ಪ್ರಾಣೇಶಾಚಾರ್ಯರು ಮತ್ತು ಚಿಮಣಾಬಾಯಿ!

ಪ್ರಾಣೇಶಾಚಾರ್ಯರು ಮತ್ತು ಚಿಮಣಾಬಾಯಿ!

ಸಾಧಾರಣವಾಗಿ ಕ್ಷತ್ರಿಯರು ನಡೆಸುವ ಆಶ್ವಮೇಧವನ್ನು ಒಬ್ಬ ಬ್ರಾಹ್ಮಣ ಮಠಾಧೀಶರ ಗುಂಗನ್ನಾಗಿ ಚಿತ್ರಿಸಿದ ಅಶೋಕ ಹೆಗಡೆಯವರು ಕೆಳಜಾತಿಯವರು ಮುಖ್ಯವಾಹಿನಿಗೆ ಬರುವಲ್ಲಿ ಎದುರಿಸಿದ ಕಷ್ಟ ಪರಂಪರೆಗಳನ್ನು ಅದರ ಎಲ್ಲ ವೈರುಧ್ಯಗಳೊಂದಿಗೇ ದಾಖಲಿಸಿದ್ದಾರೆ. ಇಲ್ಲಿ ರಾಮಾನಾಯ್ಕನಿಗೆ ನೆರವಾಗಿ ನಿಲ್ಲುವ ಎರಡು ಶಕ್ತಿಗಳಲ್ಲಿ ಒಂದು ರಾಜೀವ ಗಾಯತೊಂಡೆಯಾದರೆ ಇನ್ನೊಂದು ಕ್ರೈಸ್ತ ಮಿಶನರಿ ಎಂಬುದು ಕೂಡ ಮುಖ್ಯವೇ. ಕಾದಂಬರಿಯ ಹಲವು ಆಯಾಮಗಳಲ್ಲಿ ಇದು ಒಂದು ಮಾತ್ರ.

ಹೆಚ್ಚಿನೆಲ್ಲ ವಿಮರ್ಶಕರು ಅಶ್ವಮೇಧ ಕಾದಂಬರಿಯನ್ನು ಅನಂತಮೂರ್ತಿಯವರ ಭಾರತೀಪುರ ಮತ್ತು ಶಾಂತಿನಾಥ ದೇಸಾಯರ ಬೀಜ ದೊಂದಿಗೆ ಸಮೀಕರಿಸುತ್ತಾರಾದರೂ ಅನೇಕ ಕಾರಣಗಳಿಗಾಗಿ ನನಗೆ ಈ ಕಾದಂಬರಿಯನ್ನು ಓದುವಾಗೆಲ್ಲ ಮತ್ತೆ ಮತ್ತೆ ನೆನಪಾದ ಕಾದಂಬರಿ ರಾವ್ ಬಹದ್ದೂರರ ಗ್ರಾಮಾಯಣ.

ಅಶ್ವಮೇಧದ ವಲ್ಲಿಗದ್ದೆ ಮತ್ತು ಗ್ರಾಮಾಯಣದ ಪಾದಳ್ಳಿಯ ನಡುವೆ ಕೆಲವು ಸಾಮ್ಯಗಳಿರುವಂತೆಯೇ ಎರಡೂ ಊರಿನ ದುರಂತ, ಶೋಷಣೆ, ರಾಜಕೀಯ, ಹಣಕಾಸು ಎಲ್ಲವೂ ಸುತ್ತುವುದು ಮಠದ ಸುತ್ತಲೇ ಅನಿಸುತ್ತದೆ. ಗ್ರಾಮಾಯಣದ ಪಡದಯ್ಯನಿಗೂ ಅಶ್ವಮೇಧದ ಮಠದ ಇಬ್ಬರು ಸ್ವಾಮಿಗಳಿಗೂ ಸ್ವಭಾವದಲ್ಲಿ ಬಹಳ ಸಾಮ್ಯಗಳಿರುವಂತೆ ಕಾಣುತ್ತದೆ. ಗ್ರಾಮಾಯಣದ ಕುರಿತು ನಮ್ಮ ಪ್ರಮುಖ ವಿಮರ್ಶಕರಲ್ಲಿ ಒಬ್ಬರಾದ ಗಿರಡ್ಡಿ ಗೋವಿಂದರಾಜು ಅವರ ಮಾತುಗಳು ಸದ್ಯದ ನಮ್ಮ ಚರ್ಚೆಗೆ ಬಹಳ ಉಪಯುಕ್ತವೆನಿಸುವಂತಿವೆ.

"ಈ ಕೃತಿಯ ಮಹತ್ವವೂ ಕೂಡ ಅದು ಎಷ್ಟರ ಮಟ್ಟಿಗೆ ಬದುಕಿನ ಮಹತ್ವದ ಭಾವನಾತ್ಮಕ ಇಲ್ಲವೆ ನೈತಿಕ ಬಿಕ್ಕಟ್ಟಿಗೆ ಸಂಬಂಧಿಸಿದ್ದೆಂಬುದರ ಮೇಲೆ ಅವಲಂಬಿಸಿದೆ. ಹೀಗೆ ಉತ್ತಮ ಕಾದಂಬರಿಕಾರ ಪಾತ್ರ, ಸನ್ನಿವೇಶ, ಪರಿಸರಗಳ ಮೂಲಕವಾಗಿಯೇ ತನ್ನ ವೈಚಾರಿಕತೆಯ ಶಕ್ತಿ ನಮಗೆ ಅರಿವಾಗುವಂತೆ ಮಾಡುತ್ತಾನೆ. "ಗ್ರಾಮಾಯಣ"ದಲ್ಲಿ ಬರುವ ಚಿಮಣಾಳ ಮಾನಭಂಗದ ಪ್ರಸಂಗವನ್ನು ಇಲ್ಲಿ ನೆನೆಯಬಹುದು. ಈ ಬಗ್ಗೆ ನಿರ್ಣಯ ತೆಗೆದುಕೊಳ್ಳಲು ಸೇರುವ ಊರಿನ ದೈವದ ಸಭೆ, ಇದಕ್ಕೆ ಕಾರಣ ಮಠದ ಪಡದಯ್ಯನವರು ಎಂದು ತಿಳಿದಾಗ ಏನು ಮಾಡುವದಕ್ಕೂ ಸಾಧ್ಯವಾಗುವದಿಲ್ಲ. ಯಾಕೆಂದರೆ ಪಡದಯ್ಯ ಕೇವಲ ಒಬ್ಬ ವ್ಯಕ್ತಿಯಲ್ಲ. ಊರಿನ ಮಹತ್ವದ ಜನಾಂಗವೊಂದರ ಆಧ್ಯಾತ್ಮಿಕ ಮೌಲ್ಯಗಳನ್ನು ಕಾಪಾಡುವ ಸಂಸ್ಥೆಯ ಪ್ರತಿನಿಧಿ. ಅವನೇ ಇಂಥ ಅರ್ಥಹೀನ ಅಪರಾಧಕ್ಕೆ ಕಾರಣವಾದದ್ದು ಅಕ್ಷಮ್ಯ. ಹಾಗಿದ್ದೂ ದೈವ ಅವನ ವಿರುದ್ಧ ನಿರ್ಣಯ ಕೈಗೊಳ್ಳಲು ಅಸಹಾಯಕವಾಗಿದೆ. ಅವನಿಗೆ ಶಾಸ್ತಿ ಮಾಡಿದಲ್ಲಿ ಮಠದ ಪಾವಿತ್ರ್ಯಕ್ಕೆ ಅವಮಾನ ಮಾಡಿದಂತೆ ಎಂದು ದೈವದ ನಂಬಿಕೆ. ಅರ್ಥವನ್ನು ಕಳೆದುಕೊಂಡಿದ್ದರೂ ಇನ್ನೂ ಬದುಕಿ ಉಳಿದಿರುವ ಮಠದಂಥ ಸಂಕೇತಗಳು ಗ್ರಾಮದ ವ್ಯಕ್ತಿಗಳ ಬದುಕಿಗೆ ತೊಡಕಾಗುವುದನ್ನು ಈ ಸನ್ನಿವೇಶ ನಾಟ್ಯೀಕರಿಸಿ ತೋರಿಸುತ್ತದೆ. ಇಂಥ ಸನ್ನಿವೇಶಗಳು ಬೆಳೆಯುತ್ತಲೇ ಹೋಗುವುದು ಈ ಸಮಾಜದ ಅವನತಿಯನ್ನು ಅನಿವಾರ್ಯಗೊಳಿಸುತ್ತದೆ." (ಸಾಹಿತ್ಯದಲ್ಲಿ ವೈಚಾರಿಕತೆ - ಮನೋಹರ ಗ್ರಂಥಮಾಲಾ ಪ್ರಕಟನೆ, ಪುಟ ೫೧-೫೨)

ಅಂದಹಾಗೆ ಗ್ರಾಮಾಯಣ ಪ್ರಕಟವಾಗಿದ್ದು ೧೯೫೭ರಲ್ಲಿ. ಸಂಸ್ಕಾರ ಅಥವಾ ವಂಶವೃಕ್ಷ ಬರುವುದಕ್ಕೂ ಸುಮಾರು ಎಂಟು ವರ್ಷಗಳಷ್ಟು ಹಿಂದೆ!

ಒಂದು ರೀತಿಯಲ್ಲಿ ಗ್ರಾಮಾಯಣ ಸಮಸ್ಯೆ ಮತ್ತು ಪರಿಹಾರದ ಜಿಜ್ಞಾಸೆಗಳನ್ನೆಲ್ಲ ಮೀರಿ ಹೊರಡುತ್ತದೆ. ಕಾದಂಬರಿಯ ಆರಂಭದ ಘಟ್ಟದಲ್ಲೇ ಅತ್ಯಾಚಾರ, ಅದೂ ಮಠದ ಸ್ವಾಮಿಗಳಿಂದ ನಡೆದಿದೆ. ಇನ್ನು ಧರ್ಮಗ್ರಂಥಗಳಲ್ಲಿ ಪರಿಹಾರ ಹುಡುಕುವುದಾದರೂ ಯಾವುದಕ್ಕೆ? ಇಲ್ಲೊಂದು ತಮಾಷೆ ಕೂಡ ಇದೆ. ಚಿಮಣಾಳನ್ನು ಬಯಸಿದವನು ಬಾಪೂ ಸಾಹೇಬ. ಅವನಿಗೇ ಚಳ್ಳೆಹಣ್ಣು ತಿನ್ನಿಸಿ ಚಿಮಣಾಳನ್ನು ಅನುಭವಿಸುವುದು ಮಾತ್ರ ಮಠದ ಸ್ವಾಮಿ. ಮಠದಲ್ಲೇ ಮದ ಮದನಿಕೆ ಮತ್ತು ಜೂಜುಗಳೆಲ್ಲ ಸಹಜ ವಿದ್ಯಮಾನಗಳೆಂಬಂತಿರುವ ಒಂದು ಜಗತ್ತಿಗೆ ಗ್ರಾಮಾಯಣ ನಮ್ಮನ್ನು ಕರೆದೊಯ್ಯುತ್ತದೆ. ಜಿಜ್ಞಾಸೆಗಳೆಲ್ಲ ಅರ್ಥಹೀನವಾಗುವ, ಹಾಸ್ಯಾಸ್ಪದವಾಗುವ ಕಟು ವಾಸ್ತವ ಕಣ್ಣೆದುರಿಗಿರುವಾಗ ಬದುಕುವ ಶ್ರೇಷ್ಠವಾದ ಒಂದು ವಿಧಾನದ ಹುಡುಕಾಟದಲ್ಲಿರುವ ಗ್ರಂಥಗಳೇನು ಕೊಡಬಲ್ಲವು ಬದುಕಿಗೆ?

ಮನುಷ್ಯ ಸಂಬಂಧಗಳಲ್ಲಿ ಹೆಣೆದುಕೊಳ್ಳುವ ಸಂದಿಗ್ಧಗಳು, ತಾತ್ವಿಕ ಸಂಕಟಗಳು ಧರ್ಮಸಂಕಟಗಳಾಗಿ ಕಂಡಾಗ ಪರಿಹಾರಕ್ಕಾಗಿ ಅನುಭವ, ಇತಿಹಾಸ, ಧರ್ಮಶಾಸ್ತ್ರಗಳನ್ನು ತಡಕಾಡುವುದು ಒಂದು ಸ್ತರವಾದರೆ ಪರಿಸ್ಥಿತಿ ಕೈಮೀರಿ ಹೋದ ಬಳಿಕ ಯಾವುದೂ ಸಹಾಯಕ್ಕೆ ಬರುವುದಿಲ್ಲ. ಅಲ್ಲಿ ಬದುಕಿನ ಲಯವೇ ಪರಿಹಾರವನ್ನೋ ಸಮಾಧಾನವನ್ನೋ ಕಂಡುಕೊಳ್ಳಬೇಕಾಗುತ್ತದೆ. ಎಲ್ಲಿಯ ಪಡದಯ್ಯ, ಎಲ್ಲಿಯ ಪ್ರಾಣೇಶಾಚಾರ್ಯರು! (ವಾರಪತ್ರಿಕೆ `ವಿಕ್ರಾಂತ ಕರ್ನಾಟಕ'ದ ಮೇ ೨೫ರ ಸಂಚಿಕೆಯಲ್ಲಿ ಪ್ರಕಟಿತ)

Rating
No votes yet