ಫಾದರ್ ಸೆರ್ಗಿಯಸ್ ಅಧ್ಯಾಯ ಆರು

ಫಾದರ್ ಸೆರ್ಗಿಯಸ್ ಅಧ್ಯಾಯ ಆರು

ಆರು
ಫಾದರ್ ಸೆರ್ಗಿಯಸ್ ಇನ್ನೂ ಏಳು ವರ್ಷಗಳನ್ನು ಏಕಾಂತವಾಸದಲ್ಲಿ ಕಳೆದ. ಮೊದಮೊದಲು ಅವನನ್ನು ಕಾಣಲು ಬಂದ ಜನ ತಂದುಕೊಡುತ್ತಿದ್ದ ಟೀ, ಸಕ್ಕರೆ, ಬಿಳಿಯ ಬ್ರೆಡ್ಡು, ಹಾಲು, ಬಟ್ಟೆ, ಸೌದೆಗಳನ್ನು ಸ್ವೀಕರಿಸುತ್ತಿದ್ದ. ಆದರೆ ಕಾಲ ಕಳೆದಂತೆ ಮತ್ತೂ ನಿಷ್ಠುರವಾಗಿ ಸರಳವಾಗಿ ಬದುಕತೊಡಗಿದ. ಸುಖಕ್ಕೆ ಕಾರಣವಾಗುವ ಎಲ್ಲವನ್ನೂ ನಿರಾಕರಿಸಲು ತೊಡಗಿದ. ಕೊನೆಗೆ ಜನ ತಂದುಕೊಡುವ ರೈ ಬ್ರೆಡ್ಡನ್ನು ಮಾತ್ರ ವಾರಕ್ಕೆ ಒಂದು ಸಲ ತೆಗೆದುಕೊಳ್ಳುತ್ತಿದ್ದ. ಅವರು ತಂದ ಮಿಕ್ಕೆಲ್ಲವನ್ನೂ ತನ್ನ ಬಳಿಗೆ ಬಂದ ಬಡವರಿಗೆ ಕೊಟ್ಟುಬಿಡುತ್ತಿದ್ದ.
ಇಡೀ ದಿನವನ್ನು ಕೋಣೆಯೊಳಗೇ ಕೂತು ಪ್ರಾರ್ಥನೆ ಮಾಡುತ್ತ ಕಳೆಯುತ್ತಿದ್ದ. ಅಥವಾ ಯಾರಾದರೂ ಕಾಣಲೆಂದು ಬಂದರೆ ಅವರೊಡನೆ ಮಾತನಾಡುತ್ತಿದ್ದ. ಕಾಲ ಕಳೆದಂತೆ ಅವನನ್ನು ಕಾಣಲು ಬರುವ ಜನ ಹೆಚ್ಚಾದರು. ವರ್ಷದಲ್ಲಿ ಎರಡೋ ಮೂರೋ ಬಾರಿ ಚರ್ಚಿನಿಂದಾಚೆಗೆ ಕಾಲಿಡುತ್ತಿದ್ದ. ಸೌದೆ, ನೀರು ಬೇಕಾದಾಗ ಮಾತ್ರ ಕೋಣೆಯಿಂದಾಚೆಗೆ ಬರುತ್ತಿದ್ದ.
ಡೈವೋರ್ಸ್ ಪಡೆದ ಹೆಂಗಸು ಮಾಕೊವ್ಕಿನಾಳ ಘಟನೆ ನಡೆದದ್ದು ಅವನು ಸಂನ್ಯಾಸೀ ಜೀವನ ನಡೆಸುತ್ತಾ ಐದು ವರ್ಷಗಳನ್ನು ಕಳೆದಿದ್ದಾಗ. ಆ ಘಟನೆ--ರಾತ್ರಿಯ ಹೊತ್ತು ಆಕೆ ಬಂದ್ದು, ಅವಳಲ್ಲಿ ಪರಿವರ್ತನೆ ಮೂಡಿದ್ದು, ಕಾನ್ವೆಂಟ್ ಸೇರಿದ್ದು--ಎಲ್ಲರಿಗೂ ತಿಳಿಯಿತು. ಅಂದಿನಿಂದ ಫಾದರ್ ಸೆರ್ಗಿಯಸ್‌ನ ಪ್ರಸಿದ್ಧಿ ಹೆಚ್ಚತೊಡಗಿತು. ಅವನ ದರ್ಶನ ಪಡೆಯಲು ಹೆಚ್ಚು ಹೆಚ್ಚು ಜನ ಬರತೊಡಗಿದರು. ಅವನ ಗುಹೆಯ ಸಮೀಪದಲ್ಲೇ ಇತರ ಸಂನ್ಯಾಸಿಗಳ ವಸತಿ, ಚರ್ಚು, ಒಂದು ವಸತಿ ಗೃಹ ತಲೆ ಎತ್ತಿದವು. ದೂರ ದೂರದ ಊರುಗಳಿಂದ ಜನ ಬಂದರು. ತಮ್ಮೊಡನೆ ಕಾಯಿಲೆ ಬಿದ್ದವರನ್ನೂ ಕರೆದುಕೊಂಡು ಬಂದರು. ಹಾಗೆ ಬಂದವರ ಕಾಯಿಲೆ ವಾಸಿಯಾಯಿತು ಅನ್ನುವ ಸುದ್ದಿ ಹರಡಿದರು.
ಕಾಯಿಲೆಯನ್ನು ಗುಣಪಡಿಸಿದ ಮೊದಲ ಘಟನೆ ಅವನ ಸಂನ್ಯಾಸೀ ಜೀವನದ ಎಂಟನೆಯ ವರ್ಷದಲ್ಲಿ ನಡೆಯಿತು. ಹದಿನಾಲ್ಕು ವರ್ಷದ ಹುಡುಗನೊಬ್ಬನ ಕಾಯಿಲೆಯನ್ನು ವಾಸಿಮಾಡಿದ್ದ ಅವನು. ಹುಡುಗನ ತಾಯಿ ಅವನನ್ನು ಕರೆದುಕೊಂಡು ಬಂದಿದ್ದಳು. ಫಾದರ್ ಸೆರ್ಗಿಯಸ್ ಹುಡುಗನ ತಲೆಯ ಮೇಲೆ ಕೈಯಿಟ್ಟು ಆಶೀರ್ವಾದ ಮಾಡಬೇಕೆಂದು ಒತ್ತಾಯ ಮಾಡಿದ್ದಳು. ಕಾಯಿಲೆಗಳನ್ನು ವಾಸಿಮಾಡುವ ಸಾಮರ್ಥ್ಯ ತನಗೆ ಇರಬಹುದೆಂದು ಫಾದರ್ ಸೆರ್ಗಿಯಸ್ಸನಿಗೆ ಹೊಳೆದೇ ಇರಲಿಲ್ಲ. ಅಂಥ ಶಕ್ತಿ ಇದೆ ಅಂದುಕೊಳ್ಳುವುದು ಕೂಡ ಪಾಪ, ದುರಹಂಕಾರ ಅಂದುಕೊಂಡಿದ್ದ. ಆದರೆ ಮಗುವಿನ ತಾಯಿ ಒಂದೇ ಸಮ ಗೋಗರೆದಿದ್ದಳು. ಅವಳ ಕೋರಿಕೆಯನ್ನು ತಿರಸ್ಕಾರಿಸಲು ಆಗಲಿಲ್ಲ. 'ನೀವು ಎಲ್ಲರ ರೋಗ ವಾಸಿ ಮಾಡುತ್ತೀರಿ, ನನ್ನ ಮಗನಿಗೆ ಕರುಣೆ ತೋರಿಸಬಾರದೆ?' ಎಂದು ಕೇಳಿದಳು. 'ದೇವರು ಮಾತ್ರ ಅಂಥ ಅನುಗ್ರಹಮಾಡಬಲ್ಲ' ಎಂದು ಫಾದರ್ ಸೆರ್ಗಿಯಸ್ ಅವಳಿಗೆ ಹೇಳಿದ. ಅದಕ್ಕೆ ಆ ತಾಯಿ ಇನ್ನೇನೂ ಬೇಡ, ನನ್ನ ಮಗನ ಮೇಲೆ ನಿಮ್ಮ ಕೈ ಇಟ್ಟು ಅವನಿಗೆ ಗುಣವಾಗಲೆಂದು ಪ್ರಾರ್ಥನೆ ಮಾಡಿ, ಸಾಕು ಎಂದು ಬೇಡಿಕೊಂಡಳು. ಫಾದರ್ ಸೆರ್ಗಿಯಸ್ ಅವಳ ಕೋರಿಕೆ ನಿರಾಕರಿಸಿ ಕೋಣೆಯೊಳಕ್ಕೆ ಹೋಗಿಬಿಟ್ಟ. ಮರುದಿನ, (ಶರದೃತುವಿನ ಕೊನೆಯದಿನಗಳು, ಆಗಲೇ ಚಳಿ ಕಾಲಿಟ್ಟಿತ್ತು) ನೀರಿಗಾಗಿ ಕೋಣೆಯಿಂದ ಹೊರಕ್ಕೆ ಬಂದಾಗ ಆ ತಾಯಿ ಮುಖವೆಲ್ಲ ಬಿಳಿಚಿಕೊಂಡಿದ್ದ ಮಗನೊಡನೆ ಬಾಗಿಲಲ್ಲೇ ಕಾದಿದ್ದು ಮತ್ತೆ ಕೋರಿಕೊಂಡಳು.ಅವನು ಅನ್ಯಾಯವಂತ ನ್ಯಾಯಾಧೀಶನ ಸಾಮತಿಯನ್ನು ನೆನಪುಮಾಡಿಕೊಂಡ. ಅವಳ ಕೋರಿಕೆಯನ್ನು ನಿರಾಕರಿಸುವುದೇ ಸರಿ ಎಂದು ದೃಢ ನಿಶ್ಚಯಮಾಡಿಕೊಂಡಿದ್ದವನು ಈಗ ವಿಚಲಿತನಾದ. ವಿಚಲಿತನಾದ್ದರಿಂದ ಪ್ರಾರ್ಥನೆಗೆ ತೊಡಗಿದ. ಅವನ ಮನಸ್ಸಿನಲ್ಲಿ ಒಂದು ನಿರ್ಣಯ ರೂಪುತಳೆಯುವವರೆಗೆ ಪ್ರಾರ್ಥನೆಮಾಡಿದ. ಅವಳ ಕೋರಿಕೆಯನ್ನು ನೆರವೇರಿಸಬೇಕು, ಅವಳ ವಿಶ್ವಾಸದಿಂದಲೇ ಮಗುವಿಗೆ ವಾಸಿಯಾದರೆ ಆಗಲಿ, ತಾನು ಮಾತ್ರ ಈ ಪ್ರಸಂಗದಲ್ಲಿ ದೇವರ ಕೈಯಲ್ಲಿರುವ ಕ್ಷುಲ್ಲಕ ಉಪಕರಣವಷ್ಟೆ ಅನ್ನುವ ನಿರ್ಣಯ ಮನಸ್ಸಿನಲ್ಲಿ ಮೂಡಿತು. ತಾಯಿಯ ಬಳಿಗೆ ಹೋಗಿ, ಅವಳ ಕೋರಿಕೆಯಂತೆ ಮಗುವಿನ ತಲೆಯಮೇಲೆ ಕೈ ಇಟ್ಟು ಪ್ರಾರ್ಥನೆ ಮಾಡಿದ. ಆಮೇಲೆ ತಾಯಿ ಮಗುವನ್ನು ಕರೆದುಕೊಂಡು ಹೊರಟುಹೋದಳು. ಒಂದು ತಿಂಗಳ ನಂತರ ಮಗು ಗುಣವಾದ. ಈ ಸುದ್ದಿ ಪ್ರಾಂತ್ಯದಲ್ಲೆಲ್ಲ ಹರಡಿತು. ಜನ ಫಾದರ್ ಸೆರ್ಗಿಯಸ್‌ನನ್ನು ಗುರು ಎಂದು ಕರೆಯತೊಡಗಿದರು. ಒಂದು ವಾರ ಕಳೆಯುವಷ್ಟರಲ್ಲಿ ಕಾಯಿಲೆಯ ಜನ ಕುದುರೆ ಸವಾರಿಮಾಡಿಕೊಂಡು, ಗಾಡಿ ಕಟ್ಟಿಕೊಂಡು, ನಡೆದುಕೊಂಡು ಫಾದರ್ ಸೆರ್ಗಿಯಸ್ಸನ ದರ್ಶನಕ್ಕೆ ಬರಲು ತೊಡಗಿದರು. ಒಬ್ಬಳ ಕೋರಿಕೆಯನ್ನು ನೆರವೇರಿಸಿದಮೇಲೆ ಉಳಿದವರ ಕೋರಿಕೆ ನಿರಾಕರಿಸಲು ಆಗಲಿಲ್ಲ. ಅನೇಕ ರೋಗಿಗಳ ತಲೆಯಮೇಲೆ ಕೈ ಇಟ್ಟು ಪ್ರಾರ್ಥನೆಮಾಡಿದ. ಎಷ್ಟೋ ಜನಕ್ಕೆ ವಾಸಿಯಾಯಿತು. ಅವನ ಕೀರ್ತಿ ಮತ್ತೂ ಬೆಳೆಯಿತು.
ಹೀಗೆ ವರ್ಷಗಳು ಕಳೆದವು: ಒಂಬತ್ತು ವರ್ಷಗಳು ಮಠಗಳಲ್ಲಿ, ಹದಿಮೂರು ಸಂನ್ಯಾಸಿ ಗುಹೆಯಲ್ಲಿ. ಫಾದರ್ ಸೆರ್ಗಿಯಸ್ ವೃದ್ಧನಂತೆ ಕಾಣುತ್ತಿದ್ದ. ಗಡ್ಡ ಉದ್ದವಾಗಿ ಬೆಳೆದು ನೆರೆತಿತ್ತು. ಆದರೆ ತಲೆಯ ಕೂದಲು, ತೆಳ್ಳಗಾಗಿದ್ದರೂ ಇನ್ನೂ ಕಪ್ಪಾಗಿ, ಗುಂಗುರು ಗುಂಗುರಾಗಿದ್ದವು.
(ಮುಂದುವರೆಯುವುದು)
ಅನ್ಯಾಯವಂತ ನ್ಯಾಯಾಧೀಶನ ಸಾಮತಿ*- ಒಂದು ಊರಿನಲ್ಲಿ ಒಬ್ಬ ನ್ಯಾಯಾಧೀಶ ಇದ್ದ. ದೇವರ ಬಗ್ಗೆ ಭಯ ಭಕ್ತಿ ಇರಲಿಲ್ಲ. ಜನರ ಬಗ್ಗೆ ಗೌರವ ಇರಲಿಲ್ಲ. ಆ ಊರಿನಲ್ಲಿ ಒಬ್ಬ ವಿಧವೆ ಅವನ ಬಳಿಗೆ ಬಂದು 'ನನಗೆ ಅನ್ಯಾಯ ಮಾಡಿವನ ವಿರುದ್ಧ ತೀರ್ಪು ಕೊಡಿ ಎಂದು ಕೇಳುತ್ತಿದ್ದಳು. ಮೊದ ಮೊದಲು ಆಗುವುದಿಲ್ಲ ಅನ್ನುತ್ತಿದ್ದ. ಆನಂತರ 'ನನಗೆ ದೇವರ ಬಗ್ಗೆ ಭಯವಿರದಿದ್ದರೂ ಜನಗಳ ಹೆದರಿಕೆ ಇರದಿದ್ದರೂ ಈ ಹೆಂಗಸು ಬಂದು ಬಂದು ಪೀಡಿಸುತ್ತಾಳೆ. ಅವಳು ಕಾಡದೆ ಇದ್ದರೆ ಸಾಕು, ಅವಳ ಪರವಾಗಿ ತೀರ್ಮಾನ ಕೊಟ್ಟು ಬಿಡುತ್ತೇನೆ' ಎಂದು ನಿರ್ಧರಿಸಿದ. (ಲ್ಯೂಕನ ಸುವಾರ್ತೆ, ೧೮:೨-೫)

Rating
No votes yet