ಪೇಪರ್ ಹುಡುಗ..

ಪೇಪರ್ ಹುಡುಗ..

ಬಹಳ ದಿನಗಳ ಅನಂತರ ಬೆಂಗಳೂರಿನಿಂದ ಮನೆಗೆ ಹೊರಟಿದ್ದೆ. ನೈಟ್ ಶಿಫ್ಟ್ ಮುಗಿಸಿ ಆಫೀಸಿನಿಂದ ಕ್ಯಾಬ್ ಹಿಡಿದು ಸೀದಾ ಮೆಜೆಸ್ಟಿಕ್‌ಗೆ ಹೋಗಿ ಶಿವಮೊಗ್ಗೆಯ ಬಸ್ ಹತ್ತುವಾಗ ಸುಮಾರು ೫:೩೦ ರಿಂದ ಆರು ಘಂಟೆಯಾಗುತ್ತದೆ. ಬಸ್ ಅಂತೂ ಸಿಕ್ಕಿತ್ತು.. ರಾತ್ರಿ ಎಲ್ಲ ಕೆಲಸ ಮಾಡಿ ಕಣ್ಣುಗಳು ದಣಿದಿದ್ದವು.. ಕಣ್ಣು ಮುಚ್ಚಿ ನಿದ್ದೆಗೆ ಜಾರಬೇಕು ಅನ್ನಬೇಕಾದರೆ ಪೇಪರ್ ಬೇಕಾ ಪೇಪರ್ ಅಂತ ಪುಟ್ಟ ಹುಡುಗನೊಬ್ಬ ಹಿಂದಿನ ಬಾಗಿಲಿನಿಂದ ಹತ್ತಿ ಜನರೆಲ್ಲರ ಹತ್ತಿರ ಕೇಳುತ್ತಾ ಬರುವುದು ಕಂಡಿತ್ತು. ಬ್ಯಾಗ್ ಪಕ್ಕದ ಸೀಟಿನಲ್ಲಿತ್ತು ಕುಳಿತ ನನ್ನನ್ನು ಮಧ್ಯವಯಸ್ಕನೊಬ್ಬ ಎಚ್ಚರಿಸಿ ಬ್ಯಾಗ್ ತೆಗೆಯಪ್ಪ ನಾನು ಕುಳಿತುಕೊಳ್ಳಬೇಕು ಅಂತ ಎಚ್ಚರಿಸಿದ್ದ. ಸರಿ ಸಾರ್ ಅಂತ ಜಾಗ ಬಿಟ್ಟೆ. ನೋಡಲು ಸುಮಾರಾಗಿ ಒಳ್ಳೆಯ ಉದ್ಯೋಗ ಹೊಂದಿದ ಸರ್ಕಾರಿ ಅಧಿಕಾರಿಯಾಗಿ ಕಾಣುತ್ತಿದ್ದ ಆತನ ಕೈಯಲ್ಲಿ ಪಚ್ಚೆಯುಂಗುರ ಮಿಂಚಿತ್ತು. ಕುತ್ತಿಗೆಯಲ್ಲಿನ ಚಿನ್ನದ ಸರದಿಂದ ಮುಗುಳ್ನಗುತ್ತಿದ್ದ ತಿರುಪತಿ ವೆಂಕಟರಮಣ ಶರಟಿನ ಮೊದಲನೇ ಗುಂಡಿಯ ಸಂದಿಯ ಹೊರಹಕ್ಕು ಗಾಳಿವಿಹಾರಕ್ಕೆ ಕಾದಿದ್ದ. ಹರಳುಗಳು ಮಿಂಚಿದ್ದವು. ಇದನ್ನೆಲ್ಲ ದಿಟ್ಟಿಸುತ್ತಿದ್ದ ನನ್ನ ಗಮನ ಮತ್ತೆ ಸೆಳೆದದ್ದು ಪೇಪರೇ ಮಾರುವ ಹುಡುಗ. ಗುಂಡಿ ಕಿತ್ತು ಹೋದ ಗೀರಿನ ನೀಲಿ ಬಿಳಿ ಅಂಗಿ, ಮಣ್ಣು ಸೋಕಿದ ಕಾಲರು, ಅರ್ಧ ಮಡಚಿ ಅರ್ಧ ಬಿಟ್ಟು, ಹರಿದಿದ್ದ ತೋಳು, ಚಿಂದಿಯಾದ ಉಣ್ಣೆಯ ಟೋಪಿ ಅದರ ಮಧ್ಯೆಯೂ ಜೀವನದಲ್ಲಿ ಅದೆಷ್ಟು ಕಷ್ಟಗಳನ್ನು ಮೆಟ್ಟಿ ನಿಂತು ನಿಯತ್ತಾಗಿ ದುಡಿದು ತಾನೇನೂ ಸಾಧಿಸಿತ್ತೇನೆ ಅಂತ ಹೊಳೆಯುತ್ತಿದ್ದ ಆತನ ಕಣ್ಣುಗಳು. ನನ್ನ ಕಡೆ ನೋಡಿ, 'ಸಾರ್ ಪೇಪರ್ ತಗೊಳ್ಳಿ ಸಾರ್' ಎಂದ. ನಾನು ಸರಿಯಪ್ಪ ಅಂತ ಹತ್ತು ರೂಪಾಯಿಯ ನೋಟು ಆತನ ಕಯ್ಯಲ್ಲಿತ್ತು ಪೇಪರ್ ಎತ್ತಿಕೊಂಡೆ. ಹುಡುಗ, 'ಸರ್, ಪೇಪರ್‌ಗೆ ೨ ರೂಪಾಯಿ ಮಾತ್ರ ನನ್ನ ಹತ್ತಿರ ಚಿಲ್ಲರೆಯಿಲ್ಲ.. ಒಂದು ನಿಮಿಷ ಇರಿ ಸಾರ್, ಇಸ್ಕೊಂಡು ಬರ್ತೀನಿ' ಅಂದ. ಆತನನ್ನು ತಡೆದ ನಾನು, 'ಇರಲಿ ಮಾಣಿ, ಇಟ್ಟುಕೊ.. ಚಿಲ್ಲರೆ ನಿನಗೆಯೇ ಇರಲಿ' ಎಂದಾಗ ಅವನ ಮುಖದಲ್ಲಿ ಮುಂಜಾನೆಯ ಸೂರ್ಯ ಹುಟ್ಟಿದ್ದ. 'ಥ್ಯಾಂಕ್ಸ್ ಸಾರ್' ಎಂದವನೇ, ನನ್ನ ಪಕ್ಕದಲ್ಲೇ ಕುಳಿತಿದ್ದ ವ್ಯಕ್ತಿಯನ್ನ 'ಸಾರ್, ಪೇಪರ್ ತಗೋಳಿ ಸಾರ್.. ಎರಡೇ ರೂಪಾಯಿ ಸಾರ್' ಅಂತ ಕೇಳಿಕೊಂಡ. ಪಕ್ಕದಲ್ಲ್ಲಿ ಕುಳಿತಿದ್ದ ಈತ, 'ಏ, ಬೇಡ ಹೋಗೋ' ಅಂತ ಆತನ ಗದರಿದ. ಹುಡುಗ ಅಲ್ಲಿಂದ ಹೊರಟು ಹೋದ. ಪೇಪರ್ ಓದಲು ಶುರು ಮಾಡಿದ್ದ ನಾನು. ಸ್ವಲ್ಪ ಹೊತ್ತಿನಲ್ಲಿಯೇ ನಿದ್ದೆಗೆ ಜಾರಿದ್ದೆ.. ಪೇಪರ್, ಮಡಿಚಿ ಕಯ್ಯಲ್ಲಿಯೇ ಇಟ್ಟುಕೊಂಡಿದ್ದು ಸ್ವಲ್ಪ ಸಡಿಲವಾಗಿತ್ತು. ಸುಮಾರು ಎರಡು ತಾಸು ಆಗಿರಬೇಕು.. ತುಮಕೂರು ಬರುವುದಕ್ಕೂ ಸೂರ್ಯನ ಕಿರಣ ಕಿಟಕಿಯಿಂದ ಕಣ್ಣಿಗೆ ಬೀಳುವುದಕ್ಕೂ ಸರಿಯಾಗಿ ಎಚ್ಚರವಾಗಿತ್ತು. ಕಯ್ಯಲ್ಲಿದ್ದ ಪೇಪರ್ರು ಈಗಿರಲಿಲ್ಲ. ವಿಸ್ಮಯಗೊಂಡ ನಾನು ಅರೆ ಎಲ್ಲಿ ಹೋಯಿತು ಅಂತ ಯೋಚಿಸುತ್ತಿರುವಂತೆಯೇ ಪಕ್ಕದ ಕಡೆಯ ವ್ಯಕ್ತಿಯ ಕಯ್ಯಲ್ಲಿ ಪೆಪರ್ರಿತ್ತು. ಆತ ಅದನ್ನು ಓದುವುದರಲ್ಲಿ ತಲ್ಲೀನನಾಗಿದ್ದ. ಪೇಪರ್ ಪುಟಗಳನ್ನು ಮಡಿಚುವಾಗ ಆತನ ಕಣ್ಣುಗಳನ್ನು ಓದುವುದನ್ನೇ ಕಾದು ಕೂತಿದ್ದೆ. ಪ್ರಪಂಚ ಇಷ್ಟೆಯ್ಯಾ ಅನ್ನುವ ಗೊಂದಲ ನನ್ನ ಮನಸ್ಸನ್ನು ಹೊಕ್ಕು ಬರುವ ನಿದ್ದೆಯೂ ಜಾರಿತ್ತು. 

Rating
No votes yet

Comments

Submitted by kavinagaraj Mon, 01/05/2015 - 16:20

ಬಸ್ಸು, ರೈಲುಗಳಲ್ಲಿ ಪೇಪರ್ ಎಲ್ಲರ ಸ್ವತ್ತು ಆಗಿಬಿಡುತ್ತದೆ!! :)