ಪೂಜಾ ವಿಧಾನ
ಸಂಕಟ ಬಂದಾಗ ವೆಂಕಟರಮಣ - ಆ ದೇವನನ್ನು ನೆನೆಯೋದು ಕಷ್ಟ ಕಾಲ ಬಂದಾಗಲೇ. ಕಷ್ಟ ಇಲ್ಲದೇ ಇದ್ದಾಗ ಅವನ ನೆನಪಾದರೂ ಹೇಗೆ ಬಂದೀತು? ಏಕೆ ಬಂದೀತು?
ದೇವರು ಎಂದರೆ ಯಾರು? ಅದನ್ನು ಒಲಿಸಿಕೊಳ್ಳೋದು ಅಂದರೆ ಏನು? ಪೂಜೆ ಅಂದರೆ ಏನು? ಅದನ್ನು ಹೇಗೆ ಮಾಡಬೇಕು? ಹೇಗೆ ಮಾಡುತ್ತಾರೆ? ಇವುಗಳ ಬಗ್ಗೆ ನನ್ನ ಚಿಂತನೆ.
ದೇವರು ಎಂದರೆ ಸರ್ವ ಶಕ್ತ - ಯಾರಿಗೆ ಹುಟ್ಟಿಸುವುದರಿಂದ ಹಿಡಿದು ಕೊನೆಗಾಣಿಸುವವರೆಗಿನ ಎಲ್ಲ ರೀತಿಯ ಶಕ್ತಿ ಇರುವುದೋ, ಮಾನವ ಪಶು ಪ್ರಾಣಿಗಳಿಗಿಂತ ಮಿಗಿಲಾದ ಶಕ್ತಿಯಾಗಿರುವುದೋ ಅದನ್ನು ದೇವರು ಅನ್ನಬಹುದು. ಅದು ಅಗೋಚರ ಇರಬಹುದು ಅಥವಾ ಸದ್ಯದ ನಮ್ಮ ತಕ್ಕಮಟ್ಟಿನ ಬುದ್ಧಿಗೆ ಗೋಚರಿಸುತ್ತಿರುವ ಪಂಚಭೂತಗಳಾದ ನಿಸರ್ಗವೇ ಆಗಿರಬಹುದು. ಆದ್ದರಿಂದ ನಿಸರ್ಗವನ್ನೇ ದೈವ ಎಂದರೂ ತಪ್ಪಾಗಲಾರದು. ನಿಸರ್ಗವೂ ನಮ್ಮ ಜೀವನವನ್ನು ಹಿಡಿದಿಟ್ಟಿರುವುದು. ಎಷ್ಟೋ ನಿದರ್ಶನಗಳಿಂದ ತಿಳಿದುಬಂದಂತೆ ನಿಸರ್ಗಕ್ಕೆ ಎದುರಾಗಿ ಹೋದಾಗ ನಮಗೆ ಜೀವನದ ಅರಿವು ಮೂಡಿಸುವುದೇ ನಿಸರ್ಗ. ಅದು ಭೂಕಂಪ ಇರಬಹುದೋ, ಜಲ ಪ್ರಳಯವಿರಬಹುದು, ವಿಪರೀತ ಸೂರ್ಯನ ಪ್ರಖರತೆ ಇಂದಾಗುವ ಅನಾಹುತ ಇರಬಹುದು. ಆಗಾಗ ನಮ್ಮ ಶಕ್ತಿಯ ಮಿತಿಯನ್ನು ತಿಳಿಸಲು ಆ ನಿಸರ್ಗ ನಮ್ಮ ಮೈಯನ್ನು ಹೀಗೆ ಚಿವುಟಿ ತಿಳಿಸುವುದು. ನಮ್ಮೆದುರಲ್ಲೇ ಘೋರ ಸಾವಾದರೆ, ಆಗ ಕೆಲ ಹಿರಿಯರು, ಅದು ನಮಗೆ ತಿಳುವಳಿಕೆ ಮೂಡಿಸಲು ಅಷ್ಟೆ, ಅದರಿಂದ ನೀನು ಜೀವನ ಎಂದರೆ ಏನು ಎನ್ನುವುದನ್ನು ತಿಳಿ, ಇದೆಲ್ಲಾ ನಮ್ಮ ನಾಲ್ಕು ದಿನಗಳ ಹಾರಾಟ, ಇರುವವರೆಗೆ ಒಳ್ಳೆಯದು ಮಾಡದೇ ಇದ್ರೂ ಪರವಾಗಿಲ್ಲ, ಕೆಟ್ಟದ್ದು ಮಾಡಬೇಡ, ಈ ಪಾಠ ಕಲಿ, ಎಂದು ಹೇಳುವರು. ಪಂಚಭೂತಗಳು ಎಂದರೆ ಯಾವುವು? ಭೂಮಿ, ನೀರು, ಬೆಂಕಿ, ಗಾಳಿ ಮತ್ತು ಆಕಾಶಗಳೇ ಈ ಪಂಚಭೂತಗಳು. ಇವೆಲ್ಲವೂ ಸೇರಿದರೆ ಜಗತ್ತು ಎನ್ನಬಹುದು. ಮನುಷ್ಯನ ದೇಹದಲ್ಲೂ ಈ ಪಂಚಭೂತಗಳನ್ನು ಕಾಣಬಹುದು ಮತ್ತು ಅವುಗಳಿಲ್ಲದೇ ಜೀವಂತವಾಗಿರಲು ಸಾಧ್ಯವಿಲ್ಲ. ಉಸಿರಾಡಲು ಗಾಳಿ ಬೇಕು, ತಿಂದದ್ದು ಜೀರ್ಣವಾಗಲು ಜಠರದಲ್ಲಿ ಅಗ್ನಿಯ ಉತ್ಪತ್ತಿಯಾಗಬೇಕು. ನೀರಿನ ಅವಶ್ಯಕತೆ ಇದ್ದೇ ತೀರಬೇಕು. ಆದ್ದರಿಂದ ಮನುಷ್ಯ ದೇಹಕ್ಕೂ ಜಗತ್ತಿಗೂ ಸಂಬಂಧವಿದೆ. ಒಂದು ಬೃಹದಾಕಾರ ಸ್ವರೂಪ ಆದರೆ, ಇನ್ನೊಂದು ಅದರ ಚಿಕ್ಕ ಪ್ರತಿರೂಪ.
ವೇದಗಳ ಕಾಲದಿಂದಲೂ ಪೂಜೆ ಪುನಸ್ಕಾರಗಳು ನಡೆದು ಬಂದಿದೆ. ವೇದೋಕ್ತವಾಗಿ ಪೂರ್ವ ಪ್ರಯೋಗವೆಂದು ದೇವತಾ ಪೂಜೆಯನ್ನೂ, ಅಪರ ಪ್ರಯೋಗವೆಂದು ಮೃತರಾದವರ ಆತ್ಮಕ್ಕಾಗಿ ಪೂಜೆಯನ್ನೂ ಮಾಡುವುದು ಸಂಪ್ರದಾಯ.
ದೇವರನ್ನು ಒಲಿಸಿಕೊಳ್ಳುವುದು ಅಂದರೆ ಆ ಸರ್ವಶಕ್ತನನ್ನು ತನ್ನೆಡೆಗೆ ಸೆಳೆದುಕೊಳ್ಳುವುದು, ಅವನಿಂದ ಶಕ್ತಿಯನ್ನು ಪಡೆದುಕೊಳ್ಳುವುದು. ಹಾಗೆ ಶಕ್ತಿ ಪಡೆದುಕೊಳ್ಳದೇ ಹೋದರೆ ಅಶಕ್ತರಾಗುವೆವು. ಆ ಶಕ್ತಿಯನ್ನು ಪಡೆದುಕೊಂಡರೆ ಅದರಿಂದ ಮುಂದಾಗುವ ಎಲ್ಲ ಒಳ್ಳೆಯ ಕೆಟ್ಟದುಗಳನ್ನೂ ಸಮಾನವಾಗಿ ಸ್ವೀಕರಿಸುವ ಬಲ ಬರುವುದು. ಪೂಜೆ ಮಾಡಿದರೆ ಮನಸ್ಸು ಪ್ರಫುಲ್ಲವಾಗುದೂ ಎಂದು ನಂಬಿಕೆ.
ಪೂಜೆ ಎನ್ನುವ ಪದದ ಮೂಲ ಸಂಸ್ಕೃತದಿಂದ ಬಂದದ್ದು. ಅದರರ್ಥ ಈ ಜನ್ಮಕ್ಕೆ ಪೂರ್ವಕೃತವಾಗಿ ಬಂದಿರುವ ಪಾಪವನ್ನು ನಿವಾರಿಸುವ ಯೋಜನೆ. ಇದಕ್ಕಾಗಿ ಆ ಪರಮಾತ್ಮನನ್ನು ಭಾವ ಚಿತ್ರದ ಮೂಲಕ ಅಥವಾ ಪ್ರತಿಮೆಯ ಮೂಲಕ ನೋಡಿ ಸಾಕ್ಷಾತ್ಕರಿಸಿಕೊಳ್ಳಲು ಪ್ರಯತ್ನಿಸುವುದು ಈ ಪೂಜೆ.
ಇನ್ನು ಪೂಜಾ ವಿಧಾನದ ಬಗ್ಗೆ ಒಂದೆರಡು ಮಾತುಗಳು. ಯಾವುದೇ ದೇವರ ಪೂಜೆಗಳಿದ್ದರೂ ಮೊದಲು ಗಣಪತಿಗೆ ಪೂಜೆ ಸಲ್ಲಬೇಕು. ಈ ಮುಂದೆ ಮಾಡುವ ಪೂಜೆಯು ನಿರ್ವಿಘ್ನವಾಗಿ ನೆರವೇರಲಿ, ಅದಕ್ಕಾಗಿ ಎಲ್ಲ ಅನುಕೂಲಗಳನ್ನೂ ಮಾಡಿಕೊಡು ಎಂದು ಆ ಗಣಪನಲ್ಲಿ ಬೇಡಿಕೊಳ್ಳುವುದಕ್ಕಾಗಿ ಮೊದಲು ಮಹಾಗಣಪತಿಗೆ ಪೂಜೆ.
ಪೂಜಾವಿಧಾನವನ್ನು ಹದಿನಾರು ಭಾಗಗಳನ್ನಾಗಿ ವಿಂಗಡಿಸಿ ಷೋಡಶಾಂಗ ಪೂಜೆ ಎನ್ನುವರು. ಹಿಂದಿನ ಕಾಲದಲ್ಲಿ ಮನೆಗೆ ಬರುವ ಅತಿಥಿಗಳಿಗೂ ಸತ್ಕಾರವನ್ನು ಇದೇ ರೀತಿಯಲ್ಲಿ ಮಾಡುತ್ತಿದ್ದರು.
ಅವು ಹೀಗಿವೆ.
೧) ಆವಾಹನೆ - ದೇವರನ್ನು ಬರಮಾಡಿಕೊಳ್ಳುವುದು
೨) ಆಸನ - ದೇವರನ್ನು ಕುಳ್ಳಿರಿಸುವುದು
೩) ಪಾದ್ಯಮ್ - ದೇವರ ಪಾದಗಳನ್ನು ತೊಳೆಯುವುದು
೪) ಅರ್ಘ್ಯ - ನೀರಿನಿಂದ ಕೈ ತೊಳೆಯುವುದು
೫) ಆಚಮನ - ನೀರಿನಿಂದ ಬಾಯಿ ಶುದ್ಧಿ ಮಾಡಿಕೊಳ್ಳುವುದು ೬) ಪಂಚಾಮೃತ ಸ್ನಾನ - ಐದು ಬಗೆಯ ಅಮೃತಕ್ಕೆ ಸಮಾನವಾದ ಪದಾರ್ಥಗಳಿಂದ ಅಭಿಷೇಕ ಮಾಡುವುದು
೭) ಗಂಧ ಧಾರಣೆ - ಸುವಾಸಿತ ದ್ರವ್ಯವನ್ನು ಹೂವಿನೊಂದಿಗೆ ಅರ್ಪಿಸುವುದು
೮) ಶುದ್ಧೋದಕ ಸ್ನಾನ - ನೀರಿನಿಂದ ಅಭಿಷೇಕ ಮಾಡುವುದು ೯) ವಸ್ತ್ರಧಾರಣೆ - ಬಟ್ಟೆಯನ್ನು ಹೊದಿಸುವುದು - ಬಟ್ಟೆಯ ಬದಲಿಗೆ ಹತ್ತಿಯಿಂದ ಮಾಡಿದ ಹಾರವನ್ನು ಅರ್ಪಿಸುವುದೂ ರೂಢಿಯಲ್ಲಿದೆ
೧೦) ಯಜ್ಞೋಪವೀತ ಧಾರಣೆ - ಮೂರೆಳೆಯ ಜನಿವಾರವನ್ನು ಏರಿಸುವುದು
೧೧) ಚಂದನ ಧಾರಣೆ - ಸುವಾಸಿತ ಚಂದನವನ್ನು ಲೇಪಿಸುವುದು
೧೨) ಅಕ್ಷತ ಧಾರಣೆ - ಅಕ್ಕಿ ಅರಿಶಿನ ಅಥವಾ ಕುಂಕುಮದೊಂದಿಗೆ ತುಸು ತುಪ್ಪ ಬೆರೆಸಿ ಮಾಡಿದ ಮಿಶ್ರಣವನ್ನು ಅರ್ಪಿಸುವುದು.
೧೩) ಪುಷ್ಪ ಧಾರಣೆ - ಹೂವನ್ನು ಅರ್ಪಿಸುವುದು
೧೪) ಧೂಪ ಧಾರಣೆ - ಸುಗಂಧದ ಕಡ್ಡಿ ಅಥವಾ ಊದಿನಕಡ್ಡಿಯನ್ನು ಹಚ್ಚಿ ದೇವರಿಗೆ ಬಲದಿಂದ ಎಡಕ್ಕೆ ವರ್ತುಲಾಕಾರವಾಗಿ ಮೂರು ಬಾರಿ ತೋರಿಸಿ ಅರ್ಪಿಸುವುದು ೧೫) ದೀಪ ದರ್ಶನ - ಪೂಜೆ ಪ್ರಾರಂಭಿಸುವ ಮೊದಲೇ ದೀಪವನ್ನು ಹಚ್ಚಿರುವುದು ಸಂಪ್ರದಾಯ. ಹಾಗಾಗಿ ಇಲ್ಲಿ ತುಪ್ಪದಲ್ಲಿ ಮಿಂದಿಸಿದ ಮೂರು ಬತ್ತಿಗಳನ್ನು ಹಚ್ಚಿ ಮಂಗಳಾರತಿ ಮಾಡುವುದು.
೧೬) ನೈವೇದ್ಯ ದಾನ - ನೈವೇದ್ಯವಾಗಿ ಹಣ್ಣು, ಭಕ್ಷ್ಯಗಳನ್ನು ಅರ್ಪಿಸುವುದು.
ಸಾಂಗವಾಗಿ ಪೂಜೆ ಮಾಡುವ ವಿಧಾನವನ್ನು ಇನ್ನು ನೋಡೋಣ. ಮೇಲೆ ತಿಳಿಸಿದಂತೆ ಮೊದಲಿಗೆ ಗಣಪತಿಗೆ ಪೂಜಿಸುವರು. ಅದಕ್ಕಾಗಿ ಒಂದು ಬೆಳ್ಳಿಯ ತಟ್ಟೆಯಲ್ಲಿ ಅಕ್ಕಿಯನ್ನು ತುಂಬಿ ಅದರ ಮಧ್ಯೆ ಸಣ್ಣ ಬೆಳ್ಳಿ ಗಣಪತಿಯನ್ನು ೨೫ ಪೈಸೆಯ ನಾಣ್ಯದ ಮೇಲೆ ಇಟ್ಟು ಪೂಜಿಸಿವುದು. ನಂತರ ಇಷ್ಟದ ದೇವರಿಗೆ ಪೂಜೆ ಮಾಡುವುದು. ಪೂಜೆ ಮಾಡಲು ಮೊದಲಿಗೆ ಆಚಮನವನ್ನು ಮಾಡಿ ಗಣಪತಿ ಶ್ಲೋಕವನ್ನು ಹೇಳಿಕೊಳ್ಳುವುದು.
ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ
ಪ್ರಸನ್ನ ವದನಂ ಧ್ಯಾಯೇತ್ ಸರ್ವ ವಿಘ್ನೋಪಶಾಂತಯೇ
ಬೀಜ ಮಂತ್ರಗಳ ಪಠಣದಿಂದ ಗಣಪತಿಯನ್ನು ಆರಾಧಿಸಿ ಪ್ರಾಣಾಯಾಮ ಮಾಡಿ ಘಂಟಾರಾಧನೆಯನ್ನು ಮಾಡುವುದು. ಅಂದಿನ ಪಂಚಾಂಗವನ್ನು ಪಠಿಸಿ ನಿರ್ವಿಘ್ನವಾಗಿ ಪೂಜೆಯನ್ನು ನೆರವೇರಿಸುವಂತೆ ಗಣಪತಿಯನ್ನು ಬೇಡಿಕೊಳ್ಳುವುದು. ನಂತರ ಕಲಶವನ್ನು ಸ್ಥಾಪಿಸುವುದು. ಇದರಲ್ಲಿ ಪೂಜೆಗೆ ಬೇಕಾದಷ್ಟು ನೀರನ್ನು ಇಟ್ಟುಕೊಳ್ಳುವುದು. ಇನ್ನು ಕೆಲವು ವ್ರತಗಳಲ್ಲಿ ಕಲಶವೇ ಪ್ರಧಾನ. ಅವುಗಳೆಂದರೆ ವರಮಹಾಲಕ್ಷಿ ವ್ರತ, ಸತ್ಯನಾರಾಯಣ ವ್ರತ, ಅನಂತ ಪದ್ಮನಾಭ ವ್ರತ ಇತ್ಯಾದಿ.
ಅದರಲ್ಲಿ ಉಪಯೋಗಿಸುವ ಕಲಶದ ಬಗ್ಗೆ ನನ್ನ ಎರಡು ಮಾತುಗಳು. ಈ ಕಲಶವನ್ನು ಈಶಾನ್ಯ ದಿಕ್ಕಿಗೆ (ವರುಣನ ಸ್ಥಾನ) ಇಟ್ಟು, ಮೊದಲು ಅದಕ್ಕೆ ಪೂಜಿಸುವರು. ಅದರೊಳಗೆ ಪೂಜೆಗೆ ಮುಖ್ಯವಾಗಿ ಬೇಕಾಗಿರುವ ನೀರು ಅಂದ್ರೆ ತೀರ್ಥವನ್ನು ಇರಿಸುವರು. ಕಲಶ ಎಲ್ಲವನ್ನು ಬಂಧಿಸಿಡುವ ಸಂಕೇತ. ಪೂಜೆ ಅಥವಾ ಹೋಮಗಳಲ್ಲಿ ಹೊರ ಹೊಮ್ಮುವ ಎಲ್ಲ ಶಕ್ತಿಗಳನ್ನೂ ಸೆಳೆದುಕೊಳ್ಳುವ ಶಕ್ತಿ ಅದಕ್ಕಿರುತ್ತದೆ. ಅದರಿಂದಲೇ ಅದರಲ್ಲಿ ಹಾಕಿದ ನೀರನ್ನು ಎಲ್ಲ ಸಾಮಗ್ರಿ ಮತ್ತು ಜನರ ಮೇಲೂ ಸಿಂಪಡಿಸುವರು. ಇನ್ನು ಮಾವಿನ ಎಲೆ ಮತ್ತು ತೆಂಗಿನಕಾಯಿಗಳು ವೃದ್ಧಿಯ ಸಂಕೇತವಾಗಿ ಅವುಗಳನ್ನು ಉಪಯೋಗಿಸುವರು. ಜುಟ್ಟು ಇರೋ ತೆಂಗಿನಕಾಯಿ ಬೇಕು ಅನ್ನೋದು ಅದು ಕಲಶದ ಮೇಲೆ ಭದ್ರವಾಗಿ ಕುಳಿತುಕೊಳ್ಳಲಿ ಅಂತಷ್ಟೇ ಹೊರತು ಇನ್ಯಾವ ಅರ್ಥವೂ ಇಲ್ಲ, ಅನ್ಸತ್ತೆ. ೫ ಅಥವಾ ೭ ಮಾವಿನ ಎಲೆಗಳನ್ನು ಇರಿಸುವರು. ಬೆಸ ಸಂಖ್ಯೆಗಳು ಶ್ರೇಷ್ಟ ಅನ್ನುವರು. ಒಂದು ಅಥವಾ ಮೂರು ಅಶುಭದ ಸಂಕೇತ. ಹೆಣ್ಣು ಮಕ್ಕಳು ಮನೆ ಬಿಡುವಾಗ ಪಂಚಮಿ ಮತ್ತು ಸಪ್ತಮಿ ದಿನಗಳು ಒಳ್ಳೆಯದು, ನವಮಿ ಒಳ್ಳೆಯದಲ್ಲ ಅನ್ನುತ್ತಾರಲ್ಲ ಹಾಗೆ. ಇನ್ನು ಕಲಶದಲ್ಲಿ ಕಲ್ಲುಸಕ್ಕರೆ, ಬಾದಾಮಿ, ಖರ್ಜೂರ ಇತ್ಯಾದಿ ಒಣ ಹಣ್ಣುಗಳನ್ನು ಹಾಕುವರು. ಯಾಕೆ ಅಂದ್ರೆ ಹನ್ನುಗಳನ್ನು ಅದರಲ್ಲಿ ಹಾಕಿದರೆ ಅದು ಬೆಳೆಯಲಿ ಅಂತ ಅಷ್ಟೆ. ಹಸಿ ಹಣ್ಣು ಹಾಕಿದರೆ ಕೊಳೆಯಬಹುದು ಅಂತ ಒಣ ಹಣ್ಣುಗಳನ್ನು ಹಾಕುವರು. (ಕಳಶವನ್ನು ಕಲ್ಪವೃಕ್ಷಕ್ಕೂ ಹೋಲಿಸಬಹುದು - ಅದಕ್ಕೇ ತೆಂಗಿನಕಾಯಿ ಉಪಯೋಗಿಸುವುದು). ಕಲಶವನ್ನು ಅಕ್ಷಯ ಪಾತ್ರೆ ಎಂದೂ ತಿಳಿಯುವರು. ದೇವತಾ ಪೂಜೆಗೆ ಮುನ್ನ ಕಲಶದಲ್ಲಿ ಹಾಕುವ ನೀರನ್ನು ಗಂಗೆ ಎಂದು ತಿಳಿಯುವರು. ಏಕೆಂದರೆ ಗಂಗಾನದಿ ಜೀವಂತ ನದಿ. ಅದು ಎಂದೂ ಬತ್ತುವುದಿಲ್ಲ. ಮಾನವ ಕುಲಕ್ಕೆ ಶಕ್ತಿ ನೀಡುವ ಪಂಚ ಭೂತಗಳಲ್ಲಿ ಒಂದು. ಅದಕ್ಕೇ ನಿಸರ್ಗವೇ ದೈವ ಎಂತಲೂ ಹೇಳಬಹುದು.
ಮುಂದೆ ಪೂಜಿಸಬೇಕಾದ ದೇವರನ್ನು ಪ್ರಾಣ ಪ್ರತಿಷ್ಟಪನೆ ಮಾಡುವುದು. ಅಂದರೆ ಆ ದೇವರಿಗೆ ಪ್ರಾಣವನ್ನು ಕೊಡುವುದು. ಇದು ಸ್ವಲ್ಪ ಅಸಮಂಜಸ ಅನ್ನಿಸತ್ತೆ ಅಲ್ವೇ? ಇಡೀ ಜಗತ್ತನ್ನೇ ಕಾಪಾಡುವ ದೈವಕ್ಕೆ ನಾವು ಪ್ರಾಣ ಕೊಡುವುದೇ? ಇದು ಆನೂಚಾನವಾಗಿ ಬಂದ ರೂಢಿ, ಅಷ್ಟೆ. ನನ್ನ ಅನಿಸಿಕೆಯ ಪ್ರಕಾರ, ಈ ಮೂರ್ತಿ ಅಚೇತನ. ಅದಕ್ಕೆ ಜೀವ ಕೊಡುವ ಪರಿಪಾಠಿದಿಂದ ನಮ್ಮಲ್ಲ ಸ್ವಲ್ಪ ಭಯ ಭಕ್ತಿ ಉಂಟಾಗಲಿ ಎಂದು ಹಿರಿಯರು ಈ ಸಂಪ್ರದಾಯ ಮಾಡಿರಬೇಕು.
ನಂತರ ದೇವರ ಅಂಗಾಂಗಳಿಗೆ ಹೂವು ಅಕ್ಷತೆಗಳಿಂದ ಪೂಜಿಸುವುದು. ಹಾಗೇ ಅಷ್ಟೋತ್ತರಗಳನ್ನು ಪಠಿಸುತ್ತಾ ಕುಂಕುಮದಿಂದಲೂ ಅರ್ಚಿಸುವುದು. ಪ್ರತಿ ದೇವರಿಗೂ ವಿಶೇಷವಾದ ಹೂವನ್ನೂ, ಎಲೆಯನ್ನೂ (ಪತ್ರೆ), ಪೂಜೆಗಾಗಿ ಬಳಸುವರು. ಉದಾಹರಣೆಗೆ, ಗಣಪತಿಗೆ ದೂರ್ವವನ್ನೂ (ಗರಿಕೆ), ಗೌರಿ, ವರಮಹಾಲಕ್ಷ್ಮಿ, ದೇವಿಯರಿಗೆ ಸುವರ್ಣ ಪುಷ್ಪವನ್ನೂ (ಸೇವಂತಿಗೆ), ಶಿವನಿಗೆ ಬಿಲ್ವಪತ್ರೆಯನ್ನೂ, ಕಾಳಿಗೆ ಬಲಿಯ ಸ್ವರೂಪವಾದ ದಾಸವಾಳ ಹೂವನ್ನೂ ಪೂಜೆಯಲ್ಲಿ ಬಳಸುವರು.
ನವಗ್ರಹಗಳ ಪೂಜೆ - ನವಗ್ರಹಗಳನ್ನು ಜೋಡಿಸಿಡುವ ಬಗೆ ವಾಯುವ್ಯ ದಿಕ್ಕಿಗೆ ಬುಧ ಗ್ರಹದ ಸೂಚನೆಯಾಗಿ ಹೆಸರು ಕಾಳು ಅಥವಾ ಬೇಳೆ ಉತ್ತರ ದಿಕ್ಕಿಗೆ ಶುಕ್ರ ಗ್ರಹವಾಗಿ ಅವರೆಕಾಲು ಅಥವಾ ಬೇಳೆ ಈಶಾನ್ಯ ದಿಕ್ಕಿಗೆ ಚಂದ್ರ ಗ್ರಹವಾಗಿ ಅಕ್ಕಿ ಪೂರ್ವ ದಿಕ್ಕಿಗೆ ಕುಜಗ್ರಹವಾಗಿ ತೊಗರಿಬೇಳೆ ಆಗ್ನೇಯ ದಿಕ್ಕಿಗೆ ಕೇತು ಗ್ರಹವಾಗಿ ಹುರುಳಿ ದಕ್ಷಿನ ದಿಕ್ಕಿಗೆ ಶನಿಗ್ರಹವಾಗಿ ಕರಿ ಎಳ್ಳು ನೈಋತ್ಯ ದಿಕ್ಕಿಗೆ ರಾಹುಗ್ರಹವಾಗಿ ಉದ್ದಿನ ಕಾಳು ಅಥವಾ ಬೇಳೆ ಪಶ್ಚಿಮ ದಿಕ್ಕಿಗೆ ಗುರುಗ್ರಹವಾಗಿ ಕಡಲೆ ಕಾಳು ಅಥವಾ ಬೇಳೆ ಮತ್ತು ಮಧ್ಯ ಭಾಗದಲ್ಲಿ ಸೂರ್ಯನಾಗಿ ಗೋಧಿಯನ್ನೂ ಇಡುವುದು ಸಂಪ್ರದಾಯ. ಮಧ್ಯ ಬಾಗದಲ್ಲಿ ಬೆಲ್ಲದ ಅಚ್ಚನ್ನೂ ಇಡುವರು. ಇವುಗಳಿಗೆ ಪೂಜಿಸಿ ದಕ್ಷಿಣೆಯ ಸಮೇತವಾಗಿ ದಾನ ಮಾಡುವುದರಿಂದ ನವಗ್ರಹಗಳಿಗೆ ಶಾಂತಿ ಮಾಡಿದಂತೆ ಎಂಬ ನಂಬಿಕೆ ಇದೆ.
ಮುಂದೆ ಧೂಪ, ದೀಪಗಳನ್ನು ಅರ್ಪಿಸಿ, ನೈವೇದ್ಯ ಇಟ್ಟು ಮಹಾಮಂಗಳಾರತಿಯನ್ನು ಮಾಡುವುದು ರೂಢಿ. ಹೀಗೆ ಮಾಡಿದ ಮೇಲೆ ಬ್ರಾಹ್ಮಣರಿಗೆ ದಾನ ಕೊಡುವುದು. ನೈವೇದ್ಯ ಮಾಡಲು ಆಯಾ ದೇವರಿಗೆ ಪ್ರಿಯವಾದ ವಿಶೇಷ ಅಡುಗೆಯನ್ನು ಬಳಸುವರು. ಉದಾಹರಣೆಗೆ ಗಣೇಶನಿಗೆ ಮೋದಕವನ್ನೂ (ಕರಿಗಡುಬು), ಗೌರಿಗೆ ಹೋಳಿಗೆ ಅಥವಾ ಒಬ್ಬಟ್ಟು ಅರ್ಪಿಸುವರು. ಈಗೆಲ್ಲರ ಮನೆಗಳಲ್ಲೂ ಮಂತ್ರಗಳ ಕ್ಯಾಸೆಟ್‍ಗಳಿದ್ದು ಅದರ ಸಹಾಯದಿಂದ ಪೂಜೆ ಮಾಡುವರು. ಪುರೋಹಿತರನ್ನು (ಪುರದ ಹಿತ ಬಯಸುವವನು) ಕರೆಸಿ ಪೂಜೆ ಮಾಡುವ ಸಂಪ್ರದಾಯ ಕಡಿಮೆ ಆಗುತ್ತಿದೆ. ಸೂಕ್ತ ಪುರೋಹಿತರು ಸಿಗುವುದೂ ಕಡಿಮೆ ಆಗುತ್ತಿದೆ. ಇದಾದ ನಂತರ ಅಂದು ಪೂಜಿಸುವ ದೇವರ ಬಗೆಗಿನ ಕಥೆಯನ್ನು ಪೂಜೆಮಾಡಿಸಿದವರು ಹೇಳುವುದು ಮತ್ತು ನೆರೆದವರೆಲ್ಲರೂ ಕೇಳುವುದು. ಈ ಕಥೆಗಳು ಪುರಾಣದಲ್ಲಿ ಹೇಳಿರುವ ಕಥೆಗಳೇ. ಇದೊಂದು ನೀತಿ ಬೋಧಿಸುವ ವ್ಯವಸ್ಥೆ. ಕಥೆಯ ರೂಪದಲ್ಲಿ ಸಚ್ಚರಿತ್ರರಾಗಿ ಸನ್ನಡತೆಯ ಮಾರ್ಗವನ್ನನುಸರಿಸಲು ತಿಳಿಸುವ ಬೋಧನಾ ಕ್ರಮ.
ಒಂದು ಸೋಜಿಗ ಅಂದ್ರೆ ಇದೆಲ್ಲ ಮಾಡಿದ ಮೇಲೆ ತಪ್ಪು ಒಪ್ಪುಗಳನ್ನೆಲ್ಲಾ ನೀನೇ ಮನ್ನಿಸು ಎಂದು ಆ ದೇವನಿಗೆ ಪ್ರಾರ್ಥಿಸಿಕೊಳ್ಳುವುದು. ಹಾಗಿದ್ದರೆ ಪೂಜಿಸದೇ ಇದ್ದರೂ ತಪ್ಪಾಗಲಾರದು ಅಲ್ಲವೇ? ಈ ಕಡೆಯ ಒಂದು ಮಂತ್ರ ಅಥವಾ ಶ್ಲೋಕವನ್ನು ಪಠಿಸಿದರೆ ಸಾಕು. ಆದರೆ ಅದು ಹಾಗಲ್ಲ. ಈ ಪೂಜೆ ಪುನಸ್ಕಾರ ನಮ್ಮ ಮನಸ್ಸಿಗೆ ನೆಮ್ಮದಿ ತಂದುಕೊಡಲು ಮತ್ತು ದೇವರ ಭಯದಿಂದ ಕೆಟ್ಟ ಕೆಲಸಗಳನ್ನು ಮಾಡದೇ ಒಳ್ಳೆಯ ಕೆಲಸಗಳನ್ನು ಮಾಡಿ ಸಮಾಜಕ್ಕೆ ಒಳಿತು ಮಾಡುವುದು, ಇದರ ಉದ್ದೇಶ.
ಇಷ್ಟೆಲ್ಲಾ ಮಾಡಿ ದೇವರ ವಿಸರ್ಜಿಸುವ ಸಮಯದಲ್ಲಿ ಮತ್ತೆ ಪುನ: ಪೂಜೆಯನ್ನು ಮಾಡುವುದು ವಾಡಿಕೆ. ದೇವರನ್ನು ಸಂಕಲ್ಪ ರೂಪದಲ್ಲಿ ಬಂಧಿಸಿರುವುದನ್ನು ಮೇಲೆ ಹೇಳಿದೆ. ವಿಸರ್ಜಿಸುವವರೆಗೆ ಆ ದೇವರು ಅಲ್ಲಾಡಬಾರದು ಮತ್ತು ಅದಕ್ಕೆ ಧಕ್ಕೆಯಾಗಬಾರದು. ಮಕ್ಕಳು ಮುಟ್ಟುವ ಸನ್ನಿವೇಶ ಇರುವುದು ಹಾಗೂ ಮನೆಯಲ್ಲಿ ಮೈಲಿಗೆ ಆಗುವ ಸನ್ನಿವೇಶ ಬರಬಹುದು ಎಂದು ಸಾಮಾನ್ಯವಾಗಿ ಒಂದೆರಡು ದಿನಗಳಲ್ಲೇ ದೇವರನ್ನು ವಿಸರ್ಜಿಸುವರು. ವಿಸರ್ಜನೆ ಅಂದರೆ ಮತ್ತೆ ಪೂಜಿಸಿ ದೇವರನ್ನು ಅಲ್ಲಾಡಿಸುವುದು ಅಷ್ಟೆ.
ಇನ್ನು ಮಹಾರಾಷ್ಟ್ರದಲ್ಲಿ ಗೌರಿ ಪೂಜೆಗೆ ಅಷ್ಟು ಮಹತ್ವವಿಲ್ಲ. ಆದರೆ ಗಣೇಶನನ್ನು ಹತ್ತುದಿನಗಳ ಇಡುವರು. ಹತ್ತನೇ ದಿನ ಅನಂತ ಚತುರ್ದಶಿಯೂ ಆಗಿದ್ದು, ಅಂದು ಅನಂತಪದ್ಮನಾಭಸ್ವಾಮಿಯ ಪೂಜೆ ಮಾಡಿ ಗಣೇಶನನ್ನು ನೀರಿಗೆ ಬಿಡುವರು. ನಿಸರ್ಗದಿಂದ ಬಂದ ನಿಸರ್ಗವನ್ನು ನಿಸರ್ಗಕ್ಕೇ ಬಿಡುವುದು ಇದರ ಸೂಚನೆ.
ಮೇಲೆ ಹೇಳಿದ ಈ ಪೂಜಾ ವಿಧಾನವೆಲ್ಲ ಮಾಡುವುದು ಕೇವಲ ನಮ್ಮ ಮನಸ್ಸಿನ ಸಮಾಧಾನಕ್ಕೆ, ಅಷ್ಟೆ. ನಮ್ಮೊಳಗೇ ಇರುವ ಆ ಪರಮಾತ್ಮನನ್ನು ಸಾಕ್ಷಾತ್ಕರಿಸಿಕೊಳ್ಳುವವರೆಗೆ ಮಾತ್ರ. ಆ ಬ್ರಹ್ಮಾಂಡದೊಳಗೆ ಈ ಆತ್ಮ ಒಂದು ಭಾಗ ಎಂದು ತಿಳಿಯುವವರೆವಿಗೆ ಮಾತ್ರ. ನಂತರ ಇವೆಲ್ಲವುಗಳಿಗೂ ಅರ್ಥವೇ ಇರುವುದಿಲ್ಲ. ಅಧ್ಯಾತ್ಮದ ಕಡೆಗೆ ಚಿಂತಿಸುವವನಿಗೆ ದೇವರು ಎಲ್ಲ ಕಡೆ ಕಾಣುವುನು. ತಾನೂ ದೇವರಾಗುವನು.
Rating