ಪ್ರವಾಸ ಕಥನ - ೧

ಪ್ರವಾಸ ಕಥನ - ೧

೨೯ನೇ ದಿನಾಂಕ, ಶಿವಮೊಗ್ಗದಲ್ಲಿ ಇದ್ದ ಮದುವೆಯ ನೆಪದಲ್ಲಿ, ನಾನು ಮತ್ತು ನನ್ನವರು, ಎರಡು ದಿನ ಮೊದಲೇ (ಭಾನುವಾರ) ಹೊರಟೆವು. ಬೆಂಗಳೂರಿನಿಂದ ಹಾಸನ ಮಾರ್ಗವಾಗಿ ಹೊರಟು, ಮೊದಲು ಹೊರನಾಡು ತಲುಪಿದೆವು. ಹೊರನಾಡು ಬೆಂಗಳೂರಿನಿಂದ ೩೩೦ ಕಿಲೋಮೀಟರ್ ಮತ್ತು ಚಿಕ್ಕಮಗಳೂರಿನಿಂದ ೧೦೦ ಕಿಲೋಮೀಟರ್ರ್ ದೂರದಲ್ಲಿದೆ. ನಾವು ಈಗಾಗಲೇ ಲೆಖ್ಖವಿಲ್ಲದಷ್ಟುಸಲ ಹೊರನಾಡಿಗೆ ಹೋಗಿದ್ದರೂ, ಅಲ್ಲಿಯ ಪ್ರಕೃತಿ ಸೌಂದರ್ಯ ನಮ್ಮನ್ನು ಮತ್ತೆ ಮತ್ತೆ ಕರೆಯುತ್ತಲೇ ಇರತ್ತೆ. ಒಂದು ಸಣ್ಣ ಅವಕಾಶ ಸಿಕ್ಕರೂ, ನಾವು ತಪ್ಪಿಸಿಕೊಳ್ಳದೇ ಹೊರಟೇ ಬಿಡುತ್ತೇವೆ. ಮಲೆನಾಡಿನ ಹಚ್ಚ ಹಸಿರು ಕಂಗೊಳಿಸುತ್ತಾ, ನಮ್ಮನ್ನು ಸ್ವಾಗತಿಸುತ್ತದೆ. ಈ ದೇವಿಯ ಸನ್ನಿಧಿಗೆ ಹೋಗುವ ದಾರಿ, ಅತ್ತ್ಯಂತ ಸುಂದರವಾಗಿದೆ, ಸನ್ನಿಧಿ ತಲುಪುವ ಮೊದಲೇ ದೇವಿ ನಮ್ಮನ್ನು ಹರಸಿದಂತೆ ಅನ್ನಿಸುತ್ತದೆ. ಮೊದಲು ಕಳಸಕ್ಕೆ ಹೋಗಿ, ಕಳಸೇಶ್ವರನ ದರ್ಶನ ಮಾಡಿ ಅಲ್ಲಿಂದ ಹೊರನಾಡಿಗೆ ತಲುಪಿದೆವು. . ಇಲ್ಲಿನ ದೇವಿ ಆದಿಶಕ್ತ್ಯಾತ್ಮಿಕ ಅನ್ನಪೂರ್ಣೇಶ್ವರಿ ಅಮ್ಮನವರು. ಬೆಂಗಳೂರಿನಿಂದ ಪ್ರಯಾಣಿಸಿದ ಆಯಾಸ ನಮಗೆ ಇಲ್ಲಿನ ಹಸಿರು ಕಂಡಾಗಲೇ ತಣಿದುಹೋಗಿರುತ್ತದೆ.

ದೇವಿ ಅನ್ನಪೂರ್ಣೇಶ್ವರಿಯ ವಿಗ್ರಹ ಚಿನ್ನದ ತಗಡನ್ನು ಹೊದ್ದಿಸಿಕೊಂಡಿದೆ. ನಾವು ಚಿಕ್ಕ ಹುಡುಗರಾಗಿದ್ದಾಗ, ಹೊರನಾಡಿನಲ್ಲಿ ಸೇತುವೆ ಇರಲಿಲ್ಲ. ನಾವು ಇಳಿದು ನೀರಿನಲ್ಲಿ ನಡೆದುಕೊಂಡು ಹೋಗುತ್ತಿದ್ದೆವು. ತುಂಬಾ ಚೆನ್ನಾಗಿರುತ್ತಿತ್ತು. ಈಗ ವಾಹನಗಳು ದೇವಸ್ಥಾನದ ಬಾಗಿಲಿಗೇ ಹೋಗುತ್ತದೆ. ಆಗ ಹೋಗುತ್ತಿದ್ದಾಗ, ಈಗ ಪ್ರತಿಷ್ಟಾಪಿಸಿರುವ ದೇವಿಯ ವಿಗ್ರಹವನ್ನು ಕೆತ್ತುತ್ತಿದ್ದರು. ಚಿನ್ನದಿಂದ ಹೊಳೆಯುತ್ತಿರುವ, ಎತ್ತರದ ದೇವಿ, ತುಂಬಾ ಮುದ್ದಾಗಿದಾಳೆ. ನಸುನಗುತ್ತಿರುವ ದೇವಿಯ ಒಂದು ಹಸ್ತದಲ್ಲಿ ಶಂಖ ಮತ್ತು ಒಂದು ಹಸ್ತದಲ್ಲಿ ಶ್ರೀ ಚಕ್ರ ಕೆತ್ತಿದ್ದಾರೆ. ಒಳಗೆ ಹೋಗಿ ದೇವಿಯ ದರ್ಶನ ಮಾಡಿದೊಡನೆ, ಆ ಸುಂದರವಾದ ನಗು ಮುಖ ನಮ್ಮ ಆತಂಕಗಳನ್ನೆಲ್ಲಾ ಹೋಗಲಾಡಿಸಿ, ನಮಗೇ ತಿಳಿಯದಂತೆ, ನಮ್ಮೊಳಗೆ ಒಂಥರಾ ನೆಮ್ಮದಿ, ಧನ್ಯತೆ ಮೂಡಿಸುತ್ತದೆ. ಈ ದೇವಸ್ಥಾನಕ್ಕೆ ಬಂದ ಭಕ್ತರಿಗೆಲ್ಲಾ ಸೊಗಸಾದ ಊಟ, ಮಹಾ ಪ್ರಸಾದದ ರೂಪದಲ್ಲಿ, ಬೆಳಿಗ್ಗೆ ಮತ್ತು ರಾತ್ರಿ ಎರಡು ಹೊತ್ತೂ ಸಿಗುತ್ತದೆ. ಅಕ್ಕಿ-ಕಡಲೆಬೇಳೆಯ ಪಾಯಸ, ಚಿತ್ರಾನ್ನ ತುಂಬಾ ರುಚಿಯಾಗಿರುತ್ತದೆ.

ದೇವಾಲಯದಿಂದ ಹೊರ ಬರುವಷ್ಟರಲ್ಲಿ ಮಳೆ ಶುರುವಾಗಿದ್ದರಿಂದ ನಾವು ಅಲ್ಲಿಯ ದುರ್ಗಾಂಬ ಲಾಡ್ಜ್ ನಲ್ಲಿ ಉಳಿದು, ಬೆಳಿಗ್ಗೆ ಎದ್ದು ಶೃಂಗೇರಿಗೆ ಹೊರಟೆವು. ಶಂಕರಾಚಾರ್ಯರು ಕಾಶ್ಮೀರದಲ್ಲಿದ್ದಾಗ ಮಂಡನ ಮಿಶ್ರ ಮತ್ತು ಅವರ ಪತ್ನಿಯಾದ ಉಭಯ ಭಾರತಿಯನ್ನು ವಿದ್ವಾಂಸ ಚರ್ಚೆಯಲ್ಲಿ ಸೋಲಿಸಿ, ಸರ್ವಜನ ಪೀಠ ಅಲಂಕರಿಸಿದ ನಂತರ ಶೃಂಗೇರಿಗೆ ಬಂದು, ಶಾರದಾ ಪೀಠವನ್ನು ಶ್ರೀ ಚಕ್ರದ ಮೇಲೆ ಸ್ಥಾಪಿಸಿದರು. ಮಂಡನ ಮಿಶ್ರರನ್ನು ಶಾರದಾ ಪೀಠದ ಪ್ರಥಮ ಗುರುವೆಂದು ಸಾರಿ ಸುರೇಶಾಚಾರ್ಯನೆಂಬ ಹೆಸರಿನಿಂದ ಪೀಠವನ್ನು ನಡೆಸಲು ಅಪ್ಪಣೆ ಕೊಟ್ಟರು ಮತ್ತು ಉಭಯ ಭಾರತಿಯು ಗ್ನಾನ ದೇವಿಯಾಗಿದ್ದು, ಶಾರದೆಯ ರೂಪದಲ್ಲಿ ನೆಲೆಸುವಂತೆ ನುಡಿದರು. ಇಲ್ಲಿ ಬಸಿರು ಕಪ್ಪೆ ಹೆಬ್ಬಾವಿನ ಆಶ್ರಯದಲ್ಲಿರುವುದು ಕಂಡು, ಇದೇ ಸರಿಯಾದ ಸ್ಥಳವೆಂದು, ಶಾರದಾಂಬೆಯ ಪ್ರತಿಷ್ಟಾಪನೆ ಮಾಡಿದರು.

ಶೃಂಗೇರಿ ತಲುಪಿ, ನೇರವಾಗಿ ನದಿಯ ಹತ್ತಿರ ಹೋದೆವು. ಮೀನಿಗಾಗಿ ಪುರಿ ಕೊಂಡು ಹೋಗಿದ್ದೆವು, ಆದರೆ ಅಲ್ಲಿಯ ಮೀನುಗಳಿಗೆ ಪುರಿ ತಿಂದು ಬೇಜಾರಾಗಿರಬೇಕು, ಅವು ತಿನ್ನಲಿಲ್ಲ. ನನ್ನ ಪಕ್ಕದಲ್ಲಿ ನಿಂತಿದ್ದ ಹುಡುಗ ಗ್ಲೂಕೋಸ್ ಬಿಸ್ಕತ್ತು ಚಿಕ್ಕ ಚಿಕ್ಕ ತುಂಡು ಮಾಡಿ ಹಾಕಿದರೆ ತಿಂದವು ! :-)

ವಿದ್ಯಾಶಂಕರರ ದೇವಾಲಯ ಕ್ರಿ.ಶ ೧೩೫೭ರಲ್ಲಿ ನಿರ್ಮಿಸಿದ್ದು. ಒಳಪ್ರಾಕಾರದಲ್ಲಿ ೧೨ ಅತ್ಯಂತ ಸುಂದರವಾದ ಕಂಭಗಳಿದ್ದು, ಅವನ್ನು ೧೨ ರಾಶಿಗಳಿಗೆ ಹೋಲಿಸಲಾಗಿದೆ. ಇಲ್ಲಿಯ ವಾಸ್ತುಶಿಲ್ಪ ಅತಿ ಮನೋಹರವಾಗಿದೆ.

ಅಲ್ಲಿಂದ, ತಾಯಿ ಶಾರದಾ ಮಾತೆಯ ದರ್ಶನ ಪಡೆಯಲು ಬಂದೆವು. ಪ್ರಾರಂಭದಲ್ಲಿದ್ದ ಮರದ ವಿಗ್ರವನ್ನು ೧೪ನೇ ಶತಮಾನದಲ್ಲಿ ಚಿನ್ನದಲ್ಲಿ ಮಾಡಿಸಿ ಸ್ಥಾಪಿಸಲಾಯಿತು. ಶಾರದಾಮಾತೆಗೆ ನಾಲ್ಕು ಭುಜಗಳಿವೆ. ಮೇಲು ಭುಜವು ಅಕ್ಷರ ಮಾಲೆಯನ್ನು ಹೊಂದಿ ಶುಕವನ್ನು ಹಿಡಿದಿದೆ. ಎಡ ಭುಜದ ಮೇಲ್ಭಾಗವು ಮುಕ್ತಾ ಫಲಕವನ್ನು ಹೊಂದಿದೆ. ಕೆಳ ಭುಜವು ಅಭಯ ಹಸ್ತವಾಗಿದೆ ಮತ್ತು ಪದ್ಮವನ್ನು ಹೊಂದಿದೆ. ಮತ್ತೊಂದು ಭುಜದಲ್ಲಿ ಪುಸ್ತಕವಿದ್ದು ಶಾರದೆಯನ್ನು ಪುಸ್ತಕ ಪಾಣಿಯೆಂದು ಹೆಸರಿಸಲಾಗಿದೆ. ದೇವಿ ಅತ್ಯಂತ ಸುಂದರವಾಗಿದ್ದಾಳೆ. ದೇವಿಯ ದರ್ಶನದಿಂದ ಉಲ್ಲಸಿತವಾಗಿ, ಅದೇ ನೆನಪುಗಳೊಂದಿಗೆ, ನಾವು ಶಿವಮೊಗ್ಗದ ಕಡೆ ಹೊರಟೆವು.

ತೀರ್ಥಹಳ್ಳಿಗೆ ಮೊದಲು ಓಡುತ್ತಿದ್ದ ಕಾರಿನ ಕಿಟಕಿಯಲ್ಲಿ, ಕವಿಶೈಲಕ್ಕೆ ದಾರಿ ಎಂಬ ಫಲಕ ಕಂಡು ಅತ್ಯಂತ ಸಂತೋಷದಿಂದ ಕಿರುಚಿದ್ದೆ. ಸ್ವಲ್ಪ ಮುಂದೆ ಹೋಗಿದ್ದ ಕಾರನ್ನು ವಾಪಸ್ಸು ತಿರುಗಿಸಿ, ನೋಡಿದಾಗ, ನಾವು ರಾಷ್ಟ್ರಕವಿ ಕುವೆಂಪು ಅವರ ಜನ್ಮ ಸ್ಥಾನವಾದ ಕುಪ್ಪಳ್ಳಿಗೆ ಹೊರಟಿದ್ದೆವು. ೨ ಕಿ.ಮೀ ಹೋದನಂತರ ನಮಗೆ ಅವರು ಇದ್ದ ಮನೆ ಸಿಕ್ಕಿತ್ತು. ಅದೀಗ ಅವರ ನೆನಪನ್ನು ತರುವ ಮತ್ತು ಅವರು ಉಪಯೋಗಿಸುತ್ತಿದ್ದರೆನ್ನಲಾದ ವಸ್ತುಗಳನ್ನು ಹೊಂದಿರುವ ವಸ್ತು ಸಂಗ್ರಹಾಲಯವಾಗಿದೆ. ೫ ರೂ ಕೊಟ್ಟು ಚೀಟಿ ಪಡೆದು ಒಳ ಹೊಕ್ಕಾಗ, ಮನಸ್ಸು ಒಂಥರಾ ಮೋಡಿಗೊಳಗಾದಂತಿತ್ತು. ಅಂಥಹಾ ಮಹಾನ್ ಚೇತನ ಇದ್ದ ಜಾಗದಲ್ಲಿ, ನಾನು ಕಾಲಿಟ್ಟೆನೆಂಬ ಒಂದು ಭಾವನೆಯೇ ನನ್ನನ್ನು ಮೂಕಳನ್ನಾಗಿಸಿತ್ತು. ಮೌನವಾಗಿ, ಅವರ ಫೋಟೋಗಳು, ವಸ್ತುಗಳು ಎಲ್ಲವನ್ನೂ ನೋಡುತ್ತಾ ಹೋದೆವು. ಹಿನ್ನೆಲೆಯಲ್ಲಿ, ಅವರದೇ ಕವಿತೆಗಳ ಸಿಡಿ ಹಾಡುತ್ತಿತ್ತು. ಅವರು ರಾಮಕೃಷ್ಣಾಶ್ರಮದಲ್ಲಿದ್ದಾಗ ಉಪಯೋಗಿಸುತ್ತಿದ್ದರೆನ್ನಲ್ಲಾದ ಕುರ್ಚಿ, ಮೇಜು, ಅವರ ಪುಸ್ತಕಗಳು, ಅವರ ಕೇಶವನ್ನೂ ಕೂಡ ಒಂದು ಚಿಕ್ಕ ಡಬ್ಬಿಯಲ್ಲಿ ಸಂಗ್ರಹಿಸಿಟ್ಟಿದ್ದಾರೆ. ನೋಡುತ್ತಾ ನೋಡುತ್ತಾ, ನಾನು ಬೇರೆಯದೇ ಯಾವುದೋ ಲೋಕಕ್ಕೆ ಹೊರಟು ಹೋಗಿದ್ದೆ. ಕೊನೆಯಲ್ಲಿ ನಾವು ಅಲ್ಲಿಯ ಕಛೇರಿಗೆ ಬಂದಾಗ ಅವರ ಆತ್ಮ ಕಥನ ’ನೆನಪಿನ ದೋಣಿಯಲ್ಲಿ’ ಮತ್ತು ಅವರ ಮಗಳು ತಾರಿಣಿ ಬರೆದ ’ಮಗಳು ಕಂಡ ಕುವೆಂಪು’ ಪುಸ್ತಕಗಳನ್ನೂ ಮತ್ತು ಹಿನ್ನೆಲೆಯಲ್ಲಿ ಹಾಕಿದ್ದ ಸಿಡಿ ’ಬಾನ್ದೇವಿ’ ಯನ್ನೂ ಕೊಂಡು ಹೊರ ಬಂದಾಗ, ಜನ್ಮ ಸಾರ್ಥಕವೆನ್ನಿಸಿತ್ತು. ಈ ಸಿಡಿಯಲ್ಲಿನ ಕವಿತೆಗಳು ’ನೀನೆಂತು ಪೊರೆವೆಯೋ’ - ಸುಪ್ರಿಯಾ ಆಚಾರ್ಯ ಹಾಡಿರುವುದು ಮತ್ತು ’ದಾರಿ ತೋರೆನಗೆ ಗುರುವೆ’ - ಫಯಾಜ್ ಖಾನ್ ಹಾಡಿರುವುದು, ಎರಡೂ ನನ್ನನ್ನು ಅತಿಯಾಗಿ ಸೆಳೆದವು. ಈ ಸಿಡಿಯಲ್ಲಿ ಇನ್ನೂ ಸಿ ಅಶ್ವಥ್ ಮತ್ತು ರತ್ನಮಾಲ ಪ್ರಕಾಶ್ ಹಾಡಿರುವ ಕವನಗಳೂ ಇವೆ, ನಾನಿನ್ನೂ ಕೇಳಿಲ್ಲ. ಅಲ್ಲಿಂದ ನಾವು ’ಕವಿಶೈಲಕ್ಕೆ ಹೋಗಿ, ಅವರ ಸಮಾಧಿಯನ್ನು ಕಂಡು, ಮನಸ್ಸಿನಲ್ಲೇ ನಮಿಸಿ ಹೊರಟೆವು.

ಅಲ್ಲಿಂದ ತೀರ್ಥಹಳ್ಳಿಯ ’ಮಯೂರ’ ದಲ್ಲಿ ಊಟ ಮುಗಿಸಿ ಶಿವಮೊಗ್ಗ ತಲುಪಿದೆವು. ಸೂರ್ಯ ಇಂಟರ್ ನಾಷನಲ್ ನಲ್ಲಿ ಉಳಿದು, ನಮ್ಮೂರು ಭದ್ರಾವತಿಗೂ ಹೋಗಿ, ಮದುವೆಯನ್ನೂ ಮುಗಿಸಿ, ಬೆಂಗಳೂರಿಗೆ ನಿನ್ನೆ (೩೦ನೇ ತಾರೀಖು) ರಾತ್ರಿ ಹಿಂದಿರುಗಿದೆವು.

ಅಂತೂ ಈ ಸಲದ ನಮ್ಮ ಪ್ರವಾಸ ಕುಪ್ಪಳ್ಳಿಯಿಂದಾಗಿ ಅತ್ಯಂತ ಪ್ರಮುಖ ಮತ್ತು ಎಂದಿಗೂ ಮರೆಯಲಾರದ ಪ್ರವಾಸವಾಗಿ ಮಾರ್ಪಟ್ಟಿತು.

ಚಿತ್ರ ಕೃಪೆ - ಟೆಂಪಲ್ ನೆಟ್.ಕಾಮ್
ಶೃಂಗೇರಿಯ ಚರಿತ್ರೆ - ಕರ್ನಾಟಕ ದೇವಾಲಯಗಳು ಪುಸ್ತಕದ ಸಹಾಯದಿಂದ

Rating
No votes yet

Comments