ಪುಸ್ತಕ ನಿಧಿ - ಒಂದು ಒಳ್ಳೆಯ ಪಾಲಿ ಪುಸ್ತಕ ( ರಾಜರತ್ನಂ ರದು)

ಪುಸ್ತಕ ನಿಧಿ - ಒಂದು ಒಳ್ಳೆಯ ಪಾಲಿ ಪುಸ್ತಕ ( ರಾಜರತ್ನಂ ರದು)

ಸತ್ಯ ಹೇಳಿದರೆ , ಕೋಪಿಸದಿದ್ದರೆ ,
ಬೇಡಿದಾಗ ಕೊಂಚವಾದರೂ ಕೊಟ್ಟರೆ ,
ಈ ಮೂರು ಮೆಟ್ಟಲುಗಳಲ್ಲಿ ದೇವತೆಗಳ ಸಮೀಪ ಹೋಗುವನು.

ಅಪ್ರಮಾದವು ಅಮೃತಕ್ಕೆ ದಾರಿ
ಅಪ್ರಮಾದವು ಮೃತ್ಯುವಿಗೆ ದಾರಿ
ಅಪ್ರಮತ್ತರು ಸಾಯುವದಿಲ್ಲ
ಪ್ರಮತ್ತರು ಸತ್ತಂತೆಯೇ

ಶಾಂತಿಯಿಂದ ಕ್ರೋಧವನ್ನು
ಕೆಟ್ಟುದನ್ನು ಒಳ್ಳೆಯದರಿಂದ
ಜಿಪುಣನನ್ನು ದಾನದಿಂದ
ಸತ್ಯದಿಂದ ಸುಳ್ಳಾಡುವನನ್ನು ಗೆಲ್ಲಬೇಕು.

ಕೆಟ್ಟ ಕದಡಿದ ಮನಸ್ಸಿಂದ ಕೆಲಸ ಮಾಡಿದರೆ , ಅಥವಾ ಮಾತನ್ನಾಡಿದರೆ
ಅವನನ್ನು ದುಃಖ ಹಿಂಬಾಲಿಸುವದು.
ತಿಳಿಯಾದ ಒಳ್ಳೆಯ ಮನಸ್ಸಿನಿಂದ ಕೆಲಸ ಮಾಡಿದರೆ , ಅಥವಾ ಮಾತನ್ನಾಡಿದರೆ
ಅವನನ್ನು ಸುಖ ಹಿಂಬಾಲಿಸುವದು ಎಂದಿಗೂ ಅಗಲದ ನೆರಳಿನ ಹಾಗೆ.

ಒಳ್ಳೆಯ ಕೆಲಸಗಳನ್ನು ಬೇಗ ಮಾಡು
ಪಾಪದಿಂದ ಚಿತ್ತವನ್ನು ತಡೆ
ಪುಣ್ಯವನ್ನು ಆಲಸ್ಯದಿಂದ ಮಾಡಿದರೆ
ಮನಸ್ಸು ಪಾಪದಲ್ಲಿ ರಮಿಸುವದು.

ಸ್ವಲ್ಪ ಸಹಾಯವೂ ಬಹಳ ಹಣವೂ ಉಳ್ಳ ವ್ಯಾಪಾರಿಯು ಭಯದ ಮಾರ್ಗವನ್ನು ಹೇಗೋ ಹಾಗೆ , ಬದುಕಲು ಬಯಸುವವನು ವಿಷವನ್ನು ಹೇಗೋ ಹಾಗೆ, ಪಾಪಗಳನ್ನು ಸಂಪೂರ್ಣವಾಗಿ ಬಿಡಲಿ .

ಸತ್ಪುರುಷರ ಸುಗಂಧವು ಗಾಳಿಗೆದುರಾಗಿ ಹೋಗುವದು.

ಜೊತೆಗಾರರು ಹೆಚ್ಚಾಗಿರುವದನ್ನು ನಿಜವಾಗಿ ಹೊಗಳುತ್ತೇನೆ.
ಉತ್ತಮರಾದ ಸಮರಾದ ಜೊತೆಗಾರರನ್ನು ಸೇವಿಸತಕ್ಕುದು.
ಅವರು ಸಿಕ್ಕದಿದ್ದರೆ , ನಿಂದೆಗೆ ಒಳಗಾಗದೆ ಬದುಕುತ್ತ
ಖಡ್ಗಮೃಗದ ಕೊಂಬಿನ ಹಾಗೆ ಒಂಟಿಯಾಗಿ ಸಂಚರಿಸಲಿ.

ಜಾತಿಯನ್ನು ಕೇಳಬೇಡ, ನಡತೆಯನ್ನು ಕೇಳು .
ದೊರೆಯು ಶೂರನನ್ನು ಯುದ್ಧಕ್ಕಾಗಿ ಪೋಷಿಸುವನು ,
ಜಾತಿಯ ಕಾರಣದಿಂದ ಹೇಡಿಯನ್ನಲ್ಲ ;
ಅಂತೆಯೇ ಕ್ಷಮೆ , ನಮ್ರತೆ ಮೊದಲಾದ ಗುಣವುಳ್ಳವನನ್ನು
ಮೇಧಾವಿಗಳು ಅವನು ಹೀನ ಜಾತಿಯವನಾದರೂ ಪೂಜಿಸುವರು.

ಜಾತಿಯಿಂದ ಬ್ರಾಹ್ಮಣ/ ಅಬ್ರಾಹ್ಮಣನಾಗುವದಿಲ್ಲ , ಕರ್ಮದಿಂದ ಬ್ರಾಹ್ಮಣ/ ಅಬ್ರಾಹ್ಮಣನಾಗುವನು.

ಶುದ್ಧಿ ಅಶುದ್ಧಿಗಳು ಅವನವು . ಒಬ್ಬನು ಇನ್ನೊಬ್ಬನನ್ನ ಶುದ್ಧಿಗೊಳಿಸಲಾರನು.

------------------------------
ಪಾಲಿ ಪಬ್ಬ ಪುಷ್ಪಾಂಜಲಿ ( ಜೀ.ಪಿ. ರಾಜರತ್ನಂ) ಎನ್ನುವ ಪುಸ್ತಕದಿಂದ ( ಅದು ಇಲ್ಲಿದೆ) .

ಮುಖಪುಟದಲ್ಲಿನ ಪುಸ್ತಕದ ಹೆಸರಿನ ಅಡಿ ಇರುವ ಸಾಲು -'ಅರ್ಥವೇ ಮುಖ್ಯ ; ಅಕ್ಷರವಲ್ಲ ' ಎಂದು ನಮ್ಮ ಸ್ವಾಮಿಯಾದ ಬುದ್ಧನು ಹೇಳಿದನು.

ಪಾಲಿ ಸಾಹಿತ್ಯದಲ್ಲಿ ತಾವು ಓದಿ ಆನಂದಪಟ್ಟ ಭಾಗಗಳನ್ನು ನಮಗೆ ತಿಳಿಸಬೇಕೆಂದು ರಾಜರತ್ನಂ ಅವರು ಈ ಪುಸ್ತಕ ಬರೆದಿದ್ದಾರೆ . ಪುಸ್ತಕ ಇಂಟರ್ನೆಟ್ಟಿನಲ್ಲಿ ಇಲ್ಲಿ ಇರುವದಾದರೂ , ಕಾರಣಾಂತರದಿಂದ ಅದನ್ನು ಓದದವರಿಗೆ ಅದರಲ್ಲಿನ ನಾನು ಮೆಚ್ಚಿನ ಭಾಗಗಳನ್ನು ನಿಮಗೆ ಕೊಡುತ್ತಿದ್ದೇನೆ.

ಇನ್ನೊಂದು ಸಣ್ಣ ಕಂತನ್ನು ನಾಳೆ ಓದುವಿರಂತೆ

Rating
No votes yet

Comments