ಪ್ರೌಢಶಾಲಾ ಶಿಕ್ಷಕರ ನೇಮಕಾತಿಯಲ್ಲಿ ಭರ್ಜರಿ ಗೋಲ್ಮಾಲ್

ಪ್ರೌಢಶಾಲಾ ಶಿಕ್ಷಕರ ನೇಮಕಾತಿಯಲ್ಲಿ ಭರ್ಜರಿ ಗೋಲ್ಮಾಲ್

ಪ್ರೌಢಶಾಲಾ ಶಿಕ್ಷಕರ ನೇಮಕಾತಿಗಾಗಿ ಜೂನ್ 2012 ರಲ್ಲಿ ಕೇಂದ್ರೀಯ ದಾಖಲಾತಿ ಘಟಕ ನಡೆಸಿದ್ದ ಸ್ಪರ್ಧಾತ್ಮಕ ಪರೀಕ್ಷೆಯ ಪಲಿತಾಂಶವನ್ನು ದಿನಾಂಕ 25-10-2012 ರಂದು http://schooleducation.kar.nic.in/ ನಲ್ಲಿ ‘ಮೊದಲ ಪರಿಶೀಲನಾ ಪಟ್ಟಿ’ ಪ್ರಕಟವಾಗಿದ್ದು, ಇದರಲ್ಲಿ ನಾಲ್ಕು ವಿಭಾಗಗಳ (ಬೆಂಗಳೂರು, ಬೆಳಗಾವಿ, ಗುಲ್ಪರ್ಗಾ ಮತ್ತು ಮೈಸೂರು) ವಿಷಯವಾರು ಆಯ್ಕೆಪಟ್ಟಿಗಳನ್ನು ಹಾಕಿದ್ದಾರೆ. ಅವರೇ ನೀಡಿರುವ ಫಲಿತಾಂಶವನ್ನು ಕೂಲಂಕಶವಾಗಿ ಗಮನಿಸಿದರೆ ಇಡೀ ಪ್ರಕ್ರಿಯೆಯಲ್ಲಿ ಎಲ್ಲಾ ನಾಲ್ಕು ವಿಭಾಗಗಳಲ್ಲೂ ಅವ್ಯವಹಾರ ನಡೆದಿರುವುದು ಸ್ಪಷ್ಟವಾಗಿದೆ. ಪ್ರತಿಯೊಂದು ವಿಭಾಗದ ಪ್ರತಿ ವಿಷಯದಲ್ಲೂ ಅನೇಕರಿಗೆ ಶೇಖಡ 2 ರಿಂದ 50 ರವರೆಗೆ ಹೆಚ್ಚು ಅಂಕಗಳನ್ನು ನೀಡಿ ಪಟ್ಟಿಯಲ್ಲಿ ತೂರಿಸಿರುವುದು ಗಮನಕ್ಕೆ ಬರುತ್ತದೆ.

ಉದಾಹರಣೆಗೆ, ಮೈಸೂರು ವಿಭಾಗದಲ್ಲಿ ‘ಕನ್ನಡ ಭಾಷಾ ಶಿಕ್ಷಕರ’ ಅಯ್ಕೆ ಪಟ್ಟಿಯ ನೋ.ಸಂ. 2141171 ವಾಸ್ತವವಾಗಿ ಪಡೆದ ಒಟ್ಟು ಶೇ. ಅಂಕ 53.51, ಆದರೆ ಆಯ್ಕೆಪಟ್ಟಿಯಲ್ಲಿ ನಮೂದಿಸಿರುವುದು ಶೇ. 83.51. ಇದೇ ವಿಭಾಗದ ‘ಹಿಂದಿ ಭಾಷಾ ಶಿಕ್ಷಕರ’ ಅಯ್ಕೆ ಪಟ್ಟಿಯ ನೋ.ಸಂ. 2175182 ವಾಸ್ತವವಾಗಿ ಪಡೆದ ಒಟ್ಟು ಶೇ. ಅಂಕ 42.81, ಆದರೆ ಆಯ್ಕೆಪಟ್ಟಿಯಲ್ಲಿ ನಮೂದಿಸಿರುವುದು ಶೇ. 92.81. ಇದೇ ವಿಭಾಗದ CBZ ಇಂಗ್ಲಿಶ್ ಮಾದ್ಯಮ ಶಿಕ್ಷಕರ ಅಯ್ಕೆ ಪಟ್ಟಿಯ ನೋ.ಸಂ. 2302373 ವಾಸ್ತವವಾಗಿ ಪಡೆದ ಒಟ್ಟು ಶೇ. ಅಂಕ 45.86, ಆದರೆ ಆಯ್ಕೆಪಟ್ಟಿಯಲ್ಲಿ ನಮೂದಿಸಿರುವುದು ಶೇ. 69.86. ಇನ್ನು ಕೆಲವು ಅಭ್ಯರ್ಥಿಗಳಿಗೆ ಶೇ. 100 ಕ್ಕೂ ಹೆಚ್ಚು ಅಂಕಗಳನ್ನು ನೀಡಿರುವುದೂ ಇದೆ. ಉದಾ, ಬೆಂಗಳೂರು ವಿಭಾಗದ ‘ಕನ್ನಡ ಮಾಧ್ಯಮ ಆರ್ಟ್ಸ ಶಿಕ್ಷಕರ’ ಅಯ್ಕೆ ಪಟ್ಟಿಯ ನೋ.ಸಂ. 2355471 (ಶೇ. 134.02), 2097111 (ಶೇ. 104.92).  ಬೆಳಗಾಂ ವಿಭಾಗದ ಆರ್ಟ್ಸ ಇಂಗ್ಲಿಶ್ ಮಾಧ್ಯಮ ಶಿಕ್ಷಕರ ಅಯ್ಕೆ ಪಟ್ಟಿಯ ನೋ.ಸಂ. 2209267 (ಶೇ. 145.69).  ಇವು ಕೆಲವಷ್ಟೆ ಉದಾಹರಣೆಗಳು, ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.   

ಈ ಫಲಿತಾಂಶ ಬಹಳಷ್ಟು ಉದ್ಯೋಗ ಆಕಾಂಕ್ಷಿಗಳ ಜೀವನದ ನಿರ್ಣಾಯಕ ಘಟ್ಟವಾಗಿರುತ್ತದೆ. ಆದರೆ ಇಲ್ಲಿ ಸಂಬಂಧಪಟ್ಟ ಇಲಾಖೆಯವರು ಹಲವು ಅಭ್ಯರ್ಥಿಗಳೊಂದಿಗೆ ಶಾಮೀಲಾಗಿ ಅರ್ಹ ಅಭ್ಯರ್ಥಿಗಳಿಗೆ ಉದ್ಯೋಗ ಅವಕಾಶದಿಂದ ವಂಚಿತರನ್ನಾಗಿ ಮಾಡಿರುವುದು ನಿಜಕ್ಕೂ ಶೋಚನೀಯ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸೂಕ್ತ ಕ್ರಮ ಜರುಗಿಸಿ ಅರ್ಹರಿಗೆ ಮಾತ್ರ ಉದ್ಯೋಗ ಅವಕಾಶ ನೀಡುತ್ತಾರೆಯೆ ಎಂದು ಕಾದು ನೋಡಬೇಕಿದೆ.

-ನೊಂದ ಅಭ್ಯರ್ಥಿಗಳ ಪರವಾಗಿ.

 

 

Rating
No votes yet