ಪ್ರವಾದಿ ಜಯಂತಿ. ಭಾರತದಲ್ಲಿ ರಜೆ, ಸೌದಿಯಲ್ಲಿ ಇಲ್ಲ.
ಪ್ರವಾದಿ ಜಯಂತಿ. ಭಾರತದಲ್ಲಿ ರಜೆ, ಸೌದಿಯಲ್ಲಿ ಇಲ್ಲ.
ಇಂದು ಬೆಳಿಗ್ಗೆ ನನ್ನ ಮಿತ್ರ ನಾಗರಾಜನಿಗೆ ಫೋನ್ ಮಾಡಿ ಮಾತನಾಡುತ್ತಿದ್ದಾಗ ಏನಪ್ಪಾ, ನಾಳೆ ಹಬ್ಬಾ ಜೋರಾ, ಎಂದು ಕೇಳಿದ. ಇದ್ಯಾವ ಹಬ್ಬಾ ನಾಳೆ, ಎಂದು ಯೋಚಿಸುತ್ತಿರುವಾಗ ಅವನು ಹೇಳಿದ ಅದೇ, ನಿಮ್ ಹಬ್ಬ ಈದ್ ಮಿಲಾದ್ ನಾಳೆ, ಇಲ್ಲಿ ಸರಕಾರೀ ರಜೆ ಎಂದ. ಓಹೋ, ಹೌದಾ ಎಂದು ಉದ್ಗಾರ ತೆಗೆದಾಗ ಅವನಿಗೆ ಆಶ್ಚರ್ಯ. ಏನು ಅಲ್ಲಿ ಇಲ್ವಾ ರಜೆ ಎಂದ. ನಾನಂದೆ ಇಲ್ಲಿ ಸೌದಿ ಅರೇಬಿಯಾದಲ್ಲಿ ಪ್ರವಾದಿಗಳ ಜಯಂತಿಗೆ ರಜೆ ಇಲ್ಲ. ಅಂಥ ಒಂದು ದಿನ ಇದೆ ಎಂದೂ ಇಲ್ಲಿನ ಜನಕ್ಕೆ ಗೊತ್ತಿಲ್ಲ. ಪ್ರವಾದಿ ಜಯಂತಿ ಇರಲಿ, ಇಲ್ಲಿನ ರಾಜ ಸತ್ತಾಗಲೂ ರಜೆ ಕೊಡದ ದುರುಳರು ಇವರು ಎಂದು ನನ್ನ ದುಃಖವನ್ನು ವ್ಯಕ್ತಪಪಡಿಸಿದಾಗ ಅವನೂ ಸಂತಾಪ ಸೂಚಿಸಿದ ನನ್ನ ದೌರ್ಭಾಗ್ಯಕ್ಕೆ. ದೌರ್ಭಾಗ್ಯವಲ್ಲದೆ ಮತ್ತೇನು? ಭಾರತದಲ್ಲಿ ಪ್ರತೀ ಮೂರು ದಿನಗಳಿಗೊಮ್ಮೆ ಒಂದಲ್ಲ ಒಂದು ರಜೆ ವಕ್ಕರಿಸಿಕೊಳ್ಳುತ್ತಲೇ ಇರುತ್ತದೆ. ಹಾಗೇನಾದರೂ ರಜೆ ಸಿಗದೇ ಒಂದೆರಡು ವಾರಗಳಾದವು ಅನ್ನಿ, ಆಗ ಯಾವುದಾದರೂ ಒಂದು ನೆಪದಲ್ಲಿ, ನಮ್ಮ ರಾಜಕೀಯ ಪಕ್ಷಗಳ ಕೃಪಾ ಕಟಾಕ್ಷ ದಲ್ಲಿ ಬಂದೋ, ದೊಂಬಿಯೋ ನಡೆದು ರಜೆ ಸಲೀಸಾಗಿ ಸಿಗುತ್ತದೆ. ಯಡ್ಡಿ ಹತ್ತಿರ ಬಹುಮತ ಸಾಬೀತು ಪಡಿಸಿ ಎಂದರೂ ರಜೆ, ಅಯೋಧ್ಯೆಯ ವಿವಾದ ಕ್ಕೆ ನ್ಯಾಯಾಲಯ ಕೊಡುವ ತೀರ್ಪಿನಂದೂ ರಜೆ.
ಸೌದಿ ಅರೇಬಿಯಾದ ಹಿಂದಿನ ರಾಜ ಫಹದ್ ರವರು ತೀರಿ ಕೊಂಡ ಸುದ್ದಿ ಬಂದಾಗ ನಾನು ಬ್ಯಾಂಕಿನಲ್ಲಿ ಇದ್ದೆ. ನನ್ನ ಕೆಲಸ ಬೇಗ ಬೇಗನೆ ಪೂರೈಸಿ ಹಾಗೆಯೆ ಅಲ್ಲಿನ ಕ್ಲರ್ಕ್ ಹತ್ತಿರ ಕೇಳಿದೆ, ಎಷ್ಟು ದಿನ ರಜೆ ಕೊಡ್ತಾರೆ ಅಂತ? ಅವನು ಕೇಳಿದ, ರಜೆ? ಯಾವುದಕ್ಕೆ? ನಾನು ದೊರೆಯ ಮರಣದ ವಾರ್ತೆ ಆತನಿಗೆ ಹೇಳಿದಾಗ, ಅವನು ಫಹದ್ ನ ಸಮಯ ಮುಗಿಯಿತು ಅವನು ಸೇರಿಕೊಂಡ ಭಗವಂತನ ಪಾದಚರಣಗಳಿಗೆ, ಅದಕ್ಕೇಕೆ ರಜೆ, ನಿಮ್ ದೇಶದಲ್ಲಿ ಇದಕ್ಕೂ ಕೊಡ್ತಾರ ರಜೆ ಎಂದು ಅವನು ಮರು ಪ್ರಶ್ನೆ ಹಾಕಿದಾಗ ಉತ್ತರಿಸಲಾಗದೆ ಮುಗುಳ್ನಕ್ಕು ಹೊರ ನಡೆದೆ. ಸಾವು ನೈಸರ್ಗಿಕ, ಅದನ್ನು ತಡೆಯಲಾಗಲೀ, ವಿಳಂಬಿಸಲಾಗಲೀ ಯಾರಿಂದಲೂ ಸಾಧ್ಯವಿಲ್ಲ. ಹಾಗೆಯೇ ಯಾರಾದರೂ ಸತ್ತರೂ ಅತಿಯಾಗಿ ಶೋಕ ವ್ಯಕ್ತ ಪಡಿಸಲೂ ಬಾರದು. ಹಾಗೆ ಮಾಡಿದ್ದೇ ಆದರೆ ಅವನಿಗೆ ದೇವನ ನಿರ್ಣಯ ಇಷ್ಟವಾಗಿಲ್ಲ ಎಂದು ಅರ್ಥ. ಇದು ಬಹುತೇಕ ಮುಸ್ಲಿಮರ ಅಭಿಪ್ರಾಯ. ಈಗ ಹೇಳಿ ಬಂದ್ ಕೊಡೋದಾದರೂ ಹೇಗೆ ಸಾಧ್ಯ? ಅಳಲೂಬಾರದಂತೆ, ಬಂದ್ ಮಾತು ದೂರ ಉಳಿಯಿತು ಅಲ್ಲವೇ? ಅಲ್ಲಾ, ನಾನು ಮಾತಾಡ್ತಾ ಇದ್ದಿದ್ದು ಜಯಂತಿ ಬಗ್ಗೆ, ಇಲ್ಯಾಕೆ ಮುಖಹಾಕಿದ ಯಮ ಧರ್ಮರಾಯ? ಸಾವೆಂದರೆ ಹೀಗೆಯೇ. ಅಚಾನಕ್ ಆಗಿ ಹೊಂಚು ಹಾಕಿ ಬಿಡುತ್ತದೆ.
ನಾನು ಹೋದ ವರ್ಷ, ಜುಲೈ ತಿಂಗಳಿನಲ್ಲಿ ಭಾರತಕ್ಕೆ ಬಂದಿದ್ದಾಗ ವಾಲ್ಮೀಕಿ ಜಯಂತಿ. ನಾನು ನನ್ನ ಮಿತ್ರನಿಗೆ ಕೇಳಿದೆ ಇದ್ಯಾವಾಗಿಂದ ಆರಂಭವಾಯ್ತು ಹೊಸ ಜಯಂತಿ ಎಂದು. ಭಾಜಪ ಸರಕಾರ ಆಲ್ವಾ ಇರೋದು, ಬೇರೆಯವರಿಗಿಂತ ತಾನು ಭಿನ್ನ ಎಂದು ತೋರಿಸಲು ಈ ರಜೆ ಅಂದ. ಇಂದು ಬೆಳಿಗ್ಗೆ ಅವನೊಂದಿಗೆ ಮಾತನಾಡಿದಾಗ ಅವನು ಹೇಳಿದ ರಜೆಯ ಪಟ್ಟಿಗೆ ಇನ್ನಷ್ಟು ಹೆಸರುಗಳು ಸೇರಿಕೊಂಡಿವೆ, ಬಸವ ಜಯಂತಿ, ಕನಕ ಜಯಂತಿ. ವಚನಗಳ ಮಹಾತ್ಮ, ವೀರಶೈವ ಪಂಗಡ ಗುರುಗಳಾದ ಬಸವಣ್ಣರಿಗೆ ಅವರು ಹುಟ್ಟಿದ ದಿನ ಜನ ರಜೆಯಲ್ಲಿ ದಿನ ಕಳೆಯೋದು ಎಷ್ಟು ಪ್ರಿಯವಾದ ವಿಷಯವೋ ನಾ ಕಾಣೆ. ಬಸವ ಜಯಂತಿ ಇವತ್ತು ಎಂದು ಸಂಭ್ರಮ ಪಡುತ್ತಿರುವವರಿಗೆ ಅವರ ಒಂದೇ ಒಂದು ವಚನವಾದರೂ ಗೊತ್ತೇ ಎಂದು ಕೇಳಿದರೆ ಅನಾಹುತವಾಗಬಹುದೋ, politically incorrect ಆಗಬಹುದೋ?
ಕನಕ ಜಯಂತಿ ಯಂದು ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಭಗವಾನ್ ಶ್ರೀ ಕೃಷ್ಣನ ಮಂದಹಾಸವನ್ನು ನೋಡಲು ದಲಿತನಿಗೆ ದಾರಿ ಮುಕ್ತವಾಗಿ ತೆರೆದಿರಬಹುದೇ? ಇಂಥ ಪ್ರಶ್ನೆಗಳು ರಜೆಯ ದಿನ ಏಳಲೇ ಬೇಕು, ನಾವದಕ್ಕೆ ಉತ್ತರ ಕಂಡು ಕೊಳ್ಳಲೇ ಬೇಕು. ನನಗೆ ಅದಕ್ಕೆ ಸಮಯವಿಲ್ಲ, ಏಕೆಂದರೆ ನನಗೆ ಇಂಥಾ ರಜೆಗಳ ಸೌಕರ್ಯ ಇಲ್ಲ, ಕೆಲಸದ ಸಜೆ ಮಾತ್ರ ಇರೋದು.
addendum: ಈ ಲೇಖನಕ್ಕೆ ಬರುತ್ತಿರುವ ಪ್ರತಿಕ್ರಿಯೆಗಳು free for all ರೀತಿಯಲ್ಲಿ ಮನಸ್ಸಿಗೆ ತೋಚಿದಂತೆ ಬರೆಯಲು ಕೆಲವರನ್ನು ಪ್ರೇರೇಪಿಸುತ್ತಿದೆ. ಈ ರೀತಿಯ ವರ್ತನೆಗೆ ಬಹುಶಃ ಸಂಖ್ಯೆಯಲ್ಲಿ ಅಪಾರ ಇರುವ advantage ನ ಪರಿಣಾಮ ಇರಬೇಕು. ಖೇದಕರವಾಗಿ, seemingly innocuous ಆದ ಲೇಖನವೊಂದು ಅದನ್ನು ಬರೆದ ವ್ಯಕ್ತಿಯ ರಾಷ್ಟ್ರ ಭಕ್ತಿಯನ್ನು ಪ್ರಶ್ನಿಸುತ್ತದೆ, ಒಂದು ನಿರ್ದಿಷ್ಟ ಸಮುದಾಯದವರು ದಬ್ಬಾಳಿಕೆಗೆ ಹೆದರಿ ಒಂದು ರಾಜ್ಯವನ್ನು ಬಿಟ್ಟಾಗ ಆ ರಾಜ್ಯ ಉದ್ಧಾರವಾದ ಖುಷಿ ವ್ಯಕ್ತವಾಗುತ್ತದೆ, ಬರೆದವನ ಮೇಲೆ ವಿವಿಧ ನಾಮಾವಳಿಗಳ ಪ್ರಯೋಗವಾಗುತ್ತದೆ. ಅಸಹನೆ ಏನು, ಅದರ ಲಕ್ಷಣಗಳೇನು ಎಂದು ಯಾರಾದರೂ ಕೇಳಿದರೆ ಇಲ್ಲಿ ಕಾಣುವ ಪ್ರತಿಕ್ರಿಯೆಗಳ ಕಡೆ ಟೂರ್ ಹೊಡೆಸಬಹುದು. ಒಂದು ಸಮಾಧಾನದ ಅಂಶ ಏನೆಂದರೆ ಈ ತೆರನಾದ ಅಸಹನೆಗೆ ಬಾಲ್ಯದಿಂದಲೂ expose ಆದ ಕಾರಣ ಭೇಧಿಸಲಾಗದ immune ಗುಣವನ್ನು ಮೈ, ಮನಸ್ಸು ಗಳಿಸಿಕೊಂಡಿರುವುದು. ಈ ಗುಣವನ್ನು ಪ್ರಪಂಚದ ಎಲ್ಲಾ (ಹಿಂದೂ, ಮುಸ್ಲಿಂ, ಕ್ರೈಸ್ತ, ಬೌದ್ಧ, ಯಹೂದ್ಯ ) ಅಲ್ಪಸಂಖ್ಯಾತರಲ್ಲೂ ಕಾಣಬಹುದು.
Comments
In reply to ಉ: ಪ್ರವಾದಿ ಜಯಂತಿ. ಭಾರತದಲ್ಲಿ ರಜೆ, ಸೌದಿಯಲ್ಲಿ ಇಲ್ಲ. by rajgowda
ಉ: ಪ್ರವಾದಿ ಜಯಂತಿ. ಭಾರತದಲ್ಲಿ ರಜೆ, ಸೌದಿಯಲ್ಲಿ ಇಲ್ಲ.
In reply to ಉ: ಪ್ರವಾದಿ ಜಯಂತಿ. ಭಾರತದಲ್ಲಿ ರಜೆ, ಸೌದಿಯಲ್ಲಿ ಇಲ್ಲ. by bhasip
ಉ: ಪ್ರವಾದಿ ಜಯಂತಿ. ಭಾರತದಲ್ಲಿ ರಜೆ, ಸೌದಿಯಲ್ಲಿ ಇಲ್ಲ.
ಉ: ಪ್ರವಾದಿ ಜಯಂತಿ. ಭಾರತದಲ್ಲಿ ರಜೆ, ಸೌದಿಯಲ್ಲಿ ಇಲ್ಲ.
In reply to ಉ: ಪ್ರವಾದಿ ಜಯಂತಿ. ಭಾರತದಲ್ಲಿ ರಜೆ, ಸೌದಿಯಲ್ಲಿ ಇಲ್ಲ. by narabhangi
ಉ: ಪ್ರವಾದಿ ಜಯಂತಿ. ಭಾರತದಲ್ಲಿ ರಜೆ, ಸೌದಿಯಲ್ಲಿ ಇಲ್ಲ.
In reply to ಉ: ಪ್ರವಾದಿ ಜಯಂತಿ. ಭಾರತದಲ್ಲಿ ರಜೆ, ಸೌದಿಯಲ್ಲಿ ಇಲ್ಲ. by narabhangi
ಉ: ಪ್ರವಾದಿ ಜಯಂತಿ. ಭಾರತದಲ್ಲಿ ರಜೆ, ಸೌದಿಯಲ್ಲಿ ಇಲ್ಲ.