ಪ್ರಾಣಿಗಳ 'ಮಾನವನಿಷ್ಠೆ' ಅಗ್ಗಳಿಕೆಗೆ ಪೈಪೋಟಿ !
ಬೊಗಳೂರು, ಜ.3- ಮನುಷ್ಯ ಪ್ರಾಣಿಯ ನಿಷ್ಠಾವಂತ ಮಿತ್ರ ಎಂಬ ಸ್ಥಾನಕ್ಕೆ ನೈಜ ಪ್ರಾಣಿ ವಲಯದಲ್ಲಿ ಪೈಪೋಟಿ ಶುರುವಾಗಿದ್ದು, ನಾಯಿ ಬೆಕ್ಕುಗಳ ಕಾದಾಟಕ್ಕೆ ಚಾಲನೆ ದೊರೆತ ಲಕ್ಷಣಗಳು ಗೋಚರಿಸತೊಡಗಿವೆ.
ಮನೆಗೆ ಬೆಂಕಿ ಬಿದ್ದಿದ್ದನ್ನು ಯಜಮಾನನಿಗೆ ಬೆಕ್ಕೊಂದು ತಿಳಿಸಿ ಯಜಮಾನ ನಿಷ್ಠೆ ಮೆರೆದಿದೆ ಎಂದು ಇಲ್ಲಿ ವರದಿಯಾಗಿದ್ದು, ಇದರಿಂದ ಬೆದರಿರುವ ಶ್ವಾನ ಸಮೂಹವು ಬೊಗಳೆ ರಗಳೆ ಬ್ಯುರೋಗೆ ಮೊರೆ ಹೊಕ್ಕಿದೆ. ( bogaleragale.blogspot.com )
ತತ್ಪರಿಣಾಮವಾಗಿ ಕತ್ತೆ-ಮಂಗಗಳೊಂದಿಗೆ ಈ ಪ್ರಕರಣದ ಕುರಿತು ಪತ್ತೆದಾರಿಕೆಗೆ ಇಳಿದ ಬ್ಯುರೋ, ಈ ಆಘ್ರಾಣ ಸಾಮರ್ಥ್ಯದ ಹಿಂದಿನ ರಹಸ್ಯ ಭೇದಿಸಲು ಹೋಗಿ ಮಹತ್ವದ ಸಂಗತಿಯನ್ನು ಪತ್ತೆ ಹಚ್ಚಿದೆ.
ಇದರ ಪ್ರಕಾರ, ಬೆಕ್ಕು ತನ್ನ ಯಜಮಾನನನ್ನು ಎಚ್ಚರಿಸಿದ್ದರ ಹಿಂದಿನ ಕಾರಣ ಗೊತ್ತಾಗಿದೆ. ಅದೆಂದರೆ ಈ ಬೆಕ್ಕಿನ ಮೂಗಿಗೆ ತುಪ್ಪ ಸವರಲಾಗಿತ್ತಾದರೂ, ಅದರ ಮೂಗಿಗೆ ವಾಸನೆ ಬಡಿದಿದ್ದು ಸುಟ್ಟ ಹಾಲಿನದ್ದು! ಅದರ ಎಲ್ಲ ಗಮನ ಹಾಲಿನ ಮೇಲೇ ಇದ್ದುದರಿಂದ, ಸದಾಶಿವನಿಗೆ ಅದೇ ಧ್ಯಾನ ಎಂಬಂತೆ ಈ ಮಾರ್ಜಾಲ ಸನ್ಯಾಸಿಗೂ ಹಾಲಿನದ್ದೇ ಧ್ಯಾನ ಇತ್ತು.
ಪ್ರತಿಭಟನೆಗೆ ಬೆದರಿ ಬೊಗಳೆ ರಗಳೆ ಬ್ಯುರೋಗೆ ರಜೆ
ಹಾಲನ್ನು ಉಳಿಸುವ ನಿಟ್ಟಿನಲ್ಲಿ ಅದು ಯಜಮಾನನ ಮೈಗೆ ಪರಚಿ ಎಬ್ಬಿಸಿತ್ತು ಎಂಬುದನ್ನು ಪತ್ತೆ ಹಚ್ಚಿ ವರದಿ ಮಾಡಿರುವ ಬೊಗಳೆ ರಗಳೆ ಬ್ಯುರೋ ವಿರುದ್ಧ ಮಾರ್ಜಾಲ ಸಂದೋಹವು ಪ್ರತಿಭಟನೆ ನಡೆಸಲು ನಿರ್ಧರಿಸಿದೆ ಎಂದು ನಮಗೆ ಈಗಾಗಲೇ ಮಾಹಿತಿ ದೊರೆತಿದ್ದು, ಇದಕ್ಕಾಗಿ ಕೆಲವು ದಿನಗಳ ಕಾಲ ಬ್ಯುರೋಗೆ ರಜೆ ಸಾರಲು ನಿರ್ಧರಿಸಲಾಗಿದೆ.
ಈ ರಜೆಯ ಅವಧಿಯಲ್ಲಿ ಅಪ್ಪಿ ತಪ್ಪಿ ಪತ್ರಿಕೆ ಪ್ರಕಟವಾಗುವ ಸಾಧ್ಯತೆಗಳಿವುದರಿಂದ ಎಚ್ಚರ ವಹಿಸಲು ಸೂಚಿಸಲಾಗಿದೆ.