' ಪ್ರೀತಿ ಮತ್ತು ಹಗೆತನ '

' ಪ್ರೀತಿ ಮತ್ತು ಹಗೆತನ '

ಪ್ರೀತಿ ಮತ್ತು ಹಗೆತನಗಳು ಪರಸ್ಪರ

ವಿರೋಧದ ಗುಣ ಸ್ವಭಾವಗಳು

ನಮಗೆ ಇಷ್ಟವಾಗುವ ವ್ಯಕ್ತಿ ವಿಷಯಗಳು

ಪ್ರೀತಿ ಪಾತ್ರವಾದವುಗಳು ಆದರೆ

ಇಷ್ಟವಾಗದವುಗಳು ನಮ್ಮನ್ನು

ದ್ವೇಷಸುವಂತೆ ಮಾಡುತ್ತವೆ ಯಾಕೆ ಹೀಗೆ ?

ಇದು ಜಗತ್ತು ! ಇದು

ಇಂದಿನವರೆಗೂ ಸಾಗಿ ಬಂದ ಬಗೆ !

 

ಆದರೆ ನಮ್ಮ ವಿಶಿಷ್ಟ ಮನೋ ವ್ಯಾಪಾರ 

ನೋಡಿ ನಮ್ಮ ಮನದಾಳದಲ್ಲಿ ನೆಲೆ

ನಿಂತವರು ನಮ್ಮ ಆತ್ಮೀಯರಲ್ಲ !

ಆದರೆ ನಮ್ಮ ದ್ವೇಷಕ್ಕೆ ಪಾತ್ರರಾದವರು !

ಇದು ಯಾಕೆ ಹೀಗೆ ?

ಯಾಕೆಂದರೆ ನಾವು ಸದಾ ನಮಗಾಗದವರ

ನಮ್ಮ ದ್ವೇಷಕ್ಕೆ ಕಾರಣರಾದವರ ಬಗೆಗೆಯೆ

ಯೋಚಿಸುತ್ತಿರುತ್ತೇವೆ ಆತ ನಮ್ಮ ವಿರುದ್ಧ

ಏನು ಮಾಡುತ್ತಿರಬಹುದು ಏನು ಕುತಂತ್ರ

ನಡೆಸುತ್ತಿರಬಹುದು ಏನೆಲ್ಲ ಅಪಪ್ರಚಾರ

ತೇಜೋವಧೆ ಕುರಿತು ಆಲೋಚಿಸುತ್ತಿರಬಹುದು

ಎಂದೇ ಯೋಚಿಸುತ್ತಿರುತ್ತೇವೆ

 

ಈ ಶತೃತ್ವ ಕೂಡ

ಒಂದು ರೀತಿ ಪ್ರೀತಿಯ ಹಾಗೆಯೆ

ನಮ್ಮನ್ನು ಸದಾ

ಎಚ್ಚರದ ಸ್ಥಿತಿಯಲ್ಲಿಡುತ್ತದೆ ಯಾವುದು

ನಮ್ಮನ್ನು ಎಚ್ಚರದಲ್ಲಿಡುತ್ತದೋ

ಅದೋ ಒಂದು

ನಮ್ಮ ಪ್ರೀತಿ ಪಾತ್ರವಾದುದು

ಇಲ್ಲ ದ್ವೇಷಿಸುವಂತಹುದು

 

ಮೀರಾ ಏಕೆ

ಮಾಧವನಲ್ಲಿ ಅನುರಕ್ತಳಾಗಿದ್ದಳು?

ಈ ಅನುರಕ್ತತೆ

ಒಂದು ರೀತಿಯ ಧ್ಯಾನ ಸ್ಥಿತಿ

ಅವನ ಭಕ್ತಿಯ ತಾದ್ಯಾತ್ಮತೆಯಲ್ಲಿಯೆ

ಈ ಇಹಲೋಕವನ್ನು ಮರೆಯಲು

ಪ್ರಯತ್ನಿಸುತ್ತಿದ್ದಳು

ಯಾಕೆ ? ತಾನು ಶೂನ್ಯಳಾಗಲು

ಜೊತೆಗೆ ಆತನ ಭಕ್ತಿಯಲ್ಲಿ

ಕರಗಿ ಇಲ್ಲವಾಗಲು

 

ಮೂಲತಃ ಮನುಷ್ಯ

ಬಹುತೇಕ ಶಕ್ತಿ ಕೇಂದ್ರಗಳಾದ

ರಾಜಾಡಳಿತ ಧರ್ಮಗಳಿಗೆ

ಅಡಿಯಾಳಾಗಿ ಬದುಕುವವನೆ

ಕೃಷ್ಣನಲಿ ಒಂದಾಗಲು

ತಹ ತಹಿಸುವ ರಾಧೆ

ಗಿರಿಧರ ಗೋಪಾಲನಲಿ ಒಂದಾಗುವ

ಬಯಕೆಯ ಮೀರಾ

ಚೆನ್ನ ಮಲ್ಲಿಕಾರ್ಜುನನ ಆರಾಧ್ಯೆ

ಅಕ್ಕ ಮಹಾದೇವಿ ಇವೆಲ್ಲ

ಭಾವ ಪರವಶತೆಯ ಪರಕಾಷ್ಟೆಗಳು 

ಈ ಹಂತದಲ್ಲಿ

ಅವರು ಅವರಾಗಿರುವುದಿಲ್ಲ

ಇದು ಒಂದು ರೀತಿಯ

ದೇವನಲ್ಲಿಯ ಶರಣಾಗತಿ

ಶರಣಾಗತಿಯೆಂದರೆ ಪ್ರೀತಿ ಪ್ರೇಮದ

ಭಕ್ತಿ ಪರವಶತೆಯ ಮೂಲತತ್ವ

ಆದರೆ ಅದು

ಪ್ರೀತಿಯ ಸೋಲಲ್ಲ ಗೆಲುವು !

ಐಹಿಕ ಜಗದಲಿ ಮನುಷ್ಯನ

ಮೂಲಭೂತ ಆಶಯಗಳನ್ನು

ಅಡಗಿಸಿ ನಾನು ನನ್ನದು

ನನಗೋಸ್ಕರ ಎಂಬುದನು

ತ್ಯಜಿಸಿ ನನ್ನನ್ನು ಸೃಷ್ಟಿಸಿದ್ದು ನೀನು

ನಿನ್ನೊಳಗೆ ನಾನಿದ್ದೇನೆ

ನೀನಿಲ್ಲದೆ ನನ್ನ ಅಸ್ತಿತ್ವವಿಲ್ಲ

ನಾನು ಬರುವ ಮೊದಲು ನೀನಿದ್ದೆ

ನನ್ನ ನಂತರವೂ ನೀನಿರುತ್ತಿ

ಇದು ಭಕ್ತಿಯ ತಾದ್ಯಾತ್ಮತೆ

 

ಈ ಪ್ರೀತಿ ಪ್ರೇಮಗಳ ತತ್ಪರತೆ ಎಂತಹುದು?

ಆ ತಲ್ಲೀನತೆಯಲ್ಲಿ ಯಾವುದರ

ನಿರೀಕ್ಷೆಯಿರುತ್ತೆ ? ಎಲ್ಲವೂ ಬೇಕೆನ್ನುವ

ಇಲ್ಲ ನಾವು ಏನೂ ಆಗಿರಬಾರದು ಎನ್ನುವ

ಆಶಯ ಹೊಂದುವುದು

ಒಂದು ರೀತಿಯ ಮನೋವ್ಯಾಪಾರ

ಹಾಗಾದರೆ ನಾವೆಲ್ಲ ಪ್ರೀತಿಸುವುದು

ಸಾವನ್ನೆ ಇರಬಹುದೆ 

ಅದರ ನಂತರದ ಗುರಿ ಏನು?

ಮೋಕ್ಷದ ಆಶಯವಿರಬಹುದೆ?

ಮೋಕ್ಷವೆಂದರೆ ಜೀವನ್ಮುಕ್ತವಾಗುವುದೆ ?

ನಾನು ಆತ್ಮ ನೀನು ಪರಮಾತ್ಮ

‘ಪುನರಪಿ ಜನನಂ ಪುನರಪಿ ಮರಣಂ’

ಎನ್ನುವ ಹುಟ್ಟು ಸಾವಿನ ಚಕ್ರ ನಿಲ್ಲಲಿ

ನಿನ್ನೊಳಗೆ ನನ್ನನು ಒಂದಾಗಿಸಿಕೊ

ಎನ್ನುವ ಆಶಯ ಈ ಭಕ್ತಿ

ಧ್ಯಾನಗಳ ಪರಿಕಲ್ಪನೆಯಿರಬಹುದು

 

ಆದರೆ ಈಗಿನ ತತ್ವಜ್ಞಾನ

ಆಧುನಿಕ ವೈಜ್ಞಾನಿಕ ತತ್ವಗಳ

ಆಧಾರದ ಮೇಲೆ ನಿಂತಿರುವಂತಹುದು

ನಾನು ಇದ್ದೇನೆ ಎಂಬ ಕಾರಣದಿಂದ

ಆಲೋಚಿಸುತ್ತಿದ್ದೇನೆ

ನಮ್ಮ ತಾತ್ವಿಕತೆ ಕೂಡ ಹೆಚ್ಚು ಕಡಿಮೆ

ಇದೇ ಆಶಯವನ್ನು ಹೊಂದಿದೆಯೆ?

ಗೊತ್ತಿಲ್ಲ ! ಇದ್ದರೂ ಇರಬಹುದು

ನಾನೆಂಬುದು ಇಲ್ಲ ಹೀಗಾಗಿ ಯೋಚನೆಯಿಲ್ಲ

ಇಲ್ಲ ಎಂಬುದು ಒಂದು ರೀತಿಯ

‘ಶೂನ್ಯ ಸಿದ್ಧಾಂತ’

 

ನಾನಿದ್ದರೂ ನಾನಾಗಿರಬಾರದು

ಎಂಬುದು ‘ಅಹಂ ಬ್ರಹ್ಮಾಸ್ಮಿ’ ಎಂಬ ತತ್ವ

ತತ್ವಮಸಿ ಅಯಾಮಾತ್ಮಗಳು ಭಿನ್ನ ತತ್ವಗಳು

ನಾನು ಬೇರೆ ನೀನು ಬೇರೆ

ನಾನು ನಿನ್ನ ಒಂದಂಶ

ನಾನು ನೀನು ಒಂದಾದರೂ ನಾನು

ನೀನಾಗಬಲ್ಲೆನೆಂಬ ಆತ್ಮ ವಿಶ್ವಾಸ ಎಂಬ

ಭಿನ್ನ ವಾದ ವಿವಾದ ನಂಬಿಕೆಗಳು

 

ನೀನು ನೀನಾಗಿರು ನಾನು ನಾನಾಗಿರುತ್ತೇನೆ

ನಾನಿರುವಂತೆ ನೀನೆನ್ನ ಸ್ವೀಕರಿಸು

ನೀನಿರುವಂತೆ ನಾನಿನ್ನ ಒಪ್ಪುತ್ತೇನೆ ಇದು

ಹೊಸ ತತ್ವಜ್ಞಾನವಾದರೂ

ಈ ಮಾತು ಪ್ರೀತಿ ಮತ್ತು ಪ್ರೇಮಗಳಿಗೂ

ಅನ್ವಯಿಸುವಂತಹದು

ಇಲ್ಲಿ ಮಿಂಚಿನಂತಹ ಹೊಳಪು ಇದ್ದರೂ

ತಿಮಿರ ರೂಪದ ಗೊಂದಲವೂ ಇದೆ

ಈ ಸ್ಥಿತಿಯಲ್ಲಿ ಪ್ರೇಮ

ಏನೂ ತೋಚದೆ ನಿಂತು ಬಿಡುತ್ತದೆ

ಹೀಗಾಗಿ

ಪ್ರೀತಿ ಪ್ರೇಮ ಮತ್ತು ಹಗೆತನಗಳು

ನಾನು ನೀನೆಂಬ ವ್ಯಾಪ್ತಿಯೊಳಗೂ

ಮತ್ತು ವ್ಯಾಪ್ತಿ ಮೀರಿಯೂ

ವ್ಯವಹರಿಸುವಂತಹವು

              *

Rating
No votes yet

Comments

Submitted by nageshamysore Sun, 08/09/2015 - 21:20

ಪಾಟೀಲರೆ ನಮಸ್ಕಾರ. ಪ್ರೀತಿ, ಪ್ರೇಮ, ಹಗೆತನದ ವ್ಯಾಪ್ತಿ ವಿಸ್ತಾರಗಳನ್ನು ತೆರೆದ ಪುಸ್ತಕದಂತೆ ಬಿಚ್ಚಿಟ್ಟ ಕವನ. ನೀವಂದಂತೆ ಹಗೆತನದ ತೀವ್ರತೆ ಕೆಲವೊಮ್ಮೆ ಸ್ನೇಹದ ಆಳಕ್ಕಿಂತಲೂ ಹೆಚ್ಚಿನ ಆಳಕ್ಕಿಳಿದು ಬಾಧಿಸುವ ಪರಿ ವಿಚಿತ್ರವೆ. ಅವು ಲೌಕಿಕದ ನಾನು ತಾನೆಂಬ ವ್ಯಾಖ್ಯೆ ಮೀರಿ ಪಾರಮಾರ್ಥಿಕ ನೆಲೆಗಟ್ಟಿನತನಕವು ವಿಸ್ತರಿಸಿಕೊಳುವುದು ಸೋಜಿಗವೆ ಸರಿ !

Submitted by H A Patil Mon, 08/10/2015 - 14:12

In reply to by nageshamysore

ನಾಗೇಶ ಮೈಸೂರುರವರಿಗೆ ಇ ಬಇಡುತ್ತೇವೆ
ಈ ಕವನದ ಕುರಿತು ತಾವು ಬರೆದ ಪ್ರತಿಕ್ರಿಯೆ ಓದಿದೆ, ಪ್ರೀತಿ ಪ್ರೇಮಗಳಿಗಿಂತ ನಾವು ಸಾಮಾನ್ಯವಾಗಿ ಹಗೆತನ ಮತ್ತು ದ್ವೇಷವನ್ನು ಕುರಿತೆ ನಮ್ಮ ಜೀವನ ಪೂರ್ತಿ ತೊಳಲಾಟ ದಲ್ಲಿಯೆ ಮುಳುಗಿ ಹೋಗುತ್ತೇವೆ ಇದು ನನ್ನನ್ನು ಕಾಡಿದ್ದು ಅದರ ಫಲಶೃತಿಯೆ ಈ ಕವನ ಮೆಚ್ಚುಗೆಗೆ ದನ್ಯವಾದಗಳು.

Submitted by Nagaraj Bhadra Sun, 08/09/2015 - 21:22

ಪ್ರೀತಿ ಪ್ರೇಮದಲ್ಲಿ ನಾನು ಎಂಬುವುದು ಬಂದರೆ ಅದು ಮುಂದೆ ಹಗೆತನವನ್ನು ಹುಟ್ಟಿಹಾಕುತ್ತದೆ.ಒಳ್ಳೆಯ ಲೇಖನ ಸರ್.

Submitted by H A Patil Mon, 08/10/2015 - 14:16

In reply to by Nagaraj Bhadra

ನಾಗರಾಜ ಭದ್ರಾರವರಿಗೆ ವಂದನೆಗಳು
ತಮ್ಮ ಅನಿಸಿಕೆ ಸರಿ ನಾನು ನನ್ನದೆನ್ನುವ ಅಹಂ ನಮ್ಮಲ್ಲಿ ಹುಟ್ಟಿತೆಂದರೆ ಅದು ನಮ್ಮ ವಿನಾಶದ ಮೂಲ ಕಾರಣ ಪ್ರತಿಕ್ರಿಯೆಗೆ ಧನ್ಯವಾದಗಳು.

Submitted by kavinagaraj Mon, 08/10/2015 - 08:22

ಪ್ರೀತಿ ಮತ್ತು ಹಗೆತನದ ವಿಶ್ಲೇಷಣೆ ಮತ್ತು ಕೊಟ್ಟಿರುವ ಉದಾಹರಣೆಗಳು ಚೆನ್ನಾಗಿವೆ, ಪಾಟೀಲರೇ.
ಪ್ರೀತಿ ಮತ್ತು ದ್ವೇಷ - ಒಂದೇ ನಾಣ್ಯದ ಎರಡು ಮುಖಗಳು. ಪರಸ್ಪರ ವಿರುದ್ಧವಾದರೂ ಬೇರ್ಪಡಲಾಗದಂತಹದು. ಪ್ರೀತಿಯೂ ದ್ವೇಷಕ್ಕೆ ಕಾರಣವಾಗಬಹುದು ಮತ್ತು ದ್ವೇಷವೂ ಪ್ರೀತಿಯ ಕಾರಣದಿಂದಲೇ ಬರಬಹುದು.

Submitted by H A Patil Mon, 08/10/2015 - 14:19

In reply to by kavinagaraj

ಕವಿ ನಾಗರಾಜರವರಿಗೆ ವಂದನೆಗಳು
ಕವನವನ್ನು ತಾವು ವಿಮರ್ಶಿಸಿ ಅಬಿವ್ಯಕ್ತಿಸಿದ ರೀತಿ ಕವನಕ್ಕೆ ಒಂದು ವಿಶೇಷ ಆಯಾಮವನ್ನು ನೀಡಿದೆ ಕವನದ ಮೆಚ್ಚುಗೆಗೆ ದನ್ಯವಾದಗಳು.