ಬಜೆಟ್ ಬೂಟಾಟಿಕೆ

ಬಜೆಟ್ ಬೂಟಾಟಿಕೆ

ಬಜೆಟ್ ಬೂಟಾಟಿಕೆ

ಹಿರಿಯ ಗಾಂಧಿವಾದಿ ಅರ್ಥಶಾಸ್ತ್ರಜ್ಞ ಎಲ್.ಸಿ.ಜೈನ್ ಅವರ ವಿರುದ್ಧ ಮಾನ ನಷ್ಟ ಮೊಕದ್ದಮೆ ಹೂಡುವುದಾಗಿ ನಮ್ಮ ಉಪಮುಖ್ಯಮಂತ್ರಿ ಯಡಿಯೂರಪ್ಪ ಗುಟುರು ಹಾಕಿದ್ದಾರೆ. ಇಂತಹವರಿಗೆ ಒಮ್ಮೆ ಶಿಕ್ಷೆಯಾದರೆ, ಅದು ಇನ್ನು ಮುಂದೆ ಆಧಾರರಹಿತ ಮಾತುಗಳನ್ನಾಡುವವರಿಗೆ ಎಚ್ಚರಿಕೆಯಾಗುತ್ತದೆ ಎಂದಿದ್ದಾರೆ ಅವರು. ಆದರೆ ಆಧಾರರಹಿತ ಬಜೆಟ್ ಮಂಡಿಸುವವರಿಗೆ ಏನು ಶಿಕ್ಷೆ ಮತ್ತು ಎಚ್ಚರಿಕೆ ಎಂದು ಮಾತ್ರ ಅವರು ಹೇಳಿಲ್ಲ! ಜೈನ್ ಅವರು ಮಾಡಿರುವ ಅಪರಾಧವೆಂದರೆ, ಹೋದ ವರ್ಷದ ಬಜೆಟ್ಟಿನ ವಿವಿಧ ಬಾಬ್ತುಗಳ ಖರ್ಚು ಮತ್ತು ಗುರಿಸಾಧನೆಯ ಚಿತ್ರ ಕೊಡದೆ, ಈ ಬಜೆಟ್ಟನ್ನು ಒಂದು ದಾನ ಪತ್ರದಂತೆ ಮಂಡಿಸಲಾಗಿದೆ ಎಂದು ಅಭಿಪ್ರಾಯ ಪಟ್ಟಿರುವುದು. ಯಡಿಯೂರಪ್ಪನವರ ಪ್ರಕಾರ ತಮ್ಮ ಬಜೆಟ್ಟನ್ನು ಕರ್ನಾಟಕದ ಮನೆ ಮನೆಯಲ್ಲೂ ಚರ್ಚಿಸುತ್ತಿರುವಾಗ, ಈ ಮುದುಕ ಹೀಗೆ ಟೀಕೆ ಮಾಡುತ್ತಿರುವುದು ಶಿಕ್ಷಾರ್ಹ ಅಪರಾಧವಾಗಿದೆ.
ಹಿಂದಿನ ಯಾವ ಸರ್ಕಾರವೂ ಯೋಚನೆ ಕೂಡಾ ಮಾಡದ ಸಾರಾಯಿ ನಿಷೇಧ ಹಾಗೂ ಲಾಟರಿ ನಿಷೇಧಗಳಂತಹ ದಿಟ್ಟ ನಿಧರ್ಾರಗಳನ್ನು ಪ್ರಕಟಿಸಿರುವ ಯಡಿಯೂರಪ್ಪ ಖಂಡಿತ ಅಭಿನಂದನಾರ್ಹರಾಗಿದ್ದಾರೆ. ಆದರೆ, ಈ ನಿರ್ಧಾರಗಳನ್ನು ಕಳ್ಳಭಟ್ಟಿ ಹಾಗೂ ಮಟ್ಕಾ ಚಟುವಟಿಕೆಗಳು ತಲೆ ಎತ್ತದಂತೆ ಕಟ್ಟುನಿಟ್ಟಾಗಿ ಜಾರಿ ಮಾಡಿದಾಗ ಮಾತ್ರ ಯಡಿಯೂರಪ್ಪ, ಈ ಸಂಬಂಧ ಜನತೆಯ ಪೂರ್ಣ ಅಭಿನಂದನೆಗೆ ಪಾತ್ರರಾಗಬಹುದಾಗಿದೆ. ಏಕೆಂದರೆ, ಈ ನಿರ್ಧಾರಗಳನ್ನು ಸರ್ಕಾರವು ಕರ್ನಾಟಕದ ಒಟ್ಟಾರೆ ಅಭಿವೃದ್ಧಿಯ ದೃಷ್ಟಿಯಿಂದ ಕೈಗೊಂಡಿದೆಯೋ ಅಥವಾ ಅಗ್ಗದ ಜನಪ್ರಿಯತೆಯ ವೋಟಿನ ರಾಜಕಾರಣದ ದೃಷ್ಟಿಯಿಂದ ಕೈಗೊಂಡಿದೆಯೋ ಎಂದು ಅನುಮಾನ ಪಡುವ ರೀತಿಯಲ್ಲಿ ಅವನ್ನು ಅವರು ಚಿಂದಿಚಿಂದಿಯಾಗಿ ಮಂಡಿಸುವ ಮೂಲಕ ತಮ್ಮ ಈ ವರ್ಷದ ಬಜೆಟ್ ಕಲ್ಪನೆಯನ್ನೇ ಚಿಂದಿ ಚಿಂದಿ ಮಾಡಿರುವುದು ವಿಷಾದಕರವೂ, ರಾಜ್ಯದ ಸುಸ್ಥಿರ ಅಭಿವೃದ್ಧಿಯ ದೃಷ್ಟಿಯಿಂದ ಆಘಾತಕರವೂ ಆಗಿದೆ. ಬಜೆಟ್ ಮಂಡಿಸಿದ ಹತ್ತು ದಿನಗಳಲ್ಲೇ, ಬಜೆಟ್ ಮೇಲಿನ ಚರ್ಚೆಗೆ ಉತ್ತರ ಕೊಡುವ ಕೊನೆಯ ಘಟ್ಟದಲ್ಲೂ ಸಂಪುಟದ ಪೂರ್ವಾನುಮತಿಯಿಲ್ಲದೆಯೇ ಪ್ರಕಟಿಸಿದ 205 ಕೋಟಿ ರೂಪಾಯಿಗಳ ಹೊಸ ಯೋಜನೆಗಳು ಸೇರಿದಂತೆ, ಮೂಲ ಬಜೆಟ್ಟಿನ ಗಾತ್ರದ ಕಾಲು ಭಾಗದಷ್ಟು ಪೂರಕ ಅಂದಾಜು ವೆಚ್ಚಗಳನ್ನು ನಮ್ಮ ಉಪ ಮುಖ್ಯಮಂತ್ರಿಯವರು ಸದನದ ಮುಂದೆ ಮಂಡಿಸಿದ್ದಾರೆ. ಬೆಳಗಾವಿ ಅಧಿವೇಶನದಲ್ಲಿ ಮಂಡಿಸಿದ ಸುಮಾರು ಸಾವಿರದ ಐದನೂರು ಕೋಟಿ ರೂಪಾಯಿಗಳ ಪೂರಕ ಬೇಡಿಕೆಗಳನ್ನು ಗಣನೆಗೆ ತೆಗೆದುಕೊಂಡರೆ ಇದೊಂದು ಬೃಹತ್ ಆರ್ಥಿಕ ಅಶಿಸ್ತಿನ ಐತಿಹಾಸಿಕ ದಾಖಲೆಯೇ ಸರಿ. ಬಜೆಟ್ಟಿನ ಹೆಸರಿನಲ್ಲಿ ಈಗ ನಡೆದಿರುವುದು ಕ್ಷೇತ್ರ-ಮಾಹಿತಿ, ಚರ್ಚೆ, ಕಾರ್ಯಸಾಧುತ್ವದ ಆರ್ಥಿಕ ಪರಿಶೀಲನೆ ಮುಂತಾದ ಯಾವುದೇ ಪೂರ್ವಭಾವಿ ಆಡಳಿತಾತ್ಮಕ ಔಪಚಾರಿಕತೆ ಅಥವಾ ದೃಢೀಕರಣಗಳಿಲ್ಲದೆ, ಅರ್ಥಮಂತ್ರಿಯೇ ಸರ್ಕಾರವೆಂಬಂತೆ ತಮ್ಮ ಅಥವಾ ತಮ್ಮ ರಾಜಕೀಯ ಅನುಯಾಯಿಗಳ ಮನಸ್ಸಿಗೆ ಸರಿಕಂಡ ಯೋಜನೆ-ಕಾರ್ಯಕ್ರಮಗಳಿಗೆ ಸಾರ್ವಜನಿಕ ಬೊಕ್ಕಸದಿಂದ ಹಣ ಹಂಚುವ ಹುಚ್ಚಾಟವಾಗಿದೆ.
ನೈಸರ್ಗಿಕ ಅನಾಹುತ ಅಥವಾ ಅನಿರೀಕ್ಷಿತ ಅಶಾಂತಿ ಸಂದರ್ಭದ ಕಾನೂನು ಪಾಲನೆ ಮುಂತಾದ ತುರ್ತು ಅಗತ್ಯಗಳಿಗೆ 5 ಕೋಟಿ ರೂಪಾಯಿಗಳವರೆಗೆ ಪೂರಕ ಅಂದಾಜು ವೆಚ್ಚ ಮಂಡಿಸುವ ಅಧಿಕಾರ ಅರ್ಥಮಂತ್ರಿಗಿದೆ. ಆದರೆ ಯಡಿಯೂರಪ್ಪ ಈಗ ಮಂಡಿಸಿರುವುದು, ಸುಮಾರು ಆರು ಸಾವಿರ ಕೋಟಿ ರೂಪಾಯಿಗಳ ಪೂರಕ ಅಂದಾಜು ವೆಚ್ಚ! ಅದೂ ಯಾವುದಕ್ಕಾಗಿ? ಬಹುಪಾಲು ವಿವಿಧ ಜಾತಿ ಸಂಘ-ಸಂಸ್ಥೆಗಳ ಹಾಗೂ ಖಾಸಗಿ ಒಡೆತನದಲ್ಲಿ ಜಾತೀಯತೆಯ ಗೂಡುಗಳಾಗಿ ಕೊಬ್ಬಿರುವ ವಿವಿಧ ಸಾಹಿತ್ಯಕ-ಸಾಂಸ್ಕೃತಿಕ ಪ್ರತಿಷ್ಠಾನಗಳ 'ಅಭಿವೃದ್ಧಿ'ಗೆ! ಇಂತಹ 'ಅಭಿವೃದ್ಧಿ'ಯ ಜೊತೆಗೆ ಕೆಲವು ಸಾರ್ವಜನಿಕ ಸಂಸ್ಥೆಗಳ ಅಭಿವೃದ್ಧಿಗೂ ಹಣ ಪ್ರಕಟಿಸಲಾಗಿದೆಯಾದರೂ, ಇದನ್ನು ಬಜೆಟ್ನ ಅವಿಭಾಜ್ಯ ಅಂಗವಾಗಿ ಪ್ರಕಟಿಸದೆ, ಪೂರಕ ಅಂದಾಜು ವೆಚ್ಚದ ರೂಪದಲ್ಲಿ ಪ್ರಕಟಿಸುವ ಉದ್ದೇಶವಾದರೂ ಏನು? ಇದು ತಾವು ಅರ್ಥಮಂತ್ರಿಯಾಗಿ ವೈಯುಕ್ತಿಕ ಆಸಕ್ತಿ ವಹಿಸಿ ಕೊಟ್ಟಿರುವ ಹಣವೆಂದು ಪ್ರತಿಬಿಂಬಿಸುವುದೇ ಇದರ ಉದ್ದೇಶವಾಗಿದೆ ಎಂಬುದು ಸ್ಪಷ್ಟ.. ಸಮ್ಮಿಶ್ರ ಸರ್ಕಾರದ ಜೆ.ಡಿ.ಎಸ್. ಭಾಗವನ್ನು ಮಂಗ ಮಾಡ ಹೊರಟಿರುವ ಈ ಬಿ.ಜೆ.ಪಿ. ಪಕ್ಷ ರಾಜಕಾರಣದ ಪ್ರಯತ್ನ, ಒಟ್ಟಾರೆ ರಾಜ್ಯದ ಪ್ರಗತಿಯ ಗತಿಯನ್ನೇ ಭಂಗಗೊಳಿಸಿದೆ. ಸರ್ಕಾರದ ಎಲ್ಲ ಖರ್ಚಿನ ಬಾಬತ್ತುಗಳೂ, ಸರ್ಕಾರ ಸಕಲ ದಾಖಲೆ ಹಾಗೂ ಅವುಗಳ ಪರಿಶೀಲನೆಯ ಆಧಾರದ ಮೇಲೆ ರೂಪಿಸಿದ ಪ್ರಗತಿ ಚಿತ್ರದ ಭಾಗವಾಗಿ ಮಂಡಿತವಾಗಬೇಕು. ಆಗ ಮಾತ್ರ ಪ್ರಗತಿಯ ದಿಕ್ಕು ಹಾಗೂ ಗುಣಮಟ್ಟ ಸ್ಪಷ್ಟ ಹಾಗೂ ನಿರ್ದಿಷ್ಟವಾಗುತ್ತದೆ. ಆದರೆ ಈ ಬಜೆಟ್ ಹಾಗೂ ಅದರ ಪೂರಕ ಅಂದಾಜು ವೆಚ್ಚಗಳು, ಒಂದಕ್ಕೊಂದು ಸಂಬಂಧವಿಲ್ಲದಂತೆ ತೋರುವ ಬಾಬತ್ತುಗಳಿಗೆ ನಿಗದಿಯಾಗಿ, ಪ್ರಗತಿ ನಕ್ಷೆಯ ವಿಕಾಸಕ್ಕೆ ಬಹು ಮುಖ್ಯವೆನಿಸುವ ಗುರಿ ಸಾಧನೆ ಹಾಗೂ ಗುಣಮಟ್ಟ ಪರಿಶೀಲನೆಯ ಕೆಲಸವನ್ನೇ ಅಪ್ರಸ್ತುತಗೊಳಿಸಿದೆ. ಇದನ್ನೇ ಜೈನ್ ಅಂತಹವರು ಪಶ್ನಿಸಿ, ಮಾನನಷ್ಟ ಮೊಕದ್ದಮೆಯ ಬೆದರಿಕೆಗೆ ಒಳಗಾಗಿರುವುದು.
ಸಮಾಜದ ಎಲ್ಲ ಜಾತಿ-ವರ್ಗಗಳ ಪರಸ್ಪರ ಅಂತರಗಳನ್ನು ನಿವಾರಿಸಿಕೊಳ್ಳುತ್ತಾ ಹೋಗುವ ರೀತಿಯಲ್ಲಿ ಇಡೀ ರಾಜ್ಯವನ್ನು ಒಂದು ಸಾಮಾನ್ಯ ಪ್ರಗತಿ ತಾತ್ವಿಕತೆಯ ಬಂಧದಲ್ಲಿ ಒಗ್ಗೂಡಿಸಿಕೊಂಡು ಮುನ್ನಡೆಸಬೇಕಾದ ಬಜೆಟ್, ಈಗ ವಿವಿಧ ಜಾತಿ-ವರ್ಗಗಳ, ಖಾಸಗಿ ಹಿತಾಸಕ್ತಿಗಳ ಪೋಷಣೆಗೆ ಹೊರಡುವ ಮೂಲಕ ನಮ್ಮ ಎಲ್ಲ ಸಾಮಾಜಿಕ ಅನಿಷ್ಟಗಳಿಗೂ ಮೂಲ ಕಾರಣವಾಗಿರುವ ಸಾಮಾಜಿಕ ಪ್ರತ್ಯೇಕತೆಗಳನ್ನು ಮಾನ್ಯ ಮಾಡುವುದಷ್ಟೇ ಅಲ್ಲ, ನಿರ್ಲಜ್ಜವಾಗಿ ಬೆಂಬಲಿಸ ಹೊರಟಿದೆ. ಸಿದ್ಧಗಂಗಾ ಶ್ರೀಗಳಿಗೆ 'ಕರ್ನಾಟಕ ರತ್ನ' ಪ್ರಶಸ್ತಿ ಕೊಟ್ಟು ಸಾರ್ಥಕ ಕೆಲಸ ಮಾಡಿದ ಸರ್ಕಾರ, ಅವರ ಮಠದ ಅಭಿವೃದ್ಧಿಗೆಂದು ಹತ್ತು ಕೋಟಿ ರೂಪಾಯಿಗಳಿಗೂ ಮೀರಿ ಧನ ಸಹಾಯ ಘೋಷಿಸಿ ಆ ಸಾರ್ಥಕತೆಯ ರುಚಿಯನ್ನೇ ಕೆಡಿಸಿದೆ. ಹಾಗೇ, ಜಾತಿ ಬಂಧಿತವಾದ ಮಠವೊಂದು ಆಯೋಜಿಸಿರುವ ಗೋರಕ್ಷಾ ಸಮ್ಮೇಳನಕ್ಕೆಂದೂ, ವಿವಿಧ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆಂದೂ ಮತ್ತು ವಿವಿಧ ಜಾತಿಗಳ ಭವನಗಳಿಗೆಂದೂ ಕೋಟ್ಯಾಂತರ ರೂಪಾಯಿಗಳ ಹಣ ಪ್ರಕಟಿಸಿ ಈ ಸರ್ಕಾರ ಪ್ರಗತಿಯ ಅರ್ಥವನ್ನೇ ವಿಕ್ಷಿಪ್ತಗೊಳಿಸಿದೆ. ಜನತೆಯ ಬದುಕನ್ನು ಹಸನು ಮಾಡಲು ಬೇಕಾದ ಮೂಲ ಸೌಲಭ್ಯಗಳನ್ನು ಒದಗಿಸುವ ಅಭಿವೃದ್ಧಿ ಪರಿಕಲ್ಪನೆಯನ್ನು ಈ ಸರಕಾರ ಪೂರ್ಣವಾಗಿ ವಿಶ್ವಬ್ಯಾಂಕ್ ಮತ್ತಿತರ ಅಂತರಾಷ್ಟ್ರೀಯ ಹಣಕಾಸು ಸಂಸ್ಥೆಗಳ ಸುಪರ್ದಿಗೊಪ್ಪಿಸಿ ತನ್ನನ್ನು ಇಂತಹ ದಾನ-ಧರ್ಮದ ಕೆಲಸಗಳಿಗೆ ಸೀಮಿತಗೊಳಿಸಿಕೊಂಡಂತಿದೆ!
ಇಂತಹ ವಾತಾವರಣದಲ್ಲಿ ಸಹಜವಾಗಿಯೇ ತರುಣಸಾಗರ ಮುನಿಯಂತಹವರು ಜಾತಿ ವ್ಯವಸ್ಥೆಯ ಮೇಲು ಕೀಳುಗಳನ್ನು ಸಮರ್ಥಿಸುತ್ತ ಸಾರ್ವಜನಿಕ ಪ್ರವಚನ ನೀಡುವ ಹಾಗೂ ಭೈರಪ್ಪನಂತಹವರು ಕಾದಂಬರಿ ರಚನೆಯ ಹೆಸರಿನಲ್ಲಿ, ಈಗಾಗಲೇ ಹದಗೆಟ್ಟಿರುವ ಹಿಂದೂ-ಮುಸ್ಲಿಂ ಕೋಮು ಸಂಬಂಧವನ್ನು ಇನ್ನಷ್ಟು ಹದಗೆಡಿಸುವಂತಹ 'ಆವರಣ'ದಂತಹ ಕಗ್ಗವನ್ನು ಹೊಸೆಯುವ ಧೈರ್ಯ ಮಾಡುತ್ತಾರೆ. ಇವರ ವಿರುದ್ಧ ಯಾರೂ ಮಾನನಷ್ಟ ಮೊಕದ್ದಮೆ ಹೂಡುವುದಿಲ್ಲ. ಏಕೆಂದರೆ, ಬಲಿಷ್ಠ ಜಾತಿಯ ಮಠಾಧೀಶರೊಬ್ಬರು ಅರಣ್ಯ ಒತ್ತುವರಿ ಆರೋಪ ಎದುರಿಸುತ್ತಿದ್ದಾರೆ ಎಂದು ಗೊತ್ತಾದ ಮರು ಬೆಳಿಗ್ಗೆಯೇ, ಮುಖ್ಯಮಂತ್ರಿಯೂ ಸೇರಿದಂತೆ, ಆ ಜಾತಿಗೆ ಸೇರಿದ ಘಟಾನುಘಟಿ ಮಂತ್ರಿಗಳೆಲ್ಲರೂ ಆ ಮಠಾಧೀಶರ ಬಳಿ ಸಾಗಿ ಕಾಲಿಗೆ ಬಿದ್ದು ಕ್ಷಮೆ ಕೋರುವಂತಹ ನಿರ್ಲಜ್ಜ ಹಾಗೂ ಭಂಡ ರಾಜನೀತಿಗೆ ಸಿಕ್ಕಿರುವ ಇಂದಿನ ಕರ್ನಾಟಕ, ಎಲ್ಲ ಸಾಮಾಜಿಕ ಸೂಕ್ಷ್ಮಗಳನ್ನೂ ಕಳೆದು ಕೊಂಡಂತಿದೆ. ಇಂತಹ ಸ್ಥಿತಿಯಲ್ಲಿರುವ ಕರ್ನಾಟಕವನ್ನು ಕಾಪಾಡುವವರಾದರೂ ಯಾರು? ಕಾಂಗ್ರೆಸ್ಸಿಗರಂತೂ ಅಲ್ಲ. ಏಕೆಂದರೆ ಅವರೇ ತಮ್ಮ ಅವಕಾಶವಾದಿ ಅಧಿಕಾರ ರಾಜಕಾರಣದ ಮೂಲಕ ಕರ್ನಾಟಕದ ಈ ಸ್ಥಿತಿಗೆ ಕಾರಣರಾಗಿರುವವರು.

ಅಂದ ಹಾಗೆ: ಮೊನ್ನೆ ಸಿ.ಎನ್.ಎನ್-ಐ.ಬಿ.ಎನ್ ಟಿ.ವಿ. ವಾಹಿನಿಯಲ್ಲಿ ಭಾರತದ ಕ್ರಿಕೆಟ್ ಸೋಲನ್ನು ರಾಷ್ಟ್ರದ ಬದುಕು-ಸಾವುಗಳ ಪ್ರಶ್ನೆಯಂತೆ ಚರ್ಚಿಸುತ್ತಿದ್ದ ಮಹಾ ಮಾಧ್ಯಮ ಘಾತುಕನೆನಿಸಿರುವ ರಾಜದೀಪ್ ಸರ್ದೇಸಾಯಿ, ಚರ್ಚೆಯನ್ನು ದಾರ್ಶನಿಕನ ಧ್ವನಿಯಲ್ಲಿ ಮುಗಿಸಿದ್ದು ಹೀಗೆ: ಕ್ರಿಕೆಟ್ ಏನಿದ್ದರೂ ಒಂದು ಆಟ;ಅದರಲ್ಲಿ ಸೋಲು-ಗೆಲವು ಇದ್ದದ್ದೇ! ಹೌದು ಮಾರಾಯರೇ, ಮೊನ್ನೆ ಮೊನ್ನೆವರೆಗೂ ನಿಮ್ಮಗಳ ದೊಡ್ಡ ಬಾಯಿಗಳಲ್ಲಿ ಭಾರತದಲ್ಲಿ ಕ್ರಿಕೆಟ್ ಎನ್ನುವುದು ಧರ್ಮವೇ ಆಗಿದ್ದುದು, ಈಗ ಹೀನಾಯವಾಗಿ ಸೋತ ನಂತರ ಒಂದು ಆಟ ಮಾತ್ರವಾಗಿ ಪರಿವರ್ತಿತವಾಗಿದೆ! ನನ್ನಂತಹವರ ಆಶ್ಚರ್ಯವೆಂದರೆ, ಕ್ರಿಕೆಟ್ ಭಾರತದಲ್ಲಿ ಆಟವೂ ಅಲ್ಲ, ಧರ್ಮವೂ ಅಲ್ಲ; ಅದೊಂದು ದೊಡ್ಡ ದಂಧೆಯಾಗಿದೆ-ಆ ಕಾರಣದಿಂದಲೇ ಭಾರತ ಸೋತದ್ದು ಎಂಬ ಸತ್ಯವನ್ನು ಇವರು ಏಕೆ ಹೇಳುವುದಿಲ್ಲ?
ಹೇಳಿದರೆ ಮಾಧ್ಯಮವೆಂಬ ಇವರ ದೊಡ್ದ ದಂಧೆ ನಡೆಯುವುದು ಹೇಗೆ ಅಲ್ಲವೇ?

Rating
No votes yet