲ್ಲುಗಾರ ಆಗಬೇಕೆಂದು ಅವನು ಬಯಸಿದನು. ಅಂತಹ ವಿದ್ಯೆಯನ್ನು ಗುರುಮುಖದಿಂದ ಮಾತ್ರ ಕಲಿಯಲು ಸಾಧ್ಯ ಎಂದು ಹೇಳಿ
 ದ್ರೋಣಾಚಾರ್ಯರ ಬಳಿಗೆ ಕಳುಹಿಸಿದಳು.

ಹೀಗೆ ಇವನು ಉದ್ದೇಶವು ಸ್ವಾರ್ಥದ್ದಾಗಿರಲಿಲ್ಲ, ಪರಾರ್ಥ ದ್ದಾಗಿತ್ತು.

ಆದರೆ ಅರ್ಜುನನದು ತಾನೇ ಜಗತ್ತಿನ ಏಕೈಕ ಶ್ರೇಷ್ಠ ಬಿಲ್ಲುಗಾರ,  ಆಗಬೇಕೆಂದು  ಕೀರ್ತಿಯ ಸ್ವಾರ್ಥದ ಉದ್ದೇಶವನ್ನು ಹೊಂದಿದ್ದ.  

ಮತ್ತೆ ದ್ರೋಣಾಚಾರ್ಯ ? ಈತ ಬ್ರಾಹ್ಮಣ, ಅಧ್ಯಯನ ಅಧ್ಯಾಪನ ಇವನ ಧರ್ಮ, ತಾನು ಕಲಿತದ್ದನ್ನು ಇನ್ನೊಬ್ಬರಿಗೆ ಕಲಿಸಬೇಕೆಂದು ಇವನ ಗುರಿ. ಕರ್ಮಕ್ಕಾಗಿ ಕರ್ಮ ಮಾಡುವವನು ಈತ. ಇದರಿಂದ ತನಗಾಗಲಿ ಇತರರಿಗಾಗಿ ಆಗಲಿ ಏನು ಫಲ ಎಂದು ತಲೆಕೆಡಿಸಿಕೊಳ್ಳುವವನಲ್ಲ.

ಹೀಗೆ ನಮ್ಮ ಕರ್ಮದಲ್ಲಿ ಉದ್ದೇಶ ಉತ್ತಮವಾದದ್ದಾಗಿರಬೇಕು, ಉದಾತ್ತವಾಗಿರಬೇಕು.

ನೋವು ಯಾರಿಗೂ ತಪ್ಪಿದ್ದಲ್ಲ. ಮೃದು ಹೃದಯದವನು ಇತರರ ನೋವಿಗೆ ನೋಯುತ್ತಾನೆ, ನಿಷ್ಕರುಣಿಯು ತನ್ನ ನೋವಿಗೆ ನರಳುತ್ತಾನೆ. 

ಇಲ್ಲಿ ಏಕಲವ್ಯನ ಶ್ರೇಷ್ಠ  ಕರ್ಮ, ದ್ರೋಣನದು ಮಧ್ಯಮ ಕರ್ಮ, ಅರ್ಜುನನದು ಕೀಳು ಕರ್ಮ.

ಮತ್ತೆ ಭೀಷ್ಮನದು ? ಅವನು ಎಲ್ಲರಿಗೂ ಹೆಚ್ಚಿನವನು. ತನ್ನ ಕರ್ಮದ ಉದ್ದೇಶ ಅರಿಯನು. ಅದನ್ನು ದೇವರು ಮಾತ್ರ ಬಲ್ಲನು ಎಂದು ಅರಿತವನು. ಕರ್ಮದ ಫಲ ಅವನದು ಕರ್ಮ ಮಾತ್ರ ತನ್ನದು . ಉತ್ತು ಬಿತ್ತುವುದು ತನ್ನ ಕೆಲಸ,  ಕುಯಿಲು ಮಾತ್ರ ಆತನದು ಎಂಬ ತಿಳುವಳಿಕೆ ಆತನಿಗೆ ‌ಇದೆ.

ಕೃಷ್ಣನನ್ನು ಬಿಟ್ಟರೆ ಭೀಷ್ಮನಷ್ಟು ಎತ್ತರಕ್ಕೆ ಏರಿದ ವ್ಯಕ್ತಿ ಬೇರೆ ಇಲ್ಲವಂತೆ. 

( ಈ ಬರಹ ನಿಮಗೆ ಸರಿ ಇಲ್ಲ ಎನಿಸಿದರೆ ಮೂಲ ಪುಸ್ತಕವನ್ನು ಓದಿ, ನಾನು ಮಾಡಿದ ಸಂಗ್ರಹ ಸರಿಯಾಗಿರಲಿಕ್ಕಿಲ್ಲ, ನಮ್ಮ ಕೆಲಸದ ಉದ್ದೇಶದ ಕುರಿತಾದ ಈ ನಾಟಕದತ್ತ ಗಮನಸೆಳೆಯುವುದು ನನ್ನ ಉದ್ದೇಶ. ಅದು  ಸಾಧಿಸಿದರೆ ಸಾಕು!) 

ಈ ಕೃತಿಯು ಕೈಲಾಸಂ ಕೃತಿಗಳಲ್ಲಿ ಕಳಸವಂತೆ. ಇದು  ಇಂಗ್ಲೀಷ್ನಲ್ಲಿ ಇದ್ದ ಕಾರಣ ಸ್ವಲ್ಪ ಜನರ ಭಾಗ್ಯವನ್ನು  ಬಹುಜನರ ಭಾಗ್ಯವನ್ನಾಗಿ ಮಾಡುವ ಪ್ರಯತ್ನ ಜಿ.ಪಿ. ರಾಜರತ್ನಂ ಅವರದ್ದು. ಅವರ ಉದ್ದೇಶವು ಸ್ವಾರ್ಥದ್ದಲ್ಲ, ಪರಾರ್ಥದ್ದು, ಎಂಬುದನ್ನು ಗಮನಿಸಿ ! .

 

 ಕನ್ನಡದ ಶ್ರೇಷ್ಠ ನಾಟಕಕಾರ ಕೈಲಾಸಂ ಅವರು ಕೆಲವು ನಾಟಕಗಳನ್ನು ಇಂಗ್ಲೀಷ್ನಲ್ಲಿ ಬರೆದಿದ್ದಾರೆ.  ಒಂದು ನಾಟಕವನ್ನು ಕೀಚಕನ ಕುರಿತಾಗಿ ಇಂಗ್ಲೀಷಿನಲ್ಲಿ ಬರೆಯುವ ವಿಚಾರ ಇತ್ತು. ಅದರ ಕುರಿತು ಕೆಲವು ಸಂಗತಿಗಳನ್ನು ತಮ್ಮ ಆಪ್ತರೊಬ್ಬರಲ್ಲಿ ಹೇಳಿದ್ದರು. ಆ ನಾಟಕವನ್ನು ಬರೆಯುವ ಮುನ್ನವೇ ಅವರು ತೀರಿಕೊಂಡರು. ಮುಂದೆ ಆ ನಾಟಕವನ್ನು ತಮಗೆ ನೆನಪಿದ್ದ ಹಾಗೆ ಆಪ್ತರು ಇಂಗ್ಲಿಷ್ ನಲ್ಲಿ ಬರೆದರು. ಅದನ್ನು ಕನ್ನಡಿಗರಿಗೆ ತಲುಪಿಸುವ ಉದ್ದೇಶದಿಂದ ಜಿ ಪಿ ರಾಜರತ್ನಂ ಅವರು ಅನುವಾದಿಸಿದರು.  ಈ ಪುಸ್ತಕದ ಮುಖಪುಟವನ್ನು ಜೊತೆಯಲ್ಲಿನ ಚಿತ್ರದಲ್ಲಿ ನೋಡಬಹುದು. ಈ ಪುಸ್ತಕವು archive.org ನಲ್ಲಿ ನೀವು ಕೀಚಕ ಎಂದು ಹುಡುಕಿದರೆ ಸಿಗುತ್ತದೆ. 

ಇದು ಸುಮಾರು ನೂರು ಪುಟಗಳ ಚಿಕ್ಕ ಪುಸ್ತಕ. ಇದರಲ್ಲಿ ಕೀಚಕನ ಕುರಿತು ಕೈಲಾಸಮ್ ಅವರ ಹೊಸ ಕಲ್ಪನೆಗಳಿವೆ  ಇದರಲ್ಲಿ ಕೀಚಕನೇ ನಾಯಕ, ಒಳ್ಳೆಯವನು. ವಿರಾಟನಗರದ ಒಟ್ಟಾರೆ ಸಂಸ್ಕೃತಿಯ ಕುರಿತು ಒಳ್ಳೆಯ ಮಾತುಗಳಿವೆ.  ಸದ್ಯ ನಡೆಯುತ್ತಿರುವ ಎನ್ ಆರ್ ಸಿ /ಸಿ ಸಿ ಎ /ಎನ್ ಪಿ ಆರ್ ಮುಂತಾದ ನಾಗರಿಕತ್ವ ಕುರಿತಾದ ವಾದ ವಾಗ್ವಾದಗಳ ಬೆಳಕಿನಲ್ಲಿಯೇ ಇದನ್ನು ನೋಡಬಹುದು. ಇರಲಿ.

 

ಕೀಚಕನು ದ್ರೌಪದಿಯ ಸ್ವಯಂವರಕ್ಕೆ ಹೋಗಿದ್ದನು ಅವಳನ್ನು ನೋಡಿದ ತಕ್ಷಣ ಅವನಲ್ಲಿ ಒಲವು ಮೂಡಿತು. ಅವಳನ್ನು ಮದುವೆಯಾಗಲು ಬಿಲ್ಲುವಿದ್ಯೆ ಪರೀಕ್ಷೆ ಇತ್ತು. ಇವನು ಗದೆಯನ್ನು ಬಳಸುವಾತ . ಎಲ್ಲಾ ವಿಧಿಯಾಟ. ಉಪಾಯವಿಲ್ಲ ಎಂದುಕೊಂಡ.   ಮುಂದೆ ಬೇರೆ ಯಾರನ್ನೂ ಮದುವೆ ಆಗಲಿಲ್ಲ.  25 ವರ್ಷಗಳು ಕಳೆದು ಹೋದವು.  ಅನೇಕ ಯುದ್ಧಗಳನ್ನು  ಹಿಂದೆ ಗೆದ್ದ ಹಾಗೆ  ಇನ್ನೂ ಒಂದು ಯುದ್ಧ ಗೆದ್ದು ವಾಪಸ್ಸು ಬಂದಾಗ ತಂಗಿ ಸುದೇಷ್ಣೆಯು 
ಮದ್ಯವನ್ನು ತರಿಸಿಕೊಟ್ಟಳು.  ಆ ಮದ್ಯವನ್ನು  ಕೊಡಲು ಬಂದವಳು ಯಾರು ಅಂತೀರಿ ?  ದ್ರೌಪದಿ!  

ನೀವು ಆ ಪುಸ್ತಕವನ್ನು ಓದಲು ಅನುವಾಗುವಂತೆ ಹೆಚ್ಚೇನೂ ಬರೆಯುತ್ತಿಲ್ಲ.