ಪುಸ್ತಕ ನಿಧಿ - ಆನಂದ ಸಾಮ್ರಾಜ್ಯ - ಒಂದು ಇತಿಹಾಸಿಕ ಕಾದಂಬರಿ
ಇದನ್ನು ಬರೆದವರು ಮೂಗೂರು ಹನುಮಂತಾಚಾರ್ಯ. ಪ್ರಕಟಣೆಯ ವರ್ಷ - 1930 . ಪುಟಗಳ ಸಂಖ್ಯೆ 120.
ಇದು ಕನ್ನಡದಲ್ಲಿ ಕಾದಂಬರಿಗಳು ಆರಂಭವಾಗುವ ಕಾಲದ ಪುಸ್ತಕ. ಮುನ್ನುಡಿಯಲ್ಲಿ ಕಾದಂಬರಿ ಎಂದರೇನು? ಅದರ ಇತಿಹಾಸವೇನು? ಎಂದು ಕಾದಂಬರಿ ಪ್ರಕಾರದ ಪರಿಚಯ ಮಾಡಿಕೊಡಲಾಗಿದೆ. ಮತ್ತು 'ಈ ಪುಸ್ತಕದಲ್ಲಿ ಮಹಮ್ಮದೀಯ ದೊರೆಯಾದ ಬಾಬರ್ ನನ್ನು ಒಂದು ಪಾತ್ರವನ್ನಾಗಿ ಮಾಡಿ ಆತನು ತನ್ನ ಹಿಂದೂ ಪ್ರಜೆಗಳಲ್ಲಿ ತೋರಿಸುತ್ತಿದ್ದ ಅಸ ದೃಶವಾದ ಪ್ರೀತಿಯನ್ನು ಅಷ್ಟು ಚೆನ್ನಾಗಿ ವರ್ಣಿಸಿರುವುದು ನಮ್ಮ ದೇಶ ಬಾಂಧವರಾದ ಮಹಮ್ಮದೀಯರಿಗೂ ಹಿಂದೂಗಳಿಗೂ ಸೌಹಾರ್ದವನ್ನು ಹುಟ್ಟಿಸುವುದಕ್ಕೆ ಬಹಳ ಸಹಕಾರಿಯಾಗಿದೆ ಎಂದು ಹೇಳಿದ್ದಾರೆ. (ಈ ಪುಸ್ತಕವನ್ನು ಬರೆದವರ ಹೆಸರನ್ನು ಮ|| ರಾ|| ಮೂಗೂರು ಹನುಮಂತಾಚಾರ್ಯ ಎಂದು ಉಲ್ಲೇಖಿಸಿದ್ದಾರೆ. - ಈ ಮ|| ರಾ|| ದ ಪೂರ್ತಿ ವಿಸ್ತರಣೆ ಏನೆಂದು ನನಗೆ ಗೊತ್ತಿಲ್ಲ). ಈ ಮುನ್ನುಡಿಯನ್ನು ಬರೆದ ದಿನ 'ಪ್ರಮೋದೂತ ಸಂವತ್ಸರದ ವೈಶಾಖ ಶುದ್ಧ ಪಂಚಮಿ' ಎಂದು ಬರೆದಿದ್ದಾರೆ. (ಆ ಕಾಲದಲ್ಲಿ ದಿನಾಂಕವನ್ನು ಈ ರೀತಿ ನಿರ್ದೇಶಿಸುತ್ತಿದ್ದರು. ಆದರೆ ಸಂವತ್ಸರಗಳು 60 ವರ್ಷಗಳಿಗೊಮ್ಮೆ ಮರುಕಳಿಸುವುದರಿಂದ ಅದೇ ಹೆಸರಿನ ಇನ್ನೊಂದು ವರ್ಷಕ್ಕೆ ಅದು ಹೇಗೆ ಗೊಂದಲವಾಗುತ್ತಿರಲಿಲ್ಲವೋ. ಅದೇ ಎರಡನೇ ಮುದ್ರಣದ ಪೀಠಿಕೆಯಲ್ಲಿ ದಿನಾಂಕವನ್ನು ಈಗ ನಾವು ಬರೆಯುವ ಪದ್ಧತಿಯಂತೆ ನಮೂದಿಸಿದ್ದಾರೆ).
ತಮ್ಮನ್ನು ವಿದ್ವಜ್ಜನರ ಪಾದರೇಣು ಎಂದು ಕರೆದುಕೊಂಡಿರುವ ಲೇಖಕರು ಈ ಪುಸ್ತಕವನ್ನು "ಅಮೂಲಾಗ್ರವಾಗಿ ಪಠಿಸುವಂತೆ " ಓದುಗರನ್ನು ಕೇಳಿಕೊಂಡಿದ್ದಾರೆ.
ಈ ಪುಟ್ಟ ಕಾದಂಬರಿಯಲ್ಲಿ ಗಮನಿಸಿದ ಕೆಲವು ವಿಶೇಷ ಸಂಗತಿಗಳು ಹೀಗಿವೆ: -
1) ಹಿಂದೆ ಮುಂದೆ ನೋಡದೆ ಇನ್ನೊಬ್ಬರಿಗೆ ಕೊಟ್ಟ ವಚನದ ಪ್ರಕಾರ ನಡೆಯಲೇಬೇಕೆ?
ಇಂಥ ಸಮಯದಲ್ಲಿ ನಂತರ ಯೋಗ್ಯಾ ಯೋಗ್ಯ ವಿಚಾರ ಮಾಡಿದಾಗ ಒಂದು ಕೆಲಸವು ಅಯೋಗ್ಯವೆಂದು ಕಂಡು ಬಂದರೆ ಅದು ವಚನಬದ್ಧವಾಗಿದ್ದರೂ ಅದನ್ನು ಮಾಡದೇ ಇರುವುದರಿಂದ ವಚನಭಂಗ ದೋಷವು ಪ್ರಾಪ್ತವಾಗುವುದಿಲ್ಲ.
2)ಆಪತ್ ಕಾಲದಲ್ಲಿ ಧೈರ್ಯವನ್ನು ತಾಳಬೇಕು. ಅಲ್ಲದೆ ಯಾರು ವೀರರೋ ಅವರಿಗೆ ಹೆದರಿಕೆಯೇ ಇರುವುದಿಲ್ಲ ಎಂದು ಹೇಳಿಕೊಳ್ಳಬೇಕು.
3)ಈ ಕಾದಂಬರಿಯಲ್ಲಿ ಒಂದು ಕಡೆ ಬಾಬರನು ತನ್ನ ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಭಾಗವು ಚೆನ್ನಾಗಿದೆ. ಅದರಲ್ಲಿ ರಾಜನೂ ಪ್ರಜೆಗಳೂ ಪರಸ್ಪರ ದೇವತಾ ಸ್ವರೂಪಿಗಳೆಂದು ತಿಳಿಯಬೇಕೆಂಬ ಮಾತಿದೆ.
ಈ ಪುಸ್ತಕವನ್ನು
https://pustaka.sanchaya.net ದಲ್ಲಿ 'ಸಾಮ್ರಾಜ್ಯ' ಎಂದು ಕನ್ನಡದಲ್ಲಿ ಬರೆದು ಹುಡುಕಿ https://archive.org ತಾಣದಲ್ಲಿ ಪಡೆಯಬಹುದು.
ಈ ಪುಸ್ತಕದ ಕೊಂಡಿ ಹೀಗಿದೆ : -
https://archive.org/details/dli.osmania.4201 . ಇದನ್ನು ಕ್ಲಿಕ್ಕಿಸಿ ಪುಸ್ತಕವನ್ನು ಈ ಕೊಂಡಿಯಲ್ಲಿ ಓದಬಹುದು. ನಿಧಾನವಾಗಿ ಓದಲು ಡೌನ್ಲೋಡ್ ಮಾಡಿಕೊಳ್ಳಲೂ ಬಹುದು.