ಬಡವ
ಸಿರಿಯು ಬರಿದಾದ
ಸಾಮ್ರಾಜ್ಯದಿ
ಗರಿಕೆದರಿದೆ ಬದುಕು ....
ಬೇಡಿಕೊಂಡಿದ್ದಲ್ಲ
ಅರಸೊತ್ತಿಗೆ
ವಂಶಪಾರಂಪರ್ಯವಾಗಿ
ಸಂದ ಬಳುವಳಿ
ಅವನ ಬದುಕಿಗೇ .....
ಮಾಡು ಗೋಡೆಗಳಿಲ್ಲದ
ಗೂಡೇ ಅವನರಮನೆಯು
ಕಡುಕೋಟಲೆಗಳ ಹಾರತುರಾಯಿ
ತಾತ್ಸಾರ ಕುಹಕಗಳ
ಬಹು ಪರಾಕು....
ಹುಟ್ಟಿಗೆ ಸಂಭ್ರಮವಿಲ್ಲ
ಸಾವಿಗೆ ಶೋಕವಿಲ್ಲ
ಎಲ್ಲವೂ ಆಕಸ್ಮಿಕವಿಲ್ಲಿ
ನಿಟ್ಟುಸಿರು, ಹಸಿವು
ಆಕ್ರಂದನಗಳ
ಜೋಗುಳದೊಂದಿಗೆ
ಬದುಕಿನ ಸೋಪಾನ .....
ಹಾಸಿಗೆಯಿದ್ದಷ್ಟೇ ಕಾಲು
ಚಾಚೆಂಬ ಪರಿಪಾಠ
ಪಟ್ಟು ಬಿಡದ ಹಠ
ಪ್ರಾಮಾಣಿಕತೆಯಾ ಶ್ರೀರಕ್ಷೆ ....
ಸಿರಿಯು ಬರಿದಾಡದೇನು
ಸ್ನೇಹ ಸಂಪತ್ತಿನ ಸಿರಿಗಡಲು
ನೆಮ್ಮದಿಯ ಮಡಿಲು
ಅವನ ಗೂಡು ......
ಕಮಲ ಬೆಲಗೂರ್
Rating