ಪ್ರಜಾಪ್ರಭುತ್ವದಲ್ಲಿ ನಕ್ಸಲರಿಗೆ ಸ್ಥಳವಿಲ್ಲ...

ಪ್ರಜಾಪ್ರಭುತ್ವದಲ್ಲಿ ನಕ್ಸಲರಿಗೆ ಸ್ಥಳವಿಲ್ಲ...

ಕರ್ನಾಟಕದಲ್ಲಿನ ನಕ್ಸಲೀಯರಿಂದ ಬಂದದ್ದು ಎನ್ನಲಾಗುವ ಇ-ಮೇಯ್ಲ್ ಅದು. ಅದನ್ನು ನಂಬಬಹುದಾದರೆ, ಎರಡು ವಾರಗಳ ಹಿಂದೆ ಮಲೆನಾಡಿನಲ್ಲಿ ಪೋಲಿಸರಿಂದ ಹತ್ಯೆಯಾದವರಲ್ಲಿ ಇಬ್ಬರು ಸಕ್ರಿಯ ನಕ್ಸಲೀಯರು. ಮಿಕ್ಕ ಮೂವರು ಅವರೇ ಹೇಳುವ ಪ್ರಕಾರ ನಕ್ಸಲೀಯರೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದ, ಅವರ ಬಗ್ಗೆ ಸಹಾನುಭೂತಿ ಹೊಂದಿದ್ದ ಅಲ್ಲಿನ ಆದಿವಾಸಿ ರೈತರು. ಆ ಐದು ಜನರ ಮರಣದ ನಂತರ ಕರಾವಳಿ ಮತ್ತು ಮಲೆನಾಡಿನ ಜಿಲ್ಲೆಗಳಿಂದ ನಕ್ಸಲೀಯ ಚಟುವಟಿಕೆಗಳ ಬಗ್ಗೆ ಸುದ್ದಿಗಳು ಬರುತ್ತಲೆ ಇವೆ. ಅಲ್ಲಿ ಮನೆ ದೋಚಿದರು, ಇಲ್ಲಿ ಧಮಕಿ ಹಾಕಿದರು, ಅಲ್ಲಿ ಎ.ಎಸ್.ಐ. ಗೆ ಗುಂಡು ಹೊಡೆದರು, ಇತ್ಯಾದಿ. ಈ ಮಧ್ಯೆ, ಇವುಗಳಲ್ಲಿ ಕೆಲವನ್ನು ದುಷ್ಕರ್ಮಿಗಳೆ ಮಾಡಿ ಅವನ್ನು ನಕ್ಸಲೀಯರ ಮೇಲೆ ಹಾಕುತ್ತಿದ್ದಾರೆ ಎನ್ನುವ ಆರೋಪ ಮತ್ತು ಸಂದೇಹಗಳು ಬೇರೆ.

ಆದರೆ, ಬೇರೆಯವರು ಮಾಡಿ ನಮ್ಮ ಮೇಲೆ ಹಾಕುತ್ತಿದ್ದಾರೆ ಎನ್ನುವುದು ನಕ್ಸಲೀಯರು ಮಾಡುತ್ತಿರುವ ಮತ್ತು ಈಗಾಗಲೆ ಮಾಡಿರುವ ಕಾನೂನುಬಾಹಿರ ಕೆಲಸಕ್ಕೆ ವಿನಾಯಿತಿ ಕೊಡುವುದಿಲ್ಲ. ನಕ್ಸಲೀಯರು ಭಾರತದ ಪ್ರಜೆಗಳು ಒಪ್ಪಿಕೊಂಡಿರುವ ಸಂವಿಧಾನಕ್ಕೆ ಬಾಹಿರವಾದ ಭೂಗತ ಚಟುವಟಿಕೆ ಮಾಡುತ್ತಿರುವುದಾಗಲಿ, ಮಲೆನಾಡಿನ ಕೆಲವು ಕಡೆ ಜನರನ್ನು ಹೆದರಿಸಿರುವುದಾಗಲಿ, ಈಗಾಗಲೆ ಹಲವು ಹೆಣಗಳನ್ನು ಉರುಳಿಸಿರುವುದಾಗಲಿ ಸುಳ್ಳಲ್ಲ. ಈಗಿರುವ ಮೂಲಭೂತ ಪ್ರಶ್ನೆ ಎಂದರೆ, ಲೈಸನ್ಸ್ ಇಲ್ಲದ ಬಂದೂಕು ಹಿಡಿದು ಪ್ರಜಾಪ್ರಭುತ್ವ ವಿರೋಧಿ ಕೃತ್ಯದಲ್ಲಿ ತೊಡಗಿರುವ ನಕ್ಸಲೀಯರಿಗೆ ಪ್ರಜಾಪ್ರಭುತ್ವದಲ್ಲಿ ಸ್ಥಾನವಿದೆಯೆ ಎನ್ನುವುದು.

ಅನ್ಯಾಯ, ಅಕ್ರಮ, ಶೋಷಣೆಗಳು ನಮಗೇ ಆಗಲಿ ಇನ್ನೊಬ್ಬರಿಗೆ ಆಗಲಿ ಆದಾಗ ಅದನ್ನು ವಿರೋಧಿಸಬೇಕು. ಆದರೆ ಹೇಗೆ? ನಾವು ಒಂದು ವ್ಯವಸ್ಥೆ ಎಂದು ಮಾಡಿಕೊಂಡಾಗ ಎಲ್ಲರೂ ಅದರಂತೆ ನಡೆಯಬೇಕು. ನಮ್ಮ ನ್ಯಾಯಾಂಗ ಎನ್ನುವುದು ಇರುವುದೇ ಅನ್ಯಾಯದಿಂದ ರಕ್ಷಣೆ ಪಡೆಯಲು. ಅದನ್ನು ಉಪಯೋಗಿಸಿಕೊಳ್ಳುವ ಬದಲಿಗೆ ಎಲ್ಲರೂ ತಮ್ಮ ಭುಜಬಲ ಪರಾಕ್ರಮ ತೋರಿಸಲು ಆರಂಭಿಸಿಬಿಟ್ಟರೆ, ಅದು ಪ್ರಜಾಪ್ರಭುತ್ವವಲ್ಲ; ಅರಾಜಕತ್ವ. "ಇಲ್ಲಿ ಅನ್ಯಾಯವಾಗಿದೆ, ತಕ್ಷಣಕ್ಕೆ ನ್ಯಾಯ ಸಿಗುತ್ತಿಲ್ಲ, ಅದಕ್ಕೆ ಬಂದೂಕು ಹಿಡಿಯುವುದೆ ಸರಿ," ಎಂಬ ನಕ್ಸಲೀಯ ಸಿದ್ಧಾಂತವನ್ನೇನಾದರೂ ಸಮಾಜ ಒಪ್ಪಿಕೊಂಡು ಬಿಟ್ಟರೆ ಪ್ರತಿದಿನವೂ ಬೀದಿಗಳಲ್ಲಿ ಗುಂಡಿನ ಸದ್ದು ಮೊರೆಯುತ್ತಿರುತ್ತದೆ. ಕೆಲವರ ಮನೆಗಳ ಒಳಗೂ ಗುಂಡು ಹಾರುತ್ತಿರುತ್ತದೆ.

ಇವತ್ತು ಅನೇಕ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಕಾಲಾನುಕಾಲಕ್ಕೆ ಅನ್ಯಾಯಗಳ ವಿರುದ್ಧ ಜನರು ಹೋರಾಟ ಮಾಡುತ್ತಲೆ ಇದ್ದಾರೆ. ಸಂವಿಧಾನಬದ್ಧವಾಗಿ, ಅಹಿಂಸಾತ್ಮಕವಾಗಿ ಈ ಜನರು ಮಾಡುತ್ತಿರುವ ಹೋರಾಟಕ್ಕೆ ನಿಜವಾಗಲೂ ಆತ್ಮಸ್ಥೈರ್ಯ ಬೇಕು. ಸಮಾಜದ ಒಳಗೆ ಇದ್ದುಕೊಂಡು ಮಾಡುವ ಹೋರಾಟಕ್ಕೆ ಅನೇಕ ಪ್ರತಿರೋಧಗಳು, ಅವಮಾನಗಳು, ಒತ್ತಡಗಳು ಬರುತ್ತಿರುತ್ತವೆ. ಅವರ ಹೋರಾಟ ಸುದೀರ್ಘ ಸಮಯ ತೆಗೆದುಕೊಳ್ಳುತ್ತದೆ. ಯಾರೋ ಪ್ರಾರಂಭಿಸಿದ್ದನ್ನು ಮತ್ಯಾರೊ ಮುಂದುವರೆಸಿ, ಮತ್ಯಾರೊ ಕೊನೆಗೊಳಿಸಬೇಕಾಗುತ್ತದೆ. ಆ ಜನಪರ ಹೋರಾಟದಲ್ಲಿ ಎದುರಾಗುವ ಒತ್ತಡ, ಅವಮಾನ, ಸೋಲುಗಳನ್ನೆಲ್ಲ ಎದುರಿಸಲಾಗದೆ ಕಾಡಿಗೆ ಓಡಿ ಹೋಗಿ ಬಂದೂಕು ಹಿಡಿಯುವವರು ನಿಜಕ್ಕೂ ಪಲಾಯನವಾದಿಗಳು. ಅವರಿಗೆ ತಮ್ಮ ಹೋರಾಟದ ಮೇಲಿನ ನಂಬಿಕೆಗಿಂತ ಬಂದೂಕಿನ ಮೇಲಿನ ನಂಬಿಕೆಯೆ ಹೆಚ್ಚು. ಅವರು ನಮಗೆ ಯಾವ ರೀತಿಂದಲೂ ರೋಲ್‍ಮಾಡೆಲ್‌ಗಳಾಗಬಾರದು. ಹಾಗೆ ಆದ ದಿನ ಪ್ರಜಾಪ್ರಭುತ್ವಕ್ಕೆ ಭವಿಷ್ಯವಿಲ್ಲ.

ಕರ್ನಾಟಕದಲ್ಲಿಯಂತೂ ನಕ್ಸಲೀಯರ ಬಗ್ಗೆ ವಿಚಿತ್ರ ಎನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ. ನಕ್ಸಲೀಯರು ಕಮ್ಯುನಿಸ್ಟ್ ವಾದದ ಪರ ಇರುವುದರಿಂದ ಆ ವಾದವನ್ನು ವಿರೋಧಿಸುವ ಬಲಪಂಥೀಯರು ಇಲ್ಲಿ ನಕ್ಸಲೀಯರ ಬದ್ಧದ್ವೇಷಿಗಳು. ಪ್ರಪಂಚದ ಬೇರೆಬೇರೆ ಕಡೆ ಬಲಪಂಥೀಯರೆಂದರೆ ಕ್ಯಾಪಿಟಲಿಸ್ಟ್‌ಗಳು, ಅಲ್ಪಸ್ವಲ್ಪ ಮತೀಯ ಮೂಲಭೂತವಾದಿಗಳು. ಅದರೆ ಭಾರತದಲ್ಲಿ ಬಲಪಂಥೀಯರೆಂದರೆ ಅಪ್ಪಟ ಕೋಮುವಾದಿಗಳು. "ನಿಮ್ಮ ಆರ್ಥಿಕ ಸಿದ್ಧಾಂತಗಳು ಏನೇ ಇರಲಿ, ಅವುಗಳಿಂದ ಜನಕ್ಕೆ ಒಳ್ಳೆಯದಾಗುವಂತೆ ನೋಡಿಕೊಳ್ಳಿ; ಸಬಲರಿಂದ ದುರ್ಬಲರ ಶೋಷಣೆ ಆಗುತ್ತಿದ್ದರೆ ಅದಕ್ಕೆ ಕಡಿವಾಣಗಳನ್ನು ಹಾಕಿ; ಆದರೆ, ಕೋಮುವಾದಿಗಳಾಗಬೇಡಿ, ಹುಟ್ಟಿನ ಆಧಾರದ ಮೇಲೆ ಜನರಲ್ಲಿ ಭೇದಭಾವ ಮಾಡಬೇಡಿ; ಕಂದಾಚಾರವನ್ನು ಉತ್ತೇಜಿಸಬೇಡಿ; ಭಾರತದ ಸಾಮಾಜಿಕ ಸ್ಥಿತಿಗತಿಯ ಬಗ್ಗೆ ಅರಿವಿರಲಿ;" ಎಂದಷ್ಟೇ ಹೇಳುವ ಜನರು ಇವತ್ತು ಭಾರತದಲ್ಲಿ ಬಲಪಂಥೀಯ ವಿರೋಧಿಗಳು. ಹಾಗಾಗಿ, ವಿರೋಧಿಯ ವಿರೋಧಿ ನಮ್ಮ ಸ್ನೇಹಿತ ಎಂದುಕೊಂಡು ನಕ್ಸಲೀಯರು ಈ ಗುಂಪಿನವರನ್ನು ತಮ್ಮವರು ಎಂದು ಭಾವಿಸಿಕೊಳ್ಳುವುದು, ಅದೇ ರೀತಿ ತಮ್ಮ ವಿರೋಧಿ ತಮ್ಮ ಇನ್ನೊಬ್ಬ ವಿರೋಧಿಯ ಸ್ನೇಹಿತ ಎಂದು ಕೋಮುವಾದಿಗಳು ಜಾತ್ಯತೀತರನ್ನು ಅಂದುಕೊಳ್ಳುವುದು ಎರಡೂ ಕಡೆಯ ಅಂಧರಿಗೆ ಸಹಜವಾಗಿಯೆ ಇದೆ.

ಇವತ್ತು ಮಲೆನಾಡಿನ ಕೋಮುವಾದಿ ಮತಾಂಧರಿಗೆ ಭಯ ಹುಟ್ಟಿಸುತ್ತಿರುವವರೆ ನಕ್ಸಲೀಯರು, ಅವರಿಗೆ ಇವರೆ ಸರಿ ಎನ್ನುವ ವಾದ ಜಾತ್ಯತೀತರು ಎಂದು ಹೇಳಿಕೊಳ್ಳುವ ಕೆಲವರಿಂದ ಕೇಳಿಬರುತ್ತದೆ. ಆದರೆ, ಹಾಗೆ ಹೇಳುವವರಿಗೆ ತಾವು ನಂಬಿರುವ ಜಾತ್ಯತೀತ, ಕೋಮುವಾದಿ ವಿರೋಧಿ ಸಿದ್ಧಾಂತದಲ್ಲಿ ಪ್ರಾಮಾಣಿಕ ನಂಬಿಕೆಯೆ ಇಲ್ಲ ಎನ್ನಬೇಕು. ಕೋಮುವಾದವನ್ನು ಜನರಲ್ಲಿ ಉದಾತ್ತ ಮಾನವೀಯ ಮೌಲ್ಯಗಳನ್ನು ತುಂಬಿ, ಪ್ರಜಾಸತ್ತಾತ್ಮಕ ಹೋರಾಟದಿಂದ ಗೆದ್ದರೆ ಮಾತ್ರ ಅದು ನಿಜವಾದ ಗೆಲುವಾಗುತ್ತದೆಯೆ ಹೊರತು ನಕ್ಸಲೀಯರ ಬಂದೂಕಿನ ಬೆದರಿಕೆಗೆ ಕೋಮುವಾದಿಗಳು ಬಾಲ ಮುದುರಿಕೊಂಡರೆ ಅಲ್ಲ. ಮೂಲಭೂತವಾದದ ವಿರುದ್ಧದ ಹೋರಾಟಕ್ಕೆ ನಕ್ಸಲರ ಬೆಂಬಲ ಬೇಕಾಗಿಲ್ಲ. ಹಾಗೆ ಬೇಕು ಎನ್ನುವವರು ಸಮಾನತೆಗಾಗಿ, ಸಾಮರಸ್ಯಕ್ಕಾಗಿ, ನ್ಯಾಯಕ್ಕಾಗಿ ಹೋರಾಡುತ್ತಿರುವವರ ಹೋರಾಟವನ್ನೆ ಅಣಕಿಸಿದಂತೆ.

ಇನ್ನು, ತಾನು ನಂಬಿದ ಸಿದ್ಧಾಂತಕ್ಕೆ ಯಾರೋ ಒಬ್ಬ ಪ್ರಾಣ ಕೊಡಲೂ ತಯಾರು ಎಂದ ಮಾತ್ರಕ್ಕೆ ಅವರ ಸಿದ್ಧಾಂತ ಶ್ರೇಷ್ಠವಾಗಿ ಬಿಡುವುದಿಲ್ಲ. ಗುಂಡಿಗೆ ಎದೆಯೊಡ್ಡಿದ್ದರಿಂದಾಗಿ ನಕ್ಸಲೀಯ ಸಿದ್ಧಾಂತ ಸರಿ ಅಂತಾದರೆ, ಜಿಹಾದಿ ಭಯೋತ್ಪಾದಕರ ಹಾಗು ಗಾಂಧಿಯನ್ನು ಕೊಂದ ಗೋಡ್ಸೆಯ ಮತಾಂಧ ಸಿದ್ಧಾಂತವೂ ಸರಿ ಎಂತಾಗಿಬಿಡುತ್ತದೆ. ಆದರೆ, ಇವು ಯಾವುವೂ ಸರಿಯಲ್ಲ ಎನ್ನುತ್ತದೆ ನಾಗರಿಕ ಸಮಾಜ.

ನಮ್ಮದು ಆರ್ಥಿಕಪ್ರಗತಿಯ ಪಥದಲ್ಲಿ ಮುನ್ನಡೆಯುತ್ತಿರುವ ದೇಶ. ಹೀಗೆಯೆ ಮುಂದುವರೆಯುತ್ತಿರಬೇಕಾದರೆ ಕಾಲಾನುಕಾಲಕ್ಕೆ ಅಭಿವೃದ್ಧಿ ಪರ ಯೋಜನೆಗಳನ್ನು ಸರ್ಕಾರ ಕೈಗೆತ್ತಿಕೊಳ್ಳುತ್ತಿರ ಬೇಕಾಗುತ್ತದೆ. ಹಾಗೆ ಕೈಗೆತ್ತಿಕೊಂಡಾಗ ಕೆಲವೊಮ್ಮೆ ಅದಕ್ಷರ, ಅವಿವೇಕಿಗಳ ಕೆಲಸದಿಂದ, ಭ್ರಷ್ಟರ ಪಿತೂರಿ ಸಂಚುಗಳಿಂದ ಕೆಲವು ಅಚಾತುರ್ಯಗಳೂ ಆಗುತ್ತವೆ. ಆದರೆ ಏನೋ ಆಗಿಬಿಡಬಹುದು ಎಂದು ಸರ್ಕಾರ ಸುಮ್ಮನಿರಲು ಸಾಧ್ಯವಿಲ್ಲ. ಯಾವುದೇ ಯೋಜನೆ ಕೈಗೆತ್ತಿಕೊಂಡಾಗ ಅದರಿಂದ ಲಾಭ ಪಡೆಯುವವರು ಇರುವಂತೆ ಅದರಿಂದ ನಷ್ಟಕ್ಕೊಳಗಾಗುವವರೂ ಇರುತ್ತಾರೆ. ನಷ್ಟಕ್ಕೊಳಗಾದವರ ನೋವನ್ನು ಕಮ್ಮಿ ಮಾಡುವುದು ನಾಗರಿಕ ಸರ್ಕಾರದ ಕೆಲಸ. ಈಗ ಕುದುರೆಮುಖ ರಾಷ್ಟ್ರೀಯ ಉದ್ಯಾನ ಯೋಜನೆಗಾಗಿ ಅಲ್ಲಿನ ಮೂಲನಿವಾಸಿಗಳನ್ನು ಒಕ್ಕಲೆಬ್ಬಿಸಬೇಕಾಗಿದೆ. ಈ ಮೂಲನಿವಾಸಿಗಳಿಗೆ ಸರಿಯಾದ ಪರಿಹಾರ ದೊರಕುತ್ತಿಲ್ಲ ಎನ್ನುವುದೆ ಇಲ್ಲಿ ದೊಡ್ಡ ಸಮಸ್ಯೆ ಆದಂತಿದೆ. ಅದಕ್ಕೆ, ಪರಿಹಾರ ನೀಡಬೇಕಾದ ಸರ್ಕಾರದ ಒಂದು ಅಂಗ ಕಾರಣವಾಗಿದೆಯೆ ಹೊರತು ಯೋಜನೆಯಾಗಲಿ, ಪ್ರಜಾಪ್ರಭುತ್ವವಾಗಲಿ ಅಲ್ಲ. ತನ್ನ ಪ್ರಜೆಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವುದು ಸರ್ಕಾರದ ಕರ್ತವ್ಯ. ಇಲ್ಲಿ ಅನ್ಯಾಯವಾಗಿದೆ ಎಂದು ನಕ್ಸಲರಿಂದ ತಿಳಿದುಕೊಳ್ಳುವುದಕ್ಕಿಂತ, ನಕ್ಸಲರ ಬಲವಂತಕ್ಕೆ ನ್ಯಾಯ ಮಾಡಲು ಹೋಗುವುದಕ್ಕಿಂತ ಹೆಚ್ಚಿನ ಅವಮಾನ ಜನರಿಂದ ಆಯ್ಕೆಯಾದ ಜವಾಬ್ದಾರಿಯುತ ಸರ್ಕಾರಕ್ಕೆ ಇಲ್ಲ.

ಆದರೆ ಅದಕ್ಕಿಂತ ದೊಡ್ಡ ನಾಚಿಕೆಗೇಡಿನ, ಪ್ರಜಾಪ್ರಭುತ್ವ ವಿರೋಧಿ ಕೆಲಸವೇನೆಂದರೆ, ಸರ್ಕಾರ ಅನ್ಯಾಯವನ್ನು ಸರಿಪಡಿಸದೇ ಹೋಗಿಬಿಡುವುದು.

(ವಿಕ್ರಾಂತ ಕರ್ನಾಟಕ - ಆಗಸ್ಟ್ ೦೩, ೨೦೦೭ರ ಸಂಚಿಕೆಯಲ್ಲಿನ ಬರಹ)

ಇದರ ವಿಡಿಯೊ ಪ್ರಸ್ತುತಿ ಇಲ್ಲಿದೆ:
http://www.youtube.com/watch?v=f7gBks7KAFY

Rating
No votes yet

Comments