ಫಾದರ್ ಸೆರ್ಗಿಯಸ್ ಅಧ್ಯಾಯ ಮೂರು

ಫಾದರ್ ಸೆರ್ಗಿಯಸ್ ಅಧ್ಯಾಯ ಮೂರು

ಮೂರು


ಇತರರ ಪರವಾಗಿ ಮಾತೆ ಮೇರಿಯನ್ನು ಪ್ರಾರ್ಥಿಸುವ ಹಬ್ಬದ ದಿನ ಸ್ಟೆಪಾನ್ ಮಠಕ್ಕೆ ಸೇರಿಕೊಂಡ. ಆ ಮಠದ ಹಿರಿಯ ಸನ್ಯಾಸಿ ಹುಟ್ಟಿನಿಂದ ಉನ್ನತ ವರ್ಗಕ್ಕೆ ಸೇರಿದವನು, ವಿದ್ವಾಂಸ, ಲೇಖಕ ಮತ್ತು ಗುರುಸ್ಥಾನ*ದಲ್ಲಿದ್ದವನು. ವಲಾಛಿಯಾ* ದಿಂದ ಬಂದ ಸನ್ಯಾಸಿಗಳ ಪರಂಪರೆಗೆ ಸೇರಿದವನು. ಈ ಸನ್ಯಾಸಿಗಳು ಗುರುಗಳಿಗೆ ಅತೀವ ನಿಷ್ಠೆಯಿಂದ ಇದ್ದು ತಮ್ಮ ಗುರುಪರಂಪರೆಯನ್ನು ಸತತವಾಗಿ ಮುಂದುವರೆಸಿಕೊಂಡು ಬಂದವರಾಗಿದ್ದರು. ಈ ಮಠದ ಗುರುವು ಪಾಸ್ಸಿ ವೆಲಿಚ್ಕೊವ್ಸ್‌ಕಿಯ ಶಿಷ್ಯನಾದ ಲಿಯೊನಿಡ್‌ನ ಶಿಷ್ಯನಾದ ಮಾಕಾರಿಯಸ್‌ನ ಶಿಷ್ಯನಾದ, ಪ್ರಸಿದ್ಧ ಗುರು ಆಂಬ್ರೋಸನ ಶಿಷ್ಯನಾಗಿದ್ದ. ಈ ಅಬಾಟನಿಗೆ ಶರಣಾಗಿ ಸ್ಟೆಪಾನ್ ಅವನನ್ನು ತನ್ನ ಮಾರ್ಗದರ್ಶಕ ಗುರು ಎಂದು ಒಪ್ಪಿಕೊಂಡ.

ಮಠಕ್ಕೆ ಸೇರಿದ್ದರಿಂದ ತನ್ನ ಬದುಕು ಮಿಕ್ಕ ಲೌಕಿಕರಿಗಿಂತ ಮಿಗಿಲು ಎಂಬ ಭಾವ ಸ್ಟೆಪಾನ್ಸ್‌ಕಿಯಲ್ಲಿ ಮೂಡಿತ್ತು. ಕೈಗೆತ್ತಿಕೊಂಡ ಎಲ್ಲ ಕಾರ್ಯಗಳಲ್ಲಿ ಪರಿಪೂರ್ಣತೆಯನ್ನು ಸಾಧಿಸಬೇಕೆಂಬ ಹಂಬಲ ಈಗ ಅಂತರಂಗದ ಮತ್ತು ಬಹಿರಂಗದ ಪರಿಪೂರ್ಣತೆಯನ್ನು ಸಾಧಿಸುವ ಛಲದ ರೂಪತಳೆದಿತ್ತು. ಅವನು ಸೈನಿಕನಾಗಿದ್ದಾಗ ಯಾರೂ ನನ್ನತ್ತ ಬೆಟ್ಟು ತೋರಿಸದಿದ್ದರೆ ಸಾಕು ಅಂದುಕೊಳ್ಳುವ ಅಧಿಕಾರಿಯಷ್ಟೇ ಆಗಿರಲಿಲ್ಲ. ಕರ್ತವ್ಯದ ಪರಿಧಿಯನ್ನು ವಿಸ್ತರಿಸಿಕೊಂಡು ಬೇರೆಯ ಜವಾಬ್ದಾರಿಗಳನ್ನೂ ನಿರ್ವಹಿಸುತ್ತಾ ಇತರರಿಗೆ ಮಾದರಿಯಾಗಿದ್ದ ಹಾಗೆಯೇ ಈಗ ಪರಿಪೂರ್ಣ ಸನ್ಯಾಸಿಯಾಗಲು ಬಯಸಿದ. ಕಠಿಣ ದುಡಿಮೆ, ಚಾಪಲ್ಯಗಳ ನಿಯಂತ್ರಣ, ವಿಧೇಯತೆ, ವಿನಯಶೀಲತೆ ಮತ್ತು ಕಾರ್ಯಗಳಲ್ಲೂ ಆಲೋಚನೆಗಳಲ್ಲೂ ಪರಿಶುದ್ಧತೆಗಳನ್ನು ಸಾಧಿಸುವುದಕ್ಕೆ ನಿರಂತರವಾಗಿ ಶ್ರಮಿಸುತ್ತಿದ್ದ. ಅದರಲ್ಲೂ ವಿಧೇಯತೆ ಎಂಬ ಗುಣ, ಅಥವ ಸದ್ಗುಣ ಅವನಲ್ಲಿರದಿದ್ದರೆ ಮಠದ ಬದುಕು ಸಹ್ಯವೂ ಸುಲಭವೂ ಆಗುತ್ತಲೇ ಇರಲಿಲ್ಲ.

ರಾಜಧಾನಿಗೆ ಸಮೀಪದಲ್ಲಿದ್ದ, ಅತಿಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿಕೊಡುತ್ತಿದ್ದ ಆ ಮಠದಲ್ಲಿ ಸನ್ಯಾಸಿಯಾಗಿದ್ದುಕೊಂಡು ಪಾಲಿಸಬೇಕಾಗಿದ್ದ ನಿಯಮಗಳು ಇಷ್ಟವಾಗಿರಲಿಲ್ಲ. ಮನಸ್ಸನ್ನು ಕದಡುವ ಪ್ರಲೋಭನೆಗಳೂ ಹೇರಳವಾಗಿದ್ದವು. ವಿಧೇಯತೆಯ ಗುಣದ ಮೂಲಕ ಈ ಪ್ರಲೋಭನೆಗಳನ್ನು ಸ್ಟೆಪಾನ್ ಗೆದ್ದ. ‘ವಿಚಾರಮಾಡುವುದು, ಪ್ರಶ್ನೆಮಾಡುವುದು ನನ್ನ ಕೆಲಸವಲ್ಲ. ನನಗೆ ವಹಿಸಿದ ಕರ್ತವ್ಯಗಳನ್ನು, ಪವಿತ್ರ ವಸ್ತುಗಳ ಪಕ್ಕದಲ್ಲಿ ನಿಂತಿರುವುದೇ ಇರಬಹುದು, ಪ್ರಾರ್ಥನೆ ಹಾಡುವುದೇ ಇರಬಹುದು, ಅಥವಾ ಮಠದ ಗೆಸ್ಟ್‌ಹೌಸಿನ ಲೆಕ್ಕ ಬರೆಯುವುದೇ ಇರಬಹುದು, ನಿಷ್ಠೆಯಿಂದ ಮಾಡುವುದಷ್ಟೇ ನನ್ನ ಪಾಲಿಗೆ ಬಂದದ್ದು’ ಎಂಬ ತಿಳಿವಳಿಕೆ ಅವನಲ್ಲಿ ಮೂಡಿತ್ತು. ಗುರುವಿಗೆ ನಿಷ್ಠನಾಗಿರಬೇಕು ಎಂಬ ಎಚ್ಚರವು ಮನಸ್ಸಿನಲ್ಲಿ ಮೂಡುತ್ತಿದ್ದ ಯಾವುದೇ ಅನುಮಾನವನ್ನು ಚಿವುಟಿಹಾಕುತ್ತಿತ್ತು. ಹಾಗಿರದಿದ್ದರೆ ಚರ್ಚಿನಲ್ಲಿ ನಡೆಯುತ್ತಿದ್ದ ಸುದೀರ್ಘವಾದ ಪ್ರಾರ್ಥನೆಯ ವಿಧಿ ಬೋರು ಹೊಡೆಸಿಬಿಡುತ್ತಿತ್ತು. ಚರ್ಚಿಗೆ ಹೊತ್ತುಗೊತ್ತಿಲ್ಲದೆ ಬಂದು ಹೋಗುತ್ತಿದ್ದ ಜನರ ಗದ್ದಲ, ಉಳಿದ ಸನ್ಯಾಸಿಗಳ ದುರ್ಗುಣಗಳು ಇವೆಲ್ಲ ಅವನ ಮನಸ್ಸನ್ನು ಕದಡಿಬಿಡುತ್ತಿದ್ದವು. ವಿಧೇಯತೆಯ ಕಾರಣದಿಂದ ಇವನ್ನೆಲ್ಲ ಸ್ಟೆಪಾನ್ ಸಂತೋಷದಿಂದಲೇ ಸಹಿಸಿಕೊಂಡ, ಇವೆಲ್ಲ ಬದುಕಿಗೆ ಆಸರೆಯಾಗುವ, ಮನಸ್ಸಿಗೆ ನೆಮ್ಮದಿಕೊಡುವ ಸಂಗತಿಗಳು ಎಂದುಕೊಂಡ. ‘ದಿನಕ್ಕೆ ಅದೆಷ್ಟೋ ಬಾರಿ ಒಂದೇ ಪ್ರಾರ್ಥನೆಯನ್ನು ಮತ್ತೆ ಮತ್ತೆ ಯಾಕೆ ಕೇಳಬೇಕೋ ಗೊತ್ತಿಲ್ಲ. ಆದರೆ ಹಾಗೆ ಕೇಳುವುದು ಅಗತ್ಯವೆಂದು ಗೊತ್ತು. ಅಗತ್ಯವೆಂದು ಗೊತ್ತಿರುವುದರಿಂದ ಅದರಲ್ಲಿ ಸಂತೋಷವನ್ನು ಕಾಣುವೆ’ ಎಂದುಕೊಂಡ. ಲೋಕದಲ್ಲಿ ಬದುಕುವುದಕ್ಕಾಗಿ ದೇಹಕ್ಕೆ ಆಹಾರ ಹೇಗೆ ಅಗತ್ಯವೋ ಹಾಗೆಯೇ ಆಧ್ಯಾತ್ಮಿಕ ಜೀವನ ಸಾಗಿಸುವುದಕ್ಕೆ ಆತ್ಮಕ್ಕೂ ಆಹಾರ-ಅಂದರೆ, ಚರ್ಚಿನ ಪ್ರಾರ್ಥನೆಗಳು-ಬೇಕು ಎಂದು ಅವನ ಗುರು ಹೇಳಿದ್ದ. ಸ್ಟೆಪಾನ್ ಅದನ್ನು ಪೂರ್ಣವಾಗಿ ನಂಬಿದ. ಮುಂಜಾವಿನ ಪ್ರಾರ್ಥನೆಗಾಗಿ ಬೇಗನೆ ಏಳುವುದು ಕಷ್ಟವಾಗಿದ್ದರೂ ಅದರಿಂದ ಅವನ ಮನಸ್ಸಿಗೆ ಶಾಂತಿ, ಸಂತೋಷಗಳು ದೊರೆಯತೊಡಗಿದವು. ಗುರುವಿಗೆ ಶರಣಾಗಿ, ಗುರುವಿನ ಮಾತನ್ನು ಪ್ರಶ್ನಿಸದೆ ಒಪ್ಪಿ ಅದರಂತೆ ನಡೆದುಕೊಳ್ಳುವ ವಿಧೇಯತೆ, ವಿನಯಗಳಿಂದ ಸಂತೋಷ ಸಿಕ್ಕಿತ್ತು. ತನ್ನ ಇಚ್ಛೆಯನ್ನು ಮತ್ತೂ ಮತ್ತೂ ಮಣಿಸಬೇಕು, ಎಲ್ಲ ಕ್ರಿಶ್ಚಿಯನ್ ಸದ್ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಎಂಬುದೊಂದೇ ಅವನ ಬದುಕಿನ ಆಸಕ್ತಿಯಾಗಿತ್ತು. ಮೊದಲಲ್ಲಿ ಈ ಸದ್ಗುಣಗಳನ್ನು ಬೆಳೆಸಿಕೊಳ್ಳುವುದು ಸುಲಭವೆನ್ನಿಸಿತ್ತು. ತನ್ನ ಎಸ್ಟೇಟನ್ನು ಅಕ್ಕನ ಹೆಸರಿಗೆ ಬರೆದುಕೊಟ್ಟುಬಿಟ್ಟಿದ್ದ. ಅದರಿಂದ ಮನಸ್ಸಿಗೇನೂ ಖೇದವಾಗಿರಲಿಲ್ಲ. ಅವನ ಸ್ವಂತದ್ದು ಅನ್ನುವುದೇನೂ ಇರಲಿಲ್ಲ. ತನಗಿಂತ ಕಿರಿಯರಾದವರಿಗೂ ವಿನಯವನ್ನು ತೋರುವುದು ಸುಲಭವಷ್ಟೇ ಅಲ್ಲ ಅದರಿಂದ ಮನಸ್ಸಿಗೂ ಖುಷಿಯಾಗುತ್ತಿತ್ತು. ಲೋಭ, ಮೋಹ, ಕಾಮಗಳಮೇಲೆ ಗೆಲುವು ಸಾಧಿಸುವುದೂ ಕಷ್ಟವೇನೂ ಆಗಲಿಲ್ಲ. ಕಾಮದ ಬಗ್ಗ ಎಚ್ಚರವಿರಲಿ ಎಂದು ಗುರು ಹೇಳಿದ್ದ. ಆದರೆ ಸ್ಟೆಪಾನ್‌ನಲ್ಲಿ ಈ ದುರ್ಗುಣಗಳು ಇರಲಿಲ್ಲ. ಇವೆಲ್ಲವುಗಳಿಂದ ಬಿಡುಗಡೆ ಪಡೆದಿದ್ದೇನೆ ಎಂದು ಸ್ಟೆಪಾನ್ ಸಂತೋಷಚಿತ್ತನಾಗಿದ್ದ.
ಮದುವೆಯಾಗಬೇಕಾಗಿದ್ದ ಹುಡುಗಿಯ ನೆನಪು ಮಾತ್ರ ಮನಸ್ಸಿಗೆ ಹಿಂಸೆಕೊಡುತ್ತಿತ್ತು. ನೆನಪು ಮಾತ್ರವಲ್ಲ, ಏನೇನು ಆಗಬಹುದಾಗಿತ್ತು ಎಂಬ ಸ್ಪಷ್ಟ ಕಲ್ಪನೆಗಳೂ ಮನಸ್ಸಿಗೆ ಬಂದು ಹಿಂಸೆಕೊಡುತ್ತಿದ್ದವು. ಚಕ್ರವರ್ತಿಯ ಪ್ರೇಯಸಿಯಾಗಿದ್ದ ಇನ್ನೊಬ್ಬಾಕೆ ಮದುವೆಯಾಗಿ, ಆದರ್ಶ ಗೃಹಿಣಿಯಾಗಿ ಮಕ್ಕಳ ತಾಯಾಗಿ ಇರುವುದು ಅಚಾನಕವಾಗಿ ಮನಸ್ಸಿಗೆ ಬರುತ್ತಿತ್ತು. ಅವಳನ್ನು ಮದುವೆಯಾದವನಿಗೆ ದೊಡ್ಡ ಅಧಿಕಾರ, ಪ್ರಭಾವ, ಗೌರವಗಳೊಡನೆ ಪಶ್ಚಾತ್ತಾಪದಲ್ಲಿ ಬೆಂದ ಒಳ್ಳೆಯ ಹೆಂಡತಿ ಸಿಕ್ಕಿದ್ದಳು.
ಎಲ್ಲ ಸರಿಯಾಗಿರುವ ಹೊತ್ತಿನಲ್ಲಿ ಇಂಥ ಯೋಚನೆಗಳು ಬಂದರೆ 'ಸದ್ಯ, ಆ ಎಲ್ಲ ಪ್ರಲೋಭನೆಗಳನ್ನು ಗೆದ್ದೆ!' ಎಂದು ಸಂತೋಷವಾಗುತ್ತಿತ್ತು. ಆದರೆ ಕೆಲವೊಮ್ಮೆ ಸದ್ಯದ ಬದುಕು ಮಂಕಾಗಿ ಅಸ್ಪಷ್ಟವಾಗಿ ತೋರುವ ವೇಳೆಯಲ್ಲಿ ಇಂಥ ನೆನಪುಗಳು ಬಂದಾಗ ತಾನೇ ನಿಗದಿಮಾಡಿಕೊಂಡ ಹೊಸ ಬದುಕಿನ ಗುರಿಗಳ ಬಗ್ಗೆ ಅನುಮಾನ ಬರದಿದ್ದರೂ ಮನಸ್ಸು ಕಲ್ಪಿಸಿಕೊಂಡ ಉಜ್ವಲ ದರ್ಶನವನ್ನು ಪಡೆಯುವ ಸಾಮರ್ಥ್ಯವಿದಯೇ ಅನ್ನುವ ಆತಂಕ ಹುಟ್ಟಿ ಧಾರ್ಮಿಕ ಬದುಕನ್ನು ಆಯ್ಕೆ ಮಾಡಿಕೊಂಡದ್ದಕ್ಕೆ ಖೇದವೆನಿಸಿ ಪಶ್ಚಾತ್ತಾಪಪಡುತ್ತಿದ್ದ.
ಹಾಗಾದಾಗಲೆಲ್ಲ ಅವನ ಮನಸ್ಸನ್ನು ಕಾಪಾಡುತ್ತಿದ್ದದ್ದು ಅವನ ವಿಧೇಯತೆಯೊಂದೇ. ಇಡೀ ದಿನ ಪ್ರಾರ್ಥನೆಯಲ್ಲಿ ಕಳೆದುಹೋಗುತ್ತಿತ್ತು. ಮನಸ್ಸು ಕೆಟ್ಟಾಗಲೆಲ್ಲ ಹೆಚ್ಚು ಪ್ರಾರ್ಥನೆಮಾಡುತ್ತಿದ್ದ. ದೇಹವು ವಿಧೇಯವಾಗಿ ತಲೆ ತಗ್ಗಿಸಿ ಪ್ರಾರ್ಥಿಸುತ್ತಿದ್ದರೂ ಮನಸ್ಸು ಅದರಲ್ಲಿ ತೊಡಗುತ್ತಿರಲಿಲ್ಲ. ಇಂಥ ಸ್ಥಿತಿ ಒಂದು ದಿನ ಅಥವಾ ಎರಡು ದಿನ ಇರುತ್ತಿತ್ತು. ಆಮೇಲೆ ಮತ್ತೆ ಮಾಮೂಲಾಗುತ್ತಿತ್ತು. ಆ ಒಂದೆರಡು ದಿನಗಳೇ ಭೀಕರವಾಗಿರುತ್ತಿದ್ದವು. 'ನಾನು ನನ್ನ ವಶದಲ್ಲೂ ಇಲ್ಲ, ದೇವರ ವಶದಲ್ಲೂ ಇಲ್ಲ, ಯಾರದೋ ವಶದಲ್ಲಿದ್ದೇನೆ' ಅನ್ನಿಸುತ್ತಿತ್ತು. ಅಂಥ ಹೊತ್ತಿನಲ್ಲಿ ‘ಹತೋಟಿ ಇರಲಿ, ಏನೂ ಮಾಡಬೇಡ, ಸುಮ್ಮನಿರು, ತಾಳ್ಮೆ ಇರಲಿ, ಕಾಯುತ್ತಿರು’ ಎಂದು ಗುರು ಮಾಡಿದ ಆಜ್ಞೆಯಂತೆ ನಡೆದುಕೊಳ್ಳುವುದು ಬಿಟ್ಟರೆ ಬೇರೇನೂ ಮಾಡಲು ಆಗುತ್ತಿರಲಿಲ್ಲ. ಸ್ಟೆಪಾನ್‌ಮ ಬದುಕು ಅವನಿಚ್ಛೆಯಂತೆ ನಡೆಯುತ್ತಿರಲಿಲ್ಲ, ಗುರುವಿನ ಇಚ್ಛೆಯಂತೆ ನಡೆಯುತ್ತಿತ್ತು. ಸಂಪೂರ್ಣ ಶರಣಾಗತಿಯಲ್ಲಿ ವಿಶೇಷವಾದ ಶಾಂತಿಯನ್ನು ಕಂಡುಕೊಂಡಿದ್ದ ಅವನು.
ಸ್ಟೆಪಾನ್ ಹೀಗೆ ಆ ಮಠದಲ್ಲಿ ಏಳು ವರ್ಷ ಇದ್ದ. ಮೂರನೆಯ ವರ್ಷ ಮುಗಿಯುವ ಹೊತ್ತಿಗೆ ತಲೆಗೂದಲು ತೆಗೆಸಿಕೊಂಡು ಪೂಜಾಕಾರ್ಯಗಳನ್ನು ನೆರವೇರಿಸುವ ಅಧಿಕಾರವಿರುವ ಫಾದರ್ ಆಗಿ, ಸೆರ್ಗಿಯಸ್ ಎಂಬ ಹೊಸ ಹೆಸರನ್ನು ಪಡೆದುಕೊಂಡ. ಅವನ ಅಂತರಂಗದ ಬದುಕಿನಲ್ಲಿ ಅದೊಂದು ಮಹತ್ವದ ಕ್ಷಣ. ಮೊದಲಿನಿಂದಲೂ ಅವನಿಗೆ ದೈವಸಂಯೋಗದ ಆಚರಣೆಯಿಂದ ಮನಸ್ಸಿಗೆ ಸಮಾಧಾನ ದೊರೆತು ಅವನ ಆತ್ಮ ಹಿಗ್ಗುತ್ತಿತ್ತು. ಈಗ ತಾನೇ ಸ್ವತಃ ದೈವಸಂಯೋಗದ* ಆಚರಣೆಯ ಅಧಿಕಾರಿಯಾಗಿ, ಅದಕ್ಕಾಗಿ ಸಿದ್ಧತೆಗಳನ್ನು ಮಾಡಿಕೊಳ್ಳುವುದರಲ್ಲಿ ಭಾವ ತುಂಬಿಬಂದಂತಾಗಿ ಮನಸ್ಸೆಲ್ಲ ಉನ್ಮತ್ತವಾಗುತ್ತಿತ್ತು. ಒಮ್ಮೆ ಹತಾಶ ಮನಸ್ಥಿತಿಯಲ್ಲಿ ಸೇವಾಕೈಂಕರ್ಯದಲ್ಲಿ ತೊಡಗಿರುವಾಗ ದೈವೀಸಂಯೋಗದ ದಿವ್ಯ ಉದಾತ್ತ ಭಾವನೆಯೂ ಬಹುಕಾಲ ಉಳಿದಿರುವುದಿಲ್ಲ ಅನ್ನಿಸಿತು. ಆದದ್ದೂ ಹಾಗೆಯೇ. ಕ್ರಮೇಣ ಭಾವದ ತೀವ್ರತೆ ತೀರಿಹೋಗಿ ಕೇವಲ ಆಚರಣೆಯ ಅಭ್ಯಾಸವೊಂದೇ ಉಳಿದುಕೊಂಡಿತು.
ಒಟ್ಟಾರೆಯಾಗಿ ಆ ಮಠದ ಬದುಕಿನ ಏಳನೆಯ ವರ್ಷದಲ್ಲಿ ಸ್ಟೆಪಾನ್‌ನ ಮನಸ್ಸು ಆಯಾಸಗೊಂಡು ಬೇಸರ ಕವಿದುಕೊಂಡಿತ್ತು. ಅಲ್ಲಿದ್ದು ಕಲಿಯಬಹುದಾದ್ದನ್ನೆಲ್ಲ ಕಲಿತಿದ್ದ, ಪಡೆಯಬಹುದಾದ್ದನ್ನೆಲ್ಲ ಪಡೆದಿದ್ದ. ಇನ್ನು ಮಾಡಬೇಕಾದದ್ದು ಏನೂ ಇರಲಿಲ್ಲವಾಗಿ ಅವನ ಆತ್ಮಕ್ಕೆ ಮಂಪರು ಹಿಡಿದಂತಾಗಿತ್ತು. ಅದೇ ಹೊತ್ತಿನಲ್ಲಿ ಅವನ ತಾಯಿ ತೀರಿಹೋದ ಸುದ್ದಿ, ಅಕ್ಕ ವರ್ವರಾ ಮದುವೆಯಾದ ಸುದ್ದಿ ಎರಡೂ ಬಂದವು. ಆದರೆ ಅವೆರಡೂ ಘಟನೆಗಳಿಂದ ಮನಸ್ಸನ್ನು ಕಲಕದೆ ಉದಾಸೀನನಾಗಿಯೇ ಇದ್ದ. ಅವನ ಇಡೀ ಗಮನ ಇದ್ದದ್ದು ಅಂತರಂಗದ ಬದುಕನ್ನು ಉತ್ತಮಪಡಿಸಿಕೊಳ್ಳುವ ಬಗ್ಗೆ ಮಾತ್ರ.

ಸ್ಟೆಪಾನ್ ಫಾದರ್ ಆಗಿ ನಾಲ್ಕನೆಯ ವರ್ಷದ ಸೇವೆ ಸಲ್ಲಿಸುತ್ತಿದ್ದಾಗ ಬಿಷಪ್ ಅವನ ಬಗಗೆ ವಿಶೇಷವಾದ ಮಮತೆಯನ್ನು ತೋರಿದರು. 'ಇನ್ನೂ ಹೆಚ್ಚಿನ ಕರ್ತವ್ಯ ನಿರ್ವಹಿಸಬೇಕಾದಂಥ ದೊಡ್ಡ ಹುದ್ದೆಯನ್ನು ನೀಡಿದರೆ ತಿರಸ್ಕರಿಸಬಾರದು' ಎಂದು ಗುರು ಹೇಳಿದ. ಮಠದ ಉಳಿದ ಸನ್ಯಾಸಿಗಳಲ್ಲಿ ಅಧಿಕಾರದ ಆಸೆ, ಆಕಾಂಕ್ಷೆಗಳನ್ನು ಕಂಡು ಅಸಹ್ಯ ಪಡುತ್ತಿದ್ದ ಸ್ಟೆಪಾನ್‌ನ ಮನಸ್ಸಿನಲ್ಲೂ ಅಧಿಕಾರದ ಅಪೇಕ್ಷೆ ತಲೆ ಎತ್ತಿತು. ರಾಜಧಾನಿಗೆ ಸಮೀಪದಲ್ಲಿದ್ದ ಮಠದ ಜವಾಬ್ದಾರಿಯನ್ನು ಅವನಿಗೆ ವಹಿಸಿಕೊಡಲಾಯಿತು. ಬೇಡ ಎಂದು ತಿರಸ್ಕರಿಸುವ ಮನಸ್ಸಾದರೂ ಅವನ ಗುರು ಮತ್ತು ಮಠದ ಉಳಿದ ಗುರುಗಳು 'ಸುಮ್ಮನೆ ಒಪ್ಪಿಕೋ' ಎಂದು ಸಲಹೆ ನೀಡಿದರು. ಅವನು ಒಪ್ಪಿಕೊಂಡು ಗುರುವಿನಿಂದ ಬೀಳ್ಕೊಂಡು ಹೊಸ ಮಠಕ್ಕೆ ಅಧಿಕಾರಿಯಾದ.
ನಗರದ ಮಠಕ್ಕೆ ಅಧಿಕಾರಿಯಾಗಿ ಹೋದದ್ದು ಸೆರ್ಗಿಯಸ್‌ನ ಬದುಕಿನ ಮುಖ್ಯ ಘಟನೆ. ಅಲ್ಲಿ ಎಲ್ಲ ಬಗೆಯ ಪ್ರಲೋಭನೆಗಳು ಅವನನ್ನು ಮುತ್ತಿಕೊಂಡವು. ಅವನ್ನು ಎದುರಿಸಿ ಗೆಲ್ಲುವುದರಲ್ಲೇ ಅವನ ಶಕ್ತಿಯೆಲ್ಲ ವ್ಯಯವಾಯಿತು.
ಅವನು ಮೊದಲಿದ್ದ ಮಠದಲ್ಲಿ ಹೆಂಗಸರು ಇರುವುದಕ್ಕೆ ಅವಕಾಶವಿರಲಿಲ್ಲ. ಹಾಗಾಗಿ ಕಾಮದ ಪ್ರಲೋಭನೆ ಅಲ್ಲಿ ಅಷ್ಟು ಪ್ರಬಲವಾಗಿರಲಿಲ್ಲ. ಇಲ್ಲಿ ಕಾಮ ಅಗಾಧವಾಗಿ ತಲೆ ಎತ್ತಿದ್ದಷ್ಟೇ ಅಲ್ಲ ನಿರ್ದಿಷ್ಟ ರೂಪವನ್ನೂ ಧರಿಸಿತು. ಹೆಸರು ಕೆಡಿಸಿಕೊಂಡಿದ್ದ ಒಬ್ಬ ಹೆಂಗಸು ಮಠಕ್ಕೆ ಬರುತ್ತಿದ್ದಳು. ಫಾದರ್ ಸೆರ್ಗಿಯಸ್‌ನ ನೆರವು ಬೇಡಿದಳು. ಅವನ ಮನಸ್ಸನ್ನು ಸೆಳೆದಳು. ತನಗೆ ಸಹಾಯಮಾಡುವುದಕ್ಕಾಗಿ ಮನೆಗೆ ಬರಬೇಕೆಂದು ಆಹ್ವಾನಿಸಿದಳು. ಸೆರ್ಗಿಯಸ್ ಅವಳ ಕೋರಿಕೆಯನ್ನು ನಿರಾಕರಿಸಿದ. ಆದರೂ ತನ್ನ ಮನಸ್ಸಿನಲ್ಲಿ ಕಾಮದ ಆಸೆ ಇಷ್ಟು ಖಚಿತವಾಗಿ, ಸ್ಪಷ್ಟವಾಗಿ ಮೂಡಿದ್ದನ್ನು ಕಂಡು ಭೀತನಾದ. ಆ ವಿಷಯವನ್ನು ಕುರಿತು ಗುರುವಿಗೆ ಪತ್ರ ಬರೆದ. ಜೊತೆಗೇ ತನ್ನ ಮೇಲೆ ಒಂದು ಹತೋಟಿ ಇರಲೆಂದು ತನ್ನ ನಾಚಿಕೆ, ಅಭಿಮಾನಗಳನ್ನು ತೊರೆದು ಮಠಕ್ಕೆ ಆಗತಾನೇ ಸೇರಿಕೊಂಡಿದ್ದ ಹೊಸಬ ಯುವಕನ ಎದುರಿಗೆ ಆತ್ಮ ನಿವೇದನೆ ಮಾಡಿಕೊಂಡು, 'ಚರ್ಚಿನ ಪ್ರಾರ್ಥನೆಗೆ ಮತ್ತೆ ಪಾದರಿಯಾಗಿ ತನ್ನ ಕರ್ತವ್ಯ ನಿರ್ವಹಿಸುವುದಕ್ಕಲ್ಲದೆ ಬೇರೆಡೆಗೆ ಹೋಗದಂತೆ ನನ್ನ ಮೇಲೆ ಕಣ್ಣಿಟ್ಟಿರು' ಎಂದು ಕೇಳಿಕೊಂಡ.
ಇದರೊಡನೆ ಹೊಸ ಮಠದ ಹಿರಿಯ ಅಬಾಟ್‌ನನ್ನು ಕಂಡರೆ ಸ್ಟೆಪಾನ್‌ಗೆ ಒಂದಿಷ್ಟೂ ಆಗುತ್ತಿರಲಿಲ್ಲ. ಆ ಹಿರಿಯ ಲೌಕಿಕ ಚಾತುರ್ಯವುಳ್ಳ ಅಪಾರ ಮಹತ್ವಾಕಾಂಕ್ಷೆಯ ವ್ಯಕ್ತಿ. ಸ್ಟೆಪಾನ್ ಎಷ್ಟೇ ಪ್ರಯತ್ನಿಸಿದರೂ ಹಿರಿಯನ ಬಗ್ಗೆ ಇದ್ದ ಅಸಹನೆಯನ್ನು ನಿವಾರಿಸಿಕೊಳ್ಳಲು ಆಗಲಿಲ್ಲ. ಹಿರಿಯನ ಮಾತಿಗೆ ಎಷ್ಟೇ ವಿಧೇಯತೆ ತೋರಿದರೂ ಮನಸ್ಸಿನ ಆಳದಲ್ಲಿ ಅವನ ಬಗ್ಗೆ ತಿರಸ್ಕಾರ ಇದ್ದೇ ಇರುತ್ತಿತ್ತು. ಹೊಸ ಮಠದಲ್ಲಿದ್ದ ಎರಡನೆಯ ವರ್ಷದಲ್ಲಿ ಈ ಪಾಪ ಭಾವನೆ ಸ್ಟೆಪಾನನ ಇಚ್ಛೆಯನ್ನೂ ಮೀರಿ ವ್ಯಕ್ತವಾಗಿಬಿಟ್ಟಿತು. ಕನ್ಯೆ ಮೇರಿಯ ಇಂಟರ್‌ಸೆಷನ್* ಹಬ್ಬದ ದಿನದ ಆಚರಣೆ ದೊಡ್ಡ ಚರ್ಚಿನಲ್ಲಿ ನಡೆಯುತ್ತಿತ್ತು. ಅನೇಕ ಜನ ಭಕ್ತರು ಬಂದಿದ್ದರು. ಹಿರಿಯ ಗುರು ತಾನೇ ಪ್ರಾರ್ಥನೆಯ ಸೇವೆ ನಡೆಸುತ್ತಿದ್ದ. ಫಾದರ್ ಸೆರ್ಗಿಯಸ್ ತನ್ನ ಮಾಮೂಲು ಜಾಗದಲ್ಲಿ ನಿಂತು ಪ್ರಾರ್ಥನೆ ಮಾಡುತ್ತಿದ್ದ. ದೊಡ್ಡ ಚರ್ಚಿನಲ್ಲಿ ತಾನೇ ಪ್ರಾರ್ಥನೆಯ ಸೇವೆ ನಡಸದೆ ಇರುವಾಗಲೆಲ್ಲ ಅವನ ಮನಸ್ಸಿನಲ್ಲಿ ಆಗುತ್ತಿದ್ದ ತಳಮಳ ಈಗ ಮತ್ತೆ ತಲೆದೋರಿತ್ತು. ಶ್ರೀಮಂತ ವರ್ಗದ ಜನ, ಅದರಲ್ಲೂ ವಿಶೇಷವಾಗಿ ಹೆಂಗಸರು ಬಂದಾಗಲೆಲ್ಲ ಕಸಿವಿಸಿಯಾಗುತ್ತಿತ್ತು. ಶ್ರೀಮಂತರು ಬಂದಾಗ ಸೈನಿಕನೊಬ್ಬ ಜನರನ್ನೆಲ್ಲ ಪಕ್ಕಕ್ಕೆ ತಳ್ಳುತ್ತ ಜಾಗಮಾಡಿಕೊಡುತ್ತಾ ಇದ್ದದ್ದು, ಹೆಂಗಸರು ಸ್ಟೆಪಾನ್‌ನನ್ನೂ ಸುಂದರವಾಗಿದ್ದ ಇನ್ನೊಬ್ಬ ಸನ್ಯಾಸಿಯನ್ನೂ ಪರಸ್ಪರ ತೋರಿಸುತ್ತಾ ತಮ್ಮಲ್ಲೆ ಮಾತಾಡಿಕೊಳ್ಳುತ್ತಾ ಇದ್ದದ್ದು ಇವನ್ನೆಲ್ಲ ನೋಡದೆ ಇರುವುದಕ್ಕೆ, ನೋಡಿದರೂ ಗಮನಿಸದೆ ಇರುವುದಕ್ಕೆ ಪ್ರಯತ್ನಿಸುತ್ತಿದ್ದ. ಕಣ್ಣಿಗೆ ಅಡ್ಡಪಟ್ಟಿ ಕಟ್ಟಿಕೊಂಡವನಂತೆ ವೇದಿಕೆಯ ಮೇಲೆ ಉರಿಯುತ್ತಾ ಇದ್ದ ದೀಪಗಳನ್ನು ಮಾತ್ರವೇ, ಚರ್ಚಿನಲ್ಲಿದ್ದ ವಿಗ್ರಹಗಳನ್ನು ಮಾತ್ರವೇ, ಪ್ರಾರ್ಥನೆಯ ಸೇವೆ ಸಲ್ಲಿಸುತ್ತಿದ್ದ ಚರ್ಚಿನ ಸನ್ಯಾಸಿಗಳನ್ನು ಮಾತ್ರವೇ ನೋಡುವುದಕ್ಕೆ, ಓದುತ್ತಿದ್ದ ಅಥವಾ ಹಾಡುತ್ತಿದ್ದ ಪ್ರಾರ್ಥನೆಯನ್ನು ಮಾತ್ರವೇ ಕೇಳುವುದಕ್ಕೆ, ಬೇರೆಲ್ಲವನ್ನೂ ಮರೆತು ತನ್ನ ಕರ್ತವ್ಯವನ್ನು ಮಾತ್ರವೇ ನಿರ್ವಹಿಸುತ್ತಾ ಅನೇಕ ಬಾರಿ ಕೇಳಿದ್ದ ಹೇಳಿದ್ದ ಪ್ರಾರ್ಥನೆಯ ಮುಂದಿನ ಸಾಲುಗಳನ್ನು ಮನಸ್ಸಿನಲ್ಲೇ ಅಂದುಕೊಂಡು ಸಂತೋಷಪಡುವುದಕ್ಕೆ ಪ್ರಯತ್ನಿಸುತ್ತಾ ಇದ್ದ.
ಹೀಗೇ ಸುಮ್ಮನೆ ಇದ್ದು, ಪ್ರಾರ್ಥನೆಯ ಸಾಲುಗಳಿಗೆ ತಕ್ಕ ಹಾಗೆ ಆಗಾಗ ಎದೆಯ ಮೇಲೆ ಶಿಲುಬೆಯ ಆಕಾರದಲ್ಲಿ ಕೈ ಆಡಿಸುತ್ತಾ, ಆಗಾಗ ತಲೆ ತಗ್ಗಿಸುತ್ತಾ, ಒಮ್ಮೊಮ್ಮೆ ತೀವ್ರ ತಿರಸ್ಕಾರವನ್ನೂ ಒಮ್ಮೊಮ್ಮೆ ಮೂಡುವ ನೆನಪುಗಳನ್ನೂ ಭಾವನೆಗಳನ್ನೂ ಉದ್ದೇಶಪೂರ್ವಕವಾಗಿ ಒರೆಸಿಹಾಕುತ್ತಾ, ಒಳಗೊಳಗೇ ತನ್ನ ವಿರುದ್ಧ ತಾನೇ ಹೋರಾಡುತ್ತಾ ನಿಂತಿದ್ದ. ಆಗ ಸಾಕ್ರಿಸ್ಟಾನ್ ಪಾದ್ರಿ* ಫಾದರ್ ನಿಕೊದೆಮಸ್- ಅವನನ್ನು ಮಠದ ಹಿರಿಯನ ಬಾಲಬಡುಕ ಎಂದು ಸ್ಟೆಪಾನ್ ತನಗೇ ತಿಳಿಯದಂತೆ ದೂಷಿಸುತ್ತಿದ್ದ, ಫಾದರ್ ಸೆರ್ಗಿಯಸ ನ ಆಧ್ಯಾತ್ಮಿಕ ಪ್ರಗತಿಗೆ ಅಡ್ಡಿಯಾಗಿದ್ದ ಇನ್ನೊಬ್ಬ ವ್ಯಕ್ತಿ-ಅವನ ಸಮೀಪಕ್ಕೆ ಬಂದು, ಅತಿವಿನಯದಿಂದ ತಲೆಬಾಗಿ ನಮಸ್ಕರಿಸಿ, ಹಿರಿಯ ಪಾದರಿಯು ಸ್ಟೆಪಾನ್‌ನನ್ನು ಭೇಟಿಯಾಗಲು ಬಯಸಿದ್ದಾರೆ, ಗರ್ಭಗುಡಿಯ ಬಳಿಗೆ ಬರಬೇಕು ಎಂಬ ಸಂದೇಶವನ್ನು ಮುಟ್ಟಿಸಿದ. ಫಾದರ್ ಸೆರ್ಗಿಯಸ್ ತಲೆಯ ಮೇಲಿನ ಮುಸುಕನ್ನು ಕೊಂಚ ಸರಿಪಡಿಸಿಕೊಂಡು, ಚರ್ಚಿನಲ್ಲಿದ್ದ ಭಕ್ತ ಜನಕ್ಕೆ ತೊಂದರೆಯಾಗದಂತೆ ಹುಷಾರಾಗಿ ಹೆಜ್ಜೆಗಳನ್ನಿಡುತ್ತಾ ಅವನ ಹಿಂದೆ ಹೊರಟ.
‘ಲಿಸ್ಸಾ, ನಿನ್ನ ಬಲಗಡೆ ನೋಡು, ಅವನೇ!’ ಎಂದು ಒಬ್ಬಾಕೆ ಇನ್ನೊಬ್ಬಳಿಗೆ ಫ್ರೆಂಚ್‌ನಲ್ಲಿ ಪಿಸುಗುಟ್ಟಿದಳು.
‘ಎಲ್ಲಿ? ಎಲ್ಲಿ? ಅಷ್ಟೇನೂ ಚೆನ್ನಾಗಿಲ್ಲ ಅಲ್ಲವೇನೇ..’ ಎಂದಳು ಇನ್ನೊಬ್ಬಾಕೆ.
ಅವರು ಮಾತಾಡುತ್ತಿರುವುದು ತನ್ನ ಬಗ್ಗೆಯೇ ಎಂದು ಅವನಿಗೆ ಗೊತ್ತಿತ್ತು. ಅವರ ಮಾತು ಕೇಳಿಸಿಕೊಂಡು, ಪ್ರಲೋಭನೆ ಎದುರಾದಾಗಲೆಲ್ಲ, ಆತ್ಮ ಆಯಾಸಗೊಂಡಾಗಲೆಲ್ಲ, ಮಾಡುತ್ತಿದ್ದಂತೆ ‘ಪ್ರಲೋಭನೆ ಒಡ್ಡಬೇಡ ಪ್ರಭುವೇ’ ಎಂದು ಪ್ರಾರ್ಥನೆ ಹೇಳಿಕೊಂಡ. ತಲೆ ಬಗ್ಗಿಸಿಕೊಂಡು, ನೆಲದ ಮೇಲೇ ಕಣ್ಣಿಟ್ಟು ಅಗಲ ತೋಳಿನ ಬಿಳಿಯ ನಿಲುವಂಗಿ ತೊಟ್ಟು ವಿಗ್ರಹ ವೇದಿಕೆಯ ಬಳಿ ನಿಂತಿದ್ದ ಚರ್ಚಿನ ಹಾಡುಗಾರರಿಗೆ ತೊಂದರೆಯಾಗದಂತೆ ಅವರನ್ನು ಬಳಸಿಕೊಂಡು ಸಾಗಿ, ಉಪದೇಶದ ಕಟ್ಟೆಯ ಹಿಂದಿನ ಸಕ್ರೀನನ್ನು ದಾಟಿ ಹೋದ. ಗರ್ಭಗುಡಿಗೆ ಕಾಲಿಡುತ್ತಿದ್ದಂತೆ ಅಲ್ಲಿದ್ದ ವಿಗ್ರಹಗಳ ಮುಂದೆ ತಲೆ ಬಾಗಿ ನಮಸ್ಕರಿಸಿದ. ನಿಧಾನವಾಗಿ ತಲೆ ಎತ್ತಿ, ಆದರೆ ತಿರುಗದೆ, ಕಣ್ಣಂಚಿನಲ್ಲೇ ಮಠದ ಮುಖ್ಯ ಗುರುವನ್ನೂ ಅವನೊಡನೆ ಇದ್ದ ಉಜ್ವಲವಾಗಿ ತೋರುತ್ತಿದ್ದ ಇನ್ನೊಬ್ಬ ವ್ಯಕ್ತಿಯನ್ನೂ ನೋಡಿದ. ಮುಖ್ಯ ಗುರು ಗೋಡೆಯ ಪಕ್ಕದಲ್ಲಿ ನಿಂತು, ಪ್ರಾರ್ಥನಾ ಪೋಷಾಕಿನ ತೋಳುಗಳನ್ನು ಕೊಂಚವೇ ಮೇಲೆ ಸರಿಸಿಕೊಂಡು, ದಪ್ಪ ಮೋಟುಗೈಗಳನ್ನು ಉಬ್ಬಿದ ಹೊಟ್ಟೆಯಮೇಲಿಟ್ಟುಕೊಂಡು, ಜಪಮಣಿಗಳನ್ನು ನಿಧಾನವಾಗಿ ತಿರುಗಿಸುತ್ತಾ, ಮಿಲಿಟರಿ ಡ್ರೆಸ್ಸು ತೊಟ್ಟ ವ್ಯಕ್ತಿಯೊಬ್ಬನೊಡನೆ ಮಾತನಾಡುತ್ತಿದ್ದ. ಅವನ ತೋಳಿಗೆ ಕಟ್ಟಿದ್ದ ಚಿನ್ನದ ಕಿರುಹಗ್ಗದ ಗಂಟುಗಳ ವಿನ್ಯಾಸ, ಭುಜದ ಮೇಲಿದ್ದ ಲಾಂಛನ ಇವುಗಳನ್ನು ಫಾದರ್ ಸೆರ್ಗಿಯಸ್ಸನ ಅನುಭವಿ ಕಣ್ಣುಗಳು ತಟ್ಟನೆ ಗುರುತಿಸಿದವು. ನಾನು ಸೇವೆ ಸಲ್ಲಿಸಿದ್ದ ರೆಜಿಮೆಂಟಿನ ಕಮಾಂಡರ್ ಇವನು, ಈಗ ಬಹಳ ಪ್ರಮುಖ ಸ್ಥಾನ ಅಲಂಕರಿಸಿದ್ದಾನೆ, ಅಂಥವನೊಡನೆ ಮಾತಾಡುತ್ತಿರುವುದರಿಂದಲೇ ಈ ಗುರುವಿನ ಮುಖ ಕೆಂಪಾಗಿ ಬೋಳುತಲೆ ಹೊಳೆಯುತ್ತಾ ಸಂತೋಷವನನೂ ತೃಪ್ತಿಯನ್ನೂ ತೋರುತ್ತಿವೆ ಎಂದು ಅಂದುಕೊಂಡ. ಫಾದರ್ ಸೆರ್ಗಿಯಸ್ಸನಿಗೆ ಕಸಿವಿಸಿಯಾಯಿತು. ಅದರಲ್ಲೂ ತನ್ನ ರೆಜಿಮೆಂಟಿನಲ್ಲಿದ್ದು ಈಗ ಸನ್ಯಾಸಿಯಾಗಿರುವವನನ್ನು ನೋಡಬೇಕೆಂಬ ಜನರಲ್ಲನ ಕುತೂಹಲ ತಣಿಸುವ ಸಲುವಾಗಿಯೇ ಕರೆಕಳಿಸಿದ್ದಾನೆ ಎಂದು ತಿಳಿದಾಗ ಅಸಹ್ಯವೆನ್ನಿಸಿತು.
‘ದೈವದ ಪೋಷಾಕು ತೊಟ್ಟ ನಿಮ್ಮನ್ನು ಕಂಡು ಸಂತೋಷವಾಗಿದೆ’ ಕೈ ಮುಂದೆ ಚಾಚುತ್ತಾ ಜನರಲ್ ಹೇಳಿದ, ‘ನಿಮ್ಮ ಸಹೋದ್ಯೋಗಿಯನ್ನು ಮರೆತಿಲ್ಲವೆಂದು ಭಾವಿಸಲೇ?’
ಇಡೀ ಸನ್ನಿವೇಶ, ಮುಖ್ಯಗುರುವಿನ ಕೆಂಪು ಮುಖ, ಮುಖದಲ್ಲಿ ಎದ್ದು ಕಾಣುತ್ತಿದ್ದ ಸಂತೃಪ್ತಿಯ ನಗು, ನೆರೆತ ಗಡ್ಡ, ಜನರಲ್ಲನ ಮಾತು, ಎಚ್ಚರದ ಆರೈಕೆಯಿಂದ ಪೋಷಣೆಗೊಂಡಿದ್ದ ಅವನ ಮುಖ, ಅವನ ಉಸಿರಿನಲ್ಲಿದ್ದ ವೈನಿನ ಪರಿಮಳದೊಡನೆ ಬೆರೆತ ಸಿಗಾರಿನ ವಾಸನೆ, ಇವೆಲ್ಲ ಫಾದರ್ ಸೆರ್ಗಿಯಸ್ಸನ ಮನಸ್ಸನ್ನು ಕೆರಳಿಸಿದವು. ಮುಖ್ಯ ಗುರುವಿಗೆ ಮತ್ತೆ ತಲೆಬಾಗಿ ನಮಸ್ಕರಿಸುತ್ತಾ,
‘ಪೂಜ್ಯರು ಹೇಳಿಕಳಿಸಿದರಂತೆ..?’ ಎಂದು ಮಾತನ್ನು ಅರ್ಧದಲ್ಲೇ ನಿಲ್ಲಿಸಿದ. ಅವನ ಮುಖದಲ್ಲಿ ಕಣ್ಣಿನಲ್ಲಿ ನಿಂತ ಭಂಗಿಯಲ್ಲಿ ಏಕೆ ಹೇಳಿಕಳಿಸಿದ್ದು ಎಂಬ ಪ್ರಶ್ನೆ ಇತ್ತು.
‘ಹೌದು, ಜನರಲ್ಲರನ್ನು ಭೇಟಿ ಮಾಡಲಿ ಎಂದು’ ಮುಖ್ಯ ಗುರು ಹೇಳಿದ.
‘ಪೂಜ್ಯರೇ, ಪ್ರಲೋಭನೆಯನ್ನು ಗೆಲ್ಲಬೇಕೆಂದು ನಾನು ಲೌಕಿಕ ಬದುಕನ್ನು ಬಿಟ್ಟು ಬಂದೆ,’ ಫಾದರ್ ಸೆರ್ಗಿಯಸ್ ಹೇಳಿದ. ಅವನ ಮುಖ ಬಿಳಿಚಿಕೊಂಡಿತ್ತು. ತುಟಿಗಳು ಅದುರುತ್ತಿದ್ದವು. ‘ಈ ದೇವರ ಗುಡಿಯಲ್ಲಿ, ಪ್ರಾರ್ಥನೆಯ ವೇಳೆಯಲ್ಲಿ ಮತ್ತೇಕೆ ನನ್ನನ್ನು ಪ್ರಲೋಭನೆಗೆ ಒಡ್ಡುತ್ತಿದ್ದೀರಿ?’

‘ಹೋಗು. ಸರಿ, ಸರಿ. ಹೋಗು’ ಮುಖ್ಯ ಗುರು ಹುಬ್ಬು ಗಂಟಿಕ್ಕಿಕೊಂಡು ಕೋಪದಿಂದ ನುಡಿದ.
ಮರುದಿನ ಫಾದರ್ ಸೆರ್ಗಿಯಸ್ ಮುಖ್ಯ ಗುರುವಿನ ಮತ್ತು ಮಠದ ಇತರ ಸಹೋದರರ ಕ್ಷಮೆ ಕೋರಿದ. ಒಂದು ಇಡೀ ರಾತ್ರಿ ಪ್ರಾರ್ಥನೆಯಲ್ಲಿ ಕಳೆದ. ಈ ಮಠವನ್ನು ಬಿಡುವುದೇ ಸೂಕ್ತ ಎಂದು ನಿರ್ಧರಿಸಿದ. 'ನಾನು ಮತ್ತೆ ನಿಮ್ಮಲ್ಲಿಗೆ ಮರಳುವುದಕ್ಕೆ ಅನುಮತಿ ಕೊಡಿ' ಎಂದು ತನ್ನ ಗುರುವಿಗೆ ಪತ್ರ ಬರೆದ. 'ನನ್ನಲ್ಲಿ ದೌರ್ಬಲ್ಯವಿದೆ, ಪ್ರಲೋಭನೆಗಳನ್ನು ಮೀರಲಾರೆ, ನಿಮ್ಮ ಮಾರ್ಗದರ್ಶನ ಬೇಕು' ಎಂದು ಹೇಳಿ, ತನ್ನ ಪಾಪಿಷ್ಠ ಅಹಂಕಾರದ ಬಗ್ಗೆಯೂ ಬರೆದ. ಮರು ಟಪಾಲಿನಲ್ಲೇ ಗುರುವಿನ ಉತ್ತರ ಬಂದಿತು. ಏನೇನು ನಡೆಯಿತೋ ಅದಕ್ಕೆಲ್ಲ ಸೆರ್ಗಿಯಸ್‌ನ ಅಹಂಕಾರವೇ ಕಾರಣವಾಗಿದೆ ಎಂದು ಬರೆದಿದ್ದ. 'ನೀನು ದೇವರಿಗಾಗಿ ವಿನಯದಿಂದ ಶರಣಾಗಿಲ್ಲ, ಅಹಂಕಾರದಿಂದ ಶರಣಾಗತಿಯ ಭಾವ ಬೆಳೆಸಿಕೊಂಡಿರುವೆ; ಆದ್ದರಿಂದಲೇ ನಿನ್ನಲ್ಲಿ ಅಸಾಧ್ಯವಾದ ಕೋಪ ಆಗಾಗ ತಲೆ ಎತ್ತುತ್ತದೆ; ನಾನು ಆಸೆ ಆಮಿಷಗಳನ್ನೆಲ್ಲ ತೊರೆದು ಬಂದಿದ್ದೇನೆ, ಸಜ್ಜನ, ಅನ್ನುವ ಅಹಂಕಾರ ಇರುವುದರಿಂದಲೇ ‘ಎಲ್ಲವನ್ನೂ ತೊರೆದು ದೇವರಿಗಾಗಿ ಹಂಬಲಿಸಿ ಬಂದಿದ್ದರೂ ನನ್ನನ್ನು ಯಾವುದೋ ಕಾಡು ಪ್ರಾಣಿಯ ಹಾಗೆ ಪ್ರದರ್ಶನಕ್ಕೆ ಇಡುತ್ತಾರಲ್ಲಾ’ ಎಂದು ಮುಖ್ಯ ಗುರುವಿನ ಮೇಲೆ ನಿನಗೆ ಕೋಪ ಬಂದಿದೆ; ದೇವರ ಸಲುವಾಗಿ ನೀನು ಎಲ್ಲವನ್ನೂ ತ್ಯಾಗ ಮಾಡಿದ್ದಿದ್ದರೆ ನಿನ್ನಲ್ಲಿ ಸಹನೆ ಇರುತ್ತಿತ್ತು; ಲೌಕಿಕವಾದ ಅಹಂಕಾರ ಇನ್ನೂ ನಿನ್ನಲ್ಲಿ ಸತ್ತಿಲ್ಲ; ಮಗೂ ಸೆರ್ಗಿಯಸ್, ನಿನ್ನ ಬಗ್ಗೆ ಸದಾ ಚಿಂತಿಸುತ್ತೇನೆ, ನಿನಗಾಗಿ ಪ್ರಾರ್ಥಿಸುತ್ತೇನೆ, ದೇವರು ನನಗೆ ಒಂದು ದಾರಿ ತೋರಿದ್ದಾನೆ; ತಾಂಬೊವ್‌ನ ಮಠದಲ್ಲಿದ್ದ ಏಕಾಂತವಾಸೀ ಸನ್ಯಾಸಿ*, ಸಂತನಂತೆ ಬದುಕಿದ್ದ ಹಿಲರಿ ತೀರಿಕೊಂಡಿದ್ದಾನೆ; ಆತ ಅಲ್ಲಿ ಹದಿನೆಂಟು ವರ್ಷ ಇದ್ದ. ತಾಂಬೊವ್‌ನ ಮಠದ ಹಿರಿಯ ಗುರು ಅವನ ಸ್ಥಾನಕ್ಕೆ ಯೋಗ್ಯನಾದ ಬ್ರದರ್ ಯಾರಾದರೂ ಇದ್ದಾರಾ ಎಂದು ಕೇಳಿದ್ದಾರೆ; ಅವರು ಕೇಳಿ ಬರೆದ ಸ್ವಲ್ಪ ದಿನದಲ್ಲೇ, ನಿನ್ನ ಪತ್ರ ಬಂತು. ನೀನು ತಾಂಬೊವ್ ಹರ್ಮಿಟೇಜ್ ಮಠದ ಫಾದರ್ ಪೈಸಿಯ ಬಳಿಗೆ ಹೋಗು; ನಿನ್ನ ಬಗ್ಗೆ ನಾನೂ ಕಾಗದ ಬರೆಯುತ್ತೇನೆ; ನೀನು ಹಿಲರಿ ಇದ್ದ ಸೆಲ್ಲಿನಲ್ಲೇ ಇರಬಹುದು; ಹಿಲರಿಗೆ ಬದಲಾಗಿ ನೀನು ಎಂದಲ್ಲ, ಏಕಾಂತವಾಸದಿಂದ ನಿನ್ನ ಅಹಂಕಾರ ಅಡಗಬಹುದು; ದೇವರು ನಿನ್ನ ಹರಸಲಿ’ ಎಂದು ಗುರು ಬರೆದಿದ್ದ.
ಸೆರ್ಗಿಯಸ್ ಗುರುವಿನ ಮಾತನ್ನು ಪಾಲಿಸಿದ. ಗುರುವಿನ ಪತ್ರವನ್ನು ಮಠದ ಹಿರಿಯ ಗುರುವಿಗೆ ತೋರಿಸಿ, ಅವನ ಅನುಮತಿ ಪಡೆದು, ಚರ್ಚಿನ ತನ್ನ ಕೋಣೆ ಖಾಲಿಮಾಡಿ, ತನ್ನ ವಸ್ತುಗಳನ್ನೆಲ್ಲ ಮಠಕ್ಕೆ ಕೊಟ್ಟು, ತಾಂಬೊವ್ ಮಠಕ್ಕೆ ಹೊರಟ.
ತಾಂಬೊವ್ ಮಠದ ಹಿರಿಯ, ವರ್ತಕ ಸಮುದಾಯದಲ್ಲಿ ಹುಟ್ಟಿದ್ದವನು, ಉತ್ತಮ ವ್ಯವಸ್ಥಾಪಕ, ಸೆರ್ಗಿಯಸ್ಸನನ್ನು ಸರಳವಾಗಿ, ಗಂಭೀರವಾಗಿ ಸ್ವಾಗತಿಸಿ, ಹಿಲರಿಯ ಸೆಲ್ಲನ್ನು ಅವನಿಗಾಗಿ ಬಿಟ್ಟುಕೊಟ್ಟ. ಮೊದಮೊದಲು ಅವನ ಸಹಾಯಕ್ಕೆಂದು ಕಿರಿಯ ಶಿಷ್ಯನೊಬ್ಬನನ್ನು ನೇಮಿಸಿದ್ದರೂ ಆನಂತರ ಸೆರ್ಗಿಯಸ್ಸನ ಅಪೇಕ್ಷೆಯಂತೆ ಸಂಪೂರ್ಣ ಏಕಾಂತವಾಸಕ್ಕೆ ಅನುವುಮಾಡಿಕೊಟ್ಟ. ಸೆರ್ಗಿಯಸ್ಸನ ಸೆಲ್ಲು ಬೆಟ್ಟದ ದೊಡ್ಡ ಬಂಡೆಯೊಂದರಲ್ಲಿ ಕೊರೆದಿದ್ದ ಗವಿಯಂಥ ಕೋಣೆ. ಅದರಲ್ಲಿ ಎರಡು ಭಾಗಗಳಿದ್ದವು. ದಿವಂಗತ ಹಿಲರಿಯ ಸಮಾಧಿಯೂ ಅಲ್ಲೇ ಇತ್ತು. ಸಮಾಧಿ ಇದ್ದದ್ದು ಒಳಕೋಣೆ, ಅದರ ಮುಂದೆ ಇನ್ನೊಂದು ಭಾಗದಲ್ಲಿ ಗೋಡೆಗೆ ಕೊರೆದ ಗೂಡಿನಂಥ ಜಾಗದಲ್ಲಿ ಮಲಗಲು ಒಂದು ಚಾಪೆ, ಪುಟ್ಟದೊಂದು ಮೇಜು, ಕೆಲವು ಪುಸ್ತಕಗಳು ಮತ್ತು ವಿಗ್ರಹಗಳು ಇದ್ದವು. ಈ ಹೊರಕೋಣೆಗೆ ಒಂದು ಬಾಗಿಲು. ಅದಕ್ಕೆ ಬೀಗ ಹಾಕುವ ವ್ಯವಸ್ಥೆ. ಬಾಗಿಲ ಮುಂದೆ ಒಂದು ಶೆಲ್ಫು. ಅದರ ಮೇಲೆ ದಿನಕ್ಕೊಮ್ಮೆ ಮಠದಿಂದ ಯಾರಾದರೂ ಆಹಾರ ತಂದು ಇಡುತ್ತಿದ್ದರು.
ಹೀಗೆ ಫಾದರ್ ಸೆರ್ಗಿಯಸ್ ಸನ್ಯಾಸಿಯಾದ.

(ಮುಂದುವರೆಯುವುದು)

ಟಿಪ್ಪಣಿಗಳು:

ಗುರುಸ್ಥಾನ*-ಇಂಗ್ಲಿಷ್ ಪದ starets: ಪೂಜಾಕಾರ್ಯದಲ್ಲಿ ತೊಡಗಲೇಬೇಕೆಂಬ ಕಡ್ಡಾಯವಿರದ, ಈಸ್ಟರ್ನ್ ಆರ್ಥಡಾಕ್ಸ್‌ ಚರ್ಚ್ ಪಂಥಕ್ಕೆ ಸೇರಿದ ಧಾರ್ಮಿಕ ಮಾರ್ಗದರ್ಶಕ, ಗುರು.


ವಲಾಛಿಯಾ*-Wallachia, ರೊಮಾನಿಯಾದ ಪ್ರಾಚೀನ ಹೆಸರು, ಮಧ್ಯಯುಗದಿಂದ ಹತ್ತೊಂಬತ್ತನೆಯ ಶತಮಾನದವರೆಗೆ ಪ್ರಾಮುಖ್ಯಗಳಿಸಿದ್ದ ಭೌಗೋಳಿಕ ಪ್ರದೇಶ.

ದೈವಸಂಯೋಗ*- ಕಮ್ಯೂನಿಯನ್. ಬ್ರೆಡ್ ಮತ್ತು ವೈನ್ ಸ್ವೀಕರಿಸುವ ಮೂಲಕ ಕ್ರಿಸ್ತನ ಕಾಯ ಮತ್ತು ರಕ್ತಗಳನ್ನು ತಮ್ಮೊಳಗುಮಾಡಿಕೊಂಡು ದೈವೀಸಂಯೋಗವನ್ನು ಪಡೆಯುವ ಆಚರಣೆ.


ಇಂಟರ್‌ಸೆಷನ್*
- ಭಕ್ತರ ಪರವಾಗಿ ಚರ್ಚಿನ ಪಾದರಿಯು ಹರಕೆ, ಪ್ರಾರ್ಥನೆಗಳನ್ನು ದೇವರಿಗೆ ಸಲ್ಲಿಸುವ ಕ್ರಿಯೆ.


ಸಾಕ್ರಿಸ್ಟಾನ್ ಪಾದ್ರಿ*- ಪೂಜಾ ಸಾಮಗ್ರಿಗಳು, ಉಡುಪುಗಳು ಇತ್ಯಾದಿಗಳ ಉಸ್ತುವಾರಿಯನ್ನು ನೋಡಿಕೊಳ್ಳುವ ಪಾದ್ರಿ.


ಏಕಾಂತವಾಸೀ ಸನ್ಯಾಸ*- ಆಂಕೊರೈಟ್ ಹರ್ಮಿಟೇಜ್. ಧಾರ್ಮಿಕ ಕಾರಣಗಳಿಗಾಗಿ ಲೋಕದೂರವಾಗಿ ಏಕಾಂತವಾಗಿ ವಾಸಿಸುವ ಕ್ರೈಸ್ತ ಸನ್ಯಾಸಿ.

Rating
No votes yet