ಬದಲಾವಣೆ..

ಬದಲಾವಣೆ..

ಸುಮಾರು ೧೫ ವರ್ಷಗಳೇ ಕಳೆದವು ಅನ್ಸುತ್ತೆ.. ಅದು ನವರಾತ್ರಿ ರಜೆಯ ಸಮಯ, ನಾನು ಏಳನೇ ಕ್ಲಾಸು.. ಮನೆಯಲ್ಲೆಲ್ಲಾ ಸಡಗರ.. ಎಂತ, ಹಬ್ಬ ಅಂತ ಅಂದುಕೊಂಡ್ರಾ? ಅಲ್ಲಾರೀ.. ನಮ್ಮೂರಿಗೆ ಲ್ಯಾಂಡ್ ಲೈನ್ ಫೋನ್ ಕನೆಕ್ಷನ್ ಬಂದಿತ್ತು. ನಮ್ಮ ಮನೆಗೂ ಅವತ್ತೇ ಫೋನ್ ಲೈನ್ ಎಳೆದು ಕನೆಕ್ಷನ್ ಕೊಟ್ಟುಬಿಡುವುದು ಅಂತ ತೀರ್ಮಾನವೂ ಆಗಿತ್ತು. ನಮಗೆಲ್ಲ ಖುಷಿಯೋ ಖುಷಿ.. ಹುಡುಗ್ರಾದ ನಮಗೆ ಎಲ್ಲವೂ ಖುಷಿನೇ.. ಮನೆಗೆ ಎಂತದೇ ಹೊಸತು ಬಂದರೂ ಸಹ ಅದರಲ್ಲೊಂದು ಖುಷಿ ಹುಡುಕುವ ಅಗತ್ಯವೇ ಇರೋದಿಲ್ಲ.. ಅದಾಗಿಯೇ ಖುಷಿ ಆಗುತ್ತೆ. ಆದ್ರೆ ದೊಡ್ಡವರಿಗೂ ಖುಷಿ ಆಗುವಂಥದ್ದು ಎಂತ ಮಾರ್ರೆ ಆ ಫೋನಲ್ಲಿ? ಬೆಳಗ್ಗಿಂದನೇ ಕಾದು ಕಾದು ಟೆಲಿಫೋನ್ ಡಿಪಾರ್ಟ್‌ಮೆಂಟ್ನವರು ಬರಲಿಲ್ಲ ಅಂತ ಎಲ್ಲರೂ ಶಾಪ ಹಾಕುತ್ತಾ ಮಧ್ಯಾನ ಊಟಕ್ಕೂ ಕೂತಾಯಿತು.. ಇನ್ನೇನು ಹುಳಿ ಅನ್ನ, ಮುಗಿಸಿ ಸಾಸಿವೆ ಅನ್ನದ ಜೊತೆ ಮೇಳೈಸಬೇಕು ಅನ್ನೊದರೊಳಗೆ ಮನೆಯ ನಾಯಿಗಳು ಒಂದೇ ಸಮನೆ ಬೊಗಳುವುದಕ್ಕೆ ಶುರು ಹಚ್ಚಿದ್ದವು. ಮನೆ ಎದುರಿಗೆ ಲಾರಿಯೊಂದು ಫೋನ್ ಕಂಬಗಳ ಸಮೇತ ಬಂದು ನಿಂತಿತ್ತು. .ನಮ್ಮ ಊಟವೂ ಅರ್ಧಕ್ಕೆಮುಗಿದು, ನಾವೆಲ್ಲ ಅಂಗಳಕ್ಕೆ ಓಡಿದ್ದೆವು. ಖಾಕಿ ರಟ್ಟಿನ ಪೆಟ್ಟಿಗೆಯಲ್ಲಿಯೊಂದು ಹಸಿರು ಲ್ಯಾಂಡ್ಲೈನ್ ಫೋನು. ಕನ್ನಡ ಸಿನಿಮಾಗಳಲ್ಲಿ ಮೊದ ಮೊದಲು ಬಸಿರಾದ ಹೆಂಡತಿ ಹಡೆದು ಮಗುವಿನ ಅಳು ಕೇಳಲು ಗಂಡ ಹೇಗೆ ಕಾಯುತ್ತಿರುತ್ತಾನೋ, ಹಾಗೆಯೇ ಆ ಫೋನ್ ರಿಂಗ್ ಧ್ವನಿಗಾಗಿ ಎಲ್ಲರೂ ಕಾದಿದ್ದೇಷ್ಟು ದಿನಗಳು!  ಆ ದಿನ ಬಂತಳ್ಲಪ್ಪಾ ದೇವರೇ ಅಂತ ಅಂದುಕೊಳ್ಳುವಷ್ಟರಲ್ಲಿ, ಲಾರಿಯಿಂದ ಇಳಿದ ಫೋನ್ ಆಫೀಸರ್ರು, ನೋಡ್ರಿ, ಕಂಬ ಎಲ್ಲ ಹುಗಿದು ಲೈನ್ ಇವತ್ತೇ ಎಳೆಯೋಕಾಗುದಿಲ್ಲ.. ನಿಮ್ಮೂರಲ್ಲಿ ಕಾಡು, .ಗುಡ್ಡ ಹಾವು ಹಪ್ಪಟೆ ಎಲ್ಲ ಜಾಸ್ತಿ.. ಈಗ ಬೇರೆ ಮಧ್ಯಾನ.. ನಂ ಹತ್ರ ಜಾಸ್ತಿ ಜನ ಇಲ್ಲ. ನೀವು ಸಲ್ಪ ಕೈ ಜೋಡಿಸಿದ್ರೆ ಇವತ್ತು ಆಗುತ್ತಾ ನೋಡಬಹುದು" ಅಂತ ಹೇಳಿ ಮುಗ್ಸೋದ್ರ ಒಳ್ಗೆ ಅಪ್ಪ ತಮ್ಮಣ್ಣ, ಮಂಜುನಾಥ ಮೂರು ಜನಾನೂ ಮಂಡಾಳೆ ತಲೆಗೆ ಪೋಣಿಸಿ, ಚೆನ್ನಾಗಿ ಕತ್ತಿ ಮಸೆತು ನಡೀರಿ ಸಾಬ್ರೇ, ಅದೇನಾಗುತ್ತೋ ನೋಡುವ.. ಇವತ್ತು ಫೋನ್ ಬರ್ಬೇಕು ಅಷ್ಟೇ' ಅಂತ ಸೊಂಟಕ್ಕೆ ಎಲೆ ಅಡಿಕೆ ಮಸಿ ಹಿಡಿದ ಸುತ್ತೆ ಬಿಟ್ಟಿದ್ದರು. ನಾನು ಕೂಡ ಪುಟ್ಟ ತಮ್ಮನನ್ನೆಳೆದುಕೊಂಡು ತೋಟಕ್ಕೆ ಅವರ ಹಿಂದೆಯೇ ಓಡಲು ತಯಾರಾಗಿದ್ದೆ. ಲಾರಿಯ ಟ್ರಾಲಿ ತೆಗಿತಿದ್ದಂತೆಯೆ ಅಲ್ಯೂಮಿನಿಯಂ ಮತ್ತೆ ಕಬ್ಬಿಣದ ಕಂಬಗಳ ದರ್ಶನ.. ಕಬ್ಬಿಣದ ಕಂಬಗಳನ್ನ ನೆಲದಲ್ಲಿ ತಳಪಾಯದ ಹಾಗೆ ಹೂತು ಅದಕ್ಕೆ ಅಲ್ಯೂಮಿನಿಯಂ ಕಂಬಗಳನ್ನ ಜೋಡಿಸಿ ಅದರ ಮೇಲೆ ಲೈನ್ ಎಳೆಯುವುದು ಅಂತಾಯಿತು. ಒಬ್ಬರ ಹಿಂದೊಬ್ಬರು ಕಂಬಗಳನ್ನು ಎತ್ತಿಕೊಂಡು ಹೊರಟರು. ನಮ್ಮನೆ ನಾಯಿಗಳೂ ಸಹ ನಮ್ಮ ಹಿಂದೆ ಓಡಿಬಂದಿದ್ದವು..ನಮ್ಮನೆ ತೋಟ ಅಂದರೆ ಸಾಮಾನ್ಯವ? ಅದು ಕಂಬ ನೆಡಬೇಕಾದದ್ದು ತೋಟದ ಪಕ್ಕದಲ್ಲೇ ಇದ್ದ ಧರೆಯ ಮೇಲೆ! ಅಲ್ಲಿ ಕಂಬ ಹಿಡಿದು ಹತ್ತಬೇಕು ಅಂದರೆ ಜೀವ ಬಾಯಿಗೆ ಬಂದಾತು.. ಕೆಂಜಿಗೆ, ಚಿಟ್ಟು ಬದನೆ, ನಾಚಿಕೆ, ಖಾರೆ ಮುಳ್ಳುಗಳು ನಾವು ಅಲ್ಲಿಗೆ ಬರುತ್ತೇವೆ ಅಂತಲೇ ತಮ್ಮೆಲ್ಲ ಬಂಧು ಬಳಗವನ್ನ ಊಟಕ್ಕೆ ಆಹ್ವಾನಿಸಿದ ಹಾಗೆ ಸೇನೆ ಕಟ್ಟಿ ಮೈ ಕೈಗೆಲ್ಲ ಚುಚ್ಚಲು ನಿಂತಿದ್ದವು. ಅಪ್ಪ ತಮ್ಮಣ್ಣರಿಗೆ, ಫೋನ್ ದೆವ್ವದ ಮುಂದೆ ಈ ಮುಳ್ಳುಗಳು ಮರೆತೇ ಹೋಗಿದ್ದವು ಅಂತ ಕಾಣುತ್ತವೆ. ಎಲ್ಲವನ್ನೂ ಮೆಟ್ಟಿ ಪುಡಿಮಾಡಿ, ಐಸ ಐಸ ಅಂತ ಚಕ ಚಕ ಅಂತ ಧರೆ ಹತ್ತುತ್ತಾ, ಮಧ್ಯೆ ಎಲ್ಲಾದರೂ ಗೂಟವೋ, ಮುಳ್ಳೋ ಹೊಕ್ಕಿದರೆ 'ಥೂ ಸೂಳೆಮುಂಡೇವ.. ಇವತ್ತು ಚುಚ್ಚಿದರೆ ನಾಳೆ ಬಂದು ಸೀಮೆಣ್ಣೆ ಹಾಕಿ ಸುಟ್ಟುಬಿಡ್ತೀವಿ, ಹುಷಾರ್' ಅಂತ ಗುಟುರು ಹಾಕುತ್ತಿದ್ದರು. ಹಾಗೂ ಹೀಗೂ ಇದ್ದಷ್ಟು ಕಂಬಗಳನ್ನು ಸಾಗಿಸಿ ನೆಟ್ಟು ಲೈನ್ ಎಳೆಯಬೇಕಾದರೆ ಸಾಕೋ ಸಾಕು.. ಮಧ್ಯೆ ಮಧ್ಯೆ ಅದು ಇದು ಅಂತ ಇಣುಕಿ ನೋಡುತ್ತಿದ್ದ ನನ್ನನ್ನು ನೋಡಿ ಕೋಪಗೊಂಡ ಅಪ್ಪ, ಕಣ್ಣು ಕೆಂಪಗೆ ಮಾಡಿ ನನ್ನ ದುರುಗುಟ್ಟಿ ನೋಡಿದ್ದರು. ಕೆಲಸದ ಮಧ್ಯೆ ಕಾಲಡಿ ಕೈಯಡಿ ಬರುತ್ತಿದ್ದ ನಾಯಿಗಳಿಗೆ ಅಪ್ಪನಿಂದ ಫೋನ್ ವೈರಿನಲ್ಲಿ ನಾಲ್ಕು ಪೆಟ್ಟು ಆಗಲೇ ಬಿದ್ದಿದ್ದು ನೋಡಿದ್ದ   ನಾನು ಕೂಡ ತಮ್ಮನ ಕರೆದುಕೊಂಡು ಮನೆಗೆ ಬಂದಿದ್ದೆ. ಅಲ್ಲಿದ್ದು ವೈರಲ್ಲಿ ಯಾವನು ಹೊಡೆಸಿಕೊಳ್ಳುತ್ತಾನೆ? ಸಾವ! ಸಂಜೆ ೬:೧೫ ಕ್ಕೆ ಅಪ್ಪ ತಮ್ಮಣ್ಣ ಮಂಜುನಾಥ ಎಲ್ಲಾ ಲೈನುಗಳನ್ನು ಎಳೆದು ಮನೆಗೆ ಬಂದು ಫೋನ್ ಆಫೆಸರ್ ಗೆ ಕನೆಕ್ಷನ್ ಕೊಡಲು ಹೇಳಿದರು. ನೀರು, ಕಾಫಿ ಅವತ್ತು ಎಂತವೂ ಬೇಡವಾಗಿತ್ತು.. ಎಲೆ ಅಡಿಕೆ ಕಥೆ ಬಿಡಿ, ತೋಟದಲ್ಲೇ ಸುಮಾರು ಅರ್ಧ ಮೂಟೆ ಜಗಿದು ಖಾಲಿ ಮಾಡಿಬಿಟ್ಟಿದ್ದರು ಈ ಮೂವರು. ಅದೊಂದು ಇದ್ಬಿಟ್ರೆ ಸಾಕು ಇನ್ನೆಂತದ್ದು ಕೂಡ ಬೇಡ. ಅಮ್ಮ ಇದ್ದವಳು ಫೋನ್ ಆಫೆಸರ್ ಗೆ ಕಾಫಿ, ಸ್ವಲ್ಪ ಒಗ್ಗರಣೆ ಅವಲಕ್ಕಿ  ಕೊಟ್ಟಳು.. ಅಪ್ಪ ಉಪ್ಪರಿಗೆ ನಡೆದವರೇ ೩೦೦, ೫೦೦ ಎಷ್ಟೋ ಗೊತ್ತಿಲ್ಲ ಗರಿ ಗರಿ ನೋಟುಗಳನ್ನ ಎಣಿಸಿ ಕೊಟ್ಟ ತಕ್ಷಣ, ಆಫೀಸರ್ ಗೆ ಅದೆಂತದೋ ಅವಸರ, 'ಭಟ್ರೆ, ಸ್ವಲ್ಪ ತಡ್ಕಳಿ, ಈಗ ಕನೆಕ್ಷನ್ ಕೊಟ್ಟು ಅಲ್ಲಿಂದಲೇ ಫೋನ್ ಮಾಡುವೆ ಅಂತ  ಹೇಳಿ ಲಘು ಬಗೆಯಲಿ ಫೋನ್ ಜೋಡಿಸಿ, ಓಡಿದರು.. ನಾವೋ? ಎಲ್ಲರೂ ಅದೇನೋ ಆಲಿಬಬಾನ ಗುಹೆಯಲ್ಲಿ ಸಿಕ್ಕಿದ ಚಿನ್ನದ ಮೂಟೆ ನೋಡುವ ತರ ಫೋನ್ ಮುಂದೆ ಎವೆಯಿಕ್ಕದೆ ಈಗ ರಿಂಗ್ ಆಗುತ್ತೆ, ಆಗ ಆಗುತ್ತೆ ಅಂತ ಕಾಯ್ತಾನೆ ಕೂತಿದ್ದೆವು. ಒಂದೊಂದು ಕ್ಷಣ ಒಂದೊಂದು ಯುಗಗಳಾಗಿ, ಅಪ್ಪನಿಗಂತೂ ಇನ್ನೇನು ಸಮಾಧಾನ ತಪ್ಪೋದು ಬಾಕಿ.. ಬಂತೋ ಬಂತು.. ನಮ್ಮನೆಗೆ ಫೋನು!!!! 'ಟ್ರಿಂಗ್ ಟ್ರಿಂಗ್' ರಿಂಗಣಿಸಿತ್ತು! ಅಪ್ಪನ ಭಯಕ್ಕೆ, ಯಾರು ಫೋನ್ ಮುಟ್ಟುವ ಧೈರ್ಯ ಮಾಡಲಿಲ್ಲ.. ಅಪ್ಪನೇ ಫೋನ್ ತೆಗೆದು 'ಹಲೋ, ಯಾರು'? ಅಂತ ಕೇಳಿದ್ದೆ, ಫೋನ್ ಆಫೀಸರ್ರು, 'ರೀ, ಭಟ್ರೆ.. ಕೇಳ್ತಾ ಉಂಟಾ' ಅಂತ ಕೇಳಿದ್ರು ಅಂತಾನಿಸುತ್ತೆ.. ಅಪ್ಪ 'ಹೂ.. ಕೇಳ್ತಿದೆ' ಅಂತ ಭಲೇ ಗಾಂಭೀರ್ಯದಲ್ಲಿ ಮಾತನಾಡಿ ಫೋನ್ ಇಟ್ಟು ವಿಜಯದ ಹುಮ್ಮಸ್ಸಿನಲ್ಲಿ, 'ರಕ್ಷಿತ, ಎಲೆ ಅಡಿಕೆ ತಟ್ಟೆ ತಗೊಂಬಾ..  ಸುಣ್ಣ ಹೊಗೆಸೊಪ್ಪು ಜಾಸ್ತಿ ಇರ್ಲಿ' ಅಂತ ಅಪ್ಪಣೆ ಮಾಡಿ ಜಗಲಿಗೆ ನಡೆದು ಕುಳಿತರು.. ತಮ್ಮಣ್ಣ, ಮಂಜುನಾಥ ಕೂಡ ಫೋನ್ ರಿಸೀವರ್ ಎತ್ತಿ ಡಯಲ್ ಟೋನ್ ಚೆಕ್ ಮಾಡಿ, 'ಆಯಾ.. ಇದೆಂಥಾ ಗುರ್ರ್ ಅಂತದೆ.. ಯಾರು ಮಾತಾದುದಿಲ್ಲ್ವಾ?' ಅಂತ ಕೇಳಿ ಒಂದೊಂದು ಎಲೆ ಅಡಿಕೆ ಜಪ್ಪಿದರು. 
ನನಗೋ ಫೋನ್ ರಿಸೀವರ್ ಎತ್ತಿ ಒಮ್ಮೆ ಕೇಳುವಾಸೆ.. ಈ ಅಪ್ಪನ ಅಪ್ಪಣೆಯೊಳಗೆ, ಎಲ್ಲೂ ಏನೋ ಮಾಡುವ ಹಾಗಿಲ್ಲ.. ಹಿಟ್ಲರ್ ಅಪ್ಪ.. 

ಅದೇ ರಾತ್ರಿ ನಮ್ಮ ನೆಂಟರಿಂದೆಲ್ಲ ಫೋನ್ ಬಂದವು.. ಒಂದೊಂದು ಬಾರಿ ರಿಂಗ್ ಆದಾಗಲೂ ಮನೆಯವರೆಲ್ಲ ಹಿತ್ತಲಿನಿಂದ ಮುಚಕಡೆವರೆಗೂ ಓಡಿ ಬರುವುದು.. ಅಪ್ಪ ಮಾತ್ರ ಫೋನ್ ಎತ್ತುವುದು! ತತ್.. ಈ ಅಪ್ಪ ಅಂತ ನಾನು ಬೈದುಕೊಳ್ಳುವುದು.. ಅವತ್ತೇ ಫೋನಿಗೆ ಅಜ್ಜಿ ಹಾಕಿದ್ದ ಉಲ್ಲನ್ ಕಸೂತಿ ಬಟ್ಟೆ, ಹಳೆಮನೆಯ ಕೊಯ್ದ ಸಿಂಗಾರದ ಕಂಬ, ಮನೆಯ ಭವ್ಯ ಬೆಡ್‌ಶೀಟು ಎಲ್ಲವೂ ಸಿಂಗರಿಸಿದ್ದವು.. ಅಂತೂ ಇಂತೂ ಹೀಗೆ ಫೋನ್ ಬಂದಿತ್ತು! ರಾತ್ರಿ ಎಲ್ಲರೂ ಮಲಗಿದ ಮೇಲೆ, ಆಸೆಯಿಂದ ರಿಸೀವರ್ ಎತ್ತಿ ಫೋನ್ ಡಯಲ್ ಟೋನ್ ನಾನು ಕೇಳಿದ್ದೆ.

೧೫ ವರ್ಷಗಳ ನಂತರ...

ಕೆಲಸಕ್ಕೆ ಸೇರಿ ೭ ವರ್ಷವೇ ಕಳೆದಿದೆ.. ಹೊಸ ವರ್ಷಕ್ಕೆ ಹದಿನೈದು ದಿನವುಂಟು.. ಮಾವನ ಮಗನ ಮದುವೆ. ಮನೆಗೆ ಹೋಗಿ ಕುಳಿತಿದ್ದೆ. ಯಾರದೋ ಫೋನ್.. ಫೋನ್ ರಿಂಗ್ ಹತ್ತು ಹನ್ನೆರಡು ಬಾರಿ ಆಗಿತ್ತು.. ಅಂಗಳದಲ್ಲಿದ್ಡ್ಡ ಅಪ್ಪನಿಗೆ ಕಿರೀ ಕಿರೀ ಆಗಿ, "ರಕ್ಷಿತ ಎದ್ದು ಹೋಗಿ ಫೋನ್ ಎತ್ತಬಾರ್ದ? ಎಂತ ರಗಳೆ ಮಾರಾಯ ಅದ್ರದ್ದು" ಅಂತ ಕೂಗಿದರು.. ರಜನಿ ಇದ್ದವಳು, 'ರಕ್ಷಿತ, ಹೋಗಿ ಮಾತಾಡು.. ನಾನು ಕೊಟ್ಟಿಗೆಯಲ್ಲಿ ಅಕ್ಕಚ್ಚು ಕೊಡಬೇಕು, ಮಾತಾಡೋಕೆ ಪುರ್ಸೊತ್ತಿಲ್ಲ' ಅಂತ ಜಾರಿಕೊಂಡಳು.
ಬೆಂಗಳೂರಿಂದ ಆಗಷ್ಟೇ ಮನೆಗೆ ಹೋದ ನಾನು ಫೋನ್ ಎತ್ತಿಕೊಂಡು ನಕ್ಕಿದ್ದೆ. ಮಾತನಾಡಿ ಮುಗಿಸಿ ಮುಚಕಡೆಯಲ್ಲಿ ಎಲೆ ಅಡಿಕೆ ಹಾಕಿ ಕುಳಿತು ಯೋಚಿಸುತ್ತಾ ಕುಳಿತೆ.

ಜೀವನ ಇಷ್ಟೇ ವಿಚಿತ್ರ ಅಲ್ವಾ? ಹೊಸದಾಗಿ ಏನೇ ಆಗಲಿ, ಬಂದಾಗಲಷ್ಟೇ ಸಂಭ್ರಮ.. ಹೋಗುತ್ತಾ ಹೋಗುತ್ತಾ ಅದು ದೈನಂದಿನ ಅವಿಭಾಜ್ಯ ಅಂಗವಾದಾಗ ಅದರ ಹೊಸತನವನ್ನು ಕಳೆದುಕೊಳ್ಳುತ್ತದೆ.. ಜೀವನದಲ್ಲಿ ಬದಲಾವಣೆಯಾಗದೇ ಹಾಗೆ ಉಳಿಯುವ ಪ್ರತಿಯೊಂದು ವಸ್ತು ಕೂಡ ತನ್ನ ಮಹತ್ವವನ್ನು ಕಳೆದುಕೊಳ್ಳದೆ ಹೋದರೂ ಸಹ, ಅದರ ಮೇಲಿರುವ ವಿಶೇಷ ಕಾಳಜಿಯನ್ನು ಬರು ಬರುತ್ತಾ ಕಳೆದುಕೊಳ್ಳುತ್ತದೆ. ಈಗ ಮೊಬೈಲ್ ಫೋನ್ ನೋಡಿ, ಅದೊಂಥರಾ ಬೇರೆಯೇ.. ದಿನ ದಿನವೂ ಬದಲಾಗುವ ಹೊಸ ಅಪ್ಪ್ಳಿಕೇಶನ್ ಗಳು, ಹಾಗಾಗಿಯೇ ಅದು ಎಲ್ಲರಿಗೂ ಅಚ್ಚು ಮೆಚ್ಚು.. ನಾವು ಸಹ ಜೀವನದಲ್ಲಿ ಒಳ್ಳೆಯ ಅಭಿರುಚಿಗಳನ್ನು ಅಳವಡಿಸಿಕೊಳ್ಳಬೇಕು.. ನಿಂತ ನೀರಾಗಿ ಒಂದೇ ತರ ಇದ್ರೆ ನಮ್ಮನ್ನು ಯಾರೂ ಸಹ ವಿಶೇಷ ಗೌರವವಿತ್ತು ನೋಡುವುದಿಲ್ಲ. ಬದಲಾಗುವುದಿಲ್ಲ ನಾವು ಹೀಗೆ ಇರುತ್ತೇವೆ ಅಂತ ಹೇಳಿದರೆ, ನಮ್ಮ ಗತಿಯೂ ನಮ್ಮನೆ ಫೋನ್ ತರವೇ ಆಗುತ್ತದೆ.. ಒಪ್ಪುವಿರಾ?

Rating
Average: 5 (1 vote)

Comments

Submitted by kavinagaraj Thu, 01/08/2015 - 08:45

ನಮ್ಮ ಮನೆಗೆ ಮೊದಲು ಫೋನು ಬಂದ ಸಂದರ್ಭ ನೆನಪಾಯಿತು. ಆಗ ನಮ್ಮ ಬೀದಿಯವಲ್ಲಿ ಇದ್ದುದು ನಮ್ಮದು ಒಂದೇ ಫೋನು! ಬೀದಿಯವರ ಮನೆಗಳಿಗೆ ಫೋನು ಬಂದಂತಾಗಿತ್ಯು. ಎಲ್ಲರಿಗೂ ಸುದ್ದಿ ಮುಟ್ಟಿಸುವುದು, ಫೋನು ಬಂದರೆ ಕರೆಯುವುದು, ಈ ಕಿರಿಕಿರಿಗಳನ್ನೂ ಎದುರಿಸಬೇಕಾಗಿತ್ತು! ಹಳೆಯ ನೆನಪು ಮೂಡುವಂತೆ ಮಾಡಿದಿರಿ. ಧನ್ಯವಾದಗಳು.