ಪೋಂ ಪೋಂ..ಪೊಪೊಪೋಂ..

Submitted by ಗಣೇಶ on Thu, 12/27/2012 - 23:52

ಪೋಂ ಪೋಂ...ಪೋಪೋಪೋಂ.. ಪೋಂ..ಪೊಪೊಪೋಂ...ಇದು ಸಿನೆಮಾ ಹಾಡಲ್ಲಾ..ನನ್ನ ಪರ್ಕಟ್ ಸ್ಕೂಟರ್‌ನ ಹಾರ್ನ್. ಒತ್ತಿ ಒತ್ತಿ ಸುಸ್ತಾದರೂ ಆತ ಸೈಡ್‌ಗೆ ಹೋಗುತ್ತಲೇ ಇಲ್ಲ. ಯಾಕೆಂದರೆ ಕಿವಿಯಲ್ಲಿ ವಯರ್ ಸಿಕ್ಕಿಸಿ, ಹಾಡು ಕೇಳುತ್ತಿರುವವನಿಗೆ ಈ ಲೋಕದ ಪರಿವೇ ಇಲ್ಲ. ಮೂರೂ ಬ್ರೇಕ್ ಬಿದ್ದ ಮೇಲೆ ಸ್ಕೂಟರ್ ನನ್ನ ಮೇಲೆ ಕರುಣೆ ತೋರಿ ನಿಂತಿತು. "ಬದುಕಿಕೊಂಡೆ, ಇಲ್ಲಾ ಪೇಂ..ಪೇಂ..ಪೇಂ..ಗಾಡಿಯಲ್ಲಿ ಹೋಗಬೇಕಾಗುತ್ತಿತ್ತು..." ಎಂದೆಲ್ಲಾ ಬೈದೆ. "ಸಾರಿ..." ಎಂದಷ್ಟೇ ಹೇಳಿ ಹಾಡು ಕೇಳುತ್ತಾ ಮುಂದೆ ಹೋದ..

"ಟ್ರಾಫಿಕ್ ಪೋಲೀಸರು ಇಂತಹವರ ಕೈಯಿಂದ ಮೊಬೈಲ್ ಕಿತ್ತು, ಫೈನ್ ಹಾಕಬೇಕು" ಎಂದಳು ಪಿಲಿಯನ್ ಕುಳಿತ ನನ್ನಾಕೆ.

"ಪಾಪ.. ಕೇಳಲಿಬಿಡೆ. ಇನ್ನೊಂದೆರಡು ವರ್ಷ ಕೇಳಿಯಾನು. ಮದುವೆಯಾದ ಮೇಲೆ ಈ ಅಭ್ಯಾಸ ಬಿಟ್ಟುಹೋಗುವುದು." ಅಂದೆ.

"ಚಟ ಹ್ಯಾಗ್ರೀ ಬಿಟ್ಟುಹೋಗುವುದು?"

"ಬೆಳಗ್ಗಿಂದ ಕೆಲಸಕ್ಕೆ ಹೊರಡುವವರೆಗೆ ಮನೆಯಾಕೆಯ ರಾಗ ಕೇಳೀ ಕೇಳೀ...ಬೇರೆ ರಾಗ.."

"ಏನಂದ್ರೀ..."

"ಅಲ್ವೇ, ಆತನ ಹೆಂಡತಿ ಬುದ್ಧಿ ಹೇಳಿ ಆ ಚಟ ಬಿಡಿಸುವಳು"ಎಂದೆ ಜೋರಾಗಿ. ನನ್ನ ಸ್ಕೂಟರ್ ಬೇಕಾದಾಗ ಶಬ್ದ ಜೋರು ಮಾಡಿ ನನ್ನ ಮಾನ ರಸ್ತೆಯಲ್ಲಿ ಉಳಿಸುತ್ತದೆ. ಹಾಗೇ ಅದರ ಮಾನಾನೂ ನಾನು ಉಳಿಸುತ್ತೇನೆ. ಎಲ್ಲೆಂದರಲ್ಲಿ ಮನಬಂದಂತೆ ನಿಂತುಬಿಡುವುದು ಅದರ ಅಭ್ಯಾಸ. ವಯಸ್ಸಾಯಿತಲ್ಲಾ.. ಅದಕ್ಕೇ ಅದು ಅಲ್ಲಲ್ಲಿ ನಿಂತು ಉಸಿರುತೆಗೆದುಕೊಂಡು ಪುನಃ ಹೊರಡುವುದು. (ಈ ಕಾರಣಕ್ಕೇ ನಾನು ಬೆಂಗಳೂರಿನ ರಸ್ತೆಗಳನ್ನು ಸಿಗ್ನಲ್ ಫ್ರೀ ಮಾಡುವುದಕ್ಕೆ ವಿರೋಧಿಸುವುದು. ಪ್ರತೀ ರಸ್ತೆಯಲ್ಲಿ ಒಂದೆರಡಾದರೂ ಸಿಗ್ನಲ್‌ಗಳು ಇರಬೇಕು.) ಸ್ಕೂಟರ್‌ಗೆ ದಮ್ಮು ಬೇಕಾದಾಗ, ಸೈಡ್‌ಗೆ ಪಾರ್ಕ್ ಮಾಡಿ, ಅಗತ್ಯವಿಲ್ಲದಿದ್ದರೂ ವಿಳಾಸ ವಿಚಾರಿಸುವುದೋ, ಪರ್ಚೇಸ್ ಮಾಡುವುದೋ ಮಾಡಿ ಬಂದು ಸ್ಕೂಟರ್ ಸ್ಟಾರ್ಟ್ ಮಾಡುತ್ತಿದ್ದೆ. ಯಾರಿಗೂ ಸ್ಕೂಟರ್‌ನ ದಮ್ಮುರೋಗ ಗೊತ್ತಾಗುತ್ತಿರಲಿಲ್ಲ.

" ಈ ಗಣೇಶರು ಅದ್ಯಾಕೆ ಆ ಪರ್ಕಟ್ ಸ್ಕೂಟರಲ್ಲಿ ಒದ್ದಾಡುತ್ತಾರೆ. ಹೊಸ ಸ್ಕೂಟರ್ ತೆಗೆದುಕೊಳ್ಳಬಾರದೆ?" ಅಂತ ನೀವು ಆಲೋಚಿಸಿದಿರಲ್ಲಾ? ಅದೇ ಪ್ರಾಬ್ಲೆಂ. ಒಂದೇ ಒಂದು ದಿನ "ಅಂಬಾರಿ ಹೊರುವ" ಅರ್ಜುನನ್ನು ಬದಲಾಯಿಸಲು ಎಷ್ಟು ತಯಾರಿ ಬೇಕಾಯಿತು ಅಂತ ನಿಮಗೆಲ್ಲಾ ಗೊತ್ತೇ ಇದೆ. ದಿನಾ (ಅಂ)ಬಾರಿಮುತ್ತು ಹೊರುವ ಸ್ಕೂಟರ್‌ಗೆ ಬದಲಿ ಸಿಗಲು ಸಾಧ್ಯವೇ?

ಈಗಲೂ ಸ್ಕೂಟರ್ ಏದುಸಿರು ಬಿಡುವುದು ಗೊತ್ತಾಯಿತು. ಕೂಡಲೇ ಸೈಡ್‌ಗೆ ನಿಲ್ಲಿಸಿದೆ. ಎದುರಲ್ಲಿ ರಾಜ್ ಸ್ಮಾರಕ ಕಾಣಿಸಬೇಕೆ. "ನೋಡೇ..ಬಹಳ ದಿನದಿಂದ ನಿನಗೆ ರಾಜ್ ಸ್ಮಾರಕ ತೋರಿಸಬೇಕೆಂದಿದ್ದೆ. ಬಾ..ನೋಡೋಣ" ಎಂದು ಕರಕೊಂಡು ಹೋದೆ.

ರಾಜ್ ಸ್ಮಾರಕ ಇನ್ನೂ ನಿರ್ಮಾಣ ಹಂತದಲ್ಲಿದೆ.(  http://www.studio69india.com/projects/memorials/DrRajkumar.html )ಪೂರ್ತಿಯಾದಾಗ ಬಹಳ ಸುಂದರವಾಗಬಹುದು. (http://www.thehindu.com/todays-paper/tp-national/article3347368.ece )ಒಳಗೆ ಹೋಗಿ ರಾಜ್ ಸಮಾಧಿಗೆ ವಂದಿಸಿ,  ರಾಜ್ ಸಿನಿಮಾಗಳ ಚಿತ್ರಗಳನ್ನು ನೋಡುತ್ತಾ, ಹಿಂದೆ ಬಂದೆವು. ನನ್ನಾಕೆಗೂ, ಉಳಿದವರಿಗೂ ಗೊತ್ತಾಗದಂತೆ ಕಣ್ಣಂಚಲ್ಲಿದ್ದ ನೀರನ್ನು ಕರ್ಚೀಫಲ್ಲಿ ಒರೆಸಿಕೊಂಡೆನು.

ಸ್ಕೂಟರ್ ಮುಂದಿನ ಸವಾರಿಗೆ ರೆಡಿಯಾಗಿತ್ತು.

Rating
No votes yet

Comments

ಕವಿನಾಗರಾಜರೆ,
ಫೋಟೋ ಸೇರಿಸಿದರೆ, ಅದರ ಜತೆ ಗಣೇಶರ ಫೋಟೋನೂ ಇದ್ದರೆ ಸೂಕ್ತ ಎಂದು ಪಾರ್ಥರು, ಅದರ ಜತೆ ಏರಿಯಾದ ಫೋಟೋನೂ ಎಂದು ಸಪ್ತಗಿರಿವಾಸಿ..ಹೀಗೆ ಫೋಟೋಗಳು ಜಾಸ್ತಿಯಾಗುವುದು ಬೇಡ ಎಂದು ಹಾಕಲಿಲ್ಲ. :)
ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
-ಗಣೇಶ.

ಗಣೇಶರೆ ಚಿ0ತೆ ಬೇಡ‌
ನಿಮ್ಮ ಭಾವ‌ ಚಿತ್ರ ಹಾಕಿ ಅ0ತ‌ ಹೇಳೊಲ್ಲ, ನೀವು ಪೋಟೊ ಒಳಗೆ ಹಿಡಿಯಲ್ಲ ಅ0ತ‌ ಗೊತ್ತು.
ಮತ್ತೆ ನೀವು ಸ0ಪದದ‌ ಬಾನುವಾರ‌ ಕಾರ್ಯಕ್ರಮಕ್ಕೆ ಬರುತ್ತೀರಿ ಅ0ತಲು ನಿರೀಕ್ಷಿಸಲ್ಲ.
ನೀವು ರಾಜ್ ಸಮಾದಿಬಳಿ ಇದ್ದಾಗ‌ ನಾನು ಅಲ್ಲಿ ಇದ್ದೆನೇನೊ ಯಾರಿಗೆ ಗೊತ್ತು. ಕ್ರಿಸ್ ಮಸ್ ದಿನ‌ ಸ0ಜೆ ನಾನು ಅಲ್ಲಿ ಇದ್ದೆ.
ನೀವು ಹೀಗೆ ಇದ್ದುಬಿಡಿ. ದೇವರ‌ ಹಾಗೆ.
ಎಲ್ಲರ‌ ಭಾವವನ್ನು ಗೌರವಿಸಿವುದು ನಮ್ಮ ಕರ್ತವ್ಯ ಅಲ್ಲವೆ ?
ಮತ್ತೆ ನಿಮ್ಮ ಬರಹ‌ ಹಾಗು ಚಿತ್ರಗಳು ಚೆನ್ನಾಗಿದೆ ! :‍)

ಈ ಬರಹವನ್ನು ನಾ ಈಗ ನೋಡಿದೆ..ಓದಿದೆ...!!
ರಾಜ್ ಅವರು ತೀರಿದ ತಿಂಗಳ ಮೇಲೆ ಅಲ್ಲಿಗೆ ಹೋಗಿದ್ದಾಗ ಇನ್ನು ಯಾವುದೇ ತಯಾರಿ ಇರಲಿಲ್ಲ..
ಮೇಲೆ ಶೀಟ್ ಹಾಕಿ ಕವರ್ ಮಾಡಿದ್ದರು ಏರಿಸಿದ್ದ ಮಣ್ಣು ಹಾಗೆಯೇ ಇತ್ತು..ಸರತಿ ಸಾಲಲ್ಲಿ ದೂರದಲ್ಲಿಯೆ ಪಾದರಕ್ಷೆ ಬಿಟ್ಟು ದೇವಸ್ಥಾನಕ್ಕೆ ಹೋಗುವ ಹಾಗೆ ಭಯ ಭಕ್ತಿಯಿಂದ ಅಭಿಮಾನದಿಂದ ಶಾಂತರಾಗಿ ಹೋಗುತ್ತಿದ್ದ ಜನ ಅಲ್ಲಿ ಕೋಳಿ-ಮುದ್ದೆ-ಸಾರು ಹೂವು ಹಣ್ಣು ಇತ್ಯಾದಿ ಇಟ್ಟು ನಮಸ್ಕಾರ ಮಾಡುತ್ತಿದ್ದುದು ನೋಡಿದೆ-ಅದು ನೋಡುಗರಿಗೆ ತಮಾಷೆ ಅನ್ನಿಸಿದರೂ ದೇವರ ಸಮಾನಕ್ಕೆ ಪೂಜೆ ಪುನಸ್ಕಾರ ಪುರಸ್ಕಾರ ಆದರ ಜನರಿಂದ ಪಡೆವ ರಾಜ್ ಅವರು ಎಂದು ಅರಿವಾಯ್ತು..
ಆಮೇಲೆ ಸುಮಾರು ೫-೬ ತಿಂಗಳ ಮೇಲೆ ಅಪ್ಪ ಅಮ್ಮ ( ರಾಜ್ ಅಭಿಮಾನಿಗಳು)ಅವರ ಜೊತೆ ಹೋದಾಗ ರಾಜ್ ಸಮಾಧಿಗೆ ಗ್ರಾನೈಟ್ ಕಲ್ಲು ಹಾಸಿದ್ದರು-ಹೂವು ಪೇರಿಸಿದ್ದರು ,ಮೇಲೆ ಸುತ್ತ ಮುತ್ತ ಒಳ್ಳೆ ನೆರಳಿನ ವ್ಯವಸ್ಥೆ ಇತ್ತು..
ಆಮೇಲೆ ಆ ಕಡೆ ಹೋಗಲು ಆಗಲಿಲ್ಲ ಪತ್ರಿಕೆಗಳಲ್ಲಿ ಕೆಲಸ ಪ್ರಗತಿಯಲ್ಲಿದೆ ಎಂದು ಓದಿದ್ದೆ,ಈಗ ನಿಮ್ಮ ಚಿತ್ರಗಳನ್ನು ನೋಡಿದ ಮೇಲೆ ಎಲ್ಲ ಕೆಲಸಗಳು ಬಹುಪಾಲು ಮುಕ್ತಾಯ ಹಂತದಲ್ಲಿವೆ ಅನ್ನಿಸುತ್ತಿದೆ..
ಆಗಲೂ ಈಗಲೂ ಜನಪ್ರಹವಾಹವೇ ಅಲ್ಲಿಗೆ ಯಾವುದೋ ಪ್ರವಾದಿಯನ್ನು ನೋಡುವಂತೆ ಹರಿದುಬರುತ್ತದೆ..
ಹೆಸರು ಎಲ್ಲರಿಗೂ ಇರುವುದು-ಆದರೆ ಹೆಸರುವಾಸಿಯಾಗುವುದು ಪ್ರಯತ್ನದಿಂದ-ಹರಕೆ ಹಾರೈಕೆಯಿಂದ..
ರಾಜ್ ಅವರು ಅವರ ಚಿತ್ರಗಳು-ಹಾಡುಗಳ ಮೂಲಕ ಜನಮಾನಸದಲಿ ಯಾವತ್ತೂ ನೆಲೆಸಿ -ಅವರ ನೆನಪು ಸದಾ ಇರುವುದು..

>>>ರಾಜ್ ಅವರು ತೀರಿಕೊಳ್ಳುವ ಮುಂಚೆ-ಇನ್ನೇನು ಹತ್ತಿರದಲ್ಲಿಯೇ ಇದ್ದ ಅವರ ಜನುಮದಿನ ಅವರ ಮನೆಗೆ ಹೋಗಿ ನೋಡಿ ಫೋಟೋ ತೆಗೆಸಿಕೊಂಡು ಬರುವ ಎಂದು ಗೆಳೆಯರೊಡನೆ ಹೇಳಿ ಆ ದಿನಕ್ಕೆ ಕಾದಿರುವಾಗಲೇ ಅವರು ನಮ್ಮನ್ನು ಅಗಲಿದರು.ಅದಕೂ ಮುಂಚೆ ಹಲವು ಬಾರಿ ಅವರನ್ನು ನೋಡಬೇಕು ಎಂದು ಅಂದುಕೊಂಡು ಅದಕ್ಕೆ ಯಾವ ಪ್ರಯತ್ನವನ್ನೂ ಮಾಡದೆ ಸುಮ್ಮನ್ನಿದ್ದು ಈಗ ಕಳೆದುಕೊಂಡ ಆ ಚಾನ್ಸ್ಗೆ ಕೊರಗುತ್ತ ಮರುಗುತ್ತ ನನ್ನ ನಾನೇ ಹಳಿದುಕೊಳ್ಳುವೆ ..:(((
ಆಗಿಂದ ಏನಾರ ಮನದಲ್ಲಿ ನಿರ್ಧರಿಸಿದರೆ ಆಗಲೇ ಅದನ್ನು ಕಾರ್ಯರೂಪಕ್ಕೆ ತರಬೇಕು ಎಂದು ಮನವರಿಕೆ ಆಗಿದೆ..!!
ಶುಭವಾಗಲಿ..

\।

೩೦ ವರ್ಷಕ್ಕೂ ಹಿಂದಿನ ಘಟನೆ. ರಾಜ್ ಸಂಗೀತ ಸಂಜೆ ನಮ್ಮ ಊರಲ್ಲಿ ಇತ್ತು. ನಾನೂ ಗೆಳೆಯ ನೋಡಲು ಹೋಗುತ್ತಿದ್ದೆವು. ಅಲ್ಲಿಂದ ಓಡಿಕೊಂಡು ಬರುತ್ತಿದ್ದ ಜನಗಳನ್ನು ವಿಚಾರಿಸಿದಾಗ, ಅಲ್ಲಿ ಕಾಲಿಡಲೂ ಸಾಧ್ಯವಿಲ್ಲ. ಪೋಲೀಸರು ಲಾಠೀಚಾರ್ಜ್ ಮಾಡುತ್ತಿದ್ದಾರೆ ಅಂದರು. ಇನ್ನು ಹೋಗಿ ಪ್ರಯೋಜನವಿಲ್ಲ ಎಂದು, ಅಲ್ಲೇ ಹತ್ತಿರದ ದೇವಸ್ಥಾನಕ್ಕೆ ಹೋಗಿ ಹಿಂದೆ ಬರುತ್ತಿದ್ದೆವು. ಎದುರಿಗೆ ಒಂದು ಕಾರು ಬಂದು ನಿಂತಿತು. ಅದರಿಂದ ಬಿಳಿಯ ವಸ್ತ್ರಧರಿಸಿದ ವ್ಯಕ್ತಿ ಹೊರ ಬಂದರು. ನೋಡುತ್ತೇವೆ...ರಾಜ್!! ಕಣ್ಣು ಬಾಯಿಬಿಟ್ಟು ನೋಡಿದ್ದೇ...ಮಾತುಬಿಡಿ ಕೈಎತ್ತಿ ವಿಶ್/ನಮಸ್ಕಾರ ಸಹ ಮಾಡಲಿಲ್ಲ.. ಮೂಕರಂತೆ ನೋಡುತ್ತಾ ಇದ್ದೆವು... ರಾಜ್ ಬೇರೆ ದಾರಿಯಿಂದಾಗಿ ಕಾರ್ಯಕ್ರಮ ನಡೆಸಲು ಹೋಗಿಯಾಯಿತು.-ಇನ್ನೊಮ್ಮೆ ಬೆಂಗಳೂರಲ್ಲಿ- ಲಾಲ್ ಭಾಗ್ ಸಮೀಪದ ಹೋಟಲಲ್ಲಿ ಕಾಫಿ ಮುಗಿಸಿ ಹೊರ ಬರುತ್ತೇವೆ. ಜನವೋ ಜನ!ಬಿಗಿ ಬಂದೋಬಸ್ತ್... ರಾಜ್ ಅದೇ ತಾನೆ ಹೋಟಲೊಳಗೆ ಹೋದರಂತೆ..:( ; ಸಪ್ತಗಿರಿವಾಸಿ, ನಿಮ್ಮ ಪ್ರತಿಕ್ರಿಯೆಯಿಂದಾಗಿ ಇದೆಲ್ಲಾ ನೆನಪಾಯಿತು.

ಗಣೇಶರೆ ನಿಮ್ಮ ರಾಜ್ ಪ್ರಸಂಗ ಓದುವಾಗ ನನಗು ನೆನಪಿಗೆ ಬಂದಿತು
ಅದು ೧೯೭೨ ರ ಕಾಲ ನಾವಾಗ ಬೇಲೂರಿನಲ್ಲಿದ್ದೆವು ನಾನು ಎಂಟನೆ ತರಗತಿ. ಬಂಗಾರದ ಮನುಷ್ಯ ಶೂಟಿಂಗ್ ನಡೆಯುತ್ತಿತ್ತು. ಮರುದಿನ ರಾಜಕುಮಾರ್ ಬರುತ್ತಿದ್ದಾರೆ ಎಂದು ತಿಳಿಯಿತು
ನಾನಂತು ಬೇಗ ಬೇಗ ಎದ್ದು ಸಿದ್ದನಾಗಿ ದೇವಾಲಯದತ್ತ ಓಡಿದ್ದೆ, ಆದರೆ ಅಲ್ಲಿ ಪೋಲಿಸರು ನಮ್ಮನ್ನು ಒಳಗೆ ಬಿಡುತ್ತಿಲ್ಲ. ಸಂದಿಯಲ್ಲಿ ನುಗ್ಗಲೆಲ್ಲ ಹೋಗಿ ಆಗಲೆ ಇಲ್ಲ. ಕಡೆಗೆ ಬೇಸರ ಪಟ್ಟು ಮನೆಗೆ ಹೋಗಿ ಕುಳಿತಿದ್ದೆ. ಆಶ್ಚರ್ಯ ಒಂದು ಕಾದಿತ್ತು. ಸ್ವಲ್ಪ ಹೊತ್ತಿನಲ್ಲಿಯೆ ನಮ್ಮ ತಂದೆಯ ಜೊತೆ ರಾಜ್ ನಮ್ಮ ಮನೆಗೆ ಬಂದರು. ನನಗಂತು ಎಂತ ಸಂಭ್ರಮ ಅನ್ನುತ್ತೀರಿ. ಕುಣಿದಾಡಿದೆ. ಅದು ಹೇಗೊ ನಮ್ಮ ತಂದೆಗೆ ಅವರು ಹಿಂದಿನ ಪರಿಚಯವಂತೆ. ರಾಜ್ ನಿಗರ್ವಿಯಾಗಿ ನಮ್ಮೆಲ್ಲರ ಜೊತೆ ಕುಳಿತು ಹರಟಿದರು. ಅಮ್ಮ ಅರ್ಜೆಂಟಿಗೆ ಮಾಡಿದ ಅವಲಕ್ಕಿ ಒಗ್ಗರಣೆ ಮೆಚ್ಚುತ್ತ ತಿಂದರು. ಒಂದು ತಾಸಿನ ನಂತರ ಅವರು ಹೊರಟಾಗ ನನಗೆ ಬೇಸರ. ಹೋಗ ಬೇಡಿ ಇನ್ನು ಸ್ವಲ್ಪ ಕಾಲ ಇದ್ದು ಹೋಗಿ ಅಂತ ಅವರ ಕೈಹಿಡಿದೆ. ಅವರು ಇಲ್ಲ ಮಗು ಹೋಗಬೇಕು ಅನ್ನುವಾಗಲೆ , ನಾನು ಹಟ ಹಿಡಿದಂತೆ, ಹೋಗ ಬೇಡಿ ಇನ್ನು ಐದು ನಿಮಿಶವಾದರು ಇರಿ ಎಂದು ಕೂಗುತ್ತಿದ್ದೆ.
.
ಅಮ್ಮ ಎಬ್ಬಿಸುತ್ತಿದ್ದರು. ಆಗಲೆ ಗಂಟೆ ಏಳಾಯಿತು, ಇನ್ನು ಐದು ನಿಮಿಶ ಎಂತದು ಎದ್ದೇಳು ಎಂದು
ನಾನು ಕಣ್ಣು ಬಿಟ್ಟು ಎದ್ದು ಕುಳಿತೆ.
"ಹಾಗಾದರೆ ರಾಜ್ ಕುಮಾರ್ ನಮ್ಮ ಮನೆಗೆ ಬರಲಿಲ್ವ" ಎಂದು ಕೇಳಿದರೆ
"ನಿನ್ನ ಹುಚ್ಚಿಗಿಷ್ಟು , ಕನಸು ಬಿತ್ತಾ, ಅವರೆಲ್ಲ ನಮ್ಮ ಮನೆಗೆ ಹೇಗಪ್ಪ ಬರುತ್ತಾರೆ ... ಎದ್ದು ಮುಖ ತೊಳಿ ನಡೆ ಶಾಲೆಗೆ ಹೊತ್ತಾಯಿತು" ಎನ್ನುತ್ತ ಒಳಗೆ ಹೊರಟರು.

:-)

;()00000
ಗುರುಗಳೇ

ಈ ಪ್ರತಿಕ್ರಿಯೆಯ ಕೊನೆಗೆ ಬರುವವರೆಗೂ ಇದು ನಿಜವೆಂದೇ ಅಂದುಕೊಂಡಿದ್ದೆ..ಹಾಗೆಯೇ ಮನದಲ್ಲಿ-ನಾನು ಈ ಹಿಂದೆ ಹಲವು ಬರಹಗಳಲ್ಲಿ ರಾಜ್ ಅವರ ಬಗ್ಗೆ ಪ್ರಸ್ತಾಪ ಮಾಡಿದಾಗ ನೀವೇಕೆ ಇದನ್ನು ಹೇಳಲಿಲ್ಲ ಅನ್ನಿಸಿತು..ಆದರೆ ಕೊನೆಗೆ ಅದು ಕನಸೆಂದು ತಿಳಿದು ನಗು ಉಕ್ಕುಕ್ಕಿ ಬಂತು...!! ಅಡ್ವಾನ್ಸ್ಡ್ ಎಪ್ರಿಲ್ ಪೂಲ್ ಆದೆ....!!

"ಲಾಲ್ ಭಾಗ್ ಸಮೀಪದ ಹೋಟಲಲ್ಲಿ ಕಾಫಿ ಮುಗಿಸಿ ಹೊರ ಬರುತ್ತೇವೆ. ಜನವೋ ಜನ!ಬಿಗಿ ಬಂದೋಬಸ್ತ್... ರಾಜ್ ಅದೇ ತಾನೆ ಹೋಟಲೊಳಗೆ ಹೋದರಂತೆ.."

ಗಣೇಶ್ ಅಣ್ಣ-ಈ ಬಗ್ಗೆ ನಾನೂ ಓದಿದ್ದೆ ಹಾಗೆಯೇ ಆ ಬಗೆಗಿನ ಚಿತ್ರವನ್ನೂ ನೋಡಿದ್ದೇ-ಅದು ಯಾವ್ದೋ ಹೋಟೆಲ್ ಅಲ್ಲ- ಎಂ ಟಿ ಆರ್ (ಮಾವಳ್ಳಿ ಟಿಫಿನ್ ರೂಂ) ಆಗ ಅಲ್ಲಿ ಸೇರಿದ್ದ ಜನರನ್ನು ಚದುರಿಸಲು ಪೊಲೀಸರು ಹರ ಸಾಹಸ ಮಾಡಬೇಕಾಯ್ತು..
ರಾಜ್ ಅವರ ಜೊತೆ ಹಲವು ಜನ ಫೋಟೋ ತೆಗೆಸಿಕೊಂಡು ಮಾತಾಡಿ ಅಲ್ಲಿ ಸಿಗುವ ತಿಂಡಿ ತೀರ್ಥ ಸವಿದರು-ಹಾಗೆಯೇ ಆ ಘಟನೆ ಕಾರಣವಾಗಿ ರಾಜ್ ಅವರು ಹೊರಗಡೆ ಸಿಗುವ ತಿಂಡಿಗಳನ್ನು ತಿನ್ನುವರು ಎಂದೂ ಗೊತ್ತಾಯ್ತು-ಹಾಗಯೇ ಈ ಘಟನೆ ಕಾರಣವಾಗಿ ಎಂ ಟೀ ಆರ್ ಫೇಮಸ್ ಆಯ್ತು ಈಗಲೂ ಅಲ್ಲಿ ರಾಜ್ ಅವರ ಆ ಭೇಟಿಯ ಫೋಟೋ ಇರುವ ಹಾಗಿದೆ..!

ಅವರನ್ನು ಕಣ್ಣಾರೆ ನೋಡಿದ ನೀವೇ ಧನ್ಯರು...
ನಮಗೋ ಅವರನ್ನು ಟೀ ವಿ ಯಲ್ಲಿ ಪತ್ರಿಕೆಗಳಲ್ಲಿ ಚಿತ್ರ ಮೂಲಕ ನೋಡೋ ಭಾಗ್ಯ ಮಾತ್ರ..;(((
ಆದರೂ ಅವರು ನಮ್ ನಡುವೆಯೇ ಕೆಲವು ವರ್ಷಗಳ ಹಿಂದೆ ಇದ್ದರು ಎಂಬುದೇ ನಮಗೆ ಹೆಮ್ಮೆಯ ವಿಷ್ಯ..!
ಅವರ ಅ ಬಗ್ಗೆ ಹೇಳ ಹೊರಟರೆ ಅದೇ ಮಹದ್ ಗ್ರಂಥ ಆದೀತು..!
ನಿಮ್ಮ ನೆನಪು ಹಂಚಿಕೊಂಡಿರಿ-ಆದರೆ ಅವರ ಸಿನೆಮ ನೋಡಲು ಹೋಗ್ವಾಗ ಅದ ಅನುಭಾವಗಳನ್ನು ಹೇಳಲೇ ಇಲ್ಲ..!!
ಅಂದ್ರೆ ಟಿಕೆಟ್ ಪಡೆಯಲು ಕ್ಯೂನಲ್ಲಿ ನಿಲ್ಲೋದು-ಇತ್ಯಾದಿ.!

ಶುಭವಾಗಲಿ..

\।

>>ನಿಮ್ಮ ನೆನಪು ಹಂಚಿಕೊಂಡಿರಿ-ಆದರೆ ಅವರ ಸಿನೆಮ ನೋಡಲು ಹೋಗ್ವಾಗ ಅದ ಅನುಭಾವಗಳನ್ನು ಹೇಳಲೇ ಇಲ್ಲ..!!-----ಒಂದು ಅನುಭವ-ನಿಮ್ಮ ಕೋರಿಕೆ ಮೇರೆಗೆ- ಬೆಂಗಳೂರಿಗೆ ಬಂದ ಹೊಸತು. ಯಾವುದೋ ಕೆಲಸದ ನಿಮ್ಮಿತ್ತ ಬೆಂಗಳೂರು ಹೊರವಲಯಕ್ಕೆ ಬಂದಿದ್ದೆ. (ಈಗ ಬೆಂಗಳೂರ ಬೌಂಡ್ರಿ ಅದನ್ನೂ ನುಂಗಿ ಹಲವಾರು ಮೈಲು ಮುಂದೆ ಸಾಗಿದೆ). ಸಿನೆಮಾಗಳಲ್ಲಿ ಆಗುವಂತೆ ಇದ್ದಕ್ಕಿದ್ದಂತೆ ಸಿಡಿಲು ಮಳೆ! ಮಳೆಯಿಂದ ರಕ್ಷಣೆಗೆ ಮರದಡಿ ನಿಂತಿದ್ದಾಗ, ಎದುರಿಗೆ ಟೆಂಟ್ ಟಾಕೀಸಲ್ಲಿ ಸೀಟಿ, ಚಪ್ಪಾಳೆ ಜೋರಾಗಿ ಕೇಳಿಸಿತು.ಯಾವ ಸಿನೆಮಾ ಆದರೇನು ಮಳೆನಿಲ್ಲುವವರೆಗೆ ನೋಡಿದರಾಯಿತು ಎಂದು ಅಲ್ಲಿಗೆ ಹೋದೆ. ನೋಡಿದರೆ ರಾಜ್ ಸಿನೆಮಾ! ನಾನೂ ನೋಡಿರಲಿಲ್ಲ. ಖುಷಿಯಿಂದ ಕೌಂಟರಿನಲ್ಲಿ ವಿಚಾರಿಸಿದಾಗ ಸಿನೆಮಾ ಶುರುವಾಗಿ ಆಗಲೇ ಅರ್ಧಗಂಟೆಯಾಗಿದೆ ಅಂದ. ಪರ್ವಾಗಿಲ್ಲ ಎಂದು ಟಿಕೇಟು ಖರೀದಿಸಿ, ಗೇಟ್ ಕೀಪರನ್ನು ಹುಡುಕಿ, ಬಾಗಿಲು ತೆಗೆಸಿ, ಒಳಹೋದೆ. ಸಿಗರೇಟು ಹೊಗೆ, ಧೂಳುಮಯ. ಬೆಂಚು ಮತ್ತು ಹೊಯಿಗೆ ಮೇಲೆ ಜನ ಕೂತಿದ್ದಾರೆ.ಅತೀ ಕೆಟ್ಟ ಸೌಂಡ್ ಸಿಸ್ಟಮ್.ಅದರ ಜತೆ ಷೀಟ್ ಮೇಲೆ ಮಳೆ ಬೀಳುವ ಸದ್ದು ಬೇರೆ! ನನ್ನಿಂದ ನೋಡಲು ಸಾಧ್ಯವಿಲ್ಲ ಎಂದು ತಿರುಗಿ ಬಾಗಿಲು ಎಳೆಯುತ್ತೇನೆ-ತೆಗೆಯಲಾಗುವುದಿಲ್ಲ(ಹೊರಗಿನಿಂದ ಚಿಲಕ ಹಾಕಿದ್ದಾರೆ). ಕೊನೆಗೆ ಅಲ್ಲೇ ಖಾಲಿಯಿದ್ದ ಬೆಂಚಲ್ಲಿ ಹೋಗಿ ಕುಳಿತೆ. ಕುಳಿತ ಮೇಲೆ ಗೊತ್ತಾಯಿತು..ಅದು ಯಾಕೆ ಖಾಲಿ ಇದೆ ಎಂದು. ಟಾಕೀಸ್ ಮಧ್ಯದ ಕಂಬ ಅಡ್ಡಬಂದು ರಾಜ್ ಕಂಡರೆ ಸರಿತಾ ಕಾಣಿಸುವುದಿಲ್ಲ! ಆ ಸಮಯದಲ್ಲಿ ಹಾಡು ಪ್ರಾರಂಭವಾಯಿತು. ಹೊಯಿಗೆ ಮೇಲೆ ಕುಳಿತಿದ್ದವರು ಎದ್ದು ಕುಣಿಯಲು ಪ್ರಾರಂಭಿಸಿದರು, ಜತೆಗೆ ಹಿಂದಿನಿಂದ ನಾಣ್ಯಗಳೂ ತಲೆಗೆ ಬೀಳಲು ಪ್ರಾರಂಭಿಸಿತು!! ನನ್ನ ಗಮನವೆಲ್ಲಾ ಗೇಟಿನ ಕಡೆಗೇ..ಯಾವಾಗ ಬಾಗಿಲು ತೆರೆದರೋ ಮಳೆಯಲ್ಲಿ ನೆನೆದರೂ ಪರವಾಗಿಲ್ಲ ಎಂದುಹೊರಗೋಡಿ ಬಂದೆ!! ರಾಜ್ ಅವರ ಹಿಟ್ ಚಿತ್ರ ಅರ್ಧಕ್ಕೂ ಮೊದಲೇ ನೋಡದೇ ಬಂದ ರಾಜ್ ಅಭಿಮಾನಿ. :)

ನಾನು ರಾಜ್ ಅವರನ್ನು ಹತ್ತಿರದಿಂದ ನೋಡಿದ್ದು ೧೯೮೦ರಲ್ಲಿ ಮೈಸೂರಿನಲ್ಲಿ ವಸಂತ-ಗೀತಾ ಷೂಟಿಂಗ್ ಸಮಯದಲ್ಲಿ. ಮತ್ತೆ ಅವರನ್ನು ನೋಡುವ ಅವಕಾಶ ದೊರೆತಿದ್ದು ೧೯೮೧ರ ಮೈಸೂರಿನ ದಸರಾ ಎಗ್ಜಿಬಿಷನ್ನಿನ ಕಾರ್ಯಕ್ರಮದಲ್ಲಿ. ಆಗಿನ ಕಾಲಕ್ಕೇ ಅವರು ಸುಮಾರು ಐದು ಲಕ್ಷ ರೂಪಾಯಿಗಳನ್ನು ನೆರೆ ಸಂತ್ರಸ್ತರಿಗೆ ದೇಣಿಗೆಯಾಗಿ ಕೊಟ್ಟಿದ್ದರು. ಅದರ ಬಗ್ಗೆ ವೇದಿಕೆಯಲ್ಲಿದ್ದವರೊಬ್ಬರು ಪ್ರಸ್ತಾವಿಸಿದಾಗ, ಡಾ! ರಾಜ್ ಹೇಳಿದ್ದು ಹೀಗೆ, "ಇದನ್ನು ರಾಜ್‌ಕುಮಾರ್ ಕೊಡ್ತಾಯಿಲ್ಲಾ; ಇದು ಸಮಾಜ ನನಗೆ ಕೊಟ್ಟದ್ದು ಅದನ್ನೇ ನಾನು ಸಮಾಜಕ್ಕೆ ಹಿಂತಿರುಗಿಸುತ್ತಿದ್ದೇನೆ. ಕೆರೆಯ ನೀರನು ಕೆರೆಗೆ ಚೆಲ್ಲುತ್ತಿದ್ದೇನೆ" ಹೀಗೆ ಅವರ ವಿನಯಪೂರ್ವಕ ಮಾತುಗಳನ್ನು ಕೇಳುವ ಸೌಭಾಗ್ಯ ನನಗೆ ಒದಗಿ ಬಂದಿತ್ತು. ಅವರ ಈ ಮಾತುಗಳು ಇಂದಿಗೂ ನನಗೆ ನೆನಪಿನಲ್ಲಿವೆ. ಗಣೇಶ್..ಜಿ ನೀವು ಬರೆದ ಲೇಖನ ಮತ್ತು ಅದಕ್ಕೆ ಬಂದ ಸಪ್ತಗಿರಿ ಮತ್ತು ಪಾರ್ಥರ ಪ್ರತಿಕ್ರಿಯೆಗಳಿಂದ ರಾಜ್‌ರ ಈ ನೆನಪುಗಳು ಹೊರಬಂದುವು; ಎಲ್ಲರಿಗೂ ಧನ್ಯವಾದಗಳು.