ಪುಸ್ತಕನಿಧಿ: ಶ್ರೀಮದಾನಂದ ರಾಮಾಯಣ
ಹಿಂದೊಮ್ಮೆ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಿಂದ ಇಳಿಸಿಕೊಂಡು ಇಟ್ಟಿದ್ದ ಪುಸ್ತಕಗಳಲ್ಲಿ (ಅವುಗಳು ಈಗ archive.org ತಾಣದಲ್ಲಿ ಸಿಗುತ್ತವೆ) ಒಂದು ಐತಿಹಾಸಿಕ ಕಾದಂಬರಿಯನ್ನು ಓದುತ್ತಿದ್ದಾಗ ಮುನ್ನುಡಿಯಲ್ಲಿ "ಆನಂದ ರಾಮಾಯಣ"ದ ಉಲ್ಲೇಖ ಇತ್ತು.
ಏನಿದು ಆನಂದ ರಾಮಾಯಣ ? ಗೂಗಲ್ ಮಾಡಿದಾಗ ಕೆಲವು ಮಾಹಿತಿ ಸಿಕ್ಕಿತು. ನಮಗೆ ಗೊತ್ತಿರುವ ವಾಲ್ಮೀಕಿ ರಾಮಾಯಣವು ಶೋಕರಾಮಾಯಣವಂತೆ. ಏಕೆಂದರೆ ಅದರಲ್ಲಿ ವಿರಹ ಮತ್ತು ಶೋಕ ಹೆಚ್ಚಾಗಿದೆ ಅಂತೆ . ಆನಂದ ರಾಮಾಯಣ ಹಾಗಲ್ಲವಂತೆ. ಇದು 15ನೇ ಶತಮಾನದ್ದಾದರೂ ಇದನ್ನು ವಾಲ್ಮೀಕಿಯೇ ರಚಿಸಿದ್ದಾನೆ ಎಂಬ ನಂಬಿಕೆ ಇದೆ. ಜನರ ಮುಖದಲ್ಲಿ ಮುಗುಳ್ನಗೆ ಮೂಡಿಸಲು ತಾನು ಇದನ್ನು ಬರೆದಿದ್ದೇನೆ ವಾಲ್ಮೀಕಿ ಮಹರ್ಷಿಯು ಶ್ರೀರಾಮಚಂದ್ರನಿಗೆ ಹೇಳುತ್ತಾನಂತೆ.
( ಇನ್ನೊಂದು ಮಾಹಿತಿ ಏನಪ್ಪಾ ಅಂದರೆ ಶ್ರೀರಾಮಚಂದ್ರನು ನಗುವುದನ್ನು ನಿಷೇಧಿಸಿದ್ದನಂತೆ! ಆ ಬಗ್ಗೆ ಒಂದು ಕಥೆಯೂ ಸಿಕ್ಕಿತು.)
ಕನ್ನಡದ ಆನಂದ ರಾಮಾಯಣ ಕೂಡ archive.org ತಾಣದಲ್ಲಿ ಸಿಕ್ಕಿತು.ಅದನ್ನು ಇಳಿಸಿಕೊಂಡು ಓದಲು ಆರಂಭಿಸಿದೆ.
ಅಲ್ಲಿ ಕಂಡ ಕೆಲವು ವಿಶೇಷಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸಿತು.
೧) ರಾವಣನು ಕೋಸಲ ರಾಜ್ಯದ ಮೇಲೆ ದಾಳಿ ಮಾಡಿ ರಾಜನನ್ನು ಸೋಲಿಸಿ ಕೌಸಲ್ಯೆಯನ್ನು ಅಪಹರಿಸಿಕೊಂಡು ಹೋಗಿದ್ದ.
೨)ಕೈಕೆಯಿಯು ಚಿಕ್ಕವಳಿದ್ದಾಗ ಹುಡುಗಾಟದಲ್ಲಿ ಒಬ್ಬ ಮುನಿಯ ಮುಖಕ್ಕೆ ಮಸಿ ಬಳೆದಿದ್ದಳಂತೆ . ಆಗ ಆ ಮುನಿಯು ಅವಳಿಗೆ ಶಾಪ ಕೊಟ್ಟನಂತೆ - "ಯಾವುದೋ ಅಪವಾದದಿಂದಾಗಿ ನಿನ್ನ ಮುಖವನ್ನು ಯಾರೂ ನೋಡದೆ ಹೋಗಲಿ" .
೩) ದಶರಥನಿಗೆ ಶಾಂತಿ ಎಂಬ ಮಗಳಿದ್ದಳು. ರಾಜ್ಯದಲ್ಲಿ ಮಳೆ ಆಗದೆ ಹೋದಾಗ ಋಷ್ಯಶೃಂಗನನ್ನು ಕರೆಸಿ ಅವನಿಗೆ ಅವಳನ್ನು ಮದುವೆ ಮಾಡಿಕೊಟ್ಟನು.
೪) ಮಂಥರೆಯು ಒಬ್ಬ ಗಂಧರ್ವ ಕನ್ನೆಯಂತೆ. ರಾವಣನ ಭಾಧೆಯು ಭೂದೇವಿಗೆ ಹೆಚ್ಚಾದಾಗ ದೇವತೆಗಳು ವಿಷ್ಣು ವನ್ನು ಪ್ರಾರ್ಥಿಸಿದರು. ಅವನು ತಾನು ರಾವಣನ ಸಂಹಾರಮಾಡಲು ದಶರಥನಿಗೆ ಮಗನಾಗಿ ಹುಟ್ಟುವುದಾಗಿಯೂ ಆಶ್ವಾಸನೆ ಕೊಟ್ಟನು. ಕೈಕೇಯಿಗೆ ದುರ್ಬೋಧೆ ಮಾಡಲು ಮಂಥರೆಯಾಗಿ ಹುಟ್ಟಲು ಒಬ್ಬ ಗಂಧರ್ವ ಕನ್ಯೆಗೆ ಆಜ್ಞೆ ಮಾಡಿದನು .
೫)ಆದಿಶೇಷನು ಲಕ್ಷ್ಮಣನಾಗಿ ಹುಟ್ಟಿದನು, ಶಂಖ ಚಕ್ರಗಳು ಭರತ ಶತ್ರುಘ್ನರಾಗಿ ಹುಟ್ಟಿದವು.
೬) ಕಲ್ಲಾಗಿ ಬಿದ್ದಿದ್ದ ಅಹಲ್ಯೆಯನ್ನು ತನ್ನ ಪಾದ ಧೂಳಿಯಿಂದ ಶ್ರೀರಾಮನು ಮರು ಜೀವ ಕೊಟ್ಟನು. ನಂತರ ದೋಣಿಯನ್ನು ಹತ್ತಲು ಹೋದಾಗ ಆ ಘಟನೆಯನ್ನು ನೋಡಿದ್ದ ನಾವಿಕನು ಅವನನ್ನು ತಡೆದು ಅವನ ಕಾಲುಗಳನ್ನು ತೊಳೆದು ನಂತರ ತನ್ನ ದೋಣಿಯಲ್ಲಿ ಕಾಲಿಡಲು ಬಿಟ್ಟನು. "ನಿನ್ನ ಪಾದ ಧೂಳಿ ಸೋಕಿ ನನ್ನ ಕಟ್ಟಿಗೆಯ ದೋಣಿಗೆ ಏನಾದರೂ ಜೀವ ಬಂದರೆ ನನ್ನ ಗತಿಯೇನು?" ಎಂದು ವಿವರಣೆ ಕೊಟ್ಟನು!
೭) ಸೀತಾಸ್ವಯಂವರದಲ್ಲಿ ರಾವಣನು ಶಿವ ಧನಸ್ಸನ್ನು ಎತ್ತಲು ಪ್ರಯತ್ನಿಸಿದನು. ಆ ಭಾರವಾದ ಧನುಸ್ಸು ಅವನಮೈ ಮೇಲೆ ಬಿದ್ದಿತು. ಅವನು ಏಳುವುದಕ್ಕೆ ಆಗಲಿಲ್ಲ. ಅವನ ಹತ್ತು ಮುಖಗಳೆಲ್ಲ ಬೆವರಿನಿಂದ ಕೂಡಿದವು. ಮೈಯೊಳಗಿನ ಹೊಲಸುಗಳಿಂದ ವಸ್ತುಗಳು ಮಲಿನವಾದವು !
೮) ಶ್ರೀರಾಮನನ್ನು ನೋಡಿದ ಸೀತೆಯು ಅವನನ್ನು ಮದುವೆಯಾಗಲು ಬಯಸಿದಳು. ಅವನೊಂದಿಗೆ ಮದುವೆಯಾಗದಿದ್ದರೆ ಉಪ್ಪರಿಗೆಯಿಂದ ಬಿದ್ದು ಪ್ರಾಣ ಕೊಡುವುದಾಗಿ ಹೇಳಿದಳು. ಒಂದು ವೇಳೆ ಅವನ ಜೊತೆ ಮದುವೆಯಾದರೆ ಮುನಿಗಳಂತೆ 14 ವರ್ಷ ಅರಣ್ಯದಲ್ಲಿ ವಾಸ ಮಾಡುವೆನು ಎಂದು ಶಪಥ ಮಾಡಿದಳು.
೯)ಭರತ ಮತ್ತು ಶತ್ರುಘ್ನರು ವಿದ್ಯೆಯಲ್ಲಿ ಮತ್ತು ವಿನಯದಲ್ಲಿ ರಾಮ ಲಕ್ಷ್ಮಣರಿಗೆ ಸಮಾನರು.
೧೦) ಸೀತೆಯ ಸ್ವಯಂವರದಲ್ಲಿ ರಾಮನು ಶಿವಧನಸ್ಸನ್ನು ಭಂಗ ಮಾಡಿ ಸೀತೆಯು ರಾಮನನ್ನು ವರಿಸಿದ ನಂತರ ದಶರಥನು ಸ್ವಯಂವರಕ್ಕೆ ಬಂದಿದ್ದ ರಾಜರನ್ನು ಉದ್ದೇಶಿಸಿ ಹೀಗೆ ಹೇಳಿದನು - ಸ್ವಯಂವರದಲ್ಲಿ ನಮಗೆ ಅಪಜಯ ಆಯ್ತು ಎಂದು ಯಾರೂ ಖಿನ್ನರಾಗಬಾರದು.ಸೋಲು ಗೆಲುವುಗಳು ಯಾರ ಅಧೀನವೂ ಅಲ್ಲ.
೧೧) ಶ್ರೀರಾಮನಿಗೆ ಪಟ್ಟಾಭಿಷೇಕದ ತಯಾರಿ ನಡೆದ ದಿನ ಸೀತೆಯೊಡನೆ ಏಕಾಂತದಲ್ಲಿ ಶ್ರೀರಾಮನಿಗೆ ಹೇಳಿದನು - ನನ್ನ ತಂದೆಯು ನನಗೆ ನಾಳೆ ಪಟ್ಟಾಭಿಷೇಕ ಮಾಡುವ ತಯಾರಿ ಮಾಡುತ್ತಿದ್ದಾನೆ. ಆದರೆ ಅದು ಆಗುವುದಿಲ್ಲ. ಕೈಕೆಯಿಯಿಂದಾಗಿ ಅವನು ನನಗೆ 14 ವರ್ಷ ವನವಾಸಕ್ಕೆ ಹೋಗಲು ಹೇಳುವನು. ನಾನು ವನವಾಸ ಮುಗಿಸಿಕೊಂಡು ಬರುವವರೆಗೆ ನೀನು ಇಲ್ಲಿ ಗುರು ಹಿರಿಯರ ಸೇವೆ ಮಾಡಿಕೊಂಡಿರು.
ಆಗ ಸೀತೆ ಹೇಳಿದಳು - ನಿನ್ನನ್ನು ಬಿಟ್ಟು ಒಂದು ಅರೆಗಳಿಗೆ ಆದರೂ ನಾನು ಇರುವುದಿಲ್ಲ. ನೀನಿಲ್ಲದೆ ಈ ಅರಮನೆಯು ನನಗೆ ಅರಣ್ಯದ ಹಾಗೆ. ಮತ್ತು, ನನ್ನ ವಿವಾಹದ ಸಮಯದಲ್ಲಿ ನೀನೇ ನನ್ನ ಪತಿಯಾದರೆ 14 ವರ್ಷ ಋಷಿಗಳ ಹಾಗೆ ವನವಾಸ ಮಾಡುವೆನೆಂದು ದೇವತೆಗಳಲ್ಲಿ ಬೇಡಿಕೊಂಡಿದ್ದೆ. ಮತ್ತು ಜ್ಯೋತಿಷಿಗಳು ನನಗೆ 14 ವರ್ಷ ವನವಾಸದ ಯೋಗದ ಬಗ್ಗೆ ಮೊದಲೇ ಹೇಳಿದ್ದರು.
ಮತ್ತು ನಾನು ತಂದೆಯ ಮನೆಯಲ್ಲಿದ್ದಾಗ ವಾಲ್ಮೀಕಿ ರಚಿತ ರಾ ಮಾಯಣದಲ್ಲಿ ಸೀತೆಯು ರಾಮನೊಡನೆ 14 ವರ್ಷ ವನವಾಸ ಮಾಡುವಳೆಂದು ಓದಿದ ನೆನಪಿದೆ. ಆದ ಕಾರಣ ನನ್ನನ್ನು ವನವಾಸಕ್ಕೆ ಕರೆದುಕೊಂಡು ಹೋಗಿರಿ. ಇಲ್ಲವಾದರೆ ನಾನು ಪ್ರಾಣದಿಂದ ಇರುವುದಿಲ್ಲ ' .
ಆಗ ರಾಮನು ಅವಳ ಮಾತಿಗೆ ಒಪ್ಪಿಕೊಂಡನು.
೧೨) ಮರುದಿನ ಬೆಳಿಗ್ಗೆ ಪಟ್ಟಾಭಿಷೇಕದ ಸಿದ್ಧತೆಗಳು ಮುಗಿಯಲು ಬಂದಂತೆ ವಿಷ್ಣುವಿನ ಆಜ್ಞೆಯಂತೆ ಅಲ್ಲಿ ಅವತರಿಸಿದ್ದ ಮಂಥರೆಯು ತನ್ನ ಕರ್ತವ್ಯದ ಸಮಯವು ಬಂದಿತೆಂದು ಅರಿತು ಕೈಕೇಯಿಗೆ ದುರ್ಬೋಧನೆಗಳನ್ನು ಮಾಡಿದಳು. ಅವಳು ಹೇಳುವ ಮಾತುಗಳು ಸರಿ ಎಂದೇ ಕಾಲಾನುಗುಣವಾಗಿ ಕೈಕೇಯಿಗೆ ತೋರಿತು.
ಆ ಪ್ರಕಾರವಾಗಿ ಕೈಕೇಯಿಯು ದಶರಥನಲ್ಲಿ ರಾಮನ ಹದಿನಾಲ್ಕು ವರ್ಷದ ವನವಾಸ ಮತ್ತು ಭರತನ ಪಟ್ಟಾಭಿಷೇಕದ ವರಗಳನ್ನು ಕೇಳಿದಳು. ಆಗ ದಶರಥನು ಮೂರ್ಛೆ ಹೋದನು.
ಈ ಎಲ್ಲ ಸಂಗತಿ ತಿಳಿದು ಶ್ರೀರಾಮನಿಗೆ ಮನಸ್ಸಿನಲ್ಲಿ ಪರಮಹರ್ಷವಾಯಿತು.
೧೩) ಮುಂದೆ ಶ್ರೀರಾಮ, ಸೀತೆ , ಲಕ್ಷ್ಮಣ ವನವಾಸಕ್ಕೆ ಹೋದರು. ಇತ್ತ ದಶರಥನು ತೀರಿಕೊಂಡನು. ಭರತನು ಪಟ್ಟಾಭಿಷೇಕಕ್ಕೆ ಒಪ್ಪದೇ ಇತರ ಎಲ್ಲಾ ಹಿರಿಯರೊಂದಿಗೆ ರಾಮ ಇರುವಲ್ಲಿಗೆ ಹೋಗಿ ಅಯೋಧ್ಯೆಗೆ ಮರಳುವಂತೆ ಕೇಳಿಕೊಂಡನು. ಆಗ ವಶಿಷ್ಠರು ಶ್ರೀ ರಾಮನ ಮುಖ್ಯ ಉದ್ದೇಶವನ್ನು ಅವನಿಗೆ ತಿಳಿಯಪಡಿಸಿದರು.
೧೪) ಸೀತೆಯ ಅಪಹರಣದ ನಂತರ ರಾಮ, ಲಕ್ಷ್ಮಣರು ಅವಳನ್ನು ಹುಡುಕತೊಡಗಿದರು. ಕಬಂಧನೆಂಬ ರಾಕ್ಷಸನು ಅವರನ್ನು ಹೆಗಲ ಮೇಲೆ ಹೊತ್ತುಕೊಂಡು ದಕ್ಷಿಣದಿಕ್ಕಿನತ್ತ ಓಡತೊಡಗಿದನು.
ಆಗ ಲಕ್ಷ್ಮಣನು ಅವನ ತಲೆಯನ್ನು ತನ್ನ ಖಡ್ಗದಿಂದ ಕತ್ತರಿಸಲು ಪ್ರಯತ್ನಿಸಿದನು. ಆಗ ರಾಮನು ಅವನನ್ನು ತಡೆದನು - 'ಹೇಗೂ ನಮಗೆ ದಕ್ಷಿಣದತ್ತ ಹೋಗುವದಿದೆ. ಅನಾಯಾಸವಾಗಿ ನಮಗೆ ಕಾಲ್ನಡಿಗೆಯ ಧಾವತಿ ತಪ್ಪಿದಂತಾಯಿತು' ಎಂದನು. ಸಾಕಷ್ಟು ದೂರ ಹೋದ ಮೇಲೆ ಲಕ್ಷ್ಮಣನು ಅವನನ್ನು ಕೊಂದನು.
೧೫) ಸಮಸ್ತ ಸ್ತ್ರೀಯರು ಸೀತೆಯ ಅಂಶ ಎ೦ದು ಒಂದು ಸಲ ಈಶ್ವರನು ಪಾರ್ವತಿಗೆ ಹೇಳಿದ್ದನು.
೧೬) ಹಿಂದೊಮ್ಮೆ ರಾವಣನ ಗಾನದಿಂದ ಸಂತುಷ್ಟನಾದ ಶಿವನು ಅವನಿಗೆ ವರಗಳನ್ನು ಕೊಡಮಾಡಿದನು. ರಾವಣನು ಆತ್ಮಲಿಂಗವನ್ನೂ ಪಾರ್ವತಿಯನ್ನೂ ಬೇಡಿದನು. ಶಿವನು ಕೊಟ್ಟೂ ಬಿಟ್ಟಿದ್ದನು. ವಿಷ್ಣುವಿನ ಸಹಾಯದಿಂದ ಎರಡನ್ನೂ ಶಿವನು ಉಳಿಸಿಕೊಂಡನು.
ವಿಷ್ಣುವಿನ ಸೃಷ್ಟಿಯಾದ ಮಂಡೋದರಿಯೇ ನಿಜವಾದ ಪಾರ್ವತಿ ಎ೦ದು ರಾವಣವನ್ನು ನಂಬಿ ಆಕೆ ಅವನ ಪಾಲಾದಳು. ಅವಳ ಉದರ (ಹೊಟ್ಟೆ) ಯು ಕೃಶವಾಗಿ ಇದ್ದದ್ದರಿಂದ ಅವಳ ಹೆಸರು ಮಂಡೋದರಿ .
ರಾವಣನು ಒಯ್ಯುತ್ತಿದ್ದ ಆತ್ಮಲಿಂಗವನ್ನು ವಿಷ್ಣುವು ಒಬ್ಬ ಬ್ರಾಹ್ಮಣನ ರೂಪದಿಂದ ಬಂದು ಅದನ್ನು ನೆಲದ ಮೇಲಿಟ್ಟನು. ಅದನ್ನು ಅಲ್ಲಿಂದ ಎತ್ತಲು ರಾವಣನು ಪ್ರಯತ್ನಿಸಿದಾಗ ಅದು ಹಸುವಿನ ಕಿವಿಯಂತೆ ವಕ್ರವಾಯಿತು. ಆ ಸ್ಥಳವೇ ಗೋಕರ್ಣ.
ಆ ಮಂಡೋದರಿ ವಿಷ್ಣುವಿನ ಸೃಷ್ಟಿ ಯಾದ್ದರಿಂದ ಸ್ವಲ್ಪ ಸೀತೆಯ ತರಹ ಇದ್ದಳು. ಆದ ಕಾರಣ ಅವಳನ್ನು ನೋಡಿದಾಗ ಸೀತೆಯನ್ನು ಹುಡುಕುತ್ತಿದ್ದ ಹನುಮಂತನು ಅವಳನ್ನು ಸೀತೆ ಎಂದು ಮೊದಲಿಗೆ ತಪ್ಪು ತಿಳಿದನು.
೧೭) ಸೀತೆಯನ್ನು ಭೇಟಿ ಮಾಡಿ ಅವಳಿಂದ ರಾಮನ ಉಂಗುರವನ್ನು ತಂದ ಹನುಮಂತನ ಗರ್ವವನ್ನು ಭಂಗ ಮಾಡಲು ಅಂಥದೇ ನೂರಾರು ಉಂಗುರಗಳ ಕತೆಯೂ ಇಲ್ಲಿದೆ. ಹನುಮಂತನು ತಂದ ಉಂಗುರವು ಅವುಗಳಲ್ಲಿ ಸೇರಿ ಹೋದಾಗ ಅವನಿಗೆ ಗೊತ್ತಾಯಿತು - ಈ ವರೆಗೆ ಎಷ್ಟೋ ರಾವಣರು ಎಷ್ಟೊಂದು ಸೀತೆಯರನ್ನು ಕದ್ದೊಯ್ದಿದ್ದಾರೆ. ಎಷ್ಟೋ ವಾನರರು ಈ ತರಹ ಅವಳ ಪತ್ತೆ ಮಾಡಿ ಅವಳಿಂದ ರಾಮನ ಉಂಗುರ ತಂದಿದ್ದಾರಂತೆ. ಈ ಸಂಗತಿ ತಿಳಿದು ಅವನ ಗರ್ವವು ಇಳಿಯಿತು.
ಈ ಸಂಗತಿಯನ್ನು ಅವನಿಂದ ಕೇಳಿ ರಾಮನು ನಕ್ಕು ಇದೆಲ್ಲ ನಿನ್ನ ಗರ್ವಭಂಗಕ್ಕೆ ನಾನು ಮಾಡಿದ ನಾಟಕವೇ, ನನ್ನ ಉಂಗುರ ನನ್ನ ಬಳಿಯಲ್ಲೇ ಇದೆ ಎ೦ದು ತೋರಿಸಿದ. ಆಗ ಹನುಮಂತನು 'ಇವನು ಸಾಕ್ಷಾತ್ ನಾರಾಯಣನೇ ಹೊರತು ಬೇರೆ ಅಲ್ಲ ' ಎಂದು ತಿಳಿದನು.
೧೮) ವಿಭೀಷಣನಂಥ ಸಜ್ಜನರ ಮಾತುಗಳನ್ನು 'ಅಲ್ಪಾಯುಷ್ಯವಂತನಾದ ' ರಾವಣನು ಕೇಳಲಿಲ್ಲ.
೧೯) ರಾಮನು ಸಮುದ್ರ ದಾಟುವ ಮೊದಲು ಶಿವಲಿಂಗವನ್ನು ಪೂಚಿಸ ಬಯಸಿ ಅದನ್ನು ತರಲು ಹನುಮಂತನನ್ನು ಕಾಶಿಗೆ ಕಳಿಸಿದ. ಅವನು ಶಿವನಿಂದ ಎರಡು ಶಿವಲಿಂಗಗಳನ್ನು ಪಡೆದ - ಒಂದು ರಾಮನಿಗೆ , ಇನ್ನೊಂದು ಅವನಿಗೆ. ಆಗ ಶಿವನು ತಾನು ಹಿಂದೆ ಅಗಸ್ತ್ಯರಿಗೆ ಕೊಟ್ಟ ಮಾತಿನಂತೆ ಶ್ರೀರಾಮನ ನೆನದಲ್ಲಿ ದಕ್ಷಿಣಕ್ಕೆ ಬರುತ್ತಿರುವುದಾಗಿ ಹೇಳಿದನು.
೨೦) ಅಗಸ್ತ್ಯರು ಪತ್ನಿ ಲೋಪಾಮುದ್ರೆಯೊಂದಿಗೆ ಬಂದುದನ್ನು ನೋಡಿ ವಿಂಧ್ಯ ಪರ್ವತವು ಥರಥರನೆ ನಡುಗಲಾರಂಭಿಸಿತು !
೨೧) ಹನುಮಂತನು ಬರುವದು ತಡವಾಯಿತೆಂದು ಶ್ರೀರಾಮನು ಮರಳಿನಿಂದ ಒಂದು ಲಿಂಗವನ್ನು ಮಾಡಿದ್ದನು. ಹನುಮಂತನು ಅದನ್ನು ತನ್ನ ಬಾಲವನ್ನು ಸುತ್ತಿ ಎಳೆದರೂ ಅದಕ್ಕೆ ಏನೂ ಆಗಲಿಲ್ಲ, ಬದಲಿಗೆ ಅವನ ಬಾಲವೇ ತುಂಡಾಯಿತು.
೨೨) ರಾವಣನು ಮಲಗಿದ್ದ ಕುಂಭಕರ್ಣನನ್ನು ಎಬ್ಬಿಸಿ ರಾಮನ ಸೈನ್ಯದ ಮೇಲೆ ಯುದ್ಧಕ್ಕೆ ಕಳಿಸಿದನು. ಅದಾಗಲೇ ರಾವಣನ ಪಕ್ಷವನ್ನು ಬಿಟ್ಟು ರಾಮನ ಪಕ್ಷಕ್ಕೆ ಸೇರಿದ ವಿಭೀಷಣನು ಅವನಿಗೆ ಎದುರಾದನು.ವಿಭೀಷಣನು ಅಣ್ಣ ಕುಂಭಕರ್ಣನ ಕಾಲಿಗೆರಗಿದನು. ಆಗ ಕುಂಭಕರ್ಣನು 'ಯುದ್ಧದಲ್ಲಿ ಈ ಯಾವದೇ ಸಂಬಂಧಗಳನ್ನು ನೋಡತಕ್ಕದ್ದಲ್ಲ' ಎಂದನು.
೨೩) ರಾವಣನ ಮಗ ಇಂದ್ರಜಿತು ಒಂದು ಯಜ್ಞವನ್ನು ಶುರು ಮಾಡಿದ. ಅದು ಮುಗಿದರೆ ಅವನನ್ನು ಯಾರೂ ಸೋಲಿಸುವಂತಿರಲಿಲ್ಲ. 12 ವರ್ಷ ನಿದ್ರಾಹಾರ ಬಿಟ್ಟವನು ಮಾತ್ರ ಅವನನ್ನು ಕೊಲ್ಲಬಹುದಿತ್ತು. ಈ ಕೆಲಸವನ್ನು ಲಕ್ಷ್ಮಣನು ಶ್ರೀರಾಮ ನಾಮಾಂಕಿತವಾದ ಅಸ್ತ್ರದಿಂದ ಅವನನ್ನು ಕೊಲ್ಲುವ ಮೂಲಕ ಮಾಡಿದನು. ಇಂದ್ರಜಿತುವಿನ ಒಂದು ಹಸ್ತವು ಅವನ ಅರಮನೆಯಲ್ಲಿ ಬಿದ್ದಿತು. ಅದು ಇಂದ್ರಜಿತುವಿನ ಮಡದಿಗೆ 'ನಾನು ಪರಮಾತ್ಮನಿಂದ ಮರಣ ಹೊಂದಿದ್ದೇನೆ, ನೀನು ಶೋಕಿಸದಿರು ' ಎಂದು ನೆಲದ ಮೇಲೆ ಬರೆದು ತಿಳಿಸಿತು.
೨೪) ರಾವಣನು ಒಂದು ಯಜ್ಞ ಮಾಡತೊಡಗಿದನು. ವಾನರರು ಅಲ್ಲಿಗೆ ಹೋಗಿ ಪರಿಪರಿಯಾಗಿ ತೊಂದರೆ ಕೊಟ್ಟರೂ ಅವನು ಯಜ್ಞದಿಂದ ವಿಮುಖವಾಗಲಿಲ್ಲ. ಆಗ ವಾನರರು ಮಂಡೋದರಿಗೆ ತೊಂದರೆ ಕೊಡಲಾರಂಂಭಿಸಿದರು. ಆಗ ಅವಳ ಆರ್ತನಾದವನ್ನು ಕೇಳಿ ರಾವಣನು ಯಜ್ಞದಿಂದ ವಿಮುಖನಾದನು.
ಮಂಡೋದರಿಯು ರಾವಣನಿಗೆ 'ನಮಗೆ ಮೃತ್ಯು ಸ್ವರೂಪವಾದ ಸೀತೆಯನ್ನು ರಾಮನಿಗೆ ಒಪ್ಪಿಸಿ ಬಿಡು ' ಎಂದು ಹೇಳಿದಳು. ಆಗ ರಾವಣನು 'ಪ್ರಿಯಳೇ, ರಾಮನು ಸಾಕ್ಷಾತ್ ವಿಷ್ಣು ಎಂದು ನಾ ಬಲ್ಲೆ. ಮೋಕ್ಷ ಪಡೆಯಲು ಅವನ ಕೈಯಿಂದಲೇ ಸಾಯುವೆನು ' ಎ೦ದನು.
ಮುಂದೆ ರಾಮನು ರಾವಣನನ್ನು ಕೊಂದಾಗ ರಾವಣನ ಶರೀರದಿಂದ ಒಂದು ದಿವ್ಯ ತೇಜಸ್ತು ಹೊರಟು ಶ್ರೀರಾಮನಲ್ಲಿ ಐಕ್ಯವಾಯಿತು.
ರಾಮನು ಲಂಕೆಯಿಂದ ಹೊರಟು ಸಮುದ್ರ ದಾಟಿದ ಕೂಡಲೆ ಸೇತುವೆಯನ್ನು ನಾಶ ಮಾಡಿ ಸಮುದ್ರದಲ್ಲಿ ಮುಳುಗಿಸಿದನು.
ಶ್ರೀರಾಮನ ಪಟ್ಟಾಭಿಷೇಕವನ್ನು ಆಕಾಶದಲ್ಲಿ ದೇವತೆಗಳೊಡನೆ ದಶರಥನು ನೋಡಿ ಪರಮಾನಂದಭರಿತನಾದನು.
೨೫) ಶ್ರೀರಾಮನು ಅಶ್ವಮೇಧ ಯಾಗವನ್ನು ಮಾಡುವಾಗ ಕಾಮಧೇನುವನ್ನು ವಸಿಷ್ಠ ಮುನಿಗಳಿಗೆ ದಾನವಾಗಿ ಕೂಡ ಮಾಡಿದನು. ಆಗ ಆ ಮುನಿಯು 'ನನಗೆ ಏನಾದರೂ ದಾನ ಮಾಡುವದಿದ್ದರೆ ಸೀತೆಯನ್ನು ಕೊಡು, ಬೇರೆ ಏನೂ ಬೇಡ ' ಎಂದನು. ಆಗ ಶ್ರೀರಾಮನು ತನ್ನ ಪತ್ನಿಯನ್ನೇ ದಾನ ಮಾಡಿದನು. ವಸಿಷ್ಠ ಮುನಿಯು ಸೀತೆಗೆ 'ಇಂದಿನಿಂದ ನೀನು ನನ್ನ ಮಗಳು' ಎ೦ದು ಹೇಳಿದನು. ರಾಮನಿಗೆ ಸೀತೆಯ ತೂಕದ ಎಂಟು ಪಟ್ಟು ತೂಕದ ಬಂಗಾರ ಕೊಟ್ಟು ಸೀತೆಯನ್ನು ಮರಳಿ ಪಡೆಯಲು ಹೇಳಿ 'ಇನ್ನು ಮುಂದೆ ಸೀತೆ,ರಾಜ್ಯ, ಐಶ್ವರ್ಯಗಳನ್ನು ನಾನು ಯಾರಿಗೂ ಕೊಡುವದಿಲ್ಲ' ಎ೦ದು ಶಪಥ ಮಾಡಿಸಿದರು.
೨೬) ಶ್ರೀರಾಮನು ತಾನು ಮೂರು ನಿಯಮಗಳನ್ನು ಪಾಲಿಸುತ್ತಿರುವುದಾಗಿ ವ್ಯಾಸ ಮಹರ್ಷಿಗಳಿಗೆ ಹೇಳಿದನು - "ಆಡಿದ ಮಾತನ್ನು ಎಂದೂ ತಪ್ಪಲಾರೆನು . ಸೀತೆಯ ಹೊರತಾಗಿ ಮಿಕ್ಕ ಎಲ್ಲಾ ಸ್ತ್ರೀಯರನ್ನು ಕೌಸಲ್ಯೆಯ ಹಾಗೆ ನೋಡುವೆನು, ಕೋಪದಿಂದ ಒಬ್ಬರನ್ನು ಸಂಹರಿಸಬೇಕೆಂದು ಎಂದು ಬಾಣವನ್ನು ತೆಗೆದುಕೊಂಡರೆ ಅದೇ ಬಾಣದಿಂದಲೇ ಅವರನ್ನು ಸಂಹರಿಸುವೆನು, ಬೇರೊಂದು ಬಾಣವನ್ನು ಮುಟ್ಟಲಾರೆನು. ಈ ನಿಯಮಗಳಿಗೆ ಭಂಗ ಬಾರದ ಹಾಗೆ ನನಗೆ ಆಶೀರ್ವಾದ ಮಾಡಿರಿ" ಎಂದನು.
ಆಗ ವ್ಯಾಸ ಮಹರ್ಷಿಗಳು 'ಹಾಗೆಯೇ ಆಗಲಿ' ಎಂದು ಆಶೀರ್ವದಿಸಿ ಹೀಗೆ ಹೇಳಿದರು - 'ರಾಮಚಂದ್ರನೇ, ಏಕ ಪತ್ನಿ ವ್ರತವನ್ನು ಪಾಲಿಸುವುದು ಬಹಳ ಕಠಿಣ. ಇಂಥ ಐಶ್ವರ್ಯ, ರಾಜ್ಯಾಧಿಕಾರ ಮತ್ತು ಪೂರ್ಣ ಯೌವನ ಇಷ್ಟು ಅನರ್ಥ ಸಾಧನಗಳಿದ್ದರೂ ಈ ವೃತವನ್ನು ನಿಯಮದಿಂದ ನಡೆಸಿರುವೆಯಲ್ಲ ! ನೀನೇ ಧನ್ಯನು, ಈ ವ್ರತದ ಫಲವು ನಿನಗೆ ಮುಂದಿನ ಜನ್ಮದಲ್ಲಿ ಅಂದರೆ ಕೃಷ್ಣಾವತಾರದಲ್ಲಿ ಸಿಗುವುದು, ಆಗ ನಿನಗೆ ಬಹಳ ಪತ್ನಿಯರಿರುವರು. ' ಎಂದರು.
ಆಗ ಶ್ರೀರಾಮನು ಈ ಫಲವನ್ನು ಹೊಂದಲು ಯಾವುದಾದರೂ ವ್ರತ ಇದ್ದರೆ ತಿಳಿಸಿರಿ ಅಂದನು. ಅವರು ಸೀತೆಯ 16 ಬಂಗಾರದ ಪ್ರತಿಮೆಗಳನ್ನು ಮಾಡಿ ದಾನ ಮಾಡು ಎಂದರು, ರಾಮನು ಅದರಂತೆ ಮಾಡಿದನು.
ಆ ಪ್ರತಿಮೆಗಳನ್ನು ದಾನ ಪಡೆದ ಬ್ರಾಹ್ಮಣರು ಒಂದೊಂದಕ್ಕು ಸಾವಿರ ಪಟ್ಟು ಫಲ ದೊರೆಯಲಿ ಎಂದು ಆಶೀರ್ವದಿಸಿದರು.
ರಾಮನಿಗೆ ಮರುಳಾಗಿ ಅವನ ಬಳಿ ಬಂದ ತರುಣಿಯರಿಗೆ ಮುಂದಿನ ಅವತಾರದಲ್ಲಿ ನಿಮ್ಮ ಇಚ್ಛೆಯನ್ನು ಈಡೇರಿಸುವೆನು ಎಂದು ಹೇಳಿದನು.
ಸೀತಾಪರಿತ್ಯಾಗದ ಕತೆಯೇ ಬೇರೆ ಇದೆ....
(ಮುಂದುವರೆದೀತು)