'ಪ್ರೇಮ್' ಕಥೆ
ಅಧ್ಯಾಯ – ೧
ಪ್ರೇಮ್ ಈ ಹೆಸರು ಸುಳಿದೊಡನೆ ನನಗೆ ಯಾವಾಗಲೂ ಸುಮಾರು ಎಂಟು ವರ್ಷದ ಹಿಂದಿನ ಅನುಭವವೊಂದು ನೆನಪಾಗುತ್ತದೆ. ಈಗಷ್ಟೇ ಆಫೀಸಿನಲ್ಲಿ ಯಾರೋ “ಹಾಯ್ , ಐ ಆಮ್ ಪ್ರೇಮ್ ” ಎಂದು ಪರಿಚಯಿಸಿಕೊಂಡರು. ಅಲ್ಲಿಂದಲೇ ನಾನು ಕಾಲದಲ್ಲಿ ಹಿಂದಕ್ಕೆ ಚಲಿಸಿದ್ದು.
ಆವತ್ತು ಸೋಮವಾರ ಬೆಳಗಿನ 5 ಗಂಟೆ. ಅಪ್ಪ ಸ್ನಾನ ಮಾಡೆಂದು ಕರೆಯುತ್ತಿದ್ದರು. ನನಗೆ ಅದಾಗಲೇ ಬೇಸರ ಬಂದು ಗಟ್ಟಿಯಾಗಿ ತಬ್ಬಿಕೊಂಡಿತ್ತು. ಆದರೂ ಎಲ್ಲಾ ಅಡಗಿಸಿಕೊಂಡು ದಿವ್ಯ ಮೌನದಿಂದ ಸ್ನಾನ ಮುಗಿಸಿದೆ. ತಿಂಡಿಯ ಶಾಸ್ತ್ರವಾದ ಮೇಲೆ ಅಮ್ಮ ಕೊಟ್ಟ ಬ್ಯಾಗ್ ಹಿಡಿದು ಹೊರಡಲನುವಾದೆ. ಇದೇ ಅತೀ ಕಷ್ಟದ ಕ್ಷಣ ಇನ್ನು ಕೆಲವು ತಿಂಗಳ ತನಕ ಮನೆಗೆ ಬರಲಾಗುವುದಿಲ್ಲ. ನಮಸ್ಕಾರ ಮಾಡುವಾಗ ಬಸ್ ಹಾರ್ನ್ ಕೇಳಿತೆಂಬ ನೆಪದೊಂದಿಗೆ ಕಣ್ಣೀರನ್ನು ಕಡೆಗಣಿಸಲು ಅವಸರದಿಂದ ಓಡಿದೆ.
ಬಸ್ ಭರದಲ್ಲಿ ಮುಂದೋಡುತ್ತಿದ್ದರೆ ಮನಸ್ಸು ಮನೆ ಬಿಟ್ಟು ಬರಲಾಗದೆ ಅಲ್ಲಲ್ಲೇ ಮುಗ್ಗರಿಸಿ ಬೀಳುತ್ತಿತ್ತು. ಬ್ಯಾಗ್ ನ ಅಪ್ಪಿ ಕುಳಿತಿದ್ದವಳಿಗೆ ಏಕೋ ಭಾರವಾದಂತಾಗಿ ಕೆಳಗಿಟ್ಟು ಕಿಟಕಿಗೆ ತಲೆ ಕೊಟ್ಟು ಓಡುವ ಮರ ಗಿಡಗಳ ನೋಡುತ್ತಾ ಕುಳಿತೆ. ಸಾಗುವ ಬಸ್ಸು ಗಮ್ಯ ಸೇರದೆ ಚಲನೆಯಲ್ಲೇ ಇರಲಿ ಎನ್ನುವುದು ನನ್ನಾಸೆ. ಎಲ್ಲಾ ಕೆಲಸ ಕಾರ್ಯಗಳು ಊರು ಸೇರಿದ ಮೇಲೆ ಶುರುವಾಗುವುದರಿಂದ ನನಗೆ ಪಯಣ ಒಂದು ನಿರಾಳವಾದ ನಿಶ್ಚಲ ನೆಮ್ಮದಿಯ ಸಮಯ. ಹೀಗೆ ನನ್ನ ಯೋಚನೆಗಳ ಮಧ್ಯೆ ಇರಬೇಕಾದರೆ ಯಾರೋ ಒಬ್ಬ ಸಂಭಾವಿತ ಪಕ್ಕದ ಸೀಟು ಆವರಿಸಿಕೊಂಡ. ಸಂಭಾವಿತ ಏಕೆಂದರೆ ಹೆಣ್ಣು ಮಕ್ಕಳ ಪಕ್ಕ ಕೂರುವಾಗ ಚಿಕ್ಕ ಸೀಟಿನಲ್ಲಿ ಆದಷ್ಟು ಚಿಕ್ಕಕ್ಕೆ ಕುಳಿತಿದ್ದ. ನನಗೇಕೋ ತಿರುಗಿ ನೋಡುವ ಮನಸ್ಸು ಇರಲಿಲ್ಲ. ನನ್ನ ಮಾತುಕತೆ ರಸ್ತಯಲ್ಲಿನ ಪಾತ್ರಗಳ ಜೊತೆಯೇ ಮುಂದುವರಿದಿತ್ತು. ಒಮ್ಮೆಲೇ ಒಂದು ಬ್ರೇಕ್ ಹಾಕಿದಾಗ ಬಸ್ ವಾಲಿ ಕುಲುಕಾಡಿ ಬಳುಕಿತ್ತು. ಆಗಷ್ಟೇ ಬಸ್ಸಿನೊಳಗಿರುವ ವಾಸ್ತವಕ್ಕೆ ನಾನು ಬಂದಿದ್ದೆ. ಆ ಸಂಧಿ ಕಾಲದಲ್ಲಿ ಬಂದಿದ್ದು ಅವನ ಪ್ರಶ್ನೆ “ಓದುತ್ತಿದ್ದೀರ”? . ನಾನು “ಹೌದು, ನೀವು? ” ಎಂದು ಮರು ಪ್ರಶ್ನಿಸಿದ್ದೆ. ಅಲ್ಲಿಂದ ನಂತರ ಮಾತುಕತೆ ಹೀಗೆಯೆ ಸಾಗಿತ್ತು. ಅವನ ಹೆಸರು ಪ್ರೇಮ್ ಅದರ ಹೊರತಾಗಿ ಹೆಚ್ಚೇನು ನಾನು ವಿಚಾರಿಸಲಿಲ್ಲ. ಹೆಸರು ಸಿನಿಮೀಯವಾಗಿತ್ತು ಅದಕ್ಕೆಂದು ಮನದಲ್ಲಿ ನಿಂತು ಬಿಟ್ಟಿತೋ ಏನೋ. ಮಾತು ಮುಂದುವರಿದಾಗ ನಾನು ನನ್ನ ಓದು, ಅಲ್ಲಿನ ಬದುಕು, ಕಷ್ಟ ಎಲ್ಲಾ ಕಥೆಗಳನ್ನು ಹೇಳಿ ಊರು ಬರುವ ಹೊತ್ತಿಗೆ ನಿರಮ್ಮಳವಾಗಿದ್ದೆ. ಬರೀ ಕಾಲಹರಣಕ್ಕೆ ಮಾತನಾಡಿದ್ದರೂ ನನ್ನ ಜೀವನದ ಅವತ್ತಿನವರೆಗಿನ ಎಲ್ಲಾ ಮುಖ್ಯ ನಡೆಗಳನ್ನು ಆ ಅಪರಿಚಿತನೊಂದಿಗೆ ಹಂಚಿಕೊಂಡಿದ್ದೆ. ಊರು ಬಂದಾಗ ಯಾವುದೋ ದುರ್ಬಲ ಕ್ಷಣದಲ್ಲಿ ಹೇಳಬಾರದ್ದನೆಲ್ಲಾ ಹೇಳಿದನೇನೋ ಅನಿಸಿದ್ದು ನಿಜ. ಅದಕ್ಕೆಂದೆ ಬಸ್ ನಿಂತಾಗ ಕಾಲೇಜಿಗೆ ತಡವಾಯಿತೆಂದು ಆಟೋ ಏರಿ ತಕ್ಷಣ ಹೊರಟಿದ್ದೆ. ಆದರೆ ಆಟೋ ಅಡ್ಡ ಹಾಕಿ ನನ್ನ ನಂಬರ್ ಕೇಳಿದ್ದ. ಇಲ್ಲ ಫೋನಿಲ್ಲ ಎಂದು ನಿರ್ದಯವಾಗಿ ನಾನು ಮುಂದುವರಿದಿದ್ದೆ. ಆದರೆ ಒಮ್ಮೊಮ್ಮೆ ಬಸ್ ನಲ್ಲಿ ಕಾಲೇಜಿಗೆ ಹೋಗುವಾಗ ಹೇಗಾದರೂ ಸಂಪರ್ಕ ಇಟ್ಟುಕೊಳ್ಳಬೇಕಿತ್ತು ಎಂದು ಅನಿಸಿದ್ದುಂಟು. ಕಾಣುವ ನೂರಾರು ಮುಖಗಳಲ್ಲಿ ಅವನ ಮುಖವನ್ನು ಹುಡುಕಿದ್ದೆ. ಅವನ ಹೆಸರು ಪ್ರೇಮ್ ಮಾತ್ರ ಮನದಲ್ಲಿ ಆಗೀಗ ಉತ್ಸಾಹ ಉಕ್ಕಿಸುತ್ತಿತ್ತು.
ಅಧ್ಯಾಯ – ೨
ಸರಿಯಾಗಿ ನೆನಪಿಲ್ಲ ಅಂದು ಸೋಮವಾರವಿದ್ದಿರಬೇಕು. ನಾಲ್ಕು ದಿನದ ರಜೆಗೆಂದು ಅಜ್ಜನ ಮನೆಗೆ ಬಂದಿದ್ದೆ. ಅಲ್ಲಿಂದ ಒಂದು ದಿನ ಸಿಟಿಗೆ ಹೋಗುವ ಕೆಲಸಕ್ಕೆ ಬೇಗ ಬಸ್ ಹಿಡಿದು ಹೊರಟಿದ್ದೆ. ಒಬ್ಬಳು ಹುಡುಗಿಯ ಪಕ್ಕ ಸೀಟು ಖಾಲಿಯಿತ್ತು ಕುಳಿತುಕೊಂಡೆ. ಆಗ ಹೆಣ್ಣೆಂದರೆ ಸಾಕು ಮಾತನಾಡಿಸುವ ಚಪಲ. ಚಿಕ್ಕ ಸೀಟಿನಲ್ಲಿ ಸಂಭಾವಿತನ ಹಾಗೆ ಕುಳಿತಿದ್ದೆ. ಆದರೆ ಅವಳು ಕಿಟಕಿಯ ಹೊರಗಿನ ಪ್ರಪಂಚದಲ್ಲಿ ಮುಳುಗಿದ್ದಳು. ನಾಲ್ಕಾರು ಬಾರಿ ಹಲೋ, ಹಾಯ್, ನಿಮ್ಮ ಹೆಸರು ಎಂದರೂ ಯಾವುದು ಕೆಲಸ ಮಾಡಿರಲಿಲ್ಲ. ಬಸ್ ಒಂದು ಸಲ ನಿಂತಾಗ ಏನೋ ಕೇಳಿದೆ. ಅಂತು ಮಾತನಾಡಲು ಶುರುವಿಟ್ಟಳು. ಅಮೇಲಿಂದ ನಿಲ್ಲದ ಪ್ರವಾಹದಂತೆ ಕೊಚ್ಚಿಕೊಂಡು ಬಂದಿತ್ತು. ಆದರೆ ಅದೊಂದು ಸಾಮಾನ್ಯ ಮಾತುಕತೆಯಾಗಿರಲಿಲ್ಲ. ಅವಳು ಈಗಿನ್ನೂ ಸ್ಕೂಲ್ ಮುಗಿಸಿ ಕಾಲೇಜು ಸೇರಿದ್ದಳು. ಅದೂ ಕನ್ನಡ ಮೀಡಿಯಂನಿಂದ ಪಿಯು ಕಾಲೇಜಿನಲ್ಲಿ ಸೈನ್ಸ್ ತೆಗೆದುಕೊಂಡಿದ್ದಳು. ನನ್ನ ಕೆಲವು ಗೆಳೆಯರು ಹಾಗೆ ಮಾಡಿ ಫೇಲಾಗಿ ಒಂದೆರಡು ವರ್ಷ ನಷ್ಟ ಮಾಡಿಕೊಂಡು ಆಮೇಲೆ ಆರ್ಟ್ಸ್ ಗೆ ಹೋದವರನ್ನು ನಾನು ನೋಡಿದ್ದೆ. ಆದರೆ ಈ ಹುಡುಗಿ ಛಲ ಬಿಡದೆ ಚೆನ್ನಾಗಿಯೇ ಓದುತ್ತಿದ್ದಳು. ಅಲ್ಲೂ ಕೂಡ ಮೊದಲವನೆಯಳಾಗಿದ್ದಳು. ಇನ್ನು ಅವಳಿರುವುದು ಹಾಸ್ಟೆಲ್ ನಲ್ಲಲ್ಲದೆ ಸಂಬಂಧಿಕರ ಮನೆಯಲ್ಲಿ. ಹಾಸ್ಟೆಲ್ ನ ಸ್ವತಂತ್ರ ಜೀವನ ಅಲ್ಲಿನ ಅಮೋದ ಪ್ರಮೋದಗಳಲ್ಲಿ ಇದ್ದ ನನಗೆ ಇವಳ ಜೀವನ ಅತಿ ಕಷ್ಟ ಅನಿಸಿತ್ತು. ಸಂಬಂಧಿಕರ ಜೀವನದಲ್ಲಿ ಅವರಿಗೆ ಇಷ್ಷವಿರದಿದ್ದರೂ ತೂರಿಕೊಂಡು ವರ್ಷಾನುಗಟ್ಟಲೆ ಬದುಕುವುದು ಬಹಳ ಕಷ್ಟ. ಎರಡು ದಿನದ ಮಟ್ಟಿಗೆ ಅಡ್ಜಸ್ಟ್ ಆಗದ ನನಗೆ ಅದು ಅಸಾಧ್ಯವೆಂದೇ ತೋರಿತ್ತು. ಹದಿಹರೆಯದ ಆಸೆ, ತುಂಟಾಟಗಳಿಲ್ಲದೆ ಏನೋ ಒಂದು ಧೇಯ್ಯ, ಸರಿ ತಪ್ಪುಗಳ ವಿಶ್ಲೇಷಣೆ ಮಾಡುತ್ತಿದ್ದ ಆ ಕಣ್ಣುಗಳು ನನಗೆ ತುಂಬಾ ಇಷ್ಟವಾಗಿ ಬಿಟ್ಟವು. ಅದರಲ್ಲೂ ಅವಳು ಕಥೆ ಹೇಳುವಾಗ ಕಂಡ ತೆಳುವಾದ ಕಣ್ಣೀರಿನ ಪೊರೆ ಇನ್ನು ಮರೆಯಲಾರದಂತೆ ಅಚ್ಚೊತ್ತಿ ಬಿಟ್ಟಿದ್ದವು.
ಅವಳ ಮುಗ್ಧತನದಲ್ಲಿದ್ದ ಸೀರಿಯೆಸನೆಸ್ ನನ್ನನ್ನು ತುಂಬಾ ಕಾಡಿತು. ಅಲ್ಲಿಂದ ನಡೆದ್ದದ್ದೆಲ್ಲಾ ಯಶೋಗಾಥೆ. ಆ ಭೇಟಿಯಾಗ ಬೇಕಾದರೆ ನಾನು ಎಂಜಿನಿಯರಿಂಗ್ ಎರಡನೇ ವರ್ಷದಲ್ಲಿದ್ದೆ. ಪಾಸಾಗುವಷ್ಟು ಓದುವ,ಅಪ್ಪ ಅಮ್ಮ ಕೊಟ್ಟ ದುಡ್ಡನ್ನು ಹಾಸ್ಟೆಲ್ ಖರ್ಚೆಂದು ಮಜ ಮಾಡುವ ಸಾಮಾನ್ಯ ಹುಡುಗನಾಗಿದ್ದೆ. ಯಾರೋ ಹೇಳಿದ ಹಾಗೆ , ಇರುವುದೊಂದೇ ಬದುಕು ಅದನ್ನು ಇದ್ದಷ್ಟು ದಿನ ಪೂರ್ತಿ ಅನುಭವಿಸಬೇಕು ಎಂದು ನಂಬಿಕೊಂಡಿದ್ದೆ. ಅಂಕೆ ಶಂಕೆಗಳಿಲ್ಲದೆ ಸಿಗರೇಟು,ಕುಡಿತ ಇನ್ನು ಎಲ್ಲಾ ತರದ ಹೊಸ ಅನುಭವಗಳಿಗೆ ನಾನು ತೆರೆದುಕೊಂಡಿದ್ದೆ. ಇನ್ನು ಹುಡುಗಿಯರ ಕಾಲಿಗೆ ಬಿದ್ದಾದರೂ ಅವರನ್ನು ಒಲಿಸಿಕೊಳ್ಳುವುದೇ ಪರಮೋಚ್ಚ ಧೇಯ್ಯವಾಗಿತ್ತು. ಹೀಗಿದ್ದಾಗ ಅಧೋಗತಿಯ ಅಂಚಲ್ಲಿ ಆಗಿದ್ದು ಅವಳ ಭೇಟಿ. ಸ್ಕೂಲು ಮುಗಿದು ಆರು ತಿಂಗಳಿಗೆ ಮನೆಯವರನ್ನು ನೋಡಿಕೊಳ್ಳಲು ಓದುತ್ತಿದ್ದೇನೆ, ಹಾಸ್ಟೆಲ್ ಖರ್ಚು ಜಾಸ್ತಿ ಎಂದೆಲ್ಲಾ ತೊದಲುವ ಆ ಮಾತುಗಳಿಗೆ ನನ್ನ ಮೂರ್ಖತನ ತೊರೆದು ಹೋಗಿತ್ತು. ನನ್ನನ್ನೇ ನಾನು ಕಂಡವನಂತೆ ಬದುಕನ್ನೇ ಬದಲಿಸಿಕೊಂಡೆ. ಸರಿ ತಪ್ಪುಗಳ ತುಲನೆಯಲ್ಲಿ ಅವಳನ್ನು ಅನುಕರಿಸಿ ತೊಡಗಿದೆ. ಅವಳು ನೋಡುತ್ತಿರುವಳೇನೋ ಎಂದು ಒಳ್ಳೆಯತನ ಮೈಗೂಡಿಸಿಕೊಂಡೆ. ಅವಳ ಕಣ್ಣುಗಳು ನನ್ನ ಎದೆಯಾಳದಲ್ಲಿ ನನ್ನ ಬದುಕನ್ನು ಸುಮ್ಮನೇ ವೀಕ್ಷಿಸುತ್ತಿದ್ದವು.ಓದು ಮುಗಿಸಿ ಪ್ರತಿಷ್ಠಿತ ಕಂಪೆನಿಯಲ್ಲಿ ಒಳ್ಳೆಯ ಹುದ್ದೆಯಲ್ಲಿದ್ದೆ. ಅಪ್ಪ ಅಮ್ಮ ಕೂಡ ಈಗ ನನ್ನೊಂದಿಗೆ ಇದ್ದರು.
ಇಷ್ಟೆಲ್ಲಾ ಏನಕ್ಕೆ ನೆನಪಾಯಿತೆಂದರೆ ಆಫೀಸಿನಲ್ಲಿ ನೀರು ತುಂಬಿಸಿ ಕೊಳ್ಳುವ ಹೊತ್ತಿಗೆ ಆ ಎರಡು ಕಣ್ಣುಗಳು ನನಗೆ ಪ್ರತ್ಯಕ್ಷವಾಗಿ ಕಂಡಂತಾಯಿತು. ಆಗಲೇ ಅದಮ್ಯ ಬಯಕೆಯಿಂದ,ಕೊಂಚ ಅನುಮಾನದ ಭಯದಿಂದ ನನ್ನನ್ನು ಪರಿಚಯಿಸಿಕೊಂಡೆ. ಅವಳ ಹೆಸರು ಸುಮಾ ಎಂದಳು. ಅಂದರೆ ಖಾತ್ರಿಯಾಯಿತು ಇವಳು ಅವಳಲ್ಲ , ಅವಳ ಹೆಸರು ಸೌಮ್ಯ. ತುಂಬಾ ನಿರಾಸೆಯಾಯಿತು. ನನ್ನ ಭ್ರಮೆ ಅತಿಯಾಯಿತು ಎಂದು ಬೈದುಕೊಂಡೆ. ನನ್ನ ಎದೆಯಾಳದ ಕಣ್ಣುಗಳು ಏಕೋ ಕೋಪದಿಂದ ನನ್ನನ್ನೇ ನೋಡಿದಂತಾಯಿತು.
Comments
ಉ: 'ಪ್ರೇಮ್' ಕಥೆ
ಅಂತ್ಯದ 'ಟ್ವಿಸ್ಟ್' ನಿಂದಾಗಿ ಕಥೆ ತನ್ನ ಕುತೂಹಲವನ್ನು ಹಾಗೆಯೆ ಉಳಿಸಿಕೊಳ್ಳುತ್ತದೆ :-)
In reply to ಉ: 'ಪ್ರೇಮ್' ಕಥೆ by nageshamysore
ಉ: 'ಪ್ರೇಮ್' ಕಥೆ
ಹೌದು... ಹೆಚ್ಚಿನ ಪ್ರೇಮ ಕಥೆಗಳು ಸುಖಾಂತವಾಗುವುದಿಲ್ಲವಲ್ಲ ಅದಕ್ಕಾಗಿ ಆ ಟ್ವಿಸ್ಟ್.
ಉ: 'ಪ್ರೇಮ್' ಕಥೆ
ಅಪೂರ್ಣತೆ ಉಳಿದೇಹೋಯಿತು!!
In reply to ಉ: 'ಪ್ರೇಮ್' ಕಥೆ by kavinagaraj
ಉ: 'ಪ್ರೇಮ್' ಕಥೆ
ಕೆಲವೊಮ್ಮೆ ಹುಡುಕಾಟದಲ್ಲಿ ಸಿಕ್ಕಿದರೂ ಅಭ್ಯಾಸದಂತೆ ಹುಡುಕಾಟ ಮುಂದುವರಿಸುತ್ತೇವೆ!!