ಬದನೇಕಾಯಿಯ ಘರಿಮೆ! - ಜಮನಾದ ಜೋಕುಗಳು - ೧೧

ಬದನೇಕಾಯಿಯ ಘರಿಮೆ! - ಜಮನಾದ ಜೋಕುಗಳು - ೧೧

        ಒಂದಾನೊಂದು ಊರು, ಆ ಊರಿಗೊಬ್ಬ ರಾಜ. ರಾಜನೆಂದ ಮೇಲೆ ಹೊಗಳು ಭಟರು ಇರಲೇ ಬೇಕಲ್ಲವೇ? ಹೊಸದಾಗಿ ಬಂದ ಬಾಣಸಿಗನೊಬ್ಬ ಬದನೇಕಾಯಿಂದ ವಿಶೇಷವಾದ್ದೊಂದು ಖಾದ್ಯವನ್ನು ತಯಾರಿಸಿದ. ಅದು ರಾಜನಿಗೆ ಬಹಳ ಮೆಚ್ಚುಗೆಯಾಯಿತು. ರಾಜ ಆ ಬದನೆ ಕಾಯಿಯ ಖಾದ್ಯದ ಬಗ್ಗೆ ತನ್ನ ಆಸ್ಥಾನದಲ್ಲಿಯೂ ವರ್ಣಿಸಲಾರಂಭಿಸಿದ. ಇಷ್ಟು ಹೇಳಿದ ಮೇಲೆ ಸುಮ್ಮನಿರುತ್ತಾರೆಯೆ ಹೊಗಳು ಭಟ್ಟರು. ಅವರೂ ಬದನೆಯ ಬಗ್ಗೆ ತಮ್ಮ ಪ್ರಶಂಸೆಯನ್ನು ಹೇಳಲಾರಂಭಿಸಿದರು, "ಹೌದು ಮಹಾಸ್ವಾಮಿ ಈ ಬದನೇಕಾಯಿ ಎಂಬ ತರಕಾರಿ ಬ್ರಹ್ಮನಿಗೂ ಬಹಳ ಪ್ರಿಯವಾದದ್ದು, ಅದಕ್ಕೇ! ಬ್ರಹ್ಮ ಅದರ ತಲೆಯ ಮೇಲೊಂದು ಕಿರೀಟವಿಟ್ಟಿದ್ದಾನೆ".  ರಾಜ ಆ ತರಕಾರಿಯನ್ನು ಬಹಳ ಚೆನ್ನಾಗಿದೆಯೆಂದು ಹೊಟ್ಟೆ ಬಿರಿಯುವಷ್ಟು ತಿಂದಿದ್ದ, ಹಾಗಾಗಿ ಸಹಜವಾಗಿಯೇ, ಸಂಜೆಯ ಹೊತ್ತಿಗೆ ರಾಜನಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತು, ಆಗ ರಾಜ ಅದೇ ಬದನೇಕಾಯಿಯ ಬಗ್ಗೆ ಹಿಡಿ ಹಿಡಿ ಶಾಪ ಹಾಕಲಾರಂಭಿಸಿದ. ಆಗ ಈ ಭಟ್ಟಂಗಿಗಳು ಪುನಃ ತಮ್ಮ ವರಾತ ಷುರು ಹಚ್ಚಿಕೊಂಡರು, "ಮಹಾಸ್ವಾಮಿ, ಈ ತರಕಾರಿಯನ್ನು ಕಂಡರೆ ಬ್ರಹ್ಮನಿಗೂ ಇಷ್ಟವಿಲ್ಲ, ಅದಕ್ಕೇ ಅದರ ತಲೆಯ ಮೇಲೆ ಮುಳ್ಳನ್ನಿರಿಸಿದ್ದಾನೆ!". 
 
(ವಿ.ಸೂಃಈಗಿನ ಬದನೆಕಾಯಿಗಳಿಗೆ ಮುಳ್ಳೇ ಇರುವುದಿಲ್ಲ, ಆಗ ಬದನೇಕಾಯಿಗಳಿಗೆ ಖಚಿತವಾಗಿ ಮುಳ್ಳುಗಳಿರುತ್ತಿದ್ದವು, ಹಾಗಾಗಿ ಈಗಲೂ ಹಲವಾರು ಪ್ರಾಂತಗಳಲ್ಲಿ ಬದನೆಯನ್ನು ಮುಳ್ಳುಗಾಯಿಯೆಂದೇ ಕರೆಯುತ್ತಾರೆ)
Rating
No votes yet

Comments