ಪ್ರಿನ್ಸ್ ರಾಮ ವರ್ಮ

ಪ್ರಿನ್ಸ್ ರಾಮ ವರ್ಮ


ಪ್ರಿನ್ಸ್ ರಾಮ ವರ್ಮ ಸಂಗೀತಾಸಕ್ತರಿಗೆ ಪರಿಚಿತ ಹೆಸರು. ರಾಮವರ್ಮ ಹಾಡುಗಾರಿಕೆ ಮತ್ತು ವೀಣಾ ವಾದನದಲ್ಲಿ ವಿದ್ವಾಂಸರು. ವಿಕಿಪೀಡಿಯ ದಲ್ಲಿ ಹೇಳುವಂತೆ ಅವರು ’ರಾಜ ಮನೆತನದಲ್ಲೊಬ್ಬ ಸಂಗೀತಗಾರ ಮತ್ತು ಸಂಗೀತಲೋಕಕ್ಕೊಬ್ಬ ರಾಜ!’. ಬಹುಭಾಷಾ ವಿದ್ವಾಂಸ, ವಾಗ್ಗೇಯಕಾರ ಮಹಾರಾಜ ಸ್ವಾತಿ ತಿರುನಾಳ್ ಮತ್ತು ರಾಜಾ ರವಿವರ್ಮ ಅವರ ಪೂರ್ವಿಕರು. ಬಹುಶ: ರಕ್ತಗುಣದಿಂದಲೋ ಏನೋ ರಾಮ ವರ್ಮ ಸಹ ಬಹುಭಾಷಾ ಚತುರ. ಅವರು ಮಲಯಾಳಂ, ಇಂಗ್ಲಿಷ್, ಮತ್ತು ಫ್ರೆಂಚ್ ನಲ್ಲಿ ಮಾತನಾಡುವುದನ್ನು ಅಂತರ್ಜಾಲದಲ್ಲಿ ಕಾಣಬಹುದು. ಇಂಗ್ಲಿಷ್ ನಲ್ಲಿ ಅವರ ಮಾತು ಮಲ್ಲಿಗೆ ಮಾಲೆ ಪೋಣಿಸಿದಂತೆ.. ಭಾಷೆ ಅವರಿಗೆ ಸಿದ್ಧಿ ಆಗಿದೆ ಅನ್ನಿಸುತ್ತದೆ ಅವರ ಮಾತನ್ನು ಕೇಳಿದರೆ (ಯುಟ್ಯೂಬ್ ನಲ್ಲಿ ಅವರ ವಿಡಿಯೋಗಳು ತುಂಬಾ ಚೆನ್ನಾಗಿ ಡಾಕ್ಯುಮೆಂಟ್ ಆಗಿವೆ).
 
ಕೆಲದಿನಗಳ ಹಿಂದೆ ಶೇಷಾದ್ರಿಪುರಮ್ ಕಾಲೇಜಿನಲ್ಲಿ ಅವರ ಕಛೇರಿಯನ್ನು ಕೇಳುವ ಅವಕಾಶ ಸಿಕ್ಕಿತ್ತು. ರಾಮವರ್ಮರಿಗೆ ದೇವರು ಬಹಳ ಒಳ್ಳೆಯ ಶಾರೀರ ಕೊಟ್ಟಿದ್ದಾನೆ. ಕೆಳಸ್ಥಾಯಿಗೆ ಬರುತ್ತಲೂ ಅವರ ಸ್ವರ ಒಳ್ಳೆಯ ಝೇಂಕಾರದಂತೆ ಕೇಳಿಸುತ್ತದೆ. ರಾಮವರ್ಮ ಲಯಪ್ರಧಾನ ಮತ್ತು ಭಾವಪ್ರಧಾನವಾದ ಎರಡೂ ಪ್ರಕಾರಗಳಲ್ಲಿ ಸಮವಾಗಿ ಹಾಡಬಲ್ಲರು. ಅವರು ಎರಡನೆಯದಾಗಿ ಹಾಡಿದ ದೇವ ದೇವ ಕಲಯಾಮಿ (ಮಾಯಾಮಾಳವಗೌಳ) ದಲ್ಲಿ ಎಲ್ಲಿ ಎಡವಿಬಿಡುತ್ತಾರೋ ಎಂಬಷ್ಟು ಕ್ಲಿಷ್ಟವಾದ ದಾಟು ಸಂಚಾರಗಳನ್ನು ಸ್ವರಪ್ರಸ್ತಾರದಲ್ಲಿ ಮಾಡಿದರು. ಅವರ ಹಾಡುಗಾರಿಕೆಯಲ್ಲಿ ಬಾಲಮುರಳಿಕೃಷ್ಣ ಅವರ ಪ್ರಭಾವ ಬಹಳ ಇದೆ (ಸಹಜವಾಗಿ - ಅವರ ಶಿಷ್ಯರೆಂದಮೇಲೆ). ನನಗೆ ಯಾಕೋ ಬಾಲಮುರಳಿಯವರ ಬಗ್ಗೆ ಒಂದು ಪೂರ್ವಾಗ್ರಹ ಇತ್ತು (ನನ್ನ ಉದ್ಧಟತನಕ್ಕೆ ಕ್ಷಮೆ ಇರಲಿ). ರಾಮವರ್ಮರ ಮಾತು ಮತ್ತು ಸಂಗೀತ ಕೇಳಿದ ಮೇಲೆ ನಾನು ಇದರಿಂದ ಹೊರಗೆ ಬಂದಿದ್ದೇನೆ!. ಕಛೇರಿಯಲ್ಲಿ ಅವರು ಬಾಲಮುರಳಿ (ಬಹುಷ:) ೧೪ ನೆಯ ವಯಸ್ಸಿನಲ್ಲಿ ರಚಿಸಿದ ಒಂದು ಕೃತಿಯನ್ನೂ ಹಾಡಿದರು. ಕಛೇರಿಯ ಎಲ್ಲ ಕೃತಿಗಳ ಪಟ್ಟಿಯನ್ನು ಇಲ್ಲಿ ಕೊಡಲಾಗಿದೆ.
ರಾಮವರ್ಮರ ಬಗ್ಗೆ ಹೇಳಲೇ ಬೇಕಾದ ಇನ್ನೊಂದು ವಿಷಯವೆಂದರೆ ಅವರ ಸೌಜನ್ಯ. ಮೊದಲಿಗೆ ಎಲ್ಲ ಪಕ್ಕವಾದ್ಯದವರಲ್ಲಿ ಒಪ್ಪಿಗೆ ತೆಗೆದುಕೊಂಡೇ ಕಛೇರಿ ಆರಂಬಿಸಿದರು. ಮಧ್ಯೆ ಮೈಕ್ ಸಮಸ್ಯೆ ಕೊಡುತ್ತಿದ್ದಾಗ ಸಭಿಕರೆಲ್ಲ ಅವರೆಲ್ಲಿ ಬೇಸರ ಪಡುತ್ತಿದ್ದಾರೋ ಎಂದು ಕೊಳ್ಳುತ್ತಿದ್ದರೆ ಅವರು ’ಮೈಕ್ ಅಷ್ಟೊಂದು ಸರಿ ಇಲ್ಲ. ನಿಮಗೆಲ್ಲ ತೊಂದರೆ ಆಗುತ್ತಿದೆಯೇನೋ’ ಎಂದು ತಾಳ್ಮೆಯಿಂದ ಹೇಳಿದ್ದು ಕೇಳಿ ನನಗೆ ಆಶ್ಚರ್ಯವಾಯಿತು. ಅವರ ಈ ಸ್ವಭಾವ ಯುಟ್ಯೂಬ್ ನಲ್ಲಿ ಅವರ ಮಾತು ಕೇಳಿದರೂ ನಮಗೆ ತಿಳಿಯುತ್ತದೆ.
ವಯಲಿನ್ ನಲ್ಲಿ ಡಾ|ಹೇಮಲತಾ ತುಂಬಾ ಚೆನ್ನಾಗಿ ನುಡಿಸಿದರು. ಬೆಂಗಳೂರು ಪ್ರವೀಣ್ ಮೃದಂಗದಲ್ಲಿ ಹೆಚ್ಚುಕಮ್ಮಿ ಕೃತಿಯೇ ನುಡಿಸಿಬಿಟ್ಟರು ಅನ್ನಬಹುದು. ನಾನು ಈ ಸೀಸನ್ ನಲ್ಲಿ ಕೇಳಿದ best ಮೃದಂಗ ಪ್ರವೀಣ್ ದು ಎಂಬುದರಲ್ಲಿ ಸಂಶಯವೇ ಇಲ್ಲ. ಅವರಿಗೆ ಒಂದು ತುಂಟತನ ಇದೆ - ಇದು ವೇದಿಕೆಯಲ್ಲಿ ಒಂದು ಒಳ್ಳೆಯ ಲವಲವಿಕೆ ಸೃಷ್ಟಿಸಿಬಿಡುತ್ತದೆ. ಪ್ರವೀಣ್ ಮೃದಂಗ ಇದ್ದರೆ ದಯವಿಟ್ಟು ಕಛೇರಿ ಮಿಸ್ ಮಾಡಿಕೊಳ್ಳಬೇಡಿ. ಘಟದವರ ಹೆಸರು ಓಂಕಾರ್.
 
ರಾಮವರ್ಮರ ಬಗ್ಗೆ ಇನ್ನೂ ತುಂಬಾ ಬರೆಯಬಹುದು. ಆದರೆ ಅದನ್ನೆಲ್ಲ ನೀವು internet ನಲ್ಲಿ ಸ್ವಲ್ಪ ಜಾಲಾಡಿದರೆ ಸ್ವತ: ಓದ/ನೋಡ ಬಹುದು. ರಾಮವರ್ಮ ಬಾಲಮುರಳಿ ಕೃಷ್ಣ ಬಗ್ಗೆ ಬರೆದ ತುಂಬಾ ಸುಂದರವಾದ ಒಂದು ಲೇಖನ ಇಲ್ಲಿದೆ.
ವಂದನೆಗಳು,

Rating
No votes yet

Comments