ಪ್ರಮೋಸನ್ ಪ್ರಹಸನ....

ಪ್ರಮೋಸನ್ ಪ್ರಹಸನ....

ನಾನು ಜೀವನದಲ್ಲಿ ಏನನ್ನಾದರೂ ಸಾಧಿಸಲೇ ಬೇಕು.  ಎಲ್ಲರೂ ಹೇಳುವ ಹಾಗೆ, ನಾನು ನನ್ನ ಹೆಂಡರನ್ನ ಮೊದಲ ಬಾರಿಗೆ ಭೇಟಿಯಾದಾಗ ಹೇಳಿದ್ದೆ. ನಾನು ಏನನ್ನಾದರೂ ಸಾಧಿಸಬೇಕು ಅಂತಾ ಇದೀವ್ನೀ ನಿನ್ನ ಸಹಕಾರ ಬ್ಯಾಕು ಅಂದಿದ್ದೆ. ಅದು ಹಾಗೇ ಅಂದ್ಕೊಂಡಿತ್ತು. ನನ್ನ ಗಂಡ ಏನೋ ಸಾಧಿಸ್ತಾವ್ನೆ. ಅಂತಾ, ಆಮ್ಯಾಕೆ ಗೊತ್ತಾಗಿದ್ದು, ದಿನಾ ಸೈಕಲ್ ಹೊಡ್ಕೊಂಡು ಆಫೀಸ್ಗೆ ಹೋಗೋದೆ ಬಡ್ಡೆ ಐದ್ನಂದು ಸಾಧನೆ ಅಂತ. ಅದಕ್ಕೆ ಸಮಯ ಬಂದೇ ಹೋಯ್ತು.
ಪಕ್ಕದ ಮನೆಯಲ್ಲಿರುವುದು ಸೌಮ್ಯ. ಅವತ್ತು ಅವರ ಮನೆಯಲ್ಲಿ ಯಾರೂ ಇರಲಿಲ್ಲ. ಅಂದರೆ ಗಂಡ ಇನ್ನೂ ಆಫೀಸ್ ನಿಂದ ಬಂದಿರಲಿಲ್ಲ. ಇದ್ದಕ್ಕಿದ್ದಂತೆ ಅವರ ಮನೆಯಿಂದ "ಅಯ್ಯೋ"  ಸಬ್ದ ಕೇಳಿಸ್ತು. ಕೆರಳಿದ ಸರ್ಪ. ಮನೆಯಲ್ಲಿ ಲುಂಗಿ ಬನೀನಲ್ಲಿ ಕುಂತಿದ್ದೆ. ಸಬ್ದ ಬಂದ ಕಾಡೆ ಹಾಗೇ ಒಂದು ನೋಟ. ತಕ್ಷಣವೇ ಓಟ. ಹೆಂಡ್ರು ಎಲ್ಲಿಗ್ರೀ ಅಂದ್ಲು. ಬಂದೆ ತಡಿಯೇ ಒಂದ್ ನಿಮಿಸ ಅಂತಾ ಅವರ ಮನೆ ಗೇಟ್ ಹಾರಿ ಗೂಳಿ ತರಹ ನುಗ್ಗಿದೆ.

ಸೌಮ್ಯ ಸೀರೆಯ ಸೆರಗಿಗೆ ಬೆಂಕಿ ಹತ್ತಿತ್ತು. ಆಗ್ಲೆ ಅದನ್ನು, ಆ ಯಮ್ಮ ನೀರು ಹಾಕಿ ಆರಿಸಿಕೊಂಡಿತ್ತು. ಆದರೂ ನಾನು ಸೌಮ್ಯರವರೆ ನಿಮ್ಮ ಸೀರೆಗೆ ಬೆಂಕಿ. ಎಂದು ತಕ್ಷಣವೇ ಸೆರಗಿಗೆ ಕೈ ಹಾಕಿದೆ . ಬ್ಯಾಡ ಬಿಡ್ರಿ .  ಅದೇ ಸಮಯಕ್ಕೆ ನನ್ನ ಹೆಂಡರು ಮತ್ತು ಅವಳ ಗಂಡ ಇಬ್ಬರೂ ಎಂಟ್ರಿ ಕೊಟ್ಟಿದ್ರು. ಏನೇ ಆಯ್ತೇ ಅಂತ ಅವಳ ಗಂಡ ಬಂದ. ಈ ಕಡೆ ನನ್ನ ಹೆಂಡರು ಗುರ್.....ಅಂತಿದ್ಲು. ಮನೆಗೆ ನಡೀರಿ ಅಂದ್ಲು. ಕೆರಳಿದ ಸರ್ಪದ ತರಹ ಹೋಗಿದ್ದೋನು ಕೆರೆ ಹಾವು ತರಹ ಅವಳ ಹಿಂದೇನೇ ಹೋದೆ. ಥೂ ಸಾಧನೆಗೆ ಅವಕಾಸನೇ ಸಿಕ್ತಾ ಇಲ್ಲಾ ಅಂತಾ ಕುಲ ದ್ಯಾವರು ಸಿದ್ದೇಸನ್ನ ಬಯ್ಕೊಂಡು ಬಂದೆ.

ಬಂದೇ ಬಿಡ್ತು ನನ್ನ ಸಾಧನೆಗೆ ಮತ್ತೊಂದು ಅವಕಾಸ. ಒಂದು ದಿನ ಸಂಜೆ ನಾನು ಹೆಂಡರು ವಾಕಿಂಗ್ ಓಯ್ತಾ ಇದ್ವಿ. ಸುಮಾರು 8 ಅಂತಸ್ತಿನ ಮಹಡಿ, ವ್ಯಕ್ತಿಯೊಬ್ಬ ನೇತಾಡ್ತಾ ಇದ್ದ, ಆತ್ಮಹತ್ಯೆಗೆ ಪ್ರಯತ್ನಿಸುವಂತೆ ಭಾಸವಾಯಿತು. ನನ್ನ ಹೆಂಡ್ತಿ ಅವನ್ನ ಕೆಳಕ್ಕೆ ಇಳಿಸ್ರೀ, ಟಿವಿ, ಪೇಪರ್ನಾಗೆ ಎಲ್ಲಾದರಲ್ಲೂ ಬರ್ತೀರಾ, ಹಾಗೇ ನಿಮ್ಮ ಸಾಧನೆಗೂ ಒಂದು ಅರ್ಥ ಬತ್ತದೆ ಅಂದ್ಲು. ಹೂಂ ಅಂತಾ ಹತ್ತೇ ಬಿಟ್ಟೆ. ಮೆಟ್ಲು ಹತ್ತಿದ ರಭಸಕ್ಕೆ ಏದುಸಿರು. ನನ್ಮಕ್ಕಳು ಇಂತ ದೊಡ್ಡ ಬಿಲ್ಡಿಂಗ್ ಕಟ್ಟಿಸ್ತಾರೆ ಲಿಫ್ಟ್ ಮಡಗಕ್ಕೆ ಆಗಲ್ವಾ. ಸ್ವಲ್ಪ ಸುಧಾರಿಸಿಕೊಂಡು ಆತ್ಮಹತ್ಯೆ ಮಾಡಕೊಬೇಡ ಕೈ ಕೊಡಪ್ಪಾ ಅಂದೆ. "ಆತ್ಮಹತ್ಯೆಯಲ್ಲ ಸಾ, ಟೆರಾಸ್ ಮೇಲೆ ಕಸ ಹೊಡೆಯೋಣ ಅಂತಾ ಬಂದಿದ್ದೆ. ಬಡ್ಡೀ ಮಗಂದು ಪಾಚಿ ಕಟ್ಟಿದ್ದು ನೋಡ್ಲೇ ಇಲ್ಲ. ಜಾರಿ ಹಿಂಗೆ ತಗಲಾಕ್ಕೊಡಿದೀನಿ ಅಂದ." ಹಾಗಾದರೆ ಮಗನೇ ಸಾಯಿ ಎಂದು ಹೊರಟೆ.

ಕೆಳಗಡೆ ಸಿಕ್ಕಾಪಟ್ಟೆ ಜನ, ಮೀಡಿಯಾದವರು. ಪೊಲೀಸ್ ನವರು ಆಗಲೇ ಒಂದು ದೊಡ್ಡ ಜಮಖಾನ ಇಟ್ಕೊಂಡು ಕಾಯ್ತಾ ಇದ್ರು. ಅವನು ಯಾವಾಗ ಬೀಳ್ತಾನೆ ಅಂತ. ನನ್ನ ಸಾಧನೆಗೆ ಇದೊಂದು ಸದಾವಕಾಶ ಅಂದವನೇ ಕೈ ಕೊಡು ಮೇಲೆ ಎತ್ತುತ್ತೀನಿ. ಹಂಗದ್ದಿದ್ದೇ ತಡ, ಮಗ ಕೈ ಕೊಟ್ಟ ರಭಸ ಹೇಗಿತ್ತೆಂದರೆ exchange ಆಗಿದ್ವಿ.

ನಾನು ಕೆಳಗೆ ತಗಲಾಕ್ಕೊಂಡು ಇದ್ದೆ. ಅವನು ಮ್ಯಾಕೆ ನಿಂತಿದ್ದ. ಲೇ ಉಳಸಲೋ ನಾನು ನಿನ್ನನ್ನು ಕಾಪಾಡಿಲ್ವಾ ಅಂದೆ. ಹೋಗಯ್ಯೋ ಎಲ್ಲಿ ಹಚ್ಚಿದ್ದೀಯಾ ಅಂತಾ ಹೊಂಟು ಓಗದಾ. ಕೆಳಗೆ ನಿಂತವರಿಗೆ ಯಾರು ಜೋತಾಡ್ತಾ ಇದಾರೆ ಎನ್ನುವುದು ಸ್ಪಷ್ಟವಾಗಿ ಕಾಣ್ತಾ ಇರಲಿಲ್ಲ. ಜೋತಾಡಿ, ಜೋತಾಡಿ ನನ್ನ ಸಕ್ತಿ ಹೋಗಿತ್ತು.  ಕೆಳಗೆ ಬಿದ್ದರೆ ಹೇಗಿದ್ದರೂ ಪೋಲೀಸ್ ನವರ ಜಮಖಾನ ಐತಲ್ಲಾ ಎನ್ನುವ ಧೇರ್ಯ. ಗುರುವೇ ಸಿದ್ದೇಸ ನೀನೇ ಕಾಪಾಡು ಅಂತ ಕೈ  ಬಿಟ್ಟೆ. ನೋಡಿ. ಅವಾಗಲೇ ಗೊತ್ತಾಗಿದ್ದು ಆತ್ಮಹತ್ಯೆ ಇಷ್ಟೊಂದು ಕಸ್ಟ ಇರ್ತದಾ ಅಂತಾ. ಅಷ್ಟೇ ಅಲ್ಲ ನನ್ನ ಜೀವನದ ದಾರಿಯ ಸಾಕ್ಸಾತ್ಕಾರವಾಗಿತ್ತು, ಚೆಡ್ಡಿ ಸ್ನೇಹಿತರು, ಬಾದರಾಯನ ಸಂಬಂಧಿಗಳು ಎಲ್ಲಾ ಕಣ್ಣ ಮುಂದೆ ಬಂದಿದ್ರು. ಜಮಖಾನವನ್ನು  ಡಿಪಾರ್ಟ್ ಮೆಂಟ್ ಗೆ ಕೊಡಿಸಿ ಯಾವ ಕಾಲ ಆಗಿತ್ತೋ ಏನೋ. ಒಂದ್ಕಡೆ ಧೂಳು ಮತ್ತೊಂದು ಕಡೆ ಲಡ್ಡಾಗಿತ್ತು. ಬಿದ್ದ ರಭಸಕ್ಕೆ ಧೂಳಿನ ಜೊತೆ ಹರಿದೇ ಹೋಯ್ತು.  ಕೈ, ಕಾಲು ಎರಡೂ ಡ್ಯಾಮೇಜ್. ಧೂಳ್ನಿಂದ ಕೆರೆತ ಬೇರೆ.

ಆಸ್ಪತ್ರೆಯಲ್ಲಿ ಬೇಜಾರಿಂದ ಮಲಗಿದ್ದೆ. ಬೆಳಗ್ಗೆ ಬಂದ ನನ್ನ ಹೆಂಡರು. ಏ ಪೇಪರ್ನಾಗೆ  ನಿಮ್ಮ ಪೋಟೋ ಬಂದಿದೆ ಅಂದ್ಲು. ಖುಸಿಯಿಂದ ನೋಡಿದೆ. "ಆತ್ಮಹತ್ಯೆಗೆ ಯತ್ನಿಸಿದ ಖಾಸಗಿ ನೌಕರ - ಪೊಲೀಸರಿಂದ ರಕ್ಷಣೆ".  ಪೋನ್ ಮೇಲೆ ಪೋನ್. ಲೋ ನಿನಗೇನಾಗಿತ್ತೋ ಆತ್ಮಹತ್ಯೆ ಮಾಡ್ಕಳೋ ಅಂತಾ ದರ್ದು. ಗೂಬೆ ಮುಂ....ದೆ ಹೀಗೆ ಸಹಸ್ರ ನಾಮ. ಮನೆಯಿಂದ, ಬಾಸ್ ಎಲ್ಲರೂ ಉಗಿದಿದ್ದೇ ಉಗಿದಿದ್ದು. ಗುರುವೇ ಸಿದ್ದೇಸ ನಿನಗೆ ನನ್ನ ಮ್ಯಾಕೆ ಯಾಕಪ್ಪಾ ಕೋಪ.

ಸ್ವಲ್ಪ ಸಮಯದ ನಂತರ ಮತ್ತೆ  ಬಾಸ್ ಪೋನ್,  ನಿನಗೆ ಪ್ರಮೋಸನ್ ಮಾಡಿದೀವಿ, ಉಸಾರ್ ಆದ್ಮೇಲೆ ಡ್ಯೂಟಿಗೆ ಬಾ . ಖುಸಿಯಾಗಿ ಹೆಂಡರಿಗೆ ಇಸ್ಯಾ ತಿಳ್ಸ್ ದೆ. ನಂಗೊತ್ತು ಅಂದ್ಲು. ಆಆಆಆ, ನಿಂಗೆ, ಹೆಂಗೇ... ಗೊತ್ತು  ಮೂದೇವಿ, ನಾನೇ ನಿಮ್ಮ ಬಾಸ್ ಗೆ ಪೋನ್ ಮಾಡಿ, ನೀವು ಪ್ರಮೊಸನ್ ಕೊಟ್ಟಿಲ್ಲ ಅಂತಾ ನಮ್ಮ ಯಜಮಾನ್ರು ಆತ್ಮಹತ್ಯೆ ಮಾಡ್ಕೊಳೋಕೆ ಹೋಗಿದ್ರು ಅಂತಾ ಏಳಿದ್ದು. ಆಆಆ...... ಗುರುವೇ ಸಿದ್ದೇಸ ಏನಪ್ಪಾ ನಿನ್ನ ಲೀಲೆ.

Rating
No votes yet

Comments