ಪುಸ್ತಕನಿಧಿ : ಅರ್ಧ ಆದಿ ಪರ್ವದ ಓದು
ಇತ್ತೀಚೆಗೆ ಗೆಳೆಯರೊಬ್ಬರು ವ್ಯಾಸನ ಬಗೆಗೆ ಒಂದು ಪ್ರಶ್ನೆ ಕೇಳಿದರು. ಆಗ ಹಿಂದೆ archive.org ತಾಣದಿಂದ ಇಳಿಸಿಕೊಂಡ ಮಹಾಭಾರತದ ಆದಿಪರ್ವ ಓದಲಾರಂಭಿಸಿದೆ. ಈ ಆದಿ ಪರ್ವವು ಸುಮಾರು 350+ 350 ಪುಟಗಳ ಎರಡು ಭಾಗಗಳಲ್ಲಿ ಇದ್ದು ಇದನ್ನು ಪಂಡಿತ ದೇವಶಿಖಾಮಣಿ ಅಳಸಿಂಗಾಚಾರ್ಯರು ಬರೆದಿದ್ದಾರೆ. ಮೊದಲ ಭಾಗವನ್ನು ಓದುವಾಗ ನಾನು ಮಾಡಿಕೊಂಡ ಟಿಪ್ಪಣಿಗಳು ಇಲ್ಲಿವೆ.
ನೈಮಿಷಾರಣ್ಯದಲ್ಲಿ ಶೌನಕನು ಒಂದು ಯಾಗ ಮಾಡುತ್ತಿದ್ದನು. ಅಲ್ಲಿಗೆ ಸೂತ ಪೌರಾಣಿಕನು ಹೋದಾಗ ಅವನು ಅಲ್ಲಿನ ಋಷಿಗಳಿಗೆ ಪರೀಕ್ಷಿತನ ಮಗ ಜನಮೇಜಯನು ಯಾಗ ಮಾಡಿದ ಸಂದರ್ಭದಲ್ಲಿ ವೈಶಂಪಾಯನ ಋಷಿಯು ಹೇಳಿದ ವೇದವ್ಯಾಸ ಪ್ರೋಕ್ತ ಕಥೆಗಳನ್ನು - ಅವು ಮಹಾಭಾರತಕ್ಕೆ ಸಂಬಂಧಿ ಸಿದವು - ಹೇಳಿದನು.
ಸತ್ಯವತೀ ಪುತ್ರನಾದ ವ್ಯಾಸನು ಜ್ಞಾನದೃಷ್ಟಿಯಿಂದ ಮಹಾಭಾರತದ ಕಥೆಯನ್ನು ಕಂಡುಕೊಂಡನು. ಇವನು ಪರಾಶರನ ಮಗನು. ತನ್ನ ತಾಯಿಯ ಮತ್ತು ಭೀಷ್ಮನ ಪ್ರೇರಣೆಯಿಂದ ವಿಚಿತ್ರವೀರ್ಯನ ಪತ್ನಿಯಲ್ಲಿ ಧೃತರಾಷ್ಟ್ರ, ಪಾಂಡು, ವಿದುರ ಎಂಬ ಮೂರು ಮಕ್ಕಳನ್ನು ಹುಟ್ಟಿಸಿದನು.
ಅವರು ಮರಣ ಹೊಂದಿದ ಮೇಲೆ ಅವರ ವಂಶದ ಚರಿತ್ರೆಯನ್ನು ಭೂಲೋಕಕ್ಕೆ ತಿಳಿಸಲು ಈ ಭಾರತ ಎಂಬ ಗ್ರಂಥವನ್ನು ರಚಿಸಿದನು. ಈ ಗ್ರಂಥ ರಚನೆಗೆ ಮೊದಲೇ ಜನಮೇಜಯನು ಯಜ್ಞ ಮಾಡುತ್ತಿದ್ದಾಗ ಅಲ್ಲಿದ್ದವರು ಮಹಾಭಾರತದ ಕಥೆಯನ್ನು ಹೇಳಲು ಅವನನ್ನು ಕೇಳಿಕೊಂಡರು. ಈ ವ್ಯಾಸನ ಶಿಷ್ಯನೇ ವೈಶಂಪಾಯನ. ವ್ಯಾಸನು ವೈಶಂಪಾಯನನಿಗೆ ಮಹಾಭಾರತದ ಕಥೆಯನ್ನು ಹೇಳಲು ಆಜ್ಞೆ ಮಾಡಿದನು.
ವ್ಯಾಸನಿಂದ ರಚಿತವಾದ ಮಹಾಭಾರತವನ್ನು ಗಣಪತಿಯು ಬರೆದನು. ಪಾಂಡುವಿನ ಮಕ್ಕಳನ್ನು ಧೃತರಾಷ್ಟ್ರನಿಗೆ ಋಷಿಗಳು ತಂದು ಒಪ್ಪಿಸಿದರು. ಅರ್ಜುನನು ದ್ರೌಪದಿಯನ್ನು ಸ್ವಯಂವರದಲ್ಲಿ ಗೆದ್ದನು. ಮುಂದೆ ಧರ್ಮರಾಯನು ರಾಜಸೂಯ ಯಾಗ ಮಾಡಿದಾಗ ಮಯ ನಿರ್ಮಿತ ಸೌಧದಲ್ಲಿ ದುರ್ಯೋಧನನನ್ನು ನೋಡಿ ಭೀಮನು ನಕ್ಕನು. ಆ ಕಾರಣದಿಂದ ಮತ್ತು ಪಾಂಡವರ ಮೇಲೆ ಹೊಟ್ಟೆಕಿಚ್ಚಿನಿಂದ ದುರ್ಯೋಧನನ ಮನಸ್ಸಿನಲ್ಲಿ ಪಾಂಡವರ ಬಗ್ಗೆ ದ್ವೇಷ ಉಂಟಾಯಿತು .
ವೇದೋಪನಿಷತ್ತುಗಳಿಗಿಂತಲೂ ಇದು ಭಾರವಾದ್ದರಿಂದ ಇದಕ್ಕೆ ಮಹಾಭಾರತ ಎಂಬ ಹೆಸರು ಬಂದಿತು. ಫಲಾಪೇಕ್ಷೆ ಇಲ್ಲದೆ ಕರ್ಮಗಳನ್ನು ಮಾಡಬೇಕು.
ಮಹಾಭಾರತದಲ್ಲಿ 18 ಪರ್ವಗಳು ಇವೆ.ಆದಿ ಪರ್ವ ಸಭಾಪರ್ವ ಅರಣ್ಯ ಪರ್ವ ವಿರಾಟ ಪರ್ವ ಭೀಷ್ಮ ಪರ್ವ ದ್ರೋಣ ಪರ್ವ ಕರ್ಣ ಪರ್ವ ಸೌಪ್ತಿಕ ಪರ್ವ ಸ್ತ್ರೀ ಪರ್ವಶಾಂತಿ ಪರ್ವ ಅನುಶಾಸನಿಕ ಪರ್ವಅಶ್ವಮೇದಿಕ ಪರ್ವ ಆಶ್ರಮ ವಾಸ ಪರ್ವ ಮೌಸಲ ಪರ್ವ ಮಹಾ ಪ್ರಸ್ಥಾನಿಕ ಪರ್ವ ಸ್ವರ್ಗಾರೋಹಣ ಪರ್ವ ಹೀಗೆ.
ನಂತರ ಹರಿವಂಶ ಇತ್ಯಾದಿ ನೂರು ಪರ್ವಗಳು ಇರುವುದಾದರೂ ಸೂತಪುರಾಣಿಕನು ಈ 18ನ್ನು ಮಾತ್ರ ಹೇಳಿದನು.
ಶಕುಂತಲೆ ಮಗ ಭರತನ ಹೆಸರಿನಿಂದಲೇ ಆ ಕುಲಕ್ಕೆ ಭಾರತ ಎಂಬ ಹೆಸರು ಬಂದಿತು.
ಬ್ರಾಹ್ಮಣನ ಹೃದಯವು ಬೆಣ್ಣೆಯಂತೆ ಮೃದುವಾಗಿರುವುದು, ಮಾತು ಕತ್ತಿಯಂತೆ ತೀಕ್ಷ್ಣವಾಗಿರುವುದು. ಕ್ಷತ್ರಿಯನ ಹೃದಯವು ಕತ್ತಿಯಂತೆ ತೀಕ್ಷ್ಣವಾಗಿರುವುದು. ಮಾತು ಬೆಣ್ಣೆಯಂತೆ ಮೃದುವಾಗಿರುವುದು.
ಅಹಿಂಸೆಯೇ ಎಲ್ಲಕ್ಕಿಂತಲೂ ಮಿಗಿಲಾದ ಧರ್ಮವು. ಆದ್ದರಿಂದ ಧರ್ಮದೃಷ್ಟಿಯುಳ್ಳವನು ಯಾವಾಗಲೂ ಯಾವ ಪ್ರಾಣಿಯನ್ನೂ ಹಿಂಸೆ ಮಾಡಬಾರದು.
ಇತರರನ್ನು ದಂಡಿಸುವುದು, ಕ್ರೂರವಾಗಿ ವರ್ತಿಸುವುದು, ಪ್ರಜೆಗಳನ್ನು ಆಳುವುದು ಕ್ಷತ್ರಿಯ ಧರ್ಮಗಳು. ಈ ಧರ್ಮಗಳನ್ನು ಇತರರು ಎಂದಿಗೂ ಆಚರಿಸಬಾರದು.
ಹಿಂದೆ ಜನಮೇಜಯನು ಹಾವುಗಳನ್ನು ಕೊಲ್ಲಲು ಸರ್ಪ ಯಾಗವನ್ನು ಪ್ರಾರಂಭಿಸಿದಾಗ ಆಸ್ತಿಕ ಮಹರ್ಷಿಯು ಸರ್ಪಗಳ ಹತ್ಯೆಯನ್ನು ತಪ್ಪಿಸಿದನು.
ಕೃಷ್ಣ ದ್ವೈಪಾಯನ ಎಂಬುದು ವ್ಯಾಸ ಮಹರ್ಷಿಯ ಹೆಸರು. ಇವನು ಸಂತತಿಯಿಲ್ಲದೆ ನಿಂತು ಹೋದ ಶಂತನುವಿನ ವಂಶವನ್ನು ಮುಂದುವರೆಸಲು ಪಾಂಡು ಧೃತರಾಷ್ಟ್ರ ಹಾಗೂ ವಿದುರ ಎಂಬ ಮೂರು ಪುತ್ರರನ್ನು ಪಡೆದನು.
ಚಿತ್ರಾಂಗದ ವಿಚಿತ್ರವೀರ್ಯರು ಸತ್ಯವತಿ ಶಂತನುವಿನ ಮಕ್ಕಳು. ಚಿತ್ರಾಂಗದನು ಒಬ್ಬ ಗಂಧರ್ವನಿಂದ ಹತನಾದ. ವಿಚಿತ್ರ ವೀರ್ಯನು ಅಂಬಿಕೆ ಅಂಬಾಲಿಕರನ್ನು ಮದುವೆಯಾದನು. ಆದರೆ ಅವನಿಗೆ ಮಕ್ಕಳಾಗಲಿಲ್ಲ. ಹಾಗೆಯೇ ಸತ್ತು ಹೋದ. ಆಗ ಈ ಸತ್ಯವತಿಯು ಆಸನ ಮುಂದುವರಿಸಲು ವ್ಯಾಸರನ್ನು ಕರೆದಳು . ಅವನು ಒಪ್ಪಿ ದೃತರಾಷ್ಟ್ರ ಪಾಂಡು ವಿದುರ ಎಂಬ ಮೂರು ಮಕ್ಕಳನ್ನು ಹುಟ್ಟಿಸಿದ.
ಚಿತ್ರಾಂಗದ ವಿಚಿತ್ರವೀರ್ಯರು ಸತ್ಯವತಿ ಶಂತನುವಿನ ಮಕ್ಕಳು. ಚಿತ್ರಾಂಗದನು ಒಬ್ಬ ಗಂಧರ್ವನಿಂದ ಹತನಾದ. ವಿಚಿತ್ರ ವೀರ್ಯನು ಅಂಬಿಕೆ ಅಂಬಾಲಿಕರನ್ನು ಮದುವೆಯಾದನು. ಆದರೆ ಅವನಿಗೆ ಮಕ್ಕಳಾಗಲಿಲ್ಲ. ಹಾಗೆಯೇ ಸತ್ತು ಹೋದ. ಆಗ ಈ ಸತ್ಯವತಿಯು ವಂಶವನ್ನು ಮುಂದುವರಿಸಲು ವ್ಯಾಸರನ್ನು ಕರೆದಳು . ಅವನು ಒಪ್ಪಿ ದೃತರಾಷ್ಟ್ರ ಪಾಂಡು ವಿದುರ ಎಂಬ ಮೂರು ಮಕ್ಕಳನ್ನು ಹುಟ್ಟಿಸಿದ.
ಶಂತನು ಹಾಗೂ ಗಂಗೆಯರ ಮಗ ದೇವವ್ರತ ಭೀಷ್ಮ. ಇವನು ತಂದೆಯ ಜೊತೆಗೆ ಸತ್ಯವತಿಯ ಮದುವೆ ಮಾಡಿಸಿದನು. ವ್ಯಾಸನು ಸತ್ಯವತಿಯ ಮಗ. ಈ ಸತ್ಯವತಿಯು ಕನ್ಯಾವಸ್ಥೆಯಲ್ಲಿದ್ದಾಗ ಪರಾಶರನಿಗೆ ಹುಟ್ಟಿದವನು. ಪರೀಕ್ಷಿತನು ಅಭಿಮನ್ಯುವಿನ ಮಗ .ಜನಮೇಜಯನು ಈ ಪರೀಕ್ಷಿತನ ಮಗ.
ವ್ಯಾಸನು ತನ್ನ ತಾಯಿಯನ್ನು ಬೆಸ್ತಳೆಂದು ನಿಂದಿಸಿದಾಗ ಪರಾಶರನು ಅವನಿಗೆ ಬೈದನು . ಮಕ್ಕಳು ತಂದೆ ತಾಯಿಗಳನ್ನು ದೂಷಿಸಬಾರದು. ತಂದೆ-ತಾಯಿಗಳಿಬ್ಬರಲ್ಲೂ ತಾಯಿ ಯನ್ನು ಮೇಲೆಂದು ತಿಳಿಯಬೇಕು. ಗರ್ಭದಲ್ಲಿ ಧರಿಸಿ ಎಷ್ಟೋ ಕಷ್ಟಗಳನ್ನು ಸಹಿಸುವ ತಾಯಿಗಿಂತ ಮೇಲಾದ ವಸ್ತು ಇಲ್ಲ. ಎಂದನು.
ಈ ಆದಿಪರ್ವದಲ್ಲಿ ಒಂದು ಅನುಕ್ರಮಣಿಕಾ ಪರ್ವವೂ ಇದ್ದು ಮಹಾಭಾರತದ ಕತೆಯನ್ನು ಸಂಕ್ಷಿಪ್ತವಾಗಿ ಇಲ್ಲಿ ಓದಬಹುದು.