ಫಾದರ್ ಸೆರ್ಗಿಯಸ್ ಅಧ್ಯಾಯ ಏಳು (ಭಾಗ ೧)

ಫಾದರ್ ಸೆರ್ಗಿಯಸ್ ಅಧ್ಯಾಯ ಏಳು (ಭಾಗ ೧)

ಏಳು
ಕೆಲವು ವಾರಗಳಿಂದ ಫಾದರ್ ಸೆರ್ಗಿಯಸ್‌ನನ್ನು ಒಂದೇ ಯೋಚನೆ ನಿರಂತರವಾಗಿ ಕಾಡುತ್ತಿತ್ತು: ನಾನು ಈಗಿರುವ ಸ್ಥಿತಿಯನ್ನು ಒಪ್ಪಿಕೊಳ್ಳುವುದು ಸರಿಯೇ? ಇದು ನನ್ನ ಇಚ್ಛೆಯಿಂದ ದೊರೆತದ್ದಲ್ಲ, ಬದಲಾಗಿ ಆರ್ಕಿಮಾಂಡ್ರೈಟ್* ಮತ್ತು ಮಠದ ಗುರುಗಳ ಇಚ್ಛೆಯಂತೆ ದೊರೆತಿರುವ ಸ್ಥಾನ ಇದು. ನಾನು ಮಾಡುತ್ತಿರುವುದು ಸರಿಯೇ ಅನ್ನುವ ಯೋಚನೆ ಅದು. ಹದಿನಾಲ್ಕು ವರ್ಷದ ಹುಡುಗನ ಕಾಯಿಲೆ ವಾಸಿಯಾದಾಗಿನಿಂದ ಅವನಿಗೆ ಈ ಸ್ಥಾನಮಾನ ದೊರೆತಿದ್ದವು. ಅಂದಿನಿಂದ ತಿಂಗಳು, ವಾರ, ದಿನ ಕಳೆದಂತೆಲ್ಲಾ ಅಂತರಂಗದ ಬದುಕು ಕ್ಷೀಣಿಸಿ ವ್ಯರ್ಥವಾಗುತ್ತಿದೆ, ಮನಸ್ಸಿನೊಳಗೆಲ್ಲ ಹೊರಗಿನ ಲೋಕವೇ ತುಂಬಿಕೊಳ್ಳುತ್ತಿದೆ ಅನ್ನಿಸುತ್ತಿತ್ತು ಅವನಿಗೆ. ಒಳಗು ಹೊರಗಾಗಿ, ಹೊರಗು ಒಳಗಾದಂತೆ ಅನ್ನಿಸುತ್ತಿತ್ತು.
ಮಠಕ್ಕೆ ಜನರನ್ನು ಆಕರ್ಷಿಸುವ, ಅವರಿಂದ ದಾನ ಧರ್ಮ ಪಡೆಯುವ ಉಪಕರಣವಾಗಿ ಬಳಕೆಯಾಗುತ್ತಿದ್ದೇನೆ ಎಂದು ಅರಿವಾಗುತ್ತಿತ್ತು. ಆದ್ದರಿಂದಲೇ ಅವನಿಂದ ಸಾಧ್ಯವಾದಷ್ಟೂ ಲಾಭ ಪಡೆಯುವುದಕ್ಕೆ ಅನುಕೂಲವಾಗುವಂತೆ ಮಠದ ಒಡೆಯರು ಅವನ ಬದುಕನ್ನು ತಿದ್ದಿಬಿಟ್ಟಿದ್ದರು. ಅಂದರೆ, ಅವನು ಒಂದಿಷ್ಟೂ ದೇಹಶ್ರಮದ ಕೆಲಸ ಮಾಡಬೇಕಾಗಿಯೇ ಇರಲಿಲ್ಲ. ಅವನಿಗೆ ಬೇಕಾದುದೆಲ್ಲ ದೊರೆಯುವಂತೆ ವ್ಯವಸ್ಥೆಮಾಡಿದ್ದರು. ಇದಕ್ಕೆ ಪ್ರತಿಯಾಗಿ ಅವನ ದರ್ಶನ ಕೋರಿ ಬಂದವರಿಗೆಲ್ಲ ದರ್ಶನನೀಡಿ ಆಶೀರ್ವಾದ ಮಾಡಬೇಕು ಅನ್ನುವುದಷ್ಟೇ ಅವರ ಬಯಕೆ. ಅವನಿಗೆ ಅನುಕೂಲವಾಗಲೆಂದು ದರ್ಶನಕ್ಕೆ ವಾರದ ಕೆಲವು ದಿನ ನಿಗದಿ ಮಾಡಿದ್ದರು. ಗಂಡಸು ಭಕ್ತರು ಕಾಯುವುದಕ್ಕೆ ಒಂದು ಕೋಣೆ, ಹೆಣ್ಣು ಭಕ್ತಾದಿಗಳ ಗುಂಪು ಒಟ್ಟಾಗಿ ಮೈಮೇಲೆ ಮುಗಿಬೀಳುವುದನ್ನು ತಪ್ಪಿಸಲು ಸರಳುಗಳ ಕಟಕಟೆ, ಅದರ ಹಿಂದೆ ನಿಂತು ಫಾದರ್ ಸೆರ್ಗಿಯಸ್ ಆಶೀರ್ವಾದಮಾಡುವ ವ್ಯವಸ್ಥೆ ಎಲ್ಲವೂ ರೂಪುಗೊಂಡವು. ಜನಕ್ಕೆ ತಮ್ಮನ್ನು ಕಾಣುವ ಅಗತ್ಯವಿದೆ, ಜನರ ಬಗ್ಗೆ ಪ್ರೀತಿ ಇರಬೇಕು ಎಂದು ಸ್ವತಃ ಏಸುವೇ ವಿಧಿಸಿರುವಾಗ ತಾವು ಜನಕ್ಕೆ ದರ್ಶನ ನೀಡದೆ ಹೋದರೆ ಅದು ಕ್ರೌರ್ಯವಾಗುತ್ತದೆ ಎಂಬ ಮಠದ ವಾದಕ್ಕೆ ಶರಣಾಗದೆ ಬೇರೆ ದಾರಿಯಿರಲಿಲ್ಲ. ಈ ಬಗೆಯ ಬದುಕಿಗೆ ಒಗ್ಗಿಕೊಂಡಷ್ಟೂ ತನ್ನೊಳಗಿನ ಅಂತರಂಗವನ್ನೆಲ್ಲ ಬಹಿರಂಗದ ಲೋಕವೇ ವ್ಯಾಪಿಸಿಕೊಳ್ಳುತ್ತಿದೆ, ಒಳಗಿನ ಜೀವ ಜಲ ಬತ್ತಿಹೋಗುತ್ತಿದೆ, ಮನುಷ್ಯರಿಗಾಗಿ ಬದುಕುತ್ತಿದ್ದೇನೆಯೇ ಹೊರತು ದೇವರಿಗಾಗಿ ಅಲ್ಲ ಅನ್ನುವ ಭಾವ ಮೂಡುತ್ತಿತ್ತು.

ಜನರು ಮಾಡುವ ತಪ್ಪುಗಳನ್ನು ಬೈದು ಸರಿದಾರಿ ತೋರಿಸುವುದಿರಲಿ, ಸುಮ್ಮನೆ ಆಶೀರ್ವಾದ ಮಾಡುವುದಿರಲಿ, ಅಥವಾ ಕಾಯಿಲೆ ಬಂದವರ ಪರವಾಗಿ ಪ್ರಾರ್ಥನೆಮಾಡುವುದಿರಲಿ, ಜನರ ಬದುಕಿನ ಬಗ್ಗೆ ಮಾರ್ಗದರ್ಶನಮಾಡುವುದೋ ಅಥವಾ ರೋಗನಿವಾರಣೆಯಾಯಿತೆಂದು, ಇಲ್ಲವೇ ತನ್ನ ಉಪದೇಶದಿಂದ ಲಾಭವಾಯಿತೆಂದು ಜನ ಹೊಗಳುವ ಮಾತು ಕೇಳಿಸಿಕೊಳ್ಳುವುದೋ, ಯಾವುದೇ ಇರಲಿ, ತನ್ನ ಪ್ರಯತ್ನಗಳ ಫಲಿತಾಂಶ ಏನಾಯಿತೆಂಬ ಬಗ್ಗೆ, ತನ್ನ ಪ್ರಭಾವ ಜನರ ಮೇಲೆ ಯಾವರೀತಿ ಆಗುತ್ತಿದೆ ಎಂಬ ಬಗ್ಗೆ ಆಸಕ್ತಿ ತೋರಿಸದೆ ಉದಾಸೀನವಾಗಿರಲು ಸಾಧ್ಯವಾಗುತ್ತಿರಲಿಲ್ಲ. ತಾನೊಂದು ಉರಿಯುತ್ತಿರುವ ದೀಪ, ಬೆಳಕಿನ ಪುಂಜ ಅನ್ನಿಸುತ್ತಿತ್ತು. ಈ ಭಾವ ದಟ್ಟವಾದಂತೆಲ್ಲ ತನ್ನೊಳಗೆ ಪ್ರಜ್ವಲಿಸುತ್ತಿದ್ದ ದೈವೀ ಸತ್ಯದ ಪ್ರಭೆ ಮಂಕಾಕುತ್ತಿದೆ ಅನ್ನಿಸುವ ಅನುಭವವಾಗುತ್ತಿತ್ತು. ನಾನು ಎಷ್ಟು ಕೆಲಸ ದೇವರಿಗಾಗಿ ಮಾಡುತ್ತಿದ್ದೇನೆ, ಎಷ್ಟು ಕೆಲಸ ಮನುಷ್ಯರಿಗಾಗಿ ಮಾಡುತ್ತಿದ್ದೇನೆ ಅನ್ನುವ ಪ್ರಶ್ನೆ ಹುಟ್ಟುತ್ತಿತ್ತು. ಈ ಪ್ರಶ್ನೆ ಸತತವಾಗಿ ಹಿಂಸೆಕೊಡುತ್ತಿತ್ತು. ಪ್ರಶ್ನೆಗೆ ಉತ್ತರಕೊಡುವುದಕ್ಕೆ ಅಸಮರ್ಥನಲ್ಲದಿದ್ದರೂ ದೊರೆಯುವ ಉತ್ತರವನ್ನು ಎದುರಿಸಲಾಗದೆ ಅಂಜಿಕೊಳ್ಳುತ್ತಿದ್ದ. 'ದೇವರಿಗಾಗಿ ಬದುಕುತ್ತಿದ್ದೆ, ಈಗ ಸೈತಾನ ಮನುಷ್ಯರಿಗಾಗಿ ದುಡಿಯುವಂತೆ ಮಾಡಿಬಿಟ್ಟಿದ್ದಾನೆ' ಅನ್ನುವುದು ಅವನ ಆತ್ಮಕ್ಕೆ ಗೊತ್ತಾಗಿತ್ತು. ಏಕೆಂದರೆ ಈ ಮೊದಲು ಅವನ ಏಕಾಂತ ಭಂಗವಾದರೆ ಸಹಿಸಲಾಗುತ್ತಿರಲಿಲ್ಲ; ಈಗ ಏಕಾಂತವೇ ಸಹಿಸಲು ಅಸಾಧ್ಯವೆನಿಸುತ್ತಿತ್ತು; ದರ್ಶನಕ್ಕೆ ಬರುವ ಜನಸಮುದಾಯ ಕಿರಿಕಿರಿ ಅನ್ನಿಸಿದರೂ ಮನಸ್ಸಿನ ಆಳದಲ್ಲಿ ಜನ ಬಂದಾಗ, ಅವರ ಹೊಗಳಿಕೆಯ ಮಾತು ಕಿವಿತುಂಬಿದಾಗ ಸಂತೋಷಪಡುವುದಕ್ಕೆ ಶುರುಮಾಡಿದ್ದ. ಎಲ್ಲಿಗಾದರೂ ಓಡಿಹೋಗಬೇಕೆಂಬ ಆಲೋಚನೆಯೂ ಅವನಿಗೊಮ್ಮೆ ಬಂದಿತ್ತು. ಹೇಗೆ ಹೋಗಬೇಕು ಅನ್ನುವ ವಿವರಗಳನ್ನೂ ಯೋಚನೆಮಾಡಿದ್ದ. ರೈತರು ಹಾಕಿಕೊಳ್ಳುವಂಥ ಅಂಗಿ, ಶರಾಯಿ, ಕೋಟು, ಕ್ಯಾಪುಗಳನ್ನು ಎತ್ತಿಟ್ಟುಕೊಂಡಿದ್ದ. 'ಬೇಡಿ ಬಂದವರಿಗೆ ಕೊಡಲು ಬೇಕು' ಎಂದು ಕೇಳಿದವರಿಗೆ ಸಮಾಧಾನ ಹೇಳಿದ್ದ. ಬಟ್ಟೆಗಳನ್ನು ತನ್ನ ಗುಹೆಯಂಥ ರೂಮಿನಲ್ಲಿ ತೆಗೆದಿಟ್ಟು, ತಲೆಗೂದಲನ್ನು ಹೇಗೆ ಚಿಕ್ಕದಾಗಿ ಕ್ಷೌರ ಮಾಡಿಸಿಕೊಳ್ಳಬೇಕು, ಹೇಗೆ ರೈಲು ಹತ್ತಿ ಒಂದು ಮುನ್ನೂರು ಮೈಲು ಹೋಗಿಬಿಡಬೇಕು, ಆಮೇಲೆ ರೈಲಿಳಿದು ಸುಮ್ಮನೆ ಹಳ್ಳಿಯಿಂದ ಹಳ್ಳಿಗೆ ಸಂಚರಿಸುತ್ತಾ ಭಿಕ್ಷೆ ಎತ್ತಿ ಬದುಕಬೇಕು ಎಂದೆಲ್ಲ ಯೋಚನೆಮಾಡಿದ್ದ. ವಯಸ್ಸಾಗಿ ಕೆಲಸ ಕಳೆದುಕೊಂಡು ಅಲೆಮಾರಿಯಾಗಿ ಬದುಕಿದ್ದ ಸೈನಿಕನೊಬ್ಬ ದರ್ಶನಕ್ಕೆ ಬಂದಾಗ 'ಹೇಗೆ ಭಿಕ್ಷೆ ಬೇಡುತ್ತಿಯ, ಜನ ಏನು ಹಾಕುತ್ತಾರೆ, ರಾತ್ರಿ ಎಲ್ಲಿ ಉಳಿಯುತ್ತೀ' ಎಂದೆಲ್ಲ ವಿಚಾರಿಸಿದ್ದ. ಮುದುಕ ಸೈನಿಕ ಯಾವ ಹಳ್ಳಿಯ ಜನ ಒಳ್ಳೆಯವರು, ಯಾರು ಎಂಥ ಊಟ ಹಾಕುತ್ತಾರೆ, ಎಲ್ಲೆಲ್ಲಿ ತನ್ನಂಥ ಅಲೆಮಾರಿಗಳು ರಾತ್ರಿ ಕಳೆಯಬಹುದು ಅನ್ನುವುದನ್ನೆಲ್ಲ ಹೇಳಿದ್ದ. ಫಾದರ್ ಸೆರ್ಗಿಯಸ್ ಆ ಮಾತುಗಳನ್ನೆಲ್ಲ ಗಮನವಿಟ್ಟು ಕೇಳಿಸಿಕೊಂಡು ನೆನಪಿನಲ್ಲಿಟ್ಟುಕೊಂಡಿದ್ದ. ಒಂದು ದಿನ ಸರುಹೊತ್ತಿನಲ್ಲಿ ಎಚ್ಚರವಾಗಿ, ಹೋಗಿಯೇ ಬಿಡಬೇಕು ಎಂದು ಬಲವಾಗಿ ಅನ್ನಿಸಿ, ಎತ್ತಿಟ್ಟಿದ್ದ ರೈತರ ಡ್ರೆಸ್ಸು ಕೂಡ ಹಾಕಿಕೊಂಡು ಸಿದ್ಧನಾದ. ಆದರೆ ಹೋಗಿಬಿಡುವುದು ಒಳ್ಳೆಯದೋ, ಇಲ್ಲಿಯೇ ಇರುವುದು ಒಳ್ಳೆಯದೋ ಎಂದು ನಿರ್ಣಯಿಸುವುದಕ್ಕೆ ಆಗಲಿಲ್ಲ. ಕೊಂಚ ಹೊತ್ತು ಕಳೆಯಿತು. ಮನಸ್ಸು ತಿಳಿಯಾಯಿತು. ಅಭ್ಯಾಸವಾಗಿದ್ದ ಬದುಕಿಗೇ ಶರಣಾದ. ಸೈತಾನನ ಇಚ್ಛೆಗೆ ತಲೆಬಾಗಿದ. ಎತ್ತಿಟ್ಟುಕೊಂಡಿದ್ದ ರೈತರ ಡ್ರೆಸ್ಸು ಒಂದೊಮ್ಮೆ ಅವನ ಮನಸ್ಸಿನಲ್ಲಿ ಸುಳಿದು ಹೋದ ಆಲೋಚನೆಯ ನೆನಪಾಗಿ ಹಾಗೆಯೇ ಉಳಿಯಿತು.
ದಿನ ದಿನವೂ ಅವನನ್ನು ಕಾಣಲು ಬರುವ ಜನ ಹೆಚ್ಚಾದರು. ಪ್ರಾರ್ಥನೆಗೆ, ಆತ್ಮದ ಶಕ್ತಿಯನ್ನು ಒಗ್ಗೂಡಿಸಿಕೊಳ್ಳುವುದಕ್ಕೆ ದೊರೆಯುವ ಸಮಯ ಕಡಮೆಯಾಗತೊಡಗಿತು. ಒಮ್ಮೊಮ್ಮೆ, ಮನಸ್ಸು ತಿಳಿಯಾಗಿದ್ದಾಗ ಹೀಗಂದುಕೊಳ್ಳುತ್ತಿದ್ದ:'ಇಲ್ಲೊಂದು ಜೀವನದಿ ಇತ್ತು. ಅಂತರಂಗದಲ್ಲಿ ಹುಟ್ಟಿ ನನ್ನೊಳಗನ್ನೆಲ್ಲ ತುಂಬಿ ಮೌನವಾಗಿ ಹರಿಯುತ್ತಿತ್ತು. ಬದುಕು ಅಂದರೆ ಅದು. ಅವಳು ಬರುವವರೆಗೆ ಹಾಗೇ ಇತ್ತು.' ಅವಳೀಗ ಮದರ್ ಆಗ್ನೆಸ್ ಆಗಿದ್ದಳು. ಅಂದಿನ ರಾತ್ರಿಯನ್ನು ನೆನೆದರೆ ಈಗಲೂ ಅವನ ಮೈ ನವಿರೇಳುತ್ತಿತ್ತು. 'ನನ್ನನ್ನು ಮರುಳು ಮಾಡುವುದಕ್ಕೇ ಬಂದಳು. ಶುದ್ಧ ಜೀವಜಲದ ರುಚಿ ನೋಡಿದಳು. ಈಗ, ತೊರೆಯ ನೀರೆಲ್ಲ ಕೆಸರಾಗಿದೆ. ಬಾಯಾರಿದವರು ಬಂದು, ಈ ತೊರೆಯ ನೀರು ಕುಡಿಯಲು ನೂಕು ನುಗ್ಗಲು ಮಾಡಿ, ತಳ್ಳಾಡಿ, ರಾಡಿ ಎದ್ದುಹೋಗಿದೆ. ಅವರ ಕಾಲ್ತುಳಿತಕ್ಕೆ ಸಿಕ್ಕಿ ಕೆಸರು ಕೆಸರಾಗಿಬಿಟ್ಟಿದೆ ನನ್ನ ಜೀವನದಿ' ಅಂದುಕೊಳ್ಳುತ್ತಿದ್ದ.
ಅಪರೂಪಕ್ಕೊಮ್ಮೆ ಹೀಗಂದುಕೊಳ್ಳುತ್ತಿದ್ದ. ಸಾಮಾನ್ಯವಾಗಿ ಅವನ ಮನಸ್ಸಿಗೆ ಆಯಾಸವಾಗಿರುತ್ತಿತ್ತು. ಆಯಾಸಗೊಂಡ ಮನಸ್ಸಿನ ಬಗ್ಗೆ ತನಗೆ ತಾನೇ ಅಯ್ಯೋ ಎಂದು ಮರುಕಪಟ್ಟುಕೊಳ್ಳುತ್ತಾ ಇರುತ್ತಿದ್ದ.

ವಸಂತ ಋತು ಬಂದಿತ್ತು. ಮಿಡ್‌ ಪೆಂಟಕೋಸ್ಟಲ್* ಹಬ್ಬದ ಹಿಂದಿನ ದಿನ ಅದು. ಫಾದರ್ ಸೆರ್ಗಿಯಸ್ ತನ್ನ ಗುಹೆಯೊಳಗಿನ ಚರ್ಚಿನಲ್ಲಿ ಸಂಜೆಯ ಪ್ರಾರ್ಥನೆ ನೆರವೇರಿಸುತ್ತಿದ್ದ. ಆ ಚರ್ಚು ಹಿಡಿಯುವಷ್ಟೂ ಜನ ತುಂಬಿದ್ದರು. ಸುಮಾರು ಇಪ್ಪತ್ತು ಜನ ಸೇರಬಹುದಾಗಿತ್ತು. ಶ್ರೀಮಂತರು, ವ್ಯಾಪಾರಿಗಳು, ಮಧ್ಯಮ ವರ್ಗದ ಸ್ಥಿತಿವಂತರು ಸೇರಿದ್ದರು.
ಯಾರು ಬೇಕಾದರೂ ಪ್ರಾರ್ಥನೆಯಲ್ಲಿ ಭಾಗವಹಿಸಬಹುದೆಂದು ಫಾದರ್ ಸೆರ್ಗಿಯಸ್ ಹೇಳಿದ್ದರೂ ಅವನ ಸಹಾಯಕನಾಗಿದ್ದ ಸಂನ್ಯಾಸಿ ಮತ್ತು ಮಠದವರು ಸಹಾಯಕ್ಕೆಂದು ಪ್ರತಿದಿನವೂ ಕಳಿಸುತ್ತಿದ್ದ ವ್ಯಕ್ತಿ ಬಂದ ಜನರಲ್ಲಿ ಕೆಲವರನ್ನು ಮಾತ್ರ ಆಯ್ದು ಪ್ರವೇಶನೀಡುತ್ತಿದ್ದರು. ಗುಹೆಯ ಹೊರಗೆ ಸುಮಾರು ಎಂಬತ್ತು ಜನ ಯಾತ್ರಾರ್ಥಿಗಳು, ರೈತರು, ವಿಶೇಷವಾಗಿ ರೈತ ಹೆಂಗಸರು, ಫಾದರ್ ಸೆರ್ಗಿಯಸ್‌ನ ದರ್ಶನ, ಆಶೀರ್ವಾದಗಳಿಗಾಗಿ ಕಾದುನಿಂತಿದ್ದರು. ಪೂಜಾ ಕೈಂಕರ್ಯ ಮುಂದುವರೆಯುತ್ತಿತ್ತು. ಫಾದರ್ ಸೆರ್ಗಿಯಸ್ ಕೀರ್ತನೆಯೊಂದನನ್ನು ಹಾಡುತ್ತಾ ಗುಹೆಯಲ್ಲಿ ಹಿಂದೆ ಇದ್ದ ಹಿರಿಯ ಸಂತನ ಸಮಾಧಿಯ ಬಳಿಗೆ ಸಾಗಿದ. ಇದ್ದಕ್ಕಿದ್ದಂತೆ ಎಚ್ಚರ ತಪ್ಪಿದಂತಾಗಿ ಜೋಲಿ ಹೊಡೆದ. ಅವನ ಹಿಂದೆ ಹೆಜ್ಜೆ ಹಾಕುತ್ತಿದ್ದ ಒಬ್ಬ ವ್ಯಾಪಾರಿ ಮತ್ತು ಡೀಕನ್* ಆಗಿ ಕೆಲಸ ನಿರ್ವಹಿಸುತ್ತಿದ್ದ ಸಂನ್ಯಾಸಿಯೊಬ್ಬ ಅವನ್ನು ಹಿಡಿದುಕೊಳ್ಳದಿದ್ದರೆ ಬಿದ್ದೇ ಬಿಡುತ್ತಿದ್ದ.
'ಏನಾಯಿತು? ಫಾದರ್ ಸೆರ್ಗಿಯಸ್ ಏನಾಯಿತು? ಅಯ್ಯೋ ದೇವರೇ! ಭಗವಂತಾ, ಹೇಗೆ ಬಿಳಿಚಿಕೊಂಡುಬಿಟ್ಟಿದ್ದಾರೆ!' ಅಲ್ಲಿ ಸೇರಿದ್ದ ಹೆಂಗಸರು ಉದ್ಗರಿಸಿದರು.
ಫಾದರ್ ಸೆರ್ಗಿಯಸ್ ಬೇಗನೆ ಸುದಾರಿಸಿಕೊಂಡ. ಮುಖ ಬಿಳಿಚಿಕೊಂಡಿದ್ದರೂ ವ್ಯಾಪಾರಿಗೂ ಡೀಕನ್ನನಿಗೂ ಪಕ್ಕಕ್ಕೆ ಸರಿಯುವಂತೆ ಸನ್ನೆಮಾಡಿ ಕೈಂಕರ್ಯದ ಮಂತ್ರಗಳನ್ನು ಹೇಳತೊಡಗಿದ. ಡೀಕನ್ ಆಗಿದ್ದ ಫಾದರ್ ಸೆರಾಫಿಮ್ ಮತ್ತು ಅಕೊಲೈಟ್‌ಗಳು*, ಆಶ್ರಮದ ಸಮೀಪದಲ್ಲೇ ಇದ್ದು ಫಾದರ್ ಸೆರ್ಗಿಯಸ್‌ಗೆ ಸಹಾಯಮಾಡುತ್ತಿದ್ದ ಸೋಫ್ಯಾ ಇವಾನೊವ್ನಾ ಎಲ್ಲರೂ ಸೇರಿ ಪೂಜಾಕೈಂಕರ್ಯವನ್ನು ನಿಲ್ಲಿಸಿಬಿಡುವಂತೆ ಕೋರಿದರು.
'ಏನೂ ಆಗಿಲ್ಲ, ಏನೂ ಆಗಿಲ್ಲ,' ಫಾದರ್ ಸೆರ್ಗಿಯಸ್ ಗೊಣಗಿದ. ದಟ್ಟವಾಗಿ ಬೆಳೆದ ಮೀಸೆಗಳ ಹಿಂದೆ ಅವನ ತುಟಿಗಳ ಮೇಲೆ ಮುಗುಳ್ನಗೆಯ ನೆರಳೊಂದು ಹಾಯ್ದು ಹೋಯಿತು. 'ಪೂಜಾ ಕೈಂಕರ್ಯ ನಿಲ್ಲಿಸಬೇಡಿ' ಅಂದ. 'ಸಂತರು ಯಾವಾಗಲೂ ಹೀಗೆಯೇ ಮಾಡುತ್ತಾರೆ' ಎಂದು ತನ್ನೊಳಗೇ ಅಂದುಕೊಂಡ.
'ದೇವಾಂಶ ಸಂಭೂತರು!' 'ಮಹಾತ್ಮರು!' ಬೆನ್ನ ಹಿಂದೆ ಸೋಫ್ಯಾ ಇವಾನೊವ್ನಾಳ ಧ್ವನಿ ಮತ್ತೆ ವ್ಯಾಪಾರಿಯ ಧ್ವನಿ ಕೇಳಿಸಿತು. ಯಾರ ಒತ್ತಾಯಕ್ಕೂ ಮಣಿಯದೆ ಫಾದರ್ ಸೆರ್ಗಿಯಸ್ ಕೈಂಕರ್ಯವನ್ನು ಮುಂದುವರೆಸಿದ. ನಂತರ ಎಲ್ಲರೂ ಪುಟ್ಟ ಗುಂಪಾಗಿ ಕಿರು ಓಣಿಯಲ್ಲಿ ಅವನ ಹಿಂದೆಯೇ ಸಾಗಿ ಚರ್ಚಿಗೆ ಬಂದರು. ಅಲ್ಲಿ ಫಾದರ್ ಸೆರ್ಗಿಯಸ್ ಸಂಜೆಯ ಪ್ರಾರ್ಥನೆಗಳನ್ನು ಕೊಂಚ ಸಂಕ್ಷಿಪ್ತಗೊಳಿಸಿ ಮುಗಿಸಿಬಿಟ್ಟ.
ಪೂಜೆ ಮುಗಿಸಿದ ಕೂಡಲೆ ಫಾದರ್ ಸೆರ್ಗಿಯಸ್ ಅಲ್ಲಿ ನೆರೆದಿದ್ದವರನ್ನೆಲ್ಲ ಆಶೀರ್ವದಿಸಿ ಹೊರಟುಬಿಟ್ಟ. ಗುಹೆಯ ಮುಂಭಾಗದಲ್ಲಿದ್ದ ಎಲ್ಮ್‌ ಮರದ ಕೆಳಗಿನ ಬೆಂಚಿನ ಮೇಲೆ ಕುಳಿತ. ಕೊಂಚ ವಿಶ್ರಮಿಸಿಕೊಳ್ಳಬೇಕು, ಸ್ವಚ್ಛ ಗಾಳಿ ಉಸಿರಾಡಬೇಕು ಅನ್ನಿಸಿತ್ತು. ಆದರೆ ಅವನು ಚರ್ಚಿನಿಂದ ಹೊರಟ ಕೂಡಲೇ ಆಶೀರ್ವಾದ ಕೋರುವ, ಸಲಹೆ ಸೂಚನೆ ಬಯಸುವ, ಉಪದೇಶ ಕೇಳಲು ಆಶಿಸುವ, ಸಹಾಯ ಯಾಚಿಸುವ ಜನರ ಗುಂಪು ಅವನ ಹಿಂದೆಯೇ ಸಾಗಿ ಬಂದಿತು. ಒಂದು ತೀರ್ಥಕ್ಷೇತ್ರದಿಂದ ಮತ್ತೊಂದಕ್ಕೆ, ಒಬ್ಬ ಗುರುವಿನ ನಂತರ ಮತ್ತೊಬ್ಬ ಗುರುವಿನ ದರ್ಶನಕ್ಕೆ ಹಾತೊರೆಯುವ ಜನರ ಗುಂಪು, ಯಾರೇ ಗುರು ಕಂಡರೂ, ಯಾವುದೇ ಚರ್ಚು ಕಂಡರೂ ಕಣ್ತುಂಬಿ ಕಂಬನಿಸುರಿಸುವ ಭಕ್ತಾದಿಗಳ ಗುಂಪು--ಇವರು ಫಾದರ್ ಸೆರ್ಗಿಯಸ್‌ಗೆ ಚೆನ್ನಾಗಿ ಗೊತ್ತಿದ್ದರು. ತೀರ ಸಾಮಾನ್ಯರು, ಧಾರ್ಮಿಕತೆ ಕೊಂಚವೂ ಇಲ್ಲದವರು, ಕ್ರೂರಹೃದಯಿಗಳಾದ ಸಂಪ್ರದಾಯಸ್ಥರು ಅವರು. ಸೈನ್ಯದಿಂದ ಹೊರಹಾಕಿದ ಸೈನಿಕರು, ಒಂದು ಕಡೆಯಲ್ಲಿ ನೆಲೆಯಾಗಿ ನಿಂತು ಗೊತ್ತಿಲ್ಲದವರು, ಬಡತನದಲ್ಲಿ ಕಂಗಾಲಾದವರು, ಅಸಂಖ್ಯಾತ ಮುದಿ ಕುಡುಕರು, ಒಂದು ಹೊತ್ತಿನ ಊಟಕ್ಕಾಗಿ ಮಠದಿಂದ ಮಠಕ್ಕೆ ಅಲೆಯುವವರು, ಅವರೂ ಇದ್ದರು. ಮತ್ತೆ ರೋಗವಾಸಿಮಾಡಬೇಕೆಂದೋ, ತಮ್ಮ ಜಮೀನು ಆಸ್ತಿಯ ವಿಚಾರವಾಗಿ, ಮಗಳ ಮದುವೆ, ಅಂಗಡಿಯ ಬಾಡಿಗೆ ಲೆಕ್ಕಾಚಾರ, ಮನೆ ಕೊಳ್ಳುವುದು ಇಂಥ ವಿಚಾರಗಳ ಬಗ್ಗೆ ಲೌಕಿಕ ಸಲಹೆ ಬಯಸಿಯೋ ಬಂದ ಮೂರ್ಖ ಒರಟು ರೈತರೂ, ಹೊರ ಸಂಬಂಧದಿಂದ ಪಡೆದ ಮಗುವನ್ನು ಏನುಮಾಡಬೇಕೆಂದೋ ಮಗುವನ್ನು ಕೆಟ್ಟದಾಗಿ ನೋಡಿಕೊಳ್ಳುತ್ತೇನೆ, ಈ ಪಾಪದ ಪರಿಹಾರ ಹೇಗೆ ಎಂದು ಕೇಳುವ ಹೆಂಗಸರೂ ಇದ್ದರು. ಇವೆಲ್ಲ ದೀರ್ಘಕಾಲದಿಂದ ಪರಿಚಿತವಾದ ವಿಚಾರಗಳೇ ಆಗಿದ್ದು ಫಾದರ್ ಸೆರ್ಗಿಯಸ್‌ಗೆ ಯಾವ ಆಸಕ್ತಿಯೂ ಹುಟ್ಟುತ್ತಿರಲಿಲ್ಲ. ಈ ಜನರಿಂದ ಹೊಸತೇನೂ ಕೇಳಲಾರೆ, ಇವರಿಂದ ನನ್ನ ಧಾರ್ಮಿಕ ಭಾವನೆಗೆ ಯಾವ ಉಪಯೋಗವೂ ಇಲ್ಲ ಅನ್ನಿಸುತ್ತಿತ್ತು. ಆದರೂ ಇಂಥ ಜನರನ್ನು ನೋಡುವುದು, ಅವರ ನಡುವೆ ಇರುವುದು, ಒಂದು ಕ್ಷಣದ ತನ್ನ ದರ್ಶನ, ತಾನಾಡುವ ಒಂದು ಮಾತು, ತನ್ನ ಒಂದು ಆಶೀರ್ವಾದವನ್ನು ಅಪೂರ್ವ ಆಸ್ತಿ ಎಂಬಂತೆ ಮನಸ್ಸಿನಲ್ಲಿ ಜೋಪಾನವಾಗಿ ಕಾದಿಟ್ಟುಕೊಳ್ಳುವ ಜನರ ಧನ್ಯತೆಯನ್ನು ಕಂಡು ಸುಖಿಸುದು ಇಷ್ಟವಾಗುತ್ತಿತ್ತು. ಜನ ಅವನ ಮನಸ್ಸಿಗೆ ಕಿರಿಕಿರಿ ಹುಟ್ಟಿಸಿದರೂ ಅವನ ಸುಖದ ಮೂಲವೂ ಆಗಿದ್ದರು. 'ಫಾದರ್ ಸೆರ್ಗಿಯಸ್ ಆಯಾಸಗೊಂಡಿದ್ದಾರೆ, ಹಿಂದೆ ಸರಿಯಿರಿ' ಎಂದು ಫಾದರ್ ಸೆರಾಫಿಮ್ ಜನರ ಗುಂಪನ್ನು ಹಿಂದಕ್ಕೆ ದೂಡತೊಡಗಿದ. ಆದರೆ ಫಾದರ್ ಸೆರ್ಗಿಯಸ್ 'ಬರಲಿ ಬಿಡಿ' ಅಂದ. ಬೈಬಲ್ಲಿನಲ್ಲಿ ಬರುವ ಮಾತು, 'ಅವರು ನನ್ನತ್ತ ಬಾರದಂತೆ ತಡೆಯಬೇಡಿ' ಅನ್ನುವುದು, ಅವನ ಮನಸ್ಸಿಗೆ ಬಂದಿತು. ತನ್ನನ್ನೆ ತಾನು ಮೆಚ್ಚಿಕೊಳ್ಳುತ್ತಾ, ತನ್ನ ಸುತ್ತ ದೈವಿಕ ಪ್ರಭೆ ಹರಡುತ್ತಿದೆ ಅಂದುಕೊಂಡ.
ಎದ್ದು, ನಿಧಾನವಾಗಿ ಹೋಗಿ ಕಬ್ಬಿಣದ ಸರಳುಗಳ ಕಟಕಟೆಯ ಹಿಂದೆ ನಿಂತುಕೊಂಡ. ಎಲ್ಲರಿಗೂ ಆಶೀರ್ವಾದಮಾಡಿದ. ಜನರ ಪ್ರಶ್ನೆಗಳಿಗೆ ಉತ್ತರ ಹೇಳತೊಡಗಿದ. ಅವನ ಧ್ವನಿ ಬಹಳ ಕ್ಷೀಣವಾಗಿತ್ತು. ತನ್ನ ಬಗ್ಗೆ ತಾನೇ ಅಯ್ಯೋ ಎಂದುಕೊಂಡ. ನೆರೆದಿದ್ದ ಎಲ್ಲರನ್ನೂ ಮಾತನಾಡಿಸುವ ಇಚ್ಛೆ ಇದ್ದರೂ ಸಾಧ್ಯವಾಗಲಿಲ್ಲ. ಕಣ್ಣು ಕತ್ತಲಿಟ್ಟಂತಾಯಿತು. ತಡವರಿಸುತ್ತಾ ಕಬ್ಬಿಣದ ಸರಳನ್ನು ಹಿಡಿದುಕೊಂಡ. ರಕ್ತ ತಲೆಗೆ ನುಗ್ಗಿ ಬರುತ್ತಿದೆ ಅನ್ನಿಸಿತು. ಮುಖ ಬಿಳಿಚಿಕೊಂಡಿತು, ಮತ್ತೆ ಕೆಂಪಾಯಿತು.
'ನಾಳೆ ಬನ್ನಿ. ಇವತ್ತು ಇನ್ನೇನೂ ಮಾಡಲಾರೆ' ಅನ್ನುತ್ತಾ ಎಲ್ಲರಿಗೂ ಒಟ್ಟಾಗಿ ಆಶೀರ್ವಾದಮಾಡಿ ಹೊರಟ. ವ್ಯಾಪಾರಿಯೊಬ್ಬ ಅವನ ಕೈ ಹಿಡಿದು ಆಸರೆಯಾಗಿ ಬೆಂಚಿನವರೆಗೂ ನಿಧಾನವಾಗಿ ಕರೆದುಕೊಂಡು ಹೋಗಿ ಕುಳ್ಳಿರಿಸಿದ.
'ಫಾದರ್! ಫಾದರ್! ದಯವಿಟ್ಟು ನಮ್ಮನ್ನು ಬಿಟ್ಟುಹೋಗಬೇಡಿ! ನೀವಿಲ್ಲದೆ ಬದುಕಲಾರೆವು!' ಬಗೆ ಬಗೆಯ ಮಾತುಗಳು ಜನರ ಗುಂಪಿನಿಂದ ಕೇಳಿಬಂದವು.
ಫಾದರ್ ಸೆರ್ಗಿಯಸ್ಸನನ್ನು ಎಲ್ಮ್‌ ಮರದ ಕೆಳಗೆ ಕುಳ್ಳಿರಿಸಿದ ವ್ಯಾಪಾರಿಯು ತಾನೇ ಸ್ವತಃ ಪೋಲೀಸು ಕರ್ತವ್ಯಗಳನ್ನು ವಹಿಸಿಕೊಂಡು ಜನರ ಗುಂಪನ್ನು ಚದುರಿಸುವ ಕೆಲಸದಲ್ಲಿ ಅತ್ಯಂತ ಉತ್ಸಾಹದಿಂದ ತೊಡಗಿಕೊಂಡ. ಫಾದರ್ ಸೆರ್ಗಿಯಸ್‌ಗೆ ಕೇಳಿಸಬಾರದೆಂದು ತಗ್ಗಿದ ದನಿಯಲ್ಲಿ ಮಾತನಾಡುತ್ತಿದ್ದರೂ ಮಾತಿನಲ್ಲಿ ಕಾಠಿಣ್ಯ, ಕೋಪ ತುಂಬಿದ್ದವು.
'ಹೊರಡಿ, ಹೊರಡಿ! ಅವರು ಆಶೀರ್ವಾದ ಮಾಡಿದ್ದಾಯಿತಲ್ಲ, ಇನ್ನೇನು? ಹೋಗ್ತಾ ಇರಬೇಕು. ಇಲ್ಲಾ ಅಂದರೆ ಕತ್ತು ಹಿಡಿದು ಆಚೆಗೆ ದಬ್‌ತೇನೆ! ಅಯ್ಯಾ, ನೀನು, ಅಲ್ಲಿ ನಿಂತುಕೊಂಡು ಏನು ಮಾಡುತ್ತೀ ಹೊರಡು! ಏಯ್ ಹರಕಲು ಚಪ್ಪಲಿ ಮುದುಕೀ, ಹೋಗುತ್ತೀಯೋ ಇಲ್ಲವೋ! ಹೋಗಿ, ಹೋಗಿ! ಎಲ್ಲಿಗೆ ನುಗ್ಗುತ್ತಾ ಇದೀರಯ್ಯಾ? ಎಲ್ಲಾ ಮುಗೀತು, ಹೇಳಿದ್ದು ಕೇಳಲಿಲ್ಲವೇ? ದೇವರ ಇಚ್ಛೆ ಇದ್ದರೆ ನಾಳೆ ದರ್ಶನ ಕೊಡುತ್ತಾರೆ, ಇವತ್ತು ಮುಗೀತು!'
'ಫಾದರ್! ಒಂದೇ ಒಂದು ಸಾರಿ ನಿಮ್ಮ ಮುಖ ಕಣ್ಣುತುಂಬ ನೋಡಿ ಹೋಗುತ್ತೀನಿ' ಅಂದಳು ಮುದುಕಿ.
'ನೋಡಬೇಕಾ! ತೋರಿಸುತ್ತೇನೆ, ಇರು! ಎಲ್ಲಿಗೆ ನುಗ್ಗುತ್ತೀ ಮುದುಕೀ?'
ವ್ಯಾಪಾರಿ ಬಹಳ ಕಠಿಣವಾಗಿ ವರ್ತಿಸುತ್ತಿದ್ದಾನೆ ಎಂದು ಫಾದರ್ ಸೆರ್ಗಿಯಸ್ಸನಿಗೆ ತಿಳಿಯಿತು. ಜನಗಳನ್ನು ಓಡಿಸಬೇಡಿ ಎಂದು ಕುಗ್ಗಿದ ದನಿಯಲ್ಲಿ ಸಹಾಯಕನಿಗೆ ಹೇಳಿದ. ಏನೇ ಹೇಳಿದರೂ ವ್ಯಾಪಾರಿ ಜನರನ್ನೆಲ್ಲ ಕಳಿಸಿಯೇ ಕಳಿಸುತ್ತಾನೆ ಎಂದೂ ಅವನಿಗೆ ಗೊತ್ತಿತ್ತು. ಒಬ್ಬನೇ ಇರಬೇಕು, ವಿಶ್ರಾಂತಿ ಪಡೆಯಬೇಕು ಅನ್ನಿಸಿತ್ತು. ಆದರೂ ತನ್ನ ಮಾತು ಬೀರುವ ಪ್ರಭಾವಕ್ಕಾಗಿ ಸಹಾಯಕನ ಕೈಯಲ್ಲಿ ಹಾಗೆ ಹೇಳಿ ಕಳಿಸಿದ.
(ಮುಂದುವರೆಯುವುದು)
Pentecostal: ಪೆಂಟಕೋಸ್ಟ್*- ಜ್ಯೂಗಳಲ್ಲಿ ಎರಡನೆಯ ದಿನದ ಪಾಸ್ ಓವರ್ ಆದಮೇಲೆ ಐವತ್ತು ದಿನಗಳ ನಂತರ ಬರುವ ಹಬ್ಬ; ಕ್ರಿಶ್ಚಿಯನ್ ಚರ್ಚಿನ ಪ್ರಕಾರ ಈಸ್ಟರ್ ನಂತರ ಬರುವ ಏಳನೆಯ ಭಾನುವಾರ; ಪೆಂಟಕೋಸ್ಟಲ್ ಅನ್ನುವುದು ಒಂದು ಧಾರ್ಮಿಕ ಗುಂಪು, ದೇವರ ಕೊಡುಗೆಯನ್ನು, ವಿಶೇಷವಾಗಿ ಕಾಯಿಲೆಗಳನ್ನು ವಾಸಿಮಾಡುವ ಶಕ್ತಿ ನೀದಿರುವುದನ್ನು ಕೃತಜ್ಞತೆಯಿಂದ ಸ್ಮರಿಸುವ ಹಬ್ಬ.
ಡೀಕನ್*- ಪ್ರೀಸ್ಟ್ ಅಲ್ಲದಿದ್ದರೂ ಚರ್ಚಿನ ಕಾರ್ಯಗಳಲ್ಲಿ ಸಹಾಯಮಾಡುವ ವ್ಯಕ್ತಿ.
ಅಕೊಲೈಟ್*- ಚರ್ಚಿನ ಪೂಜಾಕಾರ್ಯಗಳಲ್ಲಿ ಸಹಾಯಕರಾಗಿರುವವರು.

Rating
No votes yet