ಪೆಟ್ರೋಲ್ ಬಂಕಿನಲ್ಲಿ ನಾ ಕಲಿಸಿದ ಪಾಠ

ಪೆಟ್ರೋಲ್ ಬಂಕಿನಲ್ಲಿ ನಾ ಕಲಿಸಿದ ಪಾಠ

ನೆನ್ನೆ ರಾತ್ರಿ ಒಂಭತ್ತು ಘಂಟೆ ಆಫೀಸ್-ನಿಂದ ಹೊರಬಿದ್ದು, ಬೈಕ್ ಅಲ್ಲಾಡಿಸುತ್ತಾ, ಒಂದು ಕಿವಿಯನ್ನ ಟ್ಯಾಂಕ್ ಹತ್ತಿರ ಒಯ್ದುರೂ, ಪೆಟ್ರೋಲ್ ಯಾವತ್ತು ಹಾಕ್ಸಿದ್ದೂ ಅಂತ ನೆನಪು ಬರ್ಲಿಲ್ಲ.

ಹತ್ರನೇ ಇರೋ ಪೆಟ್ರೋಲ್ ಬಂಕ್ ಗೆ ಹೋದೆ. ಮೂರು ಪಂಪ್ ಗಳಲ್ಲಿ ಒಂದು ಖಾಲಿ ಇತ್ತು. ಆ ಪಂಪ್ ನಲ್ಲಿ ಪೆಟ್ರೋಲ್ ಬಿಡುವವ ಕೈ ಮಾಡಿದ. ಟ್ಯಾಂಕ್ ಮುಚ್ಚಳ ತೆಗೀತಾ, "ಇನ್ನೂರ್ರೂಪಾಯಿ ಹಾಕಪ್ಪ" ಅಂದೆ. "ಇಂಗ್ಲೀಶ್, ಇಂಗ್ಲೀಶ್" ಅಂದ.

ತಲೆ ಎತ್ತಿ ಅವನ ಮುಖ ನೋಡ್ದೆ. ಕೆಂಪು-ಕೋಲು ಮುಖ, ಮಂದಹಾಸದೊಂದಿಗೆ ಬಂಕ್ ನ ಲೈಟಿನಲ್ಲಿ ಮಿರಿ-ಮಿರಿ ಮಿಂಚುತ್ತಿತ್ತು. ಹೊಸ ಫೇಸ-ಕಟ್ಟು ಅಂತ ಗೊತ್ತಾಯ್ತು. ಜೊತೆಗೆ, ಬ್ಯಾಕ್-ಗ್ರೌಂಡ್ ನಲ್ಲಿ ನನ್ನ ಮೈಯಂತೂ ಉರಿತಾಯಿತ್ತು, ಮನಸ್ಸು ಚಡಪಡಿಸುತ್ತಿತ್ತು. ಕೆಲವು ಯೋಚನೆಗಳು ಬಂದ್ವು.

ಅ) ಬಂಕ್ ಓನರ್ ನ ಕರೆದು, "ಏನಪ್ಪಾ ಇದು ?" ಅನ್ನೋದು. ಸರಿಹೋಗ್ಲಿಲ್ಲ ಅಂದ್ರೆ, ಜಗಳ ಆಡೋದು.
ಆ) ಅವನ ಜೊತೆ ಮಾತಿಗೆ ಮಾತು ಬೆಳೆಸಿ, ಯಕ್ಕಾ-ಮಕ್ಕಾ ಬಿ.ಪಿ ಏರಿಸ್ಕಣದು. ಇದರಿಂದ ಅವನ ಜೊತೆ ಬಂಕಲ್ಲಿ ಇರೋರೆಲ್ಲಾ ಮಜಾ ತಗಳ್ಳೋ-ಹಾಗೆ ಮಾಡೋದು.

ಇನ್ನೂ, ಇಂತಹುವೆ ಏನೋನೋ..?, ನಾ ಬರೆಯಲೊಲ್ಲೆ.

ಸುಮ್ಮನೆ "ಟೂ ಹಂಡ್ರೆಡ್" ಅಂದೆ.

ಅವನು ಪೆಟ್ರೋಲ್ ಹಾಕೋವಾಗ, ಅವನ ಭಾಶೇಲಿ (ಹಿಂದಿ), ’ಸಮಾಧಾನವಾಗಿ’, "ನೋಡಪ್ಪ, ನೂರು ಅಂದ್ರೆ ಹಂಡ್ರೆಡ್, ಇನ್ನೂರು ಅಂದ್ರೆ ಟೂ ಹಂಡ್ರೆಡ್, ಐನೂರು ಅಂದ್ರೆ ಫೈವ್ ಹಂಡ್ರೆಡ್ ", ಅಂತ ನನಗೆ ಆ ಸಮಯದಲ್ಲಿ ಅವನಿಗೆ ಬೇಕಾಗಬಹುದಾದವು ಅಂತ ಹೊಳೆದ ಸಂಖ್ಯೆಗಳನ್ನ ಹೇಳಿಕೊಟ್ಟೆ.

ಜೊತೆಗೆ, "ಇಂಗ್ಲೀಶ್-ಇಂಗ್ಲೀಶ್ ಅಂತ ಇನ್ನೊಮ್ಮೆ ಅನ್ನಬೇಡ", ಎಂದೆ.

ಅವನು ಅವಕ್ಕೆಲ್ಲಾ "ಹೌದು-ಹೌದು", ಎಂಬಂತೆ ತಲೆ ಅಲ್ಲಾಡಿಸುತ್ತಾ, ನಗುತ್ತಿದ್ದನು.
ಅವನ ಕೆಂಪು-ಕೋಲು ಮುಖ ಬಂಕಿನ ಲೈಟಿನಲ್ಲಿ ಮಿರಿ-ಮಿರಿ ಮಿಂಚುತ್ತಿತ್ತು.

ನಾನು "ಇನ್ನೂ ಏನು ಮಾಡಬಹುದಿತ್ತು ?" ಎಂದು ಯೋಚಿಸಲಿಲ್ಲ.

Rating
No votes yet

Comments