ಪ್ಯಾರ್ ಗೆ ಆಗ್ಬುಟ್ಟೈತೆ (ಕಥೆ) - ಭಾಗ ೧
ಅಮಾವಾಸ್ಯೆಯ ಕತ್ತಲಿನಲ್ಲಿ ಆಷಾಢ ಮಾಸದ ಗಾಳಿಯಲ್ಲಿ ಬೆಟ್ಟದ ತುಟ್ಟ ತುದಿಯಲ್ಲಿ ಮಲಗಿ ಆಗಸವನ್ನು ನೋಡುತ್ತಾ ಕಣ್ಣಲ್ಲಿ ತುಂಬಿದ್ದ ಜಲಧಾರೆಯನ್ನು ತನ್ನಷ್ಟಕ್ಕೆ ತಾನು ಹರೆಯಲು ಬಿಟ್ಟು ಮುಂದಿನ ನಿರ್ಧಾರದ ಬಗ್ಗೆ ಯೋಚಿಸುತ್ತಿದ್ದಾಗ ಮೊಬೈಲಿಗೆ ಬಂದ ಕರೆಯಿಂದ ಮತ್ತೆ ವಾಸ್ತವಕ್ಕೆ ಬಂದೆ. ಎಲ್ಲಿದ್ಯ ಚೇತನ್ ಎಂದು ಅಮ್ಮ ಕೇಳಿದ್ದಕ್ಕೆ...ಇಲ್ಲೇ ಬೆಟ್ಟದ ಬಳಿ ಬಂದಿದ್ದೀನಮ್ಮ ಇನ್ನೊಂದು ಅರ್ಧ ಗಂಟೆಯಲ್ಲಿ ಮನೆಯಲ್ಲಿ ಇರುತ್ತೇನೆ ಎಂದು ಮತ್ತೆ ಆಗಸ ನೋಡುತ್ತಾ ಕುಳಿತೆ.
ಇಂದು ನನ್ನ ಮನಸಿನಲ್ಲಿ ಎದ್ದಿರುವ ಬಿರುಗಾಳಿ ಶಾಂತ ಆಗುವುದಕ್ಕೆ ಮುಂಚೆ ಯಾವುದಾದರೊಂದು ನಿರ್ಧಾರ ತೆಗೆದುಕೊಳ್ಳೋಣ ಎಂದು ಬೆಟ್ಟಕ್ಕೆ ಬಂದಿದ್ದೆ. ಆದರೆ ಈ ಚಂಚಲ ಮನಸ್ಸು ಯಾವುದಕ್ಕೂ ಸಹಕರಿಸುತ್ತಿಲ್ಲ. ಬರೀ ಗೊಂದಲಗಳೇ ತುಂಬಿಕೊಂಡಿದೆ.
ಒಂದೊಂದೇ ಮೆಟ್ಟಿಲನ್ನು ಇಳಿಯುತ್ತ ರಸ್ತೆಗೆ ಬಂದಾಗ ಮತ್ತೊಮ್ಮೆ ಫೋನ್ ರಿಂಗಣಿಸಿತು. ಯಾರೆಂದು ನೋಡಿದರೆ ಅವಳೇ ಫೋನ್ ಮಾಡಿದ್ದಳು. ಫೋನ್ ಎತ್ತಿ ಹಲೋ ಎಂದ ತಕ್ಷಣ ಏನು ಚೇತನ್ ನಾಳೆ ಆಫೀಸಿನಲ್ಲಿ ಅವನಿಗೆ ನನ್ನ ಪ್ರೇಮದ ವಿಷಯ ತಿಳಿಸುತ್ತೀಯ ಎಂದು ಕೇಳಿದಳು. ಮೃದುಲ ನೀನೇನೂ ಯೋಚನೆ ಮಾಡಬೇಡ ....ಎಲ್ಲ ಒಳ್ಳೆಯದೇ ಆಗುವಂತೆ ನಾನು ನೋಡಿಕೊಳ್ಳುತ್ತೇನೆ ಎಂದು ಫೋನ್ ಇಟ್ಟು ಮನೆಗೆ ಬಂದೆ. ಮನೆಗೆ ಬಂದ ತಕ್ಷಣ ಅಮ್ಮ ಏನೋ ಚೇತು ಇಷ್ಟೊತ್ತಿನಲ್ಲಿ ಅದೂ ಅಮಾವಾಸ್ಯೆ ದಿವಸ ಬೆಟ್ಟದ ಮೇಲೆ ಯಾಕೋ ಹೋಗಿದ್ದೆ? ಎಷ್ಟು ಗಾಭರಿ ಆಯ್ತು ಗೊತ್ತ ನನಗೆ.
ಏನಿಲ್ಲಮ್ಮ ಗಾಳಿ ಚೆನ್ನಾಗಿ ಬೀಸ್ತುತ್ತಿತ್ತು ಸುಮ್ಮನೆ ಮೇಲೆ ಹೋಗಿ ಸ್ವಲ್ಪ ಹೊತ್ತು ಕೂತು ಬಂದೆ. ಸರಿ ಸರಿ ಊಟ ಮಾಡಿ ಮಲಗು. ನಾಳೆ ಬೆಳಿಗ್ಗೆ ಬೇಗನೆ ಏಳಬೇಕು ಎಂದರು.
ಆಗಲೇ ನಾವು ಹಳ್ಳಿಗೆ ಬಂದು ವಾರ ಕಳೆದು ಹೋಗಿತ್ತು. ನಾಳೆ ಇಂದ ಯಥಾಪ್ರಕಾರ ಅದೇ ಆಫೀಸ್ ಅದೇ ಕ್ಯುಬಿಕಲ್ ಅದೇ ಮ್ಯಾನೇಜರ್ ಅದೇ ಮೃ...ಇಲ್ಲ ಅದೊಂದು ಮಾತ್ರ ಅದೇ ಆಗಿ ಉಳಿದಿರುವುದಿಲ್ಲ...ಈಗ ಅವಳು ಬೇರೆಯವನ ಮೃದುಲ....ನಾನು ಮೃದುಲಳ ಪ್ರೇಮದಿಂದ ವಂಚಿತನಾದ ಚೇತನ್....ಲೈಫು ಇಷ್ಟೇನೆ ಎಂದು ಮಲಗಿಕೊಂಡೆ...
ಫ್ಲಾಶ್ ಬ್ಯಾಕ್
ನಾನು ಹುಟ್ಟಿದ್ದು ಬೆಳೆದದ್ದು ಎಲ್ಲ ಮೈಸೂರಿಗೆ ಸಮೀಪದ ಹಳ್ಳಿ ಒಂದರಲ್ಲಿ. ಎರಡನೇ ಪಿಯು ತನಕ ಮೈಸೂರಿನಲ್ಲಿ ಓದಿ ನಂತರ ದಾವಣಗೆರೆಯಲ್ಲಿ ಬಿ ಇ ಮುಗಿಸಿದ್ದೆ. ನಾನು ಎರಡನೇ ಪಿಯುನಲ್ಲಿ ಇದ್ದಾಗ ಅಪ್ಪ ಹೋಗಿ ಬಿಟ್ಟರು.
ನಂತರ ಅಮ್ಮ ಹೊಲದ ಜವಾಬ್ದಾರಿಯನ್ನು ಮುಂಚಿನಿಂದ ನಮ್ಮ ಮನೆಯ ನಂಬಿಕಸ್ಥನಾಗಿದ್ದ ಮುನಿಯಪ್ಪನಿಗೆ ವಹಿಸಿಕೊಟ್ಟು ಮನೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಪಿಯು ಮುಗಿದ ತಕ್ಷಣ ನಾನು ಅಮ್ಮ ಇನ್ನು ಮುಂದೆ ಸಾಕು ಓದಿದ್ದು ಎಂದಾಗ, ಅಮ್ಮ, ಅಪ್ಪನ ಕನಸನ್ನು ನೆನೆಸಿಕೊಂಡು ಕಣ್ಣೀರು ಇಟ್ಟಿದ್ದರು.
ನೋಡು ಚೇತೂ ನಿಮ್ಮಪ್ಪ ನಿನ್ನನ್ನು ಚೆನ್ನಾಗಿ ಓದಿಸಿ ಒಳ್ಳೆಯ ಕೆಲಸದಲ್ಲಿ ನಿನ್ನನ್ನು ನೋಡಬೇಕು ಎಂದುಕೊಂಡಿದ್ದರು. ಈಗ ನೀನು ಹೀಗೆ ಮಾತಾಡಿದರೆ ಅವರ ಆತ್ಮಕ್ಕೆ ಶಾಂತಿ ಆಗುವುದಿಲ್ಲ. ಮನೆಯ ಬಗ್ಗೆ ನೀನೇನೂ ಚಿಂತೆ ಮಾಡಬೇಡ ಎಂದು ನನ್ನನ್ನು ಓದಲು ಹುರಿದುಂಬಿಸಿದ್ದರು.
ಮೃದುಲ ನನ್ನ ಅತ್ತೆಯ ಮಗಳು. ಚಿಕ್ಕಂದಿನಿಂದ ಇಬ್ಬರೂ ಒಟ್ಟಿಗೆ ಆಡಿ ಬೆಳೆದಿದ್ದೆವು. ಇಬ್ಬರೂ ಒಂದೇ ಶಾಲೆ, ಒಂದೇ ತರಗತಿ ಯಲ್ಲಿ ಓದಿ, ಕೊನೆಗೆ ಒಂದೇ ಕಾಲೇಜ್ ಅಷ್ಟು ಸಾಲದು ಎಂದು ಬಿ ಇ ಸಹ ಒಟ್ಟಿಗೆ ಮುಗಿಸಿದ್ದೆವು.
ಮೃದುಲ ವಿಪರೀತ ತುಂಟತನದ ಹುಡುಗಿ. ಒಬ್ಬಳೇ ಮಗಳೆಂದು ಅವರ ತಂದೆ ತಾಯಿ ವಿಪರೀತ ಮುದ್ದು ಮಾಡಿ ಬೆಳೆಸಿದ್ದರು. ಅವರ ತಂದೆ ತಾಯಿಗೂ ನನ್ನ ಕಂಡರೆ ಬಹಳ ಇಷ್ಟ. ಚಿಕ್ಕಂದಿನಲ್ಲಿ ಹಳ್ಳಿಯಲ್ಲಿ ನಾವಿಬ್ಬರೂ ಓಡಾಡುತ್ತ ಇದ್ದರೆ ಎಲ್ಲರೂ ರೇಗಿಸುತ್ತಿದ್ದರು. ನೋಡಪ್ಪ ಎಷ್ಟು ಚೆನ್ನಾಗಿದೆ ಜೋಡಿ, ಇವರ ಮನೆಯವರಿಗೆ ಹುಡುಗ-ಹುಡುಗಿ ಹುಡುಕುವ ತೊಂದರೆಯೇ ಇಲ್ಲ ಎನ್ನುತ್ತಿದ್ದರು.
ಊರಿನ ಜನ ಏನೇ ಅಂದರು ನಮ್ಮಿಬ್ಬರ ಮನಸಿನಲ್ಲಿ ಯಾವುದೇ ರೀತಿಯ ಆಲೋಚನೆಗಳು ಇರಲಿಲ್ಲ. ಎಲ್ಲರಿಗೂ ನಾವಿಬ್ಬರೂ ಒಳ್ಳೆ ಸ್ನೇಹಿತರು ಹಾಗೆಯೇ ಇರುತ್ತೇವೆ ಎಂದು ಉತ್ತರ ಕೊಟ್ಟು ಹೊರಟು ಬಿಡುತ್ತಿದ್ದೆವು.
ಅವಳು ಮಾತ್ರ ನನ್ನನ್ನು ಛೇಡಿಸುತ್ತಿದ್ದಳು ಏನೋ ಚೇತೂ ನನ್ನ ಮದುವೆ ಆಗ್ತೀಯ ಎಂದು...ಅದಕ್ಕೆ ನಾನು ಹೋಗೆಲೇ ಗಂಡು ಬೀರಿ ನಿನ್ನನ್ನು ಯಾರು ಮದುವೆ ಆಗುತ್ತಾರೆ ಎನ್ನುತ್ತಿದ್ದೆ.
ಈಗ ಬಿ ಇ ಮುಗಿದ ನಂತರ ಇಬ್ಬರಿಗೂ ಒಂದೇ ಕಂಪನಿ ಯಲ್ಲಿ ಕೆಲಸ ಸಿಕ್ಕಿದ್ದು ಮತ್ತಷ್ಟು ಖುಷಿ ಆಗಿತ್ತು. ಮೂರು ತಿಂಗಳು ಟ್ರೈನಿಂಗ್ ಮುಗಿಸಿ ಕೆಲಸಕ್ಕೆ ಸೇರುವ ಮುನ್ನ ಒಮ್ಮೆ ಮನೆಯವರನ್ನು ಭೇಟಿ ಮಾಡಿ ಹೋಗೋಣ ಎಂದು ಇಬ್ಬರೂ ಹಳ್ಳಿಗೆ ಬಂದಿದ್ದೆವು. ಹೊಸ ಕೆಲಸ ವಾರಾಂತ್ಯದಲ್ಲೂ ಕೆಲಸ ಇರುತ್ತದೆ ಆದ್ದರಿಂದ ಮತ್ತೆ ಇನ್ಯಾವಾಗ ಹಳ್ಳಿಯ ಮುಖ ನೋಡುವುದೋ ಗೊತ್ತಿರಲಿಲ್ಲ
ಎರಡನೇ ಫ್ಲಾಶ್ ಬ್ಯಾಕ್
ಚೇತೂ....ಚೇತೂ.....ಎಲ್ಲ ಇಟ್ಟುಕೊಂಡಿದ್ದೀಯ ಬ್ಯಾಗಲ್ಲಿ, ನೋಡು ಹೊಸ ಊರು, ಹೊಸ ಜನ ಎಲ್ಲರೊಡನೆ ಹೊಂದಿಕೊಂಡು ಹೋಗು. ಸುಮ್ಮ ಸುಮ್ಮನೆ ಯಾರೊಡನೆಯೂ ಜಗಳಕ್ಕೆ ಹೋಗಬೇಡ. ಅಲ್ಲಿ ನಮ್ಮವರು ಅಂತ ಯಾರೂ ಇಲ್ಲ. ಸಮಯಕ್ಕೆ ಸರಿಯಾಗಿ ತಿನ್ನು, ರಾತ್ರಿ ಬೇಗ ಮಲಗು. ದಿನ ಅಲ್ಲದಿದ್ದರೂ ಅವಾಗವಾಗ ಫೋನ್ ಮಾಡ್ತಿರು. ಹುಷಾರು ಕಣೋ...
ಅಮ್ಮ ನಾನೇನು ಫಾರಿನ್ ಗಾ ಹೋಗ್ತಿದೀನಿ...ಇಲ್ಲೇ ಪಕ್ಕದಲ್ಲಿರೋ ಬೆಂಗಳೂರಿಗೆ ಹೋಗ್ತಾ ಇರೋದು. ಅದೂ ಅಲ್ಲದೆ ಆಗಲೇ ಮೂರು ತಿಂಗಳು ಅಲ್ಲಿ ಟ್ರೈನಿಂಗ್ ಮುಗಿಸಿ ಬಂದಿದ್ದೇನೆ. ನನ್ನ ಬಗ್ಗೆ ನೀನೇನೂ ಚಿಂತೆ ಮಾಡಬೇಡ. ಅಲ್ಲಿ ಒಳ್ಳೆಯ ಸ್ನೇಹಿತರಿದ್ದಾರೆ ಅವರ ಜೊತೇನೆ ರೂಂ ನಲ್ಲಿ ಇರುತ್ತೇನೆ. ನೀನೇನೂ ಟೆನ್ಶನ್ ಮಾಡ್ಕೋಬೇಡ ನಿನ್ನ ಆರೋಗ್ಯ ಚೆನ್ನಾಗಿ ನೋಡ್ಕೋ. ಪದೇ ಪದೇ ಹೊಲದ ಕಡೆ ಹೋಗಬೇಡ. ಮುನಿಯಪ್ಪನಿಗೆ ನಾನು ಎಲ್ಲ ಹೇಳಿದ್ದೇನೆ. ಅವನು ಎಲ್ಲ ನೋಡ್ಕೋತಾನೆ. ಅಷ್ಟೇ ಅಲ್ಲದೆ ಬೆಂಗಳೂರಲ್ಲಿ ನನಗೆ ಜೊತೆಯಾಗಿ ಮೃದುಲ ಇರುತ್ತಾಳೆ ಅನ್ನುವಷ್ಟರಲ್ಲಿ ಅವಳೇ ಬಂದಳು.
ಚೇತೂ...ಚೇತೂ ಇನ್ನು ರೆಡಿ ಆಗಿಲ್ಲವೇನೋ ನಡ್ಯೋ ಬೇಗ ಹೋಗೋಣ...ಅತ್ತೆ ನಿಮ್ಮ ಮಗನಿಗೆ ಹುಷಾರು ಅಂತ ಹೇಳಿ..ಆಮೇಲೆ ಯಾವುದಾದರೂ ಬೆಂಗಳೂರು ಹುಡುಗಿ ಹಾರಿಸಿಕೊಂಡು ಹೋದಾಳು. ಲೇ ತರ್ಲೆ ನೀನು ಇರಬೇಕಾದರೆ
ಅವನನ್ನು ಯಾರು ಹಾರಿಸಿಕೊಂಡು ಹೋಗಬೇಕು ಅಂದರು ಅಮ್ಮ.
ಸರಿ ಅಮ್ಮ ಆಶೀರ್ವಾದ ಮಾಡು ಎಂದು ಅಮ್ಮನ ಕಾಲಿಗೆ ನಮಸ್ಕಾರ ಮಾಡಿದೆ. ಅತ್ತೆ ನನಗೂ ಮಾಡಿ ಎಂದು ಮೃದುಲ ಕೂಡ ನಮಸ್ಕಾರ ಮಾಡಿದಳು. ಅಮ್ಮನ ಕಣ್ಣಲ್ಲಿ ಆಗಲೇ ತ್ರಿವೇಣಿ ಸಂಗಮ ಶುರು ಆಗಿತ್ತು.
ಅಮ್ಮ ಮತ್ತೆ ಮೃದುಲಳ ಅಪ್ಪ ಅಮ್ಮ ಇಬ್ಬರೂ ಬಸ್ ನಿಲ್ದಾಣದವರೆಗೂ ಬಂದು ನಮ್ಮನ್ನು ಬೀಳ್ಕೊಟ್ಟರು.
ಬಸ್ ನಲ್ಲಿ ಕುಳಿತುಕೊಂಡು ನಾನು ಮೃದುಲ ಇಬ್ಬರೂ ಹೊಸ ಕೆಲಸದ ಬಗ್ಗೆ ಕನಸು ಕಾಣುತ್ತ ಬೆಂಗಳೂರಿನ ಹಾದಿ ಹಿಡಿದಿದ್ದೆವು.
ಟ್ರೈನಿಂಗ್ ಸಮಯದಲ್ಲಿ ಇಬ್ಬರು ಹೊಸ ಗೆಳೆಯರು ಸಿಕ್ಕಿದ್ದರು. ನಾವು ಮೂವರು ಜನ ಸೇರಿ ಒಂದು ರೂಂ ಮಾಡಿಕೊಂಡಿದ್ದೆವು. ಮೃದುಲ ಅಲ್ಲೇ ಒಂದು ಪಿ.ಜಿ ಯಲ್ಲಿ ರೂಂ ಮಾಡಿದ್ದಳು. ನಾಳೆಯಿಂದ ಹೊಸ ಜೀವನ ಶುರು ಎಂದುಕೊಳ್ಳುವಷ್ಟರಲ್ಲಿ ಬೆಂಗಳೂರು ಬಂದಿತ್ತು.
ಮೃದುಲಳನ್ನು ಅವಳ ಪಿಜಿಯ ಬಳಿ ಬಿಟ್ಟು ನಾನು ನನ್ನ ರೂಮಿಗೆ ಬಂದು ಮೂವರು ಆಚೆ ಹೋಗಿ ಊಟ ಮಾಡಿ ಬಂದು ಇನ್ನು ಮುಂದೆ ಸರಿಯಾಗಿ ನಿದ್ದೆ ಇರುತ್ತದೋ ಇಲ್ಲವೋ ಎಂದು ಆಲೋಚಿಸುತ್ತ ನಿದ್ದೆಗೆ ಜಾರಿದೆವು.
ಟ್ರೈನಿಂಗ್ ಮುಗಿದ ಮೇಲೆ ಯಾರ್ಯಾರು ಯಾವ ಟೀಮ್ ಎಂದು ಹೇಳಿರಲಿಲ್ಲ. ಆಫೀಸಿಗೆ ಬಂದು ನೋಡಿದರೆ ಮೃದುಲ ಕೂಡ ನನ್ನದೇ ಟೀಮ್ ನಲ್ಲಿದ್ದಳು. ನಾನು ಮೃದುಲ ಬಳಿ ಹೋಗಿ ಅಲ್ವೇ ಇಲ್ಲೂ ನಿನ್ನ ಕಾಟ ತಪ್ಪಲಿಲ್ಲ ನನಗೆ ಎಂದೆ.ಅದಕ್ಕವಳು ಮಗನೆ ನನ್ನನ್ನು ನಿನ್ನ ಟೀಮ್ ನಲ್ಲಿ ಪಡೆಯುವುದಕ್ಕೆ ಪುಣ್ಯ ಮಾಡಿದ್ದೀಯ ನೀನು. ನೋಡು ನಿನ್ನ ಟೀಮ್ ನವರೆಲ್ಲ ನಾನು ನಿಮ್ಮ ಟೀಮ್ ಗೆ ಬಂದಿದ್ದಕ್ಕೆ ಎಷ್ಟು ಖುಷಿ ಆಗಿದ್ದಾರೆ. ನಾನು ಹೌದೌದು ಎಂದು ನನ್ನ ಡೆಸ್ಕ್ ಬಳಿ ಬಂದೆ.
ಅವಳು ಅಂದಿದ್ದರಲ್ಲಿ ಅತಿಶಯೋಕ್ತಿ ಏನೂ ಇಲ್ಲ...ಯಾಕೆಂದರೆ ಅವಳು ಅಪ್ರತಿಮ ಚೆಲುವೆ. ಒಂದು ರೀತಿ ಹೇಳಬೇಕೆಂದರೆ ಮೂರು ತಿಂಗಳಲ್ಲಿ ನಾನು ಕಂಡ ಹಾಗೆ ಇಡೀ ಕಂಪನಿ ಯಲ್ಲೇ ಅವಳಷ್ಟು ಚೆಲುವೆ ಯಾರೂ ಇರಲಿಲ್ಲ. ಎಂಥವರಿಗೂ ಮೊದಲ ನೋಟದಲ್ಲೇ ಆಕರ್ಷಣೆ ಉಂಟಾಗುವ ಚೆಲುವು ಅವಳದ್ದು.
ಮೊದಲ ದಿನವೇ ಟೀಮ್ ನ ಎಲ್ಲರೂ ಅವಳನ್ನು ಮಾತಾಡಿಸುವ ಕಾತುರದಲ್ಲಿದ್ದರು. ಆದರೆ ಅವಳು ನನ್ನ ಸಂಬಂಧ ಎಂದು ತಿಳಿದು ಎಲ್ಲರೂ ತಮ್ಮ ತಮ್ಮ ಆಸೆಯನ್ನು ಒಳಗೆ ಅದುಮಿಕೊಂಡರು.
ಮೊದಲ ದಿನ ಅಷ್ಟಾಗಿ ಕೆಲಸ ಇರಲಿಲ್ಲ. ಆದ್ದರಿಂದ ಬೇಗನೆ ಆಫೀಸಿನಿಂದ ಹೊರಟ ನಾನು ಮತ್ತು ಮೃದುಲ ಅಲ್ಲೇ ಪಕ್ಕದಲ್ಲಿದ್ದ ಹೋಟೆಲ್ ನಲ್ಲಿ ಊಟ ಮಾಡಿ ಅವಳನ್ನು ಪೀಜಿಯ ಬಳಿ ಬಿಟ್ಟು ನಾನು ನನ್ನ ರೂಮಿಗೆ ಹೋದೆ
Comments
ಉ: ಪ್ಯಾರ್ ಗೆ ಆಗ್ಬುಟ್ಟೈತೆ (ಕಥೆ) - ಭಾಗ ೧
In reply to ಉ: ಪ್ಯಾರ್ ಗೆ ಆಗ್ಬುಟ್ಟೈತೆ (ಕಥೆ) - ಭಾಗ ೧ by kamath_kumble
ಉ: ಪ್ಯಾರ್ ಗೆ ಆಗ್ಬುಟ್ಟೈತೆ (ಕಥೆ) - ಭಾಗ ೧
In reply to ಉ: ಪ್ಯಾರ್ ಗೆ ಆಗ್ಬುಟ್ಟೈತೆ (ಕಥೆ) - ಭಾಗ ೧ by Prathik Jarmalle
ಉ: ಪ್ಯಾರ್ ಗೆ ಆಗ್ಬುಟ್ಟೈತೆ (ಕಥೆ) - ಭಾಗ ೧
In reply to ಉ: ಪ್ಯಾರ್ ಗೆ ಆಗ್ಬುಟ್ಟೈತೆ (ಕಥೆ) - ಭಾಗ ೧ by kamath_kumble
ಉ: ಪ್ಯಾರ್ ಗೆ ಆಗ್ಬುಟ್ಟೈತೆ (ಕಥೆ) - ಭಾಗ ೧
ಉ: ಪ್ಯಾರ್ ಗೆ ಆಗ್ಬುಟ್ಟೈತೆ (ಕಥೆ) - ಭಾಗ ೧
In reply to ಉ: ಪ್ಯಾರ್ ಗೆ ಆಗ್ಬುಟ್ಟೈತೆ (ಕಥೆ) - ಭಾಗ ೧ by venkatb83
ಉ: ಪ್ಯಾರ್ ಗೆ ಆಗ್ಬುಟ್ಟೈತೆ (ಕಥೆ) - ಭಾಗ ೧
ಉ: ಪ್ಯಾರ್ ಗೆ ಆಗ್ಬುಟ್ಟೈತೆ (ಕಥೆ) - ಭಾಗ ೧
In reply to ಉ: ಪ್ಯಾರ್ ಗೆ ಆಗ್ಬುಟ್ಟೈತೆ (ಕಥೆ) - ಭಾಗ ೧ by makara
ಉ: ಪ್ಯಾರ್ ಗೆ ಆಗ್ಬುಟ್ಟೈತೆ (ಕಥೆ) - ಭಾಗ ೧