ಪ್ರತಿಭೆ, ದೈವಿಕತೆ ಇವು ಬುದ್ಧಿಯ ಕಣ್ಣಲ್ಲ...

ಪ್ರತಿಭೆ, ದೈವಿಕತೆ ಇವು ಬುದ್ಧಿಯ ಕಣ್ಣಲ್ಲ...

ಪ್ರತಿಭೆ ದೈವಿಕ ಎನ್ನುತ್ತಾರೆ. ಮೇಧಾ ಶಕ್ತಿ ಪುಸ್ತಕಗಳಿಂದ ಎನ್ನುತ್ತಾರೆ. ಪ್ರತಿಭೆ ಇಲ್ಲದೇ ಮೇಧಾಶಕ್ತಿ ಇರಲುಂಟೇ...  ಇರುವುದು ಸಾಧ್ಯವಿದೆ. ಅಂತಹ  ಮೇಧಾಶಕ್ತಿ ಬುದ್ಧಿಪೂರ್ವಕ ನೆಲೆಯಲ್ಲೇ  ಮೈತಳೆದಿರುತ್ತದೆ. ಪ್ರತಿಭೆಯ ಮೂಲ ಹಾಗಲ್ಲ;  ಅದು ಹೃತ್ಪೂರ್ವಕವಾದ ನೆಲೆಯಿಂದ ಉದಿಸಿ ಬಂದಿರುತ್ತದೆ.  ಪ್ರತಿಭೆ  ಹುಟ್ಟಿನಿಂದ ಎಂದೂ  ಹೇಳುತ್ತಾರೆ.

ಪ್ರತಿಭೆ ಎಲ್ಲರಲ್ಲೂ ಇರುತ್ತದೆ ಎಂದೂ ಹೇಳುವವರೂ ಇದ್ದಾರೆ. ಪ್ರತಿಭೆ ಯಾವಾಗಲೂ ಹೃದಯದ ಕಣ್ಣಿಂದ ನೋಡುತ್ತದೆ; ಬುದ್ದಿಯ ಕಣ್ಣಿಂದ ಅಲ್ಲ. ಅಂದಹಾಗೆ ಯಾರೆಲ್ಲರಲ್ಲಿ ಹೃದಯದ ಕಣ್ಣಿಂದ ನೋಡುವ ಭಾವವಿದೆಯೋ ಅವರೆಲ್ಲರಲ್ಲಿ ಪ್ರತಿಭೆ ಇರುತ್ತದೆ ಎಂದಾಗುತ್ತದೆ.  ಅದೆಷ್ಟು ಪ್ರಮಾಣದಲ್ಲಿರುತ್ತದೆ  ಎಂಬುದು ಬೇರೆಯೆ.   ಕೇವಲ ಬುದ್ಧಿಪೂರ್ವಕ ದೃಷ್ಟಿಯುಳ್ಳವರಿಗೆ ಪ್ರತಿಭೆಯು ಅರಿವಿಗೆ ಬರುವುದಿಲ್ಲ. ಪ್ರತಿಭೆ ಇರುವಾತ  ಕಥೆಗಾರನಾಗುತ್ತಾನೆ. ಅದಿಲ್ಲದವ ಬರೀ ಲೇಖಕನೋ ವರದಿಗಾರನೋ ಆಗುತ್ತಾನೆ. ಅಷ್ಟೇ ಅಲ್ಲ;ಪ್ರತಿಭಾವಂತ ತಪ್ಪು ಮಾಡುವುದಿಲ್ಲ; ಅವನ ತಪ್ಪುಗಳೂ ಹೊಸ ಶೋಧನೆಗೆ ದಾರಿಯಾಗುತ್ತವೆ... ಎಂಬ ನುಡಿಯೂ ಇದೆ.

"ಪ್ರತಿಭೆ ನಿಜವಾಗಿ ಅದು  ಬುದ್ಧಿಯ  ಕಣ್ಣಲ್ಲ; ಹೃದಯದ  ಕಣ್ಣು" ಎನ್ನುತ್ತಾರೆ ತೀ.ನಂ.ಶ್ರೀ.

ಎಲ್ಲವನ್ನೂ ಬುದ್ಧಿಯ ಕಣ್ಣಿಂದ ನೋಡುವ ಬುದ್ಧಿಜೀವಿಗಳು ಹೃದಯದ ಕಣ್ಣನ್ನು ತೆರೆದು ನೋಡಲಾರರು. ಹಾಗೇನಾದರೂ ತೆರೆದು ನೋಡಿದರೆ ಅವರೂ ವಾಸ್ತವ ಜಗತ್ತಿನಲ್ಲಿ ಅನುಭಾವಿಗಳೇ ಆಗುತ್ತಾರೆ. ಅಥವಾ ಅನುಭಾವಿಗಳಾದವರನ್ನು ಅರ್ಥಮಾಡಿಕೊಳ್ಳಬಲ್ಲವರಾಗಿರುತ್ತಾರೆ. ಪ್ರತಿಭೆಯು ನಿಜವಾಗಿಯೂ ಒಂದು ದೃಷ್ಟಿಯಾದರೆ, ಅದು ದೈವಿಕವಲ್ಲವೇ, ಅದು ದೈವಿಕ ದೃಷ್ಟಿಯನ್ನೇ ಹೊಂದಿರುತ್ತದೆ. ಎಷ್ಟೋವೇಳೆ ಆ ದಿವ್ಯ ದೃಷ್ಟಿ ಬುದ್ಧಿಯ ಕಣ್ಣನ್ನೂ ತೆರೆಯಬಲ್ಲದು.
ಆದರೆ, ಅದಕ್ಕೆ ತೆರೆದುಕೊಳ್ಳುವ ಮನಸ್ಸುಮಾಡಬೇಕಷ್ಟೇ.  ನಮ್ಮ ಮನಸ್ಸು ಖಾಲಿಯಾದಾಗಲೇ ಅಲ್ಲಿ ಬೇರೊಂದು ದೃಷ್ಟಿ-ದೃಷ್ಟಿಕೋನಕ್ಕೆ ಪ್ರವೇಶವಲ್ಲವೇ...?
ಹಾಗೆ ಮನಸ್ಸು ಸಂಪೂರ್ಣ ಖಾಲಿಯಾಗುವುದು, ಶೂನ್ಯವಾಗಿ ನಿರ್ವಾತಗೊಳ್ಳುವುದು ಯಾವಾಗ...?
ನನಗೆ ಅನಿಸುತ್ತದ:-

ಧ್ಯಾನದಲ್ಲಿ ಮಂತ್ರವಿದೆ; ಆ ನಂತರದ
ಮೌನವಿದೆ; ಆ ಮೌನದಲ್ಲಿ  ದೇಹದುಸಿರಾಟವಿದೆ
ಆ ಉಸಿರಾಟದಲ್ಲಿ ಮನಸ್ಸಿನ ಹಾರಾಟವಿದೆ;
ಆ ಹಾರಾಟದಾಚೆ ಸಮಾಧಿ ಸ್ಥಿತಿಯಿದೆ;
ಆ ಸಮಾಧಿ ಸ್ಥಿತಿಯಲ್ಲೆ ದೈವಸಾನ್ನಿಧ್ಯವಿದೆ.

ಹಾಗಾದರೆ, ಧ್ಯಾನದ ಈ ಕೊನೆಯ ಹಂತದಲ್ಲಿ ಧ್ಯಾನಸ್ತರಿಗೆಲ್ಲರಿಗೂ ದೈವ ಸಾನ್ನಿಧ್ಯದ ಅರಿವಾಗುತ್ತದೆಯೇ...? ಎಂದಾಗ,
ಅದು ಅವರು ತಲುಪುವ ಶೂನ್ಯಸಾನ್ನಿಧ್ಯ ಸ್ಥಿತಿ ಅಂದರೆ ಮನಸ್ಸಿನ ಎಲ್ಲಾ ಅವಸ್ಥೆಯ ಸ್ಥಿತ್ಯಂತರದಲ್ಲೆಲ್ಲೋ ಇದೆ ಅನಿಸತ್ತದೆ.

 ಧ್ಯಾನಾವಸ್ಥೆಯಲ್ಲಿ ಮೌನವಾಗಿ ದೇಹದುಸಿರಾಟವನ್ನೇ ಗಮನಿಸಲಾಗುತ್ತದೆ. ಯಾವಾಗ ಆ ಉಸಿರಾಟವು ಹಣೆಯ ಭ್ರೂಮಧ್ಯೆ ನಿಲ್ಲುತ್ತದೋ, ಆವಾಗ ಆ ಶೂನ್ಯಸಾನ್ನಿದ್ಯದಲ್ಲಿ ನಿರ್ವಾತವೇರ್ಪಡುತ್ತದೆ. ನೀಲ ಮಣಿಯ ಪ್ರಭೆ ಪ್ರಖರವಾಗಿ ಹೊಳೆಯುವುದು ಕಾಣಸಿಗುತ್ತದೆ.
ನಿಶ್ಚಲವಾದ ನಿರೀಕ್ಷಣೆಯಲ್ಲಿ ಈ ಸ್ಥಿತಿಯ ಅನುಭೂತಿಯು ಸಾಮಾನ್ಯವಾಗಿ ಎಲ್ಲ ಧ್ಯಾನಿಗಳಿಗೆ ಲಭಿಸುತ್ತದೆ.  ಮನಸ್ಸಿನ ಎಲ್ಲ ಯೋಚನೆ ಆಲೋಚನೆಗಳ ಹಾರಾಟಾದಾಚೆ, ದೇಹದುಸಿರಾಟವು ನಿಶ್ಚಲವಾಗಿದ್ದು, ಅಂತರಾತ್ಮನಿಗಷ್ಟೇ ಕಾಣಸಿಗುವ ಆ ದಿವ್ಯಪ್ರಭೆಯ ಅನುಭೂತಿಯು  ನ್ಯಾನೋ ಸೆಕೆಂಡಿನಷ್ಟು ಇರಬಹುದು, ನಿಮಿಷಗಳ ಅನುಭೂತಿ ಇರಬಹುದು, ಗಂಟೆಗಳ ಅನುಭೂತಿಯೂ ಇರಬಹುದು, ಕಡೆಗೆ ಕಾಲವನ್ನೇ ಮೀರಿ ನಿಲ್ಲುವಂಥ ಸಾದೃಶ ಸಾಕ್ಷಾತ್ಕಾರವೂ ಆಗಿರಬಹುದು.

ಹಾಗೆ ಸಾದೃಶಗೊಳ್ಳುವ ಸಮಯದಲ್ಲಿ ಆತ್ಮದ ಪಯಣವೂ ಸಾಗುವುದನ್ನು ಕಂಡ ಮಹಾತ್ಮರಿದ್ದಾರೆ.  ಆಗ ದೇವರನ್ನು ಅವರವರ ಆ ಅಂತರ್ದೃಷ್ಟಿಯಲ್ಲಿ ಶ್ರೀರಾಮ, ಶ್ರೀಕೃಷ್ಣ ಹೀಗೆ  ನಾನಾ ರೂಪದಲ್ಲಿ  ಕಂಡು ಆನಂದ ಹೊಂದಿದವರಿದ್ದಾರೆ.   ಈ  ಮಹತ್ಸಾಧನೆಯಲ್ಲಿ ಸಂಪಾದಿಸಿದ ಆಧ್ಯಾತ್ಮಿಕ ಶಕ್ತಿ ಹಾಗೂ ದೈವ ಸಾಕ್ಷಾತ್ಕಾರದಿಂದ ಜನಸಾಮಾನ್ಯರ ಬದುಕಿಗೆ ಶಾಂತಿ ನೆಮ್ಮದಿ ತಂದುಕೊಟ್ಟಂಥ ಸಾಧು ಸತ್ಪುರುಷರಿದ್ದಾರೆ.... ಇಂಥ  ಮಹತ್ಸಾಧನೆಗೈಯಲು ಪ್ರಯತ್ನಿಸಿ ಅಥವಾ ಪರೀಕ್ಷಿಸಿ ಸೋತ ಬುದ್ಧಿಜೀವಿಗಳು ಎಲ್ಲಕಾಲಕ್ಕೂ ಇದ್ದೇ ಇರುತ್ತಾರೆ. ಅದೆಲ್ಲವೂ  ಸುಳ್ಳೆಂದು ಷೋಷಣೆ ಮಾಡುತ್ತಲೇ  ಇರುತ್ತಾರೆ!

ಈಗಲೂ ಇಂಥ ಬುದ್ಧಿಜೀವಿಗಳು ಮಾಡುವ ಹುಡುಕಾಟದಲ್ಲಿ ಟಿ.ವಿ.ಮೀಡಿಯಾಗಳಿಗೆ ಸಿಕ್ಕಿಹಾಕಿಕೊಳ್ಳುವಂಥ ಕೆಲ ಢೋಂಗಿ ಸನ್ಯಾಸಿಗಳು ಗುರುಗಳು ದೊಡ್ಡದಾಗಿ ನಮ್ಮ ಸಮಾಜದಲ್ಲಿ ಬಹಿರಂಗವಾಗಿ ಉದಾಹರಣೆಯಾಗುತ್ತಾರೆ!!  ದುರಾದೃಷ್ಟವೆಂದರೆ, ಅಂಥ ಕೆಟ್ಟವರಿಂದಲೆ ನಮ್ಮ ನಡುವೆ  ಪರಮ ದೈವನಿಷ್ಠಯಿಂದ ಕಠಿಣ ಶಿಸ್ತಿನಿಂದ ಇರುವ ಸಾಧು ಸಂತರನ್ನೂ ಬಹು ಮಂದಿ ಅನುಮಾನಿಸುವಂತಾಗಿದೆ.  ಹೀಗಾಗಿ ಸಮಾಜದಲ್ಲಿರುವ ನಿಜವಾದ ಸಾಧು-ಸತ್ಪುಷರಿಗೆ ಮಠ ಮಾನ್ಯರಿಗೆ ಹಾಗೂ ಸದಾ ಒಳಿತನ್ನೇ ಬಯಸುವ ಜನಸಾಮಾನ್ಯರಿಗೆ, ಮತ್ತು ಈಗಾಗಲೇ ಅಂತಹ ಆಧ್ಯಾತ್ಮಿಕ ಶಕ್ತಿಯಿಂದ ಪ್ರಯೋಜನ ಪಡೆದವರಿಗೆ ಪುನೀತರಾದವರಿಗೆ  ಅದೆಷ್ಟು ವ್ಯಥೆಯಾಗುತ್ತದೆಂಬುದನ್ನು ಊಹಿಸುವುದೂ ಕಷ್ಟವಾಗುತ್ತದೆ.

ಹೊಸಬೆಳಕು:ಹೊಸತಿರುವು

Rating
No votes yet