ಬಣ್ಣದ ಹಬ್ಬದ ಫಜೀತಿ
ಬಣ್ಣ -ಬಣ್ಣದ ಚಿತ್ತಾರ ಮೂಡಿಸುವ ಹೋಳಿ ಹಬ್ಬವೆಂದರೆ ಕಾಲೇಜು ವಿದ್ಯಾರ್ಥಿಗಳಿಗೆ ಬಹಳ ಅಚ್ಚುಮೆಚ್ಚು. ತಿಳಿಯದೆ ಯಾರಾದರೂ ಬಿಳಿ ಡ್ರೆಸ್ ಹಾಕಿಕೊಂಡು ಆ ದಿನ ಕಾಲೇಜಿಗೆ ಬಂದರಾದರೆ ಆ ಮೇಲೆ ಕೇಳೋ ಹಾಗಿಲ್ಲ. ಮೊದಲ ಟಾರ್ಗೆಟ್ ಆ ವಿದ್ಯಾರ್ಥಿಯೇ. ಅದೊಂದು ಮೋಜಿನ ಸಂಗತಿ. ಅಂದು ಹೋಲಿ ಹಬ್ಬ. ತರಗತಿಗೆ ಬರುವಾಗಲೇ ಕೆಲವು ವಿದ್ಯಾರ್ಥಿಗಳು ಬಣ್ಣದ ಹುಡಿಗಳ ಪ್ಯಾಕೆಟ್‌ಗಳನ್ನು ಬ್ಯಾಗ್‌ನಲ್ಲಿರಿಸಿಕೊಂಡು ಬಂದಿದ್ದರು. ಯಾರಿಗೂ ಗೊತ್ತಾಗದಂತೆ ಹಾಕಬೇಕು ಎಂಬುದು ಅವರವರ ಮನಸ್ಸಿನಲ್ಲಿ, ಒಬ್ಬರ ಮುಖ ಒಬ್ಬರು ನೋಡಿಕೊಂಡಾಗ ಮುಸಿಮುಸಿ ನಗು. ಇಷ್ಟು ಚಂದದ ಡ್ರೆಸ್ ಕೆಲವು ಕ್ಷಣಗಳಲ್ಲಿ ಇನ್ನೂ ಬಣ್ಣಮಯವಾಗುತ್ತದಲ್ಲ ಎಂದು. ಏನೇ ಆದರೂ ಮಧ್ಯಾಹ್ನದ ವರೆಗೆ ಏನೂ ಮಾಡುವಂತಿರಲಿಲ್ಲ. ನಿಗದಿತ ತರಗತಿಗಳು ಮದ್ಯಾಹ್ನದವರೆಗೆ ಇರುತ್ತಿದ್ದ ಕಾರಣ ಆಚರಣೆ ಸಾದ್ಯವಾಗುತ್ತಿರಲಿಲ್ಲ.ಏನಿದ್ರೂ ಊಟದ ನಂತರದ ವಿರಾಮ ಹಾಗೂ ಸಂಜೆಯ ವೇಳೆಯೇ. ಹಾಗಾಗಿ ಮನದಲ್ಲಿ ಬರುತ್ತಿದ್ದ ನಗುವನ್ನೂ ಹಿಡಿದಿಟ್ಟುಕೊಂಡು ಸಂಜೆಯವರೆಗೆ ಕಾಯಲೇಬೇಕಾದ ಪರಿಸ್ಥಿತಿ.
ಹಾಸ್ಟೆಲ್‌ನ ಹುಡುಗಿಯರೆಲ್ಲ ಮೊದಲೇ ಗೊತ್ತಿದ್ದು ಇದ್ದುದರಲ್ಲಿ ಹಳೆಯ ಬಟ್ಟೆಯನ್ನು ಧರಿಸಿಕೊಂಡು ಬಂದಿದ್ದರು. ಕಾಲುನಡಿಗೆ ತಾನೇ? ಆದರೆ ಬಸ್ ಹಾಗೂ ಇತರ ವಾಹನಗಳಲ್ಲಿ ಪ್ರಯಾಣಿಸಿಕೊಂಡು ಬರುವವರಿಗೆ ಇದು ಅಸಾಧ್ಯ. ಹಾಗಾಗಿ ಫಜೀತಿಗೆ ಸಿಕ್ಕಿದ್ದು ಅವರೇ..
ಸಂಜೆಯಾಗುತ್ತಿದ್ದಂತೆ ಒಂದೊಂದೆ ಬ್ಯಾಗ್‌ಗಳಿಂದ ಬಣ್ಣದ ಪ್ಯಾಕೆಟ್ಗಳು ಬಿಚ್ಚತೊಡಗಿದವು. ಹಲವಾರು ಬಣ್ಣಗಳನ್ನು ಒಟ್ಟುಗೂಡಿಸಿ ಯಾರಿಗೂ ಕಾಣದಂತೆ ಕೈಯಲ್ಲಿ ಹಿಡಿದುಕೊಂಡು ಬಂದು ಎಲ್ಲರ ಮುಖಕ್ಕೆ ಬಣ್ಣ ಬಳಿಯತೊಡಗಿದೆವು. ಈ ವಿಷಯದ ಬಗ್ಗೆ ಗಮನಹರಿಸದೆ ತಮ್ಮದೇ ಲೋಕದಲ್ಲಿ ವಿಹರಿಸುತ್ತಿದ್ದ ಕೆಲವರಿಗಂತೂ ಶಾಕ್! ಅಂತೂ ಇಂತೂ ಕಾರಿಡಾರ್ ಫುಲ್ ಬಣ್ಣಮಯ. ಲೆಕ್ಚರರನ್ನೂ ಬಿಡಲಿಲ್ಲ. ಎಲ್ಲರೂ ಹೀಗಿರುವಾಗ ಮೊದಲ ಟಾರ್ಗೆಟ್ ಎಲ್ಲೋ ಮರೆಯಾಗಿತ್ತು. ಒಬ್ಬ ವಿದ್ಯಾರ್ಥಿ ಯಾವಾಗಲೂ ಬಿಳಿ ಷರ್ಟ್ ಧರಿಸಿ ತರಗತಿಗೆ ಬರುತ್ತಿದ್ದುದು. ಹಾಗಾಗಿ ಎಲ್ಲರೂ ಅವರನ್ನೇ ಹುಡುಕುತ್ತಿದ್ದರು. ಒಂದು ದಿನವಾದರೂ ಬಣ್ಣಬಣ್ಣ ವಾಗಿರಲಿ ಎಂದು. ನಮ್ಮ ತರಗತಿಯಿದ್ದಿದ್ದು ನಾಲ್ಕನೇ ಅಂತಸ್ತಿನಲ್ಲಿ. ಸ್ಟುಡಿಯೋ ಇದ್ದಿದ್ದು ಮೊದಲ ಮಹಡಿಯಲ್ಲಿ ಹಾಗಾಗಿ ಎಲ್ಲರ ಚಿತ್ತ ಸ್ಟುಡಿಯೋದತ್ತ. ಆ ವಿದ್ಯಾರ್ಥಿಯೋ ಯಾವುದೋ ಒಂದು ಕಾರ್ಯಚಟುವಟಿಕೆಯಲ್ಲಿ ತೊಡಗಿಕೊಂಡಂತಿತ್ತು. ಗುಂಪಿನಲ್ಲಿದ್ದ ಒಬ್ಬ ಹೋಗಿ ಹೊರಗಡೆ ಯಾರೋ ನಿಮ್ಮನ್ನು ಕಾಣೋದಕ್ಕೆ ಬಂದಿದ್ದಾರೆ ಬಾ ಎಂದು ಹೊರಗಡೆ ಕರೆತರಿಸಿ ಆಯಿತು. ಇನ್ನೇನು ಎಲ್ಲಿದ್ದಾರೆ ಯಾರು ಎಂದು ಆತ ಬಾಯಿ ತೆರೆಯುವಷ್ಟರಲ್ಲಿ ನಾಲ್ಕೂ ಕಡೆಗಳಿಂದಲೂ ಬಣ್ಣದೋಕುಳಿಯಾಯಿತು. ಆತನಿಗೋ ಪ್ರಾಣ ಸಂಕಟ, ಉಳಿದವರಿಗೆ ಮೋಜಿನಾಟ. ಈ ತಂತ್ರ ಯಾರದ್ದೆಂದು ಆತನಿಗೆ ತಿಳಿಯಲು ಹೆಚ್ಚು ಹೊತ್ತು ಬೇಕಾಗಿರಲಿಲ್ಲ, ತನ್ನ ಗೆಳೆಯನಿಂದ ಬಣ್ಣದ ಹುಡಿ ಪ್ಯಾಕೆಟ್ ತೆಗೆದುಕೊಂಡ ಆತ ತನಗೆ ಹಾಕಿದ ವಿದ್ಯಾರ್ಥಿಯನ್ನು ಇಡೀ ಕ್ಯಾಂಪಸ್ ಓಡಿಸಿ ಬಣ್ಣದ ಹುಡಿ ಅಭಿಷೇಕ ಮಾಡಿಸಿದ್ದ.
ಹೀಗೆ ಬೊಬ್ಬೆ ಹಾಕಿಕೊಂಡು ಓಡಾಡಿಕೊಂಡಿದ್ದ ಗದ್ದಲಕ್ಕೆ ಹಿರಿಯ ಉಪನ್ಯಾಸಕರೊಬ್ಬರು ಹೊರಗಡೆ ಬಂದು ವೀಕ್ಷಿಸತೊಡಗಿದರು. ಅವರೆಂದರೆ ಭಯ. ಎಲ್ಲರೆದುರು ಮಹಾಮಂಗಳಾರತಿ ಮಾಡುತ್ತಿದ್ದರೆಂಬುದಕ್ಕೆ. ಒಂದೊಂದೆ ಸಂಖ್ಯೆ ಖಾಲಿಯಾಗತೊಡಗಿತು. ಉಳಿದಿದ್ದು ಬಿಳಿ ಷರ್ಟ್ ಹಾಗೂ ಬಣ್ಣದ ಅಭಿಷೇಕ ಮಾಡಿಸಿಕೊಂಡವರು. ಅರ್ಧಗಂಟೆ ಅವರಿಂದ ಮಹಾಮಜ್ಜನವೂ ನಡೆಯಿತು. ಉಪದೇಶ ಮುಗಿಸಿ ಹಿಂತಿರುಗಿ ನೋಡಿದಾಗ ಯಾರೂ ಇಲ್ಲ. ನಾವೆಲ್ಲ ಗುಂಪು ಗುಂಪಾಗಿ ದೂರದಿಂದ ನಿಂತು ಈ ಉತ್ಸವವನ್ನು ನೋಡಿದ್ದೇ ನೋಡಿದ್ದು. ಕೊನೆಗೂ ಸುದ್ದಿಯಾಯಿತು, ನಮ್ಮ ವಿಭಾಗದ ವಿದ್ಯಾರ್ಥಿಗಳು ಕ್ಯಾಂಪಸ್ ಇಡೀ ರಂಗಾಗಿಸಿದ್ದರೆಂದು. ಸುದ್ದಿ ವಿಭಾಗದ ನಮಗೆ ಇದೊಂದು ದೊಡ್ಡ ಸುದ್ದಿ ಅನ್ನಿಸಲೇ ಇಲ್ಲ!
ಹೀಗಿತ್ತು ಕಾಲೇಜು ಜೀವನ, ಇದೆಲ್ಲಾ ನೆನಪಾದದ್ದು ನಿನ್ನೆ ಮಂಗಳೂರಿನ ದೇವಸ್ಥಾನವೊಂದರಲ್ಲಿ ನಡೆದ ಹೋಳಿ ಸಂಭ್ರಮದ ಫೊಟೋ ನೋಡಿದಾಗ.ಮತ್ತೆ ಬಾರದೇ ಆ..ಜಾಲಿ ಜಾಲಿ ಕಾಲೇಜು ಜೀವನ...ಖಾಲಿ ಖಾಲಿ ಈ ಉದ್ಯೋಗ ಜೀವನ.
http://putti-prapancha.blogspot.in/2011_03_01_archive.html