ಬಂಗಾರದ ಮನುಷ್ಯನಿಗೆ ನುಡಿನಮನ 'ಬಾ ಇಲ್ಲಿ ಸಂಭವಿಸು, ಇಂದೆನ್ನ ಹೃದಯದಲಿ ...'

ಬಂಗಾರದ ಮನುಷ್ಯನಿಗೆ ನುಡಿನಮನ 'ಬಾ ಇಲ್ಲಿ ಸಂಭವಿಸು, ಇಂದೆನ್ನ ಹೃದಯದಲಿ ...'

 ಹೋದ ವರ್ಷ ಇದೇ ಅಣ್ಣಾವ್ರ ಹುಟ್ಟುಹಬ್ಬದಂದು ನಾನು 'ಸಾವಿರದ ಶರಣ'ರಾಜ್ ನೆನಪಿಗೆ ನುಡಿ ನಮನ (http://sampada.net/blog/shashikannada/24/04/2009/19512) ಅರ್ಪಿಸಿದ್ದೆ. ಈ ವರ್ಷ ಏನು ಬರೆಯಲಿ ಎಂದು ಯೋಚಿಸುವಷ್ಟು ಪುರುಸೊತ್ತು ಇಲ್ಲದಾಗಿದೆ. ಬರೆಯುವುದಕ್ಕೇನೋ ಸಾಕಷ್ಟಿದೆ. ಆದರೆ,ಒಂದೆಡೆ ಕೂತು ಬರೆಯುವ ವ್ಯವಧಾನವೇ ಇಲ್ಲವಾಗಿದೆ. ಅಂದು ಬ್ಲಾಗ್ ಬರೆಯುವುದನ್ನು ನಿಲ್ಲಿಸಿದ್ದ ನನಗೆ ಅಂದಿನಿಂದ ಮೊನ್ನೆಯವರೆಗೂ ಏನನ್ನೂ ಬರೆಯಲಾಗಿರಲಿಲ್ಲ.ಯಾವುದಾದರೂ ವಿಚಾರದ ಬಗ್ಗೆ ಬರೆಯುವ ಹಾಗೆ ಅಣ್ಣಾವ್ರ ಬಗ್ಗೆ ಬರೆಯಲಾಗದು. ಅಷ್ಟು ಎತ್ತರದ ವ್ಯಕ್ತಿತ್ವ ಅವರದು.ಕನ್ನಡ ನಾಡು, ನುಡಿ, ಸಂಸ್ಕೃತಿಯ ಪ್ರತಿನಿಧಿಯಾಗಿದ್ದ ಅವರು ಇಂದು ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರಕಿದ ಸಂದರ್ಭದಲ್ಲಿ ನಮ್ಮೊಂದಿಗಿಲ್ಲದಿರುವುದು ಏನನ್ನೋ ಕಳೆದುಕೊಂಡ ಭಾವವನ್ನು ನೀಡಿದೆ.ಏಕೆಂದರೆ, ಕನ್ನಡ ನಾಡು, ನುಡಿ, ಸಂಸ್ಕೃತಿಗೆ ಸಂಬಂಧಿಸಿದ ಯಾವುದೇ ಹೋರಾಟವಿರಲಿ ರಾಜ್ ಮುಂಚೂಣಿಯಲ್ಲಿರುತ್ತಿದ್ದರು. ದೇಶದೆಲ್ಲೆಡೆ ಖ್ಯಾತಿಯನ್ನು ಗಳಿಸಿದ್ದ ರಾಜ್, ಕಡೆಯವರೆಗೆ ಬೇರೆ ಭಾಷೆಯ ಒಂದೂ  ಚಿತ್ರದಲ್ಲಿ ನಟಿಸದಿರುವುದು ಅವರ ಕನ್ನಡ ಪ್ರೇಮಕ್ಕೆ ಸಾಕ್ಷಿ.


ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪನವರು ಒಂದೆಡೆ ಸಂದರ್ಶನದಲ್ಲಿ ಹೇಳಿರುವ ಹಾಗೆ, ಕನ್ನಡ ನುಡಿಯನ್ನು ರಾಜ್ ಕುಮಾರ್ ಬಾಯಿಯಲ್ಲಿ ಕೇಳಿದರೇ ಚೆಂದ. ರಾಜ್ 'ಗಂಧದ ಗುಡಿ'ಚಿತ್ರದಲ್ಲಿ ಹಾಡಿರುವ ಹಾಗೆ, 'ನಾವಾಡುವ ನುಡಿಯೇ ಕನ್ನಡ ನುಡಿ, ಅಂದದ ನುಡಿ, ಸಿರಿಗನ್ನಡ ನುಡಿ, ನಾವಿರುವ ತಾಣವೇ ಗಂಧದ ಗುಡಿ..'ಪೌರಾಣಿಕ, ಐತಿಹಾಸಿಕ, ಸಾಮಾಜಿಕ, ಗ್ರಾಮೀಣ...ಹೀಗೆ ಚಿತ್ರ ಯಾವುದೇ ಇರಲಿ, ರಾಜ್ ತಾವು ಮಾಡಿದ ಪಾತ್ರವೇ ಆಗಿರುತ್ತಿದ್ದರು. 'ನುಡಿದರೆ ಮುತ್ತಿನ ಹಾರದಂತಿರಬೇಕು, ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು, ನುಡಿದರೆ ಸ್ಫಟಿಕದ ಸಲಾಕೆಯಂತಿರಬೇಕು...'ಎಂಬ ಬಸವಣ್ಣನವರ ವಚನದಂತೆಯೇ ರಾಜ್ ಕನ್ನಡ ನುಡಿ. ಇಲ್ಲಿಯವರೆಗೂ ರಾಜ್ ಹಾಗೆ ಕನ್ನಡ ನುಡಿವವರನ್ನು ನಾನಂತೂ ಇದುವರೆಗೆ ಕಂಡಿದ್ದಿಲ್ಲ. ರಾಜ್ ಚಿತ್ರಗಳ ಕುರಿತು ಭಾಷಿಕ ಅಧ್ಯಯನ, ಸಾಮಾಜಿಕ, ಸಾಂಸ್ಕೃತಿಕ ಅಧ್ಯಯನ, ಇತ್ಯಾದಿ ಮಾಡಬೇಕೆಂಬುದು ನನ್ನ ಬಹುದಿನಗಳ ಹಂಬಲ. ಅದು ಯಾವಾಗ ನೆರವೇರುವುದೋ ನೋಡಬೇಕು. ಎಲ್ಲದಕ್ಕಿಂತ ಹೆಚ್ಚಾಗಿ ನನ್ನನ್ನು ಕಾಡುವುದು ರಾಜ್  ಚಿತ್ರಗಳಲ್ಲಿನ ಮಾನವೀಯ ಮೌಲ್ಯಗಳು. ಆ ಕುರಿತು ದೊಡ್ಡದಾದ ಒಂದು ಲೇಖನವನ್ನು ಯಾವಾಗಲಾದರೂ ಬರೀತೇನೆ.


ರಾಜ್ ಕುರಿತು ನಾನು ಹಾಗೂ ನನ್ನ ಗೆಳೆಯರ ನಡುವೆ ಒಂದು ಆಸಕ್ತಿಕರವಾದ ಚರ್ಚೆಯೊಂದು ಹೀಗೆಯೇ ಕೆಲ ವರ್ಷಗಳ ಹಿಂದೆ ನಡೆದಿತ್ತು.ಅದು ಈಗಲೂ ನನ್ನ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ರಾಜು ಹಾಗೂ ಶಿಶಿರ ನನ್ನ ಆಪ್ತ ಗೆಳೆಯರು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ನಾವು ಮೂರೂ ಜನ ಒಟ್ಟಾಗಿಯೇ ಬಿ.ಎ.ಓದಿದ್ದು. ನಾವು ಮೂರೂ ಜನ ಸೇರಿದರೆ ಅದು ಸಾಮಾನ್ಯವಾಗಿ ಗೆಳೆಯರ ನಡುವೆ ನಡೆಯುವ ಚರ್ಚೆಗಿಂತ ಭಿನ್ನವಾಗಿರುತ್ತಿತ್ತು. ಹಾಗೆ ಹೇಳುವುದಾದರೆ, ನಾವು ಚರ್ಚೆ ಮಾಡದ ವಿಷಯವೇ ಇರುತ್ತಿರಲಿಲ್ಲ. ನಾವು ಮೂರೂ ಜನ ಇಂಗ್ಲಿಶ್ ಸಾಹಿತ್ಯದ ವಿದ್ಯಾರ್ಥಿಗಳಾದರೂ ಜಗತ್ತಿನ ಎಲ್ಲಾ ವಿಷಯಗಳೂ ನಮ್ಮ ಮಾತುಕತೆಯಲ್ಲಿ ಬಂದುಹೋಗುತ್ತಿದ್ದವು.ಮಹಾರಾಜ ಕಾಲೇಜಿನೊಂದಿಗೆ ನಮ್ಮ ಸಂಬಂಧ ಮುಗಿಯುತ್ತಿದ್ದಂತೆಯೇ ನಾವೆಲ್ಲರೂ ಒಂದೊಂದು ದಿಕ್ಕಾದೆವು. ನಾನು ಮತ್ತು ಶಿಶಿರ ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆಯೊಂದರಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ವೃತ್ತಿ ಆರಂಭಿಸಿದ್ದೆವು.ರಾಜು ಎಂ.ಎ.ಮುಗಿಸಿ ಎಲ್.ಎಲ್.ಬಿ.ಓದುತ್ತಿದ್ದ. ಹೀಗೆಯೇ ಒಂದು ದಿನ ನಮ್ಮ ಸಂಸ್ಥೆಗೆ ನಮ್ಮನ್ನು ನೋಡಲು ಬಂದ. ನಾವು ಮೂರು ಜನ ಸೇರಿ ಒಂದು ಚರ್ಚೆಯನ್ನೇ ಆರಂಭಿಸಿಬಿಟ್ಟೆವು. ಕರ್ನಾಟಕ ರತ್ನಗಳಾದ ರಾಜ್ ಕುಮಾರ್ ಹಾಗೂ ಕುವೆಂಪು ಈ ಇಬ್ಬರಲ್ಲಿ ಯಾರ ಸಾಧನೆ ದೊಡ್ಡದು?


ರಾಜು ಮತ್ತು ನಾನು ರಾಜ್ ಕುಮಾರ್ ಸಾಧನೆ ಎಂದು ವಾದಿಸಿದರೆ, ಶಿಶಿರ, ಕುವೆಂಪು ಸಾಧನೆಯೇ ದೊಡ್ಡದು ಎಂದು ವಾದಿಸಲಾರಂಭಿಸಿದ. ನಿಜ, ಇಬ್ಬರೂ ತಂತಮ್ಮ ಕ್ಷೇತ್ರಗಳಲ್ಲಿ ಮೇರು ಪರ್ವತಗಳೇ. ಆದರೆ,ರಾಜ್ ಸಾಧನೆ ದೊಡ್ಡದು ಎಂದು ಸಮರ್ಥಿಸಿಕೊಳ್ಳುವುದಕ್ಕೆ ನಮ್ಮಲ್ಲಿ ಬಹಳಷ್ಟು ಆಧಾರಗಳಿದ್ದವು. ರಾಜ್, ಸಮಾಜದಲ್ಲಿ ಅತ್ಯಂತ ಕೆಳವರ್ಗದಿಂದ ಬಂದವರು. ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ಮೇಲುವರ್ಗದವರದ್ದೇ ಪ್ರಾಬಲ್ಯವಿದ್ದಂತಹ ಕಾಲ ಅದು.ಎಲ್ಲೆಡೆ ಮಡಿವಂತಿಕೆಯೇ ಮೇಲುಗೈ ಸಾಧಿಸಿದ್ದ ದಿನಗಳವು. ಅಂತಹ ಸಂದರ್ಭದಲ್ಲಿ ಯಾವ ಗಾಡ್ ಫಾದರ್ ಗಳಿಲ್ಲದೆ ತನ್ನ ಸ್ವಂತ ಪ್ರತಿಭೆ, ಪರಿಶ್ರಮಗಳಿಂದಲೇ ಇಡೀ ಭಾರತೀಯ ಚಿತ್ರರಂಗದಲ್ಲೇ ವಿಶಿಷ್ಟ ಸ್ಥಾನ ಪಡೆದುಕೊಂಡುಬಿಟ್ಟರು.ಲೆಕ್ಕವಿಲ್ಲದಷ್ಟು ರಾಜ್ಯ,ರಾಷ್ಟ್ರ ಪ್ರಶಸ್ತಿಗಳಿಂದ ಹಿಡಿದು,ಭಾರತೀಯ ಚಿತ್ರರಂಗದಲ್ಲಿ ಅತ್ಯುನ್ನತ ಪ್ರಶಸ್ತಿಯಾದ ದಾದಾ ಸಾಹೇಬ್ ಫಾಲ್ಕೆ ಗರಿಯನ್ನು ಕೂಡ ತನ್ನ ಮುಕುಟಕ್ಕೇರಿಸಿಕೊಂಡವರು ರಾಜ್.ಅಲ್ಲದೆ, ಇಪ್ಪತ್ತೊಂದನೇ ಶತಮಾನದ ಭಾಷೆಯೆಂದೇ ಕರೆಯಲ್ಪಡುವ ಸಿನಿಮಾ ಕ್ಷೇತ್ರದಲ್ಲಿ ರಾಜ್ ನಡೆಯದ ದಾರಿಯಿಲ್ಲ, ಅಭಿನಯಿಸದ ಪಾತ್ರವಿಲ್ಲ. ಕೇವಲ ಶ್ರೇಷ್ಟ ನಟ ಮಾತ್ರವಾಗದ ರಾಜ್, ಅಪ್ರತಿಮ ಗಾಯಕ ಕೂಡ ಆಗಿದ್ದರು.ರಾಜ್ ಹೋದೆಡೆಯೆಲ್ಲ ಮಿಂಚಿನ ಸಂಚಾರವಾಗುತ್ತಿತ್ತು.ಒಂದು ರೀತಿಯಲ್ಲಿ ಕನ್ನಡ ಚಿತ್ರರಂಗಕ್ಕೆ ಮಾತ್ರವಲ್ಲ,ಕನ್ನಡ ನೆಲದ ಆರಾಧ್ಯದೈವವೇ ಆಗಿದ್ದರು ರಾಜ್.ಕನ್ನಡ ನಾಡು, ನುಡಿ ಪರ ಹೋರಾಟಗಳಲ್ಲೂ ರಾಜ್ ಯಾವಾಗಲೂ ಮುಂದೆಯೇ. ಇದಕ್ಷೆ ಸಾಕ್ಷಿ ಗೋಕಾಕ್ ಚಳವಳಿ. ನಾಡಿನ ಪ್ರಮುಖ ಸಾಹಿತಿಗಳೆಲ್ಲರೂ ಚಳವಳಿಯಲ್ಲಿ ನಿಂತರೂ ಕಾವೇರದ ಚಳವಳಿ, ರಾಜ್ ಪ್ರವೇಶವಾಗುತ್ತಿದ್ದಂತೆ ಮಿಂಚಿನ ಸಂಚಾರವಾದಂತಾಗಿತ್ತು. ರಾಜ್, ಕನ್ನಡ ನಾಡಿನ ಸಾಂಸ್ಕೃತಿಕ  ನಾಯಕ ಎಂಬುದನ್ನು ಸ್ವತಃ ಸಾಹಿತಿಗಳೇ ಒಪ್ಪಿಕೊಂಡಿದ್ದಾರೆ. ಇದಲ್ಲದೆ, ನಾಡಿನ ಮೂಲೆಮೂಲೆಗಳಲ್ಲೂ ರಾಜ್ ಹೆಸರು ಕೇಳದವರು, ಚಿತ್ರಗಳನ್ನು ನೋಡದವರು ವಿರಳ. ಒಟ್ಟಾರೆಯಾಗಿ ಜನಪ್ರಿಯತೆಯಲ್ಲಿ ಮಾತ್ರವಲ್ಲ, ವ್ಯಕ್ತಿತ್ವದಲ್ಲೂ ಕೂಡ ರಾಜ್ ಅನುಕರಣೀಯರೇ.


ಆದರೆ, ಕುವೆಂಪು ವಿಷಯದಲ್ಲಿ ಹಾಗಿಲ್ಲ. ಅವರು ಸಮಾಜದಲ್ಲಿ ಮೇಲ್ವರ್ಗದಿಂದ ಬಂದವರಾಗಿದ್ದರು. ಶ್ರೀಮಂತರಾಗಿದ್ದರು. ಇಂಗ್ಲಿಶ್ ಶಿಕ್ಷಣವನ್ನು ಪಡೆದುಕೊಂಡಿದ್ದರು.ಒಬ್ಬ ಅಧ್ಯಾಪಕನಿಂದ ಹಿಡಿದು ಒಂದು ವಿಶ್ವವಿದ್ಯಾನಿಲಯದ ಕುಲಪತಿಯವರೆಗೆ ಎಲ್ಲಾ ಸ್ಥಾನಗಳನ್ನೂ ಅಲಂಕರಿಸಿದ್ದರು. ಸಾಹಿತ್ಯ ಕ್ಷೇತ್ರದಲ್ಲಿ ರಾಜ್ಯ ಪ್ರಶಸ್ತಿಯಿಂದ ಹಿಡಿದು ಕೇಂದ್ರ ಹಾಗೂ ಅತ್ಯುನ್ನತ ಸಾಹಿತ್ಯ ಪ್ರಶಸ್ತಿಯಾದ ಜ್ಢಾನಪೀಠವನ್ನು ಕನ್ನಡಕ್ಕೆ ಗಳಿಸಿಕೊಟ್ಟವರು.ಆದರೂ,ಅಕ್ಷರ ಜ್ಢಾನವನ್ನು ಹೊಂದಿರುವವರಿಗ ಮಾತ್ರ ಕುವೆಂಪು ಪರಿಚಿತ. ಅದರಲ್ಲೂ ಸಾಹಿತ್ಯ ಓದಿರುವವರಿಗೆ, ವಿಚಾರವಂತರಿಗೆ ಮಾತ್ರ. ಇಡೀ ಕರ್ನಾಟಕದಲ್ಲಿ ಹೆಚ್ಚಿನ ಮಂದಿಗೆ ಕುವೆಂಪು ಹೆಸರು ಮಾತ್ರ ಪರಿಚಿತವಿರಬಹುದು.ಆದರೆ,ರಾಜ್ ಚಿತ್ರಗಳನ್ನು ನೋಡಿದವರಿಗೆ ಹೋಲಿಸಿದರೆ ಕುವೆಂಪು ಸಾಹಿತ್ಯವನ್ನು ಓದಿಕೊಂಡವರ ಸಂಖ್ಯೆ ಹೆಚ್ಚಿನದಲ್ಲ.ಅಕ್ಷರ ಜ್ಞಾನವೇ ಎಲ್ಲ, ಅದೇ ಶ್ರೇಷ್ಠ ಎಂದು ವಾದಿಸುವವರು ಅಕ್ಷರ ಜ್ಞಾನವಿಲ್ಲದೆ ಸಾಧನೆ ಮಾಡಿದ ರಾಜ್ ರಂತಹ ಮಹಾಮಹಿಮರನ್ನೊಮ್ಮೆ ನೆನಪಿಸಿಕೊಳ್ಳಬೇಕು.


ಕುವೆಂಪು ಹಾಗೂ ರಾಜ್ ಸಾಧನೆ ನಡುವಿನ ಈ ತುಲನೆ ಕೇವಲ ಜನಪ್ರಿಯತೆಯನ್ನು ಆಧರಿಸಿಲ್ಲ.ಒಬ್ಬ ವ್ಯಕ್ತಿ ಸಮಾಜದ ಯಾವ ಸ್ತರದಿಂದ ಬಂದಿದ್ದಾನೆ,ಯಾವ ಎತ್ತರವನ್ನು ಏರಿದ್ದಾನೆ ಎಂಬುದರ ಮೇಲೆ ಆತನ ಸಾಧನೆಯ ಶ್ರೇಷ್ಟತೆ ನಿರ್ಧಾರವಾಗುತ್ತದೆ.


ನಮ್ಮ ಚರ್ಚೆಯ ಮುಖ್ಯ ಕಾಳಜಿ ಕುವೆಂಪು ಹಾಗೂ ರಾಜ್, ಇಬ್ಬರಲ್ಲಿ ಯಾರು ಶ್ರೇಷ್ಟ ಎಂಬುದಾಗಿರಲಿಲ್ಲ. ಯಾರ ಸಾಧನೆ ಹೆಚ್ಚು ಶ್ರೇಷ್ಟ ಎಂಬುದಷ್ಟೇ ಆಗಿತ್ತು. ನಾನು ಹಾಗೂ ನನ್ನ ಗೆಳೆಯ ರಾಜುವಿನ ವಾದವನ್ನು ಹೆಚ್ಚಿನವರು ಒಪ್ಪಿಕೊಳ್ಳಬಹುದೇನೋ ಎಂಬುದು ನನ್ನ ನಂಬಿಕೆ.   


ಇಂದು 'ಬಂಗಾರದ ಮನುಷ್ಯ' ರಾಜ್ ಹುಟ್ಟಿದ ದಿನ. ನನ್ನಂತಹ ಎಷ್ಟೋ ಜನರ ಬದುಕನ್ನು ಗಾಢವಾಗಿ ಪ್ರಭಾವಿಸಿದವರು ಅವರು. ಈ ಶುಭದಿನದಂದು ಆತನ ನೆನಪಿಗೆ ಈ ನುಡಿನಮನ.


ಕುವೆಂಪು ಮಾತುಗಳಲ್ಲಿ ಹೇಳುವುದಾದರೆ, 'ಬಾ ಇಲ್ಲಿ ಸಂಭವಿಸು, ಇಂದೆನ್ನ ಹೃದಯದಲಿ ನಿತ್ಯವೂ ಅವತರಿಪ ಸತ್ಯಾವತಾರ...'

Rating
No votes yet

Comments