ಬದುಕಲು ಬಿಡಿ, ಬೇಕಾದ ಹಾಗೆ..!!

ಬದುಕಲು ಬಿಡಿ, ಬೇಕಾದ ಹಾಗೆ..!!

ಹಾಗೇ.. ಸಂಪದದಲ್ಲಿ ಬರೆದಿದ್ದ ಬ್ಲಾಗ್ ಬರಹಗಳನ್ನು ಓದುತ್ತಿದ್ದೆ.ಸಂತೋಷರವರು ಬರೆದ "3Idiots ಚಲನಚಿತ್ರ ವಾಸ್ತವ ಬದುಕನ್ನೇ ಹೇಳುತ್ತದೆ" ಎಂದು ಬರೆದಿದ್ದನ್ನು ಓದಿದಾಗ,ಮನಸ್ಸನ್ನು ಕೋಣೆಯೊಳಗೇ ಬಂಧಿಸಲಾಗಲಿಲ್ಲ.ಇಂದು ತೋಚಿದ್ದನ್ನೆಲ್ಲಾ ಬರೆಯಬೇಕೆಂದೆನಿಸಿತು. ಸಂಪದದಲ್ಲಿ ನನ್ನ ಬರಹಗಳಿಗೆ ಇಷ್ಟು ಸಮಯ ವಿರಾಮ ಕೊಡಬೇಕಾಗಿ ಬಂದಿದ್ದೂ ,ಈ ಇಂಜಿನಿಯರಿಂಗ್ ಎಂಬ ಪೆಡಂಭೂತಕ್ಕಾಗಿಯೇ.. ಬರೆಯುತ್ತಿದ್ದೆ ನಾನೂ.. ನನ್ನಷ್ಟಕ್ಕೆ..!! ಮನೆಯಲ್ಲಿ ಬರವಣಿಗೆಯ ತೋರಿಸುತ್ತಿದ್ದೆ.ಅದನ್ನು ಒಮ್ಮೆ ಓದಿ ನೋಡಲೂ ಉತ್ಸಾಹವಿಲ್ಲದವರಂತಿದ್ದರು.. ಎಲ್ಲಿ ಮಗಳಿಗೆ ಇದರಲ್ಲೇ ಆಸಕ್ತಿ ಹೆಚ್ಚಾಗಿ ಓದಿನ ಕಡೆ ಗಮನ ಕಡಿಮೆಯಾಗಿ ಇದನ್ನೇ ವೃತ್ತಿಯನ್ನಾಗಿ ಆರಿಸಿದರೆ ಎನ್ನೋ ಭಯವಿದ್ದಿರಬಹುದು..!! ಬೇರೆಯವರಿಗೆ ತೋರಿಸಿದಾಗ ಉತ್ತಮ ಪ್ರೋತ್ಸಾಹ,ಇನ್ನೂ ಬರಿ ಎನ್ನೋ ಹುರಿದುಂಬಿಸುವಿಕೆ..!!ಬರೆಯುತ್ತಿದ್ದೆ, ನನ್ನದೇ ಒಂದು ಪುಸ್ತಕದಲ್ಲಿ..!!

 

ಸಂಪದಕ್ಕೆ ಯಾವಾಗ ಎಂಟ್ರಿ ಕೊಟ್ಟೆನೋ,ಜನರ ಅಭಿಪ್ರಾಯ, ಅವರ ಆಸಕ್ತಿ, ವಾಸ್ತವ ಬದುಕು ಇದರ ಬಗ್ಗೆಯೂ ಅರಿವು ಮೂಡಿತು.ಇಲ್ಲೂ ಹಾಕುತ್ತಿದ್ದೆ, ನನ್ನ ಮನಸ್ಸಿಗೆ ಬರೆಯಬೇಕೆಂದೆನಿಸಿದ್ದನ್ನ..!ಇದೇ ತರಹ ನನ್ನ ಇನ್ನೂ ಅನೇಕ ಹವ್ಯಾಸಗಳನ್ನೂ ಬದಿಗೊತ್ತಬೇಕಾಯಿತು! ಪುಟ್ಟಂದಿನಿಂದ ಕನ್ನಡದಲ್ಲೇ ವಿಧ್ಯಾಭ್ಯಾಸ. ಅಂಥಾ ದೊಡ್ಡ ತಲೆ ಏನೂ ಅಲ್ಲ,ಆದರೆ.. ಚುರುಕಾಗಿತ್ತು. ಓಂದು ಕಡೆ ಕೂತು ಓದುವುದೆಂದರೆ ಹಿಂಸೆ. ಓದಿದ್ದೆ ಇಷ್ಟು ಅಂತ ಇತ್ತು. ಎಲ್ಲಾ ಹವ್ಯಾಸ ಚಟುವಟಿಕೆಳಲ್ಲಿ ಭಾಗವಹಿಸುವಿಕೆಇಂದಲೇ ನನಗೂ ಒಂದು ಅಸ್ಥಿತ್ವ ಸಿಕ್ಕಿತ್ತು. ಶಾಲೆಯಲ್ಲಿ ಕೇಳಿದ್ದು ಮಾತ್ರ. ಮನೆಯಲ್ಲೇನೂ ಅಲ್ಪ ಸ್ವಲ್ಪ ಓದಿರಬಹುದು. ಹಾಗಾಗಿ ಓದಿಲ್ಲಿ "ಆರಕ್ಕೇರದ ಮೂರಕ್ಕಿಳಿಯದ" ಎಂದಿದ್ದೆ!. ಏನಾಗುತ್ತಿ ಮುಂದೆ ಎಂದು ಕೇಳಿದರೆ ಲಾಯರ್ ಇಲ್ಲ ಪೈಲಟ್ ಎಂದು ಹೇಳುತ್ತಿದ್ದೆ.ನಿನ್ನ ಬಡ ಬಡ ಬಾಯಿಗೆ ಲಾಯರ್ ಬೆಸ್ಟ್ ಎನ್ನುತ್ತಿದ್ದರು.

 

ಹತ್ತನೆ ಕ್ಲಾಸ್ ಮುಗಿಯಿತು.ಪಿಯುಸಿ ಇನ್ನೇನು, ಸಯ್ನ್ಸ್ ತೆಕ್ಕೊಳ್ಳದಿದ್ದರೆ ಜನರು ಗೌರವ ಕೊಡಲ್ಲ ಅನ್ನೋ ರೀತಿ ಸಮಾಜದಲ್ಲಿತ್ತು. ಹಾಗೆಯೇ ಮನೆಯರ ಆಶಯವೂ ಅಗಿತ್ತು.ಇದು ನನಗೆ ಆಸಕ್ತಿ ಇರೋ ವಿಷಯವೇ ಎಂದೆಲ್ಲಾ ಯೋಚನೆಯೇ ಬರಲಿಲ್ಲ! ಸಮಾಜದಲ್ಲಿ ಪ್ರಾಮುಖ್ಯತೆ ಅದಕ್ಕಿತ್ತು. ಅದುವೇ ಆಸಕ್ತಿಯ ವಿಷಯವಾಯಿತೇನೋ! ಸರಕಾರಿ ಕಾಲೇಜಿಗೆ ಸೇರಿದ್ದು ಆಯಿತು. ಬೇಕೋ ಬೇಡವೋ ಎಂದು ಪಾಠ ಮಾಡೋ ಅಧ್ಯಾಪಕರು. ನಮ್ಮ ವಿಭಾಗಕ್ಕೆ ಓದುವುದು ಬಿಟ್ಟು ಬೆರೆ ಯಾವದಕ್ಕೂ ಪ್ರೋತ್ಸಾಹವಿರಲಿಲ್ಲ.ಮೊದಲೇ ಇಂಗ್ಲೀಷ್ ಎಂದರೆ ಆಗುತ್ತಿರಲಿಲ್ಲ, ಅಲ್ಲ ನೋಡಿದರೆ ಪೂರಾ ಇಂಗ್ಲೀಷಲ್ಲೇ!!ಕೇಳಿದೆ ಅಮ್ಮನಲ್ಲಿ ನನ್ನನ್ನು ಎಂಟನೇ ತರಗತಿಯಿಂದ ಇಂಗ್ಲೀಷ್ ಮೀಡಿಯಂಗೆ ಹಾಕ್ಬಹುದಿತ್ತಲ್ಲ,ಆಗ ಕಷ್ಟವಾಗುತ್ತಿರಲಿಲ್ಲ ಎಂದು. ಅದಕ್ಕಮ್ಮ ,ನಿನಗೆ ಕೂತು ಹೇಳಿಕೊಡಲು ನನಗೂ ಸಮಯವಿಲ್ಲ ,ಗೊತ್ತೂ ಇಲ್ಲ, ಹೇಳಿದಾಗೆ ನೀವು ಕೇಳೋದೂ ಇಲ್ಲ, ಬೇರೆ ಮಕ್ಕಳ ತರಹ ಮನೆಗೆ ಬಂದು ಓದುತ್ತಿದ್ದವಳಲ್ಲ ಅದಕ್ಕೆ ಹಾಕಲಿಲ್ಲ ಎನ್ನಬೇಕೆ! ೩ ತಿಂಗಳು ಗೊಂಬೆ ತರಹ ಕೂತಿದ್ದೂ ಆಯಿತು ಇನ್ನು ಸುಮ್ಮನಿದ್ದರಾಗದು,ಅರ್ಥವಾಗುತ್ತಿಲ್ಲ ಎಂದು ಸಂಜೆ, ಬೆಳಿಗ್ಗೆ ಇದ್ದ ಕೋಚಿಂಗೆ ಕ್ಲಾಸ್ ಸೇರಿದ್ದು ಆಯಿತು. ಇನ್ನು ಕಥೇಯೇ ಕೇಳುವುದು ಬೇಡ ನೆಮ್ಮದಿಯಲ್ಲಿ ಉಸಿರಾಡಲೂ ಸಮಯವಿಲ್ಲದಂತೆ ಅನಿಸಿತ್ತು,ಹತ್ತನೇ ತರಗತಿಗೆ ಹೋಲಿಸಿದರೆ!.ಅಂತೂ ಸಿ.ಇ.ಟಿ ಬರೆದೆ ಆದರೆ ಬದುಕು ದಿಪ್ಲೋಮಾ ಕಡೆಗೆ ತಿರುಗಿಸಿತು.

 

ಅಲ್ಲಿ ಪುನಃ ಹೋದ ಲೈಫ್ ಮತ್ತೆ ಸಿಕ್ಕಿದಂತೆನಿಸಿತು.ಎಲ್ಲ ಅಭಿರುಚಿಗಳಿಗೆ ಮತ್ತೆ ನೀರು ಸಿಕ್ಕಿ ಚಿಗುರೊಡೆಯಿತು. ಹಾಸ್ಟೆಲ್ ಮಾತ್ರ ಸಾಕೋ ಸಾಕಾಗಿತ್ತು! ಅಪ್ಪ ಅಮ್ಮನಿಗೋ ನಮಗಂತು ಕಲಿಯುವ ಆಸಕ್ತಿ ಇದ್ದರೂ ಕಲಿಯಲಾಗಿಲ್ಲ.ನಮ್ಮ ಮಕ್ಕಳನ್ನಾದರೂ ತುಂಬಾ ಕಲಿಸಬೇಂಕೆಂದಿತ್ತಂತೆ.ಡಿಪ್ಲೊಮಾ ಕೊನೆಯ ವರುಷ ಮುಂದೇನು ಎನ್ನೋ ಪ್ರಶ್ನೆ ಮಗದೊಮ್ಮೆ ಎದ್ದು ನಿಂತಿತು! ಮನೆಯಲ್ಲಿ ಕೂತರೆ ಅಥವಾ ಜಾಬ್ ಗೆ ಸೇರಿದರೆ ಮದುವೆ ಮಾಡುತ್ತಾರೆ ಎಂದೆನಿಸಿ, ಓದನ್ನೆ ಮುಂದುವರೆಸಿದರೆ ಯಾವ ತೊಂದರೆಇಲ್ಲ ಎಂದು,ದಿಪ್ಲೋಮದವರಿಗೆ ಇರೋ ಸಿಇಟಿ ಬರೆದೆ.ಉತ್ತಮ ಕಾಲೇಜಲ್ಲೇ ಸೀಟ್ ಸಿಕ್ಕಿತು. ಮನೆಯಲ್ಲಿ ಎಲ್ಲಿಲ್ಲದ ಖುಶಿ ತಂಗಿ ನನ್ನಿಂದ ಓದಲ್ಲಿ ಮುಂದಿದ್ದಳು. ಅವಳಿಗೂ ಎಂಜಿನಿಯರಿಂಗ್ ಎಂದು ತುಂಬಾನೆ ಪ್ರಯತ್ನ ಮಾಡಿದರು. ಒಳ್ಳೆ ಕಡೆ ಸಿಕ್ಕಿರಲಿಲ್ಲ. ಹಣ ಕೊಟ್ಟು ಓದಿಸುವ ಪರಿಸ್ಥಿತಿಯಲ್ಲಿರಲಿಲ್ಲ.ಅವಳೋ Msc ಎಂದಾಯಿತು. ನನಗೆ ಸಿಕ್ಕಿದ ಇಂಜಿನಿಯರಿಂಗ್ ಸೀಟ್ ಮನೆಯಲ್ಲಿ ಮುರುಟಿದ್ದ ಗಿಡ ನಳನಳಿಸಿದಂತಾಯಿತು. ಇಂಥಹದ್ದೇನಿದೆ ಆ ಇಂಜಿನಿಯರಿಂಗ್ ನಲ್ಲಿ ಎಂದು ಬಂದಾಗ ಗೊತ್ತಾಯಿತು ಇದರ ಒಳಗುಟ್ಟು! ದೂರದ ಬೆಟ್ಟ ನುಣ್ಣಗೆ! ಸಾಮಾನ್ಯ ಮನುಷ್ಯನಿಗೆ ಬಾಯಿಪಾಠ ಹೊಡೆಯೋ ಕಲೆ ಗೊತ್ತಿದ್ದರೆ ಸಾಕು ನೀವು ಇಂಜಿನಿರ್ ಆದಿರಿ ಎಂದೇ ಅರ್ಥ! vtu ಟಾಪರ್ ಆದರೂ ವಿಶೇಷವೇನಲ್ಲ!

 

ಪುಟ್ಟದಿಂದಲೂ cbs ಅಲ್ಲಿ ಓದಿ ಮಾಡುವುದು ಇದೇ.. ಕನ್ನಡದಲ್ಲಿ ಓದಿದರೂ ಮಾಡುವುದು ಇದನ್ನೇ... ಅಮ್ಮ ಹೇಳ್ತಿದ್ದರು ಈಗ ಮಕ್ಕಳೇನು ಓದುತ್ತಿದ್ದಾರೆ ಎಂದು ಕೇಳಿದರೆ ಉತ್ತರಿಸಲು ಹೆಮ್ಮೆಯಾಗುತ್ತದೆಯಂತೆ! ಅಂಥಾ ಹೆಮ್ಮೆ ಪಡುವಂಥಾ ಸಂಗತಿ ಏನು ಇಲ್ಲ.ಎಲ್ಲ ಸಮಾಜ ಮಾಡಿದೆ ಅಷ್ಟೆ. ಹೆತ್ತವರು, ಸಮಾಜ ನಮ್ಮನ್ನು ಹಾಗೆಯೇ ಬೆಳೆಸಿರುತ್ತೆ.. ಇಂಜಿನಿಯರಿಂಗ್, ಇಲ್ಲ ಡಾಕ್ಟರ್. ಇವೆರೆಡಕ್ಕೇ ಸಮಾಜದಲ್ಲಿ ಗೌರವ ಇರುವುದು ಎಂದು! ಬಂದು ನೋಡಿ ಒಳಗೇನು ಇಲ್ಲ. ಇದಕ್ಕಿಂತ ಇನ್ನೊಮ್ಮೆ ದಿಪ್ಲೊಮಾ ಮಡಿದರೆ ನಾನೇ ಒಂದು compamy ಓಪೆನ್ ಮಾಡುವಷ್ಟು ಸಮರ್ಥಳಾಗಬಲ್ಲೆ ಎಂದೆನಿಸಿತು. ಕಲಿಕೆಯಲ್ಲಿ ತುಂಬಾ ಓದಬೇಕಾಗಿ ಬಂತು. ಜೊತೆಗೆ ನನ್ನ ಹವ್ಯಾಸಗಳಿಗೆ ಸಮಯ ಕೊಡಲಾಗಲಿಲ್ಲ. ಆದರೂ ಸಂಪದದಲ್ಲಿ ಬರೆಯುತ್ತಿದ್ದೆ. ಏನೋ ಮಾರ್ಕ್ಸ್ ಕಡಿಮೆ ಬಂತು .ಮನೆಯಲ್ಲಿ, ಮೊದಲು ಅದೇನೋ ಬರೆಯುವುದನ್ನು, ಓದು ಮುಗಿಯುವ ವರೆಗಾದರೂ ನಿಲ್ಲಿಸು!. ಅದರಿಂದಾಗಿ ಹೀಗಾಯಿತು ಎನ್ನಬೇಕೆ?. ಎಲ್ಲದಕ್ಕು ವಿರಾಮ ಹಾಕಬೇಕಾಯಿತು.

 

ಇಂಜಿನಿಯರಿಂಗ್ ವೃತ್ತಿ ನಮ್ಮಲ್ಲಿ ಎಷ್ಟು ಆಕ್ರಮಿಸಿದೆ ಎಂದರೆ, ಮದುವೆಯಾಗುತ್ತಿದ್ದರೆ ಇಂಜಿನಿಯರ್ ವರನೇ ಬೇಕು. ಅವನ ಗುಣ,ನಡತೆ, ಸಂಬಳ ಹೇಗಿದ್ದರೂ ಚಿಂತೆಯಿಲ್ಲ!. ಸುಮ್ಮನೆ ಅಲ್ಲ ಹವ್ಯಕರಲ್ಲಿ ಹುಡುಗರಿವೆ ವಧು ಸಿಗದಿರುವುದು. ಅಳಿಯ ಇಂಜಿನಿರ್ ಎಂದು ಹೇಳಲು ಏನೋ ಹೆಮ್ಮೆಯಂತೆ!.ಎಂಜಿನಿಯರ್ ಕಲಿತರೆ ಇಂಜಿನಿಯರನ್ನೇ ವರಿಸಬೇಕಂತೆ! ಆ ಇಂಜಿನಿಯರ್ ಗಿಂತ ಬೇರೆ ವೃತ್ತಿ ಅದೇ ಸಂಬಳ ಇದ್ದರೂ ಅದಾಗದು! ಇಂಜಿನಿಯರ್ಗಳ ಕಾಲವಯ್ಯ.!! ನಾವು ಮಗಳನ್ನು ಕೊಡುತ್ತೇವೆ ಎಂದು ಮುಂದೆ ಬರುತ್ತಾರೆ. ಮತ್ತೆ ಬೇರೆ ವೃತ್ತಿಯವರುಗೆ ವಧು ಸಿಗುವುದಾದರೂ ಹೇಗೆ?.ನನ್ನ ಕಸಿನ್ ೩ ಸಹೋದರಿಯರಿಗೆ ಮದುವೆಯಾಗಿದೆ ಮೂವರೂ ಇಂಜನಿಯರ್ ಭಾವಂದಿರು!

 

ನಾವೇ ಎಲ್ಲವನ್ನೂ ಚೇಂಜ್ ಮಾಡಬೇಕು ಇತರ ವೃತ್ತಿಗೂ ಆಸ್ಪದ ನೀಡಬೇಕು ಇಲ್ಲದಿದ್ದರೆ ಲೋಕದಲ್ಲಿ ಬರಿ ಇಂಜಿನಿಯರ್ ಡಾಕ್ಟರ್ಗಳೇ ತುಂಬುತ್ತಾರೆ.3Idiots ಸಿನೆಮದ ಹಾಗೆ!!

Rating
No votes yet

Comments